Tag: ಸಂಪುಟ ವಿಸ್ತರಣೆ

  • ಭಾವೀ ಸಚಿವರಿಂದ ಟೆಂಪಲ್ ರನ್- ತಿಮ್ಮಪ್ಪ ದರ್ಶನಕ್ಕೆ ಸಾಹುಕಾರ್ ಟೀಂ

    ಭಾವೀ ಸಚಿವರಿಂದ ಟೆಂಪಲ್ ರನ್- ತಿಮ್ಮಪ್ಪ ದರ್ಶನಕ್ಕೆ ಸಾಹುಕಾರ್ ಟೀಂ

    ಬೆಂಗಳೂರು: ಸಿಎಂ ಯಡಿಯೂರಪ್ಪ ಸಂಪುಟ ಸಂಪುಟ ವಿಸ್ತರಣೆಗೆ ಗುರುವಾರ ಸಮಯ ನಿಗದಿ ಮಾಡಿದ್ದಾರೆ. ಈಗಾಗಲೇ ಯಾರು ಮಂತ್ರಿ ಅಂತಾನೂ ಬಹುತೇಕ ಫೈನಲ್ ಆಗಿದೆ. ಹೆಸರು ಫೈನಲ್ ಆಗಿರೋ ಅರ್ಹ ಶಾಸಕರು ಮುಂದಿನ ರಾಜಕೀಯ ಜೀವನ ಒಳ್ಳೆಯದು ಮಾಡಪ್ಪ ಅಂತ ಬೇಡಿಕೊಳ್ಳಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗ್ತಿದ್ದಾರೆ.

    ಗೆದ್ದ 11 ಶಾಸಕರ ಪೈಕಿ 10 ಜನರಿಗೆ ಸಚಿವ ಸ್ಥಾನ ಫಿಕ್ಸ್ ಆಗಿದೆ. ಗುರುವಾರ ಸಂಪುಟ ಸೇರ್ಪಡೆ ಆಗೋಕು ಮುಂಚೆ ಸಾಹುಕಾರ್ ಟೀಂ ತಿರುಪತಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಇಂದು ಸಂಜೆ ಅರ್ಹ 7-8 ಶಾಸಕರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಲಿದ್ದಾರೆ. ಸಾಹುಕಾರ್ ರಮೇಶ್ ಜಾರಕಿಹೋಳಿ ನೇತೃತ್ವದಲ್ಲಿ ತಿರುಪತಿಗೆ ತೆರಳಲು ಸಿದ್ಧ ಮಾಡಿಕೊಂಡಿರೋ ತಂಡ ಇಂದು ಒಂದೇ ಬಸ್ ಮೂಲಕ ತಿರುಪತಿಗೆ ತೆರಳಲು ಸಿದ್ಧವಾಗಿದ್ದಾರೆ.

    ಅರ್ಹ ಶಾಸಕ ಪೈಕಿ ಶ್ರೀಮಂತ ಪಾಟೀಲ್, ಸೋಮಶೇಖರ್, ಬೈರತಿ ಬಸವರಾಜ್ ಮಾತ್ರ ತಿರುಪತಿಗೆ ತೆರಳದೇ ಇರಲು ನಿರ್ಧಾರ ಮಾಡಿದ್ದಾರೆ. ಉಳಿದ ಶಾಸಕರು ದೇವರ ಮೊರೆ ಹೋಗಿ ವಿಘ್ನ ನಿವಾರಣೆ ಮಾಡುವಂತೆ ಪ್ರಾರ್ಥನೆ ಮಾಡಿಕೊಳ್ಳಲಿದ್ದಾರೆ. ಇಂದು ಸಂಜೆ ತಿರುಪತಿಗೆ ತೆರಳಿ ನಾಳೆ ದರ್ಶನ ಮುಗಿಸಿಕೊಂಡು ನಾಳೆ ಸಂಜೆಯೇ ಬೆಂಗಳೂರಿಗೆ ವಾಪಸ್ ಆಗೋ ಸಾಧ್ಯತೆ ಇದೆ ಅಂತ ಆರ್ಹ ಶಾಸಕರ ಆಪ್ತ ಮೂಲಗಳು ತಿಳಿಸಿವೆ.

    ಸಚಿವ ಸ್ಥಾನ ವಂಚಿತರಾಗಿರೋ ಮಹೇಶ್ ಕುಮಟಳ್ಳಿ ತಿರುಪತಿಗೆ ಹೋಗೋ ಸಾಧ್ಯತೆ ಕಡಿಮೆ. ಆದರೆ ರಮೇಶ್ ಜಾರಕಿಹೋಳಿ ಮನವೊಲಿಸಿದರೆ ಅವರು ಇಂದು ತಿರುಪತಿಗೆ ತೆರಳೋ ಸಾಧ್ಯತೆ ಇದೆ.

  • ಗೆದ್ದವರಿಗೆ ಮಂತ್ರಿ ಮಾಡದೇ ಇದ್ದರೆ ರಾಜ್ಯಕ್ಕೆ ತಪ್ಪು ಸಂದೇಶ: ಶ್ರೀಮಂತ್ ಪಾಟೀಲ್

    ಗೆದ್ದವರಿಗೆ ಮಂತ್ರಿ ಮಾಡದೇ ಇದ್ದರೆ ರಾಜ್ಯಕ್ಕೆ ತಪ್ಪು ಸಂದೇಶ: ಶ್ರೀಮಂತ್ ಪಾಟೀಲ್

    ಬೆಂಗಳೂರು : ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. 10 ಜನರಿಗೆ ಮಾತ್ರ ಮಂತ್ರಿ ಸ್ಥಾನ ಅನ್ನೋ ಸಿಎಂ ಮಾತಿಗೆ ಮಿತ್ರ ಮಂಡಳಿ ಶಾಸಕರು ಪರೋಕ್ಷವಾಗಿ ವಿರೋಧ ಮಾಡ್ತಿದ್ದು, ವಚನ ಭ್ರಷ್ಟತೆಯ ಅಸ್ತ್ರ ಹೂಡುತ್ತಿದ್ದಾರೆ. ಮತ್ತೊಬ್ಬ ಅರ್ಹ ಶಾಸಕ ಶ್ರೀಮಂತ್ ಪಾಟೀಲ್ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡದೇ ಇದ್ದರೆ ವಚನ ಭ್ರಷ್ಟತೆ ಆಗುತ್ತೆ ಅಂತ ಸಿಎಂಗೆ ಎಚ್ಚರಿಸಿದ್ದಾರೆ.

    ಸಂಪುಟ ವಿಸ್ತರಣೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಇನ್ನು ಅಧಿಕೃತವಾಗಿ ಸಚಿವ ಸ್ಥಾನದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು ಮಾಧ್ಯಮಗಳ ಮೂಲಕವೇ ನನ್ನ ಹೆಸರು ಇದೆ ಅಂತ ತಿಳಿದುಕೊಂಡಿದ್ದೇನೆ. ಗೆದ್ದ 11 ಶಾಸಕರಿಗೂ ಮಂತ್ರಿ ಸ್ಥಾನ ಕೊಡ್ತೀನಿ ಅಂತ ಸಿಎಂ ಹೇಳಿದ್ರು. 11 ಜನರಿಗೂ ಮಂತ್ರಿ ಸ್ಥಾನ ಕೊಡೋ ವಿಶ್ವಾಸ ಇದೆ. ಸಿಎಂ ಕೂಡಾ ಮಾತು ಕೊಟ್ಟಿದ್ದಾರೆ. 11 ಜನರಿಗೆ ಕೊಟ್ಟರೆ ಮಾತ್ರ ಮಾತು ಉಳಿಸಿಕೊಂಡಂತೆ ಆಗುತ್ತೆ. ಇಲ್ಲ ಅಂದ್ರೆ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತೆ ಅಂತ ತಿಳಿಸಿದ್ರು.

    ಇನ್ನು ಮಹೇಶ್ ಕುಮಟಳ್ಳಿಗೆ ಸ್ಥಾನ ತಪ್ಪುವ ವಿಚಾರ ನನಗೆ ಗೊತ್ತಿಲ್ಲ. 40 ಸಾವಿರ ಜನರ ಮುಂದೆ ಸಿಎಂ ಮಾತು ಕೊಟ್ಟಿದ್ದಾರೆ. ನನಗೂ ಸಿಎಂ ಮಾತು ಕೊಟ್ಟಿದ್ದಾರೆ. ಹೀಗಾಗಿ ಮಂತ್ರಿ ಮಾಡೋ ಭರವಸೆ ಇದೆ ಅಂತ ತಿಳಿಸಿದ್ರು. ಮಹೇಶ್ ಕುಮಟಳ್ಳಿಗೆ ನಿಗಮ-ಮಂಡಳಿ ಸ್ಥಾನ ನೀಡೋ ವಿಚಾರ ನನಗೆ ಗೊತ್ತಿಲ್ಲ. ಗೆದ್ದ ಎಲ್ಲರಿಗೂ ಮಂತ್ರಿ ಮಾಡ್ತೀನಿ ಅಂತ ಸಿಎಂ ಹೇಳಿದ್ರು. ಮಹೇಶ್ ಕುಮಟಳ್ಳಿ ಸ್ಥಾನದ ವಿಚಾರ ಹೈಕಮಾಂಡ್ ನಿರ್ಧಾರ ಮಾಡಿರಬೇಕು. ಇದೊಂದು ರಾಷ್ಟ್ರೀಯ ಪಕ್ಷ. ಅವರು ಏನೇ ನಿರ್ಧಾರ ತೆಗೆದುಕೊಂಡ್ರು ಅದಕ್ಕೆ ನಾವು ಬದ್ಧರಾಗಿರಬೇಕು ಅಂತ ತಿಳಿಸಿದರು. ನಾವು ಕೂಡಾ ಸಿಎಂಗೆ ಭೇಟಿ ಮಾಡಿ ಕುಮಟಳ್ಳಿಗೆ ಸಚಿವ ಸ್ಥಾನ ಕೊಡಿ ಅಂತ ಮನವಿ ಮಾಡುತ್ತೇವೆ. ಇದೇ ವೇಳೆ ಸೋತ ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್ ಗೂ ಸ್ಥಾನ ಕೊಡಬೇಕು. ಅವರು ಕೂಡಾ ತ್ಯಾಗ ಮಾಡಿದ್ದಾರೆ. ನಾವು ಸಿಎಂ ಭೇಟಿ ಮಾಡಿ ಅವರಿಗೆ ಸ್ಥಾನ ಕೊಡಿ ಅಂತ ಮನವಿ ಮಾಡ್ತೀವಿ ಎಂದು ಹೇಳಿದರು.

  • ಸಚಿವ ಸ್ಥಾನ ಸಿಗದಕ್ಕೆ ಕಣ್ಣೀರಿಟ್ಟ ಶಾಸಕ ಮಹೇಶ್ ಕುಮಟಳ್ಳಿ!

    ಸಚಿವ ಸ್ಥಾನ ಸಿಗದಕ್ಕೆ ಕಣ್ಣೀರಿಟ್ಟ ಶಾಸಕ ಮಹೇಶ್ ಕುಮಟಳ್ಳಿ!

    ಬೆಂಗಳೂರು : ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆ, ಗೊಂದಲ, ವಚನ ಭ್ರಷ್ಟತೆ, ತ್ಯಾಗ, ಅಸಮಾಧಾನಕ್ಕೆ ಸಾಕ್ಷಿಯಾಗುತ್ತಿದೆ. ಸಿಎಂ ಯಡಿಯೂರಪ್ಪ 10 ಜನರಿಗೆ ಮಾತ್ರ ವಲಸಿಗರಿಗೆ ಸಚಿವ ಸ್ಥಾನ ಅಂದ ಕೂಡಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಬೇಸರಗೊಂಡಿದ್ದಾರೆ. ತಮ್ಮ ಹೆಸರು ಸಂಪುಟದಿಂದ ಕೈ ಬಿಡಲಾಗಿದೆ ಅಂತ ಸುಳಿವು ಸಿಕ್ಕ ಕೂಡಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಂದೆ ಕಣ್ಣೀರಿಟ್ಟು ನೋವು ತೋಡಿಕೊಂಡಿದ್ದಾರೆ ಅಂತ ಆಪ್ತ ಮೂಲಗಳು ಹೇಳುತ್ತಿವೆ.

    ನಗರದ ರೇಸ್ ವ್ಯೂ ಹೊಟೇಲ್ ನಲ್ಲಿ ಬಾಲಚಂದ್ರ ಜಾರಕಿಹೊಳಿ ಅವರನ್ನ ಭೇಟಿಯಾಗಿ ಮಹೇಶ್ ಕುಮಟಳ್ಳಿ ನೋವು ತೋಡಿಕೊಂಡಿದ್ದಾರೆ. ಕೊಟ್ಟ ಮಾತು ಸಿಎಂ ತಪ್ಪುತ್ತಿದ್ದಾರೆ. ಹೀಗಾಗಿ ನನಗೆ ನ್ಯಾಯ ಕೊಡಿಸಿ ಅಂತ ಬಾಲಚಂದ್ರ ಜಾರಕಿಹೊಳಿ ಮುಂದೆ ಅಳಲು ತೋಡಿಕೊಡಿದ್ದಾರಂತೆ.

    ನೇರವಾಗಿ ತಮ್ಮ ಅಸಮಾಧಾನ ಬಾಲಚಂದ್ರ ಜಾರಕಿಹೊಳಿ ಮುಂದೆ ವ್ಯಕ್ತಪಡಿಸಿದ್ದಾರಂತೆ ಮಹೇಶ್ ಕುಮಟಳ್ಳಿ. ಪಕ್ಷ ಬಿಟ್ಟು, ಪಕ್ಷಕ್ಕೆ ಬಂದು ಗೆದ್ರು ಏನ್ ಪ್ರಯೋಜನ ಆಗಿದೆ ಸಾರ್. ಸಿಎಂ ಮಾತು ಕೊಟ್ಟಿದ್ದಾರೆ. ಆದ್ರೂ ಲಿಸ್ಟ್ ನಲ್ಲಿ ನನ್ನ ಹೆಸರಿಲ್ಲ ಅಂತಿದ್ದಾರೆ. ಬಿಜೆಪಿ ಸರ್ಕಾರ ಬರಲು ಯಾರದ್ದು ಎಷ್ಟು ಪಾಲು ಗೊತ್ತಿಲ್ಲ. ರಮೇಶ್ ಸಾಹುಕಾರ್ ಮೊದಲಿದ್ರೆ, ಅವರ ಹಿಂದೆಯೇ ಎರಡನೇಯದಾಗಿ ನಾನಿದ್ದೆ. ಇದೀಗ ನಾನೇ ಸಂಪುಟದಲ್ಲಿ ಇಲ್ಲ ಅಂದ್ರೆ ಹೇಗೆ ಸರ್ ಅಂತ ಜಾರಕಿಹೊಳಿ ಮುಂದೆ ಕಣ್ಣೀರಿಟ್ಟಿದ್ದಾರಂತೆ.

    ಇಷ್ಟಕ್ಕೆ ಸುಮ್ಮನಾಗದ ಮಹೇಶ್ ಕುಮಟಳ್ಳಿ ಇನ್ನೂ ಟೈಂ ಇದೆ. ಏನಾದ್ರೂ ಮಾಡಿ ನನಗೆ ಸಚಿವ ಸ್ಥಾನ ಕೊಡಿಸಿ ಅಂತ ಬಾಲಚಂದ್ರ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ. ನಾನು ಕ್ಷೇತ್ರದ ಜನರಿಗೆ ಮುಖ ತೋರಿಸೋದು ಹೇಗೆ? ಮಂತ್ರಿ ಮಾಡಲ್ಲ ಅಂದ್ರೆ, ಮಂತ್ರಿ ಮಾಡ್ತೀವಿ ಅಂತಾ ಮಾತು ಕೊಟ್ಟಿದ್ದೇಕೆ? ಅಂತ ಕಣ್ಣೀರು ಹಾಕ್ತಾನೆ ಬಾಲಚಂದ್ರ ಜಾರಕಿಹೊಳಿ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರಂತೆ. ಸದ್ಯ ಸಿಎಂ ನಿರ್ಧಾರದಿಂದ ಕುಮಟಳ್ಳಿ ಬೇಸರವಾಗಿದ್ದಾರೆ. ಬೆಳಗಾವಿ ಸಾಹುಕಾರ್ ಜೊತೆ ಬಂದ ಕುಮಟಳ್ಳಿ ಅವರನ್ನ ಸಾಹುಕಾರ್ ಕೈ ಹಿಡಿಯುತ್ತಾರಾ ನೋಡಬೇಕು.

  • ಸಿಎಂ, ಜಾರಕಿಹೊಳಿ ಮಾತುಕತೆ – ಎರಡು ಬೇಡಿಕೆಗೆ ಸಾಹುಕಾರ ಪಟ್ಟು?

    ಸಿಎಂ, ಜಾರಕಿಹೊಳಿ ಮಾತುಕತೆ – ಎರಡು ಬೇಡಿಕೆಗೆ ಸಾಹುಕಾರ ಪಟ್ಟು?

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತವೇನೋ ನಿಗದಿಯಾಯ್ತು. ಆದ್ರೆ ಸಾಕಷ್ಟು ಗೊಂದಲಗಳನ್ನು ಪರಿಹರಿಸಬೇಕಿದ್ದು, ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಸಿಎಂ ಇವತ್ತು ಗೋಕಾಕ್ ಶಾಸಕ ಮಿತ್ರಮಂಡಳಿ ನಾಯಕ ರಮೇಶ್ ಜಾರಕಿಹೊಳಿಯವರ ಜೊತೆ ಅರ್ಧ ಗಂಟೆ ಕಾಲ ತಮ್ಮ ಧವಳಗಿರಿ ನಿವಾಸದಲ್ಲಿ ಚರ್ಚೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ 10+3 ಸೂತ್ರದನ್ವಯ ಸಂಪುಟ ವಿಸ್ತರಣೆಗೆ ನಿರ್ಧರಿಸಲಾಗಿದೆ. ಈ ಸಂಬಂಧ ಮಿತ್ರಮಂಡಳಿ ಶಾಸಕರಿಗೆ ಮನವೊಲಿಕೆ ಮಾಡುವ ಅನಿವಾರ್ಯತೆ ಸಿಎಂ ಎದುರಿಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿಯವರ ಜೊತೆ ಸಿಎಂ ಮಾತುಕತೆ ನಡೆಸಿದರು.

    ಈಗಾಗಲೇ ಸಂಪುಟದಿಂದ ಶಾಸಕ ಮಹೇಶ್ ಕುಮಟಳ್ಳಿಯವರನ್ನು ಕೈಬಿಡುವ ಮಾತು ಬಲವಾಗಿ ಕೇಳಿಬರ್ತಿದೆ. ಮಹೇಶ್ ಕುಮಟಳ್ಳಿಗೆ ಮನವೊಲಿಸುವಂತೆ ಸಿಎಂ ಶಾಸಕ ರಮೇಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ. ಮಹೇಶ್ ಗೆ ಪ್ರಭಾವಿ ನಿಗಮ ಮಂಡಳಿ ಕೊಡುವ ಪ್ರಸ್ತಾವನೆಯನ್ನು ಸಿಎಂ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

    ಆದ್ರೆ ಸಿಎಂ ಯಡಿಯೂರಪ್ಪ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ನಡೆದ ಮಾತುಕತೆ ವೇಳೆ ಎರಡು ಪ್ರಬಲ ಬೇಡಿಕೆಗಳನ್ನು ರಮೇಶ್ ಜಾರಕಿಹೊಳಿ ಇಟ್ಟಿದ್ದಾರೆ ಎನ್ನಲಾಗಿದೆ. ತಮಗೆ ಜಲಸಂಪನ್ಮೂಲ ಖಾತೆಯನ್ನೇ ಕೊಡಬೇಕು ಎಂಬ ಮೊದಲ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಡಿಕೆಶಿ ಬಳಿ ಇದ್ದ ಜಲಸಂಪನ್ಮೂಲ ಖಾತೆಗೆ ಕೊಡಿ ಎಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

    ಇನ್ನು ವಿಧಾನಸೌಧದಲ್ಲಿ ಡಿಕೆಶಿ ಇದ್ದ ಕೊಠಡಿಯೇ ಬೇಕು ಎಂದೂ ತಮ್ಮ ಎರಡನೇ ಬೇಡಿಕೆ ಇಟ್ಟಿದ್ದಾರಂತೆ ರಮೇಶ್ ಜಾರಕಿಹೊಳಿ. ಮೈತ್ರಿ ಸರ್ಕಾರದಲ್ಲಿ ವಿಧಾನಸೌಧದಲ್ಲಿ ಡಿಕೆಶಿ ಇದ್ದ ಕೊಠಡಿ ಸಂಖ್ಯೆಗಳು 336 ಮತ್ತು 337. ಇವೇ ಕೊಠಡಿಗಳು ತಮಗೂ ಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರಂತೆ. ಈಗಾಗಲೇ ತಮ್ಮ ಆಪ್ತ ಸಹಾಯಕನ ಮೂಲಕ ಈ ಕೊಠಡಿಗಳ ಪರಿಶೀಲನೆಯನ್ನೂ ನಡೆಸಿದ್ದಾರಂತೆ.

    ಇನ್ನು ಮಹೇಶ್ ಕುಮಟಳ್ಳಿಗೆ ಮನವೊಲಿಸುವ ಹೊಣೆಯನ್ನು ರಮೇಶ್ ಜಾರಕಿಹೊಳಿ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ. ಮಹೇಶ್ ಕುಮಟಳ್ಳಿ ಬಗ್ಗೆ ಟೆನ್ಷನ್ ತಗೋಬೇಡಿ. ಅವರನ್ನು ನಾನು ಸಂಬಾಳಿಸ್ತೇನೆ ಅಂತ ಸಿಎಂಗೆ ರಮೇಶ್ ಜಾರಕಿಹೊಳಿ ಮಾತು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಮಹೇಶ್ ಕುಮಟಳ್ಳಿ ಒಪ್ಕೋತಾರೆ. ಅದರಲ್ಲಿ ಅನುಮಾನ ಇಲ್ಲ. ಆದ್ರೆ ನನ್ನ ಈ ಬೇಡಿಕೆಗಳನ್ನು ಮೊದಲು ಈಡೇರಿಸಿ ಎಂದು ರಮೇಶ್ ಜಾರಕಿಹೊಳಿ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

    ಆದರೆ ರಮೇಶ್ ಜಾರಕಿಹೊಳಿಯವರ ಎರಡೂ ಬೇಡಿಕೆಗಳ ಕುರಿತಾಗಿ ಸಿಎಂ ಯಾವುದೇ ಸ್ಪಷ್ಟ ಭರವಸೆ ಕೊಟ್ಟಿಲ್ಲ ಎನ್ನಲಾಗಿದೆ. ರಮೇಶ್ ಜಾರಕಿಹೊಳಿಗೆ ಸಿಗುತ್ತಾ ಜಲಸಂಪನ್ಮೂಲ ಖಾತೆ ಅನ್ನೋದರ ಬಗ್ಗೆ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳಲ್ಲ ಎನ್ನಲಾಗಿದೆ. ಯಾಕೆಂದರೆ ಇದೇ ಜಲಸಂಪನ್ಮೂಲ ಖಾತೆಗೆ ಬಸವರಾಜ್ ಬೊಮ್ಮಾಯಿ ಸಹ ಪಟ್ಟು ಹಿಡಿದು ಕೂತಿದ್ದಾರೆ. ಹೀಗಾಗಿ ಸಿಎಂ ರಮೇಶ್ ಜಾರಕಿಹೊಳಿಗೆ ಯಾವುದೇ ಭರವಸೆ ಕೊಟ್ಟಿಲ್ಲ. ಕೇವಲ ಚರ್ಚಿಸಿ ತಿಳಿಸ್ತೇನೆ ಅಂತಷ್ಟೇ ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.

  • ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ – ಫೆ.6 ರಂದು ವಿಸ್ತರಣೆ ಪಕ್ಕಾ

    ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ – ಫೆ.6 ರಂದು ವಿಸ್ತರಣೆ ಪಕ್ಕಾ

    ಬೆಂಗಳೂರು: ಅಂತೂ ಇಂತೂ ಸಚಿವ ಸಂಪುಟ ವಿಸ್ತರಣೆಯೆಂಬ ಗಜಪ್ರಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಫೆಬ್ರವರಿ 6ರ ಗುರುವಾರದಂದು ಬೆಳಗ್ಗೆ 10.30 ಕ್ಕೆ ರಾಜಭವನದಲ್ಲಿ 13 ಜನ ನೂತನ ಸಚಿವರು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಿಎಂ ಯಡಿಯೂರಪ್ಪ, ಫೆ.6ರಂದು ಬೆಳಗ್ಗೆ 10.30ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. 10+3 ಸೂತ್ರದನ್ವಯ ಸಂಪುಟ ವಿಸ್ತರಣೆ ಮಾಡಲಿದ್ದೇವೆ. ಉಪ ಚುನಾವಣೆಯಲ್ಲಿ ಗೆದ್ದ 10 ಜನರಿಗೆ ಸಚಿವ ಸ್ಥಾನ ಕೊಡ್ತೇವೆ. ಪಕ್ಷದ ಮೂಲ ಶಾಸಕರ ಪೈಕಿ ಮೂವರಿಗೆ ಸಚಿವ ಸ್ಥಾನ ಕೊಡ್ತೇವೆ ಎಂದು ತಿಳಿಸಿದರು. ಹಾಗಿದ್ದರೆ ಒಬ್ಬರು ಯಾರಿಗೆ ಕೊಡಲ್ಲ ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ಸಿಎಂ ಉತ್ತರಿಸಿದರು.

    ಇದೇ ವೇಳೆ ಉಪಚುನಾವಣೆಯಲ್ಲಿ ಸೋತಂತಹ ಹೆಚ್. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಸೋತವರಿಗೆ ಸಚಿವ ಸ್ಥಾನ ಕೊಡುವಂತಿಲ್ಲ ಎಂದು ಇದೇ ವೇಳೆ ಸಿಎಂ ಯಡಿಯೂರಪ್ಪ ಅಧಿಕೃತವಾಗಿ ಘೋಷಿಸಿದರು. ಇನ್ನು ಆರ್ ಶಂಕರ್ ಅವರಿಗೆ ಈ ಸಲದ ಬದಲು ಮುಂದಿನ ಬಾರಿ ಪರಿಗಣಿಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.

    ಬೆಳಗಾವಿ ಮತ್ತೆ ಬೆಂಗಳೂರಿಗೆ ಹೆಚ್ಚು ಸಚಿವರ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಅದು ಅನಿವಾರ್ಯವಾಗಿದೆ. ನನ್ನ ಜಾಗದಲ್ಲಿ ಯಾರೇ ಇದ್ದಿದ್ರು ಅದೇ ಕೆಲಸ ಮಾಡುತ್ತಿದ್ದರು. ಆ 17 ಶಾಸಕರು ರಾಜೀನಾಮೆ ಕೊಟ್ಟಿಲ್ಲ ಅಂದಿದ್ರೆ ನಾನು ಈ ಕುರ್ಚಿಯಲ್ಲಿ ಬಂದು ಕುಳಿತುಕೊಳ್ಳೋಕೆ ಆಗುತ್ತಿತ್ತಾ?. ನಾವು ಹಿಂದೆ ಏನು ಭರವಸೆ ಕೊಟ್ಟಿದ್ದೇವೋ ಅದನ್ನು ಈಡೇರಿಸುತ್ತೇವೆ. ಯಾವ ಶಾಸಕರಿಗೂ ಅನ್ಯಾಯ ಮಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಸಂಪುಟ ಪುನಾರಚನೆ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದೆಂದು ಸಿಎಂ ಸ್ಪಷ್ಟಪಡಿಸಿದರು.

  • ವಿಶ್ವನಾಥ್ ತಾಳ್ಮೆಯಿಂದ ಇರಲಿ, ಅವರಿಗೂ ಅವಕಾಶ ಸಿಗುತ್ತೆ: ಲಕ್ಷ್ಮಣ ಸವದಿ

    ವಿಶ್ವನಾಥ್ ತಾಳ್ಮೆಯಿಂದ ಇರಲಿ, ಅವರಿಗೂ ಅವಕಾಶ ಸಿಗುತ್ತೆ: ಲಕ್ಷ್ಮಣ ಸವದಿ

    -ವಿಶ್ವನಾಥ್ ಅವರಿಗೂ ಶುಕ್ರದೆಸೆ ಆರಂಭವಾಗುತ್ತೆ

    ಧಾರವಾಡ/ಹುಬ್ಬಳ್ಳಿ: ಮಾಜಿ ಸಚಿವರಾದ ಹೆಚ್.ವಿಶ್ವನಾಥ್ ತಾಳ್ಮೆಯಿಂದ ಇರಲಿ. ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗಲಿದೆ. ಶುಕ್ರದೆಸೆಯೂ ಆರಂಭವಾಗುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಣ ಸವದಿ, ಈಗಾಗಲೇ ರಾಷ್ಟ್ರೀಯ ನಾಯಕರು ಎಂಎಲ್‍ಸಿ ಸ್ಥಾನಕ್ಕೆ ನನ್ನ ಹೆಸರನ್ನು ಅಧಿಕೃತಗೊಳಿಸಿದ್ದಾರೆ. ಹಾಗಾಗಿ ನಾನು ನಾಮಪತ್ರ ಸಲ್ಲಿಸಲ್ಲಿದ್ದೇನೆ. ವಿಶ್ವನಾಥ್ ಅವರು ಮೊದಲು ವಿಧಾನಸಭೆ ಅಥವಾ ವಿಧಾನ ಪರಿಷತ್‍ಗೆ ಆಯ್ಕೆಯಾಗಿ ಬರಬೇಕು. ಅಲ್ಲಿಯವರೆಗೂ ಅವರನ್ನು ಸಚಿವರನ್ನಾಗಿ ಮಾಡಲು ಬರಲ್ಲ. ಮುಂದಿನ ದಿನಗಳಲ್ಲಿ ಹೆಚ್.ವಿಶ್ವನಾಥ್ ಅವರಿಗೆ ಅವಕಾಶಗಳು ಸಿಗಲಿವೆ ಎಂದು ಭವಿಷ್ಯ ನುಡಿದರು.

    ಮುಂದಿನ ದಿನಗಳಲ್ಲಿ ಹೆಚ್.ವಿಶ್ವನಾಥ್ ಅವರನ್ನು ಸಹ ವಿಧಾನ ಪರಿಷತ್ ಆಯ್ಕೆ ಮಾಡಿ ಸಚಿವ ಸ್ಥಾನ ನೀಡುವ ಚಿಂತನೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಜೂನ್ ತಿಂಗಳಲ್ಲಿ ಆರ್.ಶಂಕರ್ ಸಹ ವಿಧಾನ ಪರಿಷತ್ ಗೆ ಆಯ್ಕೆಯಾಗಿ ಸಚಿವರಾಗುತ್ತಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಯಾವುದೇ ಮನೆಯ ಸದಸ್ಯನಲ್ಲದಿದ್ದರೂ ನನ್ನನ್ನು ಪಕ್ಷ ಡಿಸಿಎಂ ಮಾಡಿತು. ಈ ಸಂಬಂಧ ಅನಾವಶ್ಯಕ ಚರ್ಚೆಗಳು ಸಾಕಷ್ಟು ನಡೆದಿವೆ. ಎಲ್ಲದಕ್ಕೂ ಹೈಕಮಾಂಡ್ ತೆರೆ ಎಳೆದಿದೆ ಎಂದರು.

  • ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ : ಸಿ.ಟಿ.ರವಿ

    ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ : ಸಿ.ಟಿ.ರವಿ

    ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಸಿಎಂ ಯಡಿಯೂರಪ್ಪರ ಪರಮಾಧಿಕಾರ ಅಂತ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ.

    ಸಂಪುಟ ವಿಸ್ತರಣೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಸ್ತರಣೆ ಮಾಡಲಿ ಅಥವಾ ಪುನರ್ ರಚನೆ ಮಾಡಲಿ. ಅದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಸಿಎಂ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಸಂಪುಟ ವಿಸ್ತರಣೆ ಆದ ಮೇಲೆ ಯಾವ ಖಾತೆ ಉಳಿಸಿಕೊಳ್ತೀರಿ ಪ್ರಶ್ನೆಗೆ ಉತ್ತರಿಸಿದ ರವಿ, ಯಾರಿಗೆ ಯಾವ ಖಾತೆ ಕೊಡಬೇಕು ಅಂತ ನಿರ್ಧಾರ ಮಾಡೋರು ಸಿಎಂ ಯಡಿಯೂರಪ್ಪ. ನಾನು ಖಾತೆಗಾಗಿ ಕ್ಯಾತೆ ತೆಗೆಯೊಲ್ಲ ಅಂತ ಸ್ಪಷ್ಟ ಪಡಿಸಿದರು.

    ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ರು. ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಬಂಡಾಯ ಉಂಟಾಗುತ್ತೆ ಅಂದಿದ್ದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ರು. ಬಂಡಾಯ ಉಂಟು ಮಾಡುವ ಸಂಚಿನ ಪಾತ್ರದಾರರು ಸಿದ್ದರಾಮಯ್ಯ ಅನ್ನಿಸುತ್ತೆ. ಆದ್ರೆ ಬಿಜೆಪಿಯಲ್ಲಿ ಬಂಡಾಯ ಆಗುತ್ತೆ ಅನ್ನೋದು ಅವರ ಹಗಲಗನಸು ಅಂತ ಲೇವಡಿ ಮಾಡಿದರು.

    ಒಂದು ಗಾದೆ ಮಾತಿದೆ. ಮೊದಲು ನಿಮ್ಮ ಎಡೆ ನೋಡಿಕೊಳ್ಳಿ ಅಂತ. ಮೊದಲು ನಿಮ್ಮ ಪಕ್ಷದ ಬಂಡಾಯ ಸರಿ ಮಾಡಿಕೊಳ್ಳಿ. ಮುನಿಯಪ್ಪ, ಖರ್ಗೆ ಸೇರಿ ಹೀಗೆ ಅನೇಕ ಜನ ಬಂಡಾಯ ಎದ್ದಿದ್ದಾರೆ. ಮೊದಲು ಅವರನ್ನ ಸಮಾಧಾನ ಮಾಡಿ ಬಂಡಾಯ ಶಮನ ಮಾಡಿಕೊಳ್ಳಲಿ. ಅದು ಬಿಟ್ಟು ಬಿಜೆಪಿ ಬಂಡಾಯದ ಬಗ್ಗೆ ನಿರೀಕ್ಷೆ ಇದ್ದರೆ ನಿಮ್ಮ ನಿರೀಕ್ಷೆ ಹುಸಿಯಾಗುತ್ತೆ ಅಂತ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

  • ಸೋಮವಾರ ಸಂಪುಟ ವಿಸ್ತರಣೆ

    ಸೋಮವಾರ ಸಂಪುಟ ವಿಸ್ತರಣೆ

    ಬೆಂಗಳೂರು: ಸೋಮವಾರ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕೃತಗೊಳಿಸಿದ್ದಾರೆ.

    ಶುಕ್ರವಾರ ದೆಹಲಿಯಿಂದ ಹಿಂದಿರುಗಿದ ಬಳಿಕ ಎರಡ್ಮೂರು ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದರು. ಇಂದು ಸೋಮವಾರವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಖಚಿತಗೊಳಿಸಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿಎಂ, ನಾವು ಇರಿಸಿದ ಪಟ್ಟಿಯನ್ನು ಪಕ್ಷದ ವರಿಷ್ಠರು ಒಪ್ಪಿದ್ದಾರೆ. ಕೆಲವರನ್ನು ಮನವೊಲಿಸಿ ಹಾಗೂ ರಾಜ್ಯದ ಕೆಲ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಸದ್ಯವಿರುವ ಮೂರು ಡಿಸಿಎಂ ಸ್ಥಾನಗಳನ್ನು ಮುಂದುವರಿಸಲಾಗುವುದು. ಮತ್ತೆ ಹೊಸ ಡಿಸಿಎಂ ಹುದ್ದೆ ಸೃಷ್ಟಿಸಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಕನಸು ಕಾಣುತ್ತಿದ್ದ ಸಚಿವ ಶ್ರೀರಾಮುಲು ಮತ್ತು ಶಾಸಕ ರಮೇಶ್ ಜಾರಕಿಹೊಳಿಗೆ ಶಾಕ್ ನೀಡಿದ್ದರು.

  • ಬಿಎಸ್‍ವೈ ಕೊಟ್ಟ ಮಾತು ತಪ್ಪಲ್ಲ, ನಾನು ಮಂತ್ರಿ ಆಗೇ ಆಗ್ತೀನಿ: ಕುಮಟಳ್ಳಿ

    ಬಿಎಸ್‍ವೈ ಕೊಟ್ಟ ಮಾತು ತಪ್ಪಲ್ಲ, ನಾನು ಮಂತ್ರಿ ಆಗೇ ಆಗ್ತೀನಿ: ಕುಮಟಳ್ಳಿ

    ಬೆಂಗಳೂರು: ನಾನು ಮಂತ್ರಿ ಆಗೋದು ಖಚಿತ. ಯಡಿಯೂರಪ್ಪ ನಮ್ಮನ್ನ ಮಂತ್ರಿ ಮಾಡೇ ಮಾಡುತ್ತಾರೆ ಅನ್ನೋ ವಿಶ್ವಾಸ ಇದೆ ಅಂತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

    ಹೈಕಮಾಂಡ್ ಗೆದ್ದ 10 ಶಾಸಕರಿಗೆ ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳುತ್ತೆ ಅಂತ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಮಹೇಶ್ ಕುಮಟಳ್ಳಿರನ್ನೇ ಕೈ ಬಿಡ್ತಾರೆ ಅನ್ನೋ ಚರ್ಚೆಗಳು ನಡೀತಿವೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಕುಮಟಳ್ಳಿ ನಾನು ಮಂತ್ರಿ ಆಗೇ ಆಗ್ತೀನಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಯಡಿಯೂರಪ್ಪ ಕೊಟ್ಟ ಮಾತು ಯಾವತ್ತೂ ತಪ್ಪಲ್ಲ. ಪ್ರಾಣ ಬೇಕಾದರೂ ಬಿಡುತ್ತಾರೆ. ಆದರೆ ಯಡಿಯೂರಪ್ಪ ಮಾತು ತಪ್ಪಲ್ಲ ಅನ್ನೋ ಮಾತಿದೆ. ವಿರೋಧಿಗಳು ಕೂಡ ಯಡಿಯೂರಪ್ಪ ಮಾತು ತಪ್ಪಲ್ಲ ಅಂತ ಹೇಳ್ತಾರೆ. ಹೀಗಾಗಿ ನಾನು ಮಂತ್ರಿಯಾಗೋ ಸಂಪೂರ್ಣ ವಿಶ್ವಾಸ ಇದೆ ಅಂತ ತಿಳಿಸಿದ್ರು.

    ಚುನಾವಣೆ ಪ್ರಚಾರದ ವೇಳೆ 35 ಸಾವಿರ ಜನರ ಮುಂದೆ ಯಡಿಯೂರಪ್ಪ ಅವರು ಶ್ರೀಮಂತ ಪಾಟೀಲ್ ಹಾಗೂ ನನ್ನನ್ನು ಮಂತ್ರಿ ಮಾಡ್ತೀನಿ ಅಂತ ಯಡಿಯೂರಪ್ಪ ಹೇಳಿದರು. ಸ್ವತಃ ಯಡಿಯೂರಪ್ಪ ಅವರೇ ಮಂತ್ರಿ ಮಾಡೋದಾಗಿ ಜನರ ಮುಂದೆಯೇ ಹೇಳಿದ್ದಾರೆ. ಹೀಗಾಗಿ ಯಡಿಯೂರಪ್ಪ ಮಾತು ತಪ್ಪದೆ ನಮ್ಮನ್ನ ಮಂತ್ರಿ ಮಾಡ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಸಮ್ಮಿಶ್ರ ಸರ್ಕಾರ ಇದ್ದಾಗ, ನಂತರ ರಾಜೀನಾಮೆ ಕೊಟ್ಟಾಗ ಆದ ಅವಮಾನದ ಬಗ್ಗೆಯೂ ಕುಮಟಳ್ಳಿ ಪ್ರಸ್ತಾಪ ಮಾಡಿದರು. ಈಗ ಯಡಿಯೂರಪ್ಪ, ಅಮಿತ್ ಶಾ, ಕಾರ್ಯಕರ್ತರ ನಮ್ಮನ್ನ ಪ್ರೀತಿಯಿಂದ ಕಾಣುತ್ತಿದ್ದಾರೆ. ಆದರೆ ಚುನಾವಣೆಯ ಒಂದೂವರೆ ವರ್ಷ ನಾವು ಹುಲಿ ಬಾಯಿಗೆ ತಲೆ ಕೊಟ್ಟ ಪರಿಸ್ಥಿತಿ ಇತ್ತು. ಗರಗಸಕ್ಕೆ ಸಿಕ್ಕವರಂತೆ ಆಗಿದ್ವಿ. ಆಮೇಲೆ ನಾವು ಗೆದ್ದೆವು ಯಡಿಯೂರಪ್ಪ ಸಿಎಂ ಆದ್ರು ಅನ್ನೋ ನೋವಿನ ವಿಚಾರವನ್ನು ಹಂಚಿಕೊಂಡರು.

    ಇಷ್ಟೆಲ್ಲ ಅವಮಾನ ಆದ ಮೇಲೂ ನಮಗೆ ದ್ರೋಹ ಮಾಡೊಲ್ಲ ಅನ್ನೊ ನಂಬಿಕೆ ಇದೆ. ಸಂಪುಟದಿಂದ ನಮ್ಮನ್ನ ಕೈ ಬಿಡುತ್ತಾರೆ ಅನ್ನೋ ಆತಂಕ ನಮಗೆ ಇಲ್ಲ. ಒಂದು ವೇಳೆ ಮಂತ್ರಿ ಸ್ಥಾನ ಕೊಡದಿದ್ದರೆ ನಂಬಿಕೆ ದ್ರೋಹ ಆಗುತ್ತೆ. ನೂರಕ್ಕೆ ನೂರು ನಾನು ಮಂತ್ರಿ ಆಗ್ತೀನಿ ಅಂತ ವಿಶ್ವಾಸದ ಮಾತುಗನ್ನಾಡಿದ್ದಾರೆ.

  • ಸಂಪುಟ ಪುನರಚನೆಯೋ, ವಿಸ್ತರಣೆಯೋ ಯೋಚನೆ ಮಾಡ್ತೀನಿ: ಬಿಎಸ್‍ವೈ

    ಸಂಪುಟ ಪುನರಚನೆಯೋ, ವಿಸ್ತರಣೆಯೋ ಯೋಚನೆ ಮಾಡ್ತೀನಿ: ಬಿಎಸ್‍ವೈ

    – ದೆಹಲಿಯಿಂದ ಬೆಂಗ್ಳೂರಿಗೆ ಸಿಎಂ ವಾಪಸ್

    ಬೆಂಗಳೂರು: ಸಂಪುಟ ಪುನರಚನೆಯೋ, ವಿಸ್ತರಣೆಯೋ ಎಂಬ ಕುರಿತು ಯೋಚನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಬಿಜೆಪಿ ಹೈಕಮಾಂಡ್ ಭೇಟಿಗೆ ದೆಹಲಿಗೆ ತರೆಳಿದ್ದ ಸಿಎಂ ಶುಕ್ರವಾರ ರಾತ್ರಿ ಬೆಂಗಳೂರಿಗೆ ವಾಪಸ್ ಆದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗಾದರೂ ಸಣ್ಣ ಪುಟ್ಟ ಸಮಸ್ಯಗೆಳಿದ್ದರೆ ಶನಿವಾರ ಸಂಜೆಯೊಳಗೆ ವೈಯುಕ್ತಿಕವಾಗಿ ಕರೆದು ಮಾತನಾಡಿ ಸಮಸ್ಯೆಗಳನ್ನ ಬಗೆ ಹರಿಸುತ್ತೇನೆ. ಮೂರ್ನಾಲ್ಕು ದಿನಗಳೊಳಗೆ ಸಂಪುಟ ವಿಸ್ತರಣೆ ಡೇಟ್ ಫಿಕ್ಸ್ ಮಾಡಿ ಪ್ರಮಾಣವಚನ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

    ನಾವು ಅಂದುಕೊಂಡಂತೆ ಬಹುತೇಕರಿಗೆ ಯಾರಿಗೂ ತೊಂದರೆ ಆಗುವುದಿಲ್ಲ. ಒಂದೋ ಎರಡೋ ಚೇಂಜಸ್ ಇದ್ರೆ ವೈಯುಕ್ತಿಕವಾಗಿ ಕರೆದು ಮಾತನಾಡುತ್ತೇವೆ ಎಂದರು.

    ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಭೇಟಿ ನಂತರ ತಾವು ಸಂತೋಷವಾಗಿದ್ರೀ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಹೌದು… ದೆಹಲಿಗೆ ಹೋಗಿದ್ದ ಕೆಲಸ ಆಗಿದ್ದಕ್ಕೆ ಹಾಗೂ ನಾವು ಹೇಳಿದಂತೆ ಆಗಲಿ ಅಂತ ಎಲ್ಲದಕ್ಕೂ ಅಮಿತ್ ಶಾ, ಜೆಪಿ ನಡ್ಡಾ ಅವರು ಒಪ್ಪಿಕೊಂಡಿರೋದಕ್ಕೆ ನನಗೆ ಸಂತೋಷ ಆಗಿದೆ ಎಂದು ತಿಳಿಸಿದರು.

    ಸಚಿವ ಸಂಪುಟ ಪುನರಚನೆಯೋ ಅಥವಾ ವಿಸ್ತರಣೆಯೋ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಎಸ್‍ವೈ, ಯೋಚನೆ ಮಾಡ್ತೀನಿ ಅಂತ ಹೇಳಿದರು. ಸಿಎಂ ಯಡಿಯೂರಪ್ಪ ಅವರ ಜೊತೆ ಪುತ್ರ, ಸಂಸದ ವಿಜಯೇಂದ್ರ ಸಹ ದೆಹಲಿಯಿಂದ ಆಗಮಿಸಿದರು.

    ಇದಕ್ಕೂ ಮುನ್ನ ಏರ್‌ಪೋರ್ಟ್‌ ಗೆ ಆಗಮಿಸಿದ ಗುಪ್ತಚರ ಇಲಾಖೆಯ ಎಡಿಜಿಪಿ ಕಮಲ್ ಪಂಥ್ ಸ್ವತಂ ಸಿಎಂ ಯಡಿಯೂರಪ್ಪ ಅವರ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.