Tag: ಸಂಬಳ

  • ಕೊರೊನಾದಿಂದ ಸರ್ಕಾರಿ ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಿದೆ: ಸಚಿವ ಈಶ್ವರಪ್ಪ

    ಕೊರೊನಾದಿಂದ ಸರ್ಕಾರಿ ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಿದೆ: ಸಚಿವ ಈಶ್ವರಪ್ಪ

    ಚಿಕ್ಕಬಳ್ಳಾಪುರ: ಕೊರೊನಾದಿಂದ ರಾಜ್ಯ ಸರ್ಕಾರಕ್ಕೆ ಹಣಕಾಸಿನ ಸಮಸ್ಯೆ ಎದುರಾಗಿದೆ. ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂಬಳ ನೀಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಬಗ್ಗೆ ಸಭೆ ನಡೆಸಿ ಮಾತನಾಡುತ್ತಿದ್ದ ಸಚಿವವರು, ಸಭೆ ನಡುವೆ ಕೊರೊನಾದಿಂದ ಸರ್ಕಾರಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ಸಂಬಳ ಕೊಡೋಕೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಒಂದು ಕಡೆ ನಾವು ಜನರನ್ನು ಮನೆಯಲ್ಲಿರುವಂತೆ ಮನವಿ ಮಾಡುತ್ತೇವೆ. ಅಧಿಕಾರಿಗಳನ್ನು ಮನೆಯಲ್ಲೇ ಇರುವಂತೆ ಹೇಳುತ್ತೇವೆ. ಮತ್ತೊದೆಡೆ ಹಣಕಾಸಿನ ಸಮಸ್ಯೆ ಇದೆ. ಯಾವುದೇ ಹಳ್ಳಿಗಳಿಗೂ ಹೋದರೂ ದಾನ ಧರ್ಮ ಮಾಡುವವರ ಸಂಖ್ಯೆ ಬಹಳ ಇದೆ. ನಮ್ಮ ಸಂಸ್ಕೃತಿಯೇ ನಮ್ಮನ್ನ ಉಳಿಸುತ್ತಿದೆ. ಅಕ್ಕಿಯನ್ನು ಇಲ್ಲ ಅಂತಿದ್ದವರು ಈಗ ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದಾರೆ. ಬಡವರಿಗೆಲ್ಲರಿಗೂ ಸರ್ಕಾರ ಸ್ಪಂದಿಸುತ್ತಿದೆ ಎಂದರು.

    ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರು ಕುಡಿಯುವ ನೀರು ಪೂರೈಕೆಯ ಟ್ಯಾಂಕರ್ ಗಳ ಹಣ ಸೇರಿದಂತೆ ಕೆಲ ಯೋಜನೆಗಳ ಹಣ ಇನ್ನೂ ಬಿಡುಗಡೆಯಾಗಬೇಕಿದೆ ಎಂದು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಮಾತನಾಡಿದ ಈಶ್ವರಪ್ಪ, ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿದೆ. ಹಲವು ಯೋಜನೆಗಳಿಗೆ ಸಕಾಲಕ್ಕೆ ಹಣ ಬಿಡುಗಡೆಯಾಗಿಲ್ಲ. ಸರ್ಕಾರದಲ್ಲಿ ಹಣ ಇದ್ದಿದ್ದರೇ ಒಂದು ವಾರದೊಳಗೆ ಹಣ ಬಿಡುಗಡೆ ಮಾಡಿಕೊಡಿಸುತ್ತಿದೆ. ಆದರೆ ಈಗ ಆ ರೀತಿ ಮಾಡಲು ಆಗುತ್ತಿಲ್ಲ. ಆದರೂ ಕೇಂದ್ರ ಸರ್ಕಾರದಿಂದ ಈ ಬಾರಿ ಒಂದೇ ಕಂತಿನಲ್ಲಿ ಮೊದಲ ಬಾರಿಗೆ 1,861 ಕೋಟಿ ನರೇಗಾ ಹಣ ಬಿಡುಗಡೆಯಾಗಿದೆ. ಹೀಗಾಗಿ ಬಂದ ಹಣವನ್ನು ನಿಮಗೆ ಕೊಡುತ್ತೇವೆ. ಇನ್ನೂ ಇಲ್ಲ ಅಂದಾಗಲೂ ನಿಮಗೆ ಹೇಳಬೇಕಲ್ವಾ ಎಂದು ಹೇಳುತ್ತಿರುವುದಾಗಿ ತಿಳಿಸಿದರು. ನಂತರ ಇದೇ ಮಾತಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆರ್ಥಿಕ ಸಮಸ್ಯೆ ಇರೋದು ನಿಜವಾದ್ರೂ, ಸರ್ಕಾರ ಈ ಸಮಸ್ಯೆಯನ್ನ ಬಗೆಹರಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಆಯುಷ್ ವೈದ್ಯರ, ಸ್ಟಾಫ್ ನರ್ಸ್ ಗಳ ವೇತನ ಹೆಚ್ಚಳ ಮಾಡಿ: ಆಯನೂರು ಮಂಜುನಾಥ್

    ಆಯುಷ್ ವೈದ್ಯರ, ಸ್ಟಾಫ್ ನರ್ಸ್ ಗಳ ವೇತನ ಹೆಚ್ಚಳ ಮಾಡಿ: ಆಯನೂರು ಮಂಜುನಾಥ್

    -ಹೊರಗುತ್ತಿಗೆ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಸ್ವಾಗತ
    -ಈ ರೀತಿ ತಾರತಮ್ಯ ನೀತಿ ಏಕೆ?

    ಶಿವಮೊಗ್ಗ : ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ತಮ್ಮದೇ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ಸೋಂಕಿನ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಜೀವವನ್ನು ಒತ್ತೆ ಇಟ್ಟು ಶ್ರಮದಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಕೇವಲ ಎಂಬಿಬಿಎಸ್ ವೈದ್ಯರ ವೇತನವನ್ನು ಹೆಚ್ಚಳ ಮಾಡಿದೆ, ಅದನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಇವರಷ್ಟೇ ಕೆಲಸ ನಿರ್ವಹಿಸುವ ಆಯುಷ್ ವೈದ್ಯರಿಗೆ, ಸ್ಟಾಫ್ ನರ್ಸ್ ಗಳಿಗೆ ಮಾತ್ರ ಹೆಚ್ಚಳ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ಸರ್ಕಾರವೇ ಈ ರೀತಿ ತಾರತಮ್ಯ ಮಾಡಿದರೇ ಇವರು ಯಾರ ಬಳಿ ನ್ಯಾಯ ಕೇಳಬೇಕು ಎಂದು ಎಂಎಲ್ ಸಿ ಆಯನೂರು ಮಂಜುನಾಥ್ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳ ಮಾಡಿದಂತೆ ಆಯುಷ್ ವೈದ್ಯರು ಹಾಗೂ ಸ್ಟಾಪ್ ನರ್ಸ್ ಗಳ ವೇತನವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ.

  • ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬಲವಂತವಾಗಿ ಪೋಷಕರಿಂದ ಶುಲ್ಕ ವಸೂಲು ಮಾಡುವಂತಿಲ್ಲ – ಖಾಸಗಿ ಶಾಲೆಗಳಿಗೆ ಖಡಕ್ ಸೂಚನೆ

    ಬೆಂಗಳೂರು: ಆರ್ಥಿಕವಾಗಿ ಸಮರ್ಥರಿರುವ ಪೋಷಕರು ಸ್ವಯಂಪ್ರೇರಿತವಾಗಿ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಿಲು ಮುಂದಾದರೆ, ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ನಿರ್ದೇಶನವನ್ನು ಹೊರಡಿಸುವಂತೆ ಸಚಿವ ಸುರೇಶ್ ಕುಮಾರ್ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

    ಕೋವಿಡ್-19 ಲಾಕ್‍ಡೌನ್ ಅವಧಿಯ ಅನಿಶ್ಚಿತತೆಯು ಅನಿರ್ದಿಷ್ಟಾವಧಿಯವರೆಗೆ ಮುಂದುವರೆಯುತ್ತಿರುವುದರಿಂದ ತಮ್ಮ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಕೂಡಾ ತೊಂದರೆಯುಂಟಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡುವಂತೆ ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸಂಘಟನೆಗಳು ಶಿಕ್ಷಣ ಇಲಾಖೆಗೆ ಮನವಿಗಳನ್ನು ಸಲ್ಲಿಸಿದ್ದವು.

    ಈ ಹಿನ್ನೆಲೆಯಲ್ಲಿ ಯಾವ ಪೋಷಕರು ತಮ್ಮ ಮಕ್ಕಳ ಬೋಧನಾ ಶುಲ್ಕವನ್ನು ಕಟ್ಟಲು ಆರ್ಥಿಕವಾಗಿ ಸಮರ್ಥರಿದ್ದಾರೋ, ಯಾವ ಪೋಷಕರು ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಗೆ ಮುಂದಾಗುತ್ತಾರೋ ಅಂತಹ ಪೋಷಕರಿಂದ ಅವರು ಇಚ್ಛಿಸುವ ಸಂಖ್ಯೆಯ ಕಂತುಗಳಲ್ಲಿ ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಶಿಕ್ಷಣ ಕಾಯ್ದೆಯ ಅವಕಾಶಗಳ ಅಡಿಯಲ್ಲಿ ಈ ನಿರ್ದೇಶನವನ್ನು ಹೊರಡಿಸುವಂತೆ ಸಚಿವರು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

    ಯಾವ ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಕಟ್ಟಲು ಅಸಹಾಯಕರೋ, ಸದ್ಯಕ್ಕೆ ತಮಗೆ ಸಾಧ್ಯವಿಲ್ಲವೆಂದು ನಿರಾಕರಿಸುತ್ತಾರೋ ಅಂತಹವರಿಂದ ಯಾವುದೇ ಕಾರಣಕ್ಕೂ ಶುಲ್ಕ ವಸೂಲು ಮಾಡುವ ಹಾಗಿಲ್ಲ. ಒಂದು ವೇಳೆ ಶುಲ್ಕ ಕಟ್ಟಲು ಸಾಧ್ಯವಾಗದ ಪೋಷಕರ ಮೇಲೆ ಒತ್ತಡ ಹೇರುವುದರ ಕುರಿತು ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತೆ. ಪೋಷಕರು ನೀಡುವ ಹಣವನ್ನು ಈ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬ್ಬಂದಿ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆಯನ್ನು ನೀಡಬೇಕು. ಅಲ್ಲದೇ ಈ ಅಂಶವನ್ನು ಶಿಕ್ಷಣ ಇಲಾಖೆಯ ನಿರ್ದೇಶನದಲ್ಲಿ ಸ್ಪಷ್ಟಪಡಿಸಬೇಕೆಂಬ ಸೂಚನೆಯನ್ನು ಸಹ ಸುರೇಶ್ ಕುಮಾರ್ ನೀಡಿದ್ದಾರೆ.

  • ಸರ್ಕಾರಿ ನೌಕರರ ಸಂಬಳ ಕಡಿತವಾಗುತ್ತಾ – ‘ನಿರ್ಧಾರ’ದ ಬಗ್ಗೆ ಸಿಎಂ ಮಾತು

    ಸರ್ಕಾರಿ ನೌಕರರ ಸಂಬಳ ಕಡಿತವಾಗುತ್ತಾ – ‘ನಿರ್ಧಾರ’ದ ಬಗ್ಗೆ ಸಿಎಂ ಮಾತು

    ಬೆಂಗಳೂರು: ಕೊರೊನಾ ವೈರಸ್‍ನಿಂದ ಆಗುತ್ತಿರುವ ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಸರ್ಕಾರಿ ನೌಕರರ ಸಂಬಳ ಕಡಿತವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಗೆ ಸಂಬಂಧಿಸಿದಂತೆ ಸಿಎಂ ಸದ್ಯಕ್ಕೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ಹಣಕಾಸು ಪರಿಸ್ಥಿತಿ ಸರಿ ಇಲ್ಲ. ಆದರೂ ಸರ್ಕಾರಿ ನೌಕರರ ಏಪ್ರಿಲ್ ತಿಂಗಳ ಸಂಬಳ ನಿಲ್ಲಿಸಬೇಡಿ ಎಂದು ಸೂಚಿಸಿದ್ದೇನೆ. ಆದರೆ ಆ ನಂತರದ ತಿಂಗಳ ಬಗ್ಗೆ ಗೊತ್ತಿಲ್ಲ. ಕಟ್ ಮಾಡಬೇಕೇ? ಬೇಡವೇ ಎನ್ನುವ ಬಗ್ಗೆ ಕೊರೊನಾ ಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.

    ಎಷ್ಟು ಕೊಡಬಹುದು, ಎಷ್ಟು ಕಟ್ ಮಾಡಬಹುದು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಇಡೀ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಲ್ಲ. ರಾಜ್ಯಕ್ಕೆ ಬರುವ ಆದಾಯ ಕಡಿಮೆಯಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದೆ. ಮುಂದೇನು ಮಾಡಬೇಕು ಅಂತ ದಿಕ್ಕು ತೋಚದೇ ಕೈ ಕಟ್ಟಿ ಕುಳಿತುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಏ.14ಕ್ಕೆ ಲಾಕ್‍ಡೌನ್ ಮುಗಿಯುತ್ತೆ ಅಂತಾ ಭಾವಿಸಬೇಡಿ: ಸಿಎಂ

    ಕೊರೊನಾ ನಿಯಂತ್ರಣಕ್ಕೆ ಬಂದರೆ 14ರ ನಂತರ ಆರ್ಥಿಕ ಚಟುವಟಿಕೆಗಳು ಆರಂಭಗೊಳ್ಳುತ್ತದೆ. ಅದಕ್ಕಾಗಿ ನಾನು ಜನರ ಜೊತೆ ಕೈಮುಗಿದು ಲಾಕ್‍ಡೌನ್ ನಿಯಮಗಳನ್ನು ಪಾಲಿಸಿ ಎಂಬುದಾಗಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

  • ಒಂದು ತಿಂಗಳ ಸಂಬಳವನ್ನ ಸಿಎಂ ಪರಿಹಾರ ನಿಧಿಗೆ ಕೊಟ್ಟ ಪೊಲೀಸರು

    ಒಂದು ತಿಂಗಳ ಸಂಬಳವನ್ನ ಸಿಎಂ ಪರಿಹಾರ ನಿಧಿಗೆ ಕೊಟ್ಟ ಪೊಲೀಸರು

    ಯಾದಗಿರಿ: ಕೊರೊನಾ ಭೀತಿಯಿಂದ ಲಾಕ್‍ಡೌನ್ ಆದ ದಿನದಿಂದಲೂ ಪೊಲೀಸರು ನಿದ್ದೆ, ಆಹಾರ ಬಿಟ್ಟು ಜನರ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ. ಇದೀಗ ಪೊಲೀಸರು ತಮ್ಮ ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

    ಯಾದಗಿರಿ ಪೊಲೀಸ್ ಅಧಿಕಾರಿಗಳು ಕೊರೊನಾದಿಂದ ತತ್ತರಿಸಿರುವ ರಾಜ್ಯದ ಜನರ ಹಿತಕ್ಕಾಗಿ, ತಮ್ಮ ಒಂದು ತಿಂಗಳ ಸಂಪೂರ್ಣ ಸಂಬಳವನ್ನು ಸಿಎಂ ಪರಿಹಾರ ನಿಧಿಗೆ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ವಿವಿಧ ಠಾಣೆಗಳ ಒಟ್ಟು ನಾಲ್ಕು ಅಧಿಕಾರಗಳು ಮಾರ್ಚ್ ತಿಂಗಳ ಸಂಪೂರ್ಣ ಸಂಬಳವನ್ನು ಕೊರೊನಾ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ.

    ಸುರಪುರ ಡಿವೈಎಸ್‍ಪಿ ವೆಂಕಟೇಶ್ 75 ಸಾವಿರ, ಸಿಪಿಐ ಸಾಹೇಬಗೌಡ 60 ಸಾವಿರ, ಶಹಪುರ ಗ್ರಾಮೀಣ ಸಿಪಿಐ ಶ್ರೀನಿವಾಸ್ 60 ಸಾವಿರ, ಬಿ.ಗುಡಿ ಪಿಎಸ್‍ಐ ರಾಜಕುಮಾರ್ 40 ಸಾವಿರ ದೇಣಿಗೆ ನೀಡಿ ಸಾರ್ಥಕತೆ ಮೆರೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜಿಲ್ಲಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಕೋವಿಡ್ 19 ನಿರ್ಮೂಲನೆಗೆ ಒಂದು ದಿನದ ಸಂಬಳ ನೀಡಲ್ಲ- ಪೊಲೀಸ್ ಸಿಬ್ಬಂದಿ ಪತ್ರ

    ಕೋವಿಡ್ 19 ನಿರ್ಮೂಲನೆಗೆ ಒಂದು ದಿನದ ಸಂಬಳ ನೀಡಲ್ಲ- ಪೊಲೀಸ್ ಸಿಬ್ಬಂದಿ ಪತ್ರ

    – ತೆಲಂಗಾಣದಲ್ಲಿ ಪ್ರೋತ್ಸಾಹ ಧನ, ರಾಜ್ಯದಲ್ಲಿ ಸಂಬಳ ನೀಡಬೇಕಾ?
    – ಅಸುರಕ್ಷತೆಯಲ್ಲೆ ಹಗಲಿರುಳು ದುಡಿಯುವರನ್ನ ಕೇಳುವವರಿಲ್ಲ

    ರಾಯಚೂರು: ಕೊವಿಡ್ 19 ನಿಯಂತ್ರಣಕ್ಕೆ ಒಂದು ದಿನದ ಸಂಬಳ ಕಟ್ ಮಾಡಲಾಗುವುದು. ಯಾರದಾದರೂ ನಿರಾಕರಿಸುತ್ತಿದ್ದರೆ ತಿಳಿಸಿ ಅಂತ ಹೇಳಿದ್ದ ಸರ್ಕಾರಕ್ಕೆ ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿ ಪತ್ರ ಬರೆದಿದ್ದಾರೆ.

    ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಠಾಣಾ ಪಿಎಸ್ ಐ ಮೂಲಕ ಸಿಬ್ಬಂದಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನಿರಾಕರಿಸಿ ಪತ್ರ ಬರೆದಿದ್ದಾರೆ. ಮಾರ್ಚ್ ತಿಂಗಳ ಒಂದು ದಿನದ ಸಂಬಳ ನೀಡಲು ಸರ್ಕಾರ ಕೋರಿತ್ತು. ಆದರೆ ಹಗಲಿರುಳು ರಜೆಯಿಲ್ಲದೆ ಕೊವಿಡ್ 19 ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಸೌಲಭ್ಯಗಳಿಲ್ಲದೆ ನಾವು ಕಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಯಾರೊಬ್ಬರು ಸಹಾಯ ಮಾಡಿಲ್ಲ. ತೆಲಂಗಾಣ ಸರ್ಕಾರ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುರಕ್ಷತೆ ಜೊತೆ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ವಿವಿಧ ಇಲಾಖೆ ಅಧಿಕಾರಿಗಳ ಸಂಬಳ ಬೇಕಾದರೆ ಕಡಿತ ಮಾಡಿ. ಆದರೆ ನಮ್ಮ ಸಂಬಳ ಕಡಿತ ಮಾಡಬೇಡಿ ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ.

    ರಾಯಚೂರು ಮಾತ್ರವಲ್ಲದೆ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯಗಳ ಪೊಲೀಸರು ಸಹ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ದಿನದ ಸಂಬಳ ನೀಡಲು ನೀರಾಕರಿಸುವ ಮೂಲಕ ಸಮರ್ಪಕವಾಗಿ ಔರಾದ್ಕರ್ ವರದಿ ಜಾರಿಗೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ.

  • ರಜೆ, ಸಂಬಳ, ಹಾಜರಿ ಯಾವುದೂ ಬೇಡ – ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ 450 ಎನ್‍ಹೆಚ್‍ಎಂ ಸಿಬ್ಬಂದಿ

    ರಜೆ, ಸಂಬಳ, ಹಾಜರಿ ಯಾವುದೂ ಬೇಡ – ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದ 450 ಎನ್‍ಹೆಚ್‍ಎಂ ಸಿಬ್ಬಂದಿ

    ಉಡುಪಿ: ನ್ಯಾಶನಲ್ ಹೆಲ್ತ್ ಮಷೀನ್ (ಎನ್‍ಎಚ್‍ಎಂ)ನ 24,000 ಸಿಬ್ಬಂದಿ ರಾಜ್ಯದಲ್ಲಿ ಇಂದು ಗಾಂಧಿಗಿರಿ ಮಾಡಿದ್ದಾರೆ. ರಜೆ ತೆಗೆದುಕೊಳ್ಳದೆ ಹಾಜರಿ ಹಾಕದೆ ಸಂಬಳ ತೆಗೆದುಕೊಳ್ಳದೆ ಸೇವೆ ಮಾಡುತ್ತಿದ್ದಾರೆ.

    ಆರೋಗ್ಯ ಇಲಾಖೆಯ ಎನ್‍ಹೆಚ್‍ಎಂನ ಗುತ್ತಿಗೆ ಆಧಾರದ ಸಿಬ್ಬಂದಿಗೆ ಏಪ್ರಿಲ್ 1 ರಂದು ರಜೆ ಕೊಟ್ಟು ತಮ್ಮ ಹುದ್ದೆಯನ್ನು ರಿನಿವಲ್ ಮಾಡುವ ಉದ್ದೇಶವನ್ನು ಎನ್‍ಎಚ್‍ಎಂ ಹೊಂದಿತ್ತು. ಆದರೆ ರಾಜ್ಯದ 25 ಸಾವಿರ, ಉಡುಪಿ ಜಿಲ್ಲೆಯ 450 ಆರೋಗ್ಯ ಇಲಾಖೆಯ ಸಿಬ್ಬಂದಿ ವ್ಯವಸ್ಥೆಗೆ ಸೆಡ್ಡು ಹೊಡೆದಿದ್ದಾರೆ. ಇವತ್ತು ರಜೆ ತೆಗೆದುಕೊಳ್ಳದೆ ದಿನಪೂರ್ತಿ ಉಚಿತ ಸೇವೆ ಮಾಡುತ್ತಿದ್ದಾರೆ. ತಮ್ಮ ಹಲವಾರು ವರ್ಷದ ಬೇಡಿಕೆ ಈ ವರ್ಷವೂ ಈಡೇರಿಸಿಲ್ಲ ಎಂದು ಸರ್ಕಾರ ಮತ್ತು ಯೋಜನೆಯ ನಿರ್ದೇಶಕರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಉಚಿತ ಸೇವೆ ಮಾಡುತ್ತಿದ್ದಾರೆ.

    ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಿಬ್ಬಂದಿ ಪ್ರತಿವರ್ಷ ಕಾಂಟ್ರ್ಯಾಕ್ಟ್ ಲೆಕ್ಕದಲ್ಲಿ ರಿನಿವಲ್ ಆಗುತ್ತಾ ಬರುತ್ತಾರೆ. ರಾಜ್ಯದಲ್ಲಿ ಸದ್ಯ ಮಹಾಮಾರಿ ಕೊರೊನಾದ ವಿಷಮ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲೂ ಕಾನೂನು ನಿಯಮ ಎಂದು ರಜೆ ನೀಡಲು ಎನ್‍ಎಚ್‍ಎಂ ನಿರ್ಧಾರ ತೆಗೆದುಕೊಂಡಿತ್ತು. ಇದರ ವಿರುದ್ಧ ಸಾಕಷ್ಟು ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಇಷ್ಟಾದರೂ ಇಲಾಖೆಯ ಅಧಿಕಾರಿಗಳು, ಸರ್ಕಾರ ತಮ್ಮ ಪಟ್ಟು ಸಡಿಲಿಸಿಲ್ಲ. ಇದೇ ಕಾರಣದಿಂದ ಉಡುಪಿ ಜಿಲ್ಲೆಯ ಸಿಬ್ಬಂದಿ ಗಾಂಧಿಗಿರಿ ಮಾಡಿದ್ದಾರೆ. ಸಂಬಳ ತೆಗೆದುಕೊಳ್ಳದೇ ರಜೆ ಮಾಡದೆ, ಹಾಜರಾತಿ ನಮೂದಿಸಿದೆ ಜಿಲ್ಲೆಯಾದ್ಯಂತ ಕೆಲಸ ಮಾಡುತ್ತಿದ್ದಾರೆ.

    ಆಶಾ ಕಾರ್ಯಕರ್ತೆಯರು ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಚೆಕ್ ಪೋಸ್ಟ್ ಹೀಗೆ ಎಲ್ಲ ಸ್ಥರದಲ್ಲಿ ಎನ್‍ಎಚ್‍ಎಂ ಸಿಬ್ಬಂದಿ ಉಚಿತ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಬ್ಬಂದಿಯೊಬ್ಬರು ಮಾತನಾಡಿ, ಕೊರೊನಾ ಪ್ರಕರಣಗಳೆಲ್ಲ ಹತೋಟಿಗೆ ಬಂದ ಮೇಲೆಯಾದರೂ ನಮ್ಮ ಬೇಡಿಕೆ ಈಡೇರಿಸಿ ಎಂದು ಮನವಿ ಮಾಡಿದ್ದಾರೆ.

  • ಕೊರೊನಾ ಎಫೆಕ್ಟ್ – ಮಾಜಿ ಐಪಿಎಲ್ ಆಟಗಾರನಿಂದ ಪಿಂಚಣಿ, ಸಂಬಳ ದಾನ

    ಕೊರೊನಾ ಎಫೆಕ್ಟ್ – ಮಾಜಿ ಐಪಿಎಲ್ ಆಟಗಾರನಿಂದ ಪಿಂಚಣಿ, ಸಂಬಳ ದಾನ

    ಕೋಲ್ಕತಾ: ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಅವರು ತಮ್ಮ ಮೂರು ತಿಂಗಳ ಸಂಬಳ ಮತ್ತು ಬಿಸಿಸಿಐ ಪಿಂಚಣಿಯನ್ನು ದಾನ ಮಾಡಿದ್ದಾರೆ.

    ಲಕ್ಷ್ಮಿ ರತನ್ ಶುಕ್ಲಾ ಅವರು ಭಾರತದ ಮಾಜಿ ಆಟಗಾನಾಗಿದ್ದು, ಈಗ ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಟವಾಡಿದ್ದಾರೆ. ಹಾಗಾಗಿ ಈಗ ರಾಜ್ಯ ಕೊರೊನಾ ವೈರಸ್ ಭೀತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಧನಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಅವರು, ನಾವೆಲ್ಲರೂ ನಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ನಮ್ಮ ಕೊಡುಗೆ ನೀಡುವ ಸಮಯ ಬಂದಿದೆ. ನಾನು ಈಗಾಗಲೇ ನನ್ನ ಶಾಸಕ ಸ್ಥಾನದ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಅಲ್ಲದೆ ನನಗೆ ಬಿಸಿಸಿಐನಿಂದ ಪಿಂಚಣಿ ಬರುತ್ತದೆ. ನಾನು ಬಿಸಿಸಿಐ ಪಿಂಚಣಿಯ ಮೂಲಕ ಬರುವ ಮೂರು ತಿಂಗಳ ಹಣವನ್ನು ಸಹ ದೇಣಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ಶುಕ್ಲಾ ಅವರು 1999ರಲ್ಲಿ ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಆದರೆ ನಂತರ ಪಾದದ ಗಾಯದಿಂದಾಗಿ ಅವರ ವೃತ್ತಿಜೀವನವನ್ನು ಮೊಟಕುಗೊಳಿಸಬೇಕಾಯಿತು. ಆದರೆ ಅವರು ದೇಶೀಯ ಕ್ರಿಕೆಟ್‍ನಲ್ಲಿ ಗೌರವಾನ್ವಿತ ಆಲ್‍ರೌಂಡರ್ ಆಗಿದ್ದರು. 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ ಬಂಗಾಳ ಮತ್ತು ಪೂರ್ವ ವಲಯವನ್ನು ಪ್ರತಿನಿಧಿಸಿದ್ದರು. ಇದರ ಜೊತೆಗೆ ಐಪಿಎಲ್ ವಿಜೇತ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು.

    ಕೊರೊನಾ ವೈರಸ್ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಭಾರತದಲ್ಲಿ ಇಲ್ಲಿಯವರೆಗೆ ಸುಮಾರು 851 ಜನರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಜೊತೆಗೆ 20 ಜನ ಸಾವನ್ನಪ್ಪಿದ್ದಾರೆ. ಹಾಗೇಯೆ ಪಶ್ಚಿಮ ಬಂಗಾಳದಲ್ಲಿ 10 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ, ಓರ್ವ ಇದರಿಂದ ಸಾವನ್ನಪ್ಪಿದ್ದಾನೆ. ವಿಶ್ವದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತರಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ 24 ಸಾವಿರ ದಾಟಿದೆ.

  • ಕೊರೊನಾ ಎಮರ್ಜೆನ್ಸಿಗೆ ಮೂರು ತಿಂಗಳ ಸಂಬಳ ನೀಡಿದ ಯತ್ನಾಳ್

    ಕೊರೊನಾ ಎಮರ್ಜೆನ್ಸಿಗೆ ಮೂರು ತಿಂಗಳ ಸಂಬಳ ನೀಡಿದ ಯತ್ನಾಳ್

    ವಿಜಯಪುರ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆ ಜನರ ಸಂಕಷ್ಟಕ್ಕೆ ಸಹಯ ಮಾಡಲು ರಾಜ್ಯ ಸರ್ಕಾರದ ಮನವಿ ಮಾಡಿದೆ. ಪ್ರಕೃತಿ ವಿಕೋಪ ನಿಧಿಗೆ ಧನ ಸಹಾಯ ಮಾಡಲು ಸೂಚಿಸಿದೆ. ಇದಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪಂದಿಸಿದ್ದಾರೆ.

    ಕೊರೊನಾ ಎಮರ್ಜೆನ್ಸಿಗೆ ತಮ್ಮ ತಿಂಗಳ ವೇತನವನ್ನ ಸರ್ಕಾರಕ್ಕೆ ನೀಡಲು ಯತ್ನಾಳ್ ನಿರ್ಧರಿಸಿದ್ದಾರೆ. ತಮ್ಮ ಮೂರು ತಿಂಗಳ ವೇತನವನ್ನ ಪ್ರಕೃತಿ ವಿಕೋಪ ನಿಧಿಗೆ ಪಡೆಯುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಯತ್ನಾಳ್ ಪತ್ರ ಬರೆದಿದ್ದಾರೆ.

    ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯಕವಾಗಲಿ. ಕೊರೊನಾದಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಈ ಸಮಯದಲ್ಲಿ ನಾವು ಆರ್ಥಿಕವಾಗಿ ಸರ್ಕಾರದ ಬೆಂಬಲಕ್ಕೆ ನಿಲ್ಲಬೇಕಿದೆ. ಅದಕ್ಕೆ ನನ್ನ ಮೂರು ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಪಡೆಯಬೇಕೆಂದು ಪತ್ರದಲ್ಲಿ ಯತ್ನಾಳ್ ಮನವಿ ಮಾಡಿಕೊಂಡಿದ್ದಾರೆ. ಸಿಎಂಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಯತ್ನಾಳ್ ಹಂಚಿಕೊಂಡಿದ್ದಾರೆ.

  • ಕೊರೊನಾ ಎಫೆಕ್ಟ್ – ಮುಂಗಡವಾಗಿ 4 ತಿಂಗ್ಳ ಸಂಬಳ ನೀಡಿದ ಸರ್ಕಾರ

    ಕೊರೊನಾ ಎಫೆಕ್ಟ್ – ಮುಂಗಡವಾಗಿ 4 ತಿಂಗ್ಳ ಸಂಬಳ ನೀಡಿದ ಸರ್ಕಾರ

    ಭುವನೇಶ್ವರ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ನರ್ಸ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಎಲ್ಲ ಸರ್ಕಾರಿ ವೈದ್ಯಕೀಯ ವೃತ್ತಿಪರರು ಭಾಗಿಯಾಗಿದ್ದಾರೆ. ಅವರಿಗೆ ಎಪ್ರಿಲ್, ಮೇ, ಜೂನ್, ಜುಲೈ ಸೇರಿ ಒಟ್ಟು ನಾಲ್ಕು ತಿಂಗಳ ಸಂಬಳವನ್ನು ಮುಂಗಡವಾಗಿ ಪಾವತಿಸಲಾಗುವುದು ಎಂದು ಪಟ್ನಾಯಕ್ ತಿಳಿಸಿದ್ದಾರೆ.

    ದೇಶದಲ್ಲಿ 584 ಕೊರೊನಾ ಸೋಂಕು ಪತ್ತೆಯಾಗಿದ್ದು, ಒಡಿಸಾದಲ್ಲಿ ಇದುವರೆಗೂ ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿರುವ ವೈದ್ಯರು, ವೃತ್ತಿಪರ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದರು. ವೈದ್ಯರು, ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಇದಲ್ಲದೇ ತಮ್ಮ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ಶಾಸಕರಿಗೂ ನೆರವಾಗುವಂತೆ ಮನವಿ ಮಾಡುತ್ತೇನೆ ಎಂದರು. ಜೊತೆಗೆ ಕೊರೊನಾ ಸಂಕಷ್ಟಕ್ಕೆ ರಾಜ್ಯದ ಜನರು ನೆರವಾಗಬೇಕಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಪಟ್ನಾಯಕ್ ಮನವಿ ಮಾಡಿದ್ದಾರೆ.