Tag: ಸಂಸತ್ತು

  • ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ: ತೇಜಸ್ವಿ ಗುಡುಗು

    ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ: ತೇಜಸ್ವಿ ಗುಡುಗು

    – ಬ್ರೀಚ್ ಆಫ್ ಪ್ರಿವಿಲೇಜ್ ಎಚ್ಚರಿಕೆ ನೀಡಿದ ಸೂರ್ಯ
    – ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲವೆಂಬ ಆರೋಪ

    ನವದೆಹಲಿ: ಸಂಸತ್‍ನಲ್ಲಿ ಬ್ರೀಚ್ ಆಫ್ ಪ್ರಿವಿಲೇಜ್ ಫೈಲ್ ಮಾಡುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪೊಲೀಸರಿಗೆ ಸಂವಿಧಾನದ ಬಗ್ಗೆ ಪಾಠ ಕಲಿಸುತ್ತೇವೆ ಎಂದು ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುಡುಗಿರುವ ಅವರು, ಜರಸಂಕೊ ಠಾಣೆಯ ಮಮತಾ ಪೊಲೀಸರು ಮೂವರು ಸಂಸದರು ನೀಡಿರುವ ದೂರನ್ನು ಕಡೆಗಣಿಸಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಕಂಟ್ರಿ ಬಾಂಬ್ ಎಸೆದಿರುವ ಕುರಿತು ಸಂಸದರು ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಲ್ಲ. ಈ ಮೂಲಕ ಮೂವರು ಸಂಸದರನ್ನು ಅವಮಾನಿಸಿದ್ದಾರೆ, ದೂರು ನೀಡಿದ್ದಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ನಾನು ಹಾಗೂ ಸಂಸದರಾದ ನಿಸಿತ್ ಪ್ರಮಣಿಕ್, ಜ್ಯೋತಿರ್ಮಯ ಸಿಂಗ್ ಮಹತೋ ಅವರು ದೂರು ನೀಡಿದಕ್ಕೆ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಇಂತಹ ತಪ್ಪು ಮಾಡಿದ ಹಾಗೂ ಸೊಕ್ಕಿನ ಪೊಲೀಸ್ ಅಧಿಕಾರಿಗಳ ವಿರುದ್ಧ ಸಂಸತ್‍ನಲ್ಲಿ ಬ್ರೀಚ್ ಆಫ್ ಪ್ರಿವಿಲೇಜ್ ಮೋಶನ್ ಮೂವ್ ಮಾಡುತ್ತೇವೆ ಎಂದು ಗುಡುಗಿದ್ದಾರೆ.

    ಪೊಲೀಸ್ ಠಾಣೆಗಳು ಟಿಎಂಸಿ ಕಚೇರಿಗಳಾಗಿವೆ:
    ನಾವು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸುತ್ತಾರೆ ಎಂದು ಮಧ್ಯರಾತ್ರಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಕಾದಿದ್ದೇವೆ. ಆದರೆ ಎಫ್‍ಐಆರ್ ದಾಖಲಿಸಿದೆ 3 ಸಂಸತ್ ಸದಸ್ಯರಿಗೆ ಅವಮಾನಿಸಿದ್ದಾರೆ. ಹೀಗಾಗಿ ನಾವು ಮೋಶನ್ ಫಾರ್ ಬ್ರೀಚ್ ಆಫ್ ಪ್ರಿವಿಲೇಜ್ ಫೈಲ್ ಮಾಡುತ್ತೇವೆ. ಈ ಮೂಲಕ ಮಮತಾ ಪೊಲೀಸರುಗೆ ಸಂವಿಧಾನದ ಬಗ್ಗೆ ಪಾಠ ಕಲಿಸುತ್ತೇವೆ ಎಂದು ತೇಜಸ್ವಿ ಸೂರ್ಯ ಗುಡುಗಿದ್ದಾರೆ.

    ಪೊಲೀಸ್ ಠಾಣೆ ಬಳಿಯ ವಿಡಿಯೋವನ್ನು ಸಹ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಮಮತಾ ಬ್ಯಾನರ್ಜಿಯವರ ಬಂಗಾಳದಲ್ಲಿ ಪೊಲೀಸ್ ಠಾಣೆಗಳು ಟಿಎಂಸಿ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ. ಅಪರಾಧ ನಡೆದಿರುವುದನ್ನು ಕಂಡರೂ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಇದರಿಂದಾಗಿ ಕಾನೂನು ಸಂಪೂರ್ಣವಾಗಿ ಕುಸಿದಿರುವುದು ತಿಳಿಯುತ್ತದೆ ಎಂದು ಆರೋಪಿಸಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಪೊಲೀಸರ ವಿರುದ್ಧ ಕಿಡಿಕಾರಿರುವ ಅವರು, ಬಂಗಾಳದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜರಸಂಕೊ ಪೊಲೀಸ್ ಠಾಣೆ ಮುಂದೆ ಜಮಾವಣೆಯಾಗಿದ್ದಾರೆ. ಪೊಲೀಸರ ಮುಂದೆ ಎರಡು ಆಯ್ಕೆಗಳಿವೆ ಕಾನೂನು ರೀತಿ ಎಫ್‍ಐಆರ್ ದಾಖಲಿಸಿ ಇಲ್ಲವೇ ಪೊಲೀಸ್ ಸಮವಸ್ತ್ರ ತೆಗೆದು ಟಿಎಂಸಿ ಪಕ್ಷದ ಬಾವುಟಗಳನ್ನು ಹಿಡಿಯಿರಿ ಎಂದು ಗುಡುಗಿದ್ದಾರೆ.

    ನಬಣ್ಣ ಬಳಿ ಉದ್ವಿಗ್ನ ಪರಿಸ್ಥಿತಿ
    ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಗುರುವಾರ ಬಿಜೆಪಿ ಯುವ ಮೋರ್ಚಾದಿಂದ ಜಾಥಾ ನಡೆಸಲಾಗಿತ್ತು. ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರು ಹಾಗೂ ಪಶ್ಚಿಮ ಬಂಗಾಳ ಪೊಲೀಸರ ಮಧ್ಯೆ ಭಾರೀ ಪ್ರಮಾಣದ ಸಂಘರ್ಷ ನಡೆದಿತ್ತು. ಅಶ್ರುವಾಯು, ಜಲ ಫಿರಂಗಿ ಹಾಗೂ ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿತ್ತು. ಅಲ್ಲದೆ ಜಾಥಾ ವೇಳೆ ತೃಣಮೂಲ ಕಾಂಗ್ರೆಸ್‍ನವರು ಕಂಟ್ರಿ ಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು.

    ಪಶ್ಚಿಮ ಬಂಗಾಳದ ಹೌರಾದ ಸಚಿವಾಲಯ ಕಚೇರಿ `ನಬಣ್ಣ’ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪಶ್ಚಿಮ ಬಂಗಾಳದ ಸಚಿವಾಲಯ `ನಬಣ್ಣ’ ಕಡೆಗೆ ಬಿಜೆಪಿ ಯುವ ಮೋರ್ಚಾದ ಮೆರವಣಿಗೆ ತೆರಳುತ್ತಿದ್ದಂತೆ ಪೊಲೀಸರು ಸಾವಿರಾರು ಕಾರ್ಯಕರ್ತರ ಕಡೆಗೆ ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು. ಇದರಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

    ಬ್ರೀಚ್ ಆಫ್ ಪ್ರಿವಿಲೇಜ್ ಎಂದರೇನು?
    ಸಂಸತ್ ಸದಸ್ಯರಿಗೆ ಸಂವಿಧಾನದಲ್ಲಿ ಸಂಸದೀಯ ಸವಲತ್ತುಗಳನ್ನು ನಿಡಲಾಗಿದೆ. ಇದಕ್ಕೆ ಪಾರ್ಲಿಮೆಂಟರಿ ಪ್ರಿವಿಲೇಜ್ ಎನ್ನುತ್ತಾರೆ. ಸಂಸದರು ತಮ್ಮ ವೈಯಕ್ತಿಕ ಸಾಮಥ್ರ್ಯದಿಂದ ಹಕ್ಕು ಚಲಾಯಿಸಬಹುದು ಹಾಗೂ ವಿನಾಯಿತಿಗಳನ್ನು ಸಹ ಇದರ ಅಡಿಯಲ್ಲಿ ನೀಡಲಾಗಿದೆ. ಈ ಯಾವುದೇ ಹಕ್ಕುಗಳು ಹಾಗೂ ವಿನಾಯಿತಿಗಳನ್ನು ಕಡೆಗಣಿಸಿದಾಗ ಇದನ್ನು ಬ್ರೀಚ್ ಆಫ್ ಪ್ರಿವಿಲೇಜ್ ಎಂದು ಕರೆಯಲಾಗುತ್ತದೆ. ಇದು ಸಂಸತ್ತಿನ ಕಾನೂನಿನ ಪ್ರಕಾರ ಶಿಕ್ಷಾರ್ಹವಾಗಿದೆ.

  • ಸಂಸತ್ತಿಗೆ ಓಡೋಡಿ ಬಂದ ಪಿಯೂಷ್ ಗೋಯಲ್ – ನೆಟ್ಟಿಗರಿಂದ ಪ್ರಶಂಸೆ

    ಸಂಸತ್ತಿಗೆ ಓಡೋಡಿ ಬಂದ ಪಿಯೂಷ್ ಗೋಯಲ್ – ನೆಟ್ಟಿಗರಿಂದ ಪ್ರಶಂಸೆ

    ನವದೆಹಲಿ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸಂಸತ್ ಕಲಾಪಕ್ಕೆ ಓಡೋಡಿ ಬಂದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

    ಬುಧವಾರ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಸಭೆ ಮುಗಿಸಿ ಸಂಸತ್ ಕಲಾಪಕ್ಕೆ ಓಡೋಡಿ ಬರುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಚಿವರ ಈ ಶ್ರದ್ಧೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇತ್ತೀಚಿಗಷ್ಟೇ ಸಂಸತ್ತಿನಲ್ಲಿ ಪ್ರಶ್ನಾವಳಿಯ ಸಮಯದಲ್ಲಿ ಸಂಸದರು ಮತ್ತು ಸಚಿವರು ಗೈರಾಗುತ್ತಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ಸಂಸತ್ತಿನಲ್ಲಿ ನಡೆದ ಪ್ರಶ್ನಾವಳಿಯ ಸಮಯಕ್ಕೆ ಹಾಜರಾಗಲು ಪಿಯೂಷ್ ಗೋಯಲ್ ಅವರು ಈ ರೀತಿ ಓಡಿ ಬಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನು ಓದಿ: ಕೇಂದ್ರ ಮಂತ್ರಿಗೆ ಕ್ಲಾಸ್ – ಗೈರಾದ ಸಂಸದರಿಗೂ ಬಿಸಿ ಮುಟ್ಟಿಸಿದ ಸ್ಪೀಕರ್

    ಗೋಯಲ್ ಓಡಿ ಬರುತ್ತಿರುವ ಫೋಟೋವನ್ನು ಬಿಜೆಪಿಯ ಸುರೇಶ್ ನಖುವಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಚಿವ ಪಿಯುಷ್ ಗೋಯಲ್ ಜಿ ಅವರು ಕ್ಯಾಬಿನೆಟ್ ಸಭೆಯ ನಂತರ ಸಂಸತ್ತಿನ ಪ್ರಶೋತ್ತರ ಸಮಯಕ್ಕೆ ಹಾಜರಾಗಲು ಓಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಗೋಯಲ್ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಫೋಟೋಗಳಿಗೆ ಕಮೆಂಟ್ ಮಾಡಿರುವ ಕೆಲ ಟ್ವಿಟ್ಟರ್ ಬಳಕೆದಾರರು, ಈ ಫೋಟೋಗಳು ಪಿಯೂಷ್ ಗೋಯಲ್ ಅವರಿಗೆ ಅವರ ಕೆಲಸದ ಮೇಲೆ ಇರುವ ಶ್ರದ್ಧೆಯನ್ನು ಸೂಚಿಸುತ್ತದೆ. ಮೋದಿ ಜೀ ಅವರ ಸರ್ಕಾರದಲ್ಲಿ ನೀವು ಅತ್ಯಂತ ಬುದ್ಧಿವಂತ ಮತ್ತು ಒಳ್ಳೆಯ ಕೆಲಸ ಮಾಡುವ ಮಂತ್ರಿ ಎಂದು ಕಮೆಂಟ್ ಮಾಡಿದರೆ ಇನ್ನೂ ಕೆಲವರು ಕಾಯಕವೇ ಕೈಲಾಸ ಎಂಬುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    ಪಿಯೂಷ್ ಗೋಯಲ್ ಅವರ ಬಗ್ಗೆ ತಿಳಿಯದ ಮಾಹಿತಿ ಎಂದರೆ ನಾನು ಒಂದು ಬಾರಿ ಅವರ ಜೊತೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದೇವೆ. ಅವರು ಯಾವುದೇ ಸೆಕ್ಯೂರಿಟಿ ಇಲ್ಲದೆ ಬಂದಿದ್ದರು ಮತ್ತು ಟರ್ಮಿನಲ್ ವರಿಗೂ ವಿಶೇಷ ವಾಹನ ಬಳಸದೆ ನಮ್ಮ ಜೊತೆ ಶಟಲ್ ಬಸ್ಸಿನಲ್ಲೇ ಬಂದರು ಎಂದು ಟ್ವಿಟ್ಟರ್ ಬಳಕೆದಾರ ರಾಜಿನೀಶ್ ಕಮೆಂಟ್ ಮಾಡಿದ್ದಾರೆ.

    https://twitter.com/Rajnish_Sood_/status/1202139764041953283

  • ಸಂಸತ್ತು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ್ರೆ ಭಾರತ ಇಸ್ರೇಲ್ ಆಗುತ್ತೆ: ಓವೈಸಿ

    ಸಂಸತ್ತು ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ್ರೆ ಭಾರತ ಇಸ್ರೇಲ್ ಆಗುತ್ತೆ: ಓವೈಸಿ

    ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಗೆ ಎಐಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ಪೌರತ್ವ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದರೆ ಭಾರತವು ಇಸ್ರೇಲ್ ಆಗಲಿದೆ. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

    ಈ ಮಸೂದೆಯ ಮೂಲಕ ಭಾರತವನ್ನು ಧಾರ್ಮಿಕ ದೇಶವನ್ನಾಗಿ ಮಾಡಲು ಸರ್ಕಾರ ಬಯಸಿದೆ. ಈ ಮೂಲಕ ಭಾರತವು ತಾರತಮ್ಯಕ್ಕೆ ಹೆಸರುವಾಸಿಯಾದ ಇಸ್ರೇಲ್‍ನಂತಹ ದೇಶಗಳ ಸಾಲಿಗೆ ಸೇರಲಿದೆ. ಈಶಾನ್ಯ ರಾಜ್ಯಗಳಿಗೆ ವಿನಾಯಿತಿ ನೀಡುವ ವರದಿಗಳು ನಿಜವಾಗಿದ್ದರೆ, ಅದು ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ 14ನೇ ಪರಿಚ್ಛೇದದ ಉಲ್ಲಂಘನೆಯಾಗಿದೆ. ಏಕೆಂದರೆ ಒಂದು ದೇಶದಲ್ಲಿ ಪೌರತ್ವಕ್ಕೆ ಸಂಬಂಧಿಸಿದ ಎರಡು ಕಾನೂನುಗಳು ಇರಲಾರವು ಎಂದು ಓವೈಸಿ ತಿಳಿಸಿದ್ದಾರೆ.

    ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಸನಾ ಇಲ್ತಿಜಾ ಜಾವೇದ್ ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಸ್ಥಾನವಿಲ್ಲ. ಮುಸ್ಲಿಂ ಸಮುದಾಯವನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಬಯಸಿದೆ ಎಂದು ಆರೋಪಿಸಿದ್ದಾರೆ.

    ಪೌರತ್ವ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಜೊತೆಗೆ ಸರ್ಕಾರವು ಮಸೂದೆಯನ್ನು ಗುರುವಾರ ಅಥವಾ ಶುಕ್ರವಾರ ಮಾತ್ರ ಸಂಸತ್ತಿನಲ್ಲಿ ಮಂಡಿಸಲು ಯೋಚನೆ ನಡೆಸಿದೆ. ಈ ಮಸೂದೆಯು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬಂದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ) ಭಾರತೀಯ ಪೌರತ್ವ ನೀಡಲು ಅನುಕೂಲವಾಗಲಿದೆ.

    ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಸನಾ ಇಲ್ತಿಜಾ ಜಾವೇದ್, ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ. ಭಾರತದಲ್ಲಿ ಹರಡಿರುವ ಮುಸ್ಲಿಂ ಜನಸಂಖ್ಯೆಯ ಸ್ಥಿತಿಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಬಯಸುತ್ತಿದೆ. ಮುಸ್ಲಿಮರು ಸಮುದಾಯವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಇದರಿಂದ ಮುಸ್ಲಿಮರು ದೇಶದಲ್ಲಿ ಕೆಳವರ್ಗದ ನಾಗರಿಕರಾಗಿ ಉಳಿಯುತ್ತಾರೆ ಎಂದು ದೂರಿದ್ದಾರೆ.

    ಕಾಂಗ್ರೆಸ್, ಶಿವಸೇನೆ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಸ್‍ಪಿ, ಬಿಎಸ್‍ಪಿ, ಆರ್‌ಜೆಡಿ, ಸಿಪಿಐ (ಎಂ), ಎಐಎಂಐಎಂ, ಬಿಜೆಡಿ ಮತ್ತು ಅಸ್ಸಾಂನ ಬಿಜೆಪಿಯ ಮಿತ್ರ ರಾಷ್ಟ್ರಗಳು ಎಜಿಪಿ ಮಸೂದೆಯನ್ನು ವಿರೋಧಿಸುತ್ತಿವೆ. ಆದರೆ, ಅಕಾಲಿ ದಳ, ಜೆಡಿಯು ಎಐಎಡಿಎಂಕೆ ಸರ್ಕಾರದೊಂದಿಗೆ ಇವೆ. ಅಸ್ಸಾಂ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿಯೂ ಈ ಮಸೂದೆಯನ್ನು ವಿರೋಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

    ಪೌರತ್ವ ಕಾನೂನು 1955ರಲ್ಲಿ ಬಂದಿದೆ. ಇದರ ಅಡಿ ಭಾರತ ಸರ್ಕಾರವು 11 ವರ್ಷಗಳ ಕಾಲ ದೇಶದಲ್ಲಿ ಉಳಿದುಕೊಂಡ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಮೇತರರಿಗೆ (ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು) ಪೌರತ್ವವನ್ನು ನೀಡುತ್ತದೆ.

    ಸರ್ಕಾರ ಯಾವ ತಿದ್ದುಪಡಿ ಮಾಡಲಿದೆ?
    ತಿದ್ದುಪಡಿ ಮಾಡಿದ ಮಸೂದೆ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಪೌರತ್ವ ನೀಡುವ ಸಮಯವನ್ನು 1 ರಿಂದ 6 ವರ್ಷಕ್ಕೆ ಇಳಿಸಿದೆ. ಅಲ್ಲದೆ 2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಬಂದ ಮುಸ್ಲಿಮೇತರರು ಪೌರತ್ವಕ್ಕೆ ಅರ್ಹರಾಗಿರುತ್ತಾರೆ. ಮಾನ್ಯ ದಾಖಲೆಗಳಿಲ್ಲದೆ ಕಂಡುಬಂದರೂ ಅವರನ್ನು ಜೈಲಿಗೆ ಹಾಕಲಾಗುವುದಿಲ್ಲ.

    ಪ್ರತಿಭಟನೆ ಯಾಕೆ?
    ಸಂಸತ್ತಿನಲ್ಲಿ ಪೌರತ್ವ ಮಸೂದೆಯನ್ನು ಅಂಗೀಕರಿಸಿದರೆ, ಬಾಂಗ್ಲಾದೇಶದ ಹೆಚ್ಚಿನ ಸಂಖ್ಯೆಯ ಹಿಂದೂಗಳಿಗೆ ಪೌರತ್ವ ನೀಡುವುದರಿಂದ ಮೂಲ ನಿವಾಸಿಗಳ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ಇದು ರಾಜ್ಯಗಳ ಸಾಂಸ್ಕೃತಿಕ, ಭಾಷಾ ಮತ್ತು ಸಾಂಪ್ರದಾಯಿಕ ಪರಂಪರೆಯ ಮೇಲೆ ಬಿಕ್ಕಟ್ಟನ್ನುಂಟು ಮಾಡುತ್ತದೆ ಎನ್ನುವುದು ಈಶಾನ್ಯ ರಾಜ್ಯಗಳ ದೂರಾಗಿದೆ.

    ಅಸ್ಸಾಂ ಒಪ್ಪಂದ:
    1971ಕ್ಕಿಂತ ಮೊದಲು ಬಂದ ಜನರಿಗೆ ಪೌರತ್ವ ನೀಡುವ ಅವಕಾಶವಿತ್ತು. ಈ ಮಸೂದೆ ಅಸ್ಸಾಂಗೆ ಸೀಮಿತವಾಗಿಲ್ಲ. ಆದರೆ ಇದು ಇಡೀ ದೇಶದಲ್ಲಿ ಪರಿಣಾಮಕಾರಿಯಾಗಲಿದೆ ಎಂದು ಸರ್ಕಾರ ಹೇಳುತ್ತದೆ.

  • ಅಂಬೇಡ್ಕರ್ ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು: ಮೋದಿ

    ಅಂಬೇಡ್ಕರ್ ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು: ಮೋದಿ

    ನವದೆಹಲಿ: ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರು ಇಂದು ಬದುಕಿದ್ದರೆ ತುಂಬಾ ಸಂತೋಷಪಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಇಂದು ಸಂವಿಧಾನ ದಿನದ ಅಂಗವಾಗಿ ಸಂಸತ್ತಿನಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಭಾರತ ಮತ್ತು ಭಾರತೀಯರ ಘನತೆ ಮತ್ತು ಐಕ್ಯತೆಯ ಭಾಗವಾಗಿ ನಿಂತಿದೆ. ಇದನ್ನು ರಚನೆ ಮಾಡಿದ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರು ಇಂದು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು ಎಂದು ಹೇಳಿದರು.

    ಸಂವಿಧಾನವನ್ನು ಅಂಗೀಕರಿಸಿದ 70 ವರ್ಷಗಳಲ್ಲಿ ಭಾರತ ತನ್ನ ಪ್ರಜಾಪ್ರಭುತ್ವವನ್ನು ತುಂಬಾ ಬಲಪಡಿಸಿಕೊಂಡಿದೆ. ಸಂವಿಧಾನದಲ್ಲಿ ಎರಡು ಮಂತ್ರಗಳಿವೆ. ಒಂದು ಭಾರತೀಯರ ಘನತೆ ಇನ್ನೊಂದು ಭಾರತದ ಐಕ್ಯತೆ. ಈ ರೀತಿಯ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಿ.ಆರ್ ಅಂಬೇಡ್ಕರ್ ಅವರಿಗೆ ನನ್ನ ಧನ್ಯವಾದಗಳು. ದೇಶದ ಮೊದಲ ಕಾನೂನು ಸಚಿವರಾಗಿದ್ದವರು ಯಾರು ಕೂಡ ಖುಷಿಯಿಂದ ಇರಲು ಸಾಧ್ಯವಿಲ್ಲ. ಆದ್ದರಿಂದ ಅಂಬೇಡ್ಕರ್ ಇಂದು ಬದುಕಿದ್ದರೆ ಸಂತೋಷವಾಗಿ ಇರುತ್ತಿದ್ದರು ಎಂದು ಮೋದಿ ಅಭಿಪ್ರಾಯಪಟ್ಟರು.

    ವಿರೋಧ ಪಕ್ಷದ ಪ್ರತಿಭಟನೆಯ ನಡುವೆಯೂ ಮಾತನಾಡಿದ ಮೋದಿ, ನಾನು 130 ಕೋಟಿ ಭಾರತೀಯರಿಗೆ ವಂದನೆ ಹೇಳುತ್ತೇನೆ. ಏಕೆಂದರೆ ಅವರು ಭಾರತದ ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಎಂದಿಗೂ ಕಡಿಮೆ ಮಾಡಿಲ್ಲ. ನಾನು ಯಾವಾಗಲೂ ನಮ್ಮ ಸಂವಿಧಾನವನ್ನು ಪವಿತ್ರ ಪುಸ್ತಕ ಮತ್ತು ಮಾರ್ಗದರ್ಶಕ ಬೆಳಕು ಎಂದು ಪರಿಗಣಿಸಿದ್ದೇನೆ ಎಂದು ಮೋದಿ ಬಣ್ಣಿಸಿದರು.

    ಇದೇ ವೇಳೆ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಮಾತನಾಡಿದ ಮೋದಿ, ಭಾರತದ ಸಂವಿಧಾನವು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಎತ್ತಿ ತೋರಿಸುತ್ತದೆ. ಗಾಂಧೀಜಿ ಅವರು ಹೇಳಿರುವಂತೆ ನಾವು ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ನಾವು ನಮ್ಮ ಮೂಲಭೂತ ಹಕ್ಕುಗಳನ್ನು ನಿರೀಕ್ಷಿಸಬಹುದು. ಹೀಗಾಗಿ ಗಾಂಧೀಜಿ ಹೇಳಿರುವಂತೆ ಕರ್ತವ್ಯಗಳು ಮತ್ತು ಹಕ್ಕುಗಳು ನೇರವಾಗಿ ಸಂಬಂಧ ಹೊಂದಿವೆ. ನಮ್ಮ ಪ್ರಜೆಗಳು ನಿರ್ವಹಿಸಬಹುದಾದ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಹಲವಾರು ಸುಲಭ ಕರ್ತವ್ಯಗಳು ನಮ್ಮ ಸಂವಿಧಾನದಲ್ಲಿ ಇವೇ ಎಂದು ಮೋದಿ ತಿಳಿಸಿದ್ದಾರೆ.

    ಒಬ್ಬ ನಾಗರಿಕ ಒಂದು ಹನಿ ನೀರನ್ನು ಉಳಿಸಿದರೆ ಅದು ಅವನ ಕರ್ತವ್ಯ. ಚುನಾವಣೆಯಲ್ಲಿ ಮತದಾನ ಮಾಡಿದರೆ ಅದು ದೇಶಕ್ಕಾಗಿ ಮಾಡುವ ಒಂದು ಕೆಲಸ. ನಮ್ಮ ದೇಶದ ಪ್ರಜೆಗಳು ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಿದರೆ ಅದು ಆತ ದೇಶದ ಅಭಿವೃದ್ಧಿಗಾಗಿ ಮಾಡುವ ಒಂದು ಕರ್ತವ್ಯ. ಸರಿಯಾದ ಸಮಯಕ್ಕೆ ಆತ ರೋಗನಿರೋಧಕ ಔಷಧಿಯನ್ನು ತೆಗೆದುಕೊಂಡರೆ ಅದು ಕೂಡ ದೇಶಕ್ಕಾಗಿ ಮಾಡುವ ಕರ್ತವ್ಯ ಎಂದು ಮೋದಿ ಪ್ರಜೆಗಳ ಕರ್ತವ್ಯವನ್ನು ನೆನಪಿಸಿದ್ದಾರೆ.

    ಈ ಭಾಷಣದ ವೇಳೆ 2011 ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕ ದಾಳಿ ಕುರಿತು ಮಾತನಾಡಿದ ಮೋದಿ, ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದರಿಗೆ ಗೌರವ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ಸಂಸತ್ತಿನ ಒಳಗೆ ಭಾಷಣ ಮಾಡುತ್ತಿದ್ದರೆ ಸಂಸತ್ತಿನ ಹೊರಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿರುವುದನ್ನು ವಿರೋಧಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿತು.

  • ‘ಇದು ಅತಿ ದೊಡ್ಡ ಹಗರಣ, ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ’ – ಸದನದಲ್ಲಿ ಕಾಂಗ್ರೆಸ್ ಕೋಲಾಹಲ

    ‘ಇದು ಅತಿ ದೊಡ್ಡ ಹಗರಣ, ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ’ – ಸದನದಲ್ಲಿ ಕಾಂಗ್ರೆಸ್ ಕೋಲಾಹಲ

    ನವದೆಹಲಿ: “ಇದು ಕೇಂದ್ರ ಸರ್ಕಾರದ ಅತಿ ದೊಡ್ಡ ಭ್ರಷ್ಟಾಚಾರ. ಈ ವಿಚಾರದ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡಬೇಕೆಂದು” ಆಗ್ರಹಿಸಿ ಲೋಕಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

    ಭಾರತ್ ಪೆಟ್ರೋಲಿಯಂ ಕಾರ್ಪೋರೆಷನ್ ಲಿಮಿಟೆಡ್(ಬಿಪಿಸಿಎಲ್) ಸೇರಿದಂತೆ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳ ಖಾಸಗೀಕರಣ ಮತ್ತು ಚುನಾವಣಾ ಬಾಂಡ್‍ಗಳನ್ನು ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಇಂದು ಕೋಲಾಹಲ ಎಬ್ಬಿಸಿದರು.

    ಸುಮಾರು 15 ನಿಮಿಷಗಳ ಕಾಲ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ಇದು ಕೇಂದ್ರ ಸರ್ಕಾರದ ಅತಿ ದೊಡ್ಡ ಹಗರಣ, ಖಾಸಗೀಕರಣಗೊಳಿಸಿ ದೇಶವನ್ನು ಲೂಟಿ ಮಾಡಲಾಗುತ್ತಿದೆ. ನಮಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕೆಂದು ಹೇಳಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಈ ಸಂದರ್ಭದಲ್ಲಿ ಸ್ಪೀಕರ್ ಓ ಬಿರ್ಲಾ ಅವರು, ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ನೀಡುತ್ತೇನೆ ಎಂದು ಭರವಸೆ ನೀಡಿದ ನಂತರ ಕೈ ಸದಸ್ಯರು ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಂಡರು.

    ಸದನದ ಘನತೆಯನ್ನು ಯಾರೂ ಹಾಳು ಮಾಡಬಾರದು. ಈ ರೀತಿ ಮಾಡುವುದು ತಪ್ಪು. ಕಲಾಪದಲ್ಲಿ ಕ್ರೀಡಾಪಟುಗಳ ಬಗ್ಗೆ ಗಂಭೀರ ಚರ್ಚೆ ನಡೆಯತ್ತಿರುವಾಗ ಬಾವಿಗಿಳಿದು ಪ್ರತಿಭಟಿಸಬಾರದು. ಸದನದ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮನವಿ ಮಾಡಿಕೊಂಡ ಸ್ಪೀಕರ್, ನಾನು ಹೊಸಬನಾಗಿದ್ದು ನೀವು ಹಿರಿಯರಿದ್ದೀರಿ. ನಿಮ್ಮ ನಿಲುವಳಿ ಸೂಚನೆಯನ್ನು ನಾವು ಒಪ್ಪುವುದಿಲ್ಲ. ಶೂನ್ಯ ವೇಳೆ ಚರ್ಚಿಸಲು ಅನುಮತಿ ನೀಡುತ್ತೇನೆ ಎಂದು ತಿಳಿಸಿದರು.

    ಈ ವೇಳೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಇದು ದೇಶದ ಅತಿ ದೊಡ್ಡ ಹಗರಣ. ದೇಶವನ್ನು ಲೂಟಿ ಮಾಡಲಾಗುತ್ತದೆ. ನಾವು ಸದನದ ಕಲಾಪ ಸುಗಮವಾಗಿ ನಡೆಯಲು ಸಹಕಾರ ನೀಡುತ್ತೇವೆ. ನೀವು ಸದನಕ್ಕೆ ಹೊಸಬರಲ್ಲ. ಕಲಾಪದಲ್ಲಿ ಪ್ರಮುಖ ವಿಷಯಗಳು ಚರ್ಚೆಯಾಗಬೇಕು. ಇದೊಂದು ದೊಡ್ಡ ಹಗರಣವಾಗಿದ್ದು, ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಈ ಕಾರಣಕ್ಕೆ ನಾವು ನಿಲುವಳಿ ಸೂಚನೆಗೆ ಆಗ್ರಹಿಸುತ್ತಿದ್ದೇವೆಯೇ ಹೊರತು ಸಭಾಧ್ಯಕ್ಷರಿಗೆ ಅಗೌರವ ನೀಡುತ್ತಿಲ್ಲ. ನಮ್ಮ ಮನವಿಗೆ ಸಹಕಾರ ನೀಡಬೇಕೆಂದು ಸ್ಪೀಕರ್ ಬಳಿ ಕೇಳಿಕೊಂಡರು.

    ಕೈ ನಾಯಕರ ಆರೋಪಗಳಿಗೆ ಉತ್ತರಿಸಿದ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಪ್ರಧಾನಿ ಮೋದಿಯವರು ಸ್ವಚ್ಛ ಸರ್ಕಾರ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ. ನೀವು ಪ್ರತಿದಿನ ಒಂದೊಂದು ವಿಷಯಕ್ಕೆ ನಿಲುವಳಿ ಸೂಚನೆ ಹಿಡಿದುಕೊಂಡು ಬರುತ್ತೀರಿ. ಈ ರೀತಿ ನೀವು ಮಾಡಬಾರದು ಎಂದು ಹೇಳಿ ತಿರುಗೇಟು ನೀಡಿದರು.

    https://www.youtube.com/watch?v=S6bowQfTxzc

  • ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    ಕರ್ನಾಟಕ, ಗೋವಾ ರಾಜಕೀಯ ಹೈಡ್ರಾಮ ಖಂಡಿಸಿ ಸೋನಿಯಾ, ರಾಹುಲ್ ಪ್ರತಿಭಟನೆ

    – ಬಿಜೆಪಿ ವಿರುದ್ಧ ಸಂಸತ್ತಿನ ಮುಂದೆ ಕೈ ಸಂಸದರ ಪ್ರತಿಭಟನೆ

    ನವದೆಹಲಿ: ಕರ್ನಾಟಕ ಹಾಗೂ ಗೋವಾದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮವನ್ನು ಖಂಡಿಸಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ಸಿನ ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣವೆಂದು ಆರೋಪಿಸಿ ಸಂಸತ್ತಿನ ಮುಂದೆ ಕೈ ಸಂಸದರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಈ ಪ್ರತಿಭಟನೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಆನಂದ್ ಶರ್ಮಾ ಸೇರಿದಂತೆ ಹಲವು ಕೈ ಸಂಸದರು ಭಾಗಿಯಾಗಿದ್ದರು. ಸಂಸತ್ತಿನ ಸಂಕೀರ್ಣದ ಮುಂದಿರುವ ಗಾಂಧೀಜಿ ಪುತ್ಥಳಿಯ ಎದುರು ಬಿಜೆಪಿ ವಿರುದ್ಧ ಘೋಷಣೆ ಕೂಗಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಫಲಕಗಳನ್ನು ಹಿಡಿದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಈ ತಂತ್ರಗಾರಿಕೆ ನಡೆಸುತ್ತಿದೆ. ಮೈತ್ರಿ ಪಕ್ಷಗಳ ಶಾಸಕರನ್ನು ರಾಜೀನಾಮೆ ನೀಡುವಂತೆ ಮಾಡಿ, ರಾಜ್ಯದಲ್ಲಿ ದೋಸ್ತಿ ಸರ್ಕಾರವನ್ನು ಕೆಡವುದು ಬಿಜೆಪಿಯ ಪ್ಲಾನ್. ಅಲ್ಲದೆ ಸರ್ಕಾರದ ಸಂಖ್ಯಾಬಲ ಕಡಿಮೆಯಾಗಿದೆ, ಹೀಗಾಗಿ ಸಿಎಂ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ ಎಂದು ಆರೋಪಿಸಲಾಯಿತು.

    ಇನ್ನೊಂದೆಡೆ ಗೋವಾದಲ್ಲಿ ಕಾಂಗ್ರೆಸ್ ನಾಯಕರು ಕೈತಪ್ಪಿ ಹೋಗಿದ್ದಾರೆ. ಒಟ್ಟು 15 ಮಂದಿ ಶಾಸಕರಲ್ಲಿ 10 ಮಂದಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಎರಡೂ ರಾಜ್ಯದಲ್ಲಿ ಕಾಂಗ್ರೆಸ್ ಅತಂತ್ರ ಸ್ಥಿತಿ ತಲುಪಲು ಕೇಸರಿ ಪಕ್ಷವೇ ಕಾರಣ. ಅವರಿಂದಲೇ ನಮ್ಮ ಪಕ್ಷಕ್ಕೆ ಈ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದ್ದಾರೆ.

  • ಇಂದಿನಿಂದ ಬಜೆಟ್ ಅಧಿವೇಶನ ಆರಂಭ – ನಾಳೆ ಮಧ್ಯಂತರ ಬಜೆಟ್ ಮಂಡನೆ

    ಇಂದಿನಿಂದ ಬಜೆಟ್ ಅಧಿವೇಶನ ಆರಂಭ – ನಾಳೆ ಮಧ್ಯಂತರ ಬಜೆಟ್ ಮಂಡನೆ

    ನವದೆಹಲಿ: ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೋದಿ ಸರ್ಕಾರದ ಕೊನೆಯ ಬಜೆಟ್ ಅಧಿವೇಶನ ಇದಾಗಿದ್ದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇಂದಿನಿಂದ ಫೆಬ್ರವರಿ 13ರತನಕ ಬಜೆಟ್ ಅಧಿವೇಶನ ನಡೆಯಲಿದ್ದು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್‍ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅನಾರೋಗ್ಯದಿಂದ ಬಳಲ್ತಿರುವ ಜೇಟ್ಲಿ ಅನುಪಸ್ಥಿತಿಯಲ್ಲಿ ಸಚಿವ ಪಿಯೋಷ್ ಗೊಯಲ್ ನಾಳೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.

    ಮಧ್ಯಂತರ ಬಜೆಟ್ ಕೂಡ ಪೂರ್ಣ ಬಜೆಟ್‍ನಂತೆಯೇ ಇರಲಿದ್ದು, ನಿರ್ದಿಷ್ಟ ವರ್ಷದ ಆರ್ಥಿಕ ವರದಿಯ ಮೇಲ್ನೋಟ ನೀಡುತ್ತದೆ. ಚುನಾವಣೆಯ ಹಿನ್ನೆಲೆ ಮಧ್ಯಂತರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಹಾಕಿದ್ದು ರೈತಾಪಿ ಹಾಗೂ ಜನ ಸಾಮಾನ್ಯರಿಗೆ ಮೋದಿ ಬಂಪರ್ ಆಫರ್ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮತ್ತೊಮ್ಮೆ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ರಮ್ಯಾ!

    ಮತ್ತೊಮ್ಮೆ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದ ರಮ್ಯಾ!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂದಿ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಧೈರ್ಯವಿಲ್ಲ ಅಂತ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಲೇವಡಿ ಮಾಡಿದ್ದಾರೆ.

    ದೇಶದ ಪ್ರಧಾನಿ ಬಗ್ಗೆ ಟ್ವೀಟ್ ಮಾಡುವ ಮೂಲಕ ರಮ್ಯಾ ಮತ್ತೆ ಮೋದಿ ಕಾಲೆಳೆದಿದ್ದಾರೆ. ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರಿಗೆ ರಾಹುಲ್ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳಲು ಧೈರ್ಯವಿದೆಯಾ ಅನ್ನೋ ಪ್ರಶ್ನೋತ್ತರವನ್ನು ಪೋಸ್ಟ್ ಮಾಡಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, ಪ್ರಧಾನಿ ಮೋದಿ ಅವರು ಹೇಳುವಂತೆ 56 ಇಂಚು ಎದೆ ಇಲ್ಲದೇ ಹೋದರೂ ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕಾಣೆಯಾಗಿದ್ದ ಮೋದಿ ಮಾರ್ಕ್ಸ್ ಕಾರ್ಡ್ ರಮ್ಯಾಗೆ ಸಿಕ್ತಂತೆ!

    ರಮ್ಯಾ ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಹಲವಾರು ಪರ ವಿರೋಧ ಚರ್ಚೆಗಳು ಆರಂಭವಾದವು. ರಾಹುಲ್ ಗಾಂಧಿಯವರಿಗೆ ಚೀಟಿ ಇಲ್ಲದೇ 15 ನಿಮಿಷ ನಿರರ್ಗಳವಾಗಿ ಮಾತನಾಡುವ ಧೈರ್ಯವಿದೆಯೇ? ಅವರಿಗೆ ನೀವು ಬರೆದ ಅಕ್ಷರಗಳನ್ನೇ ಓದಲು ಆಗುತ್ತಿಲ್ಲ ಅಂತ ಹೇಳಿದ್ದಾರೆ.

  • ಬ್ರಿಟನ್ ಸಂಸತ್ ಮೇಲೆ ದಾಳಿಗೆ ಉಗ್ರನ ವಿಫಲ ಯತ್ನ- ಐವರ ಸಾವು, 40 ಮಂದಿಗೆ ಗಾಯ

    ಬ್ರಿಟನ್ ಸಂಸತ್ ಮೇಲೆ ದಾಳಿಗೆ ಉಗ್ರನ ವಿಫಲ ಯತ್ನ- ಐವರ ಸಾವು, 40 ಮಂದಿಗೆ ಗಾಯ

    ಲಂಡನ್: ಬ್ರಿಟನ್ ಸಂಸತ್ ಭವನದ ಬಳಿ ಉಗ್ರನೊಬ್ಬ ಬುಧವಾರದಂದು ದಾಳಿಗೆ ಯತ್ನ ನಡೆಸಿದ್ದಾನೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಕಾರ್‍ನಲ್ಲಿ ದಾಳಿ ಮಾಡುತ್ತಾ ಬಂದು ಸಂಸತ್ ಭವನಕ್ಕೆ ನುಗ್ಗಲು ಯತ್ನಿಸಿದ ಉಗ್ರನನ್ನ ಭದ್ರತಾ ಪಡೆಯವರು ಹೊಡೆದುರುಳಿಸಿದ್ದಾರೆ. ಇದಕ್ಕೂ ಮುನ್ನಾ ಲಂಡನ್‍ನ ಸಂಸತ್ ಭವನ ಪಕ್ಕದಲ್ಲಿನ ಥೇಮ್ಸ್ ನದಿಗೆ ಅಡ್ಡಲಾಗಿ ಕಟ್ಟಿರೋ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ನಲ್ಲಿ ಸಿಕ್ಕಸಿಕ್ಕವರ ಮೇಲೆ ಕಾರ್ ಹತ್ತಿಸಿಕೊಂಡು ಉಗ್ರ ಬಂದಿದ್ದ. ಬಳಿಕ ವೆಸ್ಟ್ ಮಿನಿಸ್ಟರ್ ಬ್ರಿಡ್ಜ್ ಪಕ್ಕದಲ್ಲಿರುವ ಸಂಸತ್ ಭವನದೊಳಗೆ ಉಗ್ರ ನುಗ್ಗಲು ಯತ್ನಿಸಿ ಪೊಲೀಸ್ ಅಧಿಕಾರಿಗೆ ಚಾಕು ಹಾಕಿ ಕೊಂದಿದ್ದಾನೆ. ಕೂಡಲೇ ಉಗ್ರನನ್ನ ಭದ್ರತಾ ಪಡೆಯವ್ರು ಶೂಟ್ ಮಾಡಿ ಕೊಂದುಹಾಕಿದ್ದಾರೆ.

    ಉಗ್ರನ ದಾಳಿ ವೇಳೆ ಸಂಸತ್ ಭವನದಲ್ಲಿ ಬ್ರಿಟನ್ ಪ್ರಧಾನಿ ತೆರೆಸಾ ಮೇ ಕೂಡ ಇದ್ರು. ಈ ಘಟನೆಯನ್ನ ಭಯೋತ್ಪಾದಕ ದಾಳಿ ಅಂತ ಬ್ರಿಟನ್ ಘೋಷಿಸಿದೆ. ಲಂಡನ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಭಾರತೀಯರಿಗೆ ತೊಂದರೆ ಆಗಿಲ್ಲ ಅಂತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

  • ನಿಮ್ಮನ್ನು ಯಾವ ಸಮಯದಲ್ಲಾದ್ರೂ ಕರೀಬಹುದು- ಸಂಸತ್ತಿನ ಹಾಜರಾತಿ ಬಗ್ಗೆ ಜನಪ್ರತಿನಿಧಿಗಳಿಗೆ ಮೋದಿ ವಾರ್ನಿಂಗ್

    ನಿಮ್ಮನ್ನು ಯಾವ ಸಮಯದಲ್ಲಾದ್ರೂ ಕರೀಬಹುದು- ಸಂಸತ್ತಿನ ಹಾಜರಾತಿ ಬಗ್ಗೆ ಜನಪ್ರತಿನಿಧಿಗಳಿಗೆ ಮೋದಿ ವಾರ್ನಿಂಗ್

    ನವದೆಹಲಿ: ಸಂಸತ್ತಿನಲ್ಲಿ ಸಂಸದರ ಹಾಜರಾತಿಯ ಕೊರತೆ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಬಿಜೆಪಿಯ ಸಂಸದರಿಗೆ ಎಚ್ಚರಿಕೆ ನೀಡಿರೋ ಮೋದಿ, “ನಿಮಲ್ಲಿ ಯಾರನ್ನು ಬೇಕಾದ್ರೂ ಯಾವ ಸಮಯದಲ್ಲಾದ್ರೂ ನಾನು ಕರೆಯಬಹುದು” ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಮೂಲಕ ಸಂಸತ್ತಿನಲ್ಲಿ ಒಂದು ದಿನವೂ ಗೈರಾಗದಂತೆ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಸಭೆಯಲ್ಲಿ ಮೋದಿ ಎಚ್ಚರಿಸಿದ್ದಾರೆ.

    ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸುವುದು ನಿಮ್ಮ ಆದ್ಯ ಕರ್ತವ್ಯ. ನಾನು ಸಾಕಷ್ಟು ಕೆಲಸಗಳನ್ನ ಮಾಡಬಹುದು. ಆದ್ರೆ ಉಭಯ ಸದನಗಳಲ್ಲಿ ನಿಮ್ಮ ಪರವಾಗಿ ಹಾಜರಾಗಲು ಸಾಧ್ಯವಿಲ್ಲ ಎಂದು ಮೋದಿ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.

    ಬಜೆಟ್ ಅಧಿವೇಶನದ ವೇಳೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹಾಜರತಿ ಕೊರತೆ/ಕೋರಂನ ಕೊರತೆ ಮತ್ತು ಖಾಲಿ ಬೆಂಚ್‍ಗಳ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಮಾತನಾಡಿದ ಬಳಿಕ ಮೋದಿ ಈ ಎಚ್ಚರಿಕೆ ನೀಡಿದ್ದಾರೆ. ಸದನದಲ್ಲಿ ಕೋರಂಗೆ ಅವಶ್ಯವಿರುವಷ್ಟು ಜನಪ್ರತಿನಿಧಿಗಳು ಹಾಜರಿಲ್ಲವಾದ್ರೆ ಕೋರಂ ಬೆಲ್ ಅಲರ್ಟ್ ನೀಡುತ್ತದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳು ಬರುವವರೆಗೂ ಕಲಾಪ ಸ್ಥಗಿತಗೊಳ್ಳುತ್ತದೆ.

    ಇದರಿಂದ ನಿರಾಸೆಗೊಂಡ ಮೋದಿ, ಸಂಸತ್ತಿನಲ್ಲಿ ಹಾಜರಾಗುವಂತೆ ಸಂಸದರನ್ನು ಮನವಿ ಮಾಡಬೇಕಿಲ್ಲ. ಅದು ಅವರ ಜವಾಬ್ದಾರಿಯಾಗಿದೆ. ತಮ್ಮ ಕೇತ್ರದ ಲಕ್ಷಾಂತರ ಜನರ ಪ್ರತಿನಿಧಿಯಾಗಿ ಕಲಾಪದಲ್ಲಿ ಭಾಗವಹಿಸುವುದು ಅವರ ಕರ್ತವ್ಯ ಅಂತ ಹೇಳಿದ್ದಾರೆ.

    ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಸಂಸತ್ತಿನಲ್ಲಿ ಹಾಜರಿರುವಂತೆ ಹೇಳುತ್ತಲೇ ಇದ್ದರು. ಆದ್ರೆ ಇದೇ ಮೊದಲ ಬಾರಿಗೆ ಸಂಸದರಿಗೆ ಖಡಕ್ ಆಗಿ ಹೇಳುವ ಮೂಲಕ ಎಚ್ಚರಿಕೆ ನೀಡಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.