Tag: ಸಂತೋಷ್ ಹೆಗಡೆ

  • ಕಾಮುಕರಿಗೆ ಗಲ್ಲು ಶಿಕ್ಷೆ ಬಿಟ್ಟು ಬೇರೆ ಯಾವ ಶಿಕ್ಷೆಯೂ ಸರಿ ಅಲ್ಲ: ಸಂತೋಷ್ ಹೆಗಡೆ

    ಕಾಮುಕರಿಗೆ ಗಲ್ಲು ಶಿಕ್ಷೆ ಬಿಟ್ಟು ಬೇರೆ ಯಾವ ಶಿಕ್ಷೆಯೂ ಸರಿ ಅಲ್ಲ: ಸಂತೋಷ್ ಹೆಗಡೆ

    ಬಾಗಲಕೋಟೆ: ಹೈದರಾಬಾದ್ ಪಶುವೈದ್ಯೆಯ ಗ್ಯಾಂಗ್ ರೇಪ್ ಮತ್ತು ಹತ್ಯೆ ಮಾಡಿದ ಕಾಮುಕರಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಗ್ರಹಿಸಿದ್ದಾರೆ.

    ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ವಕೀಲರ ಸಂಘ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂತೋಷ್ ಹೆಗಡೆ, ಕಾಮುಕರಿಗೆ ಗಲ್ಲು ಶಿಕ್ಷೆ ಬಿಟ್ಟು ಬೇರೆ ಯಾವ ಶಿಕ್ಷೆಯೂ ಸರಿ ಅಲ್ಲ. ಆದರೂ ಕೆಲವು ಬಾರಿ ಮಾನವೀಯ ಹಕ್ಕಿನ ಮೇಲೆ ಗಲ್ಲು ಶಿಕ್ಷೆ ಬೇಡ ಎಂದು ವಾದ ಮಾಡುತ್ತಾರೆ. ಇದು ಮಾನವೀಯತೆ ಇಲ್ಲದ ಕ್ರೂರವಾದಂತಹ ಕೃತ್ಯ. ಆದ್ದರಿಂದ ಇಂತಹ ಘಟನೆಯಾದಾಗ ಗಲ್ಲು ಶಿಕ್ಷೆಯೇ ಆಗಬೇಕು. ಅದು ವಿಳಂಬವಾಗಬಾರದು ತೀವ್ರಗತಿಯಲ್ಲಿ ತೀರ್ಪು ಪ್ರಕಟವಾಗಬೇಕು. ತಡವಾದರೆ ಅದರ ಪ್ರಾಮುಖ್ಯತೆ ಹೋಗುತ್ತದೆ ಎಂದರು.

    ಡಿಕೆಶಿಗೆ ಪುನಃ ಇಡಿ ನೊಟೀಸ್ ನೀಡಿರುವ ವಿಚಾರದ ಬಗ್ಗೆ ಮಾತನಾಡಿ, ವಿಚಾರಣೆಗೆ ಕರೆದರೆ ಹೋಗಲೇಬೇಕು. ಅದಕ್ಕೆ ರಾಜಕೀಯ ಪಿತೂರಿ ಎಂದು ಹೇಳುವುದು ಸರಿಯಲ್ಲ. ಇಡಿ ಆದೇಶ ನೊಟೀಸ್ ಪ್ರಕಾರ ನಡೆಯಬೇಕು. ತಪ್ಪು ಮಾಡಿದ ಆರೋಪದ ಮೇಲೆ ಇವೆಲ್ಲ ಪ್ರಕ್ರಿಯೆಗಳು ನಡೆಯುತ್ತವೆ ಎಂದರು. ಇದೇ ವೇಳೆ ಬಿಜೆಪಿಯಿಂದ ಇಡಿ ಸ್ವಾಯತ್ತ ಸಂಸ್ಥೆ ದುರುಪಯೋಗ ಎಂಬ ಕಾಂಗ್ರೆಸ್ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇಬ್ಬರು ಒಂದೇ ತಾನೇ? ಇವರ ಬಗ್ಗೆ ಅವರು ಕೇಳಿದರೆ ನೀವು ಮಾಡಿಲ್ಲವೇನ್ರಿ ಎಂದು ಅವರು ಹೇಳುತ್ತಾರೆ ಎಂದು ತಿರುಗೇಟು ನೀಡಿದರು.

    ರಾಮಮಂದಿರ ಐತಿಹಾಸಿಕ ತೀರ್ಪಿನ ಬಗ್ಗೆ ಮಾತನಾಡಿ, ಅದು ಸರಿಯೋ ತಪ್ಪು ಎಂದು ನಾನು ಪರಾಮರ್ಶೆಗೆ ಇಳಿಯುವುದಿಲ್ಲ. ಇದು ದೇಶದ ಶಾಂತಿಗಾಗಿ ಕೊಟ್ಟ ತೀರ್ಪು. ಇದನ್ನು ನಾವು ಪಾಲಿಸಲೇಬೇಕು. ಪ್ರತಿಭಟನೆಯೂ ಬೇಡ, ಸಂಭ್ರಮವೂ ಬೇಡ ಎಂದು ಹೇಳಿದರು.

    ಸುಪ್ರೀಂ ತೀರ್ಪು ಮರುಪರಿಶೀಲನೆ ಹಾಕುತ್ತಾರೆ ಕೆಲವರಿಗೆ ಇಲ್ಲಿ ಶಾಂತಿ ಇರುವುದು ಬೇಕಾಗಿಲ್ಲ. ಮರುಪರಿಶೀಲನೆ ಅರ್ಜಿ ಹಾಕಿದ ಧರ್ಮದವರಲ್ಲೇ ಕೆಲವರು ನಾವು ಅರ್ಜಿ ಹಾಕುವುದಿಲ್ಲ ಎಂದು ಹೇಳುತ್ತಿದ್ದಾರೆ. ದೇಶದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಅದನ್ನೆಲ್ಲ ಮರೆತುಬಿಡೋಣ. ಧರ್ಮದ ವಿಚಾರ ಕೋರ್ಟ್ ನವರು ತೀರ್ಪು ಕೊಡುವುದಕ್ಕೆ ಅರ್ಹರಲ್ಲ ಎಂಬುದು ನನ್ನ ಅನಿಸಿಕೆ. ಯಾರದೂ ಸ್ವಂತ ಜಮೀನು ಹೋಗಿಲ್ಲ. ತೀರ್ಪಿಗೆ ಮನ್ನಣೆ ಕೊಡೋಣ ಎಂದರು. ಅಲ್ಲದೆ ಜೈಲಿಗೆ ಹೋಗಿ ಜಾಮೀನು ಪಡೆದು ಬಂದವರಿಗೆ ಹಾರ ಹಾಕಿ ಸಂಭ್ರಮಿಸುವುದು ತಪ್ಪು ಎಂದು ಪುನರುಚ್ಚರಿಸಿದರು.

  • ಹಿಂದೆ ಜೈಲಿಗೋದವರನ್ನು ಬಹಿಷ್ಕರಿಸುತ್ತಿದ್ರು, ಈಗ ಸ್ವಾಗತಿಸ್ತಿದ್ದಾರೆ: ಸಂತೋಷ್ ಹೆಗಡೆ

    ಹಿಂದೆ ಜೈಲಿಗೋದವರನ್ನು ಬಹಿಷ್ಕರಿಸುತ್ತಿದ್ರು, ಈಗ ಸ್ವಾಗತಿಸ್ತಿದ್ದಾರೆ: ಸಂತೋಷ್ ಹೆಗಡೆ

    ಬಳ್ಳಾರಿ: ಹಿಂದೆ ಜೈಲಿಗೆ ಹೋದವರನ್ನು ಶಿಕ್ಷೆ ಆಗುವ ಮುಂಚೆ ಬಹಿಷ್ಕರಿಸುತ್ತಿದ್ದರು. ಆದರೆ ಈಗ ಸ್ವಾಗತಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿ ವಿರುದ್ಧ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.

    ಇಂದು ಬಳ್ಳಾರಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ಸಮಾಜ ಬದಲಾಗಬೇಕಿದೆ. ಸಮಾಜದಲ್ಲಿನ ವ್ಯವಸ್ಥೆ ಬದಲಾಗಬೇಕು. ಜನರಲ್ಲಿ ಬದಲಾವಣೆ ಬರಬೇಕು ಎಂದು ಹೇಳಿದರು.

    ಜನರಲ್ಲಿ ದುರಾಸೆ, ಅಧಿಕಾರದ ಆಸೆ ಜಾಸ್ತಿಯಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಅಂತಾರೆ. ಅಧಿಕಾರದಲ್ಲಿ ಬಂದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಹಿಂದೆ ಜೈಲಿಗೋದವರನ್ನು ಶಿಕ್ಷೆ ಆಗೋ ಮುಂಚೆ ಬಹಿಷ್ಕರಿಸುತ್ತಿದರು. ಆದರೆ ಈಗ ಸ್ವಾಗತಿಸುತ್ತಿದ್ದಾರೆ. ಏಕ ವ್ಯಕ್ತಿ ಪೂಜೆ ಮಾಡಿ ಆದರೆ ಭ್ರಷ್ಟರನ್ನು ಪೂಜೆ ಮಾಡಬಾರದು ಎಂದು ಹೇಳಿ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.

    ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಲಿಷ್ಠ ಲೋಕಪಾಲ್ ಬಿಲ್ ಯಾರಿಗೆ ಬೇಕು. ಅಧಿಕಾರದಲ್ಲಿ ಇರೋರು ಎಷ್ಟು ಜನಪ್ರಮಾಣಿಕರು ಇದ್ದಾರೆ. ಈಗ ಲೋಕಾಯುಕ್ತ ಕೂಡ ದುರ್ಬಲವಾಗಿದೆ. ಎಸಿಬಿ ಪೊಲೀಸ್ ವ್ಯವಸ್ಥೆ ಯಲ್ಲಿ ಬರೋ ಸಂಸ್ಥೆ. ಮಂತ್ರಿ ಕೆಳಗೆ ಇರೋ ಎಸಿಬಿ ಏನು ಮಾಡಬಹುದು. ಹೀಗಾದರೆ ಭ್ರಷ್ಟಾಚಾರ ತಡೆಗಟ್ಟುವುದು ಹೇಗೆ ಎಂದು ಪ್ರಶ್ನೆ ಮಾಡಿದರು.

  • ಸಂತೋಷ್ ಹೆಗ್ಡೆ ವಿಕೃತ ಮನಸ್ಸಿನ ವ್ಯಕ್ತಿ: ರೇಣುಕಾಚಾರ್ಯ

    ಸಂತೋಷ್ ಹೆಗ್ಡೆ ವಿಕೃತ ಮನಸ್ಸಿನ ವ್ಯಕ್ತಿ: ರೇಣುಕಾಚಾರ್ಯ

    ದಾವಣಗೆರೆ: ಮಾಜಿ ಲೋಕಾಯುಕ್ತ  ಸಂತೋಷ್ ಹೆಗ್ಡೆ ಅವರು ವಿಕೃತ ಮನಸ್ಸಿನ ವ್ಯಕ್ತಿ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕಿಸಿದ್ದಾರೆ.

    ನ್ಯಾಮತಿ ತಾಲೂಕಿನ ರಾಮತೀರ್ಥದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಮಾಜಿ ರಾಜ್ಯಪಾಲ ಹಂಸರಾಜ್ ಅಲ್ಲ, ಅವರು ಧ್ವಂಸರಾಜ್. ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ನೀಡಿದ ವರದಿಗೆ ಅನುಮತಿ ಕೊಟ್ಟರು. ಈ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮೇಲೆ ದುರುದ್ದೇಶದಿಂದ ಕೇಸ್ ಹಾಕಿ, ಜೈಲಿಗೆ ಹೋಗುವಂತೆ ಮಾಡಿದ್ದರು ಎಂದು ಆರೋಪಿಸಿದರು.

    ಬಿ.ಎಸ್.ಯಡಿಯೂರಪ್ಪ ಅವರು ಭ್ರಷ್ಟಾಚಾರ ಮಾಡಿಲ್ಲ, ಲೂಟಿ ಮಾಡಲಿಲ್ಲ. ಅವರನ್ನು ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ಕಳುಹಿಸಲಾಯಿತು. ಯಡಿಯೂರಪ್ಪನವರು ಜೈಲಿಗೆ ಹೋದಾಗ ಬಿಜೆಪಿಯವರು ಯಾವುದೇ ಗಲಾಟೆ ಮಾಡಲಿಲ್ಲ. ಆದರೆ ಮಾಜಿ ಸಚಿವ ಡಿ.ಕೆ.ಸಚಿವ ಡಿ.ಕೆ.ಶಿವಕುಮಾರ್ ಬಂಧನವಾಗಿದ್ದಕ್ಕೆ ಕಾಂಗ್ರೆಸ್‍ನವರು ಪ್ರತಿಭಟನೆ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ್ದಾರೆ ಎಂದು ದೂರಿದರು.

    ಕಾಂಗ್ರೆಸ್‍ನವರು ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋದವರು ಎಂದು ಪದೇ ಪದೇ ಹೇಳುತ್ತಿದ್ದರು. ಆದರೆ ಈಗ ಕೇಂದ್ರ ಮಾಜಿ ಗೃಹ ಸಚಿವ ಪಿ.ಚಿದಂಬರಂ ಜೈಲಿಗೆ ಹೋಗಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ನನಗೆ ಸ್ನೇಹಿತರು. ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದಕ್ಕೆ ನಾನು ಖುಷಿಪಡುವುದಿಲ್ಲ ಎಂದು ಹೇಳಿದರು.

    ರಾಜಕಾರಣಿಗಳ ಹೇಳಿಕೆಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರಬಹುದು. ಅದನ್ನು ವೈಭವೀಕರಣ ಮಾಡುವುದು ಸರಿಯಲ್ಲ. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪಕ್ಷದ ಹಿರಿಯರು. ಅವರು ಉದ್ಧಟತನದ ಹೇಳಿಕೆ ನೀಡುವವರಲ್ಲ. ಮಾಧ್ಯಮದವರು ಎಡವಿದ ವ್ಯಕ್ತಿಗಳನ್ನು ಮೇಲಕ್ಕೆ ಎತ್ತಿ ಅವರ ಮನಸ್ಸನ್ನ ಪರಿವರ್ತನೆ ಮಾಡಬೇಕು. ನಾನು ಅನರ್ಹರು ಬಿಜೆಪಿ ಸೇರಿದ್ದಾರೆಂದು ಹೇಳಿಲ್ಲ. ಆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂತ ಹೇಳಿದ್ದೇನೆ ಎಂದರು.

  • ಲೋಕಾಯುಕ್ತ ಚರಿತ್ರೆಯಲ್ಲಿ ಒಬ್ಬ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ: ಸಂತೋಷ್ ಹೆಗ್ಡೆ

    ಲೋಕಾಯುಕ್ತ ಚರಿತ್ರೆಯಲ್ಲಿ ಒಬ್ಬ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ: ಸಂತೋಷ್ ಹೆಗ್ಡೆ

    ಬೆಂಗಳೂರು: ರಿಯಲ್ ಸಿಂಗಂ ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅವರು ಶುಕ್ರವಾರ ನಿಧನರಾಗಿದ್ದು, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಧುಕರ್ ಶೆಟ್ಟಿ ಅವರು ನಮ್ಮನ್ನೆಲ್ಲ ಅಗಲಿರೋದು ತುಂಬಾ ಬೇಸರವಾಗುತ್ತಿದೆ. ಲೋಕಾಯುಕ್ತ ಚರಿತ್ರೆಯಲ್ಲೇ ಮಧುಕರ್ ಅವರು ಒಬ್ಬ ಉತ್ತಮ ಪೊಲೀಸ್ ಅಧಿಕಾರಿ. ಲೋಕಾಯುಕ್ತದಲ್ಲಿ ಇರುವಾಗ ನಮ್ಮೊಂದಿಗೆ ಇದ್ದು ಸಹಕರಿಸಿದ್ದರು. ಅವರೊಬ್ಬರು ನಿಷ್ಠಾವಂತ, ದಕ್ಷ ಅಧಿಕಾರಿ. ಯಾವ ರಾಜಕಾರಣಿಗೂ ಅಥವಾ ಯಾವುದೇ ವ್ಯಕ್ತಿಗಳಿಗೂ ಅವರು ಹೆದರದೇ ಕೆಲಸ ಮಾಡ್ತಾ ಇದ್ರು. ದೇವರು ಅವರ ಕುಟುಂಬಕ್ಕೆ ಅವರ ಸಾವನ್ನ ಸಹಿಸಿಕೊಳ್ಳುವ ಶಕ್ತಿ ಕೊಡಲಿ. ಮಧುಕರ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.

    ನಾನು ಲೋಕಾಯುಕ್ತಕ್ಕೆ ಬಂದ ನಂತರ ಮಧುಕರ್ ಶೆಟ್ಟಿ ಅವರು ರಾಜ್ಯಪಾಲರಿಗೆ ಡಿಸಿ ಆಗಿದ್ದರು. ಆಗ ನಾನು ಅವರನ್ನು ನೀವು ಲೋಕಾಯುಕ್ತಕ್ಕೆ ಬತ್ರ್ತಿರಾ ಅಂತ ಕೇಳಿದ್ದೆ. ನಂತರ ಅವರು ಲೋಕಾಯುಕ್ತಕ್ಕೆ ಎಸ್‍ಪಿ ಆಗಿ ಬಂದರು. ಬಹಳ ಉತ್ತಮವಾಗಿ ಕೆಲಸ ಮಾಡಿದ ದಕ್ಷ ಅಧಿಕಾರಿ. ಗಣಿ ವಿಚಾರದಲ್ಲಿ ಮಾತ್ರ ಅಲ್ಲ ಬೆಂಗಳೂರು ಏರ್ ಪೋರ್ಟ್ ಬಳಿಯ ಜಮೀನು ಕಬಳಿಕೆ ಮಾಡಿಕೊಂಡ ಹಿರಿಯಾ ರಾಜಕಾರಣಿಯನ್ನು ವಿಚಾರಣೆ ಮಾಡಿ ಅವರನ್ನು ಹಾಗೂ ಅವರ ಪುತ್ರಿಯನ್ನು ಜೈಲಿಗೆ ಕಳುಹಿಸಿದ್ದರು. ಯಾರಿಗೂ ಹೆದರುವ ವ್ಯಕ್ತಿಯಲ್ಲ, ರಾತ್ರಿ ಹಗಲು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಮಧುಕರ್ ಅವರನ್ನು ನೆನೆದರು.

    ಸುಮಾರು 750 ಕ್ಕೂ ಹೆಚ್ಚು ಭ್ರಷ್ಟರನ್ನು ವಿಚಾರಣೆ ಮಾಡಿ ಕೋರ್ಟ್ ಮೆಟ್ಟಿಲು ಏರಿಸಿದ ಅಧಿಕಾರಿಗಳಲ್ಲಿ ಮಧುಕರ್ ಅವರು ಒಬ್ಬರು. ಆಡಳಿತದಲ್ಲಿ ಇರುವ ನಾಯಕರು ತಮಗೆ ಬೇಕಾದ ಅಧಿಕಾರಿಗಳನ್ನು ಮಾತ್ರ ವಿಚಾರಣೆ ಹಾಗೂ ಇತರೇ ಹುದ್ದೆಯಲ್ಲಿ ಇಡುತ್ತಿದ್ದರು. ಮಧುಕರ್ ಅವರನ್ನು ಹಲವಾರು ಬಾರಿ ವರ್ಗಾವಣೆ ಮಾಡಿ ಅವರನ್ನು ವಿಚಾರಣೆ ವಿಭಾಗದಿಂದ ದೂರವಿಟ್ಟಿದ್ದರು. ಆದ್ರೆ ಇದ್ಯಾವುದಕ್ಕೂ ಮಧುಕರ್ ಅಂಜದೆ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಒಬ್ಬ ವ್ಯಕ್ತಿಯಿಂದ ಭ್ರಷ್ಟರ ವಿರುದ್ಧ ಹೋರಾಡಲು ಆಗೋಲ್ಲ. ನಮ್ಮ ಜೊತೆ ಸರ್ಕಾರಿ ಅಧಿಕಾರಿಗಳು ಇರುತ್ತಾರೆ. ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಸಿಗುವಂತೆ ಮಾಡಿರುವ ಉತ್ತಮ ಅಧಿಕಾರಿ ಮುಧುಕರ್ ಅವರು ಅಂತ ನಾನು ತಿಳಿದಿದ್ದೇನೆ ಅಂದ್ರು.

    ಮಧುಕರ್ ಶೆಟ್ಟಿ ಅವರಂತಹ ದಕ್ಷ ಅಧಿಕಾರಿಗಳು ನನ್ನ ಅವಧಿಯಲ್ಲಿ ಸಿಕ್ಕಿದ್ದು ನನ್ನ ಭಾಗ್ಯ. ಅವರು ಲೋಕಾಯುಕ್ತದಲ್ಲಿ ಇದ್ದಿದ್ದು ಕೇವಲ 2 ವರ್ಷ ಮಾತ್ರ. ಆದ್ರೆ ಈ ಇಲಾಖೆಯಲ್ಲಿ ಅವರ ಕೊಡುಗೆ ಅಪಾರ ಎಂದು ಮಧುಕರ್ ಅವರ ಸಾಧನೆಯನ್ನು ನೆನೆದುಕೊಂಡು ಅವರ ಅಗಲಿಕೆಗೆ ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv