Tag: ಸಂಪುಟ ವಿಸ್ತರಣೆ

  • ಪಕ್ಷ ಹೇಳಿದ್ರೆ ಸಚಿವ ಸ್ಥಾನ ತೊರೆಯಲು ಸಿದ್ಧ: ಸಿ.ಟಿ.ರವಿ

    ಪಕ್ಷ ಹೇಳಿದ್ರೆ ಸಚಿವ ಸ್ಥಾನ ತೊರೆಯಲು ಸಿದ್ಧ: ಸಿ.ಟಿ.ರವಿ

    ತುಮಕೂರು: ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗಲಿದ್ದು, ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಾಗುವುದು ಸಹಜ. ಒಂದು ವೇಳೆ ಬೇರೊಬ್ಬರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಪಕ್ಷ ನನಗೆ ಸ್ಥಾನ ತ್ಯಜಿಸುವಂತೆ ಹೇಳಿದ್ರೆ, ಖಂಡಿತವಾಗಿಯೂ ನಾನು ಸಚಿವ ಸ್ಥಾನದಿಂದ ಕೆಳಕ್ಕೆ ಇಳಿಯುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

     

    ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಎಷ್ಟು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಅನ್ನೋದು ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಪಕ್ಷದ ವರಿಷ್ಠರ ಜೊತೆ ಮಾತನಾಡಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ. ಅಲ್ಲದೆ ನಾನಂತೂ ಡಿಸಿಎಂ ಹುದ್ದೆಯ ಆಕಾಂಕ್ಷಿಯಲ್ಲ. ಸಿಎಂ ಕೆಲವರಿಗೆ ಮುಂಚೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ. ಕೆಲ ನಾಯಕರ ಅಭಿಮಾನಿಗಳು ತಮ್ಮ ಮುಖಂಡರಿಗೆ ಡಿಸಿಎಂ ಪಟ್ಟ ಕೊಡಿ ಎಂದು ಒತ್ತಾಯ ಮಾಡುವುದರಲ್ಲಿ ತಪ್ಪೇನಿಲ್ಲ. ಎಲ್ಲದಕ್ಕೂ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳಲಿದೆ ಎಂದರು.

    ಇದೇ ವೇಳೆ ಪೌರತ್ವ ತಿದ್ದುಪಡಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಚಿವ ಸಿ.ಟಿ.ರವಿ, ಕಾಂಗ್ರೆಸ್ ನವರು ತಾಲಿಬಾನಿಗಳಿಗೆ ಸಹಕಾರ ನೀಡುತ್ತಿದ್ದಾರೆ. ಕಾಂಗ್ರೆಸ್ ನವರು ಅಂದು ಹುಟ್ಟಿಸಿದ ಪಾಪದ ಕೂಸು ಈಗ ಹೆಮ್ಮರವಾಗಿ ನಿಂತಿದೆ. ಅದಕ್ಕಾಗಿ ಪೌರತ್ವ ಕಾಯಿದೆ ತಿದ್ದುಪಡಿ ಅನಿವಾರ್ಯ. ತಾಲಿಬಾನಿಗಳು, ಕಾಂಗ್ರೆಸಿಗರು, ಕಮ್ಯೂನಿಸ್ಟ್ ರು ಒಟ್ಟಾಗಿ ಪಿತೂರು ಮಾಡಿ ಕೆಲ ರಾಜ್ಯದಲ್ಲಿನ ಹಿಂಸಾಚಾರಕ್ಕೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ಕೆಲಕಾಲ ಸಿದ್ದಗಂಗಾ ಮಠದ ಧ್ಯಾನ ಮಂದಿರದಲ್ಲಿ ಸಚಿವ ಸಿ.ಟಿ.ರವಿ ಧ್ಯಾನ ಮಾಡಿದರು. ಶಾಸಕರಾದ ಜ್ಯೋತಿಗಣೇಶ್, ಮಸಾಲೆ ಜಯರಾಮ್ ಸಚಿವರಿಗೆ ಸಾಥ್ ನೀಡಿದ್ದರು.

  • ಸಂವಿಧಾನಾತ್ಮಕವಾದ ಗೌರವವಿಲ್ಲ, ಡಿಸಿಎಂ ಸ್ಥಾನಗಳೇ ಬೇಡ – ಯತ್ನಾಳ್

    ಸಂವಿಧಾನಾತ್ಮಕವಾದ ಗೌರವವಿಲ್ಲ, ಡಿಸಿಎಂ ಸ್ಥಾನಗಳೇ ಬೇಡ – ಯತ್ನಾಳ್

    – ಕೈ ನಾಯಕರು ಪಾಕಿಸ್ತಾನದವರಿಗೆ ಹುಟ್ಟಿದಂತೆ ಮಾತನಾಡುತ್ತಿದ್ದಾರೆ

    ವಿಜಯಪುರ: ಡಿಸಿಎಂ ಸ್ಥಾನಗಳನ್ನು ಕೈ ಬಿಡುವುದು ಒಳ್ಳೆಯದು. ಮುಖ್ಯಮಂತ್ರಿ ಒಬ್ಬರೇ ಸಾಕು, ಉಪ ಮುಖ್ಯಮಂತ್ರಿಗಳು ಬೇಡ. ಉಳಿದವರು ಮಂತ್ರಿಗಳಾಗಿ ಇರಲಿ, ಉಪಮುಖ್ಯಮಂತ್ರಿ ಏಕೆ ಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

    ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಯತ್ನಾಳ್, ಡಿಸಿಎಂ ಸ್ಥಾನಗಳೇ ಬೇಡ ಎಂದರು. ಅಲ್ಲದೇ ಡಿಸಿಎಂ ಸ್ಥಾನಕ್ಕೆ ಸಂವಿಧಾನಾತ್ಮಕವಾದ ಗೌರವ ಇಲ್ಲ. ಮುಖ್ಯಮಂತ್ರಿಗಳು ಸಮರ್ಥರಿದ್ದು, ಬಿಎಸ್‍ವೈ ನಾಯಕತ್ವದಲ್ಲಿ ಎಲ್ಲರೂ ಕೆಲಸ ಮಾಡಲಿ. ಮಂತ್ರಿಗಿರಿ ಏಕೆ ಬೇಕು? ಒಂದು ಗೂಟದ ಕಾರು ಹಾಗೂ ಪೈಲಟ್‍ಗಾಗಿ ಮಂತ್ರಿ ಬೇಡ ಎಂದು ಸಲಹೆ ನೀಡಿದರು.

    ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೆ ಸಿಎಂ ಸೂಕ್ತ ಸ್ಥಾನಮಾನ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ವಿಜಯಪುರದವರಿಗೆ ಇದೆ. ಸಚಿವ ಸ್ಥಾನ ಕೊಟ್ಟರೆ ನೋಡೋಣ ಎನ್ನುವ ಮೂಲಕ ಸಚಿವ ಸ್ಥಾನದ ರೇಸಿನಲ್ಲಿರುವುದನ್ನು ಸ್ಪಷ್ಟಪಡಿಸಿದರು. ಅಲ್ಲದೇ ಅಭಿವೃದ್ಧಿಗಾಗಿ ಜಿಲ್ಲೆಗೆ ಇಂದು ಸಾವಿರಾರು ಕೋಟಿ ಬರುತ್ತಿದೆ. ಜಿಲ್ಲೆ ಅಭಿವೃದ್ಧಿಯಾದರೆ ನನಗೆ ಅಷ್ಟೇ ಸಾಕು ಎಂದರು.

    ರಾಷ್ಟ್ರೀಯ ನಾಯಕರು ಜಾರ್ಖಂಡ್ ಚುನಾವಣೆಯಲ್ಲಿ ತೊಡಗಿದ್ದಾರೆ. ಪರಿಣಾಮ ಸಚಿವ ಸಂಪುಟ ವಿಸ್ತರಣೆ ತಡವಾಗುತ್ತೆ. ಎರಡು ವಾರ ಎಲ್ಲರೂ ಕಾಯೋಣ ಎಂದರು. ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಐತಿಹಾಸಿಕ ಮಸೂದೆ ಪಾಸ್ ಮಾಡಲಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಸೇರಿದಂತೆ ವಿವಿಧೆಡೆ ಹಿಂದೂಗಳಿಗೆ ಭಯದ ವಾತಾವರಣ ನಿರ್ಮಾಣವಾಗಿತ್ತು. ಅಂತಹವರಿಗೆ ಭಾರತದಲ್ಲಿ ಪೌರತ್ವ ಕೊಡುವ ಕೆಲಸ ಆಗಿದ್ದು, ಐತಿಹಾಸಿಕ ನಿರ್ಧಾರವಾಗಿದೆ. ಸಮಸ್ತ ಹಿಂದೂಗಳನ್ನು ಸಂರಕ್ಷಣೆ ಮಾಡುವ ಕೆಲಸ ಪ್ರಧಾನಿಗಳು ಸೇರಿದಂತೆ ನಾಯಕರು ಮಾಡಿದ್ದಾರೆ ಎಂದು ಧನ್ಯವಾದಗಳು ಸಲ್ಲಿಸಿದರು.

    ಮಸೂದೆಯನ್ನ ವಿರೋಧ ಮಾಡುವ ಕಾಂಗ್ರೆಸ್ ನಾಯಕರು ಪಾಕಿಸ್ಥಾನದ ಏಜೆಂಟರು. ಅವರಿಗೇನಾದರೂ ನ್ಯಾಯ, ನೀತಿ ಎಂಬುವುದಿದ್ದರೆ ಇದಕ್ಕೆ ವಿರೋಧ ಮಾಡಬಾರದು. ಕಾಂಗ್ರೆಸ್ ನಾಯಕರು ಪಾಕಿಸ್ತಾನದವರಿಗೆ ಹುಟ್ಟಿದಂತೆ ಮಾತನಾಡುತ್ತಿದ್ದಾರೆ. ಇದು ದೇಶದ ದುರ್ದೈವವಾಗಿದೆ ಎಂದು ವಾಗ್ದಾಳಿ ನಡೆಸಿದರು.

  • ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಒಲವು -ಗ್ರೀನ್ ಸಿಗ್ನಲ್ ಕೊಡ್ತಾರಾ ಅನರ್ಹರು?

    ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಒಲವು -ಗ್ರೀನ್ ಸಿಗ್ನಲ್ ಕೊಡ್ತಾರಾ ಅನರ್ಹರು?

    ಬೆಂಗಳೂರು: ರಾಜ್ಯದಲ್ಲಿ ಅರ್ಧ ಸರ್ಕಾರವಿದ್ದು, ಪೂರ್ಣ ಸರ್ಕಾರ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೊರಟಿದ್ದಾರೆ. ಆದರೆ ಬಿಎಸ್‍ವೈರ ಈ ನಿರ್ಧಾರಕ್ಕೆ ಹೈಕಮಾಂಡ್ ಹಾಗೂ ಅನರ್ಹ ಶಾಸಕರು ಒಪ್ಪಿಗೆ ನೀಡುತ್ತಾರಾ ಎಂಬ ಅನುಮಾನ ಮೂಡಿದೆ.

    ಸದ್ಯ ಸಿಎಂ ಬಿಎಸ್‍ವೈ ಅವರ ಬಳಿ 46 ಖಾತೆಗಳಲ್ಲಿ 23 ಖಾತೆಗಳಿದ್ದು, ಇದರಲ್ಲಿ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲು ಚಿಂತನೆ ನಡೆಸಿದ್ದಾರೆ. ಆ ಮೂಲಕ ರಾಜ್ಯದ ಅಭಿವೃದ್ಧಿ ಕಾರ್ಯಗಳ ವೇಗವನ್ನು ಹೆಚ್ಚಿಸುವ ಚಿಂತನೆಯನ್ನು ಬಿಎಸ್‍ವೈ ಹೊಂದಿದ್ದು, ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದರೆ 1 ವಾರದಲ್ಲೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.

    ಸಂಪುಟ ವಿಸ್ತರಣೆಗೆ ಇಬ್ಬರಿಂದಲೂ ಅನುಮತಿ ಸಿಗದಿದ್ದರೆ ಸಿಎಂ ಬಿಎಸ್‍ವೈ ‘ಪ್ಲಾನ್ ಬಿ’ ಕೂಡ ಸಿದ್ಧಪಡಿಸಿಕೊಂಡಿದ್ದಾರೆ. ಇದರಂತೆ ಹೈಕಮಾಂಡ್, ಅನರ್ಹ ಶಾಸಕರ ಒಪ್ಪಿಗೆ ಸಿಗದಿದ್ದರೆ ‘ಪ್ಲಾನ್ ಬಿ’ ಅಳವಡಿಕೊಳ್ಳಲು ಮುಂದಾಗಲಿದ್ದಾರೆ. ಈಗಾಗಲೇ ಸಂಪುಟ ಸಚಿವ ಖಾತೆ ಪಡೆದಿರುವ ಸಚಿವರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಷರತ್ತಿನ ಅನ್ವಯ ನೀಡಲು ಬಿಎಸ್‍ವೈ ‘ಪ್ಲಾನ್ ಬಿ’ ಅಡಿ ನಿರ್ಧರಿಸಿದ್ದಾರೆ. ಪ್ರಮುಖ ಖಾತೆಗಳಾದ ಜಲಸಂಪನ್ಮೂಲ, ಇಂಧನ, ಕೃಷಿ, ಬೆಂಗಳೂರು ಅಭಿವೃದ್ಧಿ ಖಾತೆಗಳು ಸಿಎಂ ಅವರ ಬಳಿಯೇ ಇದ್ದು, ಈ ಖಾತೆಗಳನ್ನು ಹೆಚ್ಚುವರಿ ಜವಾಬ್ದಾರಿಯಾಗಿ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ಅನರ್ಹ ಚುನಾವಣೆಗೆ ಸ್ಪರ್ಧೆ ಮಾಡಿ ಗೆದ್ದು ಬಂದ ಸಂದರ್ಭದಲ್ಲಿ ಖಾತೆಗಳನ್ನು ಬಿಟ್ಟು ಕೊಡುವ ಷರತ್ತಿನ ಅನ್ವಯ ‘ಪ್ಲಾನ್ ಬಿ’ ಜಾರಿ ಮಾಡಲಿದ್ದಾರೆ ಎನ್ನಲಾಗಿದೆ.

    ಹೆಚ್ಚುವರಿ ಖಾತೆ ಯಾರಿಗೆ ಸಿಗುತ್ತೆ?
    ಸಂಪುಟ ವಿಸ್ತರಣೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿರುವ ಸಿಎಂ ಬಿಎಸ್‍ವೈ, ಸದ್ಯ ತಮ್ಮ ಬಳಿ ಇರುವ 23 ಖಾತೆಗಳನ್ನು ಹಂಚಿಕೆ ಮಾಡಿದರೆ ಪ್ರಮುಖ ಖಾತೆಗಳ ಹೆಚ್ಚಿನ ಜವಾಬ್ದಾರಿ ಸಚಿವರಿಗೆ ಸಿಗಲಿದೆ ಎಂಬ ಅಂಶವೂ ಪ್ರಮುಖವಾಗಿದೆ. ಈಗಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರ ಸೇರಿದಂತೆ ಸಣ್ಣ ನೀರಾವರಿ ಖಾತೆ ಹೊಂದಿರುವ ಸಚಿವ ಮಾಧುಸ್ವಾಮಿ ಅವರಿಗೆ ಹೆಚ್ಚುವರಿಯಾಗಿ ಕೃಷಿ ಖಾತೆ ಸಿಗುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್- ಅರಣ್ಯ ಖಾತೆ, ಆರ್.ಅಶೋಕ್- ರೇಷ್ಮೆ ಖಾತೆ, ಸಹಕಾರ ಖಾತೆ, ವಿ.ಸೋಮಣ್ಣ-ನಗರಾಭಿವೃದ್ಧಿ ಖಾತೆ, ಕೆಎಸ್ ಈಶ್ವರಪ್ಪ- ಪೌರಾಡಳಿತ ಖಾತೆ, ಬಸವರಾಜ ಬೊಮ್ಮಾಯಿ- ಜಲಸಂಪನ್ಮೂಲ ಖಾತೆ, ಶ್ರೀರಾಮುಲು- ಕಾರ್ಮಿಕ ಖಾತೆ, ಲಕ್ಷ್ಮಣ ಸವದಿ- ಸಕ್ಕರೆ ಖಾತೆ, ಸುರೇಶ್ ಕುಮಾರ್- ಕೌಶಲ್ಯಾಭಿವೃದ್ಧಿ ಖಾತೆ ಹಾಗೂ ಪ್ರಭು ಚವ್ಹಾಣ್-ಯುವಜನ ಸೇವೆ ಮತ್ತು ಕ್ರೀಡೆ ಖಾತೆ ಲಭಿಸುವ ಸಾಧ್ಯತೆಗಳಿವೆ.

  • ಬೆಳಗ್ಗೆ 6 ಗಂಟೆವರೆಗೆ ಇದ್ದ ನನ್ನ ಹೆಸ್ರನ್ನು 6.10ಕ್ಕೆ ಕೈ ಬಿಟ್ರು: ಉಮೇಶ್ ಕತ್ತಿ

    ಬೆಳಗ್ಗೆ 6 ಗಂಟೆವರೆಗೆ ಇದ್ದ ನನ್ನ ಹೆಸ್ರನ್ನು 6.10ಕ್ಕೆ ಕೈ ಬಿಟ್ರು: ಉಮೇಶ್ ಕತ್ತಿ

    ಬೆಂಗಳೂರು: ಇಂದು ಬೆಳಗ್ಗೆ 6 ಗಂಟೆಯವರೆಗೂ ನನ್ನ ಹೆಸರು ಇತ್ತು. ಆದರೆ 6.10ಕ್ಕೆ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಶಾಸಕ ಉಮೇಶ್ ಕತ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಶಾಸಕನಾಗಿ 35 ವರ್ಷ ಆಯಿತು. ನಾನು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. 1996ಯಿಂದ 1999ವರೆಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. 2008-2013ವರೆಗೂ ಕೂಡ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಕೂಡ ಮಂತ್ರಿ ಆಗಬೇಕೆಂಬ ಆಸೆ ಇತ್ತು. ಆದರೆ ಅರ್ಧ ಸಂಪುಟ ವಿಸ್ತರಣೆ ಮಾಡಿದ್ದಾರೆ, ಈಗ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ಇನ್ನು ಅರ್ಧ ಸಂಪುಟ ವಿಸ್ತರಣೆ ಮಾಡಬೇಕಿದೆ. ಕಾದು ನೋಡಬೇಕಿದೆ. ನಾನು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

    8 ಸಲ ಜನ ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ಹಿರಿಯನಾಗಿದ್ದೇನೆ. ನಾನು ಚಿಕ್ಕ ವಯಸ್ಸಿನಲ್ಲೇ ಶಾಸಕನಾಗಿದ್ದೆ. 6-8 ಬಾರಿ ಶಾಸಕನಾಗಿ, 13 ವರ್ಷಗಳ ಕಾಲ ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ನನಗೆ ಆಸೆ ಇದೆ, ವಯಸ್ಸಿದೆ. ಕೆಲಸ ಮಾಡುವ ಹಂಬಲ ಇದೆ. ಬೆಳಗಾವಿಯಲ್ಲಿ ಅತಿವೃಷ್ಟಿಯಿಂದ ತೊಂದರೆಯಾಗುತ್ತಿದ್ದು, ಅದನ್ನು ನಿಭಾಯಿಸಬೇಕು ಎಂಬ ಮನಸ್ಸಿದೆ. ಸಿಎಂ ನನಗೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂಬ ಭರವಸೆ ಇದೆ ಎಂದರು.

    ಬೆಳಗ್ಗೆ 6 ಗಂಟೆಯವರೆಗೂ ನನ್ನ ಹೆಸರು ಇತ್ತು. ಆದರೆ 6.10ಕ್ಕೆ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ನಾನು ಹಾಗೂ ತಿಪ್ಪರೆಡ್ಡಿ ಹಿರಿಯರು. ಸಾಕಷ್ಟು ಜನರು ಆಶೀರ್ವಾದ ಮಾಡಿದ್ದಾರೆ. ಜನರ ಸೇವೆ ಮಾಡುವ ಇಚ್ಛೆ ನಮಗಿದೆ. ಅಂತಹ ಸಂದರ್ಭದಲ್ಲಿ ಹಿರಿಯರನ್ನು ಕೈಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಯುವಕರನ್ನು ಬೆಳೆಸಬೇಕು ಎಂದು ಬಯಸುತ್ತಿದ್ದಾರೆ. ಇನ್ನು ಸಂಪುಟ ವಿಸ್ತರಣೆ ಆಗಬೇಕಿದೆ. ಕಾದು ನೋಡಬೇಕು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.

  • ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ಹೊರಟ ಸಿಎಂ ಬಿಎಸ್‍ವೈ

    ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ಹೊರಟ ಸಿಎಂ ಬಿಎಸ್‍ವೈ

    ಬೆಂಗಳೂರು: ಮೈತ್ರಿ ಸರ್ಕಾರ ಉರುಳಿದ ಬಳಿಕ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬಿಎಸ್ ಯಡಿಯೂರಪ್ಪ ಅವರು ಸಂಪುಟ ರಚನೆ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯೊಂದಿಗೆ ಹೈಕಮಾಂಡ್ ಭೇಟಿಗೆ ತೆರಳಿರುವ ಬಿಎಸ್‍ವೈ ಅವರು ಕೇಂದ್ರದ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ.

    ಉತ್ತರ ಕರ್ನಾಟಕದ ಭಾಗದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದ ಬಿಎಸ್‍ವೈ ಅವರು ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹದಲ್ಲಿ ಸಿಲುಕಿರುವ ಗ್ರಾಮಗಳಲ್ಲಿನ ಜನರ ರಕ್ಷಣೆಗೆ ಹಾಗೂ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದರು. ಆ ಬಳಿಕ ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿದರು.

    ಸಂಪುಟ ವಿಸ್ತರಣೆಯ ಕುರಿತು ಪೂರ್ವ ನಿಗಧಿಯಂತೆ ಇಂದು ಸಂಜೆ ವೇಳೆಗೆ ಬಿಎಸ್‍ವೈ ಅವರು ತಮ್ಮ ನಿವಾಸದಿಂದ ದೆಹಲಿಗೆ ತೆರಳಲು ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತ. ಸ್ವಾತಂತ್ರ್ಯ ನಂತರ ಪ್ರಧಾನಿ ಮೋದಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇದನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಗತ ಮಾಡುತ್ತಾರೆ. ‘ಏಕ್ ದೇಶ್ ಮೇ ದೋ ಪ್ರಧಾನ್, ದೋ ವಿಧಾನ್, ದೋ ನಿಶಾನ್ ನಹಿ ಚಲೇಗಾ, ನಹಿ ಚಲೇಗಾ’ ಎಂದು ಹೋರಾಟ ಮಾಡಿ ಶ್ಯಾಮ್ ಪ್ರಸಾದ್ ಮುಖರ್ಜಿ ಹುತಾತ್ಮರಾದರು. ಇಂದು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಇದಕ್ಕಾಗಿ ಮತ್ತೊಮ್ಮೆ ನಾನು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.

    ಕೇಂದ್ರ ನಾಯಕರನ್ನು ಭೇಟಿ ಮಾಡಲಿರುವ ಬಿಎಸ್ ಯಡಿಯೂರಪ್ಪ ಅವರು, ಸಚಿವ ಸಂಪುಟ ರಚನೆ ಮಾತ್ರವಲ್ಲದೇ, ರಾಜ್ಯದ ಅಭಿವೃದ್ಧಿ ಹಾಗೂ ವಿವಿಧ ಯೋಜನೆಗಳಲ್ಲಿ ರಾಜ್ಯಕ್ಕೆ ಸಿಗಬೇಕಾದ ಬಾಕಿ ಅನುದಾನ ಸಂಬಂಧ ಕೇಂದ್ರದ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಸಿಎಂ ಬಿಎಸ್‍ವೈ ದೆಹಲಿಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷೇತರ ಶಾಸಕ ನಾಗೇಶ್ ಅವರು ಭೇಟಿ ಮಾಡಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಬಿಎಸ್‍ವೈ ದೆಹಲಿಗೆ ಕೊಂಡ್ಯೊಯುತ್ತಿರುವ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ನಾಗೇಶ್ ಅವರ ಹೆಸರು ಕೂಡ ಸೇರಿದೆ ಎಂಬ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿಯೇ ಬಿಎಸ್‍ವೈ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

  • ಸಚಿವ ಸಂಪುಟ ವಿಸ್ತರಣೆ – ಮೈತ್ರಿ ಸರ್ಕಾರ ಉಳಿಸಿಕೊಳ್ಳೋ ಪ್ರಯತ್ನದ ಒಂದು ಭಾಗ: ಸದಾನಂದ ಗೌಡ

    ಸಚಿವ ಸಂಪುಟ ವಿಸ್ತರಣೆ – ಮೈತ್ರಿ ಸರ್ಕಾರ ಉಳಿಸಿಕೊಳ್ಳೋ ಪ್ರಯತ್ನದ ಒಂದು ಭಾಗ: ಸದಾನಂದ ಗೌಡ

    ಬೆಂಗಳೂರು: ರಾಜ್ಯ ಸರ್ಕಾರ ಜನರ ಸೇವೆ ಮಾಡಲು ಯಾವುದೇ ಕ್ರಮಕೈಗೊಳ್ಳದೆ, ಸಚಿವ ಸಂಪುಟ ವಿಸ್ತರಣೆ ಹೆಸರಿನಲ್ಲಿ ಸರ್ಕಾರ ಉಳಿಸಿಕೊಳ್ಳಲು ಆಡುತ್ತಿರುವ ನಾಟಕದ ಒಂದು ಭಾಗ ಅಷ್ಟೇ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

    ಕೇಂದ್ರ ಸಚಿವರಾದ ಬಳಿಕ ಆದಿಚುಂಚನ ಗಿರಿ ಮಠಕ್ಕೆ ಇಂದು ಮೊದಲ ಬಾರಿಗೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯಸರ್ಕಾರ ಅಭಿವೃದ್ಧಿ ಮಾಡಬೇಕು. ಒಂದು ಒಳ್ಳೆಯ ಸಂಪುಟ ರಚನೆ ಮಾಡಬೇಕು. ಆದರೆ ಮೈತ್ರಿ ಪಕ್ಷಗಳು ಸಂಪುಟ ವಿಸ್ತರಣೆ ಮಾಡುತ್ತಿಲ್ಲ. ಬದಲಾಗಿ ಸಮ್ಮಿಶ್ರ ಸರ್ಕಾರ ಉಳಿವಿಗೆ ಅವರು ಆಡುತ್ತಿರುವ ನಾಟಕದ ಒಂದು ಭಾಗವಷ್ಟೇ ಎಂದರು.

    ಸಂಪುಟ ವಿಸ್ತರಣೆ ಮಾಡುವ ಆರಂಭದಿಂದ ನಿನ್ನೆವರೆಗೂ ಫಾರೂಕ್, ವಿಶ್ವನಾಥ್ ಅವರ ಹೆಸರು ಕೇಳಿ ಬರುತ್ತಿತ್ತು. ಇಂದು ಅವರೇ ಪಕ್ಷೇತರಾಗಿದ್ದಾರೆ. ಸರ್ಕಾರ ಭದ್ರ ಮಾಡಿಕೊಳ್ಳಬೇಕು ಅನ್ನೋ ಉದ್ದೇಶದಿಂದ ಇಬ್ಬರನ್ನು ಮಂತ್ರಿ ಮಾಡಿದ್ದಾರೆ. ಈಗಾಗಲೇ ಅವರಿಗೆ ಮಂತ್ರಿ ಸ್ಥಾನ ಕೊಟ್ಟು ಕೆಳಗಿಳಿಸಿದ್ದಾರೆ. ಮತ್ತೆ ಈಗ ಮಂತ್ರಿ ಮಾಡುತ್ತಿದ್ದಾರೆ. ಆ ಮೂಲಕ ಬೆಂಬಲ ವಾಪಸ್ ಪಡೆಯದಂತೆ ಮಾಡುತ್ತಿದ್ದು, ಇದು ಹೆಚ್ಚು ದಿನ ನಡೆಯುವುದಿಲ್ಲ ಎಂದರು.

    ಇದೇ ವೇಳೆ ಆಪರೇಷನ್ ಕಮಲ ನಡೆಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಸಚಿವರು, ಈ ಕುರಿತಂತೆ ಬಿಜೆಪಿ ಯಾರನ್ನೂ ಸಂಪರ್ಕಿಸಿಲ್ಲ. ಮೈತ್ರಿ ಸರ್ಕಾರವನ್ನು ಅವರೇ ಉಳಿಸಿಕೊಳ್ಳೋಕೆ ಈ ರೀತಿಯ ಆಡುತ್ತಿದ್ದಾರೆ. ಸಚಿವ ಸ್ಥಾನ ನೀಡಿ ಬೇರೆ ಪಕ್ಷಕ್ಕೆ ಹೋಗದೇ ಇರುವಂತೆ ಮಾಡಲು ಈ ತಂತ್ರಷ್ಟೇ. ಆ ಮೂಲಕ ಪಕ್ಷಾಂತರ ನಿಷೇಧ ಕಾರ್ಯವನ್ನು ಮೈತ್ರಿ ಪಕ್ಷಗಳ ನಡುವೆಯೇ ಮಾಡಿಕೊಂಡಿದ್ದಾರೆ ಎಂದರು.

    ಮಠದ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿ, ಮಠದೊಂದಿಗೆ ನಾನು ದೀರ್ಘ ಸಂಪರ್ಕವನ್ನು ಹೊಂದಿದ್ದು, ಹಿರಿಯ ಗುರುಗಳು ನನಗೆ ಮೊದಲು ಮಾರ್ಗದರ್ಶನ ನೀಡುತ್ತಿದ್ದರು. ಈಗ ಕಿರಿಯ ಶ್ರೀಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೂ ಶ್ರೀಗಳು ಆಗಮಿಸಿದ್ದರು. ಅವರ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಎಂದರು.

  • ರಾಹುಲ್ ಮಾತಿಗೆ ಬೆಲೆ ಇಲ್ಲ, ಇದ್ದಿದ್ದರೆ ಮಂತ್ರಿಯಾಗ್ತಿದ್ದೆ- ಶಾಸಕ ಸುಧಾಕರ್

    ರಾಹುಲ್ ಮಾತಿಗೆ ಬೆಲೆ ಇಲ್ಲ, ಇದ್ದಿದ್ದರೆ ಮಂತ್ರಿಯಾಗ್ತಿದ್ದೆ- ಶಾಸಕ ಸುಧಾಕರ್

    – ಈಗ ಎಲೆಕ್ಷನ್ ನಡೆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಮಾತಿಗೆ ಇಲ್ಲಿ ಬೆಲೆ ಇಲ್ಲ. ರಾಹುಲ್ ಗಾಂಧಿಗೆ ಬೆಲೆ ಇದ್ದಿದ್ದರೆ ನನಗೆ ಸಚಿವ ಸ್ಥಾನ ಸಿಗಬೇಕಾಗಿತ್ತು ಎಂದು ಶಾಸಕ ಡಾ. ಸುಧಾಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವುದಾಗಿ ಈ ಹಿಂದೆ ರಾಹುಲ್ ಗಾಂಧಿ ಅವರೇ ಭರವಸೆ ನೀಡಿದ್ದರು. ಆದರೆ ಇದೀಗ ಅದು ನೆರವೇರಲಿಲ್ಲ. ಪಕ್ಷದಲ್ಲಿ ರಾಹುಲ್ ಗಾಂಧಿ ಅವರ ಮಾತಿಗೆ ಬೆಲೆ ಇಲ್ಲ. ಬೆಲೆ ಇದ್ದಿದ್ದರೆ ಈ ಹಿಂದೆ ಅವರು ಭರವಸೆ ನೀಡಿದಾಗಲೇ ನನಗೆ ಸಚಿವ ಸ್ಥಾನ ಕೊಡಿಸುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ನನ್ನ ಗಮನಕ್ಕೆ ಬಂದಿಲ್ಲ. ಇನ್ನು ಮುಂದೆ ನಾನು ಯಾವ ಮುಖಂಡರನ್ನೂ ಭೇಟಿ ಮಾಡುವುದಿಲ್ಲ. ಅದರ ಅಗತ್ಯವೂ ನನಗಿಲ್ಲ. ಈ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಹಿಂಪಡೆದಿದ್ದರು. ಮತ್ತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡುತ್ತಾರೆ ಎಂಬ ಕುರಿತು ಮಾಹಿತಿ ಇಲ್ಲ. ಆದರೆ, ನಾನು ಆ ಹುದ್ದೆಗೆ ಅರ್ಹನಾಗಿದ್ದೇನೆ ಎಂದು ಸುಧಾಕರ್ ತಿಳಿಸಿದರು.

    ಇದೇ ವೇಳೆ ಮಧ್ಯಂತರ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಧ್ಯಂತರ ಚುನಾವಣೆಗೆ ಯಾರು ಸಿದ್ಧರಿದ್ದಾರೆ. ಲೋಕಸಭೆಯಲ್ಲಿ ಹೀನಾಯವಾಗಿ ಸೋತ ಮೇಲೂ ಗೆಲ್ಲುವ ಭರವಸೆ ಎಳ್ಳಷ್ಟೂ ಇಲ್ಲ. ಕೋಳಿವಾಡ ಹಿರಿಯರು ಅದ್ಯಾವ ನೆಲೆಗಟ್ಟಿನಲ್ಲಿ ಈ ಮಾತು ಹೇಳಿದ್ದಾರೆಯೋ ಗೊತ್ತಿಲ್ಲ ಎಂದರು.

    ಕಾಂಗ್ರೆಸ್ ಪಕ್ಷ ಸದ್ಯದ ಪರಿಸ್ಥಿತಿಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಹೋಗೋದೆಲ್ಲ ಸಾಧ್ಯವೇ ಇಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

  • ಕಾಂಗ್ರೆಸ್ ಸೇರುತ್ತೇನೆ- ಪಕ್ಷೇತರ ಶಾಸಕ ಆರ್.ಶಂಕರ್

    ಕಾಂಗ್ರೆಸ್ ಸೇರುತ್ತೇನೆ- ಪಕ್ಷೇತರ ಶಾಸಕ ಆರ್.ಶಂಕರ್

    ಬೆಂಗಳೂರು: ಮೈತ್ರಿ ಸರ್ಕಾರದ ನೂತನ ಸಚಿವ ಸಂಪುಟದ ಸದಸ್ಯರಾಗಿ ಇಂದು ರಾಣಿಬೆನ್ನೂರಿನ ಶಾಸಕ ಆರ್.ಶಂಕರ್ ಅವರು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಈ ಕುರಿತು ಶಂಕರ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ಈ ಹಿಂದೆ ಕೂಡ ಹೇಳಿದ್ದೆ ಸಚಿವ ಸ್ಥಾನ ಎಂಬುದು ಒಂದು ಜವಾಬ್ದಾರಿಯಾಗಿದೆ. ಅದನ್ನು ತಾಲೂಕಿನ ಜನರಿಗೆ ಮತ್ತು ಈ ನಾಡಿಗೆ ನನ್ನ ಇಲಾಖೆ ವತಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವುದು ನನ್ನ ಬಯಕೆಯಾಗಿದೆ. ನನ್ನ ಜೊತೆ ಕಾಂಗ್ರೆಸ್ ನವರು ಮಾತಾಡಿಯೇ ನನಗೆ ಸಚಿವ ಸ್ಥಾನ ಕೊಟ್ಟಿರುವುದು. ನಾನು ಕಾಂಗ್ರೆಸ್ ಸೇರುತ್ತೇನೆ ಎಂದರು.

    ಬ್ಲಾಕ್‍ಮೇಲ್ ತಂತ್ರವನ್ನು ಉಪಯೋಗಿಸಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ ಎಂದಿದ್ದ ಕೋಳಿವಾಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಕೋಳಿವಾಡ ಅವರು ಸ್ಪೀಕರ್ ಆಗಿದ್ದಾಗ ಮಾಡಿರುವ ಕಿತಾಪತಿಗಳು ಜನರಿಗೆ ಗೊತ್ತಿದೆ. ವಿಶೇಷವಾಗಿ ನಮ್ಮ ತಾಲೂಕಿನ ಜನತೆಗೆ ಅವರ ಬಗ್ಗೆ ತಿಳಿದಿದೆ. ಬ್ಲಾಕ್‍ಮೇಲ್ ತಂತ್ರ ನಾನು ಮಾಡಿಲ್ಲ. ಕೆ.ಬಿ ಕೋಳಿವಾಡ ಅವರು ದೆಹಲಿಗೆ ಹೋಗಿ ಲಾಭಿ ಮಾಡಿರುವುದು, ಶಾಸಕರನ್ನ ಎತ್ತಿಕಟ್ಟಿಕೊಂಡು ಮಾಡಿರುವ ಉದಾಹರಣೆಗಳು ಇವೆ. ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದು, ನನ್ನ ಹಕ್ಕನ್ನು ನಾನು ಪ್ರತಿಪಾದನೆ ಮಾಡಿದ್ದೇನೆ. ನಾನು ಯಾವ ಬ್ಲಾಕ್‍ಮೇಲ್ ತಂತ್ರ ಅಳವಡಿಸಿ ಸಚಿವ ಸ್ಥಾನ ಪಡೆದಿಲ್ಲ. ನನ್ನ ಹಕ್ಕನ್ನು ನಾನು ಕೇಳಿದ್ದೇನೆ ಎಂದು ಕೋಳಿವಾಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

    ನಾನು ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೇನೆ. ನಾನು ಕಳೆದ ಬಾರಿ ಸಚಿವ ಸ್ಥಾನ ಕಳೆದು ಕೊಳ್ಳುವುದಕ್ಕೆ ಯಾವ ತಪ್ಪು ಮಾಡಿಲ್ಲ. ಕೆಲವು ಗೊಂದಲಗಳು ಆಗಿರಬಹುದು ಇಲ್ಲ ಅಂತಲ್ಲ. ಹಾಗಂತ ನಾನು ಸ್ಥಾನ ಕಳೆದುಕೊಂಡ ಮೇಲೆ ಬೇರೆ ಪಕ್ಷಕ್ಕೆ ಹೋಗುತ್ತೇನೆ ಅನ್ನೋದು ಸುಳ್ಳು. ಕಾಂಗ್ರೆಸ್ ಅಸಮಾಧಾನಿತ ಶಾಸಕರು ಅಂದುಕೊಂಡಂತೆ ಇರಲ್ಲ ನಿಯತ್ತಾಗಿ ಇರುತ್ತೇನೆ. ನನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದೇನೆ. ಯಾವ ಬ್ಲಾಕ್‍ಮೇಲ್ ಮಾಡಿಲ್ಲ. ಈಗ ಸರ್ಕಾರಕ್ಕೆ ನನ್ನ ಬೆಂಬಲ ಬೇಕಾಗಿದೆ. ಹೀಗಾಗಿ ನಾನು ಸರ್ಕಾರದ ಜೊತೆ ಕೆಲಸ ಮಾಡುತ್ತೇನೆ. ಖಾಲಿ ಇರುವ ಖಾತೆ ಕೊಡುತ್ತೀನಿ ಎಂದು ಹೇಳಿದ್ದಾರೆ ನೋಡೋಣ ಎಂದು ಆರ್.ಶಂಕರ್ ಹೇಳಿದ್ದಾರೆ.

  • 2020ರ ಮೊದ್ಲ 3 ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ: ಕೋಳಿವಾಡ

    2020ರ ಮೊದ್ಲ 3 ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ: ಕೋಳಿವಾಡ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟು. 2020ರ ಮೊದಲ ಮೂರು ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ. ಖಂಡಿತವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಮಾಜಿ ಸ್ಪೀಕರ್ ಕೋಳಿವಾಡ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಕೋಳಿವಾಡ, ಕಳೆದ 40 ವರ್ಷದಿಂದ ಕ್ಷೇತ್ರದಲ್ಲಿ ಪಕ್ಷ ಕಟ್ಟಿದ್ದು ನಾನು. ಈಗ ಬಂದವರಿಗೆ ಮಣೆ ಹಾಕಿದರೆ, ನನ್ನ ಅಸ್ತಿತ್ವದ ಪ್ರಶ್ನೆ ಶುರುವಾಗುತ್ತೆ. ಪಕ್ಷವನ್ನು ಉಳಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡಿ ಅನಿವಾರ್ಯವಾಗಿ ಸ್ವತಂತ್ರ ಅಭ್ಯರ್ಥಿಗಳನ್ನು ಮಂತ್ರಿ ಮಾಡಿಕೊಳ್ಳೋಣ ಎಂದು ನಿರ್ಧರಿಸಿದೆ. ಹೀಗಾಗಿ ಇಲ್ಲಿನ ನಾಯಕರು ಒಪ್ಪಿ ನಾಳೆ ಸಚಿವ ಸಂಪುಟ ವಿಸ್ತರಣೆ ಮಾಡುವ ನಿರ್ಧಾರ ಮಾಡಿದ್ದಾರೆ. ಆದರೆ ಸಮ್ಮಿಶ್ರ ಸರ್ಕಾರಕ್ಕೆ ನನ್ನ ಒಲವು ಇರಲಿಲ್ಲ ಎಂದು ಹೇಳಿದ್ದಾರೆ.

    ಹಿಂದೆ ನಾನು ಧರಂಸಿಂಗ್ ಅವಧಿಯಲ್ಲಿ ಹೇಳಿದ್ದೆ. ಈಗಲೂ ನಾನು ಇದನ್ನೇ ಹೇಳುತ್ತೇನೆ. ಜೆಡಿಎಸ್ ಜೊತೆ ಮೈತ್ರಿ ಸರಿಯಲ್ಲ. ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿರಬೇಕಿತ್ತು. ಆಗ ನಮ್ಮ ಪಕ್ಷ ಮತ್ತಷ್ಟು ಬೆಳೆಯುತ್ತಿತ್ತು. ಜೆಡಿಎಸ್ ಜೊತೆ ಮೈತ್ರಿ ನಮಗೆ ಹೊಂದಿಕೆಯಾಗಲ್ಲ. ವಿರೋಧ ಪಕ್ಷದಲ್ಲಿ ಕುಳಿತಿದ್ದರೂ ನಮ್ಮ ಪಕ್ಷ ಇನ್ನೂ ಚೆನ್ನಾಗಿ ಬೆಳೆಯುತ್ತಿತ್ತು. ಮೈತ್ರಿಯಿಂದಾಗಿಯೇ ನಾವು ಲೋಕ ಚುನಾವಣೆಯಲ್ಲಿ ಸೋಲಬೇಕಾಯಿತು. ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದು ಡೌಟು ಎಂದಿದ್ದಾರೆ.

    2020ರ ಮೊದಲ ಮೂರು ತಿಂಗಳಲ್ಲಿ ಮೈತ್ರಿ ಸರ್ಕಾರ ಉರುಳಲಿದೆ. ಖಂಡಿತವಾಗಿ ಮಧ್ಯಂತರ ಚುನಾವಣೆ ಎದುರಾಗಲಿದೆ. ಸಮ್ಮಿಶ್ರ ಸರ್ಕಾರದ ಕಲ್ಪನೆಯೇ ಬೇಡ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಸಾಕಷ್ಟು ಹಿನ್ನಡೆಯಾಗಿದೆ. ಹೈಕಮಾಂಡ್ ಸೂಚನೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಈಗಲೂ ಸರ್ಕಾರ ಉಳಿಸಿಕೊಳ್ಳುವ ಭಯವಿದೆ. ಹೀಗಾಗಿಯೇ ಮೈತ್ರಿ ಮುಂದುವರಿಸಿದ್ದಾರೆ. ಮೈತ್ರಿಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಕಿಡಿಕಾರಿದ್ದಾರೆ.

    ಮಧ್ಯಂತರ ಚುನಾವಣೆಗೆ ಸಿದ್ದರಾಮಯ್ಯ ರೆಡಿಯಿದ್ದಾರೆ. ನಾಳೆ(ಶುಕ್ರವಾರ) ಚುನಾವಣೆ ನಡೆದರೆ ನಾನು ಫೈಟಿಗೆ ರೆಡಿ. ಪಕ್ಷೇತರ ಶಾಸಕ ಶಂಕರ್ ವಿರುದ್ಧ ಕ್ಷೇತ್ರದಲ್ಲಿ ಅಸಮಾಧಾನವಿದೆ. ಅವರ ಕಡೆಯವರೆಲ್ಲರೂ ನನ್ನ ಜೊತೆ ಬಂದಿದ್ದಾರೆ. ಹೈಕಮಾಂಡ್ ಜೊತೆಯೂ ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ. ಆದರೆ ಕಾಲ ಬರಲಿ ಎಂದು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಹೋಗಬೇಕೋ ಬೇಡವೋ ಎಂದು ಹೈಕಮಾಂಡ್ ಡಿಸೈಡ್ ಮಾಡುತ್ತದೆ ಎಂದರು.

    ಸಿದ್ದರಾಮಯ್ಯ ನಮ್ಮ ಸಮಕಾಲೀನರು. ಸಿದ್ದರಾಮಯ್ಯ ಜೊತೆಯೂ ಮಾತನಾಡಿದ್ದೇನೆ. ಹಿಂದೆ ಸಚಿವ ಸ್ಥಾನದಿಂದ ಶಂಕರ್ ತೆಗೆದಿದ್ದಕ್ಕೆ ಸಿದ್ದರಾಮಯ್ಯ ಕಾರಣರಾಗಿದ್ದರು. ಆದರೆ ಈಗ ಅವರೇ ಶಂಕರ್ ಅವರನ್ನ ತೆಗೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ವೆರಿ ಗುಡ್ ಲೀಡರ್ ಎಂದು ಮಾಜಿ ಸಿಎಂ ಬಗ್ಗೆ ಕೋಳಿವಾಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್.ಶಂಕರ್ ಒಬ್ಬ ಅವಕಾಶ ವಾದಿ. ಅವಕಾಶಕ್ಕಾಗಿ ಯಾವಾಗ ಬೇಕಾದರು ಬದಲಾಗುತ್ತಾರೆ. ಆರ್.ಶಂಕರ್ ವಿರುದ್ಧ ಕೋಳಿವಾಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯ ಕೆಪೇಬಲ್ ಇದಾರೆ ಇಲ್ಲ ಅಂತ ಹೇಳಲಾರೆ. ಕೆಲವೊಂದು ಬಾರಿ ಸತ್ಯ ಸಂಗತಿಯನ್ನು ಹೇಳಲೇಬೇಕಾಗುತ್ತದೆ. ಮಾನಸಿಕವಾಗಿ ಬಹುತೇಕ ನಾಯಕರು ಮಧ್ಯಂತರ ಚುನಾವಣೆ ಎದುರಿಸೋಕೆ ಸಿದ್ಧರಾಗಿದ್ದರೆ. ಬಹಳಷ್ಟು ಕಾಂಗ್ರೆಸಿಗರಿಗೆ ಮಧ್ಯಂತರ ಚುನಾವಣೆಯ ಬಗ್ಗೆಯೇ ಹೆಚ್ಚಿನ ಒಲವಿದೆ. ಬಿಜೆಪಿ ಸರ್ಕಾರ ರಚನೆ ಮಾಡಿದರೆ ನಮಗೆ ಬಹಳ ಒಳ್ಳೆಯದು. ವಿರೋಧ ಪಕ್ಷದಲ್ಲಿ ಕುಳಿತೇ ಜನರ ಮುಂದೆ ಹೋಗುತ್ತೇವೆ.