Tag: ಸಂಶೋಧಕರು

  • ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು

    ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು

    – ವಿಶ್ವ ದಾಖಲೆಯ ಇಂಟರ್ನೆಟ್ ವೇಗ ಸಂಶೋಧನೆ

    ಸಿಡ್ನಿ: ವಿಡಿಯೋಗಳನ್ನು ಡೌನ್‍ಲೋಡ್ ಮಾಡುವುದೇ ಕಷ್ಟ. ಅದರಲ್ಲೂ ಎಚ್‍ಡಿ ಗುಣಮಟ್ಟದ ವಿಡಿಯೋ ಮತ್ತಷ್ಟು ಕಷ್ಟ. ಆದರೆ ಇನ್ನು ಮುಂದೆ ಒಂದು ಸೆಕೆಂಡಿಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಆದರೂ ಅಚ್ಚರಿ ಇಲ್ಲ.

    ಆಸ್ಟ್ರೇಲಿಯಾದ ಸಂಶೋಧಕರು ಪ್ರತಿ ಸೆಕೆಂಡಿಗೆ 44.2 ಟೆರಾಬೈಟ್ ಡೇಟಾ ಡೌನ್‍ಲೋಡ್ ಮಾಡುವ ಸಾಮಥ್ರ್ಯ ಇರುವ ವಿಶ್ವ ದಾಖಲೆಯ ಇಂಟರ್ನೆಟ್ ವೇಗವನ್ನು ಸಂಶೋಧಿಸಿದ್ದಾರೆ. ಈ ವೇಗದ ಬ್ರಾಡ್‍ಬ್ಯಾಂಡ್ ಸೌಲಭ್ಯ ಲಭ್ಯವಾದರೆ ಬಳಕೆದಾರರಿಗೆ ಒಂದೇ ಸೆಕೆಂಡಿನಲ್ಲಿ 1 ಸಾವಿರ ಎಚ್‍ಡಿ ಸಿನಿಮಾವನ್ನು ಡೌನ್‍ಲೋಡ್ ಮಾಡಬಹುದು. ಇದನ್ನೂ  ಓದಿ: ವಾಟ್ಸಪ್ ಸ್ಟೇಟಸ್ ಮತ್ತೆ 30 ಸೆಕೆಂಡ್‍ಗೆ ಏರಿಕೆ

    ಮೊನಾಶ್, ಸ್ವಿನ್‍ಬರ್ನ್ ಮತ್ತು ಆರೆಂಐಟಿ ವಿಶ್ವವಿದ್ಯಾಲಯಗಳ ತಂಡವು ಮೆಲ್ಬರ್ನ್ ನಲ್ಲಿ ಈ ಸಂಶೋಧನೆ ಮಾಡಿದೆ. ಈ ತಂಡವು ಸಂವಹನ ಮೂಲಸೌಕರ್ಯದಾದ್ಯಂತ ಡೇಟಾವನ್ನು ವರ್ಗಾಯಿಸಲು ನೂರಾರು ಅತಿಗೆಂಪು ಲೇಸರ್ ಗಳನ್ನು ಒಳಗೊಂಡಿರುವ `ಮೈಕ್ರೋ-ಕಾಂಬ್’ ಆಪ್ಟಿಕಲ್ ಚಿಪ್ ಅನ್ನು ಬಳಸಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.

    ಪ್ರಸ್ತುತ ಸಿಂಗಾಪುರದಲ್ಲಿ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಇದೆ. ಆದರೆ ಅಲ್ಲಿ ಸರಾಸರಿ ಡೌನ್‍ಲೋಡ್ ವೇಗ ಸೆಕೆಂಡಿಗೆ 197.3 ಎಂಬಿಪಿಎಸ್ (ಮೆಗಾ ಬೈಟ್ ಪರ್ ಸೆಕೆಂಡ್) ಇದೆ.

    ಆಸ್ಟ್ರೇಲಿಯಾದಲ್ಲಿ ಸದ್ಯ ಸಂಶೋಧನೆ ಮಾಡಿದ ಇಂಟೆರ್ನೆಟ್ ವೇಗವು ಸರಾಸರಿ ಪ್ರತಿ ಸೆಕೆಂಡ್‍ಗೆ 43.4 ಟಿಬಿ ಆಗಿದೆ. ಆಸ್ಟ್ರೇಲಿಯಾದ ಸಂಶೋಧನೆಗೆ ಹೋಲಿಸಿದರೆ ಸಿಂಗಾಪುರದಲ್ಲಿ ಇಂಟರ್ನೆಟ್ ವೇಗವು 10 ಲಕ್ಷ (1 ಮಿಲಿಯನ್) ಪಟ್ಟು ನಿಧಾನವಾಗಿದೆ.

    “ಈ ತಂತ್ರಜ್ಞಾನವನ್ನು ವಾಣಿಜ್ಯ ಕ್ಷೇತ್ರಕ್ಕೆ ತಲುಪಿಸಲು ಕೆಲ ಸವಾಲುಗಳಿವೆ. ಇದರ ‘ಮೈಕ್ರೊ-ಕಾಂಬ್’ ನಿಜವಾಗಿಯೂ ವ್ಯಾಪಕವಾದ ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳಲ್ಲಿ ಉಪಯುಕ್ತವಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ನಮಗೆ ಸಿಕ್ಕಂತ ಲ್ಯಾಬ್ ವ್ಯವಸ್ಥೆಗೆ ಹುಡುಕಾಟ ನಡೆಸಿದ್ದೇವೆ. ಅದು ಸಾಧ್ಯವಾದರೆ ಮುಂದಿನ ಸುಮಾರು ಐದು ವರ್ಷಗಳಲ್ಲಿ ಇಷ್ಟು ವೇಗದ ಇಂಟರ್ನೆಟ್ ಸೇವೆಯು ವಾಣಿಜ್ಯ ಕ್ಷೇತ್ರಕ್ಕೂ ಲಭ್ಯವಾಗಲಿದೆ” ಎಂದು ಮೊನಾಶ್ ವಿಶ್ವವಿದ್ಯಾಲಯದ ಡಾ.ಬಿಲ್ ಕೊರ್ಕೊರನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ವಿಶ್ವಾದ್ಯಂತ ಲಾಕ್‍ಡೌನ್ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಯದಲ್ಲಿ ಜನರು ಸಮಯ ಕಳೆಯಲು, ಮನರಂಜನೆಗಾಗಿ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಪರಿಣಾಮ ಇಂಟರ್ನೆಟ್ ಸರ್ವರ್ ಮೇಲೆ ಒತ್ತಡವನ್ನುಂಟು ಮಾಡಿದೆ.

    ಬಳಕೆ ಹೆಚ್ಚಾದ ಪರಿಣಾಮ ವಿಶ್ವದಲ್ಲಿ ಸರ್ವರ್ ಮೇಲೆ ಒತ್ತಡ ಹೆಚ್ಚಿದ್ದರಿಂದ ವಿಡಿಯೋ ಗುಣಮಟ್ಟವನ್ನು ಕಡಿಮೆ ಮಾಡಲಾಗಿತ್ತು. ವಾಟ್ಸಪ್ ಕೂಡ ಸ್ಟೇಟಸ್ ವಿಡಿಯೋ ಮಿತಿಯನ್ನು 30 ಸೆಕೆಂಡ್‍ನಿಂದ 15 ಸೆಕೆಂಡ್‍ಗೆ ಇಳಿಸಿತ್ತು. ಅಷ್ಟೇ ಅಲ್ಲದೆ ನೆಟ್‍ಫ್ಲಿಕ್ಸ್ ಮತ್ತು ಯೂಟ್ಯೂಬ್ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಮೈಕ್ರೋ-ಕಾಂಬ್ ಸಾಧನವನ್ನು ಕಾರ್ಯಗತಗೊಳಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

  • ಕೋವಿಡ್ ಔಷಧ ಸಂಶೋಧನೆಯಲ್ಲಿ 45 ಸ್ಟಾರ್ಟ್‌ಅಪ್‍ಗಳ ಅವಿರತ ಶ್ರಮ

    ಕೋವಿಡ್ ಔಷಧ ಸಂಶೋಧನೆಯಲ್ಲಿ 45 ಸ್ಟಾರ್ಟ್‌ಅಪ್‍ಗಳ ಅವಿರತ ಶ್ರಮ

    – 5 ನಿಮಿಷದಲ್ಲೇ ಕೊರೊನಾ ಟೆಸ್ಟ್
    – ಸಂಶೋಧಕರ ಜತೆ ಡಾ.ಅಶ್ವತ್ಥನಾರಾಯಣ ಚರ್ಚೆ

    ಬೆಂಗಳೂರು: ರಾಜ್ಯ ಜೈವಿಕ ತಂತ್ರಜ್ಞಾನ ಇಲಾಖೆಯ ‘ಬೆಂಗಳೂರು ಬಯೋ ಇನೋವೇಷನ್ ಸೆಂಟರ್’ನಲ್ಲಿ ಇರುವ 45 ಸ್ಟಾರ್ಟ್‌ಅಪ್‍ಗಳು ಕೋವಿಡ್-19 ಸೋಂಕಿಗೆ ಔಷಧ ಕಂಡುಹಿಡಿಯುವ ಮತ್ತು ತ್ವರಿತವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಅವಿರತ ಶ್ರಮ ಹಾಕುತ್ತಿದೆ. ಅಂತಹ ಕೆಲವು ಸಂಸ್ಥೆಗಳ ಪ್ರತಿನಿಧಿಗಳ ಜತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಸಂವಾದ ನಡೆಸಿ, ಅವರಿಗೆ ಬೆಂಬಲ ಸೂಚಿಸಿದರು.

    ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ ‘ಬೆಂಗಳೂರು ಬಯೋ ಇನೋವೇಷನ್ ಸೆಂಟರ್’ಗೆ ಗುರುವಾರ ಭೇಟಿ ನೀಡಿದ ಅವರು ಕೋವಿಡ್ ಟೆಸ್ಟ್ ಹಾಗೂ ಕೊರೊನಾ ಔಷಧ ಅನ್ವೇಷಣೆ ಕಾರ್ಯದಲ್ಲಿ ತೊಡಗಿರುವ ಸಂಶೋಧಕರ ಜತೆ ಸಂವಾದ ನಡೆಸಿದರು. ಅಲ್ಲದೆ ಎಸ್‍ಎನ್ ಲೈಫ್‍ಸೈನ್ಸಸ್, ಕಫ/ಸ್ವ್ಯಾಬ್ ಮಾದರಿಯಿಂದ ಆರ್‌ಎನ್‌ಎ ಬೇರ್ಪಡಿಸುವ ಪ್ರೋಗ್ರಾಂಬಲ್ ರೊಬೊಟಿಕ್ ಯಂತ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    “ಕೋವಿಡ್-19 ಸೋಂಕಿಗೆ ಔಷಧ ಕಂಡುಹಿಡಿಯುವುದರ ಜತೆಗೆ ಕಡಿಮೆ ವೆಚ್ಚದಲ್ಲಿ ಮತ್ತು ತ್ವರಿತವಾಗಿ ಸೋಂಕು ಪತ್ತೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕೆಲವು ಸ್ಟಾರ್ಟ್ ಅಪ್‍ಗಳು ಕ್ಲಿನಿಕಲ್ ಟೆಸ್ಟ್ ಹಂತದಲ್ಲಿದ್ದರೆ, ಇನ್ನು ಕೆಲವು ಸಂಶೋಧನೆ ಮುಗಿಸಿ ನಿಯಂತ್ರಣ ಪ್ರಾಧಿಕಾರಗಳ ಒಪ್ಪಿಗೆಗಾಗಿ ಕಾಯುತ್ತಿವೆ. ಒಟ್ಟಿನಲ್ಲಿ ಕರ್ನಾಟಕದ ಸಂಸ್ಥೆಗಳು ಈ ಸೋಂಕಿನ ವಿರುದ್ಧ ಹೋರಾಡಲು ಜಗತ್ತಿಗೆ ಪರಿಹಾರ ಸೂಚಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ” ಎಂದು ಹೇಳಿದರು.

    5 ನಿಮಿಷದ ಪರೀಕ್ಷೆ:
    “ಜೈವಿಕ ತಂತ್ರಜ್ಞಾನ ಕ್ಷೇತ್ರದ ಕಂಪನಿಯೊಂದು ಕೇವಲ 5 ನಿಮಿಷದಲ್ಲಿ ಕೋವಿಡ್ ಸೋಂಕು ಪರೀಕ್ಷೆ ಮಾಡುವ ಯಂತ್ರ ಸಿದ್ಧಪಡಿಸಿದೆ. ಮತ್ತೊಂದು ಕಂಪನಿ ಸೋಂಕು ಪತ್ತೆ ಜತೆಗೆ ಸ್ಯಾಂಪಲ್ ಅನ್ನು ತಕ್ಷಣವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಯಂತ್ರ ಸಂಶೋಧಿಸಿದೆ. ಅದೇ ರೀತಿ ಹಲವು ಕಂಪನಿಗಳು ನಾನಾ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. ‘ಬೆಂಗಳೂರು ಬಯೋ ಇನೋವೇಷನ್ ಸೆಂಟರ್’ ವ್ಯಾಪ್ತಿಯಲ್ಲಿ ಸ್ಟಾರ್ಟ್‍ಅಪ್‍ಗಳು ಇಂತಹ ಯಶಸ್ಸು ಸಾಧಿಸುತ್ತಿರುವುದು ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಅತ್ಯಂತ ಉತ್ತಮ ಬೆಳವಣಿಗೆ. ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಆರ್ಥಿಕ ವಹಿವಾಟು ಮುಂದುವರಿಸಲು 5 ನಿಮಿಷದ ಪರೀಕ್ಷೆಯಿಂದ ಸಾಧ್ಯವಾಗಲಿದೆ” ಎಂದರು.

    “ಈಗಾಗಲೇ ಸೋಂಕು ಪತ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಕಂಪನಿಗಳು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ಸು ಸಾಧಿಸಿದ್ದು, ಇದೀಗ ಕೋವಿಡ್ ಸೋಂಕು ಪರೀಕ್ಷೆಗೆ ಸೋಂಕಿತರ ಗಂಟಲು ದ್ರವ ನೀಡುವಂತೆ ಕೇಳಿಕೊಂಡಿವೆ. ಈ ಪ್ರಯೋಗ ಯಶಸ್ವಿಯಾದರೆ ಸ್ಥಳೀಯವಾಗಿ ಸಿದ್ಧಪಡಿಸಿದ ತಂತ್ರಜ್ಞಾನದಿಂದಲೇ ಸೋಂಕು ಪತ್ತೆ ಮಾಡಬಹುದು ಎಂದು ಹೇಳಿವೆ. ಆದರೆ ಪಾಸಿಟಿವ್ ಬಂದಿರುವ ರೋಗಿಯ ಗಂಟಲು ದ್ರವವನ್ನು ಸಂಗ್ರಹಿಸುವುದು ಮತ್ತು ಪ್ರಯೋಗದ ಬಳಿಕ ವಿಲೇವಾರಿ ಮಾಡುವುದು ಅತ್ಯಂತ ಸವಾಲಿನ ಕೆಲಸ. ಇದಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಂಪನಿಗೆ ಅಗತ್ಯವಿರುವ ಗಂಟಲು ದ್ರವ ಮಾದರಿಯನ್ನು ಒದಗಿಸುವ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

    ಸಮಿತಿ ರಚನೆ:
    ಈ ಸ್ಟಾರ್ಟ್‌ಅಪ್ ಕಂಪನಿಗಳು ಇನ್ನಷ್ಟು ಪರಿಣಾಕಾರಿಯಾಗಿ ತಮ್ಮ ಸಂಶೋಧನಾ ಕಾರ್ಯ ಮುಂದುವರಿಸಲು ಸರ್ಕಾರದಿಂದಲೂ ಸಾಕಷ್ಟು ಸಹಕಾರ ಬೇಕು. ಈ ಹಿನ್ನೆಲೆಯಲ್ಲಿ ಕಂಪನಿಗಳು ಮತ್ತು ಸರ್ಕಾರದ ಮಧ್ಯೆ ಸಮನ್ವಯ ಸಾಧಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು. ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಸ್ಥಳದಲ್ಲೇ ಇದ್ದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಸೂಚಿಸಿದರು.

    ಒಂದೇ ಬಾರಿಗೆ 8 ಮಾದರಿ ಪರೀಕ್ಷೆ:
    “ಎಸ್‍ಎನ್ ಲೈಫ್‍ಸೈನ್ಸ್ ಪ್ರೋಗ್ರಾಂಬಲ್ ರೊಬೊಟಿಕ್ ಯಂತ್ರವು ಕಫ/ಸ್ವ್ಯಾಬ್‍ಗಳ ಕ್ಲಿನಿಕಲ್ ಮಾದರಿಯ ಆರ್‌ಎನ್‌ಎ ಪ್ರತ್ಯೇಕಿಸುವ ಕೆಲಸ ಮಾಡುತ್ತದೆ. ಏಕಕಾಲದಲ್ಲಿ ಎಂಟು ಮಾದರಿಗಳ ಟೆಸ್ಟ್ ಮಾಡುವುದು ಈ ಯಂತ್ರದ ವಿಶೇಷತೆ. ಜತೆಗೆ ಪ್ರತಿ ಮಾದರಿಯ ಆರ್‍ಎನ್‍ಎ ಪ್ರತ್ಯೇಕಿಸುವ ವೆಚ್ಚವು 500 ರೂ.ನಿಂದ 150ಕ್ಕೆ ಇಳಿಕೆಯಾಗಲಿದೆ” ಎಂದರು.

    ಎಸ್‍ಎನ್ ಲೈಫ್‍ಸೈನ್ಸಸ್, ನಿಯೋಮ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್, ಹೈಬ್ರಿನೋಮಿಕ್ಸ್ ಲೈಫ್ ಸೈನ್ಸಸ್ ಅಂಡ್ ಡಯಾಗ್ನಾಸ್ಟಿಕ್ಸ್ ಎಲ್‍ಎಲ್ ಪಿ (ಎಚ್‍ಎಲ್ ಡಿ) ಹಾಗೂ ಗೆಲೊರಿ ಟಿಎಕ್ಸ್ ಫಾರ್ಮಾಸಿಟಿಕಲ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯವರು ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಬಿಬಿಸಿ ಎಂ.ಡಿ ಡಾ.ಜಿತೇಂದ್ರ ಕುಮಾರ್, ಡಾ.ಶರತ್ ಚಂದ್ರ, ವಿಶಾಲ ರಾವ್ ಸೇರಿದಂತೆ ಇತರ ವಿಜ್ಞಾನಿಗಳು ಹಾಜರಿದ್ದರು.

    ಸಭೆ ಬಳಿಕ ಡಿಸಿಎಂ ಅಶ್ವತ್ಥನಾರಾಯಣ ಅವರು ಸೆಂಟರ್ ಫಾರ್ ಹೂಮನ್ ಜೆನೆಟಿಕ್ಸ್ ಮತ್ತು ಬಯೊ ಇನ್ಫಾರ್ಮೇಟಿಕ್ಸ್ ಮತ್ತು ಅನ್ವಯಿಕ ಜೈವಿಕ ತಂತ್ರಜ್ಞಾನ ಸಂಸ್ಥೆಗೆ ಭೇಟಿ ನೀಡಿ ಪ್ರಯೋಗಾಲಯಗಳನ್ನು ವೀಕ್ಷಿಸಿದರು.

  • ಪ್ರತಿ ವರ್ಷ ಕೊರೊನಾ ಕಾಡುವ ಸಾಧ್ಯತೆ ಇದೆ ಎಂದ ಚೀನಾ ವಿಜ್ಞಾನಿಗಳು

    ಪ್ರತಿ ವರ್ಷ ಕೊರೊನಾ ಕಾಡುವ ಸಾಧ್ಯತೆ ಇದೆ ಎಂದ ಚೀನಾ ವಿಜ್ಞಾನಿಗಳು

    – ಭಾರತದಂತಹ ರಾಷ್ಟ್ರಗಳಲ್ಲಿ ನಿಯಂತ್ರಣದಲ್ಲಿದೆ

    ಬೀಜಿಂಗ್: ಮಹಾಮಾರಿ ಕೊರೊನಾ ಅಟ್ಟಹಾಸ ಇಲ್ಲಿಗೇ ಮುಗಿಯುವುದಿಲ್ಲ ಪ್ರತಿ ವರ್ಷವೂ ಕಾಡುವ ಸಾಧ್ಯತೆ ಇದೆ ಎಂಬ ಭಯಾನಕ ಅಂಶವನ್ನು ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ.

    ಚೀನಾದ ಬೀಜಿಂಗ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂಶೋಧಕರು ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕೊರೊನಾ ವೈರಸನ್ನು ಓಡಿಸಿದರೆ ಮುಗಿಯಿತು ಮತ್ತೆ ಬರಲ್ಲ ಎಂದುಕೊಳ್ಳುವಂತಿಲ್ಲ. ವಿಶ್ವವ್ಯಾಪಿ ಇದರ ಬೆಳವಣಿಗೆಯನ್ನು ಗಮನಿಸಿದಾಗ ಕೊರೊನಾ ಪ್ರತಿ ವರ್ಷ ಬರುವ ಸಾಧ್ಯತೆ ಇದ್ದು, ಜ್ವರದ ರೂಪದಲ್ಲಿ ಜನರನ್ನು ಕಾಡಲಿದೆ ಎಂದು ಹೇಳಿದ್ದಾರೆ.

    ಇದು 17 ವರ್ಷಗಳ ಹಿಂದೆ ಕಾಡಿದ ಸಾರ್ಸ್ ರೀತಿ ಸಂಪೂರ್ಣವಾಗಿ ತೊಲಗುವ ವೈರಸ್ ಅಲ್ಲ. ಸ್ಪಷ್ಟ ರೋಗಲಕ್ಷಣಗಳನ್ನು ಹೊಂದಿಲ್ಲದ ಕಾರಣ ಕೆಲವು ಜನರಲ್ಲಿ ಸೋಂಕು ಇರುತ್ತದೆ. ಇದರ ಲಕ್ಷಣಗಳು ಸ್ಪಷ್ಟವಾಗದಿರುವುದರಿಂದ ಇದನ್ನು ಪತ್ತೆ ಹಚ್ಚಿ ಸಂಪೂರ್ಣವಾಗಿ ತೊಲಗಿಸುವುದು ಕಷ್ಟ ಎಂದು ಚೀನಾದ ವೈರಲ್ ಮತ್ತು ಮೆಡಿಕಲ್ ಸಂಶೋಧಕರ ಗುಂಪು ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.

    ಸಾರ್ಸ್ ವೈರಸ್‍ನಿಂದ ಸೋಂಕಿತರು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಇದರಿಂದಾಗಿ ಅವರನ್ನು ಪತ್ತೆ ಹಚ್ಚುವುದು ಸುಲಭವಾಗಿತ್ತು. ಅಲ್ಲದೆ ಅಂತಹವರನ್ನು ಹುಡುಕಿ ಕ್ವಾರಂಟೈನ್ ಮಾಡಿದ ನಂತರ ಹರಡುವುದನ್ನು ನಿಲ್ಲಿಸಿತ್ತು. ಆದರೆ ಕೊರೊನಾ ವೈರಸ್ ಲಕ್ಷಣಗಳು ಕಂಡುಬರುತ್ತಿಲ್ಲ. ಹೀಗಾಗಿಯೇ ಚೀನಾ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತಂದರೂ ಪ್ರತಿದಿನ ನೂರಾರು ಲಕ್ಷಣರಹಿತ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ.

    ಕೊರೊನಾ ವೈರಸ್ ದೀರ್ಘ ಕಾಲದ ವರೆಗೆ ಮಾನವರೊಂದಿಗೆ ಇರಲಿದ್ದು, ಋತುಮಾನಕ್ಕೆ ತಕ್ಕಂತೆ ಮಾನವನ ದೇಹದಲ್ಲಿ ನಿರಂತರವಾಗಿ ಉಳಿಯುವ ಸಾಂಕ್ರಾಮಿಕ ರೋಗವಾಗಿದೆ ಎಂದು ಚೀನಾದ ವೈದ್ಯಕೀಯ ವಿಜ್ಞಾನ ಅಕಾಡೆಮಿಯ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯ ರೋಗಕಾರಕ ಜೀವಶಾಸ್ತ್ರ ಸಂಸ್ಥೆಯ ನಿರ್ದೇಶಕ ಜಿನ್ ಕ್ವಿ ತಿಳಿಸಿದ್ದಾರೆ.

    ವಿಶ್ವಾದ್ಯಂತ ಉನ್ನತ ಸಂಶೋಧಕರು ಮತ್ತು ಸರ್ಕಾರಗಳ ಮಧ್ಯೆ ಒಮ್ಮತ ರೂಪುಗೊಳ್ಳುತ್ತಿದೆ. ಲಾಕ್‍ಡೌನ್‍ಗಳ ಹೊರತಾಗಿಯೂ, ಜಾಗತಿಕ ಆರ್ಥಿಕತೆಯ ಬಹುಭಾಗವನ್ನು ಸ್ಥಗಿತಗೊಳಿಸಿದೆ. ಯುವ ಸಮೂಹವನ್ನು ಹೆಚ್ಚು ಒಳಗೊಂಡ ಭಾರತದಂತಹ ರಾಷ್ಟ್ರಗಳಲ್ಲಿ ವೈರಸ್ ಹರಡುವುದು ನಿಯಂತ್ರಣದಲ್ಲಿದೆ. ಅಲ್ಲದೆ ಕಟ್ಟುನಿಟ್ಟಿನ ಲಾಕ್‍ಡೌನ್ ಪಾಲಿಸುತ್ತಿರುವ ಸ್ವೀಡನ್‍ನಂತಹ ದೇಶಗಳಲ್ಲಿ ಇದು ನಿಯಂತ್ರಣದಲ್ಲಿದೆ ಎಂದು ಇನ್ನೂ ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೊರೊನಾ ಸದ್ಯಕ್ಕೆ ನಮ್ಮನ್ನು ಬಿಟ್ಟು ತೊಲಗುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

    ವಿಶ್ವಾದ್ಯಂತ 30 ಲಕ್ಷಕ್ಕೂ ಅಧಿಕ ಜನರಗೆ ಕೊರೊನಾ ಸೋಂಕು ಹಬ್ಬಿದ್ದು, 2 ಲಕ್ಷಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಅಮೆರಿಕ ಒಂದರಲ್ಲೇ 10 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ 29,974 ಪ್ರಕರಣಗಳು ಪತ್ತೆಯಾಗಿವೆ. 937ಜನ ಸಾವನ್ನಪ್ಪಿದ್ದಾರೆ.