ಉಡುಪಿ: ನಾಳೆ ಉಪಚುನಾವಣೆಗಳ ಫಲಿತಾಂಶ ಪ್ರಕಟವಾಗಲಿದ್ದು, ಯಾವುದೇ ರೀತಿಯ ಸಂಭ್ರಮಾಚರಣೆಗೆ ಅವಕಾಶ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಉಪಚುನಾವಣೆ ಫಲಿತಾಂಶ ಸಂದರ್ಭ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುತ್ತೇವೆ. ಯಾವುದೇ ರೀತಿಯ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ಚುನಾವಣಾ ಆಯೋಗ ಈಗಾಗಲೇ ಸೂಚನೆ ನೀಡಿದೆ. ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗವಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಥಳೀಯ ವಿಚಾರದಲ್ಲಿ ಚುನಾವಣೆ ನಡೆದಿದೆ. ರಾಜ್ಯ, ದೇಶಮಟ್ಟದ ಚುನಾವಣೆ ನಡೆದಿಲ್ಲ. ಈ ಫಲಿತಾಂಶ ಸರ್ಕಾರದ ಮೇಲಿನ ಜನಾದೇಶ ಅಲ್ಲ ಎಂದು ತಿಳಿಸಿದರು.
ಮುಂಬೈ: ಐಪಿಎಲ್‍ನಲ್ಲಿ ಬೌಂಡರಿ, ಸಿಕ್ಸರ್ ಗಳ ಹಬ್ಬ ಒಂದು ಕಡೆ ಅಭಿಮಾನಿಗಳಿಗೆ ಕಿಕ್ ಕೊಟ್ಟರೆ ಇನ್ನೊಂದೆಡೆ ಕ್ರಿಕೆಟಿಗರು ಕ್ಯಾಚ್ ಹಿಡಿದಾಗ ಮಾಡುವ ಸಂಭ್ರಮಾಚರಣೆ ಇನ್ನಷ್ಟು ಮನರಂಜನೆ ನೀಡುತ್ತದೆ. ಇದೀಗ ಐಪಿಎಲ್‍ನಲ್ಲಿ ಆಡುತ್ತಿರುವ ರಾಜಸ್ಥಾನ ತಂಡದ ಯುವ ಆಟಗಾರ ಆಲ್‍ರೌಂಡರ್ ರಿಯಾನ್ ಪರಾಗ್ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿದು ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡುವ ಮೂಲಕ ನೋಡುಗರಿಗೆ ಐಪಿಎಲ್‍ನ ಕಿಕ್ ಹೆಚ್ಚಿಸಿದ್ದಾರೆ.
14ನೇ ಆವೃತ್ತಿಯ 18ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪರಸ್ಪರ ಎದುರುಬದುರಾಗಿದ್ದವು. ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಅವರ ಅದ್ಭುತ ಕ್ಯಾಚ್ ಒಂದನ್ನು ಹಿಡಿದ ರಿಯಾನ್ ಪರಾಗ್ ಸಹ ಆಟಗಾರ ರಾಹುಲ್ ತೆವಾಟಿಯರೊಂದಿಗೆ ವಿಶಿಷ್ಟ ಸಂಭ್ರಮಾಚರಣೆ ಮಾಡುವ ಮೂಲಕ ಎಲ್ಲರ ಮುಖದಲ್ಲೂ ಮಂದಹಾಸ ತರಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತ್ತಾ ತಂಡ ವಿಕೆಟ್ ಕಳೆದುಕೊಂಡು ಸಾಗಿತ್ತು. ಆದರೂ ಕೂಡ ಬಿಗ್ ಹಿಟ್ಟರ್ ಪ್ಯಾಟ್ ಕಮಿನ್ಸ್ ಕಡೆಯಲ್ಲಿ ಸಿಡಿಯಬಹುದೆಂದು ಎಲ್ಲರು ಅಂದುಕೊಂಡಿದ್ದರು. ಆದರೆ ಕಡೆಯ ಓವರ್ ಎಸೆಯಲು ಬಂದ ಕ್ರಿಸ್ ಮೋರಿಸ್ ಅವರ ಎರಡನೇ ಎಸೆತದಲ್ಲಿ ಕೊಲ್ಕತ್ತಾ ತಂಡದ ಬ್ಯಾಟ್ಸ್ ಮ್ಯಾನ್ ಪ್ಯಾಟ್ ಕಮಿನ್ಸ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಅದರೆ ಬೌಂಡರಿ ಲೈನ್ ಬಳಿ ರಿಯಾನ್ ಪರಾಗ್ ಹಿಡಿದ ಅದ್ಭುತ ಕ್ಯಾಚ್‍ಗೆ ಕಮಿನ್ಸ್ ಔಟ್ ಅದರು. ಈ ಕ್ಯಾಚ್ ಹಿಡಿದ ಬಳಿಕ ಮೈದಾನದಲ್ಲಿ ಪರಾಗ್ ಸಹಆಟಗಾರ ತೆವಾಟಿಯರೊಂದಿಗೆ ಮೊಬೈಲ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಂತೆ ಬೌಂಡರಿ ಲೈನ್ ಬರಿ ಪೋಸ್ ನೀಡಿದರು. ಇದೀಗ ಈ ವೀಡಿಯೋ ವೈರಲ್ ಅಗತೊಡಗಿದೆ. ಅಭಿಮಾನಿಗಳು ಕೂಡ ಈ ಸಂಭ್ರಮಾಚರಣೆ ಕಂಡು ಫಿದಾ ಆಗಿದ್ದಾರೆ.
ಪರಾಗ್ ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಆ ಬಳಿಕ ಅಸ್ಸಾಂ ಮೂಲದ ಬಿಹು ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದರು.
ಐಪಿಎಲ್‍ನಲ್ಲಿ ಕ್ರಿಕೆಟ್ ರಸದೌತಣದೊಂದಿಗೆ ಕ್ರಿಕೆಟಿಗರ ಸಂಭ್ರಮಾಚರಣೆ ಕೂಡ ಇದೀಗ ಬಾರಿ ಸುದ್ದಿ ಮಾಡುತ್ತಿದೆ. ಕಳೆದ ಸೀಸನ್‍ಗಳಲ್ಲಿ ಹಲವು ಆಟಗಾರರು ವಿವಿಧ ಬಗೆಯ ಸಂಭ್ರಮಾಚರಣೆ ಮಾಡುವ ಮೂಲಕ ಐಪಿಎಲ್‍ನ ಕಳೆ ಹೆಚ್ಚಿಸಿದ್ದರು.
ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸುವ ಮೂಲಕ ಮಿಂಚಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಶತಕ ಸಿಡಿಸಿದ ಕೂಡಲೇ ಕೈಗಳಿಂದ ಕಿವಿ ಮುಚ್ಚಿಕೊಂಡು ವಿಶಿಷ್ಟವಾಗಿ ಸಂಭ್ರಮಾಚರಣೆ ಮಾಡಿದ್ದರು. ಇದೀಗ ಸ್ವತಃ ರಾಹುಲ್ ಅವರೇ ಈ ಸಂಭ್ರಮಾಚರಣೆಯ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದ ರಾಹುಲ್ ಏಕದಿನ ಸರಣಿಯಲ್ಲಿ ಮತ್ತೆ ಫಾರ್ಮ್‍ಗೆ ಮರಳಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 62 ರನ್(43 ಬಾಲ್) ಸಿಡಿಸಿ ಮಿಂಚಿದ್ದ ರಾಹುಲ್ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ತನ್ನ ಬ್ಯಾಟಿಂಗ್ ಬಗ್ಗೆ ಕಿಡಿಕಾರಿದವರಿಗೆ ಬ್ಯಾಟ್‍ನಿಂದಲೇ ಉತ್ತರ ನೀಡಿದ್ದಾರೆ.
ಒಂದು ಹಂತದಲ್ಲಿ ಭಾರತ ತಂಡ 37 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಾಹುಲ್ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಜೊತೆಗೂಡಿ ಉತ್ತಮ ಜೊತೆಯಾಟವಾಡುವ ಮೂಲಕ ಭಾರತದ ಸ್ಕೋರ್ 300ರ ಗಡಿ ದಾಟುವಂತೆ ಮಾಡಿದ್ದರು. ರಾಹುಲ್ ಈ ಪಂದ್ಯದಲ್ಲಿ 108 ರನ್ (114 ಬಾಲ್, 7 ಬೌಂಡರಿ, 2 ಸಿಕ್ಸರ್) ಸಿಡಿಸಿ ತನ್ನ ಐದನೇ ಏಕದಿನ ಶತಕವನ್ನು ವಿಶೇಷವಾಗಿ ಸಂಭ್ರಮಿಸಿದರು.
1⃣0⃣8⃣ runs 1⃣1⃣4⃣ balls 7⃣ fours 2⃣ sixes
@klrahul11 was on a roll with the bat in the 2nd @Paytm#INDvENG ODI & scored a superb ton 👏👏 #TeamIndia
ರಾಹುಲ್ ಶತಕ ಸಿಡಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್‍ನತ್ತ ಬ್ಯಾಟ್ ತೋರಿಸಿ ನಂತರ ಎರಡು ಕಣ್ಣುಗಳನ್ನು ಮುಚ್ಚಿ, ಕೈಗಳಿಂದ ಕಿವಿಗಳನ್ನು ಮುಚ್ಚಿ ಸುಮ್ಮನೆ ನಿಂತು ಸಂಭ್ರಮಾಚರಣೆ ಮಾಡಿದ್ದರು. ಈ ಕುರಿತು ಪಂದ್ಯದ ಬಳಿಕ ಉತ್ತರಿಸಿದ ರಾಹುಲ್, ನನ್ನ ಸಂಭ್ರಮಾಚರಣೆ ಯಾರಿಗೂ ಅಗೌರವ ತೋರುವ ಉದ್ದೇಶ ಹೊಂದಿಲ್ಲ. ನನ್ನ ಬಗ್ಗೆ ಮಾತನಾಡುವವರ ಬಗ್ಗೆ ನಾನು ಕಿವಿಕೊಡಲಾರೆ, ಯಾರು ನನ್ನನ್ನು ಕುಗ್ಗಿಸಲು ನೋಡುತ್ತಾರೋ ಅವರಿಗೆ ಉತ್ತರವಾಗಿ ಈರೀತಿ ಮಾಡಿದೆ ಎಂದರು.
ಟಿ20 ಪಂದ್ಯಗಳಲ್ಲಿ ನಾನು ನೀಡಿದ ಪ್ರದರ್ಶನ ನನಗೆ ಬೇಸರ ತಂದಿತ್ತು. ನಾನು ಕೆಟ್ಟ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಿದ್ದೆ, ಆದರೆ ಇದನ್ನು ಸರಿಪಡಿಸಿಕೊಂಡು ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದ್ದೇನೆ ಎಂದರು. ರಾಹುಲ್ ಈ ಹಿಂದೆಯೂ ಶತಕ ಸಿಡಿಸಿದ ವೇಳೆ ಇದೆ ರೀತಿ ಸಂಭ್ರಮಾಚರಣೆ ಮಾಡಿದ್ದರು.
ಟಿ20 ಸರಣಿಯ ವೈಫಲ್ಯದಿಂದ ಹೊರಬಂದಿರುವ ರಾಹುಲ್ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದು, ಇದೇ ಲಯದಲ್ಲಿ ಮುಂದುವರಿದರೆ ಮುಂದಿನ ಐಪಿಎಲ್‍ನಲ್ಲಿ ರಾಹುಲ್ ಬ್ಯಾಟ್‍ನಿಂದ ರನ್‍ಮಳೆ ಸುರಿಯುವುದರಲ್ಲಿ ಅನುಮಾನವಿಲ್ಲ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಉಡುಪಿ: ಮೊದಲ ಹಂತದ ರಫೇಲ್ ಯುದ್ಧವಿಮಾನಗಳು ಭಾರತದಲ್ಲಿ ಲ್ಯಾಂಡ್ ಆಗಿದ್ದು, ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಈ ಸಂಭ್ರಮವನ್ನು ಹಲವರು ಹಲವು ರೀತಿಯಲ್ಲಿ ಆಚರಿಸುತ್ತಿದ್ದು, ಉಡುಪಿಯಲ್ಲಿ ಸಹ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಬುಧವಾರ 5 ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್‍ನಿಂದ ಆಗಮಿಸಿದ್ದು, ಅಂಬಾಲ ವಾಯು ನೆಲೆಯಲ್ಲಿ ಲ್ಯಾಂಡ್ ಆಗಿವೆ. ಭರ್ಜರಿಯಾಗಿ ಸ್ವಾಗತಿಸುವ ಮೂಲಕ ರಫೇಲ್ ಯುದ್ಧ ವಿಮಾನಗಳನ್ನು ಬರಮಾಡಿಕೊಳ್ಳಲಾಗಿದೆ. ಇಡೀ ದೇಶದಲ್ಲಿ ಇದೀಗ ಸಂಭ್ರಮ ಮನೆ ಮಾಡಿದ್ದು, ಅದೇ ರೀತಿ ಉಡುಪಿಯಲ್ಲಿ ಸಹ ಸಂಭ್ರಮಾಚರಣೆ ಮಾಡಲಾಗಿದೆ. ಜಿಲ್ಲಾ ನಾಗರೀಕ ಸಮಿತಿ ಬೃಹತ್ ಧ್ವಜ ಪ್ರದರ್ಶನ ಮಾಡಿ, ಬಿಸಿ ಜಿಲೇಬಿ ತಯಾರಿಸಿ ಸಾರ್ವಜನಿಕರಿಗೆ ಹಂಚಿ ಸಂಭ್ರಮಿಸಿದೆ.
ಇದರಿಂದಾಗಿ ಉಡುಪಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯದಲ್ಲೇ ಅತಿ ದೊಡ್ಡ 20/14 ಅಡಿ ಗಾತ್ರದ ರಾಷ್ಟ್ರಧ್ವಜವನ್ನು ಪ್ರದರ್ಶನ ಮಾಡಿ, ರಫೇಲ್ ಯುದ್ಧ ವಿಮಾನಕ್ಕೆ ಸ್ವಾಗತ ಕೋರಲಾಯಿತು. ನಂತರ ಸ್ಥಳದಲ್ಲೇ ಬಿಸಿ ಜಿಲೇಬಿ ತಯಾರಿಸಿ ಸಾರ್ವಜನಿಕರಿಗೆ ಹಂಚಲಾಯಿತು. ರಫೇಲ್ ಚಿತ್ರ ಹಾಗೂ ಮಾಹಿತಿ ಹೊಂದಿರುವ ಬ್ಯಾನರ್ ಹಿಡಿದು ಸಂಭ್ರಮಾಚರಣೆ ಮಾಡಲಾಯಿತು.
ರಫೇಲ್ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ. ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆ.ಜಿ.ತೂಕದ ಈ ವಿಮಾನ 9,500 ಕೆ.ಜಿ. ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮಥ್ರ್ಯ ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.
ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1,800 ಕಿ.ಮೀ ವ್ಯಾಪ್ತಿಯಲ್ಲಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮಥ್ರ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ. ಇದನ್ನೂ ಓದಿ: ಕನಸು ನನಸು.. ಗೇಮ್ ಚೇಂಜರ್ ರಫೇಲ್ ಭಾರತದಲ್ಲಿ ಲ್ಯಾಂಡ್
ಭಾರತ ಫ್ರಾನ್ಸ್‍ನ ಡಸಾಲ್ಟ್ ಸಂಸ್ಥೆ ಜೊತೆ ಒಟ್ಟು 36 ರಫೇಲ್ ಯುದ್ಧ ವಿಮಾನಗಳ ಖರೀದಿಸುವ ಸಂಬಂಧ ಒಪ್ಪಂದ ನಡೆದಿತ್ತು. ಇದೀಗ ಈ ಪೈಕಿ ಮೊದಲ ಬ್ಯಾಚ್‍ನ ಐದು ವಿಮಾನಗಳು ಸೋಮವಾರ ಫ್ರಾನ್ಸ್‍ನಿಂದ ಟೇಕಾಫ್ ಆಗಿ ಮಂಗಳವಾರ ಯುಎಇಯಲ್ಲಿರುವ ದಫ್ರಾ ವಾಯುನೆಲೆಯಲ್ಲಿ ಲ್ಯಾಂಡ್ ಆಗಿತ್ತು. ಅಲ್ಲಿಂದ ಹೊರಟ ವಿಮಾನ ಈಗ ಭಾರತದಲ್ಲಿ ಲ್ಯಾಂಡ್ ಆಗಿದೆ.
2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ವಿಮಾನಗಳನ್ನು(28 ಸಿಂಗಲ್ ಸೀಟರ್, 8 ಡಬಲ್ ಸೀಟರ್) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‍ನ ಡಸಾಲ್ಟ್ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‍ಲೈನ್ ವಿಧಿಸಲಾಗಿತ್ತು. ಈ ಡೆಡ್‍ಲೈನ್‍ಗೆ ಅನುಗುಣವಾಗಿ ಮೊದಲ ಬ್ಯಾಚ್‍ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‍ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.
ಬಾಗಲಕೋಟೆ: ಕೊರೊನಾ ಸೋಂಕಿನಿಂದ ಬಿಡುಗಡೆಯಾದ ಬಳಿಕ ಜವಾಬ್ದಾರಿ ಮರೆತ ಸ್ಥಳೀಯ ಪತ್ರಿಕೆ ಪತ್ರಕರ್ತ ಹಾಗೂ ಪೊಲೀಸ್ ಸಿಬ್ಬಂದಿ ಹುಚ್ಚಾಟ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ರಾಮಪೂರದಲ್ಲಿ ನಡೆದಿದೆ.
ಇಬ್ಬರೂ ಕೊರೊನಾ ಸೋಂಕಿನಿಂದ ಬಿಡುಗಡೆ ಆಗಿದ್ದಕ್ಕೆ ಊರಲ್ಲಿ ಅಭಿಮಾನಿಗಳಿಂದ ಸಂಭ್ರಮ ಎಂಬ ಹುಚ್ಚಾಟ ನಡೆದಿದೆ. ಕೋವಿಡ್‍ನಿಂದ ಗುಣಮುಖ ಆಗಿ ಬಂದಿದ್ದಕ್ಕೆ ಇಬ್ಬರಿಗೆ ಅದ್ಧೂರಿ ಸ್ವಾಗತ ಕೋರಿದ್ದಲ್ಲದೇ ಗುಂಪು ಗುಂಪು ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ. ಜೊತೆಗೆ ಗಲ್ಲಿಯಲ್ಲಿ ಪಟಾಕಿ ಸಿಡಿಸಿ, ಹೂವಿನ ಮಳೆಗರೆದು ಸಾಮಾಜಿಕ ಅಂತರಕ್ಕೆ ತಿಲಾಂಜಲಿ ಹಾಡಿದ್ದಾರೆ.
ಇದಲ್ಲದೇ ಗುಣಮುಖರಾದವರಿಗೆ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿದ್ದಾರೆ. ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಬಳಿಕ ಗುಣಮುಖರಾದವರು ಹೋಂ ಕ್ವಾರಂಟೈನ್ ಆಗಬೇಕು. ಅಲ್ಲದೇ ಸೋಂಕು ಪತ್ತೆಯಾದ ಐದನೇ ದಿನಕ್ಕೆ ಇವರಿಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೆಲ್ಲ ತಿಳಿದೂ ಬೆಂಬಲಿಗರು ಪಟಾಕಿ ಸಿಡಿಸಿ, ಅಪ್ಪಿಕೊಂಡು, ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ತುದಿಗಾಲಲ್ಲಿ ನಿಂತಿರುವ ಸಿಲಿಕಾನ್ ಸಿಟಿ ಮಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುಡ್ ನ್ಯೂಸ್ ನೀಡಿದ್ದಾರೆ.
ಪಾರ್ಟಿ ಪ್ರಿಯರಿಗೆ ಪೊಲೀಸ್ ಆಯುಕ್ತರು ಗುಡ್ ನ್ಯೂಸ್ ನೀಡಿದ್ದು, ಹೊಸ ವರ್ಷದ ದಿನ ಮಧ್ಯರಾತ್ರಿ ಎರಡು ಗಂಟೆಯವರೆಗೆ ನೈಟ್ ಲೈಫ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ದಿನದಂದು ಬಾರ್, ಪಬ್ ರೆಸ್ಟೊರೆಂಟ್, ಹೋಟೆಲುಗಳ ವ್ಯಾಪಾರದ ಸಮಯವನ್ನು ಮಧ್ಯರಾತ್ರಿ ಎರಡು ಗಂಟೆಯವರೆಗೆ ವಿಸ್ತರಿಸಿದ್ದಾರೆ.
ಪ್ರತಿ ದಿನ ರಾತ್ರಿ ಒಂದು ಗಂಟೆಗೆ ಮುಚ್ಚುತ್ತಿದ್ದ ನೈಟ್ ಲೈಫ್ ಅವಧಿ, 31ರ ರಾತ್ರಿ ಒಂದು ಗಂಟೆ ವಿಸ್ತರಣೆಯಾಗಿದ್ದು, ರಾತ್ರಿ 2 ಗಂಟೆಯವರೆಗೆ ಎಂಜಾಯ್ ಮಾಡಬಹುದಾಗಿದೆ. ಪಾರ್ಟಿ ಪ್ರಿಯರು ಯಾವುದೇ ಭಯ ಆತಂಕವಿಲ್ಲದೆ, ಎರಡು ಗಂಟೆಯವರೆಗೆ ಪಾರ್ಟಿ ನಡೆಸಬಹುದಾಗಿದೆ.
ಮೆಟ್ರೋ ಅವಧಿ ವಿಸ್ತರಣೆ
ಹೊಸ ವರ್ಷ ಆಚರಣೆ ಹಿನ್ನೆಲೆ ಡಿ.31ರಂದು ಮಧ್ಯರಾತ್ರಿ 2ಗಂಟೆಯವರೆಗೂ ಮೆಟ್ರೋ ಸೇವೆ ವಿಸ್ತರಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಪಾರ್ಟಿ ಮುಗಿಸಿ ಮೆಟ್ರೋದಲ್ಲಿ ಮನೆಗೆ ತೆರಳಬಹುದಾಗಿದೆ.
ಡಿಸೆಂಬರ್ 31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸಂಚರಿಸಲಿದೆ. ಇದರ ಜೊತೆಗೆ ಬಂಪರ್ ಕೊಡುಗೆಯನ್ನು ಸಹ ನೀಡಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸಿದರೆ ಯಾವುದೇ ನಿಲ್ದಾಣದಲ್ಲಿ ಹತ್ತಿ ಯಾವುದೇ ನಿಲ್ದಾಣದಲ್ಲಿ ಇಳಿಯಬಹುದಾಗಿದೆ. ಇದರ ಜೊತೆಗೆ ಷರತ್ತನ್ನು ಸಹ ವಿಧಿಸಿದ್ದು, ಕುಡಿದು ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿದೆ. ಕುಡಿದು ಅಸಭ್ಯವಾಗಿ ವರ್ತಿಸಿದರೆ ಮೆಟ್ರೋದಿಂದ ಕಿಕ್ ಔಟ್ ಮಾಡುವುದಾಗಿ ಬಿಎಂಆರ್‍ಸಿಎಲ್ ತಿಳಿಸಿದೆ.
ತುಮಕೂರು: ಹೈದರಾಬಾದ್ ದಿಶಾ ಪ್ರಕರಣ ಅತ್ಯಾಚಾರಿಗಳನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ಎನ್‍ಕೌಂಟರ್ ಮಾಡಿರುವ ಹಿನ್ನೆಲೆ ಸಂಭ್ರಮಾಚರಣೆ ವೇಳೆ ಕಳ್ಳಾಟವಾಡಿದ ಕಾಮುಕನಿಗೆ ಸಖತ್ ಗೂಸ ಬಿದ್ದಿದೆ.
ಇಡೀ ದೇಶವೇ ಹೈದರಾಬಾದ್ ಪೊಲೀಸರ ಕಾರ್ಯವನ್ನು ಶ್ಲಾಘಿಸಿದೆ. ಅತ್ಯಚಾರಿಗಳನ್ನು ಎನ್‍ಕೌಂಟರ್ ಮಾಡಿದ ಖುಷಿಯಲ್ಲಿ ತುಮಕೂರಿನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದ್ದಾರೆ. ತಿಪಟೂರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಬಳಿ ವಿದ್ಯಾರ್ಥಿನಿಯರು, ಸಾರ್ವಜನಿಕರು ಸಿಹಿ ಹಂಚಿ ಸಂತೋಷಪಟ್ಟಿದ್ದಾರೆ. ಈ ನಡುವೆ ಹುಡಿಗಿಯರನ್ನ ಚುಡಾಯಿಸಿದ ವ್ಯಕ್ತಿಗೆ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಾಮುಕರಿಗೆ ಪೊಲೀಸರು ಎನ್‍ಕೌಂಟರ್ ಮಾಡಿ ತಕ್ಕಶಾಸ್ತಿ ಮಾಡಿದ್ದಾರೆ ಎಂದು ಜನರು ಖುಷಿಪಟ್ಟು ಸಂಭ್ರಮಿಸುತ್ತಿದ್ದಾಗಲೇ ಈ ಘಟನೆ ನಡೆದಿರುವುದು ವಿರ್ಪಯಾಸ ಎಂದು ಸಾರ್ವಜನಿಕರು ಬೇಸರ ವ್ಯಕಪಡಿಸಿದ್ದಾರೆ.
ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಪೊಲೀಸರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಪೊಲೀಸರು ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ.
ರಾಯಚೂರು: ಪುಲ್ವಾಮಾದಲ್ಲಿ ನಡೆದ ಸೈನಿಕರ ಹತ್ಯೆಯನ್ನ ಸಂಭ್ರಮಿಸಿ ಕೇಕೆ ಹಾಕಿದ ಘಟನೆ ರಾಯಚೂರಿನ ಮಸ್ಕಿ ತಾಲೂಕಿನ ತಲೆಖಾನ್ ಗ್ರಾಮದಲ್ಲಿ ನಡೆದಿದೆ.
ಕೆಲ ಕಿಡಿಗೇಡಿ ಮುಸ್ಲಿಂ ಯುವಕರು ತಡರಾತ್ರಿ ಪರಸ್ಪರ ಹಸಿರು ಬಣ್ಣ ಎರಚಾಡಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಚಾರ ಗ್ರಾಮಸ್ಥರಿಗೆ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆ ಖಂಡಿಸಿರುವ ಗ್ರಾಮಸ್ಥರು ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಮಸ್ಕಿಯಲ್ಲಿ ವಿವಿಧ ಸಂಘಟನೆಗಳಿಂದ ಬೈಕ್ ರ‍್ಯಾಲಿ ನಡೆಸಿದ್ದಾರೆ. ಅಲ್ಲದೇ ಯೋಧರ ಸಾವನ್ನು ಸಂಭ್ರಮಿಸಿದ ಯುವಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿರುವ ಗ್ರಾಮಸ್ಥರ ಬಳಿ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದು, 15ಕ್ಕೂ ಹೆಚ್ಚು ಕಿಡಿಗೇಡಿಗಳು ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಯುವಕರು ಸಂಭ್ರಮಾಚರಣೆ ನಡೆಸಿರುವ ಗುರುತಾಗಿ ಸ್ಥಳದಲ್ಲಿ ಹಸಿರು ಬಣ್ಣ ಮತ್ತು ಪಟಾಕಿ ಬಾಕ್ಸ್ ಕೂಡ ಪತ್ತೆಯಾಗಿದೆ. ವಿಜಯೋತ್ಸವ ಆಚರಣೆ ಮಾಡಿ ಸಮಾಜದಲ್ಲಿ ಕೋಮುಗಲಭೆ ಉಂಟಾಗುವಂತೆ ಮಾಡುವ ಕಾರ್ಯ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನವದೆಹಲಿ: ಸಂಭ್ರಮಾಚರಣೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ಮಗನಿಗೆ ಗುಂಡು ಹಾರಿಸಿದ್ದು, ಪರಿಣಾಮ ಮಗ ಸಾವನ್ನಪ್ಪಿರುವ ಘಟನೆ ದೆಹಲಿಯ ಹೊಸ ಉಸ್ಮಾನ್ ಪುರದಲ್ಲಿ ನಡೆದಿದೆ.
ರೆಹನ್(8) ಮೃತ ದುರ್ದೈವಿ. ಆರೋಪಿ ತಂದೆಯನ್ನು ಯಾಸಿನ್ (42) ಎಂದು ಗುರುತಿಸಲಾಗಿದೆ. ಈ ಘಟನೆ 2018ರ ಡಿಸೆಂಬರ್ 31ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಯಾಸಿನ್ ಹೊಸ ವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್ 31ರಂದು ರಾತ್ರಿ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೆ ಅದು ಗಾಳಿಯಲ್ಲಿ ಆಕಸ್ಮಿಕವಾಗಿ ಆತನ ಮಗ ರೆಹನ್ ಬಲ ಕೆನ್ನೆಗೆ ಬಿದ್ದಿದ್ದೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಷ್ಟರಲ್ಲಿಯೇ ರೆಹನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಹೊಸ ಉಸ್ಮಾನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪೋಲೀಸರು ಬಾಲಕನ ತಂದೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ತಿಳಿದು ಬಂದಿದೆ ಎಂದು ಉಪ ಜಿಲ್ಲಾಧಿಕಾರಿ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.
ಆರೋಪಿ ತಂದೆ, ತಾನು ಉತ್ತರ ಪ್ರದೇಶದ ಲೋನಿ ನಿವಾಸಿಯಾದ ರವಿ ಕಶ್ಯಪ್ (21) ಎಂಬಾತನಿಂದ ಗನ್ ತೆಗೆದುಕೊಂಡು ಬಂದಿದ್ದು ಎಂದು ಹೇಳಿದ್ದಾನೆ. ಆತ ಸಂಭ್ರಮಾಚರಣೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆದರೆ ಆಕಸ್ಮಿಕವಾಗಿ ಬುಲೆಟ್ ಅಲ್ಲೆ ಇದ್ದ ಮಗನಿಗೆ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ತಂದೆಯನ್ನು ಬಂಧಿಸಿದ್ದು ಜೊತೆಗೆ ಗನ್ ನೀಡಿದ್ದ ಕಶ್ಯಪ್ ನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಪೊಲೀಸರಿಗೆ ಕುಡುಕರು ಆವಾಜ್ ಹಾಕಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಇಂದಿರಾನಗರ 100 ಫೀಟ್ ಸುತ್ತಾಮುತ್ತ ಯುವಕರು ಕುಡಿದು ಹೊಸವರ್ಷ ಆಚರಣೆ ಮಾಡಿದ್ದಾರೆ. ಕುಡಿದು ರಸ್ತೆಯಲ್ಲಿ ತೂರಾಡೊದನ್ನ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರಿಗೆ ಫುಲ್ ಅವಾಜ್ ಹಾಕಿದ್ದಾರೆ.
ಸಂಭ್ರಮಾಚರಣೆಯ ವೇಳೆ ಕೆಲ ಯುವಕರು ಸಾಕಷ್ಟು ಪಾನಮತ್ತರಾಗಿದ್ದರು. ಪಾನಮತ್ತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮುನ್ನ ಅವರಲ್ಲಿ ಮನವಿ ಮಾಡಿಕೊಳ್ಳಿ ಅಂತ ಕಮಿಷನರ್ ಪೊಲೀಸ್ ಇಲಾಖೆಗೆ ಸೂಚನೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪಾನಮತ್ತರನ್ನು ಮನವೊಲಿಸಿ ಮನೆಗೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದರು.
ಪೊಲೀಸರು ಕೇರಳ ಮೂಲದ ಯುವಕನ ಬಳಿಯೂ ಮನೆಗೆ ಹೋಗುವಂತೆ ಕೇಳಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಯುವಕ ಇಂದಿರಾ ನಗರ ಪೊಲೀಸ್ ಇನ್ಸ್ ಪೆಕ್ಟರ್ ರವಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆದ್ರೆ ಪೊಲೀಸರು ಯುವಕನ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆತ ಕುಡಿದ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಆತನನ್ನು ಮನೆಗೆ ಕಳುಹಿಸಿದ್ದಾರೆ ಅನ್ನೋ ಮಾಹಿತಿ ದೊರೆತಿದೆ.
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕಳ್ಳರು ಕೂಡ ತಮ್ಮ ಕೈಚಳ ತೋರಿಸಿದ್ದಾರೆ 50ಕ್ಕೂ ಹೆಚ್ಚು ಮೊಬೈಲ್ ಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಎಂಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ನಲ್ಲಿ ಸಾವಿರಾರು ಮಂದಿ ಸೇರಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆಚರಣೆಯ ಮಧ್ಯೆ ಕೆಲ ಪುಂಡರು ತಮ್ಮ ಕೈಚಳಕ ತೋರಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅಶೋಕನಗರ ಪೊಲೀಸ್ ಠಾಣೆಯ ಎದುರು ಮೊಬೈಲ್ ಕಳೆದುಕೊಂಡ ಜನ ಕೇಸ್ ದಾಖಲಿಸಿಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತ್ತು.