Tag: ಸಂತೋಷ್ ಪ್ರಕರಣ

  • ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

    ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

    ಮಂಗಳೂರು: ಸಚಿವ ಈಶ್ವರಪ್ಪ ಅವರು ರಾಜೀನಾಮೆ ನೀಡುವ ವಿಚಾರದ ಬಗ್ಗೆ ಅವರನ್ನು ಮುಖಾಮುಖಿ ಭೇಟಿಯಾದ ನಂತರ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಏನಾಗಿದೆ ಎಂದು ಗೊತ್ತಿಲ್ಲ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ವಿಚಾರದ ಬಗ್ಗೆ ಹೈಕಮಾಂಡ್‍ಗೂ ಎಲ್ಲಾ ವಿಚಾರ ಗೊತ್ತಿದೆ. ನಾನು ಕೂಡ ಹೇಳಿದ್ದೇನೆ, ಅವರಿಗೂ ಗೊತ್ತಿದೆ ಎಂದು ತಿಳಿಸಿದರು.

    ಈಶ್ವರಪ್ಪ ವಿರುದ್ಧ ಎಫ್‍ಐಆರ್ ಆಗಿದೆ. ಈ ಬಗ್ಗೆ ಎಲ್ಲಾ ವಿವರಗಳನ್ನು ಪಡೆದುಕೊಂಡಿದ್ದೇನೆ. ಈ ಬಗ್ಗೆ ಈಶ್ವರಪ್ಪ ಅವರ ಹತ್ತಿರ ಮಾತನಾಡುತ್ತೇನೆ. ಫೋನ್‍ನಲ್ಲೂ ಕೆಲವು ವಿಚಾರ ಮಾತನಾಡಿದ್ದೇನೆ. ಅವರನ್ನು ಕರೆಸಿಯೂ ಕೆಲವು ವಿಚಾರವನ್ನು ಮತ್ತೆ ಮಾತನಾಡುತ್ತೇನೆ ಎಂದು ಹೇಳಿದರು.

    ಈಶ್ವರಪ್ಪ ರಾಜೀನಾಮೆ ನೀಡುವುದರ ಬಗ್ಗೆ ಹೈಕಮಾಂಡ್ ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಒನ್ ಟು ಒನ್ ಮಾತನಾಡಿದರೆ ಸ್ಪಷ್ಟವಾಗುತ್ತದೆ. ಘಟನೆಯ ಕುರಿತು ಹಾಗೂ ಎಫ್‍ಐಆರ್ ಆದ ನಂತರ ಏನಾಗಿದೆ ಎನ್ನುವುದರ ಕುರಿತು ಮುಖಾಮುಖಿ ಭೇಟಿಯಾಗಿ ಮಾತನಾಡುತ್ತೇನೆ. ವಿರೋಧ ಪಕ್ಷದವರು ಇದರಲ್ಲಿ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ತನಿಖೆ ನಂತರ ಸತ್ಯಾಂಶ ಹೊರಗೆ ಬರುತ್ತದೆ. ತನಿಖೆಯಲ್ಲಿ ಯಾರು ಇದರಲ್ಲಿ ಪಾತ್ರ ವಹಿಸಿದ್ದಾರೆ, ಮತ್ತು ಇದರ ಹಿನ್ನೆಲೆ ಏನು ಎನ್ನುವ ಎಲ್ಲಾ ಅಂಶಗಳು ಗೊತ್ತಾಗುತ್ತದೆ. ಕಾನೂನು ಪ್ರಕಾರ ತನಿಖೆ ನಡೆಯುತ್ತದೆ, ನಾವು ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ

    ಸದ್ಯ ಮೈಸೂರಿನಲ್ಲಿರುವ ಸಚಿವ ಈಶ್ವರಪ್ಪ ಅವರು ಬೆಂಗಳೂರಿಗೆ ತೆರಳಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಆಗಲಿದ್ದಾರೆ. ನಂತರ ಮಧ್ಯಾಹ್ನ ಕೆ.ಎಸ್. ಈಶ್ವರಪ್ಪ ಶಿವಮೊಗ್ಗಕ್ಕೆ ಹೋಗಿ ಅಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಪಕ್ಷಕ್ಕೆ ಮುಜುಗರ ತರಿಸಲ್ಲ, ರಾಜೀನಾಮೆ ಕೊಡ್ತೀನಿ: ಈಶ್ವರಪ್ಪ

  • ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ಕೊಡಲ್ಲ: ಬಿಎಸ್‍ವೈ

    ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆ ಕೊಡಲ್ಲ: ಬಿಎಸ್‍ವೈ

    ಬೆಳಗಾವಿ: ಸಚಿವ ಕೆ.ಎಸ್ ಈಶ್ವರಪ್ಪ ಅವರು ನನಗೆ ಏನೂ ಸಂಬಂಧ ಇಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಹೀಗಾಗಿ ನಾನು ಸಂತೋಷ್‌ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ಹೀಗಾಗಿ ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.

    ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಕ್ಕೆ ಮಾತನಾಡಿದ ಅವರು, ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಈಶ್ವರಪ್ಪ ನನಗೆ ಏನೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ತನಿಖೆ ಮಾಡಿಸುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ. ತನಿಖೆ ವರದಿ ಬಂದ ಬಳಿಕ ವಾಸ್ತವ ಹೊರಬರಲಿದೆ. ನಾನು ಕೂಡ ಸಿಎಂ ಜೊತೆಗೆ ಮಾತನಾಡಿದ್ದೇನೆ. ಸಿಎಂ ಕೂಡ ತನಿಖೆ ಆಧರಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ ಕೊಲೆ, ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಬೇಕು: ಜಯಶ್ರೀ ಪಾಟೀಲ್

    ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ಪರ್ಸೆಂಟ್ ಆರೋಪ ಮಾಡಿದ್ದ ಬೆಳಗಾವಿ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಧ್ಯಮದ ಪ್ರತಿನಿಧಿಗಳಿಗೆ ವಾಟ್ಸಪ್ ಸಂದೇಶ ರವಾನಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುತ್ತೆಗೆದಾರ ಸಂತೋಷ್ ಡೆತ್‍ನೋಟ್‍ನಲ್ಲಿ ಈಶ್ವರಪ್ಪ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇದನ್ನೂ ಓದಿ: ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ಸೂಚನೆ

  • ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

    ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

    ಬೆಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ನೇರ ಕಾಣರಾದ್ದರಿಂದ ಅವರನ್ನು ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಕೇಸ್ ದಾಖಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಈಶ್ವರಪ್ಪ ಅವರೇ ಸಾವಿಗೆ ಕಾರಣ ಎಂದು ನೇರ ಆರೋಪ ಮಾಡಿರುವ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಈಶ್ವರಪ್ಪ ಅವರ ವಿರುದ್ಧ ಸೆಕ್ಷನ್ 302 ರಡಿ ಕೇಸ್ ದಾಖಲಿಸಬೇಕು ಮತ್ತು ತಕ್ಷಣ ಈಶ್ವರಪ್ಪ ಅವರನ್ನು ಬಂಧಿಸಬೇಕು. ಈ ಕೂಡಲೇ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

    ಕೊಲೆ ಆರೋಪ ಎದುರಿಸುತ್ತಿರುವ ಈಶ್ವರಪ್ಪ ಅವರು ಸಚಿವ ಸಂಪುಟದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಕಾಶ ನೀಡಬಾರದು. ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಬಹುದು, ಆದ್ದರಿಂದ ಇದೊಂದು ಗಂಭೀರ ಪ್ರಕರಣವಾಗಿದೆ. ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ

    ಅಷ್ಟೇ ಅಲ್ಲದೇ ಇದೊಂದು ಭ್ರಷ್ಟಾಚಾರ ಪ್ರಕರಣವೂ ಆಗಿದೆ. ಸಂತೋಷ್ ಪಾಟೀಲ್ ಅವರು ಈಗಾಗಲೇ ಈಶ್ವರಪ್ಪ ಅವರಿಗೆ ಕಮಿಷನ್ ನೀಡಿದ್ದರು. ಗುತ್ತಿಗೆ ಕಾಮಗಾರಿಯ ಬಾಕಿ ಅನುದಾನ ಬಿಡುಗಡೆ ಮಾಡಲು ಸಚಿವರು ಹೆಚ್ಚಿನ ಕಮಿಷನ್‍ಗೆ ಬೇಡಿಕೆ ಇಟ್ಟಿದ್ದಾರೆ. ಆತನಿಗೆ ಈ ಹಣ ಹೊಂದಿಸಲು ಸಾಧ್ಯವಾಗದ ಕಾರಣಕ್ಕೆ ಮನನೊಂದು ಸಂತೋಷ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಿದರು.

    ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದಕ್ಕೂ, ಇದಕ್ಕೂ ಯಾವುದೇ ಸಂಬಂಧವಿಲ್ಲ. ಆತ್ಮಹತ್ಯೆಗೆ ಶರಣಾಗುವ ಮುನ್ನ ಆತ ಈಶ್ವರಪ್ಪ ಅವರೇ ನನ್ನ ಸಾವಿಗೆ ನೇರ ಕಾರಣ ಎಂದು ಆರೋಪ ಮಾಡಿರುವುದರಿಂದ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವರ್ಕ್‌ ಆರ್ಡರ್‌ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್‌ – ಆತ್ಮಹತ್ಯೆಗೆ ಕಾರಣ ಏನು?

    ಈಗ ಈಶ್ವರಪ್ಪ ಅವರು ಏನು ಪ್ರತಿಕ್ರಿಯೆ ಕೊಡುತ್ತಾರೆ ಎನ್ನುವುದು ಮುಖ್ಯವಲ್ಲ, ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮಾಡಿರುವ ಆರೋಪ ಮುಖ್ಯ. ಹಾಗಾಗಿ ಈಶ್ವರಪ್ಪ ಅವರ ಮೇಲೆ ಸೆಕ್ಷನ್ 302 ರಡಿ ಕೊಲೆ ಪ್ರಕರಣ ದಾಖಲಿಸಿ, ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.

    ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು. ಸಂಪುಟದಿಂದ ವಜಾಗೊಳಿಸಿ ಅವರ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು. ಇವ್ಯಾವುದನ್ನು ಅವರು ಮಾಡಿಲ್ಲ. ಈ ಬಗ್ಗೆ ನಾವು ಧ್ವನಿ ಎತ್ತುತ್ತೇವೆ. ಈಶ್ವರಪ್ಪ ಹೇಳಿಕೆಗೆ ನಾವು ಮಹತ್ವ ನೀಡಲ್ಲ, ಅವರೊಬ್ಬ ಕೊಲೆ ಆರೋಪ ಹೊತ್ತಿರುವ ವ್ಯಕ್ತಿ, ಅವರು ಎಷ್ಟು ದೊಡ್ಡ ಭ್ರಷ್ಟ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.