Tag: ಸಂಸದರು

  • ಮೇಕೆದಾಟು ಸಂಧಾನಕ್ಕೆ ನಿತಿನ್ ಗಡ್ಕರಿ ಸಾರಥ್ಯ

    ಮೇಕೆದಾಟು ಸಂಧಾನಕ್ಕೆ ನಿತಿನ್ ಗಡ್ಕರಿ ಸಾರಥ್ಯ

    ನವದೆಹಲಿ: ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಅನುಕೂಲ ಇದ್ದು, ಎರಡೂ ರಾಜ್ಯಗಳ ಸಿಎಂಗಳ ಸಭೆ ನಡೆಸಿ ಸಂಧಾನ ಮಾಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿಗೆ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

    ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧಿಸುತ್ತಿರುವುದನ್ನು ಖಂಡಿಸಿ ನಾಳೆ ಸಂಸತ್ ಭವನದ ಎದುರು ರಾಜ್ಯದ ಎಲ್ಲಾ ಸಂಸದರು ಪ್ರತಿಭಟನೆ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯದ ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲ ಸಂಸದರು ಭಾಗಿಯಾಗಲಿದ್ದಾರೆ. ಕಳೆದ ಗುರುವಾರ ನಡೆದ ಸರ್ವಪಕ್ಷ ಸಂಸದರ ಸಭೆಯಲ್ಲಿ ತಮಿಳುನಾಡು ನಡೆ ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ರಾಜ್ಯದ ಎಲ್ಲಾ ಸಂಸದರು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವಂತೆ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ.

    ಚಳಿಗಾಲದ ಸಂಸತ್ ಅಧಿವೇಶನ ಆರಂಭದಿಂದಲೂ ತಮಿಳುನಾಡಿನ ಸಂಸದರು ಸಂಸತ್‍ನ ಒಳಗೂ ಮತ್ತು ಹೊರಗೂ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಮೇಕೆದಾಟು ಯೋಜನೆ ತಮಿಳುನಾಡಿಗೆ ಮಾರಕವಾಗಲಿದ್ದು. ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಾರದು ಹಾಗೂ ಜಲ ಆಯೋಗ ನೀಡಿರುವ ಆರಂಭಿಕ ಒಪ್ಪಿಗೆಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದರು. ತಮಿಳುನಾಡಿನ ಈ ಹೋರಾಟಕ್ಕೆ ಪ್ರತಿ ಹೋರಾಟ ರೂಪಿಸಲು ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಂಸದರ ಸಭೆ ನಡೆಸಿ ಸಂಸತ್ ನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು. ಇದನ್ನು ಓದಿ: ದೆಹಲಿಯಲ್ಲಿ ಮೇಕೆದಾಟು ಸರ್ವಪಕ್ಷ ಸಭೆ: ಏನೇನು ಚರ್ಚೆಯಾಗಿದೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿವ ಸಂಪುಟ ವಿಸ್ತರಣೆಗೂ, ನನಗೂ ಸಂಬಂಧವಿಲ್ಲ: ಡಿಕೆಶಿ

    ಸಚಿವ ಸಂಪುಟ ವಿಸ್ತರಣೆಗೂ, ನನಗೂ ಸಂಬಂಧವಿಲ್ಲ: ಡಿಕೆಶಿ

    ನವದೆಹಲಿ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೂ, ನನಗೂ ಯಾವುದೇ ಸಂಬಂಧವಿಲ್ಲ ಅದನ್ನು ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಜಕಾರಣ ಮಾಡಲು ಬಂದಿಲ್ಲ. ಮೇಕೆದಾಟು ಯೋಜನೆ ಬಗ್ಗೆ ರಾಜ್ಯದ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ಮಾತನಾಡಲು ಬಂದಿದ್ದೇನೆ. ಸಚಿವ ಸಂಪುಟ ವಿಸ್ತರಣೆಗೂ, ನನಗೂ ಯಾವುದೇ ಸಂಬಂಧವಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನೊಬ್ಬ ಮಂತ್ರಿ ಅಷ್ಟೆ. ಪಕ್ಷದ ಮುಖಂಡರು ಸಚಿವ ಸಂಪುಟದ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಅಲ್ಲದೇ ರಾಜ್ಯ ಕೈ ನಾಯಕರು ಹೈಕಮಾಂಡ್ ಭೇಟಿಯ ಬಗ್ಗೆ ನನಗೆ ಮಾಹಿತಿಯಿಲ್ಲವೆಂದು ತಿಳಿಸಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದೇನೆ. ಅವಕಾಶ ಕೊಟ್ಟರೇ, ಅವರನ್ನು ಭೇಟಿಯಾಗುತ್ತೇನೆ. ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗದ ಒಪ್ಪಿಗೆ ವಿರೋಧಿಸುತ್ತಿರುವ ತಮಿಳುನಾಡು ನಿರಂತರವಾಗಿ ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಸೂಕ್ತ ಉತ್ತರ ನೀಡುವಂತೆ ರಾಜ್ಯ ಸಂಸದರು ಜಲ ಸಂಪನ್ಮೂಲ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಳ್ಳಲು ಬಂದಿದ್ದೇನೆಂದು ಹೇಳಿದ್ದಾರೆ.

    ತಮಿಳುನಾಡಿನ ನಿರಂತರ ಪ್ರತಿಭಟನೆಯಿಂದ ತಪ್ಪು ಸಂದೇಶ ರವಾನೆ ಆಗುವ ಸಾದ್ಯತೆ ಇದೆ. ಹೀಗಾಗಿ ರಾಜ್ಯದ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್ ಹೆಗ್ಡೆ, ರಮೇಶ್ ಜಿಗಜಿಣಗಿ ಸೇರಿದಂತೆ ಎಲ್ಲಾ ಸಂಸದರಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

    ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

    ಬೆಂಗಳೂರು: ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಣವಂತರು. ಹೀಗಾಗಿ ಐಫೋನ್ ಗಿಫ್ಟ್ ಅನ್ನು ಮರಳಿಸಿದ್ದಾರೆ. ಬೇರೆಯವರು ಅವರಂತೆ ಶ್ರೀಮಂತರಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

    ರಾಜ್ಯ ಸರ್ಕಾರ ಐಫೋನ್ ಗಿಫ್ಟ್ ನೀಡಿರುವ ಕುರಿತು ಸ್ಪಷ್ಟಿಕರಣ ನೀಡಿರುವ ಸಚಿವರು, ನಾನೇ ಐಫೋನ್ ನೀಡಿದ್ದೇನೆ. ಅದರಲ್ಲೇನು ತಪ್ಪಿದೆ? ನಾನು ಒಳ್ಳೆಯ ಹೃದಯವಂತಿಕೆಯಿಂದ ಗಿಫ್ಟ್ ನೀಡಿರುವೆ. ಮಾಹಿತಿಗಳು ತ್ವರಿತವಾಗಿ ಸಂಸದರಿಗೆ ತಲುಪಲಿ ಎನ್ನುವ ಉದ್ದೇಶದಿಂದ 50 ಸಾವಿರ ರೂ. ಬೆಲೆಯ ಐಫೋನ್ ಕೊಟ್ಟಿರುವೆ ಎಂದರು. ಇದನ್ನು ಓದಿ: ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್: ತಿರಸ್ಕರಿಸಿದ ಬಿಜೆಪಿ ನಾಯಕರು

    ಒಳ್ಳೆಯ ಉದ್ದೇಶದಿಂದ ರಾಜ್ಯದ ಸಂಸದರಿಗೆ ಐಫೋನ್ ಮತ್ತು ಬ್ಯಾಗನ್ನು ನೀಡಿದ್ದೇವೆ. ಬ್ಯಾಗ್ ಮಾತ್ರ ರಾಜ್ಯ ಸರ್ಕಾರ ನೀಡಿದ್ದು, ಐಫೋನ್ ನಾನೇ ವೈಯ್ಯಕ್ತಿಕವಾಗಿ ಕೊಟ್ಟಿರುವೆ. ಅದರಲ್ಲಿ ಕೆಲವರು ವಾಪಾಸ್ ನೀಡಿದ್ದಾರೆ. ಅದಕ್ಕೆ ನಾನು ಏನು ಮಾಡಲಿ? ಕಳೆದ ವರ್ಷವೂ ಐಫೋನ್ ಕೊಡುಗೆ ನೀಡಿದ್ದೆ, ಅದನ್ನು ಸ್ವೀಕರಿಸಿದ ಹಲವು ಬಿಜೆಪಿ ಸಂಸದರು ನನಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದರು. ಈಗ ಆರೋಪಿಸುತ್ತಿರುವವರ ಕಾಮಾಲೆ ಕಣ್ಣಿಗೆ ಎಲ್ಲವೂ ತಪ್ಪು ಕಾಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

  • ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್: ತಿರಸ್ಕರಿಸಿದ ಬಿಜೆಪಿ ನಾಯಕರು

    ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್: ತಿರಸ್ಕರಿಸಿದ ಬಿಜೆಪಿ ನಾಯಕರು

    ಬೆಂಗಳೂರು: ಬುಧವಾರ ದೆಹಲಿಯಲ್ಲಿ ರಾಜ್ಯದ ಎಲ್ಲ ಸಂಸದರ ಸಭೆ ಕರೆಯಲಾಗಿದೆ. ಈ ವೇಳೆ ರಾಜ್ಯ ಸರ್ಕಾರವು ಕಿಟ್ ಜೊತೆಗೆ ದುಬಾರಿ ಐಫೋನ್ ನೀಡಿದ್ದನ್ನು ಬಿಜೆಪಿ ಸಂಸದರು ತಿರಸ್ಕರಿಸಿದ್ದಾರೆ.

    ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಬಿಜೆಪಿ ಸಂಸದರು ರಾಜ್ಯ ಸರ್ಕಾರದ ಗಿಫ್ಟ್ ಅನ್ನು ತಿರಸ್ಕರಿಸಿದ್ದಾರೆ. ಅಷ್ಟೇ ಅಲ್ಲದೆ ದುಬಾರಿ ಫೋನ್ ತಿರಸ್ಕರಿಸಿ ಗಿಫ್ಟ್ ಕೊಡುತ್ತಿರುವ ಔಚಿತ್ಯವನ್ನು ಟ್ವಿಟ್ಟರ್ ಮೂಲಕ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದ್ದಾರೆ.

    ಕಾವೇರಿ ಜಲ ವಿವಾದದ ಕುರಿತಾದ ಚರ್ಚೆಗೆ ರಾಜ್ಯದ ಎಲ್ಲ ಸಂಸದರನ್ನು ಸಭೆಗೆ ಕರೆದಿದ್ದಕ್ಕೆ ಧನ್ಯವಾದ. ಆದರೆ ರಾಜ್ಯ ಸರ್ಕಾರ ಏಕೆ ಇಷ್ಟೊಂದು ದುಬಾರಿ ಮೊಬೈಲ್ ನೀಡುತ್ತಿದೆ. ಸಾರ್ವಜನಿಕರ ಹಣದಲ್ಲಿ ಉಡುಗೊರೆ ನೀಡುತ್ತಿದೆ. ಪೌರಕಾರ್ಮಿಕರಿಗೆ ನೀಡಬೇಕಾದ ವೇತನ ನೀಡದೇ ಇಂತಹದಕ್ಕೆ ಖರ್ಚು ಮಾಡುತ್ತಿರವುದು ಸೂಕ್ತವಲ್ಲ ಎಂದು ಬರೆದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

    ಸಿಎಂ ಪ್ರತಿಕ್ರಿಯೆ ಏನು?
    ಸಂಸದರಿಗೆ ಐಫೋನ್ ಕೊಟ್ಟ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅಷ್ಟಕ್ಕೂ ನಾನು ಐಫೋನ್ ನೀಡುವಂತೆ ಯಾವುದೇ ಸೂಚನೆ ನೀಡಿಲ್ಲ. ಬೇರೆಯವರು ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಈ ಬಗ್ಗೆ ಇರುವುದು ಶೂನ್ಯ ಮಾಹಿತಿ. ಹೀಗಾಗಿ ಇದರ ಬಗ್ಗೆ ತಿಳಿದುಕೊಂಡು ನಂತರ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

  • MP, MLA ಗಳು ಬಂದಾಗ ಅಧಿಕಾರಿಗಳು ಎದ್ದುನಿಂತು ಕೈಮುಗಿಯಬೇಕು- ಯೋಗಿ ಸರ್ಕಾರದ ಹೊಸ ಆದೇಶ

    MP, MLA ಗಳು ಬಂದಾಗ ಅಧಿಕಾರಿಗಳು ಎದ್ದುನಿಂತು ಕೈಮುಗಿಯಬೇಕು- ಯೋಗಿ ಸರ್ಕಾರದ ಹೊಸ ಆದೇಶ

    ಲಕ್ನೋ: ಶಾಸಕರು, ಸಂಸದರು ಬಂದಾಗ ಅಧಿಕಾರಿಗಳು ಎದ್ದು ನಿಂತು ಕೈ ಮುಗಿಯಬೇಕು ಅಂತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಹೊಸ ಆದೇಶ ಹೊರಡಿಸಿದೆ.

    ಸಂಸದರು ಹಾಗೂ ಶಾಸಕರನ್ನು ಭೇಟಿಯಾಗುವಾಗ ಅಥವಾ ಸ್ವಾಗತಿಸುವಾಗ ಅಧಿಕಾರಿಗಳು ಎದ್ದುನಿಂತು ಕೈಮುಗಿದು ನಮಸ್ಕರಿಸಬೇಕು. ಅವರು ಹೊರಡುವಾಗಲೂ ಮತ್ತೊಮ್ಮೆ ಕೈ ಮುಗಿಯಬೇಕು ಎಂಬ ಆದೇಶ ಹೊರಡಿಸಲಾಗಿದೆ. ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಈ ನಿರ್ದೇಶನವನ್ನು ನೀಡಿದ್ದು, ಯಾರಾದ್ರೂ ಈ ನಿಯಮವನ್ನ ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

    ಸ್ಥಳೀಯ ಮುಖಂಡರು, ಜಿಲ್ಲಾಧಿಕಾರಿಗಳು, ಪೊಲೀಸರು ಸೇರಿದಂತೆ ಉತ್ತರಪ್ರದೇಶದ ಎಲ್ಲಾ ಅಧಿಕಾರಿಗಳಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ವರದಿಯಾಗಿದೆ. ಅಧಿಕಾರಿಗಳು ನಮ್ಮ ಮಾತನ್ನು ಆಲಿಸದೆ, ನೀಡಿದ ಆದೇಶಗಳನ್ನು ಕೆಲವೊಮ್ಮೆ ವಜಾ ಮಾಡುತ್ತಾರೆ ಎಂದು ಸಂಸದರು ಮತ್ತು ಶಾಸಕರು ಹೇಳಿರುವ ಹಿನ್ನೆಲೆಯಲ್ಲಿ ಆದಿತ್ಯನಾಥ್ ಸರ್ಕಾರ ಈ ನಿಮಯವನ್ನ ಜಾರಿಗೆ ತಂದಿದೆ.

    ಅಲ್ಲದೆ ಸಂಸದರು ಮತ್ತು ಶಾಸಕರು ಹೇಳಿದಂತೆ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಅಧಿಕಾರಿಗಳು ನಯವಾಗಿ ತಮ್ಮ ಸಮಸ್ಯೆಗಳ ಬಗ್ಗೆ ಹೇಳಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಸರ್ಕಾರಿ ಅನುದಾನಿತ ಕಾರ್ಯಕ್ರಮಗಳಿಗೆ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿ ಹೋಗುವುದನ್ನು ಕೂಡ ನಿಷೇಧಿಸಲಾಗಿದೆ.

    ಈ ಹೊಸ ಆದೇಶಕ್ಕೆ ವಿರೋಧ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.

  • ಪ್ರಧಾನಿ ಮೋದಿ ಬರ್ತ್‍ಡೇಯಂದು ಸಾರ್ವಜನಿಕರಿಗೆ ಸಿಗಲಿದೆ ಬಂಪರ್ ಸೇವೆ!

    ಪ್ರಧಾನಿ ಮೋದಿ ಬರ್ತ್‍ಡೇಯಂದು ಸಾರ್ವಜನಿಕರಿಗೆ ಸಿಗಲಿದೆ ಬಂಪರ್ ಸೇವೆ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯುವರು ಇದೇ ಭಾನುವಾರ 67ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮಂತ್ರಿಗಳು ಮತ್ತು ಸಂಸದರು ದೇಶದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಿದ್ದಾರೆ.

    ಈ ಕುರಿತು ಈಗಾಗಲೇ ಎಲ್ಲ ಸಂಸದರಿಗೂ ಸೂಚನೆಗಳನ್ನು ನೀಡಲಾಗಿದ್ದು, ಕೇವಲ ಪ್ರಚಾರಕ್ಕಾಗಿ ಈ ಕಾರ್ಯದಲ್ಲಿ ಭಾಗವಹಿಸದೇ, ಉತ್ತಮ ಉದ್ದೇಶ ಸಾಧನೆಗಾಗಿ ಕೈ ಜೋಡಿಸುವಂತೆ ತಿಳಿಸಲಾಗಿದೆ.

    ಮಂಗಳವಾರ ರಾತ್ರಿ ನಡೆದ ಬಿಜೆಪಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಗೊಂಡಿದ್ದು, ಈ ಸ್ವಚ್ಛತಾ ಕಾರ್ಯಕ್ರಮಕ್ಕೆ `ಸೇವಾ ದಿವಸ್’ ಎಂದು ಹೆಸರಿಡಲಾಗಿದೆ. ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಭಾರತದ ಪ್ರಮುಖ ಸ್ಥಳಗಳಾದ ಇಂಡಿಯಾ ಗೇಟ್, ಜುಹೂ ಬೀಚ್,  15 ಪ್ರವಾಸಿ ಸ್ಥಳ, ಸ್ಲಂಗಳಲ್ಲಿ ಈ ಸ್ವಚ್ಛತಾ ಕಾರ್ಯ ನಡೆಯಲಿದೆ.

    ಮೋದಿ ಜನ್ಮ ದಿನಕ್ಕೆ ಎರಡು ದಿನಗಳ ಮೊದಲು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೆಪ್ಟೆಂಬರ್ 15 ರಂದು ತಮ್ಮ ಜನ್ಮ ಭೂಮಿಯಾದ ಕಾನ್ಪುರ್‍ಗೆ ಭೇಟಿ ನೀಡಲಿದ್ದು, ಅಂದೇ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

    2014 ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಅವರ ಜನ್ಮ ದಿನದಂದು ಸ್ವಚ್ಛ ಭಾರತ ಅಭಿಯಾನವನ್ನು ಮೋದಿ ಆರಂಭಿಸಿದ್ದರು. ಸಂಸದರ ಸ್ವಚ್ಛತಾ ಕಾರ್ಯ ಫೋಟೊ ಫ್ರೇಮ್‍ಗಳಿಗೆ ಸೀಮಿತವಾಗಬಾರದು ಎನ್ನುವ ಸಲಹೆಗಳು ಬಂದಿದೆ.

  • ಸಾಲಿಸಿಟರ್ ಆಗಿದ್ದು ಗೋವಾ ಪರ ವಾದ ಮಾಡುವುದು ಎಷ್ಟು ಸರಿ: ಕೇಂದ್ರದ ವಿರುದ್ಧ ಕೋನರೆಡ್ಡಿ ಅಸಮಾಧಾನ

    ಸಾಲಿಸಿಟರ್ ಆಗಿದ್ದು ಗೋವಾ ಪರ ವಾದ ಮಾಡುವುದು ಎಷ್ಟು ಸರಿ: ಕೇಂದ್ರದ ವಿರುದ್ಧ ಕೋನರೆಡ್ಡಿ ಅಸಮಾಧಾನ

    ಬೆಂಗಳೂರು: ಮಹದಾಯಿ ಯೋಜನೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಪರ ಆತ್ಮಾರಾಮ ನಾಡಕರ್ಣಿ ವಾದಮಾಡಲು ಕೇಂದ್ರದ ಅನುಮತಿ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ, ಶಾಸಕ ಕೋನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬೇಕಿದ್ದರೆ ಸಾಲಿಸಿಟರ್ ಹುದ್ದೆಯಿಂದ ಆತ್ಮಾರಾಮ ನಾಡಕರ್ಣಿಗೆ ವಿಮುಕ್ತಿಕೊಡಿ. ಆ ಬಳಿಕ ಬೇಕಾದರೆ ಅವರು ಗೋವಾ ಪರ ವಾದಮಾಡಲಿ. ಆದರೆ ಸಾಲಿಸಿಟರ್ ಆಗಿದ್ದು ವಾದ ಮಾಡುವುದು ಸರಿಯಲ್ಲ. ಅವರಿಗೆ ಅವಕಾಶ ಮಾಡಿಕೊಟ್ಟ ಕೇಂದ್ರ ಸರ್ಕಾರದ ಕ್ರಮ ಕೂಡ ಸರಿಯಲ್ಲ ಅಂತಾ ಶಾಸಕರು ಕಿಡಿಕಾರಿದ್ದಾರೆ.

    ಈ ಕೂಡಲೇ ಅವರನ್ನ ಹುದ್ದೆಯಿಂದ ವಜಾಗೊಳಿಸಿ. ಇಲ್ಲವೇ ಗೋವಾ ಪರ ವಾದ ಮಂಡನೆಗೆ ಅವಕಾಶ ರದ್ದು ಮಾಡಿ. ರಾಜ್ಯದ ಬಿಜೆಪಿ ನಾಯಕರು ಇದರ ಬಗ್ಗೆ ಯಾಕೆ ಧ್ವನಿಯೆತ್ತುತ್ತಿಲ್ಲ?. ಮಹದಾಯಿ ಹೋರಾಟಗಾರ ಸಮಸ್ಯೆ ನಿಮಗೆ ಅರ್ಥವಾಗುತ್ತಿಲ್ಲವೇ? ಇದರ ಬಗ್ಗೆ ನೀವು ಸುಮ್ಮನಿರುವುದೇಕೆ? ಅಂತಾ ರಾಜ್ಯ ಬಿಜೆಪಿ ಸಂಸದರು, ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕೋನರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

  • ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ- ನಮ್ಗೂ ಟಿಕೆಟ್ ಬೇಕು ಅಂತಿರೋ ಸಂಸದರು

    ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ- ನಮ್ಗೂ ಟಿಕೆಟ್ ಬೇಕು ಅಂತಿರೋ ಸಂಸದರು

    ಬೆಂಗಳೂರು: ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನ ನಡೆಯುತ್ತಿದೆ. ನಮಗೂ ಟಿಕೆಟ್ ಬೇಕು ಅಂತಾ ಕೆಲ ಸಂಸದರು ಕ್ಯೂ ನಿಲ್ತಿದ್ದಾರೆ.

    ಸಂಸತ್ತಿನಿಂದ ವಿಧಾನಸಭೆಗೆ ಬರಲು ಸಂಸದರು ಪ್ಲಾನ್ ಮಾಡಿದ್ದಾರೆ. ಕ್ಷೇತ್ರ ಹುಡುಕಿದ್ದೇವೆ, ನಮಗೂ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿ ಅಂತ ಕೆಲ ಸಂಸದರು ಬಿಜೆಪಿ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಸಂಸದರ ಬೇಡಿಕೆಗೆ ಸೊಪ್ಪು ಹಾಕದ ವರಿಷ್ಠರು, ಸದ್ಯಕ್ಕೆ ಎಂಪಿಗಳಿಗೆ ಟಿಕೆಟ್ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಯಾರಿಗೆ ಯಾವ ಕ್ಷೇತ್ರ ಬೇಕಂತೆ?
    > ಶೋಭಾ ಕರಂದ್ಲಾಜೆ – ಪುತ್ತೂರು ಕ್ಷೇತ್ರ
    > ಅನಂತಕುಮಾರ್ ಹೆಗಡೆ- ಯಲ್ಲಾಪುರ ಕ್ಷೇತ್ರ
    > ಕರಡಿಸಂಗಣ್ಣ – ಕೊಪ್ಪಳ ಕ್ಷೇತ್ರ
    > ಶ್ರೀರಾಮುಲು- ಬಳ್ಳಾರಿ ಗ್ರಾಮಾಂತರ ಕ್ಷೇತ್ರ, ಸಂಡೂರು ಕ್ಷೇತ್ರ
    > ಪಿ.ಸಿ.ಮೋಹನ್- ಗಾಂಧಿನಗರ ಕ್ಷೇತ್ರ