Tag: ಸಂಪುಟ ವಿಸ್ತರಣೆ

  • ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ‘ಮೆಗಾಸಿಟಿ’ ಬಾಂಬ್!

    ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ‘ಮೆಗಾಸಿಟಿ’ ಬಾಂಬ್!

    – ಬೆಂಗಳೂರು, ಬೆಳಗಾವಿಗೆ ಸರ್ಕಾರ ಸೀಮಿತ ಆಗ್ತಿದೆ
    – ಸಂಘಟನೆ, ನಾಯಕತ್ವದ ವಿರುದ್ಧ ಮಾತನಾಡಲ್ಲ

    ಬೆಂಗಳೂರು: ದೆಹಲಿಗೆ ತೆರಳುವ ಮುನ್ನ ಸಿಎಂ ಆಪ್ತ, ಶಾಸಕ ಎಂ.ಪಿ.ರೇಣುಕಾಚಾರ್ಯ ನೂತನ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹಗರಣದ ಬಾಂಬ್ ಸಿಡಿಸಿದ್ದಾರೆ. ಬುಧವಾರ ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಮುಂದೆ ಸ್ಫೋಟಕ ವಿಷಯ ಹಂಚಿಕೊಳ್ಳಲಿದ್ದೇನೆ ಅಂತ ಹೇಳಿದ್ದರು.

    ನೂತನ ಸಚಿವ ಸಿ.ಪಿ.ಯೋಗೇಶ್ವರ್ ಮೆಗಾಸಿಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳಿವೆ. ಎಲ್ಲವನ್ನ ಇಂದು ದೆಹಲಿ ನಾಯಕರಿಗೆ ನೀಡಲಿದ್ದೇನೆ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಐವರು ಎಂಎಲ್‍ಸಿ ಗಳು ಸಚಿವರಾಗಿದ್ದು, ಕೇವಲ ಒಬ್ಬರಿಂದ ಸರ್ಕಾರ ರಚನೆಯಾಗಿಲ್ಲ. ಸಂಪುಟ ವಿಸ್ತರಣೆ ವೇಳೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕಿತ್ತು ಎಂದು ಗರಂ ಆಗಿದ್ದಾರೆ.

    ಏನೂ ಇಲ್ಲದ ವೇಳೆ ಪಕ್ಷದ ಟಿಕೆಟ್ ನೀಡಿ ಯಡಿಯೂರಪ್ಪನವರು ನನ್ನನ್ನು ಬೆಳೆಸಿದರು. ಆದ್ರೆ ಮಧ್ಯ ಕರ್ನಾಟಕ ಮತ್ತು ದಾವಣಗೆರೆ ಜಿಲ್ಲೆಯ ಯಾರಿಗಾದ್ರೂ ಅವಕಾಶ ನೀಡಿ ಅಂತ ಕೇಳಿಕೊಳ್ಳಲಾಗಿತ್ತು. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಮಾತ್ರ ಸಂಪುಟ ಸೀಮಿತವಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗಕ್ಕೂ ಅನ್ಯಾಯವಾಗಿದೆ. ಸಚಿವ ಸ್ಥಾನ ಸಿಗದಕ್ಕೆ ಮನಸ್ಸಿಗೆ ನೋವಾಗಿದೆ. ಸಂಘಟನೆಯಿಂದ ಮೇಲೆ ಬಂದವನು ನಾನು. ಯಡಿಯೂರಪ್ಪ ನಾಯಕತ್ವ, ಪಕ್ಷದ ವಿರುದ್ಧ ನಾನು ಯಾವತ್ತು ಮಾತಾಡಲ್ಲ ಎಂದು ಹೇಳಿದರು.

    ಬುಧವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಎಂಎಲ್‍ಸಿ ಹೆಚ್.ವಿಶ್ವನಾಥ್, ನೂತನ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಯೋಗೇಶ್ವರ್ ವಿರುದ್ಧ 420 ಕೇಸ್ ಇದೆ. ಸಾವಿರಾರು ಜನರಿಗೆ ನಿವೇಶನ ನೀಡೋದಾಗಿ ಹೇಳಿ ಮೋಸ ಮಾಡಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು.

  • ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ: ಶಾಸಕ ಸಿದ್ದು ಸವದಿ

    ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ: ಶಾಸಕ ಸಿದ್ದು ಸವದಿ

    ಬಾಗಲಕೋಟೆ: ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಸಚಿವ ಸ್ಥಾನ ವಂಚಿತರು ಬಹಿರಂಗವಾಗಿಯೇ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೀಗ ತೆರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಸಹ ಸೋಶಿಯಲ್ ಮೀಡಿಯಾದಲ್ಲಿ ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಸಿದ್ದು ಸವದಿ ಪೋಸ್ಟ್: ಹಿರಿತನ, ಪಕ್ಷ ನಿಷ್ಠೆ, ಸಿದ್ಧಾಂತಕ್ಕೆ ಬದ್ಧರಾಗಿ ಪ್ರಾಣ ಹೋದರು ಪಕ್ಷಕ್ಕೆ ದ್ರೋಹ ಮಾಡದೇ ಪಕ್ಷಕ್ಕಾಗಿ ಮತ್ತು ಪಕ್ಷದ ಬಲವರ್ಧನೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದೇವೆ. ಯಾವುದೇ ಗಾಡ್ ಫಾದರ್ ಬೆಂಬಲವಿಲ್ಲದೆ ಪಕ್ಷವನ್ನು ಎಲ್ಲಾ ಹಂತದಲ್ಲಿ ಅಧಿಕಾರಕ್ಕೆ ತರುವ ಪಕ್ಷದ ಆದೇಶಗಳನ್ನು ಮನಸಾ ಪೂರ್ವಕ ಪಾಲನೆ ಮಾಡುವ ಮತ್ತು ಪಕ್ಷಕ್ಕಾಗಿ ಯಾವತ್ಯಾಗಕ್ಕೂ ಸಿದ್ಧರಿರುವವರಿಗೆ ಯಾವುದೇ ಸ್ಥಾನಮಾನ ಕೊಡುತ್ತಿಲ್ಲ.

    ಕೇವಲ #ಹೌದಪ್ಪ ಗಳಿಗೆ ಈ ದಿನಗಳಲ್ಲಿ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದ್ದನು ನೋಡಿ ನೋವಾಗುತ್ತಿದೆ. ಇದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ಹೊತ್ತು ಬಂದಂತೆ ಕೊಡೆ ಹಿಡಿಯುವವರಿಗೆ ಮಣೆ ಹಾಕುವುದನ್ನು ಬಿಟ್ಟು ಸ್ವಲ್ಪ ಪಕ್ಷ ನಿಷ್ಟರನ್ನು ಸಹಿತ ಪರಿಗಣಿಸಿದರೆ ನಿಮಗೂ ಗೌರವ ಮತ್ತು ಪಕ್ಷಕ್ಕೂ ಒಳ್ಳೆಯದಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿ ಕೊನೆಗೆ ಜೈ ಬಿಜೆಪಿ ಅಂತ ಹೇಳಿದ್ದಾರೆ.

  • ಅನ್ಯ ಮಾರ್ಗದಲ್ಲಿ ಸಚಿವನಾಗೋದು ಆತ್ಮಸಾಕ್ಷಿಗೆ ವಿರುದ್ಧ: ರಾಮದಾಸ್

    ಅನ್ಯ ಮಾರ್ಗದಲ್ಲಿ ಸಚಿವನಾಗೋದು ಆತ್ಮಸಾಕ್ಷಿಗೆ ವಿರುದ್ಧ: ರಾಮದಾಸ್

    – ಮೈಸೂರು ಪ್ರಾಂತ್ಯಕ್ಕೆ ಅನ್ಯಾಯ

    ಮೈಸೂರು: ನೂತನ ಸಚಿವರ ಹೆಸರು ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮೈಸೂರು ಶಾಸಕ ಎಸ್.ಎ.ರಾಮದಾಸ್ ಸಹ ತಮ್ಮ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದದ್ದು ಎಂದು ಹೇಳುವ ಮೂಲಕ ಸಿ.ಪಿ.ಯೋಗೇಶ್ವರ್ ಆಯ್ಕೆಯ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

    ನಾನು ಮೈಸೂರು ನಗರದ ಯುವಮೋರ್ಚಾ ಅಧ್ಯಕ್ಷನಾಗಿ ಪಕ್ಷದ ಕೆಲಸ ಪ್ರಾರಂಭ ಮಾಡಿದವನು. ರಾಜ್ಯದ ಬಿಜೆಪಿ ಯುವಮೋರ್ಚಾ ಅಧ್ಯಕ್ಷನಾಗಿ ಸತತ 2 ಬಾರಿ ಕೆಲಸ ಮಾಡಿದವನು. ಸತತ 28 ವರ್ಷಗಳಿಂದ ಸಾಕಷ್ಟು ನಿಷ್ಠೆಯಿಂದ ಪಕ್ಷದ ಕೆಲಸ ಮಾಡುತ್ತಿದ್ದೇನೆ. ವಿಭಾಗದಲ್ಲಿ ಗೆದ್ದ 11 ಜನ ಬಿಜೆಪಿ ಶಾಸಕರಲ್ಲಿ 10 ಜನ ಪಕ್ಷ ಬಿಟ್ಟು ಅನ್ಯ ಪಕ್ಷಕ್ಕೆ ತೆರಳಿದರು.

    ನಾನು ಪಕ್ಷದ ಶಾಸಕನಾಗಿ, ಪಕ್ಷ ನನ್ನ ತಾಯಿ, ಅದರ ಘನತೆ ನನ್ನ ಕರ್ತವ್ಯ ಎಂದು ಅರಿತವನು. ನಾನೊಬ್ಬ ನಿಜವಾದ ಸ್ವಯಂಸೇವಕ. ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮ ಸಾಕ್ಷಿಗೆ ವಿರುದ್ಧವಾದುದು. ಹಳೆಯ ಮೈಸೂರು ಪ್ರಾಂತ್ಯಕ್ಕೆ ಆದ ಅನ್ಯಾಯ.! ಜಿಲ್ಲೆಯ ಬೇರೆ ಯಾರನ್ನಾದರೂ ಮಂತ್ರಿ ಮಾಡಬಹುದಿತ್ತು ಎಂದು ಬೇಸರದ ನುಡಿಗಳನ್ನಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು ಸಂಪುಟ ರಚನೆಯಾದ ವೇಳೆಯೂ ಸಚಿವ ಸ್ಥಾನ ಸಿಗದ್ದಕ್ಕೆ ರಾಮದಾಸ್ ತಮ್ಮ ಅಸಮಾಧಾನಿತರಾಗಿದ್ದರು.

    ನೂತನ ಸಚಿವರು: ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ

  • 17 ಜನ ಹಾಲಿ ಶಾಸಕರ ಭಿಕ್ಷೆಯಲ್ಲಿಂದು ಬಿಜೆಪಿ ಸರ್ಕಾರ ಇದೆ: ಹೆಚ್. ವಿಶ್ವನಾಥ್

    17 ಜನ ಹಾಲಿ ಶಾಸಕರ ಭಿಕ್ಷೆಯಲ್ಲಿಂದು ಬಿಜೆಪಿ ಸರ್ಕಾರ ಇದೆ: ಹೆಚ್. ವಿಶ್ವನಾಥ್

    – ಬಿಜೆಪಿಯಲ್ಲಿ ಸೋತವರಿಗಷ್ಟೇ ಆದ್ಯತೆನಾ..?
    – ಯೋಗೇಶ್ವರ್ ನಿಮಗೆ ಬ್ಲಾಕ್ ಮೇಲ್ ಮಾಡ್ತಿದ್ದಾನಾ..?
    – ಸಿಎಂಗೆ ಹಳ್ಳಿಹಕ್ಕಿ ಬಹಿರಂಗ ಪ್ರಶ್ನೆ

    ಮೈಸೂರು: ಯಡಿಯೂರಪ್ಪನವರೇ 17 ಮಂದಿ ಹಾಲಿ ಶಾಸಕರು ನೀಡಿದ ಭಿಕ್ಷೆಯಿಂದ ಇಂದು ಸರ್ಕಾರ ನಿಂತಿದೆ. ಅವರೆಲ್ಲರ ತ್ಯಾಗದಿಂದ ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ ಎಂಬುದನ್ನು ಮರೆಯಬೇಡಿ ಎಂದು ಹಳ್ಳಿ ಹಕ್ಕಿ ಎಂಎಲ್‍ಸಿ ಹೆಚ್. ವಿಶ್ವನಾಥ್ ಅವರು ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆಯೇ ಇಲ್ಲ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಿ, ಅವರು ಎಲ್ಲೂ ಕೂಡ ನಮ್ಮ ಹೆಸರನ್ನು ಹೇಳಲಿಲ್ಲ. ಯಡಿಯೂರಪ್ಪನವರಿಗೋಸ್ಕರ ಕಾಂಗ್ರೆಸ್ಸಿನಲ್ಲಿ ಮಂತ್ರಿ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದು ಬಿಎಸ್‍ವೈ ಅವರನ್ನು ಸಿಎಂ ಮಾಡಿದ್ವಿ. ಆದರೆ ಇಂದು ಯಡಿಯೂರಪ್ಪನವರು ಕೂಡ ಕೊಟ್ಟಿದ್ದ ಮಾತು ತಪ್ಪುವುದರ ಮೂಲಕ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.

    ಯಡಿಯೂರಪ್ಪನವರೇ ನಿಮ್ಮ ಮನೆ ದೇವರು ಸಿದ್ದಲಿಂಗೇಶ್ವರನು ನಿಮಗೆ ಒಳ್ಳೆಯದು ಮಾಡುವುದಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದ ನಿಮ್ಮನ್ನು ದೇವರು ಕೂಡ ಕ್ಷಮಿಸುವುದಿಲ್ಲ. ನೀವು ಎಂತಹ ಸರ್ಕಾರ ಮಾಡಿದ್ದೀರಿ ಯಡಿಯೂರಪ್ಪನವರೇ? 33 ಮತ್ರಿ ಸ್ಥಾನಗಳಲ್ಲಿ 13 ಮಂದಿ ವೀರಶೈವ, 11 ಮಂದಿ ಒಕ್ಕಲಿಗ, 4 ಮಂದಿ ಕುರುಬರಿಗೆ ಮಂತ್ರಿಗಿರಿ ಕೊಟ್ಟಿದ್ದೀರಾ. ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ನಾಗೇಶ್‍ರನ್ನ ಏಕೆ ತೆಗೆಯಬೇಕು? ಮುನಿರತ್ನರವರ ಬದಲಾಗಿ ಯೋಗೇಶ್ವರ್‍ರವರಿಗೆ ಏಕೆ ಸ್ಥಾನ ನೀಡುತ್ತಿದ್ದೀರಾ ಹೇಳಿ? ಕೋರ್ಟ್ ಆದೇಶಕ್ಕೂ ನನಗೆ ಮಂತ್ರಿ ಸ್ಥಾನ ನೀಡುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುವುದು ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

    ಆ ಸೈನಿಕನ ಮೇಲೆ 420 ಕೇಸ್ ಇದೆ. ಅವನನ್ನು ಸಚಿವನನ್ನಾಗಿ ಮಾಡಲು ದುಂಬಾಲು ಬಿದ್ದಿದ್ದೀರಾ? ಏಕೆ ಎಲ್ಲಾದರೂ ಸಿಕ್ಕಿ ಹಾಕಿಕೊಂಡಿದ್ದೀರಾ ಹೇಳಿ. ಇಲ್ಲಾ ಅವನೇನಾದರೂ ನಿಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನಾ? ಪಕ್ಷ ರಚನೆಗೆ ಅವನೇನಾದರೂ ರಾಜೀನಾಮೆ ಕೊಟ್ಟಿದ್ದಾನಾ ಅಥವಾ ನೀವೆನು ಸೈನಿಕನ ಕೈಗೊಂಬೆ ಆಗಿದ್ದೀರಾ? ನಿಮ್ಮ ಮಾಜಿ ಪಿಎ ಹಾಗೂ ಸ್ನೇನಿಕ ನಿಮ್ಮನ್ನು ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ಪಡೆದುಕೊಂಡಿದ್ದಾರಾ ಹೇಳಿ ಎಂದು ಬಿಎಸ್‍ವೈ ಅವರನ್ನು ಹಳ್ಳಿಹಕ್ಕಿ ಪ್ರಶ್ನಿಸಿದ್ದಾರೆ.

    ಯಡಿಯೂರಪ್ಪನವರೇ ಇಲ್ಲಿಯವರೆಗೂ ನಿಮ್ಮಿಂದ ನಾನು ಏನಾದರೂ ನಿರೀಕ್ಷೆ ಮಾಡಿದ್ದೀನಾ? ಸ್ನೇಹದಲ್ಲಿ ಇದ್ದ ಕಾರಣ ನಿಮಗೆ ಸಹಾಯ ಮಾಡಿದ್ದೆವು. ಆದ್ರೆ ನೀವೆನು ಮಾಡಿದ್ದೀರಾ ಹೇಳಿ. ನೀವು ಅಂದು ಏನು ಮಾತು ಕೊಟ್ಟಿದ್ರಿ ಎಂದು ಹೇಳಿ. ಬನ್ನಿ ಬೇಕಾದರೆ ಯಡಿಯೂರಿಗೆ ಹೋಗೋಣ ಏನಾಗಿತ್ತು ಎಂದು ಅಲ್ಲಿಯೇ ಮಾತನಾಡೋಣ. ನಾವು ಎಂದಿಗೂ ಯಡಿಯೂರಪ್ಪನವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನ ಸಿಎಂ ಮಾಡಿದ ಈ 17 ಜನರು ಕೂಡ ನಿಮ್ಮ ಸಂಪುಟದಲ್ಲಿ ಇರಬೇಕು. ಅದು ಮುಸ್ಲಿಂ ಆಗಿದ್ದರೂ ಇರಬೇಕು, ಎಲ್ಲ ಜಾತಿ ಜನಾಂಗ ಇರಬೇಕು. ನಾಡಿನಲ್ಲಿ ನಾಲಿಗೆ ತಪ್ಪದ ನಾಯಕ ಎಂಬ ಬಿರುದು ಕೊಟ್ಟಿದ್ದು ನಾವೇ ಆದರೆ ಈಗ ಏನಾಗಿದೆ ಎಂದು ಅಸಮಾಧಾನ ಹೊರಹಾಕಿದರು.

    ಯಡಿಯೂರಪ್ಪ ಮನೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಯೋಗೇಶ್ವರ್‍ರವರು ಮಂತ್ರಿ ಆಗುವುದಕ್ಕೆ ಕಾರಣ ವಿಜಯೇಂದ್ರ. ಅದೇ ರೀತಿ ಯಡಿಯೂರಪ್ಪರ ಪ್ರತಿಷ್ಠೆ ಡೆಮಾಲಿಷ್ ಆಗುವುದಕ್ಕೂ ವಿಜಯೇಂದ್ರರವರೇ ಕಾರಣ. ಇಡೀ ವಿಧಾನಸೌಧದಲ್ಲಿ ಅವರ ಅಣ್ಣ-ತಮ್ಮಂದಿರೇ ಕುಳಿತಿದ್ದಾರೆ. ಯಡಿಯೂರಪ್ಪರವರು ಸಂಪಾದಿಸಿದ್ದ ಹೆಸರು ಹಾಳಾಗುತ್ತಿದೆ. ಯೋಗೇಶ್ವರ್‍ರವರದ್ದು ಒಂದು ರೀತಿ ಬ್ಲಾಕ್ ಮೇಲ್ ತಂತ್ರ. ಅವರ ಬ್ಲಾಕ್ ಮೇಲ್ ಏನಂತ ಯಾವತ್ತಾದರೂ ಒಂದು ದಿನ ಹೊರಗೆ ಬರುತ್ತೆ. ರಾಜ್ಯದಲ್ಲಿ ಸಚಿವರಾಗೋಕೆ ತಮ್ಮ ಹಿಂದೆ ಬ್ಯಾಗ್ ಹಿಡಿದುಕೊಂಡು ಓಡಾಡಿದ್ದೆ ಇಂದು ಮಾನದಂಡವಾಯಿತೇ? ಯೋಗೇಶ್ವರ್‍ಗೆ ಬರಿ ಬಾಂಬೆಯಲ್ಲಿ ಬ್ಯಾಗ್ ಹಿಡಿದ್ದಿದ್ದು ಬಿಟ್ಟರೆ ಮತ್ತೇನೂ ಇಲ್ಲಿಯವರೆಗೂ ಮಾಡಿಲ್ಲ. ಯಡಿಯೂರಪ್ಪನವರೇ ಪ್ರತಿಯೊಂದಕ್ಕೂ ಸುಮ್ಮನೆ ಹೈಕಮಾಂಡ್ ಹೆಸರು ಬಳಸಬೇಡಿ. ಕರ್ನಾಟಕಕ್ಕೆ ಯಡಿಯೂರಪ್ಪನವರೇ ಹೈಕಮಾಂಡ್ ಎಂದು ಎಲ್ಲರಿಗೂ ತಿಳಿದಿದೆ. ಈ ಎಲ್ಲ ಬೆಳವಣಿಗೆಯಿಂದ ನಮಗೆ ನೋವಾಗಿದೆ. ನಾವು ಮನುಷ್ಯರು ನಮಗೂ ಹೃದಯ ಇದೆ, ನಮಗೂ ನೋವಾಗುತ್ತದೆ ಎಂದು ಸಿಎಂ ಬಿಎಸ್‍ವೈ ವಿರುದ್ಧ ಹೆಚ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

     

  • ಹೈಕಮಾಂಡ್ ಎದುರು ಸಿಎಂ ಯಡಿಯೂರಪ್ಪಗೆ ಭಾರೀ ಮುಖಭಂಗ!

    ಹೈಕಮಾಂಡ್ ಎದುರು ಸಿಎಂ ಯಡಿಯೂರಪ್ಪಗೆ ಭಾರೀ ಮುಖಭಂಗ!

    – ಮಾರ್ಚ್ ನಲ್ಲಿ ಸಿಎಂ ಬದಲಾಗ್ತಾರಾ?

    ಬೆಂಗಳೂರು: ಹೈಕಮಾಂಡ್ ಮುಂದೆ ಸಿಎಂಗೆ ಭಾರೀ ಮುಖಭಂಗವಾಗಿದ್ದು, ಯಡಿಯೂರಪ್ಪ ಕೊಟ್ಟ ಪಟ್ಟಿಯಲ್ಲಿ ಮೂವರಿಗೆ ಮಾತ್ರ ಸ್ಥಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಉಳಿದ ನಾಲ್ವರ ಹೆಸರನ್ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿದ ಪಟ್ಟಿಯಿಂದ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

    ಸಿಎಂ ತಮ್ಮ ಪಟ್ಟಿಯಲ್ಲಿ ಶಾಸಕರಾದ ಮುನಿರತ್ನ ಮತ್ತು ರೇಣುಕಾಚಾರ್ಯರ ಹೆಸರನ್ನ ಶಿಫಾರಸ್ಸು ಮಾಡಿದ್ದರು. ಆದ್ರೆ ಸಿಎಂ ನೀಡಿದ ಏಳು ಹೆಸರಲ್ಲಿ ಕೇವಲ ಮೂವರನ್ನ ಮಾತ್ರ ಹೈಕಮಾಂಡ್ ಅಂತಿಮ ಮಾಡಿದೆ. ಹೈಕಮಾಂಡ್ ಮುಂದೆ ಯಡಿಯೂರಪ್ಪ ವೀಕ್ ಆದ್ರಾ ಅನ್ನೋ ಮಾತುಗಳ ಜೊತೆ ಮಾರ್ಚ್ ನಲ್ಲಿ ಸಿಎಂ ಬದಲಾವಣೆ ಆಗುತ್ತೆ ಎಂಬ ವದಂತಿಗಳಿಗೆ ಇಂದಿನ ಬೆಳವಣಿಗೆ ಪುಷ್ಠಿ ನೀಡುತ್ತಿವೆ.

    ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶಾಸಕ ಮುನಿರತ್ನ ಅವರಿಗೂ ಸಚಿವ ಸ್ಥಾನ ಕೈ ತಪ್ಪಿದ್ದು, ಸಿಎಂ ವಚನ ಭ್ರಷ್ಟರಾದ್ರಾ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

     

  • ಬುಧವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ

    ಬುಧವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ

    ಬೆಂಗಳೂರು: ಬುಧವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸುವ ಸಾಧ್ಯತೆಗಳಿವೆ.

    ಬುಧವಾರ ಸಂಜೆ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಇಂದು ಸಾಯಂಕಾಲ ಅಥವಾ ನಾಳೆ ಬೆಳಗ್ಗೆ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮಾಧ್ಯಮಗಳಲ್ಲಿ ಹಲವರ ಹೆಸರು ಬರುತ್ತಿರೋದನ್ನ ಗಮನಿಸಿದ್ದೇನೆ. ನಾನೇ ಸಂಜೆ ಅವರ ಹೆಸರು ಹೇಳುತ್ತೇನೆ. ಸಂಪುಟ ವಿಸ್ತರಣೆನಾ ಅಥವ ಪುನರ್ ರಚನೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಸಿಎಂ ನಾಳೆ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.

    ಸಿಎಂ ದೆಹಲಿ ಪ್ರವಾಸದಿಂದ ಬಂದ ಬಳಿಕ ಏಳು ಸಚಿವ ಸ್ಥಾನಕ್ಕಾಗಿ ಸುಮಾರು 20ಕ್ಕೂ ಅಧಿಕ ಶಾಸಕರು ರೇಸ್ ನಲ್ಲಿದ್ದಾರೆ. ಮೂವರು ವಲಸಿಗರು ಮತ್ತು ಮೂಲ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಎಂಎಲ್‍ಸಿ ಸಿ.ಪಿ.ಯೋಗೇಶ್ವರ್ ಮತ್ತು ಬಿಎಸ್‍ಪಿ ಉಚ್ಛಾಟಿತ ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಹೆಸರು ಸಂಪುಟ ಸೇರ್ಪಡೆಯಾಗುವ ಪಟ್ಟಿಯಲ್ಲಿ ಮುನ್ನಲೆಗೆ ಬಂದಿದೆ.

  • ಸರ್ಕಾರ ರಚನೆಗೆ ಮೂಲ ಕಾರಣ ನಾನು : ಅಬಕಾರಿ ಸಚಿವ ನಾಗೇಶ್

    ಸರ್ಕಾರ ರಚನೆಗೆ ಮೂಲ ಕಾರಣ ನಾನು : ಅಬಕಾರಿ ಸಚಿವ ನಾಗೇಶ್

    – ನನ್ನನ್ನ ಸಂಪುಟದಿಂದ ಕೈ ಬಿಡಲ್ಲ

    ಬೆಂಗಳೂರು: ಸರ್ಕಾರ ರಚನೆಗೆ ಮೂಲ ಬುನಾದಿ ಹಾಕಿದವನೇ ನಾನು. ಹಾಗಾಗಿ ಸಂಪುಟದಿಂದ ನನ್ನನ್ನು ಕೈ ಬಿಡುವುದಿಲ್ಲ. ಸಿಎಂ ಬಿಎಸ್ ಯಡಿಯೂರಪ್ಪನವರ ಮೇಲೆ ನನಗೆ ನಂಬಿಕೆ ಇದೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ.

    ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಬಜೆಟ್ ಬಳಿಕ ಅಬಕಾರಿ ಸಚಿವ ನಾಗೇಶ್ ಅವರಿಗೆ ಕೊಕ್ ಕೊಟ್ಟು, ಆ ಸ್ಥಾನವನ್ನು ಬಿಎಸ್‍ಪಿ ಉಚ್ಛಾಟಿತ ಎನ್. ಮಹೇಶ್‍ರವರಿಗೆ ನೀಡುವುದಕ್ಕೆ ಸಿಎಂ ಬಿಎಸ್‍ವೈ ಚಿಂತನೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

    ಈ ಕುರಿತಂತೆ ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಬಕಾರಿ ಸಚಿವ ನಾಗೇಶ್, ಸಂಪುಟದಿಂದ ನನ್ನನ್ನು ಕೈ ಬಿಡುವ ವಿಚಾರವನ್ನು ಯಾವುದೋ ಒಂದು ಪತ್ರಿಕೆಯಲ್ಲಿ ಇಂದು ಬೆಳಗ್ಗೆ ನೋಡಿದೆ. ಅದನ್ನು ನೋಡಿ ನನಗೆ ಶಾಕ್ ಆಯಿತು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಮೊದಲು ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದೆ ನಾನು. ನನ್ನಿಂದಲೇ ಬಿಜೆಪಿ ಸರ್ಕಾರ ರಚಿಸಲು ಸುಗಮವಾಗಿದ್ದು, ನಂತರ ಎಂಟಿಬಿ ನಾಗರಾಜ್ ಮತ್ತು ಶಂಕರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು ಎಂದು ತಿಳಿಸಿದರು.

    ಈ ಹಿಂದೆ ಯಡಿಯೂರಪ್ಪನವರು ನನಗೆ ನೀನು ಮೂರು ವರ್ಷ ಮಂತ್ರಿಯಾಗಿರುತ್ತೀಯಾ ಎಂದು ಹೇಳಿದ್ದರು. ಹಾಗಾಗಿ ನನಗೆ ಅದರಲ್ಲಿ ಯಾವುದೇ ಅನುಮಾನವಿಲ್ಲ. ಸಿಎಂ ಎಂದಿಗೂ ಮಾತಿಗೆ ತಪ್ಪುವುದಿಲ್ಲ. ನನಗೆ ಈ ವಿಚಾರದಲ್ಲಿ ಯಾವುದೇ ಅನುಮಾನ ಇಲ್ಲ. ಸಿಎಂ ಬಿಎಸ್ ಯಡಿಯೂರಪ್ಪನವರ ಮೇಲೆ ನನಗೆ ಸಂಪೂರ್ಣ ನಂಬಿಕೆ, ವಿಶ್ವಾಸವಿದೆ. ನನ್ನ ಇಲಾಖೆಯಲ್ಲಿ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡಿದ್ದೇನೆ. ಅನೇಕ ಸುಧಾರಣೆ ಜಾರಿಗೆ ತಂದಿದ್ದೇನೆ. ಈ ಸರ್ಕಾರ ಬರಲು ನಾನು ಮುಖ್ಯ ಕಾರಣ ಎಂಬುದು ಸ್ವತಃ ಯಡಿಯೂರಪ್ಪನವರಿಗೆ ತಿಳಿದಿದೆ ಎಂದು ಹೇಳಿದರು

    ಮೊದಲು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದೆ ನಾನು. ಬಳಿಕ ಉಳಿದವರು ಧೈರ್ಯ ಮಾಡಿ ರಾಜೀನಾಮೆ ಕೊಟ್ಟರು. ಉಳಿದವರಿಗೂ ಮಂತ್ರಿ ಸ್ಥಾನ ನೀಡಬೇಕು. ಅಲ್ಲದೆ ಶಂಕರ್, ನಾಗರಾಜ್ ಕೊಡುಗೆಯೂ ಸರ್ಕಾರ ರಚನೆಗೆ ಪ್ರಮುಖವಾಗಿದೆ. ಹೀಗಾಗಿ ಅವ್ರಿಗೂ ಮಂತ್ರಿ ಸ್ಥಾನ ನೀಡಬೇಕು ಎಂದರು.

    ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ನಾಯಕತ್ವದ ಬದಲಾವಣೆ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡ ವ್ಯಕ್ತಿ ಅಲ್ಲ. ಅವರು ಜನಪರವಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಸಿಎಂ ಆಗಿರುವವರೆಗೂ ಅವರಿಗೆ ನನ್ನ ಬೆಂಬಲ ಯಾವಾಗಲೂ ಇದ್ದೇ ಇರುತ್ತದೆ. ನನ್ನನ್ನು ಸರ್ಕಾರ ಕೈ ಬಿಡುವ ಪ್ರಶ್ನೆಯೇ ಇಲ್ಲ ಅಂತಹ ಸಂದರ್ಭ ಏನಾದರೂ ಉದ್ಭವಿಸಿದರೆ ಆಗ ನಾನು ಮಾತನಾಡುತ್ತೇನೆ. ಈ ವಿಚಾರವಾಗಿ ಸಿಎಂ ಯಡಿಯೂರಪ್ಪರನ್ನ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

  • ಬಿಜೆಪಿಯಲ್ಲಿ ಈಗ ಯಡಿಯೂರಪ್ಪ ಮತ್ತಷ್ಟು ಸ್ಟ್ರಾಂಗ್ – ಬಿಎಸ್‍ವೈ ಅಧಿಕಾರ ಅಬಾಧಿತ

    ಬಿಜೆಪಿಯಲ್ಲಿ ಈಗ ಯಡಿಯೂರಪ್ಪ ಮತ್ತಷ್ಟು ಸ್ಟ್ರಾಂಗ್ – ಬಿಎಸ್‍ವೈ ಅಧಿಕಾರ ಅಬಾಧಿತ

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ಸರ್ಕಸ್ ತೆರೆಗೆ ದಿನಾಂಕ ನಿಗದಿಯಾಗಿದೆ. ತಮ್ಮ ಲೆಕ್ಕಾಚಾರದಂತೆ ಸಂಪುಟ ವಿಸ್ತರಣೆ ಮಾಡಲು ಸಿಎಂ ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇತ್ತ ಉಪ ಚುನಾವಣೆಯಲ್ಲಿ ಗೆದ್ದು, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಗೆಲುವು ಯಡಿಯೂರಪ್ಪರನ್ನ ಮತ್ತಷ್ಟು ರಾಜಕೀಯವಾಗಿ ಬಲಿಷ್ಠರನ್ನಾಗಿಸಿದೆ.

    ಇತ್ತ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಕೇಳಿ ಬಂದಿದ್ದರೂ, ಭಾನುವಾರ ನಡೆದ ಸಭೆಯಲ್ಲಿ ಈ ಬಗ್ಗೆ ಬಿಜೆಪಿ ಹೈಕಮಾಂಡ್ ಪ್ರಸ್ತಾಪ ಮಾಡಿಲ್ಲ ಎಂದು ತಿಳಿದು ಬಂದಿದೆ. ಇತ್ತೀಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದಿದ್ದಾಗ ಹಲವು ಶಾಸಕರು ದೂರು ಕೊಟ್ಟಿದ್ದರು. ಹಾಗಾಗಿ ಸರ್ಕಾರದಲ್ಲಿರುವ ಭಿನ್ನಾಭಿಪ್ರಾಯ, ತೊಡಕುಗಳನ್ನು ನಿವಾರಿಸಿಕೊಳ್ಳಿ ಎಂದು ಶಾಸಕರ ದೂರು-ದುಮ್ಮಾನಗಳನ್ನು ಪ್ರಸ್ತಾಪಿಸಿ ಬಿಎಸ್‍ವೈಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದಷ್ಟು ಸಲಹೆ-ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

    ಮುಂದಿನ ಮೂರು ಉಪ ಚುನಾವಣೆಗಳಲ್ಲಿ ಜಯ ಗಳಿಸಲು ಅಗತ್ಯ ಸಿದ್ಧತೆ ನಡೆಸಿಕೊಳ್ಳಿ. ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವ ಮುನ್ನ ಸಚಿವರು ಮತ್ತು ಪಕ್ಷದ ಕೋರ್ ಕಮೀಟಿಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಅಮಿತ್ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಎಲ್ಲರ ವಿಶ್ವಾಸ ಗಳಿಸಿಕೊಂಡು ಆಡಳಿತ ನಡೆಸೋದಾಗಿ ಯಡಿಯೂರಪ್ಪನವರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೊಟ್ಟ ಮಾತು ಉಳಿಸಿಕೊಂಡ ಬಿಎಸ್‍ವೈ: ಸಿಎಂ ಬಿಎಸ್‍ವೈ ರಾಜ್ಯ ರಾಜಕೀಯದಲ್ಲಿ ವಿಭಿನ್ನ ಹಾದಿಯಲ್ಲಿ ಸಾಗುವ ಮೂಲಕ ಎಲ್ಲರ ಗಮನ ಸೆಳೆದವರು. ಕಾಂಗ್ರೆಸ್‍ನಲ್ಲಿ ಅತೃಪ್ತಿ ಹೊಂದು ಬಿಜೆಪಿಗೆ ಸೇರ್ಪಡೆಯಾದ ಎಲ್ಲಾ ವಲಸಿಗರಿಗೆ ಮಂತ್ರಿ ಸ್ಥಾನ ನೀಡುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ಭಾನುವಾರ ಹೈಕಮಾಂಡ್ ಜೊತೆ ಸಿಎಂ ಬಿಎಸ್‍ವೈ ಸಭೆ ನಡೆಸಿದ್ದು, ಹೈಕಮಾಂಡ್ ಸಂಪುಟ ವಿಸ್ತರಣೆಗೆ 3 ಷರತ್ತು ಬದ್ಧ ಅನುಮತಿ ನೀಡಿದೆ. ಈ ಬೆನ್ನೆಲ್ಲೇ ಯಡಿಯೂರಪ್ಪನವರು ವಲಸಿಗರಿಗೆ ಮಂತ್ರಿ ಸ್ಥಾನ ಕೊಡುವುದು ಖಚಿತಗೊಳಿಸಿದ್ದಾರೆ. ಹೀಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಬಿಎಸ್‍ವೈ ಹಿರಿಮೆ, ಹೆಗ್ಗಳಿಕೆ ಹೆಚ್ಚಾಗಿದೆ.

  • ಸಂಪುಟ ವಿಸ್ತರಣೆ – ಸಿಎಂ ಬಿಎಸ್‍ವೈಗೆ ಷರತ್ತುಬದ್ಧ ಅನುಮತಿ!

    ಸಂಪುಟ ವಿಸ್ತರಣೆ – ಸಿಎಂ ಬಿಎಸ್‍ವೈಗೆ ಷರತ್ತುಬದ್ಧ ಅನುಮತಿ!

    – ಸಿಎಂಗೆ ಶಾ ಮೂರು ಷರತ್ತು

    ಬೆಂಗಳೂರು: ಸಂಕ್ರಾಂತಿ ಹಿಂದಿನ ದಿನವೇ ಸಂಪುಟ ವಿಸ್ತರಣೆ ನಡೆಯಲಿದೆ ಅನ್ನೋ ಸುಳಿವನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗಷ್ಟೇ ಷರತ್ತು ಬದ್ಧ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.

    ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೊತೆ ಸಿಎಂ ಸುಮಾರು ಒಂದೂವರೆ ಗಂಟೆಯಷ್ಟು ಕಾಲ ಸಭೆ ನಡೆಸಿದ್ದರು. ಈ ವೇಳೆ ಹೈಕಮಾಂಡ್ ಯಡಿಯೂರಪ್ಪ ಅವರು ನಿಗಮ ಮಂಡಳಿಗಳಿಗೆ ನೇಮಕಾತಿಯಲ್ಲಿ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳ ಬಗ್ಗೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಹೀಗಾಗಿ ಸಂಪುಟ ವಿಸ್ತರಣೆಗೆ ಅಮಿತ್ ಮೂರು ಷರತ್ತು ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಬಿಎಸ್‍ವೈಗೆ ಶಾ ಷರತ್ತು:
    1. ಸದ್ಯಕ್ಕೆ ಸಂಪುಟ ವಿಸ್ತರಣೆಗಷ್ಟೇ ಅನುಮತಿ – ಹೊಸ ಸಚಿವರ ಸೇರ್ಪಡೆಯಷ್ಟೇ.
    2. ಯಾರು ಸಚಿವರು ಆಗ್ಬೇಕು ಎಂಬ ಪಟ್ಟಿಯನ್ನ ನಾವೇ ಅಂತಿಮಗೊಳಿಸಿ ಕಳಿಸ್ತೀವಿ.
    3. ಸಂಪುಟ ಪುನರ್ ರಚನೆ ನಿರ್ಧಾರವನ್ನ ಭವಿಷ್ಯದಲ್ಲೇ ನಾವೇ ಹೇಳ್ತೀವಿ.

    ದೆಹಲಿಯಿಂದ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇಂದಿನ ಭೇಟಿ ಸಂತಸ ತಂದಿದೆ. ಸಂಪುಟ ವಿಸ್ತರಣೆಗೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಬರಬೇಕು ಎಂಬುವುದು ನಮ್ಮ ಆಸೆ. ಆರೇಳು ಜನರು ಸಂಪುಟ ಸೇರಲಿದ್ದು, ಒಂದೆರಡು ದಿನಗಳಲ್ಲಿ ದಿನಾಂಕ ಮತ್ತು ಸಂಪುಟ ಸೇರುವವರ ಹೆಸರು ತಿಳಿಸಲಾಗುತ್ತೆ ಎಂದರು.

  • ಸಂಪುಟ ಸಂಕ್ರಮಣ – ಸಚಿವಕಾಂಕ್ಷಿಗಳಿಗೆ ಸಿಗಲಿದೆ ಸಿಹಿ

    ಸಂಪುಟ ಸಂಕ್ರಮಣ – ಸಚಿವಕಾಂಕ್ಷಿಗಳಿಗೆ ಸಿಗಲಿದೆ ಸಿಹಿ

    ಬೆಂಗಳೂರು: ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸದ ಬಳಿಕ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸಂಕ್ರಾಂತಿ ಹಿಂದಿನ ದಿನವೇ ಏಳು ಜನರು ರಾಜಾಹುಲಿ ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

    ದೆಹಲಿಯಿಂದ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇಂದಿನ ಭೇಟಿ ಸಂತಸ ತಂದಿದೆ. ಸಂಪುಟ ವಿಸ್ತರಣೆಗೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಬರಬೇಕು ಎಂಬುವುದು ನಮ್ಮ ಆಸೆ. ಆರೇಳು ಜನರು ಸಂಪುಟ ಸೇರಲಿದ್ದು, ಒಂದೆರಡು ದಿನಗಳಲ್ಲಿ ದಿನಾಂಕ ಮತ್ತು ಸಂಪುಟ ಸೇರುವವರ ಹೆಸರು ತಿಳಿಸಲಾಗುತ್ತೆ ಎಂದರು.

    ಸಂಪುಟ ವಿಸ್ತರಣೆಗೆ 3+4 ಸೂತ್ರ: ಮೂವರು ವಲಸಿಗರು ಮತ್ತು ನಾಲ್ವರು ಮೂಲ ನಾಯಕರಿಗೆ ಮಂತ್ರಿ ಸ್ಥಾನ ಸಿಗಲಿದೆ. ಇಂದು ಸಚಿವರ ಪಟ್ಟಿಗೆ ಹೈಕಮಾಂಡ್ ನಿಂದ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ. ವಲಸಿಗರ ಮೂರು ಸ್ಥಾನದಲ್ಲಿ ಶಾಸಕ ಮುನಿರತ್ನ, ಎಂಎಲ್‍ಸಿ ಗಳಾದ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಗೆ ಸಚಿವ ಸ್ಥಾನ ಸಿಗೋದು ಬಹುತೇಕ ಖಚಿತವಾಗಿದೆ. ಇನ್ನುಳಿದ ನಾಲ್ಕು ಸ್ಥಾನಕ್ಕೆ ಮೂಲ ಬಿಜೆಪಿಗರ ನಡುವೆಯೇ ಸ್ಪರ್ಧೆ ಏರ್ಪಡಲಿದೆ.

    ಮೂಲ ಬಿಜೆಪಿಗರಲ್ಲಿ ಶಾಸಕ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಎಲ್‍ಸಿ ಯೋಗೇಶ್ವರ್, ಶಾಸಕ ಹಾಲಪ್ಪ ಆಚಾರ್ ಮತ್ತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೆಸರು ಸಚಿವರ ಪಟ್ಟಿ ರೇಸ್ ನಲ್ಲಿವೆ. ಪುನರ್ ರಚನೆ ಆಗಿದ್ದರೆ ಮತ್ತಷ್ಟು ಶಾಸಕರಿಗೆ ಸಚಿವ ಸ್ಥಾನ ಸಿಗುವ ಅವಕಾಶಗಳಿದ್ದವು. ಆದ್ರೆ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಮಾತ್ರ ಹಸಿರು ನಿಶಾನೆ ನೀಡಿದೆ ಎಂದು ತಿಳಿದು ಬಂದಿದೆ.