Tag: ಸಂಬಳ

  • ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ..!

    ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ..!

    ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಕಂಟ್ರೋಲ್ ರೂಂ ಮೇಲ್ವಿಚಾರಕನ ದರ್ಬಾರ್ ಶುರುವಾಗಿದ್ದು, ಇವರಿಗೆ ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.

    ಬೆಂಗಳೂರು ಮಹಾನಗರ ಪಾಲಿಕೆಯ ಕ್ಲಾಸ್ 4 ನೌಕರ ಸುಬ್ರಮಣ್ಯ ಅಂಧ ದರ್ಬಾರ್ ಮಾಡುತ್ತಿದ್ದು, ಇವರು ಬಿಬಿಎಂಪಿಯ ಕೊಠಡಿಯ ಕಂಟ್ರೋಲ್ ರೂಮಿನ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ. ಮರ ಕಡಿಯುವರು, ಪಾಲಿಕೆ ಕೆಳ ವರ್ಗದ ನೌಕರರನ್ನು ಈಗ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೇಲ್ವಿಚಾರಕ ಗಾಳಿ ಬೀಸಿಕೊಳ್ಳುತ್ತಿರೋ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಳೆದ 3- 4 ವರ್ಷಗಳಿಂದ ಕಂಟ್ರೋಲ್ ರೂಂ ಜೊತೆ ಎಲ್ಲ ಕಂಟ್ರೋಲ್ ಇರುವ ನೌಕರನಾಗಿದ್ದು, ಮಾತು ಶುರು ಮಾಡಿದರೆ ಸಾಕು ಕಮೀಷನರ್, ಮಿನಿಸ್ಟರ್ ಹೆಸರು ಹೇಳುತ್ತಾರೆ. ಇವರ ಅಡಿಯಲ್ಲಿ ಬರುವ ಕೆಳ ವರ್ಗದ ನೌಕರರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಲ್ವಿಚಾರಕ ಚೇರ್ ಮೇಲೆ ಕುಳಿತುಕೊಂಡು ಮೊಬೈಲ್ ಬಳಸುತ್ತಿದ್ದಾರೆ. ಆದರೆ ಅವರ ಪಕ್ಕದ ಎರಡನೇ ಚೇರ್ ಮೇಲೆ ಕೆಳ ನೌಕರ ಕುಳಿತುಕೊಂಡು ಅವರಿಗೆ ಗಾಳಿ ಬೀಸುತ್ತಿದ್ದಾರೆ. ಸರ್ಕಾರಿ ಸಂಬಳ ಕೊಡುವುದು ಕಚೇರಿಯ ಕೆಲಸವನ್ನು ಮಾಡುವುದಕ್ಕೆ, ಆದರೆ ಮೇಲ್ವಿಚಾರಕ ತನಗೆ ಗಾಳಿ ಬೀಸಿಕೊಳ್ಳುವ ಮೂಲಕ ಗಾಳಿ ಬೀಸುವುದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಮೇಲ್ವಿಚಾರಕನು ಪಾಲಿಕೆ ವರ್ಗಾವಣೆ, ನೇಮಕಾತಿ, ವ್ಯಜ್ಯಗಳನ್ನ ಬರೀ ಅವಾಜ್ ಹಾಕುತ್ತಲೇ ಬಗೆಹರಿಸುವ ಮಾಸ್ಟರ್ ಎಂಬ ಮಾತು ಕೂಡ ಇದೆ. ಆದರೆ ಇವರು ಕೆಳವರ್ಗದ ಜನರಿಂದ ಗಾಳಿ ಬೀಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆರಿಗೆ ರಜೆಯ ಸಂಬಳದಲ್ಲಿ ಸಿಗಲಿದೆ ತೆರಿಗೆ ವಿನಾಯಿತಿ

    ಹೆರಿಗೆ ರಜೆಯ ಸಂಬಳದಲ್ಲಿ ಸಿಗಲಿದೆ ತೆರಿಗೆ ವಿನಾಯಿತಿ

    ನವದೆಹಲಿ: ಕೇಂದ್ರ ಸರ್ಕಾರವು ಫೆ. 1ರಂದು ಮಂಡನೆ ಮಾಡಲಿರುವ ಮಧ್ಯಂತರ ಬಜೆಟ್‍ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಘೋಷಿಸಲಿದೆ. ಮಧ್ಯಂತರ ಬಜೆಟ್‍ನಲ್ಲಿ ಹೆರಿಗೆ ರಜೆಯಲ್ಲಿ ಪಡೆಯುವ ಸಂಬಳಕ್ಕೆ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆ ಇದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರ ಬೆಂಬಲ ಗಳಿಸಲು ಬಿಜೆಪಿ ಮುಂದಾಗಿದೆ. ಕಾರ್ವಿಕ ಸಚಿವಾಲಯ ಸಲ್ಲಿಸಿರುವ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುತ್ತಿದೆ ಎಂದು ಮಧ್ಯಮವೊಂದು ವರದಿ ಪ್ರಕಟಿಸಿದೆ.

    ಹೆರಿಗೆ ಸೌಲಭ್ಯ ಕಾಯ್ದೆಯನ್ನು 2017ರಲ್ಲಿ ಸರ್ಕಾರ ತಿದ್ದುಪಡಿ ಮಾಡಿತ್ತು. ಆಗ ಉದ್ಯೋಗಸ್ಥ ಮಹಿಳೆಯರಿಗೆ ಕೊಡುವ ಸಂಬಳ ಸಹಿತ ಹೆರಿಗೆ ರಜೆಯನ್ನು 12 ವಾರದಿಂದ 26 ವಾರಕ್ಕೆ ಏರಿಸಿತ್ತು. ಈ ಹಿಂದೆ ಕಾರ್ವಿಕ ಸಚಿವಾಲಯವು ಕಡಿಮೆ ಸಂಬಳ ಪಡೆಯುವ ಮಹಿಳೆಯರಿಗೂ ಕೂಡ 26 ವಾರಗಳ ಹೆರಿಗೆ ರಜೆ ಸಿಗುವಂತೆ ಮಾಡಲು ಕೆಲವು ಕ್ರಮಗಳ ಬಗ್ಗೆ ಸರ್ಕಾರದ ಬಳಿ ಪ್ರಸ್ತಾವನೆ ಇಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಬಿಎಂಪಿ ಶಾಲೆಯಲ್ಲಿ ಮಕ್ಳನ್ನು ಓದಿಸುತ್ತಿರೋ ಪೋಷಕರೇ ಎಚ್ಚರ

    ಬಿಬಿಎಂಪಿ ಶಾಲೆಯಲ್ಲಿ ಮಕ್ಳನ್ನು ಓದಿಸುತ್ತಿರೋ ಪೋಷಕರೇ ಎಚ್ಚರ

    ಬೆಂಗಳೂರು: ಬಿಬಿಎಂಪಿ ಶಾಲೆಯಲ್ಲಿ ಮಕ್ಕಳನ್ನು ಓದಿಸುತ್ತಿರೋ ಪೋಷಕರೇ ಎಚ್ಚರ. ನಿಮ್ಮ ಮಕ್ಕಳಿಗೆ ಪಾಠ ಹೇಳಲ್ಲ ಎಂದು ಟೀಚರ್ಸ್ ಪ್ರತಿಭಟನೆ ಮಾಡಿದ್ದಾರೆ.

    ಹೌದು. ಕಳೆದ 3 ತಿಂಗಳಿಂದ ಈ ಬಡ ಶಿಕ್ಷಕರಿಗೆ ಸಂಬಳ ಬಂದಿಲ್ಲ. ಈವರೆಗೂ ಮಕ್ಕಳಿಗಾಗಿ ಪಾಠ ಮಾಡಿ ಸುಸ್ತಾಗಿ ನಮ್ಮ ಮಕ್ಕಳ ಹೊಟ್ಟೆಗೆ ಊಟ ಕೊಡಲು ಸಂಬಳ ಬೇಕೇ ಬೇಕು ಅಂತ ಧರಣಿಗೆ ಧುಮುಕಿದ್ದಾರೆ.

    ಮೂರು ತಿಂಗಳಿನಿಂದ ಸಂಬಳ ಸಿಗುತ್ತಿಲ್ಲ. ಈ ಬಗ್ಗೆ ಏಜೆನ್ಸಿ ಅವರನ್ನು ಕೇಳಿದ್ರೆ, ಬಿಲ್ ಪಾಸ್ ಮಾಡಿಲ್ಲ ನಾವೇನು ಮಾಡೋದು. ನಮ್ಮ ಕೈಯಿಂದ ಕೊಡೋದಕ್ಕೆ ಸಾಧ್ಯವಾಗಲ್ಲ. ಹೀಗಾಗಿ ನೀವು ಅಲ್ಲಿ ಹೋಗಿ ಕೇಳಿ ಅಂತ ಹಾರಿಕೆಯ ಉತ್ತರ ನೀಡುತ್ತಾರೆ. ಅಲ್ಲದೇ ಇವರನ್ನು ಕೇಳಿದ್ರೆ ಏಜೆನ್ಸಿ ಅವರನ್ನು ಕೇಳಿ. ನಮಗೂ ಅದಕ್ಕೂ ಸಂಬಂಧವಿಲ್ಲ ಅಂತ ಹೇಳುತ್ತಾರೆ. ನಮ್ಮ ಕಷ್ಟವನ್ನು ಯಾರ ಜೊತೆ ಹೇಳಿಕೊಳ್ಳುವುದು ಅಂತ ಶಿಕ್ಷಕ ನಟೇಶ್ ಅವರು ತಮ್ಮ ಅಲಳುತೋಡಿಕೊಂಡಿದ್ದಾರೆ.

    ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡೋ ಈ 650 ಕ್ಕೂ ಹೆಚ್ಚು ಶಿಕ್ಷಕರೇ ಬಿಬಿಎಂಪಿ ಶಾಲೆಗಳ ಕಳಪೆ ಫಲಿತಾಂಶಕ್ಕೆ ಕಾರಣ ಅಂತೆ. ಹೀಗಾಗಿ ಪೌರಕಾರ್ಮಿಕರಿಗಿಂತ ಕಡಿಮೆ ಸಂಬಳ ತಗೋ ಟೀಚರ್ಸ್ ಗೆ ಸಂಬಳ ಕೊಡದೇ ಅಲೆದಾಡುವಂತೆ ಮಾಡ್ತಿದೆ ಪಾಲಿಕೆ. ಕ್ರಿಸ್ಟಲ್ ಎಂಬ ಕಂಪನಿಗೆ ಗುತ್ತಿಗೆ ನೀಡಿ ಸರ್ಕಾರ ಕೈ ಕಟ್ಟಿ ಕುಳಿತಿದೆ. ಈಗ ಟೀಚರ್ಸ್ ಸಹ ಪಾಲಿಕೆ ಆವರಣಕ್ಕೆ ಬಂದು ಧರಣಿ ಮಾಡಿದ್ದಾರೆ.

    ಈ ತಿಂಗಳು ಸೇರಿದ್ರೆ ಸಂಬಳ ಸಿಗದೇ ಮೂರು ತಿಂಗಳಾಗುತ್ತೆ. ಅವರ ಟೆಂಡರ್ ಅವರು ಎಷ್ಟು ತಗೋತ್ತಿದ್ದಾರೆ ಅಂತ ಗೊತ್ತಿಲ್ಲ. ಟೀಚರ್ಸ್ ಅವರಿಗೂ ಬಿಬಿಎಂಪಿ ಕಡೆಯಿಂದ ಕೊಟ್ರೆ ಒಳ್ಳೆಯದು. ಮಕ್ಕಳನ್ನು ನೆನೆದುಕೊಂಡೇ 2 ತಿಂಗಳಿನಿಂದ ಸಂಬಳ ಇಲ್ಲದೇ ಕೆಲಸ ಮಾಡಿದ್ದೇವೆ. ಆದ್ರೆ ಇದೀಗ ನಮ್ಮ ಮಕ್ಕಳು, ನಮ್ಮ ಮನೆ ನಡೆಯಲು ನಾವು ಏನ್ ಮಾಡಬೇಕು ಅಂತ ಶಿಕ್ಷಕಿ ವೀಣಾ ತಮ್ಮ ಕಷ್ಟ ಹಂಚಿಕೊಂಡಿದ್ದಾರೆ.

    ಕನಿಷ್ಟವೆಂದರೆ 6 ಸಾವಿರ, ಗರಿಷ್ಠವೆಂದರೆ 15 ಸಾವಿರ ಕೋಟಿ ಕೋಟಿ ವ್ಯವಹಾರ ಮಾಡೋ ಪಾಲಿಕೆ ಹೀಗೆ ಪಾಠ ಹೇಳೋರಿಗೆ ಅನ್ಯಾಯ ಮಾಡೋದು ಎಷ್ಟು ಸರಿ ಅನ್ನೋ ಪ್ರಶ್ನೆ ಎದುರಾಗಿದೆ. ಅಲ್ಲದೇ ಶಿಕ್ಷಕರು ಸ್ಟ್ರೈಕ್ ಹೋದ ಪರಿಣಾಮ ಇಡೀ ಶಾಲೆ ಖಾಲಿ ಖಾಲಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತುಮಕೂರು ಪಾಲಿಕೆಯಿಂದ ಕೋಟಿಗಟ್ಟಲೆ ವೇತನ ಬಾಕಿ-‘ಸ್ವಚ್ಛ’ ನೌಕರರಿಗೆ ಕೊಟ್ಟಿಲ್ಲ ಸಂಬಳ

    ತುಮಕೂರು ಪಾಲಿಕೆಯಿಂದ ಕೋಟಿಗಟ್ಟಲೆ ವೇತನ ಬಾಕಿ-‘ಸ್ವಚ್ಛ’ ನೌಕರರಿಗೆ ಕೊಟ್ಟಿಲ್ಲ ಸಂಬಳ

    ತುಮಕೂರು: ಇತ್ತೀಚೆಗೆ ಬೆಂಗಳೂರಲ್ಲಿ ವೇತನ ಸಿಗದ ಕಾರಣಕ್ಕೆ ಪೌರಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದರು. ತುಮಕೂರು ಪಾಲಿಕೆಯ ಪೌರ ಕಾರ್ಮಿಕರಿಗೆ 4 ತಿಂಗಳಿಂದ ವೇತನ ಕೊಟ್ಟಿಲ್ಲ. ನಗರ ಸ್ವಚ್ಛತೆಗಾಗಿ ಪೌರ ಕಾರ್ಮಿಕರಿಂದ ದುಡಿಸಿಕೊಳ್ಳುವ ಪಾಲಿಕೆ ಇವರಿಗೆ ಸಂಬಳ ನೀಡುವ ವಿಚಾರದಲ್ಲಿ ಮಾತ್ರ ಕಣ್ಮುಚ್ಚಿ ಕುಳಿತಿದೆ. ಅಷ್ಟಕ್ಕೂ ಪಾಲಿಕೆ ಪೌರ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಸಂಬಳದ ಮೊತ್ತ ಕೇಳಿದರೆ ನಿಮಗೆ ಶಾಕ್ ಆಗೋದು ಖಂಡಿತ.

    ಬೆಂಗಳೂರಿನ ಜಸ್ಕೋ ಕಂಪೆನಿ ಬಿಬಿಎಂಪಿಯಿಂದ ಸುಮಾರು 600 ನೌಕರರನ್ನು ಗುತ್ತಿಗೆ ಪಡೆದುಕೊಂಡಿದೆ. ಇವರಿಗೆ ಕಳೆದ 4 ತಿಂಗಳಿಂದ ಬರೋಬ್ಬರಿ 5 ಕೋಟಿ 40 ಲಕ್ಷ ರೂಪಾಯಿ ವೇತನ ಬಾಕಿ ಉಳಿಸಿಕೊಂಡಿದೆ. ಗುತ್ತಿಗೆ ಕಂಪೆನಿಗೆ ಪಾಲಿಕೆ ಅನುದಾನ ಇಲ್ಲ ಎಂಬ ನೆಪ ಹೇಳಿ ಹಣ ಬಿಡುಗಡೆ ಮಾಡದ ಕಾರಣ ಪೌರ ನೌಕರರಿಗೆ ಸಂಬಳ ಆಗಿಲ್ಲ.

    ಈ ಮಧ್ಯೆ ಸರ್ಕಾರ ಕಳೆದ 2 ತಿಂಗಳ ಹಿಂದೆ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿದೆ. ಇದರನ್ವಯ ಒಟ್ಟು 600 ಜನರಲ್ಲಿ ಸುಮಾರು 500ಕ್ಕೂ ನೌಕರರು ನೇರ ನೇಮಕಾತಿಗೊಂಡವರು. ನೇರ ನೇಮಕಾತಿ ಆಗದ ಆಟೋ ಚಾಲಕರು ಹಾಗೂ ಆಟೋ ಸಹಾಯಕರನ್ನು ಗುತ್ತಿಗೆ ಕಂಪೆನಿಯೇ ಮುಂದುವರೆಸಿತ್ತು.

    ಒಟ್ಟಿನಲ್ಲಿ ಪಾಲಿಕೆ ಮತ್ತು ಗುತ್ತಿಗೆ ಕಂಪೆನಿಯ ನಡುವಿನ ಹಗ್ಗಜಗ್ಗಾಟದಲ್ಲಿ ಪೌರ ಕಾರ್ಮಿಕರ ಬದುಕು ನರಕ ಸದೃಶವಾಗಿದೆ. ಕೋಟಿ ಕೋಟಿ ರೂಪಾಯಿ ಲೆಕ್ಕದಲ್ಲಿ ದುಂದುವೆಚ್ಚ ಮಾಡುವ ಪಾಲಿಕೆ ಪೌರಕಾರ್ಮಿಕರ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ತೋರುತ್ತಿರೋದು ದುರಾದೃಷ್ಟವೇ ಸರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೋಟು ನಿಷೇಧದ ವೇಳೆ OT- ವೇತನವನ್ನು ಹಿಂದಿರುಗಿಸುವಂತೆ 70 ಸಾವಿರ ಉದ್ಯೋಗಿಗಳಿಗೆ ಎಸ್‍ಬಿಐ ಸೂಚನೆ

    ನೋಟು ನಿಷೇಧದ ವೇಳೆ OT- ವೇತನವನ್ನು ಹಿಂದಿರುಗಿಸುವಂತೆ 70 ಸಾವಿರ ಉದ್ಯೋಗಿಗಳಿಗೆ ಎಸ್‍ಬಿಐ ಸೂಚನೆ

    ನವದೆಹಲಿ: ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟು ನಿಷೇಧದ ಸಮಯದಲ್ಲಿ ಓವರ್ ಟೈಮ್ ಕೆಲಸ ಮಾಡಿ ಹೆಚ್ಚುವರಿಯಾಗಿ ಪಡೆದಿದ್ದ ವೇತನವನ್ನು ಹಿಂದಿರುಗಿಸುವಂತೆ 70 ಸಾವಿರ ಉದ್ಯೋಗಿಗಳಿಗೆ ಆದೇಶ ನೀಡಿದೆ.

    2016ರ ನವೆಂಬರ್ 14ರಿಂದ 2016ರ ಡಿಸೆಂಬರ್ 30ರವರೆಗೆ ಏಳು ಗಂಟೆಯವರೆಗೂ ಕೆಲಸ ಮಾಡಿದ್ದಕ್ಕಾಗಿ ತಮ್ಮ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ವೇತನ ನೀಡಲಾಗಿತ್ತು. ಉದ್ಯೋಗಿಗಳ ಉದ್ಯೋಗರ್ಹತೆಗೆ ಅನುಗುಣವಾಗಿ 17 ಸಾವಿರದಿಂದ 30 ಸಾವಿರ ರುಪಾಯಿವರೆಗೂ ಹೆಚ್ಚುವರಿಯಾಗಿ ವೇತನ ನೀಡಲಾಗಿತ್ತು. ಆದರೆ ಹೆಚ್ಚುವರಿಯಾಗಿ ನೀಡಿದ ವೇತನವನ್ನು ಹಿಂಪಡೆಯುವಂತೆ ವಲಯವಾರು ಬ್ರಾಂಚ್ ಅಧಿಕಾರಿಗಳಿಗೆ ಎಸ್‍ಬಿಐ ಆದೇಶಿಸಿದೆ.

    ನೋಟು ನಿಷೇಧಕ್ಕೂ ಮುನ್ನ 2017ರ ಏಪ್ರಿಲ್ 1 ರಂದು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರವನ್ಕೋರೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ ಬ್ಯಾಂಕ್ ಗಳು ಎಸ್‍ಬಿಐ ಜೊತೆ ವಿಲೀನವಾಗಿದ್ದವು. ನೋಟು ನಿಷೇಧದ ಸಮಯದಲ್ಲಿ ಸುಮಾರು 70 ಸಾವಿರ ಉದ್ಯೋಗಿಗಳಿಗೆ ಹೆಚ್ಚುವರಿ ಸಮಯ ಕೆಲಸ ಮಾಡುವಂತೆ ಅದಕ್ಕೆ ಹೆಚ್ಚುವರಿ ವೇತನವನ್ನು ನೀಡುವ ಕುರಿತಾಗಿ ಎಸ್‍ಬಿಐ ಭರವಸೆ ನೀಡಿತ್ತು.

    ಆದರೆ ಇದೀಗ ಹೆಚ್ಚುವರಿಯಾಗಿ 70 ಸಾವಿರ ಉದ್ಯೋಗಿಗಳಿಗೆ ನೀಡಿರುವ ವೇತನವನ್ನು ಹಿಂಪಡೆಯುವಂತೆ ಬ್ರಾಂಚ್ ಅಧಿಕಾರಿಗಳಿಗೆ ಎಸ್‍ಬಿಐ ಸೂಚಿಸಿದೆ. ಇದು ಉದ್ಯೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಓವರ್ ಟೈಮ್ ಹೆಚ್ಚುವರಿ ವೇತನ ಕೇವಲ ಎಸ್‍ಬಿಐ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗಲಿದೆ. ವಿಲೀನಗೊಂಡಿರುವ ಬ್ಯಾಂಕ್ ಉದ್ಯೋಗಿಗಳಿಗಲ್ಲ ಎಂದು ಎಸ್‍ಬಿಐ ಸ್ಪಷ್ಟಪಡಿಸಿದೆ.

    ವಿಲೀನಗೊಂಡಾಗ ಬ್ಯಾಂಕ್ ಗಳ ಆಸ್ತಿಗಳೆಲ್ಲ ಎಸ್‍ಬಿಐಗೆ ಸೇರ್ಪಡೆಯಾಗಿತ್ತು. ಆದರೆ ಈಗ ನಮ್ಮನ್ನು ಪ್ರತ್ಯೇಕವಾಗಿ ನೋಡುವುದು ಎಷ್ಟು ಸರಿ ಎಂದು ವಿಲೀನಗೊಂಡ ಬ್ಯಾಂಕ್ ಗಳ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ತಮ್ಮ ಜೀವವನ್ನು ಲೆಕ್ಕಿಸದೇ ಜನರ, ವನ್ಯ ಜೀವಿಗಳ ರಕ್ಷಣೆ ಮಾಡುವವರಿಗೆ 3 ವರ್ಷದಿಂದ ಸಂಬಳವೇ ಇಲ್ಲ

    ತಮ್ಮ ಜೀವವನ್ನು ಲೆಕ್ಕಿಸದೇ ಜನರ, ವನ್ಯ ಜೀವಿಗಳ ರಕ್ಷಣೆ ಮಾಡುವವರಿಗೆ 3 ವರ್ಷದಿಂದ ಸಂಬಳವೇ ಇಲ್ಲ

    ಬೆಂಗಳೂರು: ಪೌರ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಎಚ್ಚೆತ್ತ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ, ಪೌರ ಕಾರ್ಮಿಕರ 6 ತಿಂಗಳ ಬಾಕಿ ಸಂಬಳವನ್ನು ಬಿಡುಗಡೆ ಮಾಡಿದೆ. ಆದರೆ ಅದೇ ಬಿಬಿಎಂಪಿಯಲ್ಲಿ ಕೆಲಸ ಮಾಡುವ ನೌಕರರಿಗೆ ಕಳೆದ ಮೂರು ವರ್ಷದಿಂದ ಸಂಬಳವನ್ನೇ ನೀಡಿಲ್ಲ.

    ಹೌದು, ಬಿಬಿಎಂಪಿಯ ಅಧಿಕಾರಿಗಳು ಮಾತ್ರ ತಿಂಗಳು ತಿಂಗಳಿಗೆ ಸರಿಯಾಗಿ ಸಂಬಳ ಪಡೆದು ಆರಾಮಗಿ ಇರುತ್ತಾರೆ. ಆದರೆ ಇಲ್ಲಿ ಕೆಲಸ ಮಾಡುವ ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಆರೇಳು ತಿಂಗಳ ಸಂಬಳ ಬಾಕಿ ಉಳಿಸಿದ್ದು ಗೊತ್ತೆ ಇದೆ. ಸುಬ್ರಮಣ್ಯ ಪೌರ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಮೇಲೆ ಬಾಕಿ ಹಣವನ್ನ ಬಿಡುಗಡೆ ಮಾಡಿದ್ದಾರೆ.

    ಈ ಸಂಬಂಧ ಮೇಯರ್ ಸಂಪತ್ ರಾಜ್ ಅಧಿಕಾರಿಗಳಿಗೆ ಕಂಟ್ರಾಕ್ಟರ್ ಗಳಿಗೆ ಫುಲ್ ಚಾರ್ಜ್ ಕೂಡ ಮಾಡಿದ್ದರು. ಆದರೆ ಅದೇ ಬಿಬಿಎಂಪಿಯಲ್ಲಿ ವನ್ಯಜೀವಿ ಸಂರಕ್ಷಣಾ ಘಟಕದಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಕರಿಗೆ ಕಳೆದ ಮೂರು ವರ್ಷದಿಂದ ಗೌರವ ಧನ ನೀಡೆ ಇಲ್ಲ. ಇರುವ 11 ಜನ ಸದಸ್ಯರಿಗೆ ತಿಂಗಳಿಗೆ 11 ಸಾವಿರ ರೂಪಾಯಿ ಅಂತಾ ಗೌರವ ಧನ ನಿಗದಿಯೇನೋ ಮಾಡಿದ್ದಾರೆ. ಆದರೆ ಆ ಸಂಬಳ ಮಾತ್ರ ಇನ್ನು ನೀಡಿಲ್ಲ.

    ಬೆಂಗಳೂರಿನಲ್ಲಿ ಮಳೆಗಾಲ ಪ್ರಾರಂಭವಾದಾಗ ಹಾವುಗಳು ಹೆಚ್ಚು ಕಾಣಿಸಿಕೊಳ್ಳುತ್ತದೆ ಆಗ ನಾವು ಬಿಬಿಎಂಪಿ ಅಧಿಕಾರಿಗಳಿಗೆ ನೆನಪಾಗುತ್ತೀವೆ. ಅವರ ಮನೆಗೆ ಹಾವು ಬಂದರೂ ನಾವೇ ರಕ್ಷಣೆ ಮಾಡೋದು. ಎಲ್ಲೇ ಬಂದರೂ ನಾವೇ ರಕ್ಷಣೆ ಮಾಡೋದು. ನಾವು ಅನೇಕ ವರ್ಷಗಳಿಂದ ವನ್ಯ ಜೀವಿಗಳ ರಕ್ಷಣೆ ಮಾಡುತ್ತಿದ್ದೇವೆ. ನಮ್ಮ ಜೀವವನ್ನು ಲೆಕ್ಕಿಸದೇ ಜನರ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡುತ್ತೀವಿ. ಆದರೆ ನಮ್ಮ ಜೀವನಕ್ಕೆ ಬಿಬಿಎಂಪಿ ರಕ್ಷಣೆ ನೀಡುತ್ತಿಲ್ಲ. ನಮ್ಮಲ್ಲೂ ಯಾರಾದರೂ ಸತ್ತಾಗ ನಮ್ಮ ಕಡೆ ಗಮನ ಹರಿಸುತ್ತಾರೆ ಅಂತಾ ತಮ್ಮ ನೋವನ್ನ ಮೋಹನ್ ಹಂಚಿಕೊಂಡಿದ್ದಾರೆ.

    ಬಿಬಿಎಂಪಿಯಲ್ಲಿ ಸದ್ಯ 11 ಜನ ವನ್ಯ ಜೀವಿ ರಕ್ಷಕರಿದ್ದು, ಆ ಸಂಖ್ಯೆಯನ್ನ 33 ಕ್ಕೆ ಹೆಚ್ಚಿಸಲು ಹಾಗೂ ಹಳೆ ಬಾಕಿ ಸಂಬಳವನ್ನ ನೀಡಿ ಗೌರವ ಧನವನ್ನ ಹೆಚ್ಚಿಸಿ ಅಂತಾ ಮೇಯರ್ ಗೆ ಮನವಿ ಮಾಡಿದ್ದಾರೆ.

  • ಮೇಯರ್, ಆಯುಕ್ತರು ಆದೇಶಿಸಿದ್ರೂ ಪೌರಕಾರ್ಮಿಕರಿಗೆ ಇನ್ನೂ ಸಂಬಳವಾಗಿಲ್ಲ!

    ಮೇಯರ್, ಆಯುಕ್ತರು ಆದೇಶಿಸಿದ್ರೂ ಪೌರಕಾರ್ಮಿಕರಿಗೆ ಇನ್ನೂ ಸಂಬಳವಾಗಿಲ್ಲ!

    ಬೆಂಗಳೂರು: ನಗರದ ಪೌರ ಕಾರ್ಮಿಕರ ಪರಿಸ್ಥಿತಿ ದೇವರು ಕೊಟ್ರೂ ಪೂಜಾರಿ ಕೊಡ್ತಿಲ್ಲ ಎಂಬಂತಾಗಿದೆ. ಎಲ್ಲಾ ಪೌರಕಾರ್ಮಿಕರ ಅಕೌಂಟ್ ಗೂ ಸಂಬಳ ಹಾಕಿ ಅಂತ ಆದೇಶ ಆಗಿ ಎರಡು ದಿನವಾದ್ರೂ ದುಡ್ಡು ಮಾತ್ರ ಇನ್ನೂ ಬಿದ್ದಿಲ್ಲ.

    ಈ ಬಗ್ಗೆ ಗುರುವಾರ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಆಗ್ರಹ, ಆದೇಶವಾಗಿದೆ. ಆದ್ರೆ ಪೌರಕಾರ್ಮಿಕರ ಸಂಬಳ ಮಾತ್ರ ಇನ್ನೂ ಆಗಿಲ್ಲ. ಈ ಮೂಲಕ ಮೇಯರ್ ಆದೇಶ, ಆಯುಕ್ತರ ಆದೇಶಕ್ಕೂ ಬೆಲೆ ಇಲ್ಲವಾಯ್ತಾ ಎನ್ನುವ ಪ್ರಶ್ನೆಯೊಂದು ಅಲ್ಲಿನ ಕಾರ್ಮಿಕರಲ್ಲಿ ಮೂಡಿದೆ.

    ಇಂದು ಸಂಜೆ ಒಳಗೆ ಸಂಬಳ ಆಗದಿದ್ರೆ ಮುಷ್ಕರಕ್ಕಿಳಿಯಲು ಗುತ್ತಿಗೆ ಪೌರಕಾರ್ಮಿಕರ ಚಿಂತನೆ ನಡೆಸಿದ್ದಾರೆ. ಹೀಗಾಗಿ ಒಂದು ವೇಳೆ ಸಂಬಳ ಆಗದಿದ್ರೆ ಮತ್ತೊಮ್ಮೆ ಬೆಂಗಳೂರು ಕಸ ರಾಷ್ಟ್ರ, ಅಂತಾರಾಷ್ಟ್ರೀಯ ಸುದ್ದಿಯಾಗೋ ಸಾಧ್ಯತೆ ಇದೆ.

    ಜನವರಿಯಿಂದ ಇಲ್ಲಿಯ ತನಕ ಬಿಬಿಎಂಪಿಯು 27 ಕೋಟಿ ರೂಪಾಯಿ ಸಂಬಳ ಬಾಕಿ ಉಳಿಸಿಕೊಂಡಿದೆ. 27 ಕೋಟಿ ರೂಪಾಯಿ ಸಂಬಳ ಬಿಡುಗಡೆ ಆದೇಶವಾದ್ರೂ ಪೌರಕಾರ್ಮಿಕರ ಅಕೌಂಟ್ ಗೆ ಮಾತ್ರ ಅಧಿಕಾರಿಗಳು ಸಂಬಳ ಹಾಕಿಲ್ಲ ಅಂತ ಪೌರ ಕಾರ್ಮಿಕರು ಕಿಡಿಕಾರಿದ್ದಾರೆ.

  • ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಭುವನೇಶ್ವರ್: ಖಾಸಗಿ ಕೋಚಿಂಗ್ ಕ್ಲಾಸಿನ ಇಂಗ್ಲಿಷ್ ಶಿಕ್ಷಕರೊಬ್ಬರು ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಅವರಿಗೆ ಬೂಟ್ ಹಾರ ಹಾಕಿ ಅವಮಾನ ಮಾಡಿದ ಘಟನೆ ಓಡಿಶಾದ ನಯಾಗರ್ ಜಿಲ್ಲೆಯಲ್ಲಿ ನಡೆದಿದೆ.

    ಮಾಯಾಧರ್ ಮೋಹಪಾತ್ರ ಎಂಬವರು ಖಾಸಗಿ ಕೋಚಿಂಗ್ ಸಂಸ್ಥೆ ಸತ್ಯಸಾಯಿ ಟ್ಯುಟೋರಿಯಲ್ ನಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ಕ್ಲಾಸಿನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ಹಾಗಾಗಿ ತಮ್ಮ ತಿಂಗಳ ಸಂಬಳ ಕೊಡಿ ಎಂದು ಕೇಳಿದ್ದಕ್ಕೆ ಸಿಟ್ಟಾದ ಮಾಲೀಕ ತಪನ್ ಪಾತ್ರ ಶಿಕ್ಷಕ ಮಾಯಾಧರ್ ರವರಿಗೆ ಬೂಟಿನ ಹಾರ ಹಾಕಿ ಅವಮಾನ ಮಾಡಿದ್ದಾರೆ.

    ಮಹಾಪಾತ್ರ ರವರು ಹೇಳುವಂತೆ ಕೋಚಿಂಗ್ ಕ್ಲಾಸ್ ನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ತಮ್ಮ ಸಂಬಳವನ್ನು ನೀಡುವಂತೆ ಪದೇ ಪದೇ ಮಾಲೀಕನಿಗೆ ಕೇಳಿಕೊಂಡಿದ್ದರೂ, ಇದಕ್ಕೆ ತಪನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮಾಲೀಕ ತಪನ್ ಶಿಕ್ಷಕ ಮಾಯಾಧರ್ ರವರಿಗೆ ನೌಕರಿಯನ್ನೇ ಬಿಟ್ಟು ಹೋಗುವಂತೆ ಕೇಳಿದ್ದಾರೆ. ಅಲ್ಲದೇ ಕೋಪಗೊಂಡ ತಪನ್ ತಮ್ಮ ಇಬ್ಬರು ಸಹಾಯಕರೊಂದಿಗೆ ಶಿಕ್ಷಕ ಮಾಯಾಧರ್ ರವರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿಹಾಕಿದ್ದಾರೆ. ನಿಷ್ಕಾರುಣವಾಗಿ ಶಿಕ್ಷಕ ಮಹಾಪಾತ್ರ ರನ್ನು ಥಳಿಸಿ, ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.

  • ಪತಿಯ ಸಂಬಳವನ್ನು ತಿಳಿಯುವ ಹಕ್ಕು ಪತ್ನಿಗಿದೆ: ಹೈಕೋರ್ಟ್

    ಪತಿಯ ಸಂಬಳವನ್ನು ತಿಳಿಯುವ ಹಕ್ಕು ಪತ್ನಿಗಿದೆ: ಹೈಕೋರ್ಟ್

    ಭೋಪಾಲ್: ಪತ್ನಿಗೆ ತನ್ನ ಗಂಡನಿಗೆ ಸಂಬಳ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

    ಪತಿಯಿಂದ ದೂರವಾಗಿರುವ ಪತ್ನಿ ಗಂಡನ ಸಂಬಳದ ಮಾಹಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈಗ ಹೈಕೋರ್ಟ್ ದ್ವಿಸದಸ್ಯ ಪೀಠ ಈ ಆದೇಶವನ್ನು ರದ್ದುಗೊಳಿಸಿ ಪತ್ನಿ ಪರವಾಗಿ ತೀರ್ಪು ಪ್ರಕಟಿಸಿದೆ.

    ಏನಿದು ಪ್ರಕರಣ?
    ಬಿಎಸ್‍ಎನ್‍ಎಲ್ ಉದ್ಯೋಗಿ ಪವನ್ ಜೈನ್ ನಿಂದ ಬೇರೆಯಾದ ಸುನಿತಾ ಜೈನ್ ಕುಟುಂಬ ನಿರ್ವಹಣೆಗೆ 7 ಸಾವಿರ ರೂ. ನಿರ್ವಹಣಾ ಭತ್ಯೆಯನ್ನು ಪಡೆಯುತ್ತಿದ್ದರು. ಪತಿಯ ಸಂಬಳ ತಿಂಗಳಿಗೆ 2 ಲಕ್ಷ ರೂ. ಇರುವ ಕಾರಣ ತನಗೆ ಇನ್ನು ಹೆಚ್ಚು ನಿರ್ವಹಣಾ ಭತ್ಯೆ ಸಿಗಬೇಕು ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಪತಿಯ ಸಂಬಳದ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು.

    ಈ ಅರ್ಜಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಗೆ ಮಾಹಿತಿ ಕೋರಿ ಅರ್ಜಿ ಕೇಳಿದ್ದರು. ಮಾಹಿತಿ ಕೊಡಲು ಬಿಎಸ್‍ಎನ್‍ಎಲ್ ಸಂಸ್ಥೆ ನಿರಾಕರಿಸಿತು. ನಂತರ ಪತ್ನಿ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದರು. ಸುನಿತಾ ಜೈನ್ ಅರ್ಜಿಯನ್ನು ಪುರಸ್ಕರಿಸಿದ ಕೇಂದ್ರ ಮಾಹಿತಿ ಆಯೋಗ ಸಂಬಳದ ಮಾಹಿತಿಯನ್ನು ನೀಡುವಂತೆ ಬಿಎಸ್‍ಎನ್‍ಎಲ್ ಗೆ ಆದೇಶವನ್ನು ನೀಡಿತ್ತು. ಆಯೋಗದ ಆದೇಶವನ್ನು ಪ್ರಶ್ನಿಸಿ ಪವನ್ ಹೈ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಆಯೋಗದ ಆದೇಶವನ್ನು ರದ್ದು ಮಾಡಿತ್ತು.

    ಏಕಸದಸ್ಯ ಪೀಠದ ಆದೇಶವನ್ನು ಪತ್ನಿ ದ್ವಿಸದ್ಯ ಪೀಠದಲ್ಲಿ ಪ್ರಶ್ನಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ ಕೆ ಸೇಥ್ ಹಾಗೂ ನಂದಿತಾ ದುಬೆ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠ ಪತಿ ಸಂಬಳದ ಮಾಹಿತಿಯನ್ನು ಪತ್ನಿಗೆ ತಿಳಿಯುವ ಹಕ್ಕಿದೆ ಎಂದು ಹೇಳಿ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದರು.

  • ಮೇ 30, 31ಕ್ಕೆ ದೇಶಾದ್ಯಂತ ಬ್ಯಾಂಕ್ ಬಂದ್

    ಮೇ 30, 31ಕ್ಕೆ ದೇಶಾದ್ಯಂತ ಬ್ಯಾಂಕ್ ಬಂದ್

    ಬೆಂಗಳೂರು: ಈ ತಿಂಗಳ ಅಂತ್ಯ ಅಂದ್ರೆ ಮೇ 30 ಮತ್ತು 31ರಂದು ಬ್ಯಾಂಕ್‍ಗಳ ಒಕ್ಕೂಟ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಎರಡು ದಿನ ಬ್ಯಾಂಕ್‍ಗಳು ಬಂದ್ ಆಗಲಿವೆ.

    ಪ್ರತಿ 5 ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಬೇಕೆಂಬ ನಿಯಮವಿದ್ರು, ಸಹ ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ಮಾತುಕತೆಗೆ ಸರ್ಕಾರ ಕರೆದಿಲ್ಲ. ಈಗಾಗಲೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿರೋ ಸಿಬ್ಬಂದಿ ಈ ತಿಂಗಳಾಂತ್ಯಕ್ಕೆ ಎರಡು ದಿನಗಳ ಕಾಲ ಬ್ಯಾಂಕ್ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲಿದ್ದೇವೆ ಅಂತಾರೆ ಬ್ಯಾಂಕ್ ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.

    ಒಂದು ವೇಳೆ ಸರ್ಕಾರ ಮತ್ತು ಐಬಿಎ (ಭಾರತೀಯ ಬ್ಯಾಂಕ್‍ಗಳ ಒಕ್ಕೂಟ) ನಮ್ಮ ಪ್ರತಿಭಟನೆಗೆ ಸ್ಪಂದಿಸದೇ ಹೋದ್ರೆ ಮುಷ್ಕರವನ್ನ ಅನಿರ್ಧಿಷ್ಟಾವದಿಗೆ ನಡೆಸಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಇಡೀ ದೇಶದಲ್ಲಿ ನಡೆಯೋ ಈ ಪ್ರತಿಭಟನೆಯಲ್ಲಿ ಲಕ್ಷಾಂತರ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಬ್ಯಾಂಕ್ ಅಸೋಸಿಯೇಷನ್‍ನ ಪದಾಧಿಕಾರಿ ಪಿ.ಜಿ.ಆರ್. ಬನ್ನಿಂದ್ಯಾಯ ಎಚ್ಚರಿಕೆ ನೀಡಿದ್ದಾರೆ.