Tag: ಸಂವಾದ ಕಾರ್ಯಕ್ರಮ

  • ‘ಪರೀಕ್ಷಾ ಪೇ ಚರ್ಚಾ’- ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    ‘ಪರೀಕ್ಷಾ ಪೇ ಚರ್ಚಾ’- ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

    – ಜ.20ರಂದು ಮೋದಿ ಜೊತೆ ಸಂವಾದ

    ತುಮಕೂರು: ಪ್ರಧಾನಿ ಮಂತ್ರಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

    ಶಿರಾ ತಾಲೂಕಿನ ಚಿಕ್ಕನಹಳ್ಳಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾಗರ್ ಹಾಗೂ ಚಂಗಾವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಪಿಕಾ.ಆರ್ ಆಯ್ಕೆಯಾಗಿದ್ದು. ಪ್ರಧಾನಿ ಭೇಟಿ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

    ವಿದ್ಯಾರ್ಥಿ ಸಾಗರ್ ತಂದೆ ಆಟೋ ಚಾಲಕರಾಗಿದ್ದು, ವಿದ್ಯಾರ್ಥಿನಿ ದೀಪಿಕಾ ಅವರ ತಂದೆ ರೈತರಾಗಿದ್ದಾರೆ. ಇಬ್ಬರಿಗೂ ಜಿಲ್ಲೆಯಿಂದ ಅವಕಾಶ ಸಿಕ್ಕಿರುವುದರಿಂದ ಕುಟುಂಬದವರಲ್ಲಿ ಸಂತಸ ಮನೆ ಮಾಡಿದೆ. ಜ.19 ರಂದು ಇಬ್ಬರು ವಿದ್ಯಾರ್ಥಿಗಳು ದೆಹಲಿಗೆ ಹಾರಲಿದ್ದು, ಜ.20 ರಂದು ನಡೆಯುವ ಪ್ರಧಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ವಿದ್ಯಾರ್ಥಿ ಸಾಗರ್ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ವಿದ್ಯಾರ್ಥಿಗಳಿಗೆ ಮೊಬೈಲ್ ಬಳಸದಂತೆ ಕರೆ ನೀಡಬೇಕೆಂದು ಪ್ರಶ್ನೆ ಕೇಳಲು ಮುಂದಾಗಿದ್ದಾರೆ. ವಿದ್ಯಾರ್ಥಿನಿ ದೀಪಿಕಾ ಗ್ರಾಮೀಣ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿಕೊಳ್ಳಲು ತಯಾರಿಸಿ ನಡೆಸಿದ್ದಾರೆ.

    ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೆರವಾಗಿ ಪ್ರಧಾನಿ ನರೇಂದ್ರ ಮೋದಿರೊಂದಿಗೆ ಚರ್ಚೆ ನಡೆಸಲು ಅವಕಾಶ ನೀಡಲಾಗುತ್ತದೆ. ಆಯ್ಕೆಯಾದ ಮಕ್ಕಳಿಗೆ ಪ್ರಧಾನಿಗಳು ಕೆಲ ಸಲಹೆಗಳನ್ನು ನೀಡುತ್ತಾರೆ. 10ನೇ ತರಗತಿಯ ವಿದ್ಯಾರ್ಥಿಗಳಾಗಿರುವುದರಿಂಧ ಪರೀಕ್ಷಾ ಸಮಯದಲ್ಲಿ ಹೇಗೆಲ್ಲಾ ತಯಾರಿ ನಡೆಸಬೇಕು. ಯಾವ ರೀತಿ ಪರೀಕ್ಷೆಗೆ ಸಿದ್ಧರಾಗಬೇಕು ಎಂಬ ಸಲಹೆಗಳನ್ನು ನೀಡಲಾಗುತ್ತದೆ.

    ಪ್ರಧಾನಿ ಮೋದಿ ಅವರ ಸಂವಾದ ಕಾರ್ಯಕ್ಕೆ ಆಯ್ಕೆಯಾಗುತ್ತೇನೆ ಎಂದು ಸಾಗರ್ ನಿರೀಕ್ಷೆಯನ್ನೇ ಮಾಡಿರಲಿಲ್ಲ. ನಮ್ಮ ಶಾಲೆಯಲ್ಲಿ 10 ವಿದ್ಯಾರ್ಥಿಗಳ ಪಟ್ಟಿ ಮಾಡಿ ಕಳಿಸಿದ್ದರು. ಅದರಲ್ಲಿ ನಾನು ಆಯ್ಕೆ ಆಗಿರುವುದು ತುಂಬಾ ಸಂತೋಷ ತಂದಿದ್ದು, ಎಕ್ಸೈಟ್ ಮೆಂಟ್ ಹೆಚ್ಚಾಗಿದೆ ಎಂದು ಸಾಗರ್ ಹೇಳಿದ್ದಾರೆ. ನಾನು ಪ್ರಧಾನ ಮಂತ್ರಿಗಳ ಎದುರು ಮಕ್ಕಳು ಮೊಬೈಲ್ ಬಳಕೆ ಮಾಡುವುದು ಎಷ್ಟು ಸರಿ? ಮಕ್ಕಳ ಕೈಗೆ ಮೊಬೈಲ್ ನೀಡದಂತೆ ನೋಡಿಕೊಳ್ಳುವುದು ಹೇಗೆ? ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.

    ವಿದ್ಯಾರ್ಥಿನಿ ದೀಪಿಕಾ ಕೂಡ ಆಯ್ಕೆ ಕುರಿತು ಖುಷಿ ಹಂಚಿಕೊಂಡಿದ್ದು, ಪ್ರಧಾನಿ ಭೇಟಿಗೆ ಅವಕಾಶ ಸಿಕ್ಕಿರುವುದು ಪುಣ್ಯ ಎಂದು ದೀಪಾ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ‘ಬೇಟಿ ಪಡಾವೋ ಬೇಟಿ ಬಚಾವೋ’ ಕಾರ್ಯಕ್ರಮದಂತೆ ಹೆಣ್ಣು ಮಕ್ಕಳಿಗಾಗಿ ಮತ್ತಷ್ಟು ಕಾರ್ಯಕ್ರಮ ರೂಪಿಸುವಂತೆ ಪ್ರಧಾನಿಗಳ ಬಳಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

  • ಸುಮಲತಾ ವೇದಿಕೆಯತ್ತ ಬರುತ್ತಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಕೂಗು

    ಸುಮಲತಾ ವೇದಿಕೆಯತ್ತ ಬರುತ್ತಿದ್ದಂತೆ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಕೂಗು

    ಹುಬ್ಬಳ್ಳಿ/ಧಾರವಾಡ: ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ಅವರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಕೂಗಿದ್ದಾರೆ.

    ಹುಬ್ಬಳ್ಳಿಯ ಖಾಸಗಿ ಕಾಲೇಜ್‍ನಲ್ಲಿ ಅಮರ್ ಚಿತ್ರ ತಂಡದ ಸಂವಾದ ಕಾರ್ಯಕ್ರಮ ನಡೆಯುತ್ತಿದೆ. ಈ ಸಂವಾದ ಕಾರ್ಯಕ್ರಮಕ್ಕೆ ಸುಮಲತಾ ಅವರು ವೇದಿಕೆ ಮೇಲೆ ಆಗಮಿಸುತ್ತಾರೆ. ಈ ವೇಳೆ ಸುಮಲತಾ ಅವರು ವೇದಿಕೆಯ ಮೇಲೆ ಬರುತ್ತಿದ್ದಂತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೆಲ್ಲರೂ ‘ನಿಖಿಲ್ ಎಲ್ಲಿದ್ದೀಯಪ್ಪ, ‘ನಿಖಿಲ್ ಎಲ್ಲಿದ್ದೀಯಪ್ಪಾ’ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ. ಆಗ ಸುಮಲತಾ ಅವರು ವೇದಿಕೆಯ ಮೇಲೆಯೇ ನಕ್ಕಿದ್ದಾರೆ.

    ವಿಧ್ಯಾರ್ಥಿಗಳು ‘ನಿಖಿಲ್ ಎಲ್ಲಿದಿಯಪ್ಪಾ’ ಎಂದು ಕೂಗುತ್ತಿದ್ದಂತೆ ಅಭಿಷೇಕ್ ಅವರು, ಯಾರಾದ್ರು ಎಲ್ಲಾದರೂ ಹೋಗಲಿ ನಾವು ಇಲ್ಲಿದ್ದೀವಿ. ಅದನ್ನ ಬಿಟ್ಟು ಬಿಡಿ ಎಂದು ಹೇಳಿದ್ದಾರೆ. ಇಂದು ಅಭಿಷೇಕ್ ಅಭಿನಯದ ‘ಅಮರ್’ ಚಿತ್ರ ಪ್ರಚಾರಕ್ಕಾಗಿ ಚಿತ್ರತಂಡ ಅವಳಿ ನಗರಕ್ಕೆ ಆಗಮಿಸಿದೆ. ಸುಮಲತಾರಿಗೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮತ್ತು ಅಮರ್ ಚಿತ್ರ ನಿರ್ದೇಶಕ ನಾಗಶೇಖರ್ ಸಾಥ್ ನೀಡಿದ್ದಾರೆ.

    ಅಷ್ಟೇ ಅಲ್ಲದೇ ಇಂದು ಬೆಳಗ್ಗೆ ಧಾರವಾಡ ಹೊರವಲಯದ ನುಗ್ಗಿಕೇರೆ ಹನುಮಂತ ದೇವಸ್ಥಾನದಲ್ಲಿ ತುಪ್ಪ ಮತ್ತು ಹಾಲಿನ ತುಲಾಭಾರ ಮಾಡಿಸಿದ್ದಾರೆ. ಸುಮಲತಾ ಅವರಿಗೆ 75 ಕೆಜಿ ಸಕ್ಕರೆ, 15 ಕೆಜಿ ತುಪ್ಪದಿಂದ ತುಲಾಭಾರ ಮಾಡಿದ್ದು, ಅಭಿಷೇಕ್ ಅವರಿಗೆ 100 ಕೆಜಿ ಸಕ್ಕರೆ, 15 ಕೆಜಿ ತುಪ್ಪದಲ್ಲಿ ತುಲಾಭಾರ ಮಾಡಿಸಲಾಗಿದೆ. ಅಭಿಮಾನಿ ನಾರಾಯಣ್ ಕಲಾಲ್ ಅಪೇಕ್ಷೆ ಮೇರೆಗೆ ಈ ತುಲಾಭಾರ ನಡೆದಿದೆ.

  • ಜನ ನಮ್ಮನ್ನ ನಂಬಲ್ಲ ಎಂದು ರಾಜಕೀಯ ನಿವೃತ್ತಿ ಚಿಂತನೆ ನಡೆಸಿದ್ದೆ: ಸಿಎಂ ಎಚ್‍ಡಿಕೆ

    ಜನ ನಮ್ಮನ್ನ ನಂಬಲ್ಲ ಎಂದು ರಾಜಕೀಯ ನಿವೃತ್ತಿ ಚಿಂತನೆ ನಡೆಸಿದ್ದೆ: ಸಿಎಂ ಎಚ್‍ಡಿಕೆ

    ಬೆಂಗಳೂರು: ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಜನರ ವಿಶ್ವಾಸಗಳಿಸಲು ಹೆಚ್ಚು ಪ್ರಯತ್ನ ನಡೆಸಿದ್ದೆ. ಆದರೆ ರಾಜ್ಯದ ಜನ 37 ಸ್ಥಾನಗಳನ್ನು ನೀಡಿದ್ದರು. ಈ ಸಂಖ್ಯೆಯನ್ನು ನೋಡಿ ನಾನು ರಾಜಕೀಯ ನಿವೃತ್ತಿಗೆ ಚಿಂತನೆ ಮಾಡಿದ್ದೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಕರ್ನಾಟಕದ ಮುನ್ನಡೆಗಾಗಿ ಪರಿಣಿತರೊಂದಿಗೆ ಸಿಎಂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್‍ಡಿಕೆ, ನಾನು ಎಂದು ಭವಿಷ್ಯದ ಮೇಲೆ ನಂಬಿಕೆ ಇಟ್ಟು ಬಂದಿಲ್ಲ. ಆದರೆ ನಮ್ಮ ಕುಟುಂಬ ಜೋತಿಷ್ಯವನ್ನು ನಂಬುತ್ತಾರೆ. ಅದಕ್ಕೆ ಕಾರಣ ಸಣ್ಣ ಹಳ್ಳಿಯಿಂದ ಬಂದ ನಮ್ಮ ತಂದೆಯವರು. ಆದರೆ ನಾನು ದೇವರನ್ನು ನಂಬುತ್ತೇನೆ. 37, 78 ಈಗಲೂ ಕೂಡ ನನಗೆ ಕಾಕತಾಳಿಯವೇ. ಅಂದು ಬಿಜೆಪಿ ಜೊತೆಗಿನ ಆಡಳಿತ ಅವಧಿಯಲ್ಲೂ ಅಷ್ಟೇ ಇತ್ತು ಎಂದರು.

    ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ವೇಳೆ ಮಾಧ್ಯಮಗಳು ನನ್ನನ್ನು 20 ತಿಂಗಳ ಮುಖ್ಯಮಂತ್ರಿ ಎಂದಿದ್ದು, ಈಗಲೂ ಕೂಡ ದಿನನಿತ್ಯ ಗಡುವು ನೀಡುತ್ತಿದ್ದಾರೆ. ಅದನ್ನು ಎದುರಿಸಿ ನಾನು ಸರ್ಕಾರ ನಡೆಸುತ್ತಿದ್ದೇನೆ. ಚುನಾವಣೆಯಲ್ಲಿ ನಮ್ಮ ಪಕ್ಷ 37 ಸ್ಥಾನಗಳನ್ನು ಗಳಿಸದ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಚಿಂತನೆ ನಡೆಸಿದ್ದೆ ಎಂದರು.

    ನನ್ನ ಸಮಯವನ್ನ ಏಕೆ ವ್ಯರ್ಥ ಮಾಡಿಕೊಂಡು ಇರಬೇಕು ಎಂಬ ಅಲೋಚನೆ ಆಗ ಮೂಡಿತ್ತು. ಜನತೆ ನಮ್ಮನ್ನು ನಂಬಲು ತಯಾರಾಗಿಲ್ಲ ಎಂದು ತೀರ್ಮಾನ ಮಾಡುವ ಹಂತದಲ್ಲಿ ನನಗೆ ಕರೆ ಬಂತು. ಆ ಬಳಿಕ ನಡೆದಿದ್ದು ಎಲ್ಲರಿಗೂ ತಿಳಿದಿದೆ. 20-20 ರ ಅವಧಿಯಲ್ಲಿ ದಿನಗಳು ಕಡಿಮೆ ಆಗುತ್ತಿದೆ ಎಂಬ ಆತಂಕ ಇತ್ತು. ಇವತ್ತು ಗಡುವುಗಳ ಮಧ್ಯೆ ಆಡಳಿತ ನಡೆಸಬೇಕಿದೆ ಎಂದರು.

    ಎರಡು ಪಕ್ಷಗಳ ಮೈತ್ರಿ ಸರ್ಕಾರ ನಡೆಸುವುದು ಒಂದು ಸವಾಲಾಗಿದ್ದು, ಹನ್ನೆರಡು ವರ್ಷಗಳ ಹಿಂದೆ ಮೈತ್ರಿ ಸರ್ಕಾರ ರಚನೆ ಮಾಡಿದಾಗ ನನಗಿದ್ದದ್ದು ದೇವೇಗೌಡರ ಮಗ ಎಂಬ ಅರ್ಹತೆ ಮಾತ್ರ. ಯಾರೋ ಹುಡುಗ ಸರ್ಕಾರ ರಚನೆ ಮಾಡಿದ್ದಾನೆ ಎಂದು ಜನ ಅನುಮಾನದಿಂದಲೇ ನೋಡಿದರು. ಆದರೆ ಅಂದಿನ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ ಎಂದರು.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೃಷಿ, ಸಹಕಾರ, ಶಿಕ್ಷಣ, ಚಿತ್ರರಂಗ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಪರಿಸರ, ವನ್ಯಜೀವಿ, ಕನ್ನಡ ಸಂಸ್ಕೃತಿ ಮತ್ತು ಮಾಧ್ಯಮ ಕ್ಷೇತ್ರಗಳ ಪರಿಣಿತರೊಂದಿಗೆ ಸಿಎಂ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರಿಸಿದರು. ಅಲ್ಲದೇ ಸಮ್ಮಿಶ್ರ ಸರ್ಕಾರದ ಈ ಬಗ್ಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv