Tag: ಸಂಬಳ

  • ಸಂಬಳ ಹೆಚ್ಚಿಸಿ ಅಂದಿದ್ದಕ್ಕೆ ನೌಕರರಿಗೆ ಥಳಿಸಿದ ಮಾಲೀಕರು

    ಸಂಬಳ ಹೆಚ್ಚಿಸಿ ಅಂದಿದ್ದಕ್ಕೆ ನೌಕರರಿಗೆ ಥಳಿಸಿದ ಮಾಲೀಕರು

    ಬೆಂಗಳೂರು: ಸಂಬಳ ಹೆಚ್ಚಳ ಮಾಡಿ ಎಂದಿದ್ದ ನೌಕರರಿಗೆ ಮಾಲೀಕರೇ ಥಳಿಸಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿರುವ ಶಾಯಿ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ನಲಿ ನಡೆದಿದೆ.

    ಗಾರ್ಮೆಂಟ್ಸ್ ನ 8 ಜನ ಮಾಲೀಕರು ಮಹಿಳೆಯರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ನೌಕರರಿಗೆ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಏಪ್ರಿಲ್ 2ರಂದು ಸಂಬಳ ಹೆಚ್ಚಿಸುವಂತೆ ನೌಕರರು ಮನವಿ ಮಾಡಿದ್ದರು. ಬುಧವಾರ ಮತ್ತೆ ಕೇಳಿದಾಗ ನೌಕರರು ಮತ್ತು ಮಾಲೀಕರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಮಾಲೀಕರು ನೌಕರರ ಮೇಲೆ ಹಲ್ಲೆ ನಡೆಸಿ ಕೆಲಸದಿಂದ ತೆಗೆದು ಹಾಕಿದ್ದಾರೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಮ್ಮ ಎಂಬವರನ್ನು ಮಾದನಾಯಕನಹಳ್ಳಿಯ ಶಿವಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಉಡುಪಿ: ರಾಜ್ಯಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ತಮ್ಮ ಆಪ್ತ ಸಹಾಯಕನಿಗೆ ಲಕ್ಷಗಟ್ಟಲೆ ಸಂಬಳ ಬಾಕಿಯಿಟ್ಟಿದ್ದಾರಂತೆ. ವರ್ಷಗಟ್ಟಲೆ ಕಾದರೂ ಸಂಬಳ ಕೊಟ್ಟಿಲ್ವಂತೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ರೂ ಆಸ್ಕರ್ ಪರ್ಸ್ ಬಿಚ್ಚಿಲ್ವಂತೆ.

    ಆಸ್ಕರ್ ಆಪ್ತ ಸಹಾಯಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಮಾಡಲಿದ್ದಾರೆ. ಆಸ್ಕರ್ ಅವರ ಮಣಿಪಾಲ ವರ್ಕ್ ಶಾಪ್ ನಲ್ಲಿ ನಂತರ ಮನೆಯಲ್ಲಿ 1972ರಿಂದ 1987ರವರಗೆ ಉಡುಪಿಯ ಅಂಬಲ್ಪಾಡಿಯ ಗೋಪಾಲ ಪೂಜಾರಿ ಕೆಲಸಕ್ಕಿದ್ದರು. ಮೊದಲು ಸೂಪರ್ ವೈಸರ್ ಆಗಿದ್ದ ಗೋಪಾಲ್ ಪೂಜಾರಿ ನಂತರ ಆಪ್ತ ಸಹಾಯಕರಾದರು. ಈ ಸಂದರ್ಭದಲ್ಲಿ ಸಂಬಳ ನೀಡಿಲ್ಲ. ಆ ಮೇಲೆ ಸಂಬಳ ಕೊಡುವುದಾಗಿ ಹೇಳುತ್ತಾ ದಿನ ದೂಡಿದರು.

    ಈವರೆಗೆ ನನಗೆ 6 ಲಕ್ಷ 10 ಸಾವಿರ ರೂಪಾಯಿ ಸಂಬಳದ ಹಣ ಕೊಡೋದು ಬಾಕಿಯಿದೆ ಅಂತ ಗೋಪಾಲ ಪೂಜಾರಿ ಆರೋಪಿಸಿದ್ದಾರೆ. 1995ರಲ್ಲಿ ಸೋನಿಯಾಗಾಂಧಿಗೆ ದೂರು ನೀಡಿದ್ದೆ. ಸೋನಿಯಾಗಾಂಧಿ ಆಸ್ಕರ್ ಅವರನ್ನು ಕರೆದು ಸಂಬಳ ಕೊಡಿ ಎಂದು ತಾಕೀತು ಮಾಡಿದ್ದರು. ಆದ್ರೂ ಅವರು ಹಣ ಕೊಡಲಿಲ್ಲ. ಮಗಳ ಮದುವೆ ಸಂದರ್ಭದಲ್ಲಾದ್ರೂ ಕೊಡಬಹುದು ಎಂದು ಕಾದು ಈಗ ಮೋಸ ಹೋಗಿದ್ದೇನೆ ಎಂದು ಅವರು ಹೇಳಿದರು.

    ಕಾರ್ಮಿಕ ಇಲಾಖೆ, ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಿಲ್ಲ ಎಂದು ಗೋಪಾಲ್ ಪೂಜಾರಿ ದೂರಿದ್ದಾರೆ. ಏಪ್ರಿಲ್ 1 ರವರೆಗೆ ಗಡುವು ನೀಡಿರುವ ಅವರು, ಏಪ್ರಿಲ್ 2ರಂದು ಉಪವಾಸ ಕೂರುವುದಾಗಿ ಹೇಳಿದ್ದಾರೆ. ಗೋಪಾಲ್ ಪೂಜಾರಿ ಪತ್ನಿ ಚಂಚಲ ಅನಾರೋಗ್ಯದಿಂದ ಬಳಲುತ್ತಿದ್ದು ಸಂಬಂಧಿಕರಿಂದ ಸಹಾಯ ಯಾಚಿಸುವಂತಾಗಿದೆ ಎಂದು ಹೇಳಿದರು.

    15 ದಿನದ ಹಿಂದೆ ಆಸ್ಕರ್ ಗೆ ಪತ್ರ ಬರೆದಿದ್ದೆ. ಅದಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಕೊಟ್ಟ ಹಿಂಬರವನ್ನೂ ಲಗತ್ತಿಸಿದ್ದೆ. ಇದಕ್ಕೂ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು. ನಿಗಮ ಮಂಡಳಿಗೆ ನೇಮಕ ಮಾಡುತ್ತೇನೆ ಎಂದು ಒಂದು ಬಾರಿ ಆಸ್ಕರ್ ಭರವಸೆ ಕೊಟ್ಟಿದ್ದರು ಎಂಬುದನ್ನು ಗೋಪಾಲ್ ಪೂಜಾರಿ ನೆನಪಿಸಿಕೊಂಡರು.

  • ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್- ವೇತನ ಪರಿಷ್ಕರಣೆ ಅಧಿಕೃತ ಆದೇಶಕ್ಕೆ ಸಿಎಂ ಸಹಿ

    ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್- ವೇತನ ಪರಿಷ್ಕರಣೆ ಅಧಿಕೃತ ಆದೇಶಕ್ಕೆ ಸಿಎಂ ಸಹಿ

    ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ.

    ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಅಧಿಕೃತ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ. ಈ ಕುರಿತು ಇಂದೇ ಆದೇಶ ಹೊರಬೀಳಲಿದೆ. 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ನೌಕರರ ವೇತನ ಶೇಕಡಾ 30ರಷ್ಟು ಹೆಚ್ಚಳವಾಗಲಿದೆ. ಶನಿವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಘಟನೋತ್ತರ ಮಂಜೂರಾತಿ ಸಿಗಲಿದೆ.

    ವರದಿಯಲ್ಲಿ ಏನು ಇರಬಹುದು?
    1. 6 ನೇ ವೇತನ ಆಯೋಗದ ಸಂಭವನೀಯ ವರದಿಯಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆಯನ್ನು ಮಾಡಬಹುದು. ನೌಕರರಿಗೆ ವಾರಕ್ಕೆ ಎರಡು ರಜೆ, ಕೆಲ ಜಯಂತಿಗಳಿಗೆ ಇರುವ ರಜೆಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗಿದೆ.

    2. ಈ ಬಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಸಾಧ್ಯತೆ ಇದೆ. ಅಂದರೆ ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ ನಿಗದಿಯಾಗುವ ಸಾಧ್ಯತೆ ಇದ್ದು, ಕನಿಷ್ಠ ಮೂಲ ವೇತನ 16,350 ರೂ. ಮತ್ತು ಗರಿಷ್ಠ ಮೂಲ ವೇತನ 1,32,925 ರೂ. ನಿಗದಿಯಾಗಬಹುದು.

    3. ಐಎಎಸ್ ಅಲ್ಲದ ಅಧಿಕಾರಿಗಳಿಗೆ 95,325 ರೂ., ಗ್ರೂಪ್ ಎ ನೌಕರರಿಗೆ 48,625 ರೂ., ಗ್ರೂಪ್ ಬಿ ನೌಕರರಿಗೆ 39,425 ರೂ., ಎಫ್‍ಡಿಎ ನೌಕರರಿಗೆ 28,125 ರೂ., ಸಿ ಗ್ರೂಪ್ ನೌಕರರಿಗೆ 19,850 ರೂ., ಮತ್ತು ಡಿ ಗ್ರೂಪ್ ನೌಕರರಿಗೆ 16,350 ರೂ. ಎಂದು ಮೂಲ ಸಂಬಳ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

  • ವಾರದಲ್ಲಿ ಐದೇ ದಿನ ಕೆಲ್ಸ, ಸಂಬಳ ಹೆಚ್ಚಳ – ರಾಜ್ಯದ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್

    ವಾರದಲ್ಲಿ ಐದೇ ದಿನ ಕೆಲ್ಸ, ಸಂಬಳ ಹೆಚ್ಚಳ – ರಾಜ್ಯದ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್

    ಬೆಂಗಳೂರು: ವಿಧಾನಸಭೆ ಎಲೆಕ್ಷನ್ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ನೀಡುವುದು ಖಚಿತವಾಗಿದೆ.

    ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗ ನೀಡಿರೋ ವರದಿಯನ್ನು ಯಥಾವತ್ತು ಜಾರಿಗೊಳಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜನವರಿ ಅಂತ್ಯಕ್ಕೆ ಆಯೋಗದ ಅವಧಿ ಕೊನೆಗೊಳ್ಳಲಿದೆ. ಅವಧಿ ಮುಗಿಯೋದಕ್ಕೂ ಮುನ್ನ ವರದಿ ಮಂಡನೆಯಾಗಲಿದೆ.

    6 ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತಂದು ಚುನಾವಣೆ ಎದುರಿಸಲು ನಿರ್ಧಾರ ಮಾಡಲಾಗಿದ್ದು, ಸರ್ಕಾರದ ಅವಧಿ ಮುಗಿಯೋ ಮುನ್ನ ಸಿದ್ದರಾಮಯ್ಯ ಕೊನೆಯ ಬ್ರಹ್ಮಸ್ತ್ರ ಬಿಡಲಿದ್ದಾರೆ.

     

    ಈ ಮೂಲಕ 6 ಲಕ್ಷ ಸರ್ಕಾರಿ ನೌಕರರ ಕುಟುಂಬದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿ ಫೆಬ್ರವರಿ 16ರಂದು ಮಂಡಿಸುವ ಬಜೆಟ್‍ ನಲ್ಲಿ ವೇತನ ಆಯೋಗದ ವರದಿ ಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

    ಪಬ್ಲಿಕ್ ಟಿವಿಗೆ 6 ನೇ ವೇತನ ಆಯೋಗದ ಸಂಭವನೀಯ ವರದಿ ಸಿಕ್ಕಿದೆ. ಹಾಗಾದ್ರೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗೋ ಭರ್ಜರಿ ಉಡುಗೊರೆ ಏನು ಅಂತ ನೋಡೋದಾದ್ರೆ:

    – ವಾರದಲ್ಲಿ 5 ದಿನ ಮಾತ್ರ ಕೆಲಸ, ಶನಿವಾರ, ಭಾನುವಾರ ರಜೆ.
    – ಕೆಲ ಜಯಂತಿಗಳಿಗೆ ರಜೆ ರದ್ದು ಮಾಡಲು ಶಿಫಾರಸ್ಸು.
    – ಕೆಲಸದ ಸಮಯದಲ್ಲಿ ಬದಲಾವಣೆ.
    – ನೌಕರರ ವೇತನದಲ್ಲಿ ಭಾರಿ ಹೆಚ್ಚಳ.
    – ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ.
    – ಕನಿಷ್ಠ ವೇತನ ಮೊತ್ತ 16,350 ರೂ.ಗೆ, ಗರಿಷ್ಠ ವೇತನ 1,32,925 ರೂ.ಗೆ ಏರಿಕೆ.
    – ಗ್ರೂಪ್ ಡಿ – 16,350 ರೂ., ಗ್ರೂಪ್ ಸಿ – 19,850, ಎಫ್‍ಡಿಐ – 28,125 ರೂ.
    – ಗ್ರೂಪ್ ಬಿ – 39,425 ರೂ., ಗ್ರೂಪ್ ಎ – 48,625 ರೂ., ಐಎಎಸ್ ಯೇತರ ಅಧಿಕಾರಿಗಳು-95,325 ರೂ.

  • ಐಟಿ ಕಂಪೆನಿಗಳಲ್ಲಿ ಭಾರೀ ವೇತನ ಏರಿಕೆ ಬೇಡ: ನಾರಾಯಣ ಮೂರ್ತಿ

    ಐಟಿ ಕಂಪೆನಿಗಳಲ್ಲಿ ಭಾರೀ ವೇತನ ಏರಿಕೆ ಬೇಡ: ನಾರಾಯಣ ಮೂರ್ತಿ

    ಮುಂಬೈ: ಸಾಫ್ಟ್ ವೇರ್  ಕಂಪೆನಿಗಳಲ್ಲಿ ಹಿರಿಯ ಅಧಿಕಾರಿಗಳು ತಮಗೆ ತಾವೇ ಭಾರೀ ವೇತನವನ್ನು ಏರಿಕೆ ಮಾಡುವುದು ಸರಿಯಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

    ಬಾಂಬೆ ಐಐಟಿಯಲ್ಲಿ ಮಾತನಾಡಿದ ಅವರು, ಐಟಿ ಕಂಪನಿಗಳಲ್ಲಿ ಕಿರಿಯರು ಮತ್ತು ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ವೇತನ ಏರಿಕೆ ನಿರಾಕರಿಸುತ್ತಿರುವ ಬೆಳವಣಿಗೆ ಕಳವಳಕಾರಿಯಾಗಿದೆ. ಹಿರಿಯ ಅಧಿಕಾರಿಗಳು ಕಿರಿಯರಿಗಾಗಿ ಸಂಬಳ  ಏರಿಕೆಯನ್ನು ತ್ಯಾಗ ಮಾಡಬೇಕು ಎಂದು ತಿಳಿಸಿದರು.

    ದೊಡ್ಡ ಹುದ್ದೆಯಲ್ಲಿ ಇರುವವರು ಭಾರೀ ವೇತನ ಏರಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಹೆಚ್ಚಿನ ಜನರು ಬಡತನ ಅನುಭವಿಸುತ್ತಿರುವಾಗ ಈ ರೀತಿ ವೇತನ ಏರಿಕೆಯನ್ನು ಬಂಡವಾಳ ಶಾಹಿ ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಾರಾಯಣ ಮೂರ್ತಿ ಅವರು ಹಿರಿಯ ಅಧಿಕಾರಿಗಳ ಸಂಬಳ ಕುರಿತಾಗಿ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಹೊಸದಾಗಿ ಸೇರ್ಪಡೆಯಾಗಿರುವ ಯುವ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಇದರ ಬದಲಾಗಿ ಹಿರಿಯ ಮ್ಯಾನೇಜ್‍ಮೆಂಟ್ ಹಂತದಲ್ಲಿರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    ನಮ್ಮ ಇನ್ಫೋಸಿಸ್ ಉದಾಹರಣೆ ತೆಗೆದುಕೊಳ್ಳಿ. 2011ರ ವೇಳೆ ಸಾಫ್ಟ್ ವೇರ್ ಉದ್ಯಮಕ್ಕೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಹಿರಿಯ ಹಂತದ ಮ್ಯಾನೇಜ್‍ಮೆಂಟ್ ನಲ್ಲಿರುವ ವ್ಯಕ್ತಿಗಳೆಲ್ಲ ಸಭೆ ನಡೆಸಿದೆವು. ಸಭೆಯಲ್ಲಿ ಸಂಬಳವನ್ನು ಕಡಿತಗೊಳಿಸುವ ತೀರ್ಮಾನವನ್ನು ಮಾಡಿದೆವು. ಯುವ ಟೆಕ್ಕಿಗಳಿಗೆ ಜಾಬ್ ನೀಡಲು ಮತ್ತು ಅವರನ್ನು ರಕ್ಷಿಸಲು ಹಿರಿಯ ಸಿಬ್ಬಂದಿ ಈ ತ್ಯಾಗದ ನಿರ್ಧಾರವನ್ನು ಈಗ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

    ಸುಮ್ಮನೆ ಉದ್ಯೋಗಿಯನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಯಾಕೆಂದರೆ ಅವರನ್ನು ನಂಬಿಕೊಂಡ ಕುಟುಂಬವು ಇದೆ. 2008, 2011ರಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸಮಸ್ಯೆ ನಮಗೆ ಹೊಸದೆನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗದೇ ಇರಲು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ನಾರಾಯಣ ಮೂರ್ತಿ ತಿಳಿಸಿದ್ದರು. ಇದನ್ನೂ ಓದಿ: ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

  • 6 ತಿಂಗಳಿನಿಂದ ಸಂಬಳವಾಗದೆ ಮನನೊಂದ ಬೆಸ್ಕಾಂ ಉದ್ಯೋಗಿ ಆತ್ಮಹತ್ಯೆಗೆ ಯತ್ನ

    6 ತಿಂಗಳಿನಿಂದ ಸಂಬಳವಾಗದೆ ಮನನೊಂದ ಬೆಸ್ಕಾಂ ಉದ್ಯೋಗಿ ಆತ್ಮಹತ್ಯೆಗೆ ಯತ್ನ

    ತುಮಕೂರು: ಕಳೆದ 6 ತಿಂಗಳಿನಿಂದ ಸಂಬಳ ಆಗದ ಹಿನ್ನೆಲೆಯಲ್ಲಿ ಮನನೊಂದ ಬೆಸ್ಕಾಂ ಗ್ರಾಮ ವಿದ್ಯುತ್ ಪ್ರತಿನಿಧಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಈ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ನಡೆದಿದೆ. ಮಣಕಿಕೆರೆ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರೋ ಎಸ್ ಕುಮಾರ್ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಬೆಸ್ಕಾಂ ಎಇಇ ಚಂದ್ರುನಾಯಕ ಕಾರಣ ಇಲ್ಲದೆ ಕಳೆದ 6 ತಿಂಗಳಿನಿಂದ ಸಂಬಳ ತಡೆ ಹಿಡಿದಿದ್ದರು ಅನ್ನೋ ಆರೋಪ ಕೇಳಿಬಂದಿದೆ.

    ಈ ಹಿನ್ನೆಲೆಯಲ್ಲಿ ಕುಮಾರ್ ಸಂಸಾರ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಗುರುವಾರ ರಾತ್ರಿ ಹಾಲ್ಕುರಿಕೆ ಗ್ರಾಮದ ತನ್ನ ತೋಟದಲ್ಲಿ ಡೆತ್ ನೋಟ್ ಬರೆದಿಟ್ಟು ವಿಷ ಕುಡಿದಿದ್ದಾರೆ.

    ಕುಮಾರ್ ವಿಷ ಕುಡಿದಿರೋದನ್ನು ಗಮನಿಸಿದ ಅಕ್ಕಪಕ್ಕದವರು ತಕ್ಷಣೆ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಕೈ ತುಂಬಾ ಸಂಬಳ ಕೊಡ್ತೀವಿ ಅಂದ್ರು – ಮೋದಿ ಹೆಸರಲ್ಲಿ ಮಾಡಿದ್ರೂ ಮೋಸ!

    ಕೈ ತುಂಬಾ ಸಂಬಳ ಕೊಡ್ತೀವಿ ಅಂದ್ರು – ಮೋದಿ ಹೆಸರಲ್ಲಿ ಮಾಡಿದ್ರೂ ಮೋಸ!

    – ಸಿಟ್ಟಿಗೆದ್ದ ಯುವಕರಿಂದ ಪೀಠೋಪಕರಣ ಧ್ವಂಸ

    ಬೆಂಗಳೂರು: ಪ್ರಧಾನಿ ಮೋದಿ ಹೆಸರು ಬಳಸಿಕೊಂಡು ಮೋಸ ಮಾಡ್ತಿದ್ದವರ ವಿರುದ್ಧ ಯುವಕ-ಯುವತಿಯರು ರೊಚ್ಚಿಗೆದ್ದು ಕಚೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡುವ ಮೂಲಕ ಪ್ರತಿಭಟನೆ ಮಡಿದ್ದಾರೆ.

    ನಗರದ ಹೊರವಲಯದಲ್ಲಿರುವ ಶ್ರೀ ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ಎಂಬ ಸಂಸ್ಥೆ ನಿರುದ್ಯೋಗ ಯುವಕ-ಯುವತಿಯರಿಗೆ ಮೋಸ ಮಾಡಿದೆ. ಡಿಜಿಟಲ್ ಇಂಡಿಯಾದ ಮಾದರಿಯಲ್ಲಿ ಲಾಗಿನ್ ಇಂಡಿಯಾ ಎನ್ನುವ ವೆಬ್ ಸೈಟ್ ಮುಖಾಂತರ ಸಾವಿರಾರು ನಿರುದ್ಯೋಗಿಗಳಿಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ರೊಚ್ಚಿಗೆದ್ದ ನಿರುದ್ಯೋಗಿ ಯುವಕ-ಯುವತಿಯರು ಗಲಾಟೆ ನಡೆಸಿ ಪೀಠೋಪಕರಣಗಳನ್ನ ದ್ವಂಸಗೊಳಿಸಿ, ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

    ಟ್ರಸ್ಟ್ ಅಧ್ಯಕ್ಷ ಹರ್ಷ ನರ್ಸಿಂಗ್ ಕಾಲೇಜು, ಸ್ಕೂಲ್ ಹಾಗೂ ಆಸ್ಪತ್ರೆಯನ್ನ ನಡೆಸುತ್ತಿದ್ದಾರೆ. ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಲಕ್ಷಾಂತರ ರೂ. ಸಂಬಳ ನೀಡುತ್ತಿದ್ದ ಅಮೆರಿಕ ಕಂಪನಿಯ ಕೆಲಸ ಬಿಟ್ಟು ಸೇನೆಗೆ ಸೇರಿದ ಟೆಕ್ಕಿ

    ಲಕ್ಷಾಂತರ ರೂ. ಸಂಬಳ ನೀಡುತ್ತಿದ್ದ ಅಮೆರಿಕ ಕಂಪನಿಯ ಕೆಲಸ ಬಿಟ್ಟು ಸೇನೆಗೆ ಸೇರಿದ ಟೆಕ್ಕಿ

    ಡೆಹ್ರಾಡೂನ್: ತನ್ನ ಮನಸ್ಸಿನ ಮಾತು ಕೇಳಿ, ದೇಶ ಸೇವೆ ಮಾಡಲು ಅಮೆರಿಕ ಕಂಪನಿ ನೀಡಿದ ಕೆಲಸ ತೊರೆದು ಯುವಕನೊಬ್ಬ ಭಾರತೀಯ ಸೈನ್ಯವನ್ನು ಸೇರಿದ್ದಾರೆ.

    ಬರ್ನಾನ ಯಾದಗಿರಿ ಎಂಬವರೇ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇರಿರುವ ಯುವಕನಾಗಿದ್ದು, ಶನಿವಾರ ಡೆಹ್ರಾಡೂನ್‍ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ ತರಬೇತಿ ಪೂರ್ಣಗೊಳಿಸಿ ಸೇನೆಯ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

    ಬರ್ನಾನ ಯಾದಗಿರಿ ಅವರ ತಂದೆ ಬರ್ನಾನ ಗುನ್ನಯ್ಯ ಹಲವು ವರ್ಷಗಳಿಂದ ಹೈದರಾಬಾದ್‍ನ ಸಿಮೆಂಟ್ ಕಾರ್ಖಾನೆಯಲ್ಲಿ 100 ರೂ. ಪಡೆದು ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದರು.

    ಡೆಹ್ರಾಡೂನ್ ನಲ್ಲಿ ಶನಿವಾರ ನಡೆದ ಪರೇಡ್ ನಂತರ ಮಾತನಾಡಿದ ಬರ್ನಾನ್ ತನ್ನ ತಂದೆ ತುಂಬ ಸರಳ ವ್ಯಕ್ತಿಯಾಗಿದ್ದು, ನಾನು ಮಿಲಿಟರಿಯಲ್ಲಿ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿರುವುದಾಗಿ ತಿಳಿದಿದ್ದಾರೆ. ಆದರೆ ಮಿಲಿಟರಿ ಅಧಿಕಾರಿಯಾಗಿ ನೇಮಕಗೊಂಡಿದ್ದೇನೆ. ಆದರೆ ನಮ್ಮ ಪೋಷಕರು ಉತ್ತಮ ಸಂಬಳ ದೊರೆಯುವ ಸಾಫ್ಟ್ ವೇರ್ ಕೆಲಸವನ್ನು ಬಿಟ್ಟು ಸೈನ್ಯಕ್ಕೆ ಸೇರಿ ತಪ್ಪು ಮಾಡುತ್ತಿದ್ದೀಯಾ ಎಂದು ಎಚ್ಚರಿಸಿದರು. ಆದರೆ ನಾನು ಇಷ್ಟಪಟ್ಟಿದ್ದರೆ ಕಾರ್ಪೋರೆಟ್ ಸಂಸ್ಥೆಯಲ್ಲಿ ಕೆಲಸ ಪಡೆದು ಉತ್ತಮ ಸಂಬಳ ಪಡೆಯಬಹುದಿತ್ತು. ಆದರೆ ನನಗೆ ಸೈನ್ಯದಲ್ಲಿ ಸೇರಿ ಸೇವೆ ಮಾಡಬೇಕೆಂಬ ಕನಸು ಕಂಡಿದ್ದೆ ಅದನ್ನು ಸಾಧಿಸಿದ್ದೇನೆ. ಸೈನ್ಯದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ನನ್ನ ಕರ್ತವ್ಯಗಳನ್ನು ಪಾಲಿಸುತ್ತೇನೆ ಎಂದರು.

    ಅಂದಹಾಗೇ, ಬರ್ನಾನ ಯಾದಗಿರಿ ಬಾಲ್ಯದಿಂದಲೂ ಕಡು ಬಡತನದಲ್ಲಿ ಬೆಳೆದ ಯುವಕ, ವಿದ್ಯಾಬ್ಯಾಸ ಸಮಯದಲ್ಲಿ ಸರ್ಕಾರ ನೀಡುವ ಪ್ರೋತ್ಸಹ ಹಣದಲ್ಲೇ ಪದವಿ ಪಡೆದವರು. ಅದರೂ ದೇಶ ಸೇವೆ ಮಾಡಬೇಕೆಂಬ ಕನಸಿನಿಂದ ಇಂಜಿನಿಯರ್ ಪದವಿ ಪಡೆದು, ಕ್ಯಾಟ್ (ಸಿಎಟಿ) ಪರೀಕ್ಷೆಯಲ್ಲಿ ಶೇ.93.4 ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೇ ಅಮೆರಿಕದ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನೀಡಿದ ಉದ್ಯೋಗವನ್ನು ನಿರಾಕರಿಸಿದ್ದಾರೆ. ಇಂದೋರ್ ನ ಐಐಎಂ ಸಂಸ್ಥೆಯು ಇವರಿಗೆ ಉದ್ಯೋಗ ನೀಡಿತ್ತು.

    ತಮ್ಮ ಮಗ ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸೈನ್ಯದ ಸಮವಸ್ತ್ರ ಧರಿಸಿದನ್ನು ಕಂಡು ತಂದೆ ಬರ್ನಾನ ಗುನ್ನಯ್ಯ ಅವರ ಕಣ್ಣುಗಳು ಸಂತೋಷ ತುಂಬಿ ಬಂದಿತ್ತು.

     

  • ಮಾಜಿ ಶಾಸಕರಿಗೂ ಬೇಕಂತೆ ನಿವೃತ್ತಿ ವೇತನ ಹೆಚ್ಚಳ

    ಮಾಜಿ ಶಾಸಕರಿಗೂ ಬೇಕಂತೆ ನಿವೃತ್ತಿ ವೇತನ ಹೆಚ್ಚಳ

    ಬೆಂಗಳೂರು: ರಾಜ್ಯದ ಮಾಜಿ ಶಾಸಕರು ತಮ್ಮ ನಿವೃತ್ತಿ ವೇತನವನ್ನು ಹೆಚ್ಚಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    5 ರಿಂದ 10 ಸಾವಿರ ರೂ. ನಿವೃತ್ತಿ ವೇತನ ಹೆಚ್ಚಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ನಮಗೂ ಮದುವೆ, ಮುಂಜಿ ಅಂತಹ ಕಾರ್ಯಕ್ರಮಗಳು ಕಡಿಮೆ ಆಗಿಲ್ಲ. ಜನರ ಭೇಟಿ ನಿಂತಿಲ್ಲ ಎಂದು ಮಾಜಿ ಶಾಸಕರು ಹೇಳುತ್ತಾರೆ. ಈಗ ಕೊಡುತ್ತಿರುವ ನಿವೃತ್ತಿ ವೇತನ ಸಾಕಾಗುತ್ತಿಲ್ಲ. 40 ಸಾವಿರ ನಿವೃತ್ತಿ ವೇತನಕ್ಕೆ ಐದರಿಂದ ಹತ್ತು ಸಾವಿರ ಸೇರಿಸಿ ಎಂದು ಆಗ್ರಹಿಸಿದ್ದಾರೆ.

    ಮಾಜಿ ಶಾಸಕರು ಈ ಬೇಡಿಕೆ ಹಿಡಿದುಕೊಂಡು ವಿಪಕ್ಷ ನಾಯಕರು, ಸ್ಪೀಕರ್, ಸಭಾಪತಿ ಅವರ ಕಚೇರಿಗಳಿಗೆ ಭೇಟಿ ನೀಡಿದ್ದಾರೆ. ಒಂದು ವೇಳೆ ನಿವೃತ್ತಿಯ ವೇತನ ಹೆಚ್ಚಾದರೆ 650 ಮಂದಿ ಮಾಜಿ ಶಾಸಕರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

     

  • ದೀಪಾವಳಿಗೆ ಕೇಂದ್ರದಿಂದ ಉಪನ್ಯಾಸಕರಿಗೆ ಬಂಪರ್ ಗಿಫ್ಟ್

    ದೀಪಾವಳಿಗೆ ಕೇಂದ್ರದಿಂದ ಉಪನ್ಯಾಸಕರಿಗೆ ಬಂಪರ್ ಗಿಫ್ಟ್

    ನವದೆಹಲಿ: ಕೇಂದ್ರ ಸರ್ಕಾರ ಉಪನ್ಯಾಸಕರಿಗೆ ದೀಪಾವಳಿ ಬಂಪರ್ ಗಿಫ್ಟ್ ನೀಡಿದೆ. 7ನೇ ವೇತನ ಆಯೋಗದ ಶಿಫಾರಸಿನಂತೆ ದೇಶದ ಎಲ್ಲ ಕೇಂದ್ರ, ರಾಜ್ಯ ಹಾಗೂ ಯುಜಿ ಕಾಲೇಜುಗಳ ಉಪನ್ಯಾಸಕರ ವೇತನ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

    ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ, 2016ರ ಜನವರಿ 1 ರಿಂದ ಪೂರ್ವಾನ್ವಯವಾಗುವಂತೆ ಶೇ.22 ರಿಂದ ಶೇ.28 ರಷ್ಟು ವೇತನ ಹೆಚ್ಚಳವಾಗಲಿದೆ ಎಂದು ತಿಳಿಸಿದರು.

    ಕೇಂದ್ರ ಸಚಿವ ಸಂಪುಟ ಈಗಾಗಲೇ ಇದಕ್ಕೆ ಒಪ್ಪಿಗೆ ನೀಡಿದ್ದು, ದೇಶದ ಒಟ್ಟು 7.51 ಲಕ್ಷ ಉಪನ್ಯಾಸಕರಿಗೆ ಲಾಭವಾಗಲಿದೆ. ಈ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕವಾಗಿ 9,800 ಕೋಟಿ ರೂ. ಹೊರೆಯಾಗಲಿದೆ ಎಂದರು.

    329 ವಿಶ್ವವಿದ್ಯಾಲಯಗಳು, 12,912 ಕಾಲೇಜುಗಳ ಉಪನ್ಯಾಸಕರು, ಸಹಾಯಕ ಪ್ರೊಫೆಸರ್‍ಗಳಿಗೆ ಏಳನೇ ವೇತನ ಆಯೋಗದಡಿ ವೇತನ ಹೆಚ್ಚಳವಾಗಲಿದೆ.

    ಸಂಪುಟ ಕಾರ್ಯದರ್ಶಿ ಪಿ.ಕೆ ಸಿನ್ಹಾ ನೇತೃತ್ವದ ಕಾರ್ಯದರ್ಶಿಗಳ ಸಮಿತಿಯು ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಆಧಾರಿಸಿ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ.