Tag: ಸಂದೀಪ್ ಜನಾರ್ಧನ್

  • ಅಮೇಜಾನ್ ಪ್ರೈಮ್‍ನಲ್ಲೀಗ ಫೇಸ್ ಟು ಫೇಸ್!

    ಅಮೇಜಾನ್ ಪ್ರೈಮ್‍ನಲ್ಲೀಗ ಫೇಸ್ ಟು ಫೇಸ್!

    ವರ್ಷದ ಹಿಂದೆ ಬಿಡುಗಡೆಯಾಗಿ ಪ್ರೇಕ್ಷಕರ ಕಡೆಯಿಂದ ಅಪಾರ ಪ್ರೀತಿ, ಮೆಚ್ಚುಗೆ ಗಳಿಸಿಕೊಂಡಿದ್ದ ಚಿತ್ರ ಫೇಸ್ ಟು ಫೇಸ್. ಸಂದೀಪ್ ಜನಾರ್ಧನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಹೊಸತನದ ಸುಳಿವು ಕೊಡುತ್ತಲೇ ಸೃಷ್ಟಿಸಿದ್ದ ಸಂಚಲನವನ್ನು ಪ್ರೇಕ್ಷಕರ್ಯಾರೂ ಮರೆತಿರಲಿಕ್ಕಿಲ್ಲ. ಹೊಸಬರ ತಂಡ, ಅದರ ಫಲವಾಗಿ ಪಡಿಮೂಡಿಕೊಂಡಿದ್ದ ಹೊಸ ಆವೇಗ… ಇಂಥಾ ಒಡ್ಡೋಲಗದಲ್ಲಿಯೇ ತೆರೆ ಕಂಡಿದ್ದ ಫೇಸ್ ಟು ಫೇಸ್ ಗೆದ್ದಿತ್ತು. ಇದೀಗ ಮತ್ತೆ ಅದರ ಹಂಗಾಮ ಅಮೇಜಾನ್ ಪ್ರೈಮ್‍ನಲ್ಲಿ ಶುರುವಾಗಿದೆ.

    ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ರೋಹಿತ್ ಭಾನುಪ್ರಕಾಶ್ ನಿರ್ವಹಿಸಿದ್ದರೆ, ದಿವ್ಯಾ ಉರುಡಗ ಮತ್ತು ಪೂರ್ವಿ ಜೋಶಿ ನಾಯಕಿಯರಾಗಿ ನಟಿಸಿದ್ದಾರೆ. ಈ ಎಲ್ಲರೂ ಕೂಡಾ ತಂತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸೋ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಅಮೇಜಾನ್ ಪ್ರೈಮ್ ಮೂಲಕ ಮತ್ತಷ್ಟು ಪ್ರೇಕ್ಷಕರನ್ನು ತಲುಪಿಕೊಳ್ಳೋ ಖುಷಿ ಅವರೆಲ್ಲರಲ್ಲಿದೆ. ಮೇಲು ನೋಟಕ್ಕೆ ಸರಳವಾಗಿ ಕಾಣುವ, ಪ್ರೇಮದ ಸುತ್ತ ಗಿರಕಿ ಹೊಡೆಯುವಂತೆ ಕಾಣುವ ಕಥಾ ಎಳೆ ಅಷ್ಟು ಸಲೀಸಾಗಿ ಬಿಚ್ಚಿಕೊಳ್ಳುವಂಥಾದ್ದಲ್ಲ. ನಿರ್ದೇಶಕ ಸಂದೀಪ್ ಜನಾರ್ಧನ್ ಸ್ಕ್ರೀನ್ ಪ್ಲೇ ಮೂಲಕವೇ ಅದನ್ನು ಪರಿಣಾಮಕಾರಿಯಾಗಿಸಿದ್ದಾರೆ.

    ಕರಾವಳಿ ಮತ್ತು ಚಿಕ್ಕಮಗಳೂರು ಪ್ರದೇಶದ ಮಲೆನಾಡಿನಲ್ಲಿ ಕಥೆಯ ಗಾಲಿಗಳು ಅಡ್ಡಾಡುತ್ತವೆ. ಆದರೆÉ ಕಥೆಯೆಂಬುದು ಹಠಾತ್ತನೆ ಪಥ ಬದಲಿಸಿ ಎಲ್ಲವನ್ನೂ ಗೊಂದಲಕ್ಕೆ ತಳ್ಳುತ್ತಲೇ ಮತ್ತೆ ದಾರಿಗೆ ಮರಳುತ್ತೆ. ಒಂದು ಸಿನಿಮಾವನ್ನು ನೋಡುಗರ ಪಾಲಿಗೆ ಯಾವ್ಯಾವ ಅಂಶಗಳು ವಿಶೇಷವಾಗಿಸಬಹುದೋ ಅದೆಲ್ಲವನ್ನೂ ಒಳಗೊಂಡಿರೋ ಚಿತ್ರ ಫೇಸ್ ಟು ಫೇಸ್. ಕಥೆ ಸೇರಿದಂತೆ ಎಲ್ಲದರಲ್ಲಿಯೂ ಇಲ್ಲಿ ಹೊಸತನಗಳು ಕಾಣಿಸುತ್ತವೆ.

    ಅದರಲ್ಲಿಯೂ ವಿಶೇಷವಾಗಿ ಸ್ಕ್ರೀನ್ ಪ್ಲೇನಲ್ಲಿ ಹೊಸತನವಿದೆ. ಅದರ ಬಲದಿಂದಲೇ ಇಡೀ ಸಿನಿಮಾ ಹೆಜ್ಜೆಹೆಜ್ಜೆಗೂ ನೋಡುಗರನ್ನು ಸರ್‍ಪ್ರೈಸ್‍ಗಳೊಂದಿಗೆ ಮುಖಾಮುಖಿಯಾಗಿಸುತ್ತೆ. ಈ ಕೊರೋನಾ ಕಾಲದಲ್ಲಿ ಸದರಿ ಚಿತ್ರ ಅಮೇಜಾನ್ ಪ್ರೈಮ್‍ಗೆ ಆಗಮಿಸಿದೆ. ಹಾಗೆ ಅಮೇಜಾನ್ ಪ್ರೈಮ್‍ಗೆ ಬರುತ್ತಲೇ ಬಹು ಬೇಡಿಕೆಯೊಂದಿಗೆ ಮುಂದುವರೆಯುತ್ತಿದೆ. ಇದು ನಿಜಕ್ಕೂ ಹೊಸ ಬಗೆಯ ಚಿತ್ರ. ಇದನ್ನು ವೀಕ್ಷಿಸೋದರೊಂದಿಗೆ ನಿಮ್ಮ ಲಾಕ್‍ಡೌನ್ ಕಾಲಾವಧಿ ಸಹನೀಯವಾಗಲಿ!

  • ಫೇಸ್ ಟು ಫೇಸ್: ಕಣ್ಣೆವೆ ಮಿಟುಕಿಸದಂತೆ ನೋಡಿಸಿಕೊಳ್ಳೋ ಅಪರೂಪದ ಚಿತ್ರ!

    ಫೇಸ್ ಟು ಫೇಸ್: ಕಣ್ಣೆವೆ ಮಿಟುಕಿಸದಂತೆ ನೋಡಿಸಿಕೊಳ್ಳೋ ಅಪರೂಪದ ಚಿತ್ರ!

    ಬೆಂಗಳೂರು: ಸಂದೀಪ್ ಜನಾರ್ಧನ್ ನಿರ್ದೇಶನದ ಫೇಸ್ ಟು ಫೇಸ್ ಚಿತ್ರ ತೆರೆ ಕಂಡಿದೆ. ರಿಯಲ್ ಸ್ಟಾರ್ ಉಪೇಂದ್ರ ಗರಡಿಯಲ್ಲಿ ಪಳಗಿಕೊಂಡಿರೋ ಸಂದೀಪ್ ಆರಂಭದಲ್ಲಿಯೇ ಈ ಚಿತ್ರದಲ್ಲೇನೋ ವಿಶೇಷವಿದೆ ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದರು. ಆ ನಂತರ ಹೊರಬಂದ ಹಾಡು, ಟ್ರೈಲರ್ ಗಳೆಲ್ಲವೂ ಕುತೂಹಲವನ್ನ ಉದ್ದೀಪಿಸುವಂತೆಯೇ ಇದ್ದವು. ಇದೀಗ ಫೇಸ್ ಟು ಫೇಸ್ ಪ್ರೇಕ್ಷಕರನ್ನೂ ಮುಖಾಮುಖಿಯಾಗಿದೆ. ಪ್ರೀತಿ, ಪ್ರೇಮ, ಸಂಬಂಧಗಳ ಕಥಾನಕವನ್ನೂ ಕೂಡಾ ಥ್ರಿಲ್ಲರ್ ಕಥೆಗಳಂಥಾದ್ದೇ ಗಾಢವಾದ ಕುತೂಹಲದೊಂದಿಗೆ ನೋಡಿಸಿಕೊಂಡು ಹೋಗುವಲ್ಲಿ ಈ ಚಿತ್ರ ಯಶ ಕಂಡಿದೆ.

    ನಿರ್ದೇಶಕ ಸಂದೀಪ್ ಜನಾರ್ಧನ್ ಫೇಸ್ ಟು ಫೇಸ್ ಚಿತ್ರದಲ್ಲಿ ಸ್ಕ್ರೀನ್ ಪ್ಲೇ ಬೆರಗಿದೆ ಅಂತೊಂದು ಮಾತು ಹೇಳಿದ್ದರು. ಅದು ಪ್ರತೀ ಪ್ರೇಕ್ಷಕರ ಅನುಭವಕ್ಕೂ ಬಂದಿದೆ. ಈ ಜಾದೂ ದೆಸೆಯಿಂದಲೇ ಫೇಸ್ ಟು ಫೇಸ್ ರೋಚಕ ಅನುಭವವನ್ನೂ ಕೊಡಮಾಡಿದೆ. ನೋಡುಗರು ಒಂದು ಅಂದುಕೊಂಡರೆ ಮತ್ತೇನೋ ಘಟಿಸುವ, ಹೋ ಹೀಗಾ ಅಂತ ನಿರಾಳವಾಗುವ ಹೊತ್ತಿನಲ್ಲಿ ಯಾವುದೂ ಹಾಗಲ್ಲ ಅನ್ನಿಸುತ್ತಲೇ ಇಡೀ ಚಿತ್ರವನ್ನು ಬೇರೆಯದ್ದೇ ರೀತಿಯಲ್ಲಿ ಕಟ್ಟಿ ಕೊಡಲಾಗಿದೆ.

    ನಾಯಕ ಸಂತೋಷ್ ಪಾತ್ರವನ್ನು ರೋಹಿತ್ ಭಾನುಪ್ರಕಾಶ್ ನಿರ್ವಹಿಸಿದ್ದರೆ, ಸ್ನೇಹಾ ಆಗಿ ದಿವ್ಯಾ ಉರುಡಗ ಮತ್ತು ಪ್ರೀತಿಯಾಗಿ ಪೂರ್ವಿ ಜೋಶಿ ನಟಿಸಿದ್ದಾರೆ. ನಾಯಕನಿಗೆ ಆರಂಭದಲ್ಲಿ ಪ್ರೀತಿಯೊಂದಿಗೆ ಪ್ರೀತಿ ಚಿಗುರಿಕೊಂಡಿರುತ್ತೆ. ಆದರೆ ಅದಕ್ಕೂ ಮೊದಲೇ ಸಂತೋಷ್ ಸ್ನೇಹಾಳನ್ನು ಪ್ರೀತಿಸಿರುತ್ತಾನೆ. ಆದರಾಕೆ ನೆನಪುಗಳೆಲ್ಲ ಅಳಿಸಿ ಹೋದಂಥಾ ಸ್ಥಿತಿಯಲ್ಲಿ ದೂರಾಗಿ ಬಿಟ್ಟಿರುತ್ತಾಳೆ.

    ಇಂಥಾದ್ದೊಂದು ಕ್ಲೀನ್ ಪಿಕ್ಚರ್ ಆರಂಭದಲ್ಲಿಯೇ ಪ್ರೇಕ್ಷಕರಿಗೆ ತಿಳಿಸಿ ನಂತರ ಗೊಂದಲ ಮಾಡುತ್ತಲೇ ಕುತೂಹಲ ಹುಟ್ಟಿಸುವ ಮಾರ್ಗವನ್ನು ನಿರ್ದೇಶಕರು ಆರಿಸಿಕೊಂಡಿದ್ದಾರೆ. ಒಂದೇ ಸಲಕ್ಕೆ ಕರಾವಳಿ ಮತ್ತು ಚಿಕ್ಕಮಗಳೂರು ಪ್ರದೇಶದ ಮಲೆನಾಡಿನಲ್ಲಿ ಕಥೆ ಚಲಿಸುತ್ತೆ. ಇದ್ದಕ್ಕಿದ್ದಂತೆ ಕಥೆ ಪಥ ಬದಲಿಸಿ ಎಲ್ಲವನ್ನೂ ಗೊಂದಲಕ್ಕೆ ತಳ್ಳುತ್ತಲೇ ಮತ್ತೆ ದಾರಿಗೆ ಮರಳುತ್ತೆ. ಟ್ವಿಸ್ಟಿನ ಹಿಂದೆ ಟ್ವಿಸ್ಟು. ಹೋ ಇದಾ ವಿಷ್ಯ ಅಂತ ಪ್ರೇಕ್ಷಕರು ನಿರಾಳವಾಗೋ ಹೊತ್ತಿಗೇ ಸೀನುಗಳೆಲ್ಲವೂ ಉಲ್ಟಾಪಲ್ಟಾ… ಫೇಸ್ ಟು ಫೇಸ್ ಅನುಭವವನ್ನು ರೋಚಕವಾಗಿಸೋದು ಇದೇ ಅಂಶ!

    ಆರಂಭದಿಂದ ಕಡೇಯವರೆಗೂ ಈ ಚಿತ್ರ ಕಣ್ಣೆವೆ ಮಿಟುಕಿಸದಂತೆ ನೋಡಿಸಿಕೊಂಡು ಹೋಗುತ್ತದೆ. ಪ್ರೀತಿ ಪ್ರೇಮ, ತಾಯಿ ಸೆಂಟಿಮೆಂಟು, ಸಂಬಂಧ ಸೂಕ್ಷ್ಮ ಹೊಂದಿರೋ ಈ ಚಿತ್ರದಲ್ಲಿ ಒಂದು ಮರ್ಡರ್ ಮಿಸ್ಟರಿಯೂ ಇದೆ. ಆದರೆ ಚೂರೇ ಚೂರು ಎಚ್ಚರ ತಪ್ಪಿದರೂ ಸಿಕ್ಕು ಸಿಕ್ಕಾಗುವಂಥಾ ಅಪಾಯವನ್ನ ನಿರ್ದೇಶಕರು ಜಾಣ್ಮೆಯಿಂದಲೇ ಮೀರಿಕೊಂಡಿದ್ದಾರೆ. ಗೊಂದಲಕ್ಕೆಲ್ಲ ಸೂಕ್ತ ಪರಿಹಾರಗಳನ್ನೂ ಕಲ್ಪಿಸಿದ್ದಾರೆ. ಇನ್ನುಳಿದಂತೆ ರೋಹಿತ್ ಭಾನುಪ್ರಕಾಶ್ ನಟನೆಯಲ್ಲಿ ಭರವಸೆ ಹುಟ್ಟಿಸುತ್ತಾರೆ. ನಾಯಕಿಯರಾದ ಪೂರ್ವಿ ಮತ್ತು ದಿವ್ಯಾ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಎಲ್ಲ ಪಾತ್ರವರ್ಗಗಳೂ ಇದಕ್ಕೆ ಪೂರಕವಾಗಿವೆ.

    ಪ್ರತೀ ಫ್ರೇಮಿನಲ್ಲಿಯೂ ಪ್ರೇಕ್ಷಕರನ್ನು ಹಿಡಿದಿಡೋ ಈ ಚಿತ್ರ ಎಲ್ಲ ವರ್ಗದವರಿಗೂ ಇಷ್ಟವಾಗುವಂತಿವೆ. ಟ್ವಿಸ್ಟುಗಳ ಸರಮಾಲೆಯೇ ಇದ್ದರೂ ಕಡೆಗೂ ಒಂದು ಭಯಾನಕ ಟ್ವಿಸ್ಟ್ ಇದ್ದೇ ಇದೆ. ಅದು ಕ್ಲೈಮ್ಯಾಕ್ಸ್ ಅನ್ನೂ ಕಾಡುವಂತೆ ಮಾಡಿದೆ. ಒಟ್ಟಾರೆಯಾಗಿ ಒಂದು ರೋಚಕ ಅನುಭವ ನೀಡೋ ಅಪರೂಪದ ಈ ಚಿತ್ರವನ್ನು ನೀವೊಮ್ಮೆ ನೋಡಬೇಕಿದೆ.

    ರೇಟಿಂಗ್: 4/5

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೋರಂಜನೆಯ ಜೊತೆಗೇ ಜಾಗೃತಿ ಮೂಡಿಸೋ ಫೇಸ್ ಟು ಫೇಸ್!

    ಮನೋರಂಜನೆಯ ಜೊತೆಗೇ ಜಾಗೃತಿ ಮೂಡಿಸೋ ಫೇಸ್ ಟು ಫೇಸ್!

    ಕನ್ನಡ ಚಿತ್ರರಂಗಕ್ಕೆ ಸಾಲು ಸಾಲಾಗಿ ಹೊಸ ನಿರ್ದೇಶಕರ ಆಗಮನವಾಗುತ್ತಿದೆ. ಅದೇ ಸಾಲಿನಲ್ಲಿ ಫೇಸ್ ಟು ಫೇಸ್ ಚಿತ್ರದ ನಿರ್ದೇಶಕ ಸಂದೀಪ್ ಜನಾರ್ಧನ್ ಕೂಡಾ ಸೇರಿಕೊಳ್ಳುತ್ತಾರೆ. ಪಕ್ಕಾ ಕಮರ್ಷಿಯಲ್ ಶೈಲಿಯ ಕಥೆ ಹೊಂದಿದ್ದರೂ ಅದರಲ್ಲಿಯೇ ಸಾಮಾಜಿಕ ಸಂದೇಶವನ್ನೂ ಕೂಡಾ ಹೊಂದಿರೋದು ಈ ಸಿನಿಮಾದ ನಿಜವಾದ ಆಕರ್ಷಣೆ. ಇದೂ ಸೇರಿದಂತೆ ಈ ಸಿನಿಮಾವನ್ನು ನೋಡಲೇ ಬೇಕೆಂಬುದಕ್ಕೆ ಹಲವಾರು ಕಾರಣಗಳಿವೆ.

    ಇದು ಓರ್ವ ಯುವಕ ಮತ್ತು ಆತನಿಗೆದುರಾಗೋ ಸಮಸ್ಯೆಗಳನ್ನು ಹೇಗೆ ಫೇಸ್ ಮಾಡುತ್ತಾನೆಂಬುದರ ಸುತ್ತ ನಡೆಯೋ ಕಥೆ ಹೊಂದಿರುವ ಚಿತ್ರ. ಆದರೆ ಇದನ್ನು ಗೆಸ್ ಮಾಡಲಾಗದಂಥಾ ಟ್ವಿಸ್ಟ್, ರೋಮಾಂಚನಗೊಳಿಸುವ ಸನ್ನಿವೇಶಗಳ ಮೂಲಕ ನಿರ್ದೇಶಕರು ಕಟ್ಟಿಕೊಟ್ಟಿದ್ದಾರಂತೆ. ಇನ್ನುಳಿದಂತೆ ತಾಂತ್ರಿಕವಾಗಿ ಹಾಗೂ ಸ್ಕ್ರೀನ್ ಪ್ಲೇ ವಿಚಾರದಲ್ಲಿಯೂ ಈ ಚಿತ್ರ ಗಮನ ಸೆಳೆಯಲಿದೆ.

    ಹೀಗೆ ಓರ್ವ ಹುಡುಗನ ಸುತ್ತ ಸುತ್ತೋ ಕಥೆಯನ್ನ ಇಡೀ ಬದುಕನ್ನೇ ಬಳಸಿ ಬರುವಂತೆ ಮಾಡೋ ಕಲಾತ್ಮಕ ಕುಸುರಿಯೂ ಈ ಚಿತ್ರದಲ್ಲಿದೆ. ಭರ್ಜರಿ ಮನೋರಂಜನೆಯ ಜೊತೆಗೇ ಎಲ್ಲರಿಗೂ ಅನ್ವಯವಾಗುವಂಥಾ ಸಾಮಾಜಿಕ ಸಂದೇಶವನ್ನೂ ಕೂಡಾ ಕೊಡಲಾಗಿದೆ. ಈಗಾಗಲೇ ಒಟ್ಟಾರೆ ಚಿತ್ರದ ಹೂರಣ ಹೇಗಿರಬಹುದೆಂಬ ಅಂದಾಜನ್ನು ಟ್ರೈಲರ್ ರವಾನಿಸಿದೆ. ಈ ಕಾರಣದಿಂದಲೇ ಫೇಸ್ ಟು ಫೇಸ್ ಗಾಗಿ ಪ್ರೇಕ್ಷಕರು ಕಾಯುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಕಲಕಲಾ ವಲ್ಲಭನ ಫೇಸ್ ಟು ಫೇಸ್

    ಸಕಲಕಲಾ ವಲ್ಲಭನ ಫೇಸ್ ಟು ಫೇಸ್

    ಸಂದೀಪ್ ಜನಾರ್ಧನ್ ನಿರ್ದೇಶನದ ಫೇಸ್ ಟು ಫೇಸ್ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಹೊಸ ಥರದ ಕಥೆ, ಸ್ಕ್ರೀನ್ ಪ್ಲೇ ಮುಂತಾದ ವಿಶೇಷತೆಗಳನ್ನು ಹೊಂದಿರೋ ಈ ಚಿತ್ರದ ಮೂಲಕ ರೋಹಿತ್ ಭಾನು ಪ್ರಕಾಶ್ ಎಂಬ ಸಕಲಕಲಾ ವಲ್ಲಭ ನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.

    ರೋಹಿತ್ ಈ ಹಿಂದೆ ರವಿಚಂದ್ರನ್ ಅಭಿನಯದ ದೃಶ್ಯ ಚಿತ್ರದಲ್ಲಿ ಖಳನಾಗಿ ಅಬ್ಬರಿಸಿದ್ದವರು. ಆ ನಂತರವೂ ಹಲವಾರು ಚಿತ್ರಗಳಲ್ಲಿ ನಟಿಸಿ ಗುರುತಾಗಿದ್ದರು. ಪ್ರೋ ಕಬಡ್ಡಿ ಪಂದ್ಯಾಟದ ಕಾಮೆಂಟರಿಗೂ ಧ್ವನಿಯಾಗುತ್ತಾ ಮತ್ತೊಂದೆಡೆ ಹೋಟೆಲ್ ವ್ಯವಹಾರವನ್ನೂ ನಡೆಸುತ್ತಿರೋ ಅವರ ಪಾಲಿಗೆ ನಟನೆ ಪ್ರಧಾನ ಗುರಿ. ಹಲವಾರು ವರ್ಷಗಳಿಂದ ನಾಯಕ ನಟನಾಗಬೇಕೆಂಬ ಹಂಬಲ ಹೊಂದಿ, ಹಂತ ಹಂತವಾಗಿ ಬೆಳೆದು ಬಂದಿರೋ ಅವರೀಗ ಫೇಸ್ ಟು ಫೇಸ್ ಮೂಲಕ ನಾಯಕನಾಗೋ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಈ ಚಿತ್ರದಲ್ಲಿ ಪೂರ್ವಿ ಜೋಷಿ ಮತ್ತು ಹುಲಿರಾಯ ಖ್ಯಾತಿಯ ದಿವ್ಯಾ ಉರುಡಗ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಇವರೆಲ್ಲರ ಪಾತ್ರಗಳನ್ನೂ ಕೂಡಾ ಭಿನ್ನವಾಗಿಯೇ ಸಂದೀಪ್ ಕಟ್ಟಿ ಕೊಟ್ಟಿದ್ದಾರಂತೆ. ಈಗಾಗಲೇ ಇದರ ಒಂದಷ್ಟು ಹಾಡುಗಳು ಟ್ರೆಂಡಿಂಗ್‍ನಲ್ಲಿವೆ. ಟ್ರೈಲರ್ ಕೂಡಾ ಜನಮನ ಸೆಳೆದಿದೆ. ಈ ಮೂಲಕವೇ ಎಲ್ಲ ವರ್ಗದ ಪ್ರೇಕ್ಷಕರ ಆಸಕ್ತಿಯ ಕೇಂದ್ರಬಿಂದುವಾಗಿರೋ ಈ ಚಿತ್ರ ಥೇಟರಿಗೆ ಬರಲು ದಿನಗಣನೆ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv