Tag: ಸಂಬಳ

  • ಕೊರೊನಾ ಪರಿಹಾರ ನಿಧಿಗೆ ತನ್ನ 6 ತಿಂಗ್ಳ ಸಂಬಳ ನೀಡಿದ ಭಾರತದ ಕುಸ್ತಿಪಟು

    ಕೊರೊನಾ ಪರಿಹಾರ ನಿಧಿಗೆ ತನ್ನ 6 ತಿಂಗ್ಳ ಸಂಬಳ ನೀಡಿದ ಭಾರತದ ಕುಸ್ತಿಪಟು

    – ಮಾನವೀಯತೆ ಮೆರೆದ ಭಜರಂಗ್ ಪೂನಿಯಾ

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಇದುವರೆಗೆ ಭಾರತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ವೈರಸ್ ಬಗ್ಗೆ ಕ್ರೀಡಾಪಟುಗಳು, ನಟ-ನಟಿಯರು ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಭಾರತ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯಾ ಕೂಡ ಆರ್ಥಿಕ ಸಹಾಯ ಮಾಡಿದ್ದಾರೆ.

    ಭಜರಂಗ್ ಪೂನಿಯಾ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ತಮ್ಮ 6 ತಿಂಗಳ ವೇತನನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ. “ಹರಿಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರು ಸ್ಥಾಪಿಸಿದ ಕೋವಿಡ್ -19 ರೋಗಿಗಳ ಪರಿಹಾರ ನಿಧಿಗೆ ನನ್ನ ಆರು ತಿಂಗಳ ವೇತನವನ್ನು ನೀಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

    ಭಜರಂಗ್ ರೈಲ್ವೆ ಇಲಾಖೆಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ “ಹರಿಯಾಣ ಕೊರೊನಾ ಪರಿಹಾರ ನಿಧಿಗೆ” ಕೊಡುಗೆ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    2019ರ ವಿಶ್ವ ಚಾಂಪಿಯನ್‍ಶಿಪ್ ಕಂಚಿನ ಪದಕ ವಿಜೇತ ಭಜರಂಗ್ ಪೂನಿಯಾ ಅವರ ಪ್ರಯತ್ನ ಶ್ಲಾಘನೀಯ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾರ್ವಜನಿಕ ಸೇವೆಗಳನ್ನು ಒದಗಿಸಲು ಹರಿಯಾಣ ಸರ್ಕಾರ ಸೋಮವಾರ ಸ್ವಯಂಪ್ರೇರಿತ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಕೋವಿಡ್-19 ಅನ್ನು ನಿರ್ಮಾಣ ಮಾಡಲು ”ಕೋವಿಡ್ – ಸಂಘರ್ಷ ಸೇನಾನಿ” ಎಂಬ ಕಾರ್ಯಕ್ರಮವನ್ನು ಸೋಮವಾರ ಪ್ರಾರಂಭಿಸಲಾಗಿದೆ.

    ಭಾರತದ ಮಾಜಿ ಆರಂಭಿಕ ಮತ್ತು ಬಿಜೆಪಿ ಶಾಸಕ ಗೌತಮ್ ಗಂಭೀರ್ ಅವರು ಕೂಡ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಅವರ ತಮ್ಮ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ(ಎಂಪಿಎಲ್‍ಎಡಿಎಸ್) ನಿಧಿಯಿಂದ 50 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಅಗತ್ಯ ಸಲಕರಣೆಗಳಿಗಾಗಿ ದೆಹಲಿ ಸರ್ಕಾರಿ ಆಸ್ಪತ್ರೆಗಳಿಗೆ ನೀಡಿದ್ದಾರೆ.

  • ಸಂಬಳ ಹೆಚ್ಚು ಕೇಳಿದ ಚಾಲಕನ ಮೇಲೆ ಕಲ್ಲು ಎತ್ತಾಕಿ, ದೇಹ ಸುಟ್ಟ ಮಾಲೀಕ

    ಸಂಬಳ ಹೆಚ್ಚು ಕೇಳಿದ ಚಾಲಕನ ಮೇಲೆ ಕಲ್ಲು ಎತ್ತಾಕಿ, ದೇಹ ಸುಟ್ಟ ಮಾಲೀಕ

    – ಅರ್ಧಂಬರ್ಧ ಸುಟ್ಟ ಮೃತದೇಹ ಕೆರೆಗೆ ಎಸೆದ

    ಬೆಂಗಳೂರು: ಸಂಬಳ ಹೆಚ್ಚು ಕೇಳಿದಕ್ಕೆ ಚಾಲಕನ ಮೇಲೆ ಮಾಲೀಕ ಹಾಗೂ ಆತನ ಸ್ನೇಹಿತ ಕಲ್ಲು ಎತ್ತಾಕಿ ಕೊಲೆಗೈದು, ಮೃತದೇಹ ಸುಟ್ಟು, ಅರ್ಧಂಬರ್ಧ ಸುಟ್ಟ ಮೃತದೇಹವನ್ನು ರಾಮ್‍ಪುರ ಕೆರೆಯಲ್ಲಿ ಎಸೆದ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.

    ಮಾರ್ಚ್ 10ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪ್ಯಾಕರ್ಸ್ ಅಂಡ್ ಮೂವರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಚಿಂತಾಮಣಿ ನಿವಾಸಿ ಕೃಷ್ಣ ಹಾಗೂ ಹಲಸೂರು ನಿವಾಸಿ ಮಾಯಾಕೃಷ್ಣ ಎಂದು ಗುರುತಿಸಲಾಗಿದೆ. ಕೃಷ್ಣ ನಡೆಸುತ್ತಿದ್ದ ಕಂಪನಿಯನ್ನು ಚಾಲಕನಾಗಿದ್ದ ಶ್ರೀನಿವಾಸ್ ಪಾರ್ಸೆಲ್‌ಗಳನ್ನು ಗ್ರಾಹಕರ ಮನೆ ಬಾಗಲಿಗೆ ಡೆಲಿವರಿ ಮಾಡುತ್ತಿದ್ದನು.

    ಮಾಚ್ 10ರಂದು ಶ್ರೀನಿವಾಸ್ ಕೃಷ್ಣನ ಬಳಿ ತನಗೆ ಸಂಬಳ ಹೆಚ್ಚಿಗೆ ಮಾಡಿ ಎಂದು ಕೇಳಿದ್ದನು. ಈ ಬಗ್ಗೆ ಆತನ ಜೊತೆ ಕೂತು ಮಾತನಾಡಿ ಮಾಲೀಕ ನಿರ್ಧಾರ ತೆಗೆದುಕೊಳ್ಳುವ ಬದಲು ಚಾಲಕನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದು, ತನ್ನ ಸ್ನೇಹಿತ ಮಾಯಾಕೃಷ್ಣನ ಸಹಾಯ ಪಡೆದು ಚಾಲಕನನ್ನ ಕೊಲೆ ಮಾಡಲು ನಿರ್ಧರಿಸಿದನು.

    ಚಾಲಕ ಮಲಗಿದ್ದ ವೇಳೆ ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೃಷ್ಣ ಹಾಗೂ ಆತನ ಗೆಳೆಯ ಕೊಲೆ ಮಾಡಿದರು. ಬಳಿಕ ಮೃತದೇಹವನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದರು. ಆ ನಂತರ ಈ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ಅರ್ಧಂಬರ್ಧ ಸುಟ್ಟಿದ್ದ ಶವವನ್ನು ರಾಮ್‍ಪುರ ಕೆರೆಯಲ್ಲಿ ಎಸೆದು ಹೋದರು.

    ಆದರೆ ಸ್ಥಳೀಯರು ಕೆರೆ ಬಳಿ ಓಡಾಡುತ್ತಿದ್ದಾಗ ದುರ್ನಾತ ಬರುತ್ತಿದ್ದದನ್ನು ಗಮನಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಕುರಿತು ತನಿಖೆ ಕೈಗೊಂಡಾಗ ಸತ್ಯಾಂಶ ಹೊರಬಿದ್ದಿದೆ.

    ಪ್ರಮುಖ ಆರೋಪಿ ಕೃಷ್ಣನನ್ನು ಸದ್ಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ವಿಚಾರಣೆ ವೇಳೆ ಕೊಲೆ ಮಾಡಲು ಕಾರಣವೇನು? ಹೇಗೆ ಕೊಲೆ ಮಾಡಲಾಯ್ತು ಎಂಬ ವಿಚಾರವನ್ನು ಆರೋಪಿ ಬಾಯಿಬಿಟ್ಟಿದ್ದಾನೆ.

  • ಮಗ ಮನೆ ಬಿಟ್ಟು ಹೊರಗಡೆ ಮಜಾ ಮಾಡುತ್ತಾನೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದ ತಂದೆ

    ಮಗ ಮನೆ ಬಿಟ್ಟು ಹೊರಗಡೆ ಮಜಾ ಮಾಡುತ್ತಾನೆಂದು ಕೋರ್ಟ್ ಮೆಟ್ಟಿಲೇರಿ ಗೆದ್ದ ತಂದೆ

    – ನ್ಯಾಯಮಂಡಳಿ ಖಡಕ್ ಆದೇಶಕ್ಕೆ ತಲೆ ಬಾಗಿದ ಮಗ

    ರಾಯಚೂರು: ದಿನಗೂಲಿ ಕೆಲಸ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೂ ಹಿರಿಯ ಮಗ ಪೋಷಕರ ಜೀವನಕ್ಕೆ ಆಧಾರವಾಗದೆ ಮನೆ ಬಿಟ್ಟು ಬೇರೆಡೆ ಐಶಾರಾಮಿ ಜೀವನ ನಡೆಸುತ್ತಿದ್ದಕ್ಕೆ ತಂದೆ ಮಗನ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಹತ್ತಿ ಗೆದ್ದಿದ್ದಾನೆ.

    ನಗರದ ನಿವಾಸಿ ಬೂದೆಪ್ಪ (ಹೆಸರು ಬದಲಾಯಿಸಲಾಗಿದೆ) ಪ್ರತಿ ದಿನ ಕೂಲಿ ಕೆಲಸ ಮಾಡಿ ಐದು ಜನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ನಾಲ್ಕು ಜನ ಮಕ್ಕಳು ಇನ್ನೂ ಓದುತ್ತಿದ್ದಾರೆ. ಹಿರಿಯ ಮಗ ವರಪ್ರಸಾದ್ (ಹೆಸರು ಬದಲಾಯಿಸಲಾಗಿದೆ) ಓದು ಮುಗಿಸಿ ಮೊಬೈಲ್ ಕಂಪೆನಿಯೊಂದರಲ್ಲಿ ನೆಟ್‍ವರ್ಕ್ ಪ್ಲಾನಿಂಗ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ 43 ಸಾವಿರ ರೂ. ಸಂಬಳ ಬರುತ್ತಿದ್ದು ಮನೆಗೆ ನಯಾಪೈಸೆ ಕೊಡುತ್ತಿರಲಿಲ್ಲ.

    ಕೆಲಸಕ್ಕೆ ಸೇರಿ ಸಂಬಳ ಎಣಿಸಲು ಆರಂಭವಾದ ಮೇಲೆ ಹಿರಿಯ ಮಗ ಮನೆಗೆ ಸರಿಯಾಗಿ ಬಾರದೇ ಹೋಟೆಲ್‍ನಲ್ಲಿಯೇ ಊಟ ಮಾಡಿಕೊಂಡು ಊರು ಊರು ಅಲೆಯುತ್ತಾ ಮನೆಗೆ ಬರುವುದನ್ನೆ ಕಡಿಮೆ ಮಾಡಿದ್ದಾನೆ. ಇದರಿಂದ ಮನೆಯ ಪರಿಸ್ಥಿತಿ ಕಷ್ಟಕರವಾಗಿದ್ದು ತಂದೆ-ತಾಯಿಗೆ ಮನೆ ನಡೆಸುವುದು ಕಷ್ಟವಾಗಿದೆ. ಇದರಿಂದ ಬೇಸತ್ತ ತಂದೆ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಮೆಟ್ಟಿಲೇರಿ ದೂರು ನೀಡಿದ್ದಾರೆ.

    ವಾದ-ವಿವಾದ ಪರಿಶೀಲಿಸಿದ ಪಾಲಕರ ಪೋಷಣೆ, ಸಂರಕ್ಷಣೆ, ಹಿರಿಯ ನಾಗರೀಕರ ರಕ್ಷಣಾ ನ್ಯಾಯ ಮಂಡಳಿ ಹಾಗೂ ರಾಯಚೂರು ಉಪವಿಭಾಗದ ಉಪವಿಭಾಗಾಧಿಕಾರಿ ಸಂತೋಷ್ ಎಸ್ ಕಾಮಗೌಡ ಪೋಷಕರಿಗೆ ಜೀವನಾಂಶ ನೀಡುವಂತೆ ಆದೇಶ ಮಾಡಿದ್ದಾರೆ.

    ಆದೇಶದಲ್ಲೇನಿದೆ?
    ಪ್ರತಿ ತಿಂಗಳು 10ರೊಳಗೆ ಆರ್‌ಟಿಜಿಎಸ್‌ ಮೂಲಕ 20 ಸಾವಿರ ರೂ. ತಂದೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ತಿಂಗಳಿಗೊಮ್ಮೆ ತಂದೆ-ತಾಯಿಯನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಬೇಕು. ಭಾನುವಾರ ದೂರವಾಣಿ ಮೂಲಕ ಸಂಪರ್ಕಿಸಿ ಆರೋಗ್ಯ ವಿಚಾರಿಸಬೇಕು ಎಂದು ಆದೇಶ ನೀಡಲಾಗಿದೆ. ಸ್ವಯಂ ಪ್ರೇರಣೆಯಿಂದ ತಂದೆ ಹಾಗೂ ಮಗ ಒಪ್ಪಿದ್ದರಿಂದ ಈ ಆದೇಶವನ್ನು ಹೊರಡಿಸಲಾಗಿದೆ.

  • ಥಂಬ್ ಮಾಡಿದ್ರೆ ಎರಡೆರಡು ಸಂಬಳ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ‘ಡಬಲ್ ಆ್ಯಕ್ಟಿಂಗ್’ ಬಯಲು

    ಥಂಬ್ ಮಾಡಿದ್ರೆ ಎರಡೆರಡು ಸಂಬಳ- ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ‘ಡಬಲ್ ಆ್ಯಕ್ಟಿಂಗ್’ ಬಯಲು

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತೆರಿಗೆದಾರರ ಹಣ ಪೋಲು ಮಾಡಲು ದಾರಿ ಹುಡುಕಿದೆ. ಪೌರಕಾರ್ಮಿಕರ ಹೆಸರಲ್ಲಿ ಕೋಟಿ ಕೋಟಿ ಲೂಟಿಯಾಗುತ್ತಿದೆ. ನೀವು ಕೆಲಸಕ್ಕೆ ಬರುವ ಅಗತ್ಯವಿಲ್ಲ, ಬರೀ ಥಂಬ್ ಇಂಪ್ರೆಷನ್ ಹಾಕಿ ಹೋದರೆ ಸಾಕು. ಸಂಬಳ ನಿಮ್ ಅಕೌಂಟ್ ಗೆ ಬಂದು ಬೀಳುತ್ತದೆ. ಇದು ಬೇನಾಮಿ ಪೌರಕಾರ್ಮಿಕರ ಜಾಲದ ಎಳೆ ಪತ್ತೆಯಾಗಿದೆ.

    ಸಿನಿಮಾದಲ್ಲಿ ಮಾತ್ರ ಡಬಲ್ ಆ್ಯಕ್ಟಿಂಗ್ ನೋಡಿರುತ್ತೀವಿ, ಆದರೆ ಜಯನಗರದ ಲೋಕೇಶ್ ಎಂಬಾತ ಡಬಲ್ ಸಂಬಳಕ್ಕಾಗಿ ಏಕಕಾಲದಲ್ಲಿ ಡಬಲ್ ರೋಲ್ ಪ್ಲೇ ಮಾಡುತ್ತಾ ಇರುವುದು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.

    ಜಯನಗರದ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ವಾಹನಗಳ ನಿಲುಗಡೆ ಮೇಲ್ವಿಚಾರಣೆ ಸಿಬ್ಬಂದಿಯಾಗಿರುವ ಲೋಕೇಶ್ ಬೆಳಗ್ಗೆ 8 ಗಂಟೆಯಾದರೆ ಸಾಕು ಡಬಲ್ ಡ್ಯೂಟಿ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡಿ ಪೌರಕಾರ್ಮಿಕ ಕೆಲಸ ಮಾಡಿದ್ದೀನಿ ಎಂದು ಡಬಲ್ ಸಂಬಳ ಪಡೆಯುತ್ತಾರೆ. ಖಾಸಗಿ ಆಸ್ಪತ್ರೆ ಉದ್ಯೋಗಿ ಶಾಕಂಬರಿ ನಗರ ವಾರ್ಡ್ ಬಿಬಿಎಂಪಿ ಕಚೇರಿಯಲ್ಲಿ ಪೌರಕಾರ್ಮಿಕ ಕೆಲಸ ಮಾಡಿದ್ದೀನಿ ಎಂದು ಬೆರಳಚ್ಚು ಹಾಜರಾತಿ ಹಾಕಿದರು ಕೇಳುವವರು ಇಲ್ಲದಂತಾಗಿದೆ.

    ಪೊರಕೆ ಹಿಡಿಯಲಿಲ್ಲ, ಕೆಲಸ ಮಾಡಿಲ್ಲ ಆದರೆ ಸಂಬಳ ಮಾತ್ರ 3 ವರ್ಷಗಳಿಂದ ಲೋಕೇಶ್ ಅಕೌಂಟ್ ಗೆ ಪಕ್ಕಾ ಬೀಳ್ತಾ ಇದೆ. ಸಾವಿರಾರು ಮಂದಿ ಬಯೋಮೆಟ್ರಿಕ್ ಫೇಕ್ ಮಾಡಿ ಮಿಸ್ ಯೂಸ್ ಮಾಡುತ್ತಿದ್ದಾರೆ. ಈ ಸತ್ಯವನ್ನ ಖುದ್ದು ಪೌರಕಾರ್ಮಿಕರ ಕೆಲಸಗಳನ್ನ ನೋಡಿಕೊಳ್ಳಬೇಕಾದ ಮೇಲ್ವಿಚಾರಕ ಕುಮಾರ್ ಬಾಯಿಬಿಟ್ಟಿದ್ದಾರೆ.

    ಪೌರಕಾರ್ಮಿಕರ ಸಂಖ್ಯೆ ಹಾಗೂ ತಪ್ಪು ಲೆಕ್ಕದಿಂದ ಸೋರಿಕೆ ತಡೆಯಲು ಈ ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಗೆ ಸೂಚನೆ ನೀಡಿದೆ. ಆದರೆ ಆರೋಗ್ಯಾಧಿಕಾರಿಗಳೇ ಫೇಕ್ ಪೌರಕಾರ್ಮಿಕರ ಸೃಷ್ಟಿಸಿ ಎಟಿಎಂ ಕಾರ್ಡ್ ಕಸಿದು ತಮ್ಮ ಬಳಿ ಇಟ್ಟುಕೊಂಡು ಸಂಬಳದಲ್ಲಿ 50-50 ಸಂಬಳ ಡಿವೈಡ್ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ತ್ಯಾಗರಾಜು ಆರೋಪಿಸಿದ್ದಾರೆ.

    ಇಷ್ಟಕ್ಕೆ ಸುಮ್ಮನಾಗದೇ ಪಾಲಿಕೆಗೆ ವಂಚಿಸುತ್ತಿರುವ ಲೋಕೇಶ್ ಅವರನ್ನೇ ಮಾತಿಗೆ ಎಳೆದಾಗ ಸತ್ಯವನ್ನ ಒಪ್ಪಿಕೊಂಡಿದ್ದಾರೆ.
    ಪ್ರತಿನಿಧಿ – ಏನ್ ಕೆಲಸ ಮಾಡ್ತೀರಾ
    ಲೋಕೇಶ್ – ಆಸ್ಪತ್ರೆ ಡ್ಯೂಟಿ ಮಾಡ್ತೀನಿ
    ಪ್ರತಿನಿಧಿ – ಬಿಬಿಎಂಪಿ ಥಂಬ್ ಯಾಕೆ ಹಾಕ್ತೀರಾ
    ಲೋಕೇಶ್ – ಅದು ನಮ್ ಅಪ್ಪನ ಕೆಲಸ ಮಾಡ್ತಾ ಇದ್ದೀನಿ

    ಪ್ರತಿನಿಧಿ – ತಪ್ಪಲ್ವ ಎರಡೆರಡು ಸಂಬಳ
    ಲೋಕೇಶ್ – ಅಲ್ಲಿ ಸಂಬಳ ನಾನ್ ತಗೋತ್ತಿಲ್ಲ
    ಪ್ರತಿನಿಧಿ – ಮತ್ಯಾರಿಗೆ, ನಿಮ್ ಎಟಿಎಂ ಕಾರ್ಡ್ ಯಾರ ಹತ್ರ ಇದೆ..?
    ಲೋಕೇಶ್ – ಗೊತ್ತಿಲ್ಲ ಅಪ್ಪನ ಕೇಳಿ ಹೇಳ್ತೀನಿ

    ಪೌರಕಾರ್ಮಿಕರಿಗೆ ವಂಚನೆಯಾಗಬಾರದೆಂದು ಬಿಬಿಎಂಪಿ ನೇರ ವೇತನಕ್ಕೆ ಮುಂದಾಗಿದೆ. ಇದರಿಂದ ಪಾಲಿಕೆಗೆ ಆಗುತ್ತಿರುವ ಖರ್ಚಿನ ವಿವರ ಹೀಗಿದೆ…
    * ಬಿಬಿಎಂಪಿ ಪೌರಕಾರ್ಮಿಕರು 2 ಸಾವಿರ ತಲಾ35 ಸಾವಿರ ಒಟ್ಟು 7 ಕೋಟಿ
    * ಗುತ್ತಿಗೆ ಪೌರಕಾರ್ಮಿಕರು 16 ಸಾವಿರ ತಲಾ 18 ಸಾವಿರ ಒಟ್ಟು 28 ಕೋಟಿ

    * ಪೌರಕಾರ್ಮಿಕರ ಸಂಬಳಕ್ಕಾಗಿ ತಿಂಗಳಿಗೆ 35 ಕೋಟಿ ಖರ್ಚು
    * ಪೌರಕಾರ್ಮಿಕರಿಗೆ ನೇರ ವೇತನ ಮೂಲಕ ಮಧ್ಯವರ್ತಿಗಳ ತಡೆಯಾಗಲಿತು
    * ಬಯೋಮೆಟ್ರಿಕ್ ಮೂಲಕ ಫೇಕ್ ಪೌರಕಾರ್ಮಿಕರ ತಡೆಯಲು ಯತ್ನ

    ಹೀಗೆ ಬಯೋಮೆಟ್ರಿಕ್‍ಗೆ ದೋಖಾ ಮಾಡಿರುವ ಜಾಲವನ್ನ ಪಬ್ಲಿಕ್ ಟಿವಿ ಬಯಲಿಗೆಳೆದಿದೆ. ಈಗ ಪಾಲಿಕೆ ಮುಂದಿನ ಕ್ರಮ ಏನು ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಚಾಲಕ, ನಿರ್ವಾಹಕರಿಗೆ ಹಬ್ಬಕ್ಕೂ ಸಿಗ್ಲಿಲ್ಲ ಸಂಬಳ- ನೌಕರರ ಕ್ಷಮೆಯಾಚಿಸಿದ ಡಿಸಿಎಂ ಲಕ್ಷ್ಮಣ ಸವದಿ

    ಚಾಲಕ, ನಿರ್ವಾಹಕರಿಗೆ ಹಬ್ಬಕ್ಕೂ ಸಿಗ್ಲಿಲ್ಲ ಸಂಬಳ- ನೌಕರರ ಕ್ಷಮೆಯಾಚಿಸಿದ ಡಿಸಿಎಂ ಲಕ್ಷ್ಮಣ ಸವದಿ

    ಚಿತ್ರದುರ್ಗ: ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾತಿಗೆ ಈಗ ಡಿಸಿಎಂ ಸವದಿ ದನಿಗೂಡಿಸಿದ್ದಾರೆ. ಬಿಎಂಟಿಸಿ, ಕೆಎಸ್‍ಆರ್ ಟಿಸಿಯ ಚಾಲಕ-ನಿರ್ವಾಹಕರಿಗೆ ಇನ್ನೂ ಸಂಬಳ ಆಗಿಲ್ಲ. ಕೇವಲ ಅಧಿಕಾರಿಗಳಿಗೆ ಮಾತ್ರ ಆಗಿದ್ದು, ಹಬ್ಬದಲ್ಲಿ ಬೋನಸ್, ಸ್ವೀಟ್ಸ್ ನಿರೀಕ್ಷೆಯಲ್ಲಿದ್ದ ಶ್ರಮಿಕ ವರ್ಗಕ್ಕೆ ಶಾಕ್ ಆಗಿದೆ.

    ಈ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿ ಅವರು, ಸಾರಿಗೆ ನೌಕರರ ಕ್ಷಮೆಯಾಚಿಸಿದರು. ಹಬ್ಬಕ್ಕೆ ಮುಂಚಿತವಾಗಿ ಸಂಬಳ ನೀಡಬೇಕಿತ್ತು. ಆದರೆ ಸಾರಿಗೆ ನಿಗಮದಲ್ಲಿ ಹಣದ ಕೊರತೆ ಇದ್ದು, ಅ.9ಕ್ಕೆ ಸಂಬಳ ಸಂದಾಯ ಮಾಡುತ್ತೇವೆ. ಹುಬ್ಬಳ್ಳಿ, ಕಲಬುರಗಿ ವಿಭಾಗದಲ್ಲಿ ಸಂಬಳ ತಡವಾಗಿದೆ. ಚಾಲಕ, ನಿರ್ವಾಹಕರು ಸಹಕಾರ ನೀಡಲು ಮನವಿ ಮಾಡುತ್ತೇನೆ ಎಂದರು.

    ಇದೇ ವೇಳೆ ಬಿಜೆಪಿ ನಾಯಕರ ಸಭೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಎಸ್‍ವೈ ಪ್ರಶ್ನಾತೀತ ನಾಯಕರಾಗಿದ್ದು, ಈಗಲೂ ಯಡಿಯೂರಪ್ಪ ನಮ್ಮ ನಾಯಕರು, ಮುಂದೆಯೂ ನಾಯಕರು. ಅವರ ಕೈ ಬಲಪಡಿಸುವ ಕಾರ್ಯ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕೇಂದ್ರದಿಂದ ಹೆಚ್ಚಿನ ನೆರೆ ಪರಿಹಾರದ ಸಿಗುವ ವಿಶ್ವಾಸವಿದೆ ಎಂದರು.

  • 9 ರೂ.ಗಾಗಿ 15 ಲಕ್ಷ ಕಳೆದುಕೊಂಡ ಕಂಡಕ್ಟರ್

    9 ರೂ.ಗಾಗಿ 15 ಲಕ್ಷ ಕಳೆದುಕೊಂಡ ಕಂಡಕ್ಟರ್

    ಅಹಮದಾಬಾದ್: ಗುಜರಾತ್ ಸಾರಿಗೆ ಸಂಸ್ಥೆಯ ನಿರ್ವಾಹಕನೋರ್ವ 9 ರೂ. ಆಸೆಗಾಗಿ ಅಂದಾಜು 15 ಲಕ್ಷ ರೂ. ಕಳೆದುಕೊಂಡಿದ್ದಾನೆ. ಪ್ರಯಾಣಿಕನಿಂದ 9 ರೂ.ಪಡೆದು ಟಿಕೆಟ್ ನೀಡದ್ದಕ್ಕೆ ಆತನ ಸಂಬಳದಿಂದ 15 ಲಕ್ಷ ರೂ.ಗೆ ಕತ್ತರಿ ಹಾಕಲಾಗಿದೆ.

    ಏನಿದು ಪ್ರಕರಣ?
    ನಿರ್ವಾಹಕ ಚಂದ್ರಕಾಂತ್ ಪಟೇಲ್ ವಿರುದ್ಧ ಪ್ರಯಾಣಿಕರಿಗೆ ಟಿಕೆಟ್ ನೀಡದ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಗುಜರಾತಿನ ಸಾರಿಗೆ ಇಲಾಖೆ ವಿಶೇಷ ಸಮಿತಿಯನ್ನು ರಚಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ಸಮಿತಿ ಚಂದ್ರಕಾಂತ್ ದೋಷಿ ಎಂದು ಹೇಳಿತ್ತು. ದೋಷಿ ಎಂದು ಸಾಬೀತಾದ ಬೆನ್ನಲ್ಲೇ ಸಾರಿಗೆ ನಿಗಮ ಮಂಡಳಿ ಆತನ ಸಂಬಳದ ಎರಡು ಏರಿಕೆಯನ್ನು ಕಡಿತಗೊಳಿಸಿತ್ತು. ಸಾರಿಗೆ ಸಂಸ್ಥೆ ನಿರ್ಧರಿಸುವ ಸಂಬಳಕ್ಕೆ ಚಂದ್ರಕಾಂತ್ ತನ್ನ ವೃತ್ತಿಯನ್ನು ಪೂರ್ಣಗೊಳಿಸಬೇಕೆಂದು ಆದೇಶಿಸಿತ್ತು.

    2003 ಜುಲೈ 5ರಂದು ಚಂದ್ರಕಾಂತ್ ಪಟೇಲ್ ಕಾರ್ಯನಿರ್ವಹಿಸುತ್ತಿದ್ದ ಬಸ್ ಮಾರ್ಗ ಮಧ್ಯೆ ಪರಿಶೀಲನೆಗೆ ಒಳಪಟ್ಟಿತ್ತು. ಓರ್ವ ಪ್ರಯಾಣಿಕನಿಂದ 9 ರೂ. ಪಡೆದಿದ್ದ ಚಂದ್ರಕಾಂತ್ ಪಟೇಲ್ ಟಿಕೆಟ್ ನೀಡಿರಲಿಲ್ಲ. ಚಂದ್ರಕಾಂತ್ ವಿರುದ್ಧ ಸಾರಿಗೆ ನಿಗಮದಲ್ಲಿ ಪ್ರಕರಣ ದಾಖಲಾಗಿತ್ತು.

    ಹೈಕೋರ್ಟ್ ಮೆಟ್ಟಿಲೇರಿದ ಚಂದ್ರಕಾಂತ್:
    ದೂರು ದಾಖಲಾದ ಒಂದು ತಿಂಗಳ ಬಳಿಕ ಚಂದ್ರಕಾಂತ್ ದೋಷಿ ಎಂದು ನಿಗಮ ಮಂಡಳಿ ಆದೇಶಿಸಿ ಆತನ ಸಂಬಳದ ಕೆಲ ಮೊತ್ತವನ್ನು ಕಡಿತಗೊಳಿಸಿತ್ತು. ಸಾರಿಗೆ ನಿಗಮದ ತೀರ್ಪು ಪ್ರಶ್ನಿಸಿ ಔದ್ಯೋಗಿಕ ನ್ಯಾಯಧೀಕರಣ ಮತ್ತು ಹೈ ಕೋರ್ಟ್ ಮೊರೆ ಹೋಗಿದ್ದ ಚಂದ್ರಕಾಂತ್ ಗೆ ಅಲ್ಲಿಯೂ ದೋಷಿ ಎಂದು ಪರಿಗಣಿಸಲಾಗಿತ್ತು. ಹಾಗೆ ಗುಜರಾತಿನ ಸಾರಿಗೆ ಸಂಸ್ಥೆಯ ತೀರ್ಪನ್ನು ಎತ್ತಿ ಹಿಡಿದು, ಚಂದ್ರಕಾಂತ್ ಸಲ್ಲಿಸಿದ ಎರಡೂ ಕಡೆ ಅರ್ಜಿ ವಜಾಗೊಂಡಿತ್ತು.

    ಈ ಕುರಿತು ಪ್ರತಿಕ್ರಿಯಿಸಿರುವ ಚಂದ್ರಕಾಂತ್ ಪರ ವಕೀಲರು, ಇಷ್ಟು ಚಿಕ್ಕ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ. ಸಾರಿಗೆ ಸಂಸ್ಥೆ ನೀಡಿರುವ ಶಿಕ್ಷೆಯಿಂದ ನನ್ನ ಕಕ್ಷಿದಾರರ ವೃತ್ತಿ ಜೀವನದಲ್ಲಿ 15 ಲಕ್ಷ ರೂ. ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ನಿರ್ವಾಹಕ ಚಂದ್ರಕಾಂತ್ ಹಣದ ವಿಚಾರಕ್ಕೆ ಸಂಬಂಧಿಸಿದಂತೆ 35 ಪ್ರಕರಣಗಳನ್ನು ಎದುರಿಸಿದ್ದಾರೆ. ಹಲವು ಬಾರಿ ಸಾಮಾನ್ಯ ಶಿಕ್ಷೆ ಮತ್ತು ಸಣ್ಣ ಪ್ರಮಾಣದ ದಂಡವನ್ನು ವಿಧಿಸಲಾಗಿತ್ತು ಎಂದು ಸಾರಿಗೆ ಸಂಸ್ಥೆ ಪರ ವಕೀಲರು ಪ್ರತಿಕ್ರಿಯಿಸಿದ್ದಾರೆ.

  • ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್- ಎಷ್ಟು ಸಂಬಳ ಏರಿಕೆ ಆಗುತ್ತೆ?

    ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್- ಎಷ್ಟು ಸಂಬಳ ಏರಿಕೆ ಆಗುತ್ತೆ?

    ಬೆಂಗಳೂರು: ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸು ವರದಿಗೆ ಸಹಿ ಹಾಕುವ ಮೂಲಕ ರಾಜ್ಯ ಪೊಲೀಸರಿಗೆ ಸಿಎಂ ಸಿಹಿ ಸುದ್ದಿ ಕೊಟ್ಟಿದ್ದಾರೆ.

    ಸಿಎಂ ಔರಾದ್ಕರ್ ವರದಿಗೆ ಸಹಿ ಇಂದು ಸಹಿ ಹಾಕಿದ್ದು, ಪೊಲೀಸರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಔರಾದ್ಕರ್ ವರದಿಯ ಫೈಲ್ ಈಗಾಗಲೇ ಆರ್ಥಿಕ ಇಲಾಖೆಯ ಕಚೇರಿ ತಲುಪಿದ್ದು, ಇಲಾಖೆಯ ಒಪ್ಪಿಗೆಯೊಂದೇ ಬಾಕಿ ಇದೆ. ಇಂದು ಅಥವಾ ನಾಳೆಯ ಒಳಗಾಗಿ ಪೊಲೀಸರ ಬಹುದಿನದ ಬೇಡಿಕೆ ಈಡೇರಲಿದೆ.

    ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರವು ಗುರುವಾರ ವಿಶ್ವಾಸಯಾಚನೆ ಮಾಡಲಿದೆ. ಇದಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗಲೇ ಔರಾದ್ಕರ್ ವರದಿಗೆ ಸಹಿ ಹಾಕಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಗೃಹಸಚಿವ ಎಂ.ಬಿ.ಪಾಟೀಲ್ ಅವರು, ರಾಜ್ಯ ಪೊಲೀಸರ ದಶಕದ ಬೇಡಿಕೆಯಾಗಿದ್ದ ಔರಾದ್ಕರ್ ಸಮಿತಿಯನ್ನು ಪ್ರಸ್ತುತ ಸರ್ಕಾರದಲ್ಲಿ ನಾವು ಜಾರಿ ಮಾಡಿದ್ದೇವೆ. ಇದು ಸಿಬ್ಬಂದಿಯ ಕಲ್ಯಾಣಕ್ಕೆ ನಮಗಿರುವ ಬದ್ಧತೆಯನ್ನು ತೋರಿಸುತ್ತದೆ. ಸಮಸ್ತ ಪೊಲೀಸ್ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ನಾನು ಎಂದೆಂದೂ ಈ ವರದಿಯ ಅನುಷ್ಠಾನಕ್ಕೆ ಬದ್ಧನಾಗಿದ್ದೆ, ವರದಿಯ ಜಾರಿ ನನಗೆ ಅತ್ಯಂತ ಹರ್ಷ ತಂದಿದೆ ಎಂದು ತಿಳಿಸಿದ್ದಾರೆ.

    ಎಷ್ಟು ಏರಿಕೆಯಾಗಬಹುದು?
    ಔರಾದ್ಕರ್ ವರದಿ ಅನ್ವಯ ನೂತನ ವೇತನ ಪರಿಷ್ಕಣೆಯಿಂದ ಪೊಲೀಸ್ ರಿಸರ್ವ್ ಕಾನ್‍ಸ್ಟೆಬಲ್ 23,500ರಿಂದ 47,650 ರೂ. ಆಗಲಿದೆ. ಹೆಡ್ ಕಾನ್‍ಸ್ಟೇಬಲ್‍ಗೆ 27,650ದಿಂದ 52,650 ರೂ. ಏರಿಕೆಯಾಗಲಿದೆ. ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ಅವರಿಗೆ 30,350 ದಿಂದ 58,250 ರೂ. ವೇತನ ಹೆಚ್ಚಲಿದೆ. ಇನ್ಸ್‍ಪೆಕ್ಟರ್‍ಗೆ 43,100ರಿಂದ 83,900 ರೂ., ಎಸ್‍ಪಿ (ಐಪಿಎಸ್ ಹೊರತು ಪಡಿಸಿ) 70,850ದಿಂದ 1,07,100 ರೂ. ಏರಿಕೆ ಆಗಲಿದೆ. ಈ ನೂತನ ವೇತನವು ಆಗಸ್ಟ್ 1 ರಿಂದ ಅನ್ವಯವಾಗಲಿದೆ ಎನ್ನಲಾಗಿದೆ.

    ಈಗೀನ ಪೇ ಸ್ಕೇಲ್ ಪ್ರಕಾರ ಪೊಲೀಸ್ ಕಾನ್‍ಸ್ಟೇಬಲ್, ರಿಸರ್ವ್ ಕಾನ್ಸ್ ಟೇಬಲ್‍ಗೆ 12,500ದಿಂದ 24,000 ರೂ., ಹೆಡ್ ಕಾನ್ಸ್‍ಸ್ಟೇಬಲ್‍ಗೆ 14,559ರಿಂದ 26,700 ರೂ., ಅಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ 16,000ದಿಂದ 29,600 ರೂ., ಇನ್ಸ್‍ಪೆಕ್ಟರ್ 22,800ರಿಂದ 43,200 ರೂ., ಹಾಗೂ ಎಸ್‍ಪಿ (ಐಪಿಎಸ್ ಹೊರತು ಪಡಿಸಿ) 38,100-55,200 ರೂ. ಇದೆ.

    ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ವೇಳೆ ಸಾವಿರಾರು ಭಕ್ತರು ದರ್ಶನಕ್ಕೆ ಆಗಮಿಸಿದ್ದರು. ಆಗ ಪೊಲೀಸರು ಭಾರೀ ಭದ್ರತೆ ಒದಿಸುವ ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಿಎಂ ಬಜೆಟ್ ನಲ್ಲಿ ಔರಾದ್ಕರ್ ವರದಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು. ಇದಾದ ಬಳಿಕ ಗೃಹ ಸಚಿವ ಎಂಬಿ ಪಾಟೀಲ್ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.

    ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಪೊಲೀಸರ ವೇತನವನ್ನು ಶೇ.30 ಏರಿಕೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

  • ಸಂಬಳ ಕೇಳಿದ ಮಹಿಳೆಯನ್ನು ನಡುರಸ್ತೆಯಲ್ಲಿ ಕೂದಲು ಎಳೆದಾಡಿ ಹಲ್ಲೆ ನಡೆಸಿದ್ರು!

    ಸಂಬಳ ಕೇಳಿದ ಮಹಿಳೆಯನ್ನು ನಡುರಸ್ತೆಯಲ್ಲಿ ಕೂದಲು ಎಳೆದಾಡಿ ಹಲ್ಲೆ ನಡೆಸಿದ್ರು!

    ನವದೆಹಲಿ: ಸಂಬಳ ಕೇಳಿದ ಮಹಿಳೆಯ ಮೇಲೆ ಯುವಕರು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲ್ಲೆಗೊಳಗಾದ ಯುವತಿ ಗ್ರೇಟರ್ ನೋಯ್ಡಾದ ನಾಲೇಜ್ ಪಾರ್ಕ್ ಬಳಿಯ ಯುನಿಸೆಕ್ಸ್ ಸಲೂನ್ ನಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದರು.

    ಮೇ 12ರಂದು ಸಲೂನ್ ಮಾಲೀಕನ ಬಳಿ ಮಹಿಳೆ ಸಂಬಳ ಕೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಮಾಲೀಕ ತನ್ನ ಯುವಕರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಕೂದಲು ಹಿಡಿದು ಯುವಕರು ದೊಣ್ಣೆಯಿಂದ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಜನರು ಸಹಾಯಕ್ಕೆ ಮುಂದಾಗದೇ ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ.

    ಸಲೂನ್ ನಲ್ಲಿ ಮಹಿಳೆ ಧರಿಸಿದ್ದ ಟೀ ಶರ್ಟ್ ಎಳೆಯಲು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಯುವಕರು ಅತ್ಯಾಚಾರಕ್ಕೂ ಮುಂದಾಗಿದ್ದರು. ಕೊನೆಗೆ ಮಹಿಳೆ ಭಯಗೊಂಡು ಹೊರಗಡೆ ಬಂದಿದ್ದರಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸೋಮವಾರ ಮಹಿಳೆ ನಾಲೇಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಲಭ್ಯವಾಗಿದೆ. ಮಹಿಳೆ ನೀಡಿದ ದೂರು ಆಧರಿಸಿ ಸಲೂನ್ ಮಾಲೀಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ನಾಪತ್ತೆಯಾಗಿದ್ದು, ಅವರನ್ನು ಸಹ ಶೀಘ್ರದಲ್ಲಿಯೇ ಬಂಧಿಸಲಿದ್ದೇವೆ ಎಂದು ಹಿರಿಯ ಪೊಲೀಸ್ ಆಧಿಕಾರಿ ತಿಳಿಸಿದ್ದಾರೆ.

  • ನನಗೆ ಈಗಲೂ ನನ್ನ ತಾಯಿ ಹಣ ನೀಡ್ತಾರೆ: ಮೋದಿ

    ನನಗೆ ಈಗಲೂ ನನ್ನ ತಾಯಿ ಹಣ ನೀಡ್ತಾರೆ: ಮೋದಿ

    ನವದೆಹಲಿ: ನನಗೆ ಈಗಲೂ ನನ್ನ ತಾಯಿಯೇ ಹಣ ನೀಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಟ ಅಕ್ಷಯ್ ಕುಮಾರ್ ಅವರು ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಅವರು ನೀವು ನಿಮ್ಮ ಸಂಬಳದ ಹಣವನ್ನು ನಿಮ್ಮ ತಾಯಿಗೆ ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮೋದಿ ಅವರು ಈಗಲೂ ನನ್ನ ತಾಯಿ ನನಗೆ ಹಣ ನೀಡುತ್ತಾರೆ. ನಾನು ಅವರನ್ನು ಭೇಟಿ ಮಾಡಲು ಹೋದಾಗ ಅವರು ನನಗೆ ಹಣ ನೀಡುತ್ತಾರೆ ಎಂದರು.

    ನನ್ನ ತಾಯಿ ನನ್ನಿಂದ ಏನೂ ಬಯಸುವುದಿಲ್ಲ. ಅವರಿಗೆ ಆ ಅವಶ್ಯಕತೆ ಕೂಡ ಇಲ್ಲ. ನಾನು ಮುಖ್ಯಮಂತ್ರಿ ಆದಾಗಿನಿಂದ ನನ್ನ ಕುಟುಂಬದ ಖರ್ಚು ಸರ್ಕಾರದ ಮೇಲೆ ಇಲ್ಲ. ಬೇರೆ ಮುಖ್ಯಮಂತ್ರಿ ಕುಟುಂಬದವರಿಗೆ ಮೆಡಿಕಲ್ ಖರ್ಚು ಸಿಗುತ್ತದೆ. ಆದರೆ ನಮ್ಮ ಕುಟುಂಬದವರು ಇದನ್ನು ಯಾವುದು ತೆಗೆದುಕೊಂಡಿಲ್ಲ. ಹಾಗಂತ ನಾನು ನನ್ನ ಕುಟುಂಬವನ್ನು ನಿರ್ಲಕ್ಷಿಸಿ ಇಲ್ಲ. ನಾನು ಮುಖ್ಯಮಂತ್ರಿ ಆದ ದಿನದಿಂದ ನನ್ನ ದೇಶವನ್ನು ನಾನು ಕುಟುಂಬ ಎಂದುಕೊಂಡಿದ್ದೇನೆ ಎಂದು ಹೇಳಿದರು.

  • ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಸಂಬಳ ನೀಡದ ಮಾಲೀಕನೇ ಕಿಡ್ನ್ಯಾಪ್

    ಬೆಂಗಳೂರು: ಸಂಬಳ ನೀಡದ ಮಾಲೀಕನನ್ನು ಕಾರ್ಮಿಕರೇ ಕಿಡ್ನ್ಯಾಪ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಬೆಂಗಳೂರಿನ ಹಲಸೂರಿನಲ್ಲಿ ಇನ್ಪೂಟಿಕ್ ಸಾಫ್ಟ್ ವೇರ್ ಕಂಪನಿ ಮಾಲೀಕ ಸುಜಯ್ ಎಂಬವರನ್ನು ಕಾರ್ಮಿಕರು ಅಪಹರಣ ಮಾಡಿದ್ದಾರೆ. ಮಾಲೀಕ ಸುಜಯ್ ಕಳೆದ ಮೂರು ತಿಂಗಳಿನಿಂದ ಕಾರ್ಮಿಕರಿಗೆ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ನೆಪದಲ್ಲಿ ಕಾರ್ಮಿಕರು ಕರೆಸಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ಮದ್ದೂರಿನಲ್ಲಿ ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು.

    ಈ ವೇಳೆ ಮಾಲೀಕ ಸುಜಯ್ ಕಾರ್ಮಿಕರಿಗೆ ಸಂಬಳ ನೀಡುವ ಭರವಸೆ ನೀಡಿದ್ದಾರೆ. ನಂತರ ನಾಲ್ವರು ಕಾರ್ಮಿಕರು ವಾಪಸ್ ಮನೆಗೆ ಬಿಟ್ಟಿದ್ದಾರೆ. ಆದರೆ ಮನೆಗೆ ಬಂದ ಕಂಪನಿ ಮಾಲೀಕ ಸುಜಯ್ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಾಲೀಕ ಸುಜಯ್ ಆಸ್ಪತ್ರೆಯಿಂದಲೂ ನಾಪತ್ತೆಯಾಗಿದ್ದಾರೆ.

    ಮತ್ತೆ ಕಾರ್ಮಿಕರೇ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಈ ಕುರಿತು ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಂಜಯ್, ರಾಕೇಶ್, ನಿರಂಜನ್ ಮತ್ತು ದರ್ಶನ್ ಎಂದು ಗುರುತಿಸಲಾಗಿದೆ. ಆದರೆ ಆರೋಪಿಗಳ ಬಂಧನದ ನಂತರವೂ ಕಂಪನಿ ಮಾಲೀಕ ಸುಜಯ್ ಪತ್ತೆಯಾಗಲಿಲ್ಲ.