Tag: ಸಂಬಳ

  • ವಿದ್ಯಾರ್ಥಿಗೆ 1.44 ಕೋಟಿ ರೂ. ಸಂಬಳದ ಗೂಗಲ್ ಜಾಬ್ ಸುತ್ತ ಅನುಮಾನದ ಹುತ್ತ!

    ವಿದ್ಯಾರ್ಥಿಗೆ 1.44 ಕೋಟಿ ರೂ. ಸಂಬಳದ ಗೂಗಲ್ ಜಾಬ್ ಸುತ್ತ ಅನುಮಾನದ ಹುತ್ತ!

    ಚಂಡೀಘಡ್: ವಿಶ್ವದ ದೊಡ್ಡ ಐಟಿ ಕಂಪನಿ ಗೂಗಲ್ ಹರ್ಯಾಣದ 16 ವರ್ಷದ ಬಾಲಕನಿಗೆ ವಾರ್ಷಿಕ 1.44 ಕೋಟಿ ರೂ.ಗೆ ಸಂಬಳದಂತೆ ಉದ್ಯೋಗ ನೀಡಿದೆ ಎಂದು ಪ್ರಕಟವಾಗುತ್ತಿರುವ ಸುದ್ದಿಯ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

    ಹರ್ಷಿತ್ ಶರ್ಮಾ ಎಂಬಾತನಿಗೆ ಉದ್ಯೋಗ ದೊರೆತಿದೆ ಎಂದು ಹೇಳಲಾಗುತ್ತಿದ್ದರೂ ಇದೂವರೆಗೂ ಗೂಗಲ್ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಈಗ ಚಂಡೀಘಡ್ ಶಿಕ್ಷಣ ಇಲಾಖೆ ಉದ್ಯೋಗ ಸಿಕ್ಕಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ತನಿಖೆ ಆರಂಭಿಸಿದೆ.

    ಏನಿದು ಉದ್ಯೋಗ ಸುದ್ದಿ?
    ಕುರುಕ್ಷೇತ್ರದ ಮಾತನ ಪ್ರದೇಶದ 16 ವರ್ಷದ ಬಾಲಕನಿಗೆ ಗೂಗಲ್ ಉದ್ಯೋಗ ನೀಡಲು ಮುಂದಾಗಿದ್ದು, ವಾರ್ಷಿಕ 1.44 ಕೋಟಿ ರೂ. ಸಂಭಾವನೆಯನ್ನು ನಿಗದಿ ಮಾಡಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

    ಹರ್ಷಿತ್ ಚಂಡಿಗಢನ ಸರ್ಕಾರಿ ಮಾಡೆಲ್ ಸೀನಿಯರ್ ಸೆಕೆಂಡರಿ ಸ್ಕೂಲ್ (ಜಿಎಂಎಸ್‍ಎಸ್‍ಎಸ್) ನಲ್ಲಿ ಇದೇ ವರ್ಷ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾನೆ. ಹರ್ಷಿತ್ ಎರಡು ಮೊಬೈಲ್ ಫೋನ್‍ಗಳನ್ನು ಬಳಸುತ್ತಿದ್ದು, ಎರಡು ನಂಬರ್ ಸ್ವಿಚ್ ಆಫ್ ಆಗಿವೆ. ಫೇಸ್‍ಬುಕ್ ನಲ್ಲಿ ಮಾತ್ರ ಹರ್ಷಿತ್ `ಗೂಗಲ್‍ನಲ್ಲಿ ಕೆಲಸ ಮಾಡುತ್ತಿದ್ದು, ಕ್ಯಾಲಿಫೋರ್ನಿಯಾದಲ್ಲಿ ವಾಸ’ ಎಂದು ಬರೆದುಕೊಂಡಿದ್ದಾನೆ.

    ಹರ್ಷಿತ್ ತನಗೆ ಗೂಗಲ್ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿರುವ ಬಗ್ಗೆ ನಮಗೆ ಮಾಹಿತಿ ನೀಡಿದ್ದಾನೆ. ಸದ್ಯ ಹರ್ಷಿತ್ ಪ್ರಯಾಣ ಮಾಡುತ್ತಿರುವದರಿಂದ ನಮಗೆ ಸಂಸ್ಥೆಯ ಆಫರ್ ಲೆಟರ್ ಕಳುಹಿಸಿಲ್ಲ ಎಂದು ಹರ್ಷಿತ್ ಕಾಲೇಜಿನ ಪ್ರಾಂಶುಪಾಲರಾದ ಇಂದ್ರಾ ಬೆನ್ವಾಲ್ ತಿಳಿಸಿದ್ದಾರೆ.

    ಗೂಗಲ್ ಸಂಸ್ಥೆ ನಡೆಸಿದ್ದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹರ್ಷಿತ್ ಗ್ರಾಫಿಕ್ ಡಿಸೈನರ್ ಆಗಿ ನೇಮಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಒಂದು ವರ್ಷಗಳ ಕಾಲ ಹರ್ಷಿತ್ ತರಬೇತಿ ಪಡೆಯಲಿದ್ದು, ಈ ವೇಳೆ ತಿಂಗಳಿಗೆ 4 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ಪಡೆಯಲಿದ್ದಾನೆ. ಒಂದು ವರ್ಷದ ಬಳಿಕ ತಿಂಗಳಿಗೆ 12 ಲಕ್ಷ ರೂ. ಸಂಬಳ ಪಡೆಯಲಿದ್ದಾನೆ ಎಂದು ಜಿಎಂಎಸ್‍ಎಸ್‍ಎಸ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

    ಹರ್ಷಿತ್ ಹೇಳಿದ್ದೇನು?
    ನಾನು ಆನ್ ಲೈನ್‍ನಲ್ಲಿ ಉದ್ಯೋಗ ಹುಡುಕುತ್ತಿದ್ದೆ, ಮೇ ತಿಂಗಳಲ್ಲಿ ನಾನು ಗೂಗಲ್‍ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ರಿಂದ ಕಂಪನಿಯು ಆನ್‍ಲೈನ್ ನಲ್ಲಿ ನನ್ನನ್ನು ಸಂದರ್ಶನ ಮಾಡಿತ್ತು. ನಾನು ಕಳೆದ 10 ವರ್ಷಗಳಿಂದ ಗ್ರಾಫಿಕ್ ಡಿಸೈನಿಂಗ್ ನಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ. ನಾನು ಪೋಸ್ಟರ್ ಡಿಸೈನಿಂಗ್ ವಿಭಾಗದಲ್ಲಿ ಆಯ್ಕೆಯಾಗಿದ್ದೇನೆ ಎಂದು ಹರ್ಷಿತ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾನೆ.

    ಹರ್ಷಿತ್ ತಂದೆ-ತಾಯಿ ಶಿಕ್ಷಕರಾಗಿದ್ದಾರೆ. ಸದ್ಯ ಹರ್ಷಿತ್ ಸೋದರ ದೇರ್ ಬಾಸಿಯ ಆತನ ಸಂಬಂಧಿಯ ಮನೆಯಲ್ಲಿ ವಾಸವಾಗಿದ್ದಾನೆ.

    ಗೂಗಲ್ ಹೇಳಿದ್ದೇನು?
    ಮಾಧ್ಯಮಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಗೂಗಲ್ ವಕ್ತಾರರನ್ನು ಸಂಪರ್ಕಿಸಿದಾಗ ಅವರು, ಸದ್ಯ ಹರ್ಷಿತ್ ನೇಮಕವಾದ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

     

    https://twitter.com/Timesolizer/status/892634927207993346

  • ಬರ ಇದ್ರೂ ಡಬಲ್ ಆಯ್ತು ತಮಿಳುನಾಡು ಶಾಸಕರ ಸಂಬಳ

    ಬರ ಇದ್ರೂ ಡಬಲ್ ಆಯ್ತು ತಮಿಳುನಾಡು ಶಾಸಕರ ಸಂಬಳ

    ಚೆನ್ನೈ: ತಮಿಳುನಾಡಿನಲ್ಲಿ ಬರವಿದ್ದರೂ ಅಲ್ಲಿನ ಸರ್ಕಾರ ಶಾಸಕರಿಗೆ ಮಾತ್ರ ಭರಪೂರ ವೇತನವನ್ನು ಪ್ರಕಟಿಸಿದೆ. ಶಾಸಕರ ವೇತನವನ್ನು 1,05,000 ರೂಪಾಯಿಗೆ ಏರಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಪ್ರಕಟಿಸಿದ್ದಾರೆ.

    ಶಾಸಕರ ಮಾಸಿಕ ಸಂಬಳವನ್ನು 55 ಸಾವಿರ ರೂ. ನಿಂದ 1.05 ಲಕ್ಷ ರೂ. ಏರಿಸಲಾಗುವುದು ಎಂದು ಅವರು ಸದನಲ್ಲಿ ಪ್ರಕಟಿಸಿದರು.

    ಅಷ್ಟೇ ಅಲ್ಲದೇ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಗೆ ನೀಡಲಾಗುತ್ತಿದ್ದ ಅನುದಾನವನ್ನು 2 ಕೋಟಿ ರೂ. ನಿಂದ 2.5 ಕೋಟಿ ರೂ. ಏರಿಸಲಾಗಿದೆ. ಪರಿಷ್ಕೃತ ವೇತನವು ಜುಲೈ 1ರಿಂದಲೇ ಜಾರಿಯಾಗಲಿದೆ

    ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳು ಶಾಸಕರ ಸಂಬಳವನ್ನು ಏರಿಸುವ ಸಾಧ್ಯತೆಯಿದೆ.

    ಕರ್ನಾಟಕದಲ್ಲಿ ಶಾಸಕರಿಗೆ ಸಂಬಳ ಎಷ್ಟಿದೆ?
    ರಾಜ್ಯಸರ್ಕಾರ 2015ರ ಮಾರ್ಚ್ ನಲ್ಲಿ ಶಾಸಕರ ಸಂಬಳವನ್ನು ಏರಿಕೆ ಮಾಡಿತ್ತು. ವೇತನ 25 ಸಾವಿರ ರೂ., ಆಪ್ತ ಸಹಾಯಕರ ವೇತನ 10 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ., ದೂರವಾಣಿ ವೆಚ್ಚ 20 ಸಾವಿರ ರೂ., ಕ್ಷೇತ್ರ ಭತ್ಯೆ 40 ಸಾವಿರ ರೂ., ಕ್ಷೇತ್ರ ಪ್ರಯಾಣ ಭತ್ಯೆ 45 ಸಾವಿರ ರೂ., ಒಟ್ಟು ಮೊತ್ತ1.40 ಲಕ್ಷ ರೂ. ಸಿಗುತ್ತದೆ.

    ಇದನ್ನೂ ಓದಿ: ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?

    ಇದನ್ನೂ ಓದಿ: ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

  • ಉತ್ತರಪ್ರದೇಶದಲ್ಲಿ ಶಿಕ್ಷಕರಿಗೆ ಆಧಾರ್ ಇಲ್ಲದೇ ಇದ್ರೆ ಸಂಬಳ ಜಮೆ ಆಗಲ್ಲ!

    ಉತ್ತರಪ್ರದೇಶದಲ್ಲಿ ಶಿಕ್ಷಕರಿಗೆ ಆಧಾರ್ ಇಲ್ಲದೇ ಇದ್ರೆ ಸಂಬಳ ಜಮೆ ಆಗಲ್ಲ!

    ಲಕ್ನೋ: ಉತ್ತರಪ್ರದೇಶದದಲ್ಲಿ ಸರ್ಕಾರಿ ಶಿಕ್ಷಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದದೇ ಇದ್ದರೆ ಮುಂದೆ ಅವರ ಖಾತೆಗೆ ಸಂಬಳ ಜಮೆ ಮಾಡದೇ ಇರಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.

    ಆಧಾರ್ ಕಡ್ಡಾಯಗೊಳಿಸುವ ಸಂಬಂಧ ಪ್ರಾಥಮಿಕ ಶಿಕ್ಷಣ ಸಚಿವ ಅನುಪಮ್ ಜೈಸ್ವಾಲ್ ಭಾನುವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

    ಪಾರದರ್ಶಕತೆಯನ್ನು ತರಲು ಶಿಕ್ಷಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸಬೇಕು. ಅಷ್ಟೇ ಅಲ್ಲದೇ ಗುರುತಿನ ಪತ್ರವಾಗಿಯೂ ಆಧಾರ್ ಬಳಸಲು ಸರ್ಕಾರ ಮುಂದಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪ್ರಸ್ತುತ ಪ್ರಾಥಮಿಕ ಶಾಲೆಯ ಮತ್ತು ಪ್ರೌಢ ಶಾಲೆಯ ಸೇರಿ ಒಟ್ಟು 4.95 ಲಕ್ಷ ಜನ ಶಿಕ್ಷಕರಿದ್ದಾರೆ. ಈಗಾಗಲೇ ಬಹಳಷ್ಟು ಶಿಕ್ಷಕರು ಆಧಾರ್ ಕಾರ್ಡ್ ಹೊಂದಿದ್ದಾರೆ. ಆಧಾರ್ ಕಾರ್ಡ್ ಹೊಂದಲು ಶಿಕ್ಷಕರಿಗೆ ಜುಲೈ ತಿಂಗಳ ಡೆಡ್‍ಲೈನ್ ನೀಡಲಾಗಿದ್ದು, ಈ ಡೆಡ್‍ಲೈನ್ ಒಳಗಡೆ ಆಧಾರ್ ಪಡೆಯದೇ ಇದ್ದರೆ ಮುಂದೆ ಸಂಬಳವನ್ನು ಖಾತೆಗೆ ಜಮೆ ಮಾಡದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

    ಆಧಾರ್ ಕಾರ್ಡ್ ಇಲ್ಲದೇ ಇದ್ದಲ್ಲಿ ಶಾಲೆಗಳಲ್ಲಿ ಆಧಾರ್ ನೋಂದಣಿ ಕಾರ್ಯಕ್ರಮ ನಡೆಸಲಾಗುವುದು. ಶಿಕ್ಷಕರ ಜೊತೆ 1 ರಿಂದ 7 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಆಧಾರ್ ಅನ್ನು ಕಡ್ಡಾಯವಾಗಿ ಹೊಂದಬೇಕು ಎಂದು ಸಚಿವ ಅನುಪಮ್ ಜೈಸ್ವಾಲ್ ತಿಳಿಸಿದ್ದಾರೆ.

    ಈಗಾಗಲೇ ಶೇ.30 ರಷ್ಟು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಧಾರ್ ಹೊಂದಿದ್ದಾರೆ. ಆದರೆ ದೂರದಪ್ರದೇಶದಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ ಮಾಡಿಲ್ಲ. ಕೆಲ ಶಾಲೆಗಳಲ್ಲಿ ನಕಲಿ ಟೀಚರ್ ಗಳಿದ್ದು, ಈ ಸಮಸ್ಯೆ ಆಧಾರ್‍ನಿಂದ ಪರಿಹಾರವಾಗಲಾರದು ಎಂದು ಅಧಿಕಾರಿ ತಿಳಿಸಿದ್ದಾರೆ.

    ಜುಲೈ ಒಂದರಿಂದ ಐಟಿ ರಿಟರ್ನ್ ಮತ್ತು ಪ್ಯಾನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಕಾನೂನಿನ ಸಿಂಧುತ್ವವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್ ನಿರ್ಧಾರ ಪ್ರಕಟವಾದ ಬಳಿಕ ಯೋಗಿ ಸರ್ಕಾರ ಶಿಕ್ಷಕರಿಗೆ ಆಧಾರ್ ಕಡ್ಡಾಯ ಮಾಡಿದೆ.

    ಇದನ್ನೂ ಓದಿ: 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್

  • ವೇತನ ಹೆಚ್ಚಳಕ್ಕಾಗಿ ಟೆಕ್ಸ್ಪೋಟರ್ ಕಂಪೆನಿಯ ಸಾವಿರಾರು ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ

    ವೇತನ ಹೆಚ್ಚಳಕ್ಕಾಗಿ ಟೆಕ್ಸ್ಪೋಟರ್ ಕಂಪೆನಿಯ ಸಾವಿರಾರು ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ

    ಬೆಂಗಳೂರು: ನಗರದ ಹೊರವಲಯ ನೆಲಮಂಗಲದ ಟೆಕ್ಸ್ಪೋಟರ್ ಇಂಡಸ್ಟ್ರೀಸ್ ಕಂಪನಿಯ ಸಾವಿರಾರು ಮಹಿಳಾ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕಂಪನಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ರು.

    ಪ್ರತಿ ವರ್ಷದಂತೆ ಕಾರ್ಮಿಕರ ವೇತನ ಹೆಚ್ಚಿಸಬೇಕು. ಆಡಳಿತ ಮಂಡಳಿ ಕಾರ್ಮಿಕರಿಗೆ ನೀಡಬೇಕಿದ್ದ ಸಾರಿಗೆ ವ್ಯವಸ್ಥೆ ಇನ್ನಿತರ ಮೂಲಭೂತ ಸೌಕರ್ಯವನ್ನ ನೀಡುವಲ್ಲಿ ವಿಫಲವಾಗಿದೆ. ಕೂಡಲೇ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.

    ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಜೊತೆಯ ಸಂಧಾನ ಮಾತುಕತೆ ನಡೆಸಿದ್ದಾರೆ. ಆಡಳಿತ ಮಂಡಳಿ ಶೀಘ್ರವೇ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ ನಂತರ ಕಾರ್ಮಿಕರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

     

  • ಮಿರ್ಚಿಗೆ 5 ಕೋಟಿ, ಬಾಹುಬಲಿಗೆ 25 ಕೋಟಿ: ಈಗ ಪ್ರಭಾಸ್ ಕಾಲ್ ಶೀಟ್ ಬೇಕಾದ್ರೆ ನೀವು ಇಷ್ಟು ಕೊಡ್ಬೇಕು

    ಮಿರ್ಚಿಗೆ 5 ಕೋಟಿ, ಬಾಹುಬಲಿಗೆ 25 ಕೋಟಿ: ಈಗ ಪ್ರಭಾಸ್ ಕಾಲ್ ಶೀಟ್ ಬೇಕಾದ್ರೆ ನೀವು ಇಷ್ಟು ಕೊಡ್ಬೇಕು

    ಹೈದರಾಬಾದ್: ಬಾಹುಬಲಿ ಹೀರೋ ಪ್ರಭಾಸ್ ತನ್ನ ಸಂಭಾವನೆಯನ್ನು ಭಾರೀ ಏರಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    2013ರಲ್ಲಿ ಬಿಡುಗಡೆಯಾದ ಮಿರ್ಚಿ ಸಿನಿಮಾಕ್ಕೆ ಪ್ರಭಾಸ್ 5 ಕೋಟಿ ರೂ. ತೆಗೆದುಕೊಂಡಿದ್ದರೆ, ಬಾಹುಬಲಿ ಚಿತ್ರಕ್ಕೆ 25 ಕೋಟಿ ರೂ. ತೆಗೆದುಕೊಂಡಿದ್ದಾರೆ.

    ಬಾಹುಬಲಿ ಚಿತ್ರಕ್ಕಾಗಿ 5 ವರ್ಷ ಮುಡುಪಿಟ್ಟ ಹಿನ್ನೆಲೆಯಲ್ಲಿ ಇಷ್ಟೊಂದು ಸಂಭಾವನೆಯನ್ನು ಪ್ರಭಾಸ್ ಏರಿಸಿಕೊಂಡಿದ್ದು, ಈಗ ತನ್ನ ಮುಂದಿನ ಸಿನಿಮಾಗಳಿಗೆ 30 ಕೋಟಿ ರೂ. ಹಣವನ್ನು ಡಿಮ್ಯಾಂಡ್ ಮಾಡಿದ್ದಾರೆ ಎಂದು ಟಾಲಿವುಡ್ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಬಾಹುಬಲಿ ಮೊದಲ ಭಾಗದಲ್ಲಿ ಶಿವುಡು ಪಾತ್ರದಲ್ಲಿ ಮಿಂಚಿದ್ದ 37 ವರ್ಷದ ಪ್ರಭಾಸ್ ಎರಡನೇ ಭಾಗದಲ್ಲಿ ಅಮರೇಂದ್ರ ಬಾಹುಬಲಿಯಾಗಿ ಅಭಿನಯಿಸಿದ್ದಾರೆ.

    ಇದನ್ನೂ ಓದಿ: ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ಇದನ್ನೂ ಓದಿ: ಪ್ರಭಾಸ್, ರಾಣಾ, ಅನುಷ್ಕಾ, ತಮನ್ನಾ, ರಮ್ಯಕೃಷ್ಣಗೆ ಎಷ್ಟು ಸಂಭಾವನೆ ಸಿಕ್ಕಿದೆ?

  • ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಹೈದರಾಬಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿಯಿಂದಾಗಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ್ದ ಟೆಕ್ಕಿಯೊಬ್ಬರ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.

    ಹೈದರಾಬಾದ್ ನ ಅಲ್ಕಾಪುರ ಕಾಲೋನಿಯ ಪಪ್ಪಲಗುಡದ ನಿವಾಸಿಯಾದ ಟೆಕ್ಕಿ ಸಂಜಯ್ ಶರ್ಮಾ ಅವರ ಪತ್ನಿ ರಶ್ಮಿ(39) ತಮ್ಮ ನಿವಾಸದಲ್ಲಿ ಗುರುವಾರ ನೇಣಿಗೆ ಶರಣಾಗಿದ್ದಾರೆ. ಸಂಜಯ್ ಮತ್ತು ಅವರ ಮಕ್ಕಳು ಲ್ಯಾಪ್ ಟಾಪ್ ರಿಪೇರಿ ಮಾಡಿಸಲು ಮನೆಯಿಂದ ಹೊರಗಡೆಗೆ ತೆರಳಿದ್ದಾಗ ರಶ್ಮಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಂಜಯ್ ಶರ್ಮಾ ಉತ್ತರ ಪ್ರದೇಶದ ಫರೀದಾಬಾದ್ ಮೂಲದವರಾಗಿದ್ದು, ಕಳೆದ 8 ವರ್ಷಗಳಿಂದ ಅವರು ಬ್ಯಾಂಕ್ ಆಫ್ ಅಮೆರಿಕದಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಅಮೆರಿಕದ ನೂತನ ನೀತಿಯಿಂದಾಗಿ ಸಂಜಯ್ ಶರ್ಮಾ ಅವರ ಎಚ್-1ಬಿ ವೀಸಾ ಅವಧಿಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಇದರಿಂದಾಗಿ ಸಂಜಯ್ ಶರ್ಮಾ ಉದ್ಯೋಗ ಕಳೆದುಕೊಂಡಿದ್ದರು.

    ಅನಿವಾರ್ಯವಾಗಿ ಭಾರತಕ್ಕೆ ಮರಳಲೇಬೇಕಾಗಿದ್ದರಿಂದ ಸಂಜಯ್ ಶರ್ಮಾ ಮಾರುಕಟ್ಟೆಯ ಬೆಲೆಗಿಂತಲೂ ಕಡಿಮೆ ಬೆಲೆಗೆ ಆಸ್ತಿ ಮತ್ತು ಪಿಠೋಪಕರಣಗಳನ್ನು ಮಾರಾಟ ಮಾಡಿದ್ದರು. ಅಮೆರಿಕದಿಂದ ಬಂದ ಬಳಿಕ ಹೈದರಾಬಾದ್‍ನ ರಹೇಜಾ ಐಟಿ ಪಾರ್ಕ್ ನಲ್ಲಿರುವ ಕಂಪೆನಿಯೊಂದರಲ್ಲಿ ಸಂಜಯ್ ಶರ್ಮಾ ಉದ್ಯೋಗಕ್ಕೆ ಸೇರಿಕೊಂಡಿದ್ದರು.

    ಪತಿ ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡಿದ್ದರಿಂದ ರಶ್ಮಿ ಬೇಸರಗೊಂಡಿದ್ದರು. ಅಷ್ಟೇ ಅಲ್ಲದೇ ಭಾರತಕ್ಕೆ ವಾಪಸ್ ಆಗಲು ಇಷ್ಟವಿರಲಿಲ್ಲ. ಭಾರೀ ಮನನೊಂದಿದ್ದ ರಶ್ಮಿ ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ರಶ್ಮಿಗೆ ದೆಹಲಿ ಸೇರಿದಂತೆ ಭಾರತದ ಯಾವ ಭಾಗದಲ್ಲೂ ನೆಲೆಸಲು ಇಷ್ಟವಿರಲಿಲ್ಲ. ಭಾರತಕ್ಕೆ ಮರಳಿದ ಬಳಿಕ ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂದು ಸಂಬಂಧಿಕರ ಹೇಳಿಕೆಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಇದನ್ನೂ ಓದಿ: ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಕನಿಷ್ಠ ಸಂಬಳ ಈಗ ಎಷ್ಟಿರಬೇಕು?
    ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿಯಾಗಿದ್ದು, ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.

    ಇಲ್ಲಿಯವರೆಗೆ ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇತ್ತು. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ ಇದೂವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಟೆಕ್ಕಿಗಳನ್ನು ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕ ದೇಶಕ್ಕೆ ಕಳುಹಿಸಿಕೊಡುತಿತ್ತು. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ.

    ಇದನ್ನೂ ಓದಿ: ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

  • ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?

    ಕ್ಯಾಲಿಫೋರ್ನಿಯಾ: ಗೂಗಲ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲದ 44 ವರ್ಷದ ಸುಂದರ್ ಪಿಚೈ ಅವರಿಗೆ 200 ದಶಲಕ್ಷ ಡಾಲರ್(ಅಂದಾಜು 1,285 ಕೋಟಿ ರೂ.) ಸಂಭಾವನೆ ನೀಡಿದೆ.

    2015ರ ಸಂಬಳಕ್ಕೆ ಹೋಲಿಸಿದರೆ ಸಂಬಳ ಡಬಲ್ ಆಗಿದೆ. 2015ರಲ್ಲಿ ವಾರ್ಷಿಕ ಪರಿಹಾರ ಮೊತ್ತ ಸೇರಿದಂತೆ 6,50,000 ಡಾಲರ್ ಸಂಬಳ ಸಿಕ್ಕಿತ್ತು. 2015ರಲ್ಲಿ ಷೇರು ರೂಪದಲ್ಲಿ 99.8 ದಶಲಕ್ಷ ಡಾಲರ್ ಪಡೆದಿದ್ದ ಸುಂದರ್ ಪಿಚೈ ಅವರು 2016ರಲ್ಲಿ 198.7 ದಶಲಕ್ಷ ಡಾಲರ್ ಹಣವನ್ನು ಪಡೆದಿದ್ದಾರೆ.

    ಕಂಪೆನಿಯ ಪರವಾಗಿ ಉತ್ತಮ ಉತ್ಪನ್ನವನ್ನು ಹೊರ ತಂದಿದ್ದಕ್ಕೆ ಗೂಗಲ್ ಸಂಬಳವನ್ನು ಏರಿಕೆ ಮಾಡಿದೆ ಎಂದು ಸಿಎನ್‍ಎನ್ ವರದಿ ಮಾಡಿದೆ.

    2016ರಲ್ಲಿ ಗೂಗಲ್ ಹೊಸ ಸ್ಮಾರ್ಟ್ ಫೋನ್, ವರ್ಚುವಲ್ ರಿಯಾಲಿಟಿ ಹೆಡ್ ಸೆಟ್, ರೂಟರ್, ವಾಯ್ಸ್ ಆಧಾರಿತ ಸ್ಪೀಕರ್ ಬಿಡುಗಡೆ ಮಾಡಿತ್ತು. ಈ ಎಲ್ಲ ಕೆಲಸಕ್ಕೆ ಗೂಗಲ್ ಪಿಚೈ ಸಂಬಳವನ್ನು ಭಾರೀ ಏರಿಕೆ ಮಾಡಿದೆ.

    ಯಾರು ಸುಂದರ್ ಪಿಚೈ:
    ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಮೂಲತಃ ಚೆನ್ನೈರವರಾದ ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್,ಆಂಡ್ರಾಯ್ಡ್ ಅಪ್ಲಿಕೇಶನ್, ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ,ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು.

  • ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?

    ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?

    ಕಂಪೆನಿಗಳಲ್ಲಿ ಹೇಗೆ ಸಿಬ್ಬಂದಿಗೆ ಸಂಬಳವನ್ನು ಹೆಚ್ಚಳ ಮಾಡಲಾಗುತ್ತದೋ ಅದೇ ರೀತಿಯಾಗಿ ಸಂಸದರ ವೇತನವೂ ಕೂಡ ಕಾಲ ಕಾಲಕ್ಕೆ ಪರಿಷ್ಕರಣೆ ಆಗುತ್ತದೆ. ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರ ಇರುವ ಜಂಟಿ ಸಮಿತಿ ಅಧ್ಯಯನ ನಡೆಸಿ ಸಂಸದರ ಸಂಬಳವನ್ನು ಪರಿಷ್ಕರಿಸುತ್ತದೆ. ಹೀಗಾಗಿ ಇಲ್ಲಿ 2010ರಲ್ಲಿ ವೇತನ ಪರಿಷ್ಕರಣೆಯಂತೆ ಪ್ರಸ್ತುತ ಲೋಕಸಭಾ ಸದಸ್ಯರು ಪಡೆಯುತ್ತಿರುವ ಸಂಬಳ ಮತ್ತು ಭತ್ಯೆಯ ವಿವರಗಳನ್ನು ನೀಡಲಾಗಿದೆ.

    ಸಂಬಳ ಮತ್ತು ಭತ್ಯೆ
    #ತಿಂಗಳ ಸಂಬಳ: ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಪ್ರಸ್ತುತ ಒಂದು ತಿಂಗಳಿಗೆ 50 ಸಾವಿರ ರೂ. ಸಂಬಳ ಸಿಗುತ್ತದೆ. ದಿನ ಭತ್ಯೆ ಯಾಗಿ 2 ಸಾವಿರ ರೂ. ಸಿಕ್ಕಿದರೆ, ಕ್ಷೇತ್ರ ಭತ್ಯೆಯಾಗಿ ತಿಂಗಳಿಗೆ 45 ಸಾವಿರ ರೂ. ಸಿಗುತ್ತದೆ.

    #ಕಚೇರಿ ಭತ್ಯೆ: ಪ್ರತಿ ತಿಂಗಳು 45 ಸಾವಿರ ರೂ. ಸಿಗುತ್ತದೆ. ಇದರಲ್ಲಿ 15 ಸಾವಿರ ರೂ. ಸಭೆ, ಪೋಸ್ಟ್ ಖರ್ಚುಗಳನ್ನು ಮಾಡಬಹುದು.

    ಪ್ರವಾಸ ಭತ್ಯೆ:
    ಕ್ಷೇತ್ರ ಮತ್ತು ಸಂಸತ್ ಕಲಾಪದಲ್ಲಿ ಭಾಗವಹಿಸಲು ಮನೆಯಿಂದ ಪ್ರಯಾಣಿಸಿದರೆ ಅವರಿಗೆ ರೈಲ್ವೇ ಮತ್ತು ವಿಮಾನದಲ್ಲಿ ರಿಯಾಯಿಯಿತಿ ಇದೆ.

    #ರೈಲು: ಸಂಸದರಿಗೆ ರೈಲು ಪ್ರಯಾಣಕ್ಕೆ ಉಚಿತ ಪಾಸ್ ನೀಡಲಾಗುತ್ತದೆ. ಈ ಪಾಸನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಹವಾನಿಯಂತ್ರಿತ ಬೋಗಿ ಅಥವಾ ಎಕ್ಸ್‍ಕ್ಯುಟಿವ್ ದರ್ಜೆಯಲ್ಲಿ ಉಚಿತವಾಗಿ ಯಾವ ಸಮಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು. ಸಂಸದರ ಜೊತೆ ಅವರ ಪತಿ/ಪತ್ನಿಯರಿಗೂ ಉಚಿತ ಪ್ರಯಾಣಿಸಲು ಪಾಸ್ ನೀಡಲಾಗುತ್ತದೆ.

    #ವಿಮಾನ ಪ್ರಯಾಣ: ಒಂದು ವರ್ಷದಲ್ಲಿ ಗರಿಷ್ಟ 34 ಬಾರಿ ಸಿಂಗಲ್ ಟಿಕೆಟ್ ಮೂಲಕ ವಿಮಾನ ಪ್ರಯಾಣಿಸಬಹುದು. 8 ಬಾರಿ ಪತಿ/ ಪತ್ನಿ ಜೊತೆಯಾಗಿ ಪ್ರಯಾಣ ಬೆಳೆಸಬಹುದು. ಈ ಗರಿಷ್ಟ ಮಿತಿಯನ್ನು ಬಳಸದೇ ಇದ್ದರೆ ಉಳಿಕೆಯಾಗಿರುವ ಪ್ರಯಾಣದ ಟಿಕೆಟ್ ಮುಂದಿನ ವರ್ಷಕ್ಕೆ ವರ್ಗವಾಗುತ್ತದೆ.

    #ರಸ್ತೆ: 1 ಕಿ.ಮಿ.ಗೆ 16 ರೂ. ನೀಡಲಾಗುತ್ತದೆ.

    ವಸತಿ:
    ಹೊಸದಾಗಿ ಆಯ್ಕೆಯಾಗಿರುವ ಸಂಸದ್ ಸದಸ್ಯರಿಗೆ ಆರಂಭದಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಆಯಾ ರಾಜ್ಯಗಳು ಹೋಟೆಲ್, ಗೆಸ್ಟ್ ಹೌಸ್‍ಗಳನ್ನು ನೀಡಬೇಕಾಗುತ್ತದೆ. ಶಾಶ್ವತವಾಗಿ ನೆಲೆ ಕಲ್ಪಿಸುವವರೆಗೂ ಅವರು ಈ ಜಾಗದಲ್ಲಿ ತಂಗಬಹುದು.

    ಅವಧಿ ಪೂರ್ಣ ಆಗುವವರೆಗೂ ಸಂಸತ್ ಸದಸ್ಯರಿಗೆ ಉಚಿತ ಮನೆಯನ್ನು ನೀಡಲಾಗುತ್ತದೆ. ಒಂದು ವೇಳೆ ರಾಜೀನಾಮೆ ನೀಡಿದರೆ ಅಥವಾ ಉಚ್ಚಾಟನೆ ಮಾಡಿದರೆ ಗರಿಷ್ಟ ಒಂದು ತಿಂಗಳವರೆಗೆ ಆ ಮನೆಯಲ್ಲಿ ಉಳಿದುಕೊಳ್ಳಬಹುದು. ಒಂದು ವೇಳೆ ಸಂಸತ್ ಸದಸ್ಯರು ಅಕಾಲಿಕವಾಗಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರು 6 ತಿಂಗಳ ಕಾಲ ಆ ಮನೆಯಲ್ಲಿ ಉಳಿದುಕೊಳ್ಳಬಹುದು.

    ಇತರೆ:ಸೋಫಾ ಕವರ್, ಕರ್ಟನ್ ಗಳನ್ನು ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಅದಕ್ಕೆ ತಗಲುವ ವೆಚ್ಚ, ವರ್ಷಕ್ಕೆ 60 ಸಾವಿರ ರೂ. ಮೌಲ್ಯದ ಪೀಠೋಪಕರಣ ಖರೀದಿ ಮಾಡಬಹುದು.

    ದೂರವಾಣಿ:
    ಮೂರು ದೂರವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಒಂದು ದೂರವಾಣಿ ಸಂಖ್ಯೆ ಸಂಸದರ ನಿವಾಸ ಅಥವಾ ದೆಹಲಿಯಲ್ಲಿರುವ ಕಚೇರಿಯಲ್ಲಿ ಇನ್‍ಸ್ಟಾಲ್ ಮಾಡಬೇಕು. ಎರಡನೇಯದು ತನ್ನ ಕ್ಷೇತ್ರ ಅಥವಾ ರಾಜ್ಯದಲ್ಲಿರುವ ನಿವಾಸದಲ್ಲಿ ಇರಬೇಕು, ಮೂರನೇ ಸಂಖ್ಯೆಯನ್ನು ಎಲ್ಲಿ ಹಾಕಬೇಕು ಎನ್ನುವುದನ್ನು ಸಂಸದರ ವಿವೇಚನೆಗೆ ಬಿಡಲಾಗಿದೆ.

    # 50 ಸಾವಿರ ಸ್ಥಳೀಯ ಕರೆಗಳು ವರ್ಷದಲ್ಲಿ ಉಚಿತವಾಗಿ ಸಿಗಲಿದೆ. ಮೂರು ದೂರವಾಣಿಗಳಿಂದ ವರ್ಷಕ್ಕೆ 1.50 ಲಕ್ಷ ಸ್ಥಳೀಯ ಕರೆಗಳು ಮಾಡಬಹುದಾಗಿದೆ.

    #ಪ್ರತಿಯೊಬ್ಬ ಸಂಸದನಿಗೆ ಎಂಟಿಎನ್‍ಎಲ್ ಮೊಬೈಲ್ ಸಂಪರ್ಕ ನೀಡಲಾಗುತ್ತದೆ. ಇದರ ಜೊತೆ ಬಿಎಸ್‍ಎನ್‍ಎಲ್ ಅಥವಾ ಖಾಸಗಿ ಟೆಲಿಕಾಂ ಕಂಪೆನಿಗಳ ಮೊಬೈಲ್ ಸಂಪರ್ಕ ಸಿಗುತ್ತದೆ. ಈ ಮೊಬೈಲ್ ಮತ್ತು ಮೂರು ದೂರವಾಣಿಗಳ ಮೂಲಕ ವರ್ಷಕ್ಕೆ 1.50 ಲಕ್ಷ ಕರೆಗಳನ್ನು ಮಾಡಬಹುದು.

    ವಿದ್ಯುತ್: 50 ಸಾವಿರ ಯೂನಿಟ್ ವಿದ್ಯುತ್ ವಾರ್ಷಿಕವಾಗಿ ಬಳಸಬಹುದು.

    ವೈದ್ಯಕೀಯ: ಪ್ರಸ್ತುತ ನಾಗರಿಕ ಸೇವೆಯಲ್ಲಿರುವ ಕ್ಲಾಸ್ -1 ಅಧಿಕಾರಿಗಳಿಗೆ ಸಿಗುವ ಎಲ್ಲ ವೈದ್ಯಕೀಯ ಭತ್ಯೆಗಳು ಸಂಸದರಿಗೆ ಸಿಗುತ್ತದೆ.

    ಆದಾಯ ತೆರಿಗೆ: ಪ್ರಸ್ತುತ ಸರ್ಕಾರ ನೀಡುವ ಸಂಬಳ, ದಿನ ಭತ್ಯೆ, ಕ್ಷೇತ್ರ ಭತ್ಯೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

    ಇತರೆ ಲಾಭ: ಸಂಬಳ ಮತ್ತು ಭತ್ಯೆ ಹೊರತು ಪಡಿಸಿ ಸದಸ್ಯನಿಗೆ ಕಂಪ್ಯೂರ್ ಖರೀದಿಗೆ ಹಣ ಸಿಗುತ್ತದೆ. ಗರಿಷ್ಟ 1.50 ಲಕ್ಷ ರೂ. ಒಳಗಿನ ಡೆಸ್ಕ್ ಟಾಪ್, ಲ್ಯಾಪ್‍ಟಾಪ್, ಪ್ರಿಂಟರ್, ಸ್ಕ್ಯಾನರ್ ಖರೀದಿ ಮಾಡಬಹುದು.

    ಯೋಗಿ ಶಿಫಾರಸ್ಸಿನಲ್ಲಿ ಏನಿತ್ತು?
    ಪ್ರಸ್ತುತ ಉತ್ತರಪ್ರದೇಶದ ಸಿಎಂ ಆಗಿರುವ, ಬಿಜೆಪಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ ನೇತೃತ್ವದ ಸಂಸದರ ವೇತನ ಮತ್ತು ಭತ್ಯೆಗಳ ಜಂಟಿ ಸಮಿತಿ ಈಗ ತಿಂಗಳಿಗೆ 50 ಸಾವಿರ ರೂ. ಇರುವ ಮೂಲ ವೇತನವನ್ನು 1 ಲಕ್ಷಕ್ಕೆ ರೂ.ಗಳಿಗೆ ಏರಿಸಬೇಕೆಂದು 2016ರಲ್ಲಿ ಶಿಫಾರಸು ಮಾಡಿತ್ತು.

    ಸಂಸದರ ಕ್ಷೇತ್ರ ಭತ್ಯೆಯು 45 ಸಾವಿರ ರೂ.ನಿಂದ 90 ಸಾವಿರ ರೂ.ಗೆ. ಸಹಾಯಕರು ಮತ್ತು ಕಚೇರಿ ಭತ್ಯೆಯು 45 ಸಾವಿರ ರೂ.ನಿಂದ 90 ಸಾವಿರ ರೂ.ಗಳಿಗೆ ಹೆಚ್ಚಳ ಮಾಡುಬೇಕು. ಮಾಜಿ ಸಂಸದರ ಮಾಸಿಕ ಪಿಂಚಣಿ 20 ಸಾವಿರ ರೂ. ನಿಂದ 35 ಸಾವಿರ ರೂ.ಗಳಿಗೆ ಏರಿಸುವಂತೆ ಸಮಿತಿ ಶಿಫಾರಸು ಮಾಡಿತ್ತು.

     

  • ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಜಯ: ಬೇಡಿಕೆಗೆ ಮಣಿದ ಸರ್ಕಾರ

    ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಜಯ: ಬೇಡಿಕೆಗೆ ಮಣಿದ ಸರ್ಕಾರ

    ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಬೆಂಗಳೂರಿನ ರಸ್ತೆಗಳಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

    ಬಜೆಟ್‍ನಲ್ಲಿ ಕಾರ್ಯಕರ್ತೆಯರಿಗೆ 1 ಸಾವಿರ ಗೌರವ ಧನ ಹೆಚ್ಚಿಸಿದ್ದ ಸರ್ಕಾರ, ಇದೀಗ ಮತ್ತೆ 1 ಸಾವಿರ ರೂ ಗೌರವ ಧನ ಹೆಚ್ಚಳ ಮಾಡಿದೆ. ಅಂಗನವಾಡಿ ಸಹಾಯಕಿಯರಿಗೆ ಮತ್ತೆ 500 ಗೌರವಧನ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 8000 ಸಾವಿರ ಗೌರವಧನ ಸಿಕ್ಕಿದರೆ, ಸಹಾಯಕಿಯರಿಗೆ 4 ಸಾವಿರ ರೂ. ಸಿಗಲಿದೆ.

    ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸರ್ಕಾರ ನಿರ್ಧಾರಕ್ಕೆ ಸಂಘಟನೆಗಳು ಒಪ್ಪಿಕೊಂಡಿದೆ. ಹತ್ತು ಸಾವಿರಕ್ಕೆ ಅವ್ರು ಬೇಡಿಕೆ ಇಟ್ಟಿದ್ರು. ಆದ್ರೆ ಅಷ್ಟೊಂದು ಆಗಲ್ಲ ಎಂದು ಸಭೆಯಲ್ಲಿ ಹೇಳಿದ್ದೇವೆ. ಮುಂದಿನ ಬಜೆಟ್ ನಲ್ಲಿ ಮತ್ತೆ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಕೇಳಬಾರದು ಎಂದು ಹೇಳಿದ್ದೇವೆ. ಸರ್ಕಾರದ ತೀರ್ಮಾನವನ್ನ ಅವ್ರು ಸ್ವಾಗತಿಸಿದ್ದಾರೆ ಎಂದರು.

    ಇದೇ ವೇಳೆ ಮಾತನಾಡಿದ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ, ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಂಡಿದೆ. ಅಂಗನವಾಡಿಯಲ್ಲಿ ಎಲ್‍ಕೆಜಿ, ಯುಕೆಜಿ ಪ್ರಾರಂಭದ ಬೇಡಿಕೆಯನ್ನು ಇಟ್ಟಿದ್ವಿ, ಸರ್ವಿಸ್ ರೂಲ್ಸ್ ಗೆ  ಸಮಿತಿ ರಚನೆಗೆ ಒಪ್ಪಿಗೆ ನೀಡಲಾಗಿದೆ. ಹೋರಾಟದಲ್ಲಿ ಶೇ. 50 ರಷ್ಟು ಸಫಲರಾಗಿದ್ದೀವಿ ಎಂದು ತಿಳಿಸಿದರು.

    ಕೇಂದ್ರ ಮಾಡಲಿ:
    ಸಂಬಳ ಹೆಚ್ಚಳ ಮಾಡಿದ ಬಳಿಕ ಟ್ವಿಟ್ಟರ್‍ನಲ್ಲಿ ರಾಜ್ಯ ಸರ್ಕಾರ ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ರೂ. ಸಹಾಯಕಿಯರಿಗೆ 1 ಸಾವಿರ ರೂ. ಸಂಬಳವನ್ನು ಹೆಚ್ಚಳ ಮಾಡಿದ್ದೇವೆ. ಇದೇ ರೀತಿ ನೀವು ಸಂಬಳವನ್ನು ಏರಿಸಿ ಎಂದು ಪ್ರಧಾನಿ ಮೋದಿ ಅವರಲ್ಲಿ  ಮನವಿ ಮಾಡಿದ್ದಾರೆ.

    ಮಾರ್ಚ್ 20ರಂದು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 4 ದಿನಗಳ ಕಾಲ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಕಾರ್ಯಕರ್ತೆಯರ ಜೊತೆ ಮಾತುಕತೆ ನಡೆಸಿದ್ದ ಸರ್ಕಾರ, ಈಗ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಚುನಾವಣೆ ಮುಗಿದ ಬಳಿಕ ಏಪ್ರಿಲ್ 10 ರಂದು ಸಭೆ ನಡೆಸಿ ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಿತ್ತು.

    ಕಾರ್ಯಕರ್ತೆಯರ ಬೇಡಿಕೆ ಏನಿತ್ತು?
    ರಾಜ್ಯದಲ್ಲಿ ಒಟ್ಟು 1.25 ಲಕ್ಷ ಅಂಗನವಾಡಿ ಸಿಬ್ಬಂದಿ ಇದ್ದು, ವೇತನ 7 ಸಾವಿರದಿಂದ 10 ಸಾವಿರ ರೂ. ಹೆಚ್ಚಳ ಮಾಡಬೇಕು. ಸಹಾಯಕಿಯರ ವೇತನ 3,500 ರಿಂದ 7,500 ರೂ. ಹೆಚ್ಚಳ ವಾಗಬೇಕು. ಸಹಾಯಕಿಯರಿಗೆ ಮುಂಬಡ್ತಿ, ಪಿಂಚಣಿ, ಪಿಎಫ್ ಸೌಲಭ್ಯ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು.

    ಯಾರ ಪಾಲು ಎಷ್ಟು?
    ಯುಪಿಎ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಶೇ.90ರಷ್ಟು, ರಾಜ್ಯ ಸರ್ಕಾರ ಶೇ.10 ಗೌರವ ಧನ ಕೊಡುತಿತ್ತು. ಆದರೆ ಕೇಂದ್ರ ಸರ್ಕಾರ ಈಗ ಶೇ. 60, ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 5,200 ರೂ. ಸಹಾಯಧನ ಕೊಡ್ತಿದ್ರೆ, ಕೇಂದ್ರ ಸರ್ಕಾರದ ಪಾಲು 1,800 ರೂ. ಮಾತ್ರ. ಇದರಿಂದಾಗಿ ಒಟ್ಟು 7000 ರೂ ಸಂಬಳ ಸಿಗುತ್ತಿದೆ ಎಂದು ಕೇಂದ್ರದ ವಿರುದ್ಧ ಸಚಿವೆ ಉಮಾಶ್ರೀ ಸದನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

    ಪ್ರತಿಭಟನೆ ಯಾಕೆ?
    ಇಲ್ಲಿಯವರೆಗೆ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 6 ಸಾವಿರ ಮತ್ತು ಸಹಾಯಕಿಯರಿಗೆ 3 ಸಾವಿರ ರೂ. ಸಂಬಳ ಸಿಗುತಿತ್ತು. ಈ ವರ್ಷದ ಬಜೆಟ್‍ನಲ್ಲಿ ಸರ್ಕಾರ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಮತ್ತು ಸಹಾಯಕಿಯರಿಗೆ 500 ರೂ. ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಈ ಹೆಚ್ಚಳ ನಮಗೆ ಸಾಲುವುದಿಲ್ಲ. ಹತ್ತಿರ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಸರ್ಕಾರಗಳು ಕಾರ್ಯಕರ್ತೆಯರಿಗೆ 10 ಸಾವಿರ ರೂ. ಸಹಾಯಕಿಯರಿಗೆ 7,500 ರೂ. ನೀಡುತ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರವೂ ನಮಗೆ ಇಷ್ಟೇ ಸಂಬಳ ನೀಡಬೇಕೆಂದು ಆಗ್ರಹಿಸಿ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು.

    width=”800″ height=”650″ />

  • ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

    ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

    ಬೆಂಗಳೂರು: ಇನ್ಫೋಸಿಸ್  ಕಂಪೆನಿಯ ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯುಬಿ ಪ್ರವೀಣ್ ರಾವ್ ಅವರ ಸಂಬಳ ಏರಿಸಿದ್ದಕ್ಕೆ ಸಂಸ್ಥಾಪಕ ನಾರಾಯಣ ಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಫೆಬ್ರವರಿ ತಿಂಗಳಲ್ಲಿ ನಿರ್ದೇಶಕರ ಮಂಡಳಿಯು ಯು ಬಿ ಪ್ರವೀಣ್ ರಾವ್ ಅವರಿಗೆ ಅಗಾಧ ಮೊತ್ತದ ಸಂಬಳವನ್ನು ಏರಿಸಿದ್ದು ಯಾಕೆ ಎಂದು ಪ್ರಶ್ನಿಸಿ ನಾರಾಯಣ ಮೂರ್ತಿ ಮಾಧ್ಯಮ ಸಂಸ್ಥೆಗೆ ಇಮೇಲ್ ಮಾಡಿದ್ದಾರೆ.

    ಕಂಪೆನಿಯ ಹೆಚ್ಚಿನ ನೌಕರರಿಗೆ ಶೇ.6ರಿಂದ ಶೇ.8ರಷ್ಟು ಸಂಬಳವನ್ನು ಏರಿಸಿದರೆ, ಪ್ರವೀಣ್ ರಾವ್ ಅವರಿಗೆ ಶೇ.60ರಿಂದ ಶೇ.70ರಷ್ಟು ಸಂಬಳ ಏರಿಸಿದ್ದು ಸರಿಯಲ್ಲ ಎಂದಿದ್ದಾರೆ. ಈ ರೀತಿ ಸಂಬಳ ಏರಿಸಿದ್ದು ಕಂಪೆನಿಯ ನೌಕರರಲ್ಲಿ ಆಡಳಿತ ವರ್ಗ ಮತ್ತು ನಿರ್ದೇಶಕ ಮಂಡಳಿಯ ಮೇಲಿರುವ ವಿಶ್ವಾಸ ಕಡಿಮೆಯಾಗಲಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

    ಪ್ರವೀಣ್ ನನ್ನು 1985ರಲ್ಲಿ ನಾನೇ ನೇಮಕ ಮಾಡಿದ್ದೆ. ನಾನು ಇನ್‍ಫೋಸಿಸ್‍ನಲ್ಲಿ ಇದ್ದಾಗ ಆತನನ್ನು ಬೆಳೆಸಿದ್ದೆ. ಆದರೆ ಆ ಬಳಿಕ ಆತನನ್ನು ಸೈಡ್‍ಲೈನ್ ಮಾಡಲಾಯಿತು. 2013ರಲ್ಲಿ ನಾನು ಇನ್ಫಿಗೆ ಮರಳಿದಾಗ ಪ್ರವೀಣ್ ಕಾರ್ಯಕಾರಿ ಮಂಡಳಿಯಲ್ಲಿ ಇರಲಿಲ್ಲ. ವಿಶಾಲ್ ಸಿಕ್ಕಾ ಅವರನ್ನು ಸಿಇಒ ಹುದ್ದೆಗೆ ನೇಮಕ ಮಾಡಿದಾಗ ಪ್ರವೀಣ್ ರಾವ್‍ನನ್ನು ಇಒಒ ಹುದ್ದೆಗೆ ಏರಿಸಲಾಯಿತು. ಈಗ ಶೇ.60-70ರಷ್ಟು ಸಂಬಳ ಏರಿಕೆಯ ಆಕ್ಷೇಪಕ್ಕೂ ಪ್ರವೀಣ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ.

    ಈಗ ಎಷ್ಟು ಸಂಬಳ:
    ಪ್ರವೀಣ್ ರಾವ್‍ಗೆ ಒಟ್ಟು ವಾರ್ಷಿಕವಾಗಿ 12.5 ಕೋಟಿ ರೂ. ಪಡೆಯುತ್ತಿದ್ದಾರೆ. ಇದರಲ್ಲಿ 4.62 ಕೋಟಿ ರೂ. ಸಂಬಳ, 3.88 ಕೋಟಿ ರೂ. ಪರಿಹಾರ, 4 ಕೋಟಿ ರೂ. ಸ್ಟಾಕ್ ಕಾಂಪನ್ಸೇಶನ್ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಯಾರಿಗೆ ಎಷ್ಟು ಸಂಬಳ? ಕೋಚ್ ಗಳಿಗೆ ಎಷ್ಟು ಸಿಗುತ್ತೆ?