ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತು ಸನ್ನಿವೇಶ, ಸಂದರ್ಭಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ. ದೆಹಲಿ ವಿಧಾನಸಭೆ ಚುನಾವಣೆ ಬಳಿಕವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆಯಾ ಎಂಬ ಸುದ್ದಿಗಳು ಹರಿದಾಡುತ್ತಿರುವ ಮಧ್ಯೆಯೇ ಅರ್ಹ ಶಾಸಕರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ವಿದೇಶ ಪ್ರವಾಸಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತಾಡಿದ ಮುಖ್ಯಮಂತ್ರಿಗಳು, ನಾಳೆ ಅಮಿತ್ ಶಾ ಭೇಟಿಗೆ ಸಮಯ ಕೇಳಿದ್ದೇನೆ. ಅಮಿತ್ ಶಾ ಒಪ್ಪಿದರೆ ನಾಳೆಯ ಕಾರ್ಯಕ್ರಮ ರದ್ದು ಮಾಡಿ ದೆಹಲಿಗೆ ಹೋಗಿ ಬರುತ್ತೇನೆ. ಅಮಿತ್ ಶಾ ಅವರ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆಗೆ ದಿನಾಂಕ ಪಡೆದು ಬರುತ್ತೇನೆ ಅಂದರು.
ಸ್ವಿಟ್ಜರ್ಲೆಂಡ್‍ನ ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಭೆಗೆ ಪ್ರಧಾನಿಯವರ ಜೊತೆ ನಾನೂ ತೆರಳಲು ನಿರ್ಧರಿಸಿದ್ದೇನೆ. ಆದರೆ ದಾವೋಸ್ ಗೆ ಹೋಗುವ ಮುನ್ನ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ವಿದೇಶ ಪ್ರವಾಸ, ದೆಹಲಿ ಚುನಾವಣೆಗಳಿಗೂ ಸಂಪುಟ ವಿಸ್ತರಣೆಗೂ ಸಂಬಂಧ ಇಲ್ಲ. ಈ ತಿಂಗಳಲ್ಲೇ ಸಂಪುಟ ವಿಸ್ತರಣೆ ಮಾಡುತ್ತೇವೆ. ಮಾತು ಕೊಟ್ಟಂತೆ ಎಲ್ಲ ಶಾಸಕರಿಗೂ ಸಚಿವರಾಗಿ ಮಾಡ್ತೇವೆ. ಶಾಸಕರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ಇದೇ ವೇಳೆ ಅರ್ಹರಿಗೆ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟರು.
ಬೆಂಗಳೂರು: ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಅಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಅರ್ಹ ಶಾಸಕರ ಟೀಂ ಅಸಮಾಧಾನಗೊಂಡಿದೆ. ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿಗೆ ಬಂದರೆ, ಇಲ್ಲೂ ತಾವು ಅತಂತ್ರರಾಗಿ ಬಿಟ್ಟೆವಾ ಅನ್ನೋ ಆತಂಕದಲ್ಲಿ ಅರ್ಹರು ಇದ್ದಾರೆ. ಗೆದ್ದ ಕೂಡಲೇ ಮಂತ್ರಿ ಮಾಡ್ತೇವೆ ಅಂತ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ ಉಪಚುನಾವಣೆ ಫಲಿತಾಂಶ ಬಂದು ಒಂದು ತಿಂಗಳ ಮೇಲಾದರೂ ತಾವು ಶಾಸಕರಾಗಿಯೇ ಇದ್ದೇವೆ. ನಮ್ಮೆಲ್ಲರ ತ್ಯಾಗ, ಸ್ವಾಭಿಮಾನಗಳನ್ನೇ ಕೆಣಕುವಂಥ, ಅಣಕಿಸುವಂಥ ಧೋರಣೆಯನ್ನು ಬಿಜೆಪಿ ಹೈಕಮಾಂಡ್ ತೋರಿದೆ ಎಂಬ ಭಾವನೆ ಅರ್ಹರಲ್ಲಿ ಬಲವಾಗುತ್ತಿದೆ. ಸಂಪುಟ ವಿಸ್ತರಣೆಗೆ ಅಲಕ್ಷ್ಯ ತೋರುತ್ತಿರುವುದಕ್ಕೆ ಅರ್ಹ ಶಾಸಕರಲ್ಲಿ ಸಾಕಷ್ಟು ಸಿಟ್ಟು, ಬೇಸರ ಮಡುಗಟ್ಟಿದ್ದು, ಹೈಕಮಾಂಡ್ ವಿರುದ್ಧವೇ ದೊಡ್ಡ ಮಟ್ಟದಲ್ಲಿ ಅಸಮಾಧಾನಗೊಂಡಿದ್ದಾರೆ. ಯಡಿಯೂರಪ್ಪ ಅವರೂ ತಮ್ಮ ಕೈ ಬಿಟ್ಟರಾ ಅನ್ನೋ ತಳಮಳದಲ್ಲಿ ಅರ್ಹರು ಇದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅರ್ಹ ಶಾಸಕರೆಲ್ಲ ಒಟ್ಟು ಸೇರಿ ಈಗಾಗಲೇ ಎರಡು ಸಲ ರಹಸ್ಯ ಸಭೆ ನಡೆಸಿದ್ದಾರೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಈ ಸಭೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಅರ್ಹರು ಸಚಿವರಾಗಲು ಅಂತಿಮ ಕಸರತ್ತು ನಡೆಸಲು ಮುಂದಾಗಿದ್ದಾರೆ. ಬೆಳಗಾವಿ ಸಾಹುಕಾರ್ ಸೂಚನೆಯಂತೆ ಸಭೆಯಲ್ಲಿ ಮೇಜರ್ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಅದು ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪರಿಗೆ ಗಡುವು ಕೊಡುವಂಥ ನಿರ್ಧಾರ ಎಂದು ತಿಳಿದು ಬಂದಿದೆ.
ಹೌದು, ಸಚಿವ ಸಂಪುಟ ವಿಸ್ತರಣೆಗೆ ಡೇಟ್ ಫಿಕ್ಸ್ ಮಾಡಲು ಜನವರಿ 18ರ ಗಡುವನ್ನು ಬಿಜೆಪಿ ಹೈಕಮಾಂಡ್ ಮತ್ತು ಬಿಎಸ್‍ವೈಗೆ ಅರ್ಹರು ಕೊಟ್ಟಿದ್ದಾರೆ ಎನ್ನಲಾಗಿದೆ. ಇದೇ ಜನವರಿ 18 ರಂದು ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸುತ್ತಿದ್ದಾರೆ. ಆವತ್ತೇ ಅಮಿತ್ ಶಾ ಅವರ ಜೊತೆ ಸಂಪುಟ ಮಾತುಕತೆ ಫೈನಲ್ ಮಾಡಿ ಡೇಟ್ ಫಿಕ್ಸ್ ಮಾಡುವಂತೆ ಯಡಿಯೂರಪ್ಪರಿಗೆ ಅರ್ಹರು ಗಡುವು ಕೊಟ್ಟಿದ್ದಾರೆ. ಆ ಮೂಲಕ ಶತಾಯಗತಾಯ ಮತ್ತೊಮ್ಮೆ ಸಂಪುಟ ವಿಸ್ತರಣೆ ಮುಂದೂಡಬಾರದು. ಜನವರಿಯೊಳಗೇ ಸಂಪುಟ ವಿಸ್ತರಣೆ ಮಾಡಿ ಮುಗಿಸಬೇಕು. ಸಂಪುಟ ವಿಸ್ತರಣೆಗೆ ಮತ್ಯಾವುದೇ ನೆಪಗಳನ್ನು ಮುಂದಿಡಬಾರದು ಎಂಬ ನಿಲುವಿಗೆ ಅರ್ಹರು ಬಂದಿದ್ದಾರೆ.
ಒಂದೊಮ್ಮೆ ಮುಂದಿನ ತಿಂಗಳಿಗೆ ಸಂಪುಟ ವಿಸ್ತರಣೆ ಹೋದರೆ ಮುಂದಿನ ನಡೆ ಕುರಿತು ಮತ್ತೊಂದು ಸಭೆ ನಡೆಸಲೂ ನೂತನ ಶಾಸಕರು ನಿರ್ಧರಿಸಿದ್ದಾರೆ. ಆದರೆ ಅದಕ್ಕೂ ಮುನ್ನ ಈಗ ಕೊಟ್ಟಿರುವ ಗಡುವು ಎಷ್ಟರ ಮಟ್ಟಿಗೆ ಈಡೇರಲಿದೆ ನೋಡೋಣ ಎಂದು 18 ರವರೆಗೂ ಕಾದು ನೋಡಲು ಅರ್ಹರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಪುಟ ಕಸರತ್ತು ನಡೆಯದ ಹಿನ್ನೆಲೆಯಲ್ಲಿ ಮತ್ತೆ ಅರ್ಹರು, ಸೋತವರೆಲ್ಲ ಒಟ್ಟಾಗಿದ್ದಾರೆ. ಅರ್ಹರು ಕೊಟ್ಟ ಗಡುವಿಗೆ ಬಗ್ಗುತ್ತಾ ಬಿಜೆಪಿ? ಜನವರಿ 18 ರಂದು ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಡ್ತಾರಾ ಅಮಿತ್ ಶಾ? ಈ ತಿಂಗಳೂ ಸಂಪುಟ ವಿಸ್ತರಣೆ ಆಗದಿದ್ದಲ್ಲಿ ಅರ್ಹರ ನಡೆ ಏನಿರಬಹುದು? ಸಂಪುಟ ವಿಸ್ತರಣೆ ಸದ್ಯಕ್ಕೆ ನಡೆಯದಿದ್ದಲ್ಲಿ ಬಿಜೆಪಿ ಹೈಕಮಾಂಡ್ ಜತೆಗೇ ವಿರಸ ಕಟ್ಕೊಳ್ತಾರಾ ಅರ್ಹರು? ಈ ಪ್ರಶ್ನೆಗಳಿಗೆ ಜನವರಿ 18 ರಂದು ಉತ್ತರ ಸಿಗಬಹುದು.
ಬಾಗಲಕೋಟೆ: ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷದ ಭವಿಷ್ಯ ಈಗ ಗೊತ್ತಾಗಲ್ಲ. ಮೊದಲು ಸಂಪುಟ ವಿಸ್ತರಣೆಯಾಗಲಿ, ಆಗ ಬಿಜೆಪಿಯವರ ನಿಜ ಬಣ್ಣ ಬಯಲಾಗುತ್ತೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕರು ಬಿಜೆಪಿಗೆ ಹೋಗಲು ಹಣ ಪಡೆದಿದ್ದಾರೆ. ಚುನಾವಣೆಯಲ್ಲಿ ಹಣ ಪಡೆದು ಈಗ ಆ ಶಾಸಕರು ಗೆದ್ದು ಮಂತ್ರಿ ಆಗುತ್ತಾರೆ. ಇಂತವರು ಮಂತ್ರಿ ಆದರೆ ರಾಜ್ಯ ಬೊಕ್ಕಸ ಉಳಿಯುತ್ತಾ ಅನ್ನೋ ಸಂಶಯ ಮೂಡುತ್ತಿದೆ. ಅಲ್ಲದೇ ಇದನ್ನು ನೋಡಿ ಬಿಜೆಪಿಯ ನಿಷ್ಠಾವಂತ ಶಾಸಕರು ಸುಮ್ಮನಿರುತ್ತಾರಾ? ಅವರವರೆ ಬಡಿದಾಡಿಕೊಂಡು ಅಧಿಕಾರದಿಂದ ನಿರ್ಗಮಿಸುವುದು ನಿಶ್ಚಿತ. ಇದು ತೀವ್ರವಾಗಿ ನಡೆಯುತ್ತದೆ ಎಂದು ಭವಿಷ್ಯ ನುಡಿದರು.
ಮಂಗಳೂರು ಪೂರ್ವ ನಿಯೋಜಿತ ಗಲಭೆಯಲ್ಲಿ ಬಿಜೆಪಿಗರು ಯಾರು ತಪ್ಪಿತಸ್ಥರು ಎಂದು ಕಂಡುಹಿಡಿಯಬೇಕು. ಗಲಭೆ ಹಿಂದೆ ಕಾಂಗ್ರೆಸ್ಸಿಗರು ಇದ್ದಾರೆ ಅನ್ನೋದು ಶುದ್ಧ ಸುಳ್ಳು, ಕಲ್ಲು ತುಂಬಿಕೊಂಡಿದ್ದ ವಾಹನ ಯಾರದ್ದು ಎಂದು ಪತ್ತೆ ಮಾಡಲಿ. ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ಮಾಡಿದವರನ್ನು ಕಂಡು ಹಿಡಿಯಬೇಕು. ಆರೋಪಿಗಳ ಪತ್ತೆ ಮಾಡಿ ಶಿಕ್ಷೆ ಕೊಡಲಿ. ಸಿಐಡಿ ತನಿಖೆ ಸರಿಯಾಗಲ್ಲ, ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಬೆಂಗಳೂರು: ಸಿಎಂ ಯಡಿಯೂರಪ್ಪರಿಗೆ ಈಗ ಅವರ ಆಪ್ತರೇ ತಲೆನೋವು ಆಗಿದ್ದಾರಂತೆ. ಆದರಲ್ಲೂ ಲಿಂಗಾಯತ ಸಮುದಾಯದ ಆಪ್ತ ಶಾಸಕರೇ ಕಿರಿಕಿರಿ ಮಾಡುತ್ತಿದ್ದಾರಂತೆ. ನಮ್ಮವರೇ ನಮಗೆ ಮುಳುವಾಗ್ತಾರೆ ಅಂತಾ ಸಿಎಂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂತ್ರಿಗಿರಿಗೆ ಆಪ್ತರು ಟವೆಲ್ ಹಾಕಿರೋದು ಯಡಿಯೂರಪ್ಪನವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
“ಕಷ್ಟಪಟ್ಟು ಮುಖ್ಯಮಂತ್ರಿ ಆಗಿದ್ದೀನಿ ನಾನು, ನನ್ ಸಿಎಂ ಕುರ್ಚಿಗೆ ನಮ್ಮವರೇ ಮುಳುವಾಗ್ತಾರಾ ಅನ್ನೋ ಭಯ ಇದೆ. ಕೆಲವು ಆಪ್ತರೇ ನನ್ನ ಇಕ್ಕಟ್ಟಿನಲ್ಲಿ ಸಿಲುಕಿಸಿ ಬಿಡ್ತಾರಾ ಅನ್ನೋ ಆತಂಕ ನನಗೆ” ಹೀಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಆಪ್ತ ಬಳಗದ ಬಗ್ಗೆಯೇ ಅಸಮಾಧಾನ ಹೊರ ಹಾಕಿದ್ದಾರಂತೆ. ಅಷ್ಟೇ ಅಲ್ಲ ಕೊಟ್ಟ ಮಾತಿನಂತೆ ಗೆದ್ದವರಿಗೆ ಸಚಿವ ಸ್ಥಾನವನ್ನು ಕೊಡಲೇಬೇಕು, ಕೊಡುತ್ತೇವೆ. ನಮಗೆ ಬೆಂಬಲ ಕೊಟ್ಟು ರಾಜೀನಾಮೆ ಕೊಟ್ಟವರ ಜಾತಿ ಸಮೀಕರಣ ಸಾಧ್ಯ ಇಲ್ಲ. ಆದರೆ ನನ್ನ ಆಪ್ತರು ಎನ್ನಿಸಿಕೊಂಡವರೇ ಸಚಿವ ಸ್ಥಾನ ಬೇಕು ಅಂತಾ ಬೀದಿಯಲ್ಲಿ ನಿಂತರೆ ಹೇಗೆ ಅಂತಾ ಗರಂ ಆಗಿ ಆಪ್ತ ವಲಯದ ಪಡಸಾಲೆಯಲ್ಲೇ ಅಸಮಾಧಾನ ಹೊರಹಾಕಿರೋದು ದೊಡ್ಡ ಚರ್ಚೆಯಾಗುತ್ತಿದೆ.
ಅಷ್ಟಕ್ಕೂ ಯಡಿಯೂರಪ್ಪ ಅಸಮಾಧಾನಕ್ಕೆ ಕಾರಣವಾಗಿದ್ದು ಲಿಂಗಾಯತ ಸಮುದಾಯದ ಆಪ್ತರು. ಈಗಾಗಲೇ ಲಿಂಗಾಯತ ಸಮುದಾಯದ ಸಚಿವರ ಸಂಖ್ಯೆ ಹೆಚ್ಚಿದೆ. ಹೀಗಿದ್ದಾಗಲೂ ಮತ್ತಷ್ಟು ಲಿಂಗಾಯತ ಶಾಸಕರೇ, ಆದರಲ್ಲೂ ಯಡಿಯೂರಪ್ಪ ಆಪ್ತರೇ ಸಚಿವ ಸ್ಥಾನಕ್ಕೆ ಕ್ಯೂ ನಿಂತಿರೋದು ಯಡಿಯೂರಪ್ಪ ಅಸಮಾಧಾನಕ್ಕೆ ಮೂಲ ಕಾರಣ ಅಂತೆ. ಜಾತಿ ಸಮೀಕರಣವನ್ನೇ ಬ್ಯಾಲೆನ್ಸ್ ಮಾಡೋದು ಕಷ್ಟ ಸಾಧ್ಯವಾಗಿದ್ದು, ಹಿಂದುಳಿದ ವರ್ಗ ಜಾತಿಗಳಿಗೆ ನ್ಯಾಯ ಹೇಗೆ ಒದಗಿಸಬೇಕು ಅನ್ನೋದೇ ಯಡಿಯೂರಪ್ಪಗೆ ಮುಂದಿರುವ ದೊಡ್ಡ ಸವಾಲು.
* ಯಡಿಯೂರಪ್ಪ ಅಸಮಾಧಾನಕ್ಕೆ ಕಾರಣಗಳೇನು..? 1. ಈಗಾಗಲೇ ನನ್ನ ಸಂಪುಟದಲ್ಲಿ 7 ಜನರು ಲಿಂಗಾಯತ ಸಚಿವರಿದ್ದಾರೆ. 2. ಮಹೇಶ್ ಕುಮಟಹಳ್ಳಿ, ಬಿ.ಸಿ.ಪಾಟೀಲ್ ಲಿಂಗಾಯತ ಕೋಟಾಕ್ಕೆ ಸೇರಿದರೆ 9ಕ್ಕೆ ಏರುತ್ತೆ. 3. ಹೈಕಮಾಂಡ್ ಒಪ್ಪಿಸಿ ಉಮೇಶ್ ಕತ್ತಿ ಅವರಿಗೆ ಸ್ಥಾನ ಕೊಟ್ಟರೂ ಲಿಂಗಾಯತ ಸಂಖ್ಯೆ 10ಕ್ಕೆ ಏರಿಬಿಡುತ್ತದೆ. 4. ಒಟ್ಟಾರೆಯಾಗಿ ಸರ್ಕಾರದಲ್ಲಿ ನನ್ನನ್ನೂ ಸೇರಿದಂತೆ ಲಿಂಗಾಯತ ಸಂಖ್ಯೆ 11ಕ್ಕೆ ಏರುತ್ತೆ. 5. ಕರ್ನಾಟಕ ಇತಿಹಾಸದಲ್ಲಿ ಒಂದು ಜಾತಿಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಟ ದಾಖಲೆಯಾಗುತ್ತದೆ. 6. ಈ ನಡುವೆ ಇನ್ನೂ ಮೂರು ಜನ ಕ್ಯೂನಲ್ಲಿ ನಿಂತು ನನಗೂ ಬೇಕು ಅಂತಿದ್ದಾರೆ. 7. ಇದನ್ನ ನಾನು ಹೇಗೆ ಬ್ಯಾಲೆನ್ಸ್ ಮಾಡಲಿ, ನಮ್ಮವರೇ ನಮಗೆ ಮುಳುವಾದ್ರೆ ಕಷ್ಟ.
* ಹಾಲಿ ಕ್ಯಾಬಿನೆಟ್ ಜಾತಿ ಸಮೀಕರಣ! 1. ಲಿಂಗಾಯತ ಸಮುದಾಯ ಸಚಿವರು- 7 2. ಒಕ್ಕಲಿಗ ಸಮುದಾಯ ಸಚಿವರು- 3 3. ಎಸ್‍ಸಿ ಸಮುದಾಯ ಸಚಿವರು- 3 4. ಬ್ರಾಹ್ಮಣ ಸಮುದಾಯ ಸಚಿವರು-1 5. ಎಸ್‍ಟಿ ಸಮುದಾಯ ಸಚಿವರು-1 6. ಕುರುಬ ಸಮುದಾಯ ಸಚಿವರು-1 7. ಹಿಂದುಳಿದ ವರ್ಗ ಸಚಿವರು- 1
ಬೆಂಗಳೂರು: ಯಡಿಯೂರಪ್ಪನವರ ಸರ್ಕಾರ ಭದ್ರವಾಯ್ತು, ಮುಂದೇನು? ಗೆದ್ದವರಿಗೆ ಮಂತ್ರಿ ಅಂದಿದ್ದು ಆಯ್ತು, ಆದ್ರೆ ಯಾವಾಗ? ಸದ್ಯ ಬಿಜೆಪಿ ಹೈಕಮಾಂಡ್ ಹತ್ತಿರ ಬಿಎಸ್‍ವೈ ಹೋಗಲ್ಲವಾ? ಈ ಪ್ರಶ್ನೆಗಳು ಬಿಜೆಪಿ ವಲಯದಲ್ಲಿ ಕುತೂಹಲ ಮೂಡಿಸಿದೆ. ಆದರೆ ಈ ಪ್ರಶ್ನೆಗಳಿಗೆ ಉತ್ತರ ಸಿಗುವುದು ಹೊಸ ವರ್ಷದಲ್ಲೇ ಎನ್ನಲಾಗಿದೆ. ಸಂಪುಟ ವಿಸ್ತರಣೆ ಮಾತುಕತೆಗೆ ಹೈಕಮಾಂಡ್ ಇನ್ನೂ ಟೈಂ ಕೂಡ ಫಿಕ್ಸ್ ಮಾಡಿಲ್ಲ. ಹಾಗಾಗಿ ಯಡಿಯೂರಪ್ಪ ಸಹ ಬೇರೆ ಸಮಯ ಫಿಕ್ಸ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 21, 22ಕ್ಕೆ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗುತ್ತಿಲ್ಲ. ಡಿಸೆಂಬರ್ 22ರಿಂದ ಶಿವಮೊಗ್ಗ ಪ್ರವಾಸ ಕೈಗೊಳ್ಳುವ ಯಡಿಯೂರಪ್ಪನವರು ಡಿಸೆಂಬರ್ 26ರಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಹಾಗಾಗಿ ಬಿಎಸ್‍ವೈ ಈ ವರ್ಷ ಹೈಕಮಾಂಡ್ ಭೇಟಿ ಮಾಡುವುದು ಅನುಮಾನ. ಹೊಸ ವರ್ಷದ ನಂತರವೇ ಹೈಕಮಾಂಡ್ ಭೇಟಿಗೆ ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ. ಜಾರ್ಖಂಡ್ ಚುನಾವಣೆ ರಿಸಲ್ಟ್ ಆಗಬೇಕು, ಪೌರತ್ವ ಕಾವು ಇಳಿಯಬೇಕು. ಅಲ್ಲಿಯವರೆಗ ಅಮಿತ್ ಶಾ ಮತ್ತು ಮೋದಿ ಅವರ ಜೊತೆಗಿನ ಭೇಟಿ ಅನುಮಾನ ಅಂತಾ ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಹೊಸ ವರ್ಷದ ಮೊದಲ ವಾರ ಯಡಿಯೂರಪ್ಪನವರು ದೆಹಲಿಗೆ ಹೋದರೂ ಕ್ಯಾಬಿನೆಟ್ ವಿಸ್ತರಣೆ ಸಂಕ್ರಾಂತಿ ಬಳಿಕ ಎನ್ನಲಾಗುತ್ತಿದೆ. ವಿಧಾನಸಭೆ ಜಂಟಿ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಲು ಪ್ಲಾನ್ ಮಾಡಿದ್ದು, ಜನವರಿ 15 ರಿಂದ 20ರೊಳಗೆ ಸಂಪುಟ ವಿಸ್ತರಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಜನವರಿ 20ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭಗೊಳ್ಳಲಿದೆ.
ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಬಳಿಕ ಸಚಿವರಾಗುವ ಕನಸು ಕಾಣುತ್ತಿದ್ದ ನೂತನ ಶಾಸಕರು ಭ್ರಮನಿರಸನಗೊಂಡಿದ್ದಾರೆ. ಸಚಿವರಾಗುವ ಕನಸು ತಕ್ಷಣಕ್ಕೆ ಈಡೇರುತ್ತಿಲ್ಲ. ಇದರಿಂದ ನೂತನ ಶಾಸಕರಲ್ಲಿ ಬೇಸರ ಮನೆ ಮಾಡಿದೆ. ಅಸಮಧಾನಗೊಂಡ ನೂತನ ಶಾಸಕರ ಮನವೊಲಿಕೆಗೆ ಸಿಎಂ ಯಡಿಯೂರಪ್ಪ ಕಸರತ್ತು ನಡೆಸುತ್ತಿದ್ದಾರೆ. ಮುಂದಿನ ತಿಂಗಳಲ್ಲಿ ಸಂಕ್ರಾಂತಿಗೆ ಶತಾಯಗತಾಯ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಇದೀಗ ನೂತನ ಶಾಸಕರಿಗೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟಕ್ಕೆ ಎಲ್ಲ ನೂತನ ಶಾಸಕರನ್ನೂ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಸಿಎಂ ಈಗಾಗಲೇ ಭರವಸೆ ಕೊಟ್ಟಿದ್ದಾರೆ. ಆದರೆ ಸಂಪುಟ ವಿಸ್ತರಣೆ ಇವತ್ತಾಗಬಹುದು ನಾಳೆ ಆಗಬಹುದು ಅಂತ ಶಾಸಕರು ದಿನಗಳನ್ನು ಎಣಿಸುತ್ತಲೇ ಇದ್ದಾರೆ. ಪದೇ ಪದೇ ಸಿಎಂ ಯಡಿಯೂರಪ್ಪ ಭೇಟಿ ಮಾಡುತ್ತಾ ಸಂಪುಟ ಕುರಿತು ಚರ್ಚಿಸುತ್ತಾ ವಾಪಸ್ ಹೋಗುತ್ತಿದ್ದಾರೆ. ಈ ತಿಂಗಳಲ್ಲಿ ಸಂಪುಟ ವಿಸ್ತರಣೆ ನಡೆಯಬಹುದು ಅನ್ನುವ ವಿಶ್ವಾಸವೂ ಇದೀಗ ನೂತನ ಶಾಸಕರಲ್ಲಿ ಕಮರಿ ಹೋಗಿದೆ. ಹಾಗಾಗಿ ಎಲ್ಲ ಹೊಸ ಶಾಸಕರೂ ಅಸಮಧಾನಗೊಂಡಿದ್ದು ತೀವ್ರತರದ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನೂತನ ಶಾಸಕರು ಬೇಸರಗೊಂಡಿದ್ದಾರೆ ಎಂಬ ವಿಚಾರ ಗೊತ್ತಾಗಿದ್ದೇ ತಡ ಮುಖ್ಯಮಂತ್ರಿಗಳು ಈಗ ಅವರನ್ನು ಸಂತೈಸಲು ಮುಂದಾಗಿದ್ದಾರೆ. ನಾನು ಇದೇ ತಿಂಗಳ 21, 22 ರಂದು ದೆಹಲಿಗೆ ಹೋಗುತ್ತೇನೆ. ಸಂಕ್ರಾಂತಿಗೆ ಸಂಪುಟ ವಿಸ್ತರಣೆ ಮಾಡುತ್ತೇವೆ. ಗೆದ್ದ ಎಲ್ಲ 11 ಶಾಸಕರನ್ನೂ ಮತ್ತು ಆರ್. ಶಂಕರ್ ರನ್ನೂ ಸಚಿವರಾಗಿ ಮಾಡ್ತೇವೆ. ಎಂಟಿಬಿ ನಾಗರಾಜ್ ಮತ್ತು ಎಚ್ ವಿಶ್ವನಾಥ್ ಅವರಿಗೆ ಸೂಕ್ತ ಸ್ಥಾನಮಾನ ಕೊಡುವ ಬಗ್ಗೆಯೂ ಹೈಕಮಾಂಡ್ ಜೊತೆ ಮಾತಾಡ್ತೇನೆ. ನೀವ್ಯಾರೂ ಆತಂಕಗೊಳ್ಳಬೇಡಿ ಎಂದು ಯಡಿಯೂರಪ್ಪನವರು ನೂತನ ಶಾಸಕರಿಗೆ ಸಾಂತ್ವನ, ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಮೂರು ದಿನಗಳ ರೆಸ್ಟ್ ಬಳಿಕ ಮತ್ತೆ ಧವಳಗಿರಿ ಚಟುವಟಿಕೆಯ ಕೇಂದ್ರವಾಗಿದೆ. ಸಿಎಂ ಯಡಿಯೂರಪ್ಪ ನಿವಾಸ ಧವಳಗಿರಿ ನಿವಾಸಕ್ಕೆ ಮತ್ತೆ ಸಚಿವ ಸ್ಥಾನದ ಆಕಾಂಕ್ಷಿಗಳು ಧಾಂಗುಡಿ ಇಡುತ್ತಿದ್ದಾರೆ. ನಿನ್ನೆ ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಸಿದರು. ಸಂಭಾವ್ಯ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿ ದೆಹಲಿಗೆ ತರುವಂತೆ ಸಂತೋಷ್ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಚುರುಕಾದ ಸಚಿವಾಕಾಂಕ್ಷಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಂದ ಮರಳಿ ಬೆಂಗಳೂರಿಗೆ ಬಂದು ಸಿಎಂ ಭೇಟಿ ಮಾಡುತ್ತಿದ್ದಾರೆ.
ಇವತ್ತು ಬೆಳಗ್ಗೆಯಿಂದಲೂ ಸಿಎಂ ಅವರ ಧವಳಗಿರಿ ನಿವಾಸ ಚಟುವಟಿಕೆಯ ಕೇಂದ್ರಬಿಂದುವಾಗಿದೆ. ಬೆಳಗ್ಗೆ ಹಲವು ಸಚಿವಾಕಾಂಕ್ಷಿ ಶಾಸಕರು ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಇವತ್ತು ಬೆಳಗ್ಗೆಯೇ ಸಿಎಂ ಭೇಟಿ ಮಾಡಿದ್ರು. ಡಿಸಿಎಂ ಸ್ಥಾನ, ಸೋತವರಿಗೆ ಸಚಿವ ಸ್ಥಾನ, ಸಂಪುಟ ವಿಸ್ತರಣೆ ವಿಳಂಬ ಕುರಿತು ಸಿಎಂ ಜೊತೆ ರಮೇಶ್ ಜಾರಕಿಹೊಳಿ ಮಹತ್ವದ ಚರ್ಚೆ ನಡೆಸಿದರು. ಡಿಸಿಎಂ ಹುದ್ದೆಗಾಗಿ ಶ್ರೀರಾಮುಲು ಪಟ್ಟು ಹಿಡಿದಿರುವ ವಿಚಾರ ಕೂಡಾ ಚರ್ಚಿಸಿದ್ದು, ಆ ಸ್ಥಾನ ತಮಗೇ ಕೊಡಬೇಕೆಂದೂ ರಮೇಶ್ ಜಾರಕಿಹೊಳಿ ಸಿಎಂ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ತಮಗೆ ಜಲಸಂಪನ್ಮೂಲ ಖಾತೆ ಕೊಡಿ ಎಂದೂ ಸಿಎಂಗೆ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ತೆರಳಿದ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಸಿಎಂ ಭೇಟಿ ಮಾಡಿ ಜಲಸಂಪನ್ಮೂಲ ಖಾತೆಗೆ ಬೇಡಿಕೆ ಇಟ್ಟರು ಎನ್ನಲಾಗಿದೆ. ಜಲಸಂಪನ್ಮೂಲ ಖಾತೆಗೆ ರಮೇಶ್ ಜಾರಕಿಹೊಳಿ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರೂ ಪಟ್ಟು ಹಿಡಿದಿರುವುದು ಸಿಎಂಗೆ ಮತ್ತೊಂದು ತಲೆನೋವಾಗಿದೆ.
ಇನ್ನು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಕೂಡಾ ಸಿಎಂ ಭೇಟಿ ಮಾಡಿದ್ದು, ಸಚಿವ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಒತ್ತಾಯಿಸಿದರು ಎನ್ನಲಾಗಿದೆ. ಚುನಾವಣಾ ಪೂರ್ವದಲ್ಲಿ ರಾಮುಲು ಅವರಿಗೆ ಭರವಸೆ ಕೊಟ್ಟಂತೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಸೋಮಶೇಖರ್ ರೆಡ್ಡಿ ಆಗ್ರಹಿಸಿದ್ರು ಎನ್ನಲಾಗಿದೆ.
ಇನ್ನು ಹಿರಿಯ ಶಾಸಕ ಉಮೇಶ್ ಕತ್ತಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ರೆಡ್ಡಿ ಲಿಂಗಾಯತ ಸಮುದಾಯದ ಎ.ಎಸ್.ಪಾಟೀಲ್ ನಡಹಳ್ಳಿ, ವೆಂಕಟರೆಡ್ಡಿ ಮುದ್ನಾಳ್, ದೊಡ್ಡನಗೌಡ ಪಾಟೀಲ್ ಸೇರಿ ಹಲವರು ಸಹ ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ರು. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸುವಂತೆ ಸಚಿವಾಕಾಂಕ್ಷಿಗಳು ಸಿಎಂ ಯಡಿಯೂರಪ್ಪಗೆ ಒತ್ರಾಯಿಸಿದ್ರು. ಈ ಮಧ್ಯೆ ಮರಾಠಾ ಕ್ಷತ್ರೀಯ ಸಮಯದಾಯದ ಮುಖಂಡರು ಸಹ ಸಿಎಂ ಭೇಟಿ ಮಾಡಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿದರು.
ಇದೆಲ್ಲದರ ನಡುವೆ ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ಲಕ್ಷ್ಮಣ ಸವದಿ ಹೋರಾಟ ಮುಂದುವರಿಸಿದ್ದಾರೆ. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಡಿಸಿಎಂ ಸ್ಥಾನ, ತಮ್ಮ ಭವಿಷ್ಯ ಕುರಿತು ಚರ್ಚಿಸಿ ಬಂದಿದ್ರು ಲಕ್ಷ್ಮಣ್ ಸವದಿ. ದೆಹಲಿಯಿಂದ ವಾಪಸಾದ ಬಳಿಕ ಇವತ್ತು ಡಿಸಿಎಂ ಲಕ್ಷ್ಮಣ್ ಸವದಿ ಸಿಎಂ ಭೇಟಿ ಮಾಡಿ ಚರ್ಚಿಸಿದರು. ಹೈಕಮಾಂಡ್ ನಾಯಕರ ಜೊತೆಗಿನ ಮಾತುಕತೆಯನ್ನೂ ಸವದಿ ಸಿಎಂ ಜೊತೆ ಹಂಚಿಕೊಂಡ್ರು ಎನ್ನಲಾಗಿದೆ.
ಕಳೆದ ವಾರಾಂತ್ಯದ ಎರಡು ದಿನ ಸಿಎಂ ಅವರ ಧವಳಗಿರಿ ನಿವಾಸದಲ್ಲಿ ಶಾಂತಿ ನೆಲೆಸಿತ್ತು. ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಕ್ಷೇತ್ರಗಳಿಗೆ ಮರಳಿದ್ರು. ಆದ್ರೆ ನಿನ್ನೆ ಬಿ ಎಲ್ ಸಂತೋಷ್ ಭೇಟಿ ಮತ್ತೆ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಕೆದಕುವಂತೆ ಮಾಡಿದೆ.
ಚಿತ್ರದುರ್ಗ: ಸಚಿವ ಸಂಪುಟ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸರ್ಕಾರವನ್ನು ನಿರ್ವಹಣೆ ಮಾಡುತ್ತಿರುವ ಸಿಎಂ ಯಡಿಯೂರಪ್ಪನವರಿಗೆ ಆ ವಿಚಾರದಲ್ಲಿ ಪರಮಾಧಿಕಾರವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಿತ್ರದುರ್ಗದ ಮುರುಘಾಮಠ, ಮಾದಾರಚನ್ನಯ್ಯ ಮಠ ಹಾಗೂ ಭೋವಿ ಗುರುಪೀಠಗಳಿಗೆ ಭೇಟಿ ನೀಡಿ, ಡಾ.ಶಿವಮೂರ್ತಿ ಮುರುಘಾ ಶರಣರು, ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಬೋವಿ ಗುರುಪೀಠದ ಶ್ರೀಸಿದ್ದರಾಮೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಪ್ರತಿಯೊಬ್ಬ ಶಾಸಕರಿಗೂ ತಾವು ಸಚಿವರಾಗಬೇಕೆಂಬ ಆಸೆ ಇರುತ್ತದೆ. ಆದರೆ ಪ್ರತಿ ಜಿಲ್ಲೆಗಳಲ್ಲೂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಹೀಗಾಗಿ ಸಿಎಂ ಯಡಿಯೂರಪ್ಪ ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ ಕಾಳಜಿವಹಿಸಲಿದ್ದು ಎಲ್ಲಾ ಜಿಲ್ಲೆಗಳಿಗೂ ನ್ಯಾಯ ಒದಗಿಸಲಿದ್ದಾರೆ ಎಂದರು.
ಇದೇ ವೇಳೆ ಪೌರತ್ವ ತಿದ್ದುಪಡಿಗೆ ಕಾಂಗ್ರೆಸ್ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಪೌರತ್ವ ತಿದ್ದುಪಡಿಗೆ ಜನಸಾಮಾನ್ಯರು ಹಾಗೂ ಮತದಾರರು ಎಲ್ಲೂ ವಿರೋಧ ವ್ಯಕ್ತಪಡಿಸಿಲ್ಲ. ದೇಶದ ಎಲ್ಲಾ ಅಲ್ಪಸಂಖ್ಯಾತರ ಹಿತ ಕಾಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಮುಸಲ್ಮಾನರು ಬಿಜೆಪಿ ಹಾಗೂ ಮೋದಿಯವರನ್ನು ಒಪ್ಪಿಕೊಂಡಿದ್ದಾರೆ ಎಂದರು.
ಬಿಜೆಪಿಯ ಕೆಲಸವನ್ನು ಸಹಿಸಲಾಗದ ಕಾಂಗ್ರೆಸ್ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಜೊತೆಗೆ ಕಾಂಗ್ರೆಸ್ ಈಗಾಗಲೇ ದೇಶದಲ್ಲಿ ದಿವಾಳಿಯಾಗಲಿದ್ದು ಬೌದ್ಧಿಕ ವೈಚಾರಿಕ ಹಾಗೂ ಸಂಘಟನಾತ್ಮಕವಾಗಿಯೂ ಸಹ ದಿವಾಳಿಯಾಗಿದೆ. ಹೀಗಾಗಿ ಬ್ರಿಟಿಷರು ಭಾರತ ಬಿಟ್ಟು ಹೋದ ಬಳಿಕ ಕಾಂಗ್ರೆಸ್ಸಿಗರು ಕೂಡ ಡಿವೈಡ್ ಅಂಡ್ ರೂಲ್ ನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ದೇಶದ ಯಾವೊಬ್ಬ ಮಸಲ್ಮಾನ ಪ್ರಜೆಗೂ ತೊಂದರೆಯಾಗದಂತೆ ಕಾಳಜಿವಹಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಂಡರು.
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು ಸಕ್ರಿಯ ರಾಜಕಾರಣದಲ್ಲಿದಿದ್ರೆ ಸಚಿವ ಶ್ರೀರಾಮುಲುಗೆ ರಾಜಕೀಯದಲ್ಲಿ ಮತ್ತಷ್ಟು ಬಲ ಬರುತ್ತಿತ್ತು. ಇನ್ನೂ ಬೇಗ ಶ್ರೀರಾಮುಲು ಡಿಸಿಎಂ ಆಗುತ್ತಿದ್ದರು ಎಂದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸೋಮಶೇಖರ್ ರೆಡ್ಡಿ, ಇಂದು ಜನಾರ್ದನ ರೆಡ್ಡಿ ನಮ್ಮ ಜೊತೆಯಲ್ಲಿದಿದ್ದರೆ ನಮಗೆ ಯಾವ ಹಿನ್ನಡೆ ಆಗುತ್ತಿರಲಿಲ್ಲ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾಗಿ ಉನ್ನತ ಮಟ್ಟದಲ್ಲಿ ಶ್ರೀರಾಮುಲು ಬೆಳೆದಿದ್ದಾರೆ. ಕಾಲ ಚಕ್ರ ಹೀಗೆ ಇರಲ್ಲ, ಬದಲಾಗುತ್ತಿರುತ್ತದೆ. ಕೆಳಗೆ ಇದ್ದೋರು ಮೇಲೆ ಬರಬೇಕು. 2008ರಲ್ಲಿ ಪ್ರಬಲರಾಗಿದ್ವಿ, ಈಗಲೂ ನಾವು ಸ್ಟ್ರಾಂಗ್ ಇದ್ದೇವೆ. ನಮ್ಮನ್ನು ಭಗವಂತ ವೀಕ್ ಮಾಡಬೇಕೇ ಹೊರತು ಬೇರೆಯವರಲ್ಲ ಎಂದಿದ್ದಾರೆ.
ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡುವ ಕುರಿತು ಹೈಕಮಾಂಡ್ ತಿರ್ಮಾನ ತೆಗೆದುಕೊಳ್ಳುತ್ತದೆ. ಶ್ರೀರಾಮುಲು ಡಿಸಿಎಂ ಆಗುವ ವಿಶ್ವಾಸ ನಮಗೆ ಇದೆ. ಇದೇ ವೇಳೆಯಲ್ಲಿ ಬಳ್ಳಾರಿ ಜಿಲ್ಲಾ ವಿಭಜನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅಭಿವೃದ್ಧಿ ವಿಚಾರದಲ್ಲಿ ಬಳ್ಳಾರಿ ಹಿಂದೆ ಇಲ್ಲ. ಸಿಎಂ ಯಡಿಯೂರಪ್ಪ ಅವರು ಚುನಾವಣೆ ನಂತರ ಜಿಲ್ಲೆ ವಿಭಜನೆ ಬಗ್ಗೆ ಮಾತನಾಡೋಣ ಅಂದಿದ್ದಾರೆ. ಜಿಲ್ಲೆ ಅಖಂಡವಾಗಿರೋದು ನನ್ನ ನಿಲುವು ಎಂದು ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯನ್ನು ಒಡೆಯೋದು ಬೇಡ ಎಂದು ಆನಂದ್ ಸಿಂಗ್ ಬಳಿ ಮನವಿ ಮಾಡುತ್ತೇವೆ. ಶಾಸಕರಾದ ಕರುಣಾಕರ್ ರೆಡ್ಡಿ, ಗೋಪಾಲಕೃಷ್ಣ, ಸೋಮಲಿಂಗಪ್ಪ ಜಿಲ್ಲೆ ಅಖಂಡವಾಗಿರಲಿ ಎಂದಿದ್ದೇವೆ. ಜೊತೆಗೆ ಸಿಎಂ ಕರೆದಿದ್ದ ಅಂದಿನ ಸಭೆಗೆ ಬಂದವರಲ್ಲಿ ಶೇ.9ಂ ಜನ ಜಿಲ್ಲೆ ವಿಭಜನೆ ಬೇಡ ಎಂದಿದ್ದಾರೆ. ಆದ್ರೆ ಆನಂದ್ ಸಿಂಗ್ ಮತ್ತು ಇನ್ನೊಬ್ಬ ಎಂಎಲ್ ಸಿ ಇಬ್ಬರೇ, ಬೇಕು ಅಂದಿದ್ದಾರೆ ಎಂದು ತಿಳಿಸಿದ್ದಾರೆ.