Tag: ಸಂಪುಟ ವಿಸ್ತರಣೆ

  • ಸಂಪುಟ ಫೈನಲ್‍ಗೆ ದಿಲ್ಲಿಗೆ ಸಿಎಂ ಯಡಿಯೂರಪ್ಪ- ಯಾರು ಇನ್? ಬಿಜೆಪಿಯಲ್ಲಿ ಯಾರಿಗೆ ಸ್ಥಾನ?

    ಸಂಪುಟ ಫೈನಲ್‍ಗೆ ದಿಲ್ಲಿಗೆ ಸಿಎಂ ಯಡಿಯೂರಪ್ಪ- ಯಾರು ಇನ್? ಬಿಜೆಪಿಯಲ್ಲಿ ಯಾರಿಗೆ ಸ್ಥಾನ?

    – ಗೆದ್ದ ಶಾಸಕರಲ್ಲಿ 9 ಮಂದಿಗಷ್ಟೇ ಸಚಿವ ಸ್ಥಾನ
    – 50:50 ಲಿಸ್ಟಲ್ಲಿ ಹೆಬ್ಬಾರ್, ನಾರಾಯಣಗೌಡ

    ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗಿದ್ದ ವಿಘ್ನ ಕೊನೆಗೂ ಬಗೆಹರಿದಂತೆ ಕಾಣುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಬುಲಾವ್ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ದೆಹಲಿಗೆ ತೆರಳುತ್ತಿದ್ದಾರೆ. ಒಂದು ವೇಳೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಫೆಬ್ರವರಿ 2ಕ್ಕೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಗೆ ಸಿಕ್ಕಿರುವ ಮೂಲಗಳ ಪ್ರಕಾರ, 9+3 ಫಾರ್ಮುಲಾವೇ ಫೈನಲ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಗ್ಗೆ ಬೆಳಗಾವಿಯಲ್ಲಿ ಸುಳಿವು ನೀಡಿರುವ ಸಿಎಂ ಯಡಿಯೂರಪ್ಪ ಅವರು, ಗೆದ್ದ ಒಂದಿಬ್ಬರು ಶಾಸಕರು ಬಿಟ್ಟರೆ ಬಹುತೇಕರಿಗೆ ಸಚಿವ ಸ್ಥಾನ ಸಿಗಲಿದೆ ಅಂತ ಹೇಳಿದ್ದಾರೆ. ಸಿಎಂ ನಾಳೆಯೇ ದೆಹಲಿಗೆ ತೆರಳುತ್ತಿದ್ದು, ವರಿಷ್ಠರೊಂದಿಗೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.

    ಯಾರನ್ನೂ ಕೈ ಬಿಡುವುದಿಲ್ಲ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ನೋಡೋಣ ಎಂದು ಸಿಎಂ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಇತ್ತ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಸಚಿವ ಆರ್.ಅಶೋಕ್, ಎಲ್ಲರಿಗಿಂತ ಮುಖ್ಯಮಂತ್ರಿಗಳಿಗೆನೇ ಸಂಪುಟ ವಿಸ್ತರಣೆ ಅರ್ಜೆಂಟಿದೆ ಅಂತ ಹೇಳಿದ್ದಾರೆ. 3-4 ದಿನಗಳಲ್ಲಿ ಆಗೇ ಆಗುತ್ತೆ ಅಂತ ಮತ್ತೊಬ್ಬ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಾಳೆ ದೆಹಲಿಗೆ ತೆರಳುತ್ತಿರುವ ಸಿಎಂ 2 ಪಟ್ಟಿ ಸಿದ್ಧಪಡಿಸಿದ್ದಾರೆ. ಇದರಲ್ಲಿ ಗೆದ್ದ 11 ಶಾಸಕರ 7 ಶಾಸಕರ ಪಟ್ಟಿ ಬಹುತೇಕ ಫೈನಲ್ ಆಗಿದೆ. 50:50 ಲಿಸ್ಟ್‍ನಲ್ಲಿ ಕೆಲವರ ಹೆಸರು ಸೇರಿಸಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಸಚಿವ ಸ್ಥಾನ ಯಾರಿಗೆ ಕನ್ಫರ್ಮ್?
    * ರಮೇಶ್ ಜಾರಕಿಹೊಳಿ, ಗೋಕಾಕ್
    * ಬಿ.ಸಿ. ಪಾಟೀಲ್, ಹಿರೇಕೆರೂರು
    * ಎಸ್.ಟಿ. ಸೋಮಶೇಖರ್, ಯಶವಂತಪುರ
    * ಬೈರತಿ ಬಸವರಾಜ್, ಕೆ.ಆರ್.ಪುರಂ
    * ಗೋಪಾಲಯ್ಯ, ಯಶವಂತಪುರ
    * ಸುಧಾಕರ್, ಚಿಕ್ಕಬಳ್ಳಾಪುರ
    * ಆನಂದ್ ಸಿಂಗ್, ವಿಜಯನಗರ

    ಯಾರಿಗೆ ಮಂತ್ರಿಗಿರಿ ಒಲಿದ್ರೂ ಒಲಿಯಬಹುದು?
    * ಶಿವರಾಂ ಹೆಬ್ಬಾರ್, ಯಲ್ಲಾಪುರ
    * ನಾರಾಯಣಗೌಡ, ಕೆ.ಆರ್. ಪೇಟೆ
    * ಮಹೇಶ್‍ಕುಮಟಳ್ಳಿ, ಅಥಣಿ

    ಯಾರಿಗೆ ಸಚಿವ ಸ್ಥಾನ ಡೌಟ್?
    ಶ್ರೀಮಂತಪಾಟೀಲ್, ಕಾಗವಾಡ

    ಬಿಜೆಪಿ ಲಿಸ್ಟ್:
    ಹೊಸದಾಗಿ ಗೆದ್ದ ಶಾಸಕರ ಜೊತೆಗೆ ಮೂಲ ಬಿಜೆಪಿಗರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿವೆ. 3-4 ಸ್ಥಾನಗಳನ್ನು ಅಂದಾಜಿಸಲಾಗಿದ್ದು, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೆಸರು ಮಾತ್ರ ಫೈನಲ್ ಆಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಬಿಜೆಪಿಯಿಂದ ಯಾರು ಮಿನಿಸ್ಟರ್?
    * ಉಮೇಶ್ ಕತ್ತಿ, ಹುಕ್ಕೇರಿ
    * ಅರವಿಂದ ಲಿಂಬಾವಳಿ, ಮಹದೇವಪುರ
    * ಸುನೀಲ್‍ಕುಮಾರ್, ಕಾರ್ಕಳ
    * ಹಾಲಪ್ಪ ಆಚಾರ್, ಯಲಬುರ್ಗಾ
    * ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ
    * ಅಂಗಾರ, ಸುಳ್ಯ

    ಡಿಸಿಎಂ ಶಾಕ್:
    ಒಂದು ಕಡೆ ಸಚಿವ ಸ್ಥಾನದ ಲೆಕ್ಕಾಚಾರ ನಡೆಯುತ್ತಿದ್ದರೆ, ಇನ್ನೊಂದು ಕಡೆ ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲು ಹಾಗೂ ರಮೇಶ್ ಜಾರಕಿಹೊಳಿ ಅವರಿಗೆ ಸಿಎಂ ಯಡಿಯೂರಪ್ಪ ಶಾಕ್ ಕೊಟ್ಟಿದ್ದಾರೆ. ಮೂವರು ಡಿಸಿಎಂಗಳು ಮುಂದುವರಿಯಲಿದ್ದು, ಹೊಸದಾಗಿ 4ನೇ ಡಿಸಿಎಂ ಹುದ್ದೆ ಸೃಷ್ಠಿ ಇಲ್ಲ ಅಂತ ಹೇಳಿಕೆ ನೀಡುವ ಮೂಲಕ ಆಘಾತ ನೀಡಿದ್ದಾರೆ. ಸಿಎಂ ಹೇಳಿಕೆಯಿಂದ ವಾಲ್ಮೀಕಿ ಸಮುದಾಯ ಆಘಾತಕ್ಕೆ ಒಳಗಾಗಿದ್ದರೆ, ನಾನು ಡಿಸಿಎಂ ಆಗಬೇಕೆಂಬುದು ಜನರ ಅಭಿಲಾಷೆಯಾಗಿದೆ ಅಂತ ಶ್ರೀರಾಮುಲು ಹೇಳಿದ್ದಾರೆ.

    ಶಾಂತಿ ಕುಸ್ತಿ:
    ಸಂಪುಟ ವಿಸ್ತರಣೆ ಬಿಜೆಪಿಯಲ್ಲಿ ಶತ್ರುಗಳನ್ನು ಮಿತ್ರರು, ಮಿತ್ರರನ್ನು ಶತ್ರುಗಳನ್ನಾಗಿಸಿದೆ. ಸಚಿವ ಸ್ಥಾನ ವಿಚಾರವಾಗಿ ಡಿಸಿಎಂ ಸವದಿ, ಸಚಿವ ಸ್ಥಾನದ ಆಕಾಂಕ್ಷಿ ಉಮೇಶ್ ಕತ್ತಿ ಮಧ್ಯೆ ಐದಾರು ತಿಂಗಳಿಂದ ಮುನಿಸಿತ್ತು. ಆದ್ರೀವತ್ತು ಸಿಎಂ ನಿವಾಸಕ್ಕೆ ಬಂದಿದ್ದ ಉಭಯ ನಾಯಕರು, ಮುನಿಸು ಮರೆತು ಸಿಎಂ ಕಾರ್‍ನಲ್ಲೇ ಅಕ್ಕಪಕ್ಕ ಕೂತು ಬಿಎಸ್‍ವೈ ಜೊತೆ ಬೆಂಗಳೂರು ಏರ್‍ಪೋರ್ಟ್‍ಗೆ ತೆರಳಿದ್ರು. ಅಲ್ಲಿಂದ ಬೆಳಗಾವಿಗೆ ಪಯಣಿಸಿದರು. ಆದರೆ ಡಿಸಿಎಂ ಅಶ್ವಥ್ ನಾರಾಯಣ, ಡಿಸಿಎಂ ಆಸ್ಥಾನ ಆಕಾಂಕ್ಷಿ ಶ್ರೀರಾಮುಲು ಮಧ್ಯೆ ವೈಮನಸ್ಸು ಮೂಡಿದಂತಿದೆ. ಯಾಕಂದ್ರೆ, ಚನ್ನರಾಯಪಟ್ಟಣದಲ್ಲಿ ಪೆಟ್ರೋಲ್ ಬಂಕ್ ಒಂದರ ಉದ್ಘಾಟನೆಗೆ ಇಬ್ಬರೂ ನಾಯಕರು ಬೆಂಗಳೂರಿಂದ ತೆರಳಿದ್ರೂ ಇಬ್ಬರೂ ಪ್ರತ್ಯೇಕ ಹೆಲಿಕಾಪ್ಟರ್‍ಗಳಲ್ಲಿ ಪಯಣಿಸಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ ನಾವಿಬ್ರೂ ಒಂದೇ ಕಾಪ್ಟರ್‍ನಲ್ಲಿ ಬರ್ತೇವೆ ಅಂತ ಹೇಳಿದ್ವಿ. ಆದರೆ, ಬಂಕ್ ಮಾಲೀಕರು ಪ್ರತ್ಯೇಕ ಹೆಲಿಕಾಪ್ಟರ್ ಮಾಡಿದ್ರು. ಇಲ್ಲದಿದ್ದರೆ ನಾವಿಬ್ಬರೂ ಒಂದೇ ಕಾರ್‍ನಲ್ಲಿ ಬರ್ತಿದ್ದೆವು ಎಂದರು.

  • ಸಿಎಂ ಇಬ್ರಾಹಿಂಗಿಂತ ದೇವದಾಸಿಯರ ಬದುಕು ಪವಿತ್ರ : ಸಿ.ಟಿ.ರವಿ

    ಸಿಎಂ ಇಬ್ರಾಹಿಂಗಿಂತ ದೇವದಾಸಿಯರ ಬದುಕು ಪವಿತ್ರ : ಸಿ.ಟಿ.ರವಿ

    ಚಿಕ್ಕಮಗಳೂರು: ಮಾಜಿ ಸಚಿವ ಸಿಎಂ ಇಬ್ರಾಹಿಂ ಜೀವನಕ್ಕಿಂತ ದೇವದಾಸಿರ ಜೀವನ ಪವಿತ್ರವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

    ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವರು, ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 14 ಜನರನ್ನ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ದೇವದಾಸಿಯರಿಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದರು. ದೇವದಾಸಿಯವರ ಬದುಕು ಅವರಿಗೆ ಗೊತ್ತಿಲ್ಲ. ಅವರದ್ದು ಪವಿತ್ರವಾದ ಬದುಕು. ಕಲೆಯ ಜೊತೆ ಸಮರ್ಪಿತವಾದಂತ ಬದುಕು ಅವರದ್ದು. ಅವರಿಗೆ ಅಪಮಾನ ಮಾಡಿದ್ದಾರೆ. ದೇವದಾಸಿಯರಿಗೆ ಅಪಮಾನ ಮಾಡಿರೋದನ್ನ ನಾನು ಖಂಡಿಸುತ್ತೇನೆ ಎಂದರು.

    ಅದಕ್ಕೂ ಮುಂಚೆ ಅವರ ಜೀವನ ಹೇಗೆ, ಸಿಎಂ ಇಬ್ರಾಹಿಂ ಜೀವನ ಹೇಗೆ ಎಂದು ಅವರೇ ಹೋಲಿಕೆ ಮಾಡಿಕೊಳ್ಳಲಿ ಎಂದಿದ್ದಾರೆ. ಇಬ್ರಾಹಿಂ ಜೀವನಕ್ಕಿಂತ ದೇವದಾಸಿಯರ ಬದುಕು ಪವಿತ್ರವಾಗಿದೆ ಎಂದು ಇಬ್ರಾಹಿಂ ವಿರುದ್ಧ ಕಿಡಿಕಾರಿದ್ದಾರೆ.

    ಸಿಎಂ ಇಬ್ರಾಹಿಂ ಹೇಳಿದ್ದೇನು?
    ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ 17 ಜನರದ್ದು ದೇವದಾಸಿಯವರ ಪರಿಸ್ಥಿತಿಯಂತಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ರೇಣುಕಾಚಾರ್ಯ ಇವರೆಲ್ಲ ಬಸ್ ಸ್ಟಾಂಡ್ ಬಸವಿಯರು. ಇಂತವರ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ. ಮೂಲ ಬಿಜೆಪಿಗರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಅವರು ಇಷ್ಟು ದಿನ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಪಟ್ಟದ ರಾಣಿಯನ್ನು ಬಿಟ್ಟು, ಕುಣಿಯೋ ರಾಣಿ ಹಿಂದೆ ಹೋದವರಿಗೆ ಬಿಜೆಪಿ ಸ್ಥಾನ ನೀಡುತ್ತಿದೆ. ಹಾಗಾಗಿ ಪಟ್ಟದ ರಾಣಿ ಇದ್ದವರು ನಮಗೂ ಸಚಿವ ಸ್ಥಾನ ಬೇಕೆಂದು ಹೇಳುತ್ತಿದ್ದಾರೆ. ಈ ಕಗ್ಗಂಟನ್ನು ಸಿಎಂ ಪರಿಹರಿಸಬೇಕಿದೆ ಎಂದಿದ್ದರು.

  • ವಿಸ್ತರಣೆಯಾ, ಪುನಾರಚನೆಯಾ? – ಸಚಿವರು V/S ಮಿತ್ರಮಂಡಳಿ ನಡುವೆ ಸ್ಥಾನ ಸಂಘರ್ಷ

    ವಿಸ್ತರಣೆಯಾ, ಪುನಾರಚನೆಯಾ? – ಸಚಿವರು V/S ಮಿತ್ರಮಂಡಳಿ ನಡುವೆ ಸ್ಥಾನ ಸಂಘರ್ಷ

    ಬೆಂಗಳೂರು: ಈ ತಿಂಗಳಾಂತ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಬಹತೇಕ ಪಕ್ಕಾ ಆಗಿದೆ. ಆದರೆ ನಡೆಯೋದು ವಿಸ್ತರಣೆಯೋ ಅಥವಾ ಪುನಾರಚನೆಯೋ ಅನ್ನುವ ಗೊಂದಲವೂ ಮುಂದುವರಿದಿದೆ. ಸಂಪುಟ ವಿಸ್ತರಣೆ ರೇಸ್‍ನಲ್ಲಿ ಉಳಿಯೋರು ಯಾರು, ಅಳಿಯೊರು ಯಾರು ಅನ್ನೋ ಪ್ರಶ್ನೆಯೂ ಮೂಡಿದೆ.

    ಇಷ್ಟಕ್ಕೆಲ್ಲ ಕಾರಣ, ಪಕ್ಷದಲ್ಲಿ ಶುರುವಾಗಿರುವ ಮೂಲ-ವಲಸಿಗರ ನಡುವಿನ ಗುಪ್ತ ಜಟಾಪಟಿ. ಋಣ ಸಂದಾಯ ತೀರಿಸೋರು ಮತ್ತು ಋಣ ಸಂದಾಯ ಕೇಳಿದವರು ಎರಡೂ ಗುಂಪುಗಳು ಈಗ ಜಿದ್ದಿಗೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಹೌದು, ಬಿಜೆಪಿಯಲ್ಲಿ ಸ್ಥಾನ ಸಂಘರ್ಷ ಶುರುವಾಗಿದೆ. ಸಂಪುಟ ವಿಸ್ತರಣೆಯಾ, ಸಂಪುಟ ಪುನಾರಚನೆಯಾ ಅನ್ನೋದೇ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಗೊಂದಲವೇ ಈಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಹಾಲಿ ಸಚಿವರು ಮತ್ತು ಮಿತ್ರಮಂಡಳಿ ನಡುವೆ ಪಕ್ಷದ ವೇದಿಕೆಯಲ್ಲೇ ಸಂಘರ್ಷ ನಡೆಯುತ್ತಿದೆ.

    ಸಂಪುಟ ವಿಸ್ತರಣೆಯಾ ಅಥವಾ ಪುನಾರಚನೆಯಾ ಎಂಬ ಆತಂಕದಲ್ಲಿ ಹಾಲಿ ಸಚಿವರು ಮತ್ತು ಮಿತ್ರಮಂಡಳಿ ಶಾಸಕರು ಪರಸ್ಪರ ಒಗ್ಗಟ್ಟು ಕಾಯ್ದುಕೊಂಡಿದ್ದಾರೆ. ಸಂಪುಟ ಪುನಾರಚನೆ ಬೇಡವೇ ಬೇಡ ಅಂತ ಹಾಲಿ ಸಚಿವರು ಪಟ್ಟು ಹಿಡಿದಿದ್ದಾರೆ. ಮಿತ್ರಮಂಡಳಿಗೆ ಏನಾದ್ರೂ ಕೊಟ್ಕೊಳ್ಳಿ, ನಮ್ಮನ್ನು ಮಾತ್ರ ಮುಟ್ಟಬೇಡಿ. ನಮ್ಮ ತಂಟೆಗೆ ಬರಬೇಡಿ, ನಮ್ಮ ಖಾತೆಗೆ ಕೈ ಹಾಕಬೇಡಿ ಎಂದು ಹಾಲಿ ಸಚಿವರು ಯಡಿಯೂರಪ್ಪ ಎದುರು ಬೇಡಿಕೆ ಇಟ್ಟಿದ್ದಾರಂತೆ. ಪುನಾರಚನೆ ನೆಪದಲ್ಲಿ ತಮ್ಮ ಖಾತೆ ಹೋಗುವ ಆತಂಕದಲ್ಲಿರುವ ಈ ಸಚಿವರು ಇಷ್ಟು ಕಾಲ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿದ್ದಾರೆ ಎನ್ನಲಾಗಿದೆ. ಒಗ್ಗಟ್ಟಿನಿಂದ ಸಂಪುಟ ಪುನಾರಚನೆಗೆ ಎಲ್ಲ ಸಚಿವರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತ ಮಿತ್ರಮಂಡಳಿ ಶಾಸಕರೇನೂ ಕಮ್ಮಿಯಿಲ್ಲ. ಹಾಲಿ ಸಚಿವರ ಬಳಿ ಇರುವ ಪ್ರಭಾವಿ ಖಾತೆಗಳನ್ನ ನಮಗೆ ಕೊಡಿಸಿ ಅಂತ ಮಿತ್ರಮಂಡಳಿ ಸದಸ್ಯರು ಹೇಳುತ್ತಿದ್ದಾರೆ. ನಮ್ಮಿಂದ ಸರ್ಕಾರ ಬಂತು, ಸಿಎಂ, ಡಿಸಿಎಂ, ಮಿನಿಸ್ಟರ್ ಆದ್ರಿ. ಈಗ ನಾವು ಕೇಳಿದ ಖಾತೆ ಕೊಡಲ್ಲ ಅಂದ್ರೆ ಹೇಗೆ? ಸಂಪುಟ ವಿಸ್ತರಣೆ ಬೇಡ ಪುನಾರಚನೆ ಮಾಡಿ ಅಂತ ಮಿತ್ರಮಂಡಳಿ ತಂಡದವರು ಹೇಳುತ್ತಿದ್ದಾರಂತೆ. ಕೊಟ್ಟ ಮಾತು ಉಳಿಸಿಕೊಳ್ಳಿ ಅಂತ ಮಿತ್ರಮಂಡಳಿಯವರು ಯಡಿಯೂರಪ್ಪ ಬೆನ್ನು ಬಿದ್ದಿದ್ದಾರಂತೆ. ಇವರಿಬ್ಬರ ಕಿತ್ತಾಟದಲ್ಲಿ ಯಡಿಯೂರಪ್ಪ ಪಾಡು ಯಾರ ಬಳಿಯೂ ಹೇಳಿಕೊಳ್ಳದಂತಾಗಿದೆ.

  • ಜನವರಿ 31ಕ್ಕೆ ಸಚಿವ ಸಂಪುಟ ವಿಸ್ತರಣೆ?

    ಜನವರಿ 31ಕ್ಕೆ ಸಚಿವ ಸಂಪುಟ ವಿಸ್ತರಣೆ?

    ಬೆಂಗಳೂರು: ಸಚಿವ ಸಂಪುಟ ರಚನೆಗೆ ಕೊನೆಗೂ ಮುಕ್ತಿ ಸಿಗಲಿದೆ. ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 31 ರಂದು ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ.

    ಗುರುವಾರದಂದು ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಗುರುವಾರ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆ ಚರ್ಚೆ ನಡೆಸಲಿರುವ ಸಿಎಂ, ಅಂದೇ ಸಚಿವ ಸಂಪುಟ ಕುರಿತು ಮಾತುಕತೆ ಫೈನಲ್ ಮಾಡಲಿದ್ದಾರೆ. ಹೈಕಮಾಂಡ್ ಅಂದೇ ಒಪ್ಪಿಗೆ ಕೊಟ್ರೆ ಜನವರಿ 31 ರಂದು ಬಹುತೇಕ ಸಂಪುಟ ವಿಸ್ತರಣೆ ನಡೆಯಲಿದೆ. ಸಿಎಂ ದೆಹಲಿಗೆ ಹೋಗುವ ಕುರಿತು ನಾಳೆ ಸ್ಪಷ್ಟತೆ ಸಿಗಲಿದೆ. ಒಂದೊಮ್ಮೆ ದೆಹಲಿಗೆ ಸಿಎಂ ಬಿಎಸ್‍ವೈ ತೆರಳದಿದ್ದರೂ ಜನವರಿ 31ರಂದೇ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ದೆಹಲಿಗೆ ಸಿಎಂಗೆ ಬುಲಾವ್ ಕೊಡದಿದ್ದರೂ ಫೋನ್ ಮೂಲಕವೇ ಸಿಎಂಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಓಕೆ ಅನ್ನುವ ಸಾಧ್ಯತೆಯಿದೆ.

    ಸದ್ಯದ ಮಾಹಿತಿಗಳ ಪ್ರಕಾರ ಮಿತ್ರಮಂಡಳಿ ಶಾಸಕರ ಪೈಕಿ 9 ರಿಂದ 10 ಜನರಿಗೆ ಸಚಿವ ಸ್ಥಾನ ಕೊಡೋದು ನಿರ್ಧಾರ ಆಗಿದೆ. ಪಕ್ಷದ ಮೂಲ ಶಾಸಕರ ಪೈಕಿ 2 ರಿಂದ 4 ಜನರಿಗೆ ಇದೇ ಸಂಪುಟ ವಿಸ್ತರಣೆಯಲ್ಲಿ ಮಂತ್ರಿಗಿರಿ ಸಿಗುವ ಸಾಧ್ಯತೆಯೂ ದಟ್ಟವಾಗಿದೆ. ಆದರೆ ಇದರ ಬಗ್ಗೆ ಹೈಕಮಾಂಡ್ ಕಡೆಯಿಂದಲೇ ಇನ್ನೂ ಹೆಚ್ಚಿನ ಸ್ಪಷ್ಟತೆ ಸಿಗಬೇಕಿದೆ.

    ನಾಳೆ ಸಿಎಂ ಯಡಿಯೂರಪ್ಪ ಬೆಳಗಾವಿ ಪ್ರವಾಸ ಹೊರಡಲಿದ್ದು ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಂತರ ಅಂದೇ ಸಂಜೆ ಸಿಎಂ ಶಿವಮೊಗ್ಗಕ್ಕೆ ತೆರಳಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಜನವರಿ 30 ರಂದು ಸಿಎಂ ಬೆಂಗಳೂರಿಗೆ ಮರಳುವುದು ನಿಗದಿಯಾಗಿದೆ. ಒಂದೊಮ್ಮೆ ದೆಹಲಿಯಿಂದ ಬುಲಾವ್ ಬಂದರೆ ಜನವರಿ 30 ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿ ಅಲ್ಲಿಂದ ನೇರವಾಗಿ ದೆಹಲಿ ವಿಮಾನ ಹತ್ತಲಿದ್ದಾರೆ.

    ದೆಹಲಿ ಬುಲಾವ್ ಬರದಿದ್ದರೆ ಸಿಎಂ ಅವರು ಶಿವಮೊಗ್ಗದಿಂದ ಮಂಗಳೂರಿಗೆ ತೆರಳುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಭಾಗವಹಿಸುವ ಸಾಧ್ಯತೆ ಇದೆ. ಆದರೆ ಇಷ್ಟೆಲ್ಲದರ ಮಧ್ಯೆ ಜನವರಿ 31 ರಂದು ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

     

  • ಬಿಜೆಪಿಯಲ್ಲೂ ಬಂಡಾಯ ಸಾರಿದ್ರಾ ರಮೇಶ್ ಜಾರಕಿಹೊಳಿ?

    ಬಿಜೆಪಿಯಲ್ಲೂ ಬಂಡಾಯ ಸಾರಿದ್ರಾ ರಮೇಶ್ ಜಾರಕಿಹೊಳಿ?

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಸಾಕಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬ, ಗೊಂದಲ ಹಿನ್ನೆಲೆಯಲ್ಲಿ ಪಕ್ಷಾಂತರಿ ಶಾಸಕರು ಹಾಗೂ ಮೂಲ ಬಿಜೆಪಿ ಆಕಾಂಕ್ಷಿ ಶಾಸಕರು ಅಸಮಧಾನಗೊಂಡಿದ್ದಾರೆ. ಸಂಪುಟ ಸೇರ್ಪಡೆ ಸಂಘರ್ಷದ ಜೊತೆ ಜೊತೆಗೇ ಖಾತೆಗಾಗಿ ಪಟ್ಟು ಕಾಳಗವೂ ಜೋರಾಗಿದೆ. ಈ ಬೆನ್ನಲ್ಲೇ ಮಿತ್ರಮಂಡಳಿ ಗುಂಪಿನ ನಾಯಕರಾಗಿರುವ ರಮೇಶ್ ಜಾರಕಿಹೊಳಿ ರಾಜೀನಾಮೆಯ ಮೆಗಾ ಬಾಂಬ್ ಸಿಡಿಸಿದ್ದಾರೆ ಎನ್ನಲಾಗಿದೆ.

    ನನಗೆ ಡಿಸಿಎಂ ಸ್ಥಾನ ಬೇಕಾಗಿಲ್ಲ. ನನಗೆ ಅದೇ ಖಾತೆ ಬೇಕು ಅಂದ್ರೆ ಬೇಕು. ಆ ಖಾತೆ ಸಿಗದಿದ್ದರೆ ನಾನು ರಿಸೈನ್ ಮಾಡ್ತೀನಿ ಎಂದು ಯಡಿಯೂರಪ್ಪ ಮುಂದೆ ರಮೇಶ್ ಜಾರಕಿಹೊಳಿ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಹೇಳಲಾಗಿದೆ.

    ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆಯೇ ಬೇಕೆಂದು ತೀವ್ರ ಪಟ್ಟು ಹಿಡಿದು ಕೂತಿದ್ದಾರೆ ಎನ್ನಲಾಗಿದೆ. ಮೈತ್ರಿ ಅವಧಿಯಲ್ಲಿ ಡಿಕೆಶಿ ಪಡೆದಿದ್ದ ಜಲಸಂಪನ್ಮೂಲ ಖಾತೆಯೇ ಬೇಕು. ನನ್ನನ್ನು ಡಿಸಿಎಂ ಕೂಡ ಮಾಡಬೇಡಿ. ಆದರೆ ಸಚಿವ ಪದವಿ ಜತೆಗೆ ಜಲಸಂಪನ್ಮೂಲ ಇಲಾಖೆಯನ್ನೇ ಕೊಡಿ ಎಂದು ರಮೇಶ್ ಜಾರಕಿಹೊಳಿ ಪ್ರಬಲವಾಗಿ ಬೇಡಿಕೆ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಡಿಕೆಶಿಗೆ ಚಾಲೆಂಜ್ ಮಾಡಿ ನಾನು ರಾಜೀನಾಮೆ ಕೊಟ್ಟು ಬಂದೆ. ಜಲಸಂಪನ್ಮೂಲ ಖಾತೆಯನ್ನೇ ತೆಗೆದುಕೊಂಡು ಬರ್ತೀನಿ ಎಂದು ಚಾಲೆಂಜ್ ಮಾಡಿದ್ದೆ. ಹಾಗಾಗಿ ಸ್ವಾಭಿಮಾನಕ್ಕಾಗಿ ನನ್ನ ರಾಜಕೀಯ ಭವಿಷ್ಯ ಲೆಕ್ಕಿಸದೇ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದೇನೆ. ಈಗ ಆ ಖಾತೆಯೆ ಸಿಗಲಿಲ್ಲ ಅಂದ್ರೆ ನನ್ನ ಸ್ವಾಭಿಮಾನ ಮತ್ತು ಚಾಲೆಂಜ್‍ಗೆ ಧಕ್ಕೆ ಬರುತ್ತೆ. ಕೊಟ್ರೆ ಆ ಖಾತೆಯನ್ನೇ ಕೊಡಿ, ಇಲ್ಲ ಅಂದ್ರೆ ನಾನು ಈಗ ಮತ್ತೆ ರಿಸೈನ್ ಮಾಡ್ತೀನಿ ಎಂದು ಯಡಿಯೂರಪ್ಪ ಎದುರೇ ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ; ಪಕ್ಷ ಒಪ್ಪಿದರೆ ರಾಜೀನಾಮೆ ನೀಡಲು ಸಿದ್ಧ: ಡಿಸಿಎಂ ಕಾರಜೋಳ

    ರಮೇಶ್ ಜಾರಕಿಹೊಳಿ ಮಾತಿಗೆ ಸಿಎಂ ಯಡಿಯೂರಪ್ಪ ತೆಲೆಕೆಡಿಸಿಕೊಂಡಿದ್ದಾರಂತೆ. ಸದ್ಯಕ್ಕೆ ಸಂಪುಟ ವಿಸ್ತರಣೆ ಈ ತಿಂಗಳಲ್ಲೇ ಸುಸೂತ್ರವಾಗಿ ನಡೆದರೆ ಸಾಕೆಂದು ಒದ್ದಾಡುತ್ತಿರುವ ಸಿಎಂಗೆ ಬೆಳಗಾವಿ ಸಾಹುಕಾರ್‍ನ ಈ ಹೊಸ ಆಟ ಪೇಚಿಗೆ ಸಿಲುಕಿಸಿದೆಯಂತೆ. ಹಾಗಾದ್ರೆ ರಮೇಶ್ ಜಾರಕಿಹೊಳಿ ಖಾತೆಗಾಗಿ ಒತ್ತಡ ತಂತ್ರ ಹಾಕ್ತಿದ್ದಾರಾ..? ಒಂದು ವೇಳೆ ಜಲಸಂಪನ್ಮೂಲ ಖಾತೆ ಸಿಗದಿದ್ದರೆ ನಿಜಕ್ಕೂ ಅವರು ರಾಜೀನಾಮೆ ಮಾಡ್ತಾರಾ ಎಂಬ ಈ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

  • ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ-ಎರಡು ಬಿಕ್ಕಟ್ಟಿಗೆ ಒಂದೇ ಮೂಲ

    ಸಂಪುಟ ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ-ಎರಡು ಬಿಕ್ಕಟ್ಟಿಗೆ ಒಂದೇ ಮೂಲ

    ನವದೆಹಲಿ: ಕಳೆದ ಒಂದು ತಿಂಗಳಿಂದ ರಾಜ್ಯ ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಬೈ ಎಲೆಕ್ಷನ್ ಬಳಿಕ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ, ವಿಪಕ್ಷ ನಾಯಕ ಸ್ಥಾನಕ್ಕೆ ಇನ್ನು ಮರು ನೇಮಕವಾಗಿಲ್ಲ. ಇತ್ತ ಬಿಜೆಪಿಯಲ್ಲಿ ಚುನಾವಣೆಯಲ್ಲಿ ಗೆದ್ದ ನೂತನ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಾಕಷ್ಟು ವಿಳಂಬವಾದರೂ ಹೈಕಮಾಂಡ್ ಮಾತ್ರ ತಲೆಕೆಡಿಸಿಕೊಂಡಿಲ್ಲ.

    ಈ ಎರಡು ಕಾರ್ಯಗಳ ವಿಳಂಬಕ್ಕೆ ಕಾರಣ ದೆಹಲಿ ವಿಧಾನಸಭೆ ಚುನಾವಣೆ ಎಂದು ಮೂಲಗಳು ಹೇಳುತ್ತಿವೆ. ಫೆಬ್ರವರಿ 8 ರಂದು ದೆಹಲಿಯಲ್ಲಿ ಮತದಾನ ನಡೆಯಲಿದ್ದು, ಈಗಾಗಲೇ ಭರ್ಜರಿ ಪ್ರಚಾರ ಕಾರ್ಯಗಳು ಆರಂಭವಾಗಿದೆ. ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಆಪ್ ಮನ್ನಡೆಯಲ್ಲಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಹೆಚ್ವು ಶ್ರಮವನ್ನು ಚುನಾವಣೆ ಮೇಲೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    2015ರ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಖಾತೆ ತೆರೆಯಲಾಗದೆ ಸೊನ್ನೆ ಸುತ್ತಿಕೊಂಡಿತ್ತು. ಈ ಬಾರಿ ಬಿಜೆಪಿ ಕನಿಷ್ಠ ಎರಡಂಕಿ ಪಡೆಯುವ ಲೆಕ್ಕಚಾರದಲ್ಲಿದೆ. ಕಾಂಗ್ರೆಸ್ ಕನಿಷ್ಠ ಖಾತೆ ತೆರೆಯುವ ಜಿದ್ದಿನಲ್ಲಿದೆ.

    ಹೀಗಾಗಿ ಈ ಚುನಾವಣೆ ಎರಡು ಪಕ್ಷಗಳಿಗೂ ಬಹುಮುಖ್ಯವಾಗಿದ್ದು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವಿಕೆ. ಅಲ್ಲದೇ ದೆಹಲಿ ಚುನಾವಣೆ ಹೊರತು ಇನ್ಯಾವುದೇ ವಿಚಾರಗಳ ಬಗ್ಗೆ ಹೈಕಮಾಂಡ್ ಚರ್ಚೆ ಮಾಡುತ್ತಿಲ್ಲ. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪಗೆ ಹೈಕಮಾಂಡ್ ಭೇಟಿಗೆ ಅವಕಾಶ ನೀಡಿಲ್ಲ. ರಾಜ್ಯ ನಾಯಕರ ಜೊತೆಗೆ ಚರ್ಚೆಯಾದರೂ ಗೊಂದಲಗಳಿರುವ ಹಿನ್ನೆಲೆ ಕೆಪಿಸಿಸಿ ನೇಮಕಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಲೆ ಕೆಡಿಸಿಕೊಂಡಿಲ್ಲ.

  • ಈ ತಿಂಗಳೂ ನಡೆಯಲ್ವಾ ಸಂಪುಟ ವಿಸ್ತರಣೆ?

    ಈ ತಿಂಗಳೂ ನಡೆಯಲ್ವಾ ಸಂಪುಟ ವಿಸ್ತರಣೆ?

    ಬೆಂಗಳೂರು: ಸಚಿವ ಸಂಪುಟ ಈ ತಿಂಗಳಾಂತ್ಯದಲ್ಲಿ ನಡೆದೇ ಬಿಡುತ್ತೆ ಅಂತ ಅನ್ಕೊಂಡಿರೋರಿಗೆ ಶಾಕಿಂಗ್ ನ್ಯೂಸೊಂದು ಹೊರಬಿದ್ದಿದೆ. ಈ ತಿಂಗಳು ಸಂಪುಟ ವಿಸ್ತರಣೆ ಡೌಟು ಎಂಬ ಮಾಹಿತಿ ಲಭ್ಯವಾಗಿದೆ. ಬುಧವಾರ ವಿಸ್ತರಣೆಗೆ ಪ್ಲಾನ್ ಮಾಡಿಕೊಂಡಿದ್ದ ಯಡಿಯೂರಪ್ಪಗೆ ದೆಹಲಿ ಶಾಕ್ ಕಾದಿದೆಯಂತೆ.

    ಹೌದು, ಸಂಪುಟ ವಿಸ್ತರಣೆ ಜನವರಿ 29ಕ್ಕೆ ನಡೆಯಲ್ಲ ಅನ್ನುವ ಶಂಕಾಸ್ಪದ ಸುದ್ದಿ ಈಗ ಬಿಜೆಪಿ ಪಾಳಯದಲ್ಲೇ ಓಡಾಡ್ತಿದೆ. ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗುವ ತನಕ ಸಂಪುಟ ವಿಸ್ತರಣೆ ಬಹುತೇಕ ನಡೆಯಲ್ಲ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಆದರೆ ಯಡಿಯೂರಪ್ಪನವರು ದೆಹಲಿಗೆ ಹೋಗುವ ಲಕ್ಷಣಗಳೇ ಕಾಣುತ್ತಿಲ್ಲ. ವರಿಷ್ಠರು ಸಹ ಸದ್ಯಕ್ಕೆ ಯಡಿಯೂರಪ್ಪನವರನ್ನು ದೆಹಲಿಗೆ ಬುಲಾವ್ ಕೊಡುವ ಸಾಧ್ಯತೆಯೂ ಇಲ್ಲ ಎನ್ನಲಾಗುತ್ತಿದೆ. ನಾಳೆಯೂ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಲ್ಲ. ಯಾಕೆಂದರೆ ನಾಳೆ ಬೆಳಗಾವಿ ಪ್ರವಾಸ ನಿಗದಿಯಾಗಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಭಾಗವಹಿಸುತ್ತಿದ್ದಾರೆ.

    ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಜೆ.ಪಿ ನಡ್ಡಾ ಅವರನ್ನು ಸಿಎಂ ಯಡಿಯೂರಪ್ಪ ಭೇಟಿ ಮಾಡದ ಹೊರತು ಸಂಪುಟ ವಿಸ್ತರಣೆ ಡೌಟು ಎಂದು ಮೂಲಗಳು ಹೇಳುತ್ತಿವೆ. ಜೆ.ಪಿ ನಡ್ಡಾ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಅಧಿಕೃತ ಒಪ್ಪಿಗೆ ಪಡೆಯದಿದ್ರೆ ಹೈಕಮಾಂಡ್ ಮಟ್ಟದಲ್ಲಿ ಯಡಿಯೂರಪ್ಪ ಬಗ್ಗೆ ತಪ್ಪು ಸಂದೇಶವೂ ಹೋಗುವ ಸಾಧ್ಯತೆಯಿದೆ. ಹೀಗಾಗಿ ಅಳೆದು ತೂಗಿ ನೋಡಿದರೂ ಜನವರಿ ಒಳಗೆ ಸಂಪುಟ ವಿಸ್ತರಣೆ ನಡೆಯೋದು ಅನುಮಾನ ಎಂದು ವಿಶ್ಲೇಷಿಸಲಾಗುತ್ತಿದೆ.

    ಸಚಿವ ಸ್ಥಾನದ ಆಕಾಂಕ್ಷಿಗಳು ಸಚಿವರಾಗಲು ತುದಿಗಾಲಿನಲ್ಲೇ ನಿಂತಿದ್ದಾರೆ. ಗೆದ್ದ 24 ಗಂಟೆಯಲ್ಲೇ ಎಲ್ಲರನ್ನೂ ಮಂತ್ರಿ ಮಾಡುತ್ತೇವೆ ಎಂದು ಯಡಿಯೂರಪ್ಪ ಭರವಸೆ ಕೊಟ್ಟಿದ್ರು. ಆದರೆ ಗೆದ್ದವರಿಗೆ ಬಿಜೆಪಿ ಹೈಕಮಾಂಡ್ ಶಾಕ್ ಮೇಲೆ ಶಾಕ್ ಕೊಡ್ತಿದೆಯೇ ಹೊರತು ಸಂಪುಟ ವಿಸ್ತರಣೆ ಕುರಿತು ಸ್ಪಷ್ಟತೆ ಕೊಡುತ್ತಿಲ್ಲ. ಪಕ್ಷಾಂತರಿಗಳ ಋಣದಿಂದ ರಚನೆಯಾದ ಸರ್ಕಾರಕ್ಕೆ ಮರಳಿ ಆ ಋಣ ಸಂದಾಯದ ಬಗ್ಗೆ ಏಕಿಷ್ಟು ತಾತ್ಸಾರ ಎಂದು ಜನರೇ ಕೇಳುವಂತಾಗಿದೆ.

  • ಇದೇ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ: ಸಿಎಂ

    ಇದೇ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ: ಸಿಎಂ

    ಹಾಸನ/ಮೈಸೂರು: ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ ಹೇಳಿದ್ದಾರೆ.

    ಮೈಸೂರು ಜಿಲ್ಲೆಯ ಕೆಆರ್ ನಗರ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಸಪ್ತಮಾತೃಕೆ ದೇವಾಲಯದ ರಾಜಗೋಪುರ ಉದ್ಘಾಟನೆ ಮಾಡಲು ಸಿಎಂ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ತಿಳಿಸಿದರು. ಜೊತೆಗೆ ಈ ಬಾರಿ ಬಜೆಟ್‍ನಲ್ಲಿ ಕೃಷಿ ಕಾರ್ಮಿಕರು, ರೈತರು, ಮಹಿಳೆಯರಿಗೆ ಅನುಕೂಲವಾಗುವ ಬಜೆಟ್ ಮಂಡಿಸೋದಾಗಿ ತಿಳಿಸಿದರು.

    ದಾವೋಸ್‍ಗೆ ಹೋಗಿ ಬಂದ ಮೇಲೆ 40ಕ್ಕೂ ಹೆಚ್ಚು ಜನ ಕೈಗಾರಿಕೋದ್ಯಮಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿನಂತಿಸಿದ್ದೇನೆ. ಬಹಳ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿ ಮಾಡಲು ಭರವಸೆ ನೀಡಿದ್ದಾರೆ. ಕೃಷಿಕರಿಗೆ ಸಂಬಂಧಿಸಿದಂತೆ, ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸಂಬಂಧಿಸಿದಂತೆ ದಾವೋಸ್ ಪ್ರವಾಸ ಅನುಕೂಲ ಆಗಲಿದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಬೇರೆಯವರು ಸಿಎಂ ಆದಾಗ ಅನಾವೃಷ್ಟಿಯಾಗಿತ್ತು. ಆದರೆ ಯಡಿಯೂರಪ್ಪರವರು ಸಿಎಂ ಆದಾಗ ಅತಿವೃಷ್ಟಿಯಾಗಿದೆ. ಯಡಿಯೂರಪ್ಪರವರು ಮೂರು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ. ಯುವಕರು ನಾಚಿಸುವಂತೆ 24 ಗಂಟೆಗಳ ಕಾಲ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ ಎಂದು ಬಿಎಸ್‍ವೈ ಗುಣಗಾನ ಮಾಡಿದರು.

  • ನಾನೂ ಸೀನಿಯರ್, ನನಗೆ ಸಚಿವಸ್ಥಾನ ನೀಡಿ: ನೆಹರು ಓಲೇಕಾರ

    ನಾನೂ ಸೀನಿಯರ್, ನನಗೆ ಸಚಿವಸ್ಥಾನ ನೀಡಿ: ನೆಹರು ಓಲೇಕಾರ

    ಹಾವೇರಿ: ನಾನೂ ಸೀನಿಯರ್ ಇದ್ದೇನೆ, ಮೂರು ಬಾರಿ ಶಾಸಕನಾಗಿದ್ದೇನೆ. ನನಗೆ ಸಚಿವಸ್ಥಾನ ನೀಡಿ ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಆಗ್ರಹಿಸಿದ್ದಾರೆ.

    ಜನವರಿ 29ಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಸಿಎಂ ಹೇಳಿದ್ದಾರೆ ಎಂದು ಓಲೇಕಾರ ಅವರು ತಿಳಿಸಿದರು. ಹಾವೇರಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಎಲ್ಲಾ ಸಮುದಾಯದವರು ಇದ್ದರೆ ಗೌರವ ಇರುತ್ತೆ. ಸಚಿವ ಸ್ಥಾನಕ್ಕೆ ಮಠಾದೀಶರು ಸೇರಿದಂತೆ ಎಲ್ಲರೂ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಮಸ್ಯೆ ಇದೆ. ಹದಿನೇಳು ಜನರಿಂದಲೇ ಬಿಜೆಪಿ ಸರ್ಕಾರ ಬಂದಿದೆ. ಅವರ ತ್ಯಾಗದಿಂದಲೇ ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಲು ತಕರಾರಿಲ್ಲ ಎಂದು ಓಲೇಕಾರ ಹೇಳಿದರು.

    ಸೋತವರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ಕೊಟ್ಟು ತೃಪ್ತಿ ಮಾಡಬೇಕು. ಸೋತವರಿಗೆ ಸಚಿವ ಸ್ಥಾನ ಕೊಟ್ಟರೆ ಜನರು ತಪ್ಪಾಗಿ ಮಾತನಾಡಿಕೊಳ್ತಾರೆ. ಹಿರಿಯರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಕೊಡುವ ಬಗ್ಗೆ ಪಕ್ಷದ ನಾಯಕರು ಚರ್ಚಿಸಿದ್ದಾರೆ. ಹಿರಿಯರನ್ನ ಕೈಬಿಟ್ಟು ಹೊಸಬರಿಗೆ ಕೊಡೋ ವಿಚಾರವಿದೆ ಎಂದು ನೆಹರು ಓಲೇಕಾರ ತಿಳಿಸಿದರು.