Tag: ಸಂತೋಷ್ ಪಾಟೀಲ್

  • ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

    ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ

    ಬೆಳಗಾವಿ: ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡುವುದು ರಾಕ್ಷಸ ಪ್ರವೃತ್ತಿ ಆಗಿದ್ದು, ಇದೇ ರೀತಿ ಎಲ್ಲಾ ಇಲಾಖೆಯಲ್ಲೂ ಕಮಿಷನ್ ಆರೋಪ ನಡೆಯುತ್ತಿದೆ. ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಅನೇಕ ಆರೋಪ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಅರುಣ್ ಸಿಂಗ್ ಸಮರ್ಥರಾಗಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿಗೆ ಆಸ್ತಿಯಾಗಿದ್ದರು. ನಾವ್ಯಾರು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಇದು ವಾಸ್ತವ ಎಂದು ಹೇಳಿದರು. ಇದನ್ನೂ ಓದಿ: ಮಗನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಾಯಿ

    ಗ್ರಾಪಂ ಅಧ್ಯಕ್ಷ ಹೇಳಿದ್ದು ಸತ್ಯ. ಈಶ್ವರಪ್ಪ ಹೇಳದೇ ಯಾರು ಕೆಲಸ ಮಾಡಲು ಆಗಲ್ಲ. ಸಚಿವರ ಸೂಚನೆ ಮೇಲೆ ಕೆಲಸ ಮಾಡಿದ್ದಾರೆ. ವರ್ಕ್ ಆರ್ಡರ್ ಕೊಟ್ಟಿಲ್ಲ. ಸಾಲ ಸೋಲ ಮಾಡಿ ಸಂತೋಷ್ ಕೆಲಸ ಮಾಡಿದ್ದಾನೆ. ಪತ್ನಿಯ ಒಡವೆಯನ್ನು ಅಡಯಿಟ್ಟು ಸಾಲ ಮಾಡಿದ್ದಾರೆ. ಈಶ್ವರಪ್ಪ ಪಿಎಗಳು ಕಮಿಷನ್ ಕೇಳಿದ್ದಾರೆ. ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸೂಲಿ ಮಾಡುವುದು ರಾಕ್ಷಸ ಪ್ರವೃತ್ತಿಯಾಗಿದೆ. ಎಲ್ಲಾ ಇಲಾಖೆಯಲ್ಲಿ ಕಮಿಷನ್ ಆರೋಪ ನಡೆಯುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್‌ನಲ್ಲಿ 50 ಲೀಟರ್ ಮದ್ಯ ಸಾಗಿಸುತ್ತಿದ್ದ ಚಾಲಾಕಿ ಬಂಧನ

    ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದು ಅನೇಕ ಆರೋಪ ಮಾಡಿದ್ದಾರೆ. ಪ್ರಧಾನಿ ಸೇರಿ ಅನೇಕ ನಾಯಕರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಕ್ರಮ ವಹಿಸಿ ಎಂದು ಸಿಎಂಗೆ ಹೇಳಿದ್ದಾರೆ. ನಾವು ಇದನ್ನು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೇಳಿದ್ದೇವು. ನಮಗೆ ಅವಕಾಶ ಸಿಗಲಿಲ್ಲ. ಬೆತ್ತಲೆ ಆಗುತ್ತೇವೆ ಎನ್ನುವ ಭಯ ಬಿಜೆಪಿಗೆ ಇದೆ. ಈಶ್ವರಪ್ಪನ ಭಂಡ, ಮಾನ ಮರ್ಯಾದೆ ಇಲ್ಲದೇ ಇರುವವರಿಗೆ ಏನು ಹೇಳೊಕೆ ಆಗಲ್ಲ ಎಂದು ಕಿಡಿಕಾರಿದರು.

  • ಕಾಂಗ್ರೆಸ್‌ನವರ ಟೊಳ್ಳು ಬೆದರಿಕೆಗೆ ಯಾವುದೇ ಸಚಿವರು ಅಂಜುವುದಿಲ್ಲ: ಸುಧಾಕರ್

    ಕಾಂಗ್ರೆಸ್‌ನವರ ಟೊಳ್ಳು ಬೆದರಿಕೆಗೆ ಯಾವುದೇ ಸಚಿವರು ಅಂಜುವುದಿಲ್ಲ: ಸುಧಾಕರ್

    – ಕಾಂಗ್ರೆಸ್‌ನವರು ಭ್ರಷ್ಟಾಚಾರದ ಪಿತಾಮಹರು, ತೇಜೋವಧೆಗೆ ಸೊಪ್ಪು ಹಾಕುವುದಿಲ್ಲ
    – ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದಾಳವಾಗಿ ಬಳಕೆ

    ಚಿಕ್ಕಬಳ್ಳಾಪುರ: ಗುತ್ತಿಗೆದಾರ ಸಂತೋಷ್ ಸಾವಿನಲ್ಲಿ ರಾಜಕೀಯ ಬೆರೆಸಿ, ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ತೇಜೋವಧೆ ಮಾಡುವ ಪ್ರಯತ್ನವನ್ನು ಕಾಣದ ಕೈಗಳು ಮಾಡುತ್ತಿವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಇಲ್ಲಿ ದಾಳವಾಗಿ ಬಳಕೆಯಾಗಿದ್ದಾರೆ. ಕಾಂಗ್ರೆಸ್‌ನವರ ಈ ರೀತಿಯ ಟೊಳ್ಳು ಬೆದರಿಕೆಗೆ ಯಾವುದೇ ಸಚಿವರು ಅಂಜುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, ಗುತ್ತಿಗೆದಾರ ಮೃತರಾಗಿರುವುದಕ್ಕೆ ದುಃಖವಿದೆ. ಆದರೆ ಈ ಸಾವು ಏಕೆ ಸಂಭವಿಸಿದೆ ಎಂಬುದು ತನಿಖೆ ಆಗದೆ ಸಚಿವರ ರಾಜೀನಾಮೆ ಕೇಳುವುದು ಸರಿಯಲ್ಲ. ಈ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಕೂಡ ಬೇಕಿಲ್ಲ. ಕಾಂಗ್ರೆಸ್‌ನವರು ಎಷ್ಟು ಸತ್ಯ ಹರಿಶ್ಚಂದ್ರರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನವರು ಯಾವ ಇಲಾಖೆಯಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಅಂಕಿ ಅಂಶಗಳನ್ನು ನಾವು ಕೂಡ ಕೊಡಬಹುದು ಎಂದರು. ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಮಾಡ್ಕೋಳ್ಳೋದಿದ್ರೆ ತಮ್ಮ ಜಿಲ್ಲೆಯಲ್ಲೇ ಮಾಡ್ಕೋಬೇಕಿತ್ತು: ಸೋಮಲಿಂಗ ಸ್ವಾಮೀಜಿ

    ಓರ್ವ ವ್ಯಕ್ತಿ ಬರೆದ ಅನಾಮಧೇಯ ಪತ್ರ ಅಥವಾ ಆಧಾರ ರಹಿತ ದೂರಿಗೆ ಮಾನ್ಯತೆ ನೀಡಲು ಸಾಧ್ಯವಿಲ್ಲ. ದಾಖಲೆಗಳೇ ಇಲ್ಲದೆ ಒಬ್ಬರನ್ನು ಗೇಲಿ ಮಾಡುವುದು ಅಥವಾ ಆರೋಪ ಮಾಡುವುದು ಸರಿಯಲ್ಲ. ನಮ್ಮ ಸರ್ಕಾರ ಬಹಳ ಪಾರದರ್ಶಕವಾಗಿ ನಡೆದುಕೊಳ್ಳುತ್ತಿದೆ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಇಡೀ ದೇಶದಲ್ಲಿ ಭ್ರಷ್ಟಾಚಾರವನ್ನು ಹುಟ್ಟುಹಾಕಿದ ಪಿತಾಮಹರೇ ಕಾಂಗ್ರೆಸ್ಸಿಗರು. ಭ್ರಷ್ಟಾಚಾರದ ಜನಕರೇ ಕಾಂಗ್ರೆಸ್‌ನವರು ಎಂದು ಕಿಡಿಕಾರಿದರು.

    ಪ್ರಧಾನಿ ನರೇಂದ್ರ ಮೋದಿ ಪಾರದರ್ಶಕತೆ, ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿ ಹೇಗೆ ಕೆಲಸ ಮಾಡಬೇಕೆಂದು ಅವರು ತೋರಿಸಿಕೊಟ್ಟಿದ್ದಾರೆ. ಭ್ರಷ್ಟಾಚಾರ ಇಲ್ಲ ಎಂದು ಕೂಡ ನಾನು ಹೇಳುತ್ತಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಭ್ರಷ್ಟಾಚಾರ ಹುಟ್ಟಿರುವುದಲ್ಲ. ಇದರ ನಿರ್ಮೂಲನೆಗೆ ಎಲ್ಲಾ ಪಕ್ಷಗಳು ಸೇರಿ ಚರ್ಚೆ ಮಾಡಬೇಕಿದೆ. ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಹಾಗೂ ನಿರ್ಮೂಲನೆ ಮಾಡುವುದೇ ಈಗಿನ ಸವಾಲು ಎಂದು ತಿಳಿಸಿದರು.

    ತನಿಖಾ ವರದಿ ಬರಲಿ:
    ಕಾಂಗ್ರೆಸ್‌ನವರು ಏನು ಮಾಡುತ್ತಾರೆ ಎಂಬುದು ಈಗ ಮುಖ್ಯವಲ್ಲ. ತನಿಖೆ ನಂತರ ಸತ್ಯ ತಿಳಿದುಬರಲಿದೆ ಹಾಗೂ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಹಿಂದೆ ನಡೆದ ಡಿವೈಎಸ್‌ಪಿ ಗಣಪತಿ ಪ್ರಕರಣವೇ ಬೇರೆ, ಈಗಿನ ವಿಚಾರವೇ ಬೇರೆ. ವಾಟ್ಸಾಪ್‌ನಲ್ಲಿ ಬಂದ ಸಂದೇಶ ಅವರಿಂದಲೇ ಬಂದಿದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ತನಿಖೆ ನಡೆಯುತ್ತಿರುವುದರಿಂದ ಕಾದು ನೋಡಬೇಕಿದೆ. ಸಾರ್ವಜನಿಕ ಬದುಕಿನಲ್ಲಿರುವ ಸಚಿವ ಈಶ್ವರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಇದರಲ್ಲಿ ಸಿಲುಕಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ತನಿಖಾ ವರದಿ ಬಂದ ಬಳಿಕ ಪಕ್ಷದ ಮಟ್ಟದಲ್ಲಿ ಚರ್ಚಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

    ಮಾನನಷ್ಟ ಮೊಕದ್ದಮೆ:
    ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆದ್ದರಿಂದ ಅವರು ಪುರಾವೆ ಇಟ್ಟುಕೊಂಡು ಸರ್ಕಾರದ ವಿರುದ್ಧ ಆರೋಪ ಮಾಡಬೇಕಾಗುತ್ತದೆ. ಆಧಾರ ರಹಿತವಾಗಿ ಅವರು ಆರೋಪ ಮಾಡಿದ್ದು, ಅವರ ವಿರುದ್ಧ ಕ್ರಮ ವಹಿಸಬೇಕು ಹಾಗೂ ಅವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ. ಇದರೊಂದಿಗೆ ಅವರ ವಿರುದ್ಧ ವೈಯಕ್ತಿಕವಾಗಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಇಂತಹವರನ್ನು ಮುಂದೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದ್ದು, ಅವರೆಲ್ಲರಿಗೂ ನಾಚಿಕೆಯಾಗಬೇಕು. ಎಲ್ಲಾ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಇದು ಕಾಂಗ್ರೆಸ್‌ನವರಿಗೂ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಪರ್ಸೆಂಟೇಜ್ ಬಗ್ಗೆ ಟೈಂ ಬಂದಾಗ ಹೇಳ್ತಿನಿ: ಹೆಚ್.ಡಿ.ರೇವಣ್ಣ

    ಸರ್ಕಾರ ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ, ಗಂಭೀರವಾಗಿ ತನಿಖೆ ಮಾಡಲಿದೆ. ಇಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಆದರೆ ಯಾರೋ ಆರೋಪ ಮಾಡುವುದನ್ನು ಪರಿಗಣಿಸಲಾಗುವುದಿಲ್ಲ. ಈ ರೀತಿ ಮಾಡಿದರೆ ಇದೇ ಪರಂಪರೆ ಹೆಚ್ಚುತ್ತದೆ. ಬಡ ಜನರನ್ನು ಎತ್ತಿ ಕಟ್ಟಿ ಸಚಿವರ ವಿರುದ್ಧ ಮಾತನಾಡಲು ಕುಮ್ಮಕ್ಕು ನೀಡಲಾಗುತ್ತಿದೆ. ಆಮಿಷ ತೋರಿಸಿ ಅಮಾಯಕರ ಜೀವ ಕಳೆದರೆ ವಿಪಕ್ಷದ ವಿರುದ್ಧವೂ ತನಿಖೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ತನಿಖೆಗೆ ಸಿಎಂಗೆ ಮನವಿ:
    ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ಸಚಿವರು ಮಾಡಿದ ಭ್ರಷ್ಟಾಚಾರದ ವಿರುದ್ಧ ತನಿಖೆ ಮಾಡಿಸಬೇಕಿದೆ. ಚಾರ್ಜ್ ಶೀಟ್ ಕೂಡ ದಾಖಲಿಸಬೇಕಿದೆ. ಈ ಘಟನೆಯಿಂದ ರಾಜ್ಯ ಹಾಗೂ ಸರ್ಕಾರದ ಗೌರವ ಹಾಳಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋರಲಾಗುವುದು ಎಂದು ಸುಧಾಕರ್ ಹೇಳಿದರು.

    ಚುನಾವಣೆ ಸಮಯದಲ್ಲಿ ಅಧಿಕಾರಕ್ಕೆ ಬರುವ ತಿರುಕನ ಕನಸನ್ನು ಕಾಂಗ್ರೆಸ್ ಕಾಣುತ್ತಿದೆ. ಈ ರೀತಿ ಆರೋಪಗಳನ್ನು ಮಾಡಿದರೆ ಕಾನೂನು ಹೋರಾಟ ನಡೆಸಲಾಗುವುದು. ಗುತ್ತಿಗೆದಾರರು ಆಧಾರ ರಹಿತವಾಗಿಯೇ ಎಲ್ಲಾ ಆರೋಪಗಳನ್ನು ಮಾಡಿದ್ದಾರೆ. ಇವರೆಲ್ಲರೂ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

  • ಪರ್ಸೆಂಟೇಜ್ ಬಗ್ಗೆ ಟೈಂ ಬಂದಾಗ ಹೇಳ್ತಿನಿ: ಹೆಚ್.ಡಿ.ರೇವಣ್ಣ

    ಪರ್ಸೆಂಟೇಜ್ ಬಗ್ಗೆ ಟೈಂ ಬಂದಾಗ ಹೇಳ್ತಿನಿ: ಹೆಚ್.ಡಿ.ರೇವಣ್ಣ

    ಹಾಸನ: ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ತೇರಿನಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭಾಗಿಯಾಗಿದ್ದರು. ಈ ವೇಳೆ ಚನ್ನಕೇಶವಸ್ವಾಮಿಗೆ ಪೂಜೆ ಸಲ್ಲಿಸಿ ರಾಜ್ಯದ ಜನತೆಗೆ, ರೈತರಿಗೆ ಒಳ್ಳೆಯ ಆರೋಗ್ಯ ಕೊಡಲಿ ಎಂದು ಪೂಜೆ ಸಲ್ಲಿಸಿದರು.

    ಪೂಜೆಯಲ್ಲಿ ಭಾಗಿಯಾದ ನಂತರ ಬೇಲೂರಿನಲ್ಲಿ ಮಾತನಾಡಿದ ಅವರು, ಒಳ್ಳೆಯ ಮಳೆ, ಬೆಳೆ ಆಗಿ ರೈತರು ಸಮೃದ್ಧಿಯಾಗಿರಲಿ. ಭಗವಂತ ರಾಜ್ಯ, ಜಿಲ್ಲೆಯ ಜನತೆಗೆ ಆರೋಗ್ಯ ಕೊಡಲಿ. ಯಾವುದೇ ಕಷ್ಟಕ್ಕೆ ಸಿಗದಂತೆ ಕಾಪಾಡಲಿ ಎಂದು ಸೌಮ್ಯ ಚನ್ನಕೇಶವಸ್ವಾಮಿಯನ್ನು ಬೇಡಿದ್ದೇವೆ. ರಾಜ್ಯದಲ್ಲಿ ಶಾಂತಿ ವಾತಾವರಣ ನೆಲೆಸಬೇಕು. ಯಾವುದೇ ಕಾರಣಕ್ಕೂ ಕೋಮುಗಲಭೆಗಳಿಗೆ ಅವಕಾಶ ಕೊಡಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಹಳದಿ ಶೆರ್ವಾನಿ ಹಾಕಿಕೊಂಡು ಆಲಿಯಾ-ರಣಬೀರ್ ಅರಿಶಿಣ ಶಾಸ್ತ್ರಕ್ಕೆ ಹೊರಟ ಕರಣ್ ಜೋಹರ್

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ಕೊಡುವ ಪರಿಸ್ಥಿತಿ ನಾನಗಿಲ್ಲ. ರಾಜ್ಯ ಸರ್ಕಾರಯಿದೆ. ಅದರ ಬಗ್ಗೆ ತೀರ್ಮಾನ ಮಾಡುತ್ತೆ, ಅದು ಅವರಿಗೆ ಬಿಟ್ಟ ವಿಷಯ. ಅದರ ಬಗ್ಗೆ ಮಾತನಾಡುವ ಮಟ್ಟಕ್ಕೆ ನಾವು ಬೆಳೆದಿಲ್ಲ. ಪರ್ಸೆಂಟೇಜ್ ಬಗ್ಗೆ ಟೈಂ ಬಂದಾಗ ಹೇಳ್ತಿನಿ ಎಂದು ತಿಳಿಸಿದರು.

    ಹಿಂದೂ, ಮುಸ್ಲಿಂ ಬೇರೆಯಲ್ಲ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ನಡೆದುಕೊಳ್ಳಬೇಕು. ಯಾರೋ ಪುಣ್ಯಾತ್ಮರು ಹಿಂದೆ ನಡೆಸಿಕೊಂಡು ಬಂದಿರುವ ಹಾದಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಯಾವುದೇ ಗಲಭೆಗಳಿಗೆ ಅವಕಾಶ ಕೊಡಬೇಡಿ ಎಂದು ರಾಜ್ಯ ಸರ್ಕಾರವನ್ನು ಕೋರುತ್ತೇನೆ ಎಂದರು. ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಕಡೆ ಹೆಚ್ಚು ಗಮನಕೊಡಿ ಎಂದು ರಾಜ್ಯ ಸರ್ಕಾರವನ್ನು ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಬಾಲಿವುಡ್‍ನತ್ತ ಗೂಗ್ಲಿ ಡೈರೆಕ್ಟರ್: ಬಾಲಿವುಡ್ ಸ್ಟಾರ್ ಪರಂಬ್ರತ ಚಟ್ಟೋಪಾಧ್ಯಾಯಗೆ ಪವನ್ ಒಡೆಯರ್ ಆಕ್ಷನ್ ಕಟ್ 

  • ಸಾವಿನ ಮನೇಲಿ ರಾಜಕಾರಣ ಮಾಡೋ ಅನಿವಾರ್ಯ ಅರುಣ್ ಸಿಂಗ್ ಅವರಿಗಿದೆ, ನಮಗಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ಸಾವಿನ ಮನೇಲಿ ರಾಜಕಾರಣ ಮಾಡೋ ಅನಿವಾರ್ಯ ಅರುಣ್ ಸಿಂಗ್ ಅವರಿಗಿದೆ, ನಮಗಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ಅರುಣ್ ಸಿಂಗ್ ಅವರಿಗೆ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವ ಅನಿವಾರ್ಯವಿದೆ, ಆದರೆ ಕಾಂಗ್ರೆಸ್ ಪಕ್ಷದವರಿಗೆ ಅದರ ಅನಿವಾರ್ಯವಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

    ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಅಂತ ಆಗ್ರಹಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದನ್ನೂ ಓದಿ: IPL ಬೆಟ್ಟಿಂಗ್ ದಾಳಿ ವೇಳೆ ಪೊಲೀಸರಿಗೆ ಹೆದರಿ ಓಡುವಾಗ ವ್ಯಕ್ತಿ ಬಿದ್ದು ಸಾವು

    Eshwarappa

    ಈ ವೇಳೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ನಗರದ ಆರ್‌ಟಿಓ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿದರು. ಪ್ರತಿಭಟನೆಯಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಅಶೋಕ ಪಟ್ಟಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರಿಂದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಾಗಿದೆ. ಇವತ್ತು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕುಟುಂಬದ ಜೊತೆಗೆ ನಿಂತಿದೆ, ಇದು ರಾಜಕೀಯವಲ್ಲ. ಸಾವಿನ ಮನೆಯಲ್ಲಿ ರಾಜಕಾರಣ ಮಾಡುವ ಅನಿವಾರ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ ಎಂದರು. ಇದನ್ನೂ ಓದಿ: ಮಸೀದಿಯಿಂದ ಧ್ವನಿವರ್ಧಕ ತೆಗೆಸುವುದು ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿ: ಸಂಜಯ್‌ ನಿರುಪಮ್‌

    ಸದ್ಯ ನನಗೆ ಬಂದಿರುವ ಮಾಹಿತಿ ಪ್ರಕಾರ ಕೆ.ಎಸ್.ಈಶ್ವರಪ್ಪನವರ ಮಗ ಮತ್ತೊಬ್ಬ ಪ್ರಭಾವಿ ಶಾಸಕರು ಸಂತೋಷ್‍ಗೆ ಧಮ್ಕಿ ಹಾಕಿದ್ದಾರೆ. ಆ ಮೆಸೇಜ್ ಕೂಡ ನನಗೆ ಬಂದಿದೆ. ನಮ್ಮ ಪಕ್ಷದ ಹಿರಿಯ ನಾಯಕರು ಬಂದ ಮೇಲೆ ಆ ಪ್ರಭಾವಿ ಶಾಸಕನ ಹೆಸರನ್ನು ಬಹಿರಂಗ ಮಾಡುತ್ತಾರೆ ಎಂದು ಹೇಳಿದರು.

    ಅರುಣ್ ಸಿಂಗ್ ಅವರಿಗೆ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವ ಅನಿವಾರ್ಯವಿದೆ. ಭ್ರಷ್ಟಾಚಾರ, ಬೆಲೆ ಏರಿಕೆ ಮುಖವಾಡ ಡೈವರ್ಟ್ ಮಾಡಲು ಶಿವಮೊಗ್ಗದಲ್ಲಿ 144 ಸೆಕ್ಸನ್ ಇದ್ದರೂ ಈಶ್ವರಪ್ಪ ಮೆರವಣಿಗೆಯಲ್ಲಿ ಭಾಗಿಯಾಗಿ ರಾಜಕೀಯ ಬಣ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಎಎಪಿ ಪ್ರತಿಭಟನೆ

    ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಎಎಪಿ ಪ್ರತಿಭಟನೆ

    ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಸಂಬಂಧಿಸಿ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ನೂರಾರು ಕಾರ್ಯಕರ್ತರು ನಗರದ ಶಿವಾನಂದ ವೃತ್ತದಿಂದ ಬೃಹತ್ ಪ್ರತಿಭಟನೆ ನಡೆಸಿದರು.

    ಪ್ರತಿಭಟನಾನಿರತ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರು ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕುಮಾರಕೃಪಾದಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಸಾಗುತ್ತಿದ್ದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ವಶಕ್ಕೆ ಪಡೆದು ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದರು. ಇದನ್ನೂ ಓದಿ: ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್

    ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರಿದ್ದ ಸಂತೋಷ್ ಪಾಟೀಲ್‍ರವರಿಗೆ ನ್ಯಾಯ ಸಿಗಬೇಕೆಂದರೆ ಶೀಘ್ರವೇ ಈಶ್ವರಪ್ಪನವರ ಬಂಧನವಾಗಬೇಕು. ರಾಜ್ಯ ಸಚಿವ ಸಂಪುಟದಲ್ಲಿ ಈಶ್ವರಪ್ಪನವರು ಪ್ರಭಾವಿ ಸಚಿವರಾಗಿದ್ದು, ಈ ಕೂಡಲೇ ಅವರನ್ನು ಬಂಧಿಸದಿದ್ದರೆ ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವ ಸಾಧ್ಯತೆ ದಟ್ಟವಾಗಿದೆ. ಆರೋಪಿ ಈಶ್ವರಪ್ಪನವರನ್ನು ಬಂಧಿಸುವ ಬದಲು ಆಮ್ ಆದ್ಮಿ ಪಾರ್ಟಿ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರ ನಡೆ ಖಂಡನೀಯ ಎಂದು ಹೇಳಿದರು. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

    ಸಂತೋಷ್ ಸಾವಿಗೆ ಈಶ್ವರಪ್ಪನವರೇ ಕಾರಣವೆಂದು ಡೆತ್‍ನೋಟ್‍ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದರೂ ಈಶ್ವರಪ್ಪನವರ ಬಂಧನವಾಗಿಲ್ಲ. ಸಚಿವರನ್ನು ಬಂಧಿಸದಿದ್ದರೆ ಜನಸಾಮಾನ್ಯರಿಗೇ ಒಂದು ಕಾನೂನು, ಸಚಿವರಿಗೆ ಮತ್ತೊಂದು ಕಾನೂನು ಇದೆ ಎಂಬ ತಪ್ಪು ಸಂದೇಶ ಸಮಾಜಕ್ಕೆ ಹೋಗಲಿದೆ. ಸಚಿವ ಸಂಪುಟದಿಂದ ಈಶ್ವರಪ್ಪನವರನ್ನು ಹೊರಹಾಕಿ, ಅವರನ್ನು ಬಂಧಿಸಿದಿದ್ದರೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಮೋಹನ್ ದಾಸರಿ ಹೇಳಿದರು.

    ಆಮ್ ಆದ್ಮಿ ಪಾರ್ಟಿ ನಾಯಕರಾದ ಜಗದೀಶ್ ವಿ ಸದಂ, ಚನ್ನಪ್ಪಗೌಡ ನೆಲ್ಲೂರು, ಕುಶಲಸ್ವಾಮಿ, ಉಷಾ ಮೋಹನ್, ಪ್ರಕಾಶ್ ನೆಡುಂಗಡಿ, ಸೀತಾರಾಮ್, ನಂಜಪ್ಪ ಕಾಳೇಗೌಡ, ಗೋಪಿನಾಥ್, ಕುದ್ರತ್, ಜಗದೀಶ್ ಬಾಬು, ಅಬ್ಬಾಸ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.

  • ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಈಶ್ವರಪ್ಪ

    ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಈಶ್ವರಪ್ಪ

    ಶಿವಮೊಗ್ಗ: ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೂ ಹಾಗೂ ನಳಿನ್ ಕುಮಾರ್ ಕಟೀಲ್‌ಗೂ ತಿಳಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಸ್ಪಷ್ಟಪಡಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರ ಆರೋಪಕ್ಕೆ ನಾನು ರಾಜೀನಾಮೆ ನೀಡಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ.  ಇದರಿಂದಾಗಿ ರಾಜೀನಾಮೆ ನೀಡಲ್ಲ. ಈ ಬಗ್ಗೆ ಈಗಾಗಲೇ ಸಿಎಂ ಬೊಮ್ಮಾಯಿ ಹಾಗೂ ಕಟೀಲ್‌ಗೂ ಹೇಳಿದ್ದೇನೆ. ಬೊಮ್ಮಾಯಿ ಅವರನ್ನು ನಾಳೆ ಅಥವಾ ನಾಡಿದ್ದು ಭೇಟಿ ಆಗುತ್ತೇನೆ ಎಂದು ಹೇಳಿದರು.

    ವಾಟ್ಸಪ್‌ ಸಂದೇಶದ ಬಗ್ಗೆ ತನಿಖೆ ಆಗಬೇಕು. ಸಂತೋಷ್‌ ಅವರೇ ಡೆತ್‌ನೋಟ್‌ ಬರೆದಿಲ್ಲ ಎಂದ ಅವರು, ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ  ಕೇಂದ್ರದ ಯಾವುದೇ ನಾಯಕರು ನನ್ನೊಂದಿಗೆ ಮಾತನಾಡಿಲ್ಲ. ಇದನ್ನೂ ಓದಿ: ನಕಲಿ ಡೆತ್ ನೋಟ್ ಇಟ್ಕೊಂಡು ಗೊಡ್ಡು ಬೆದರಿಕೆ ಹಾಕಿದ್ರೆ ಹೆದರಲ್ಲ: ಈಶ್ವರಪ್ಪ

    ದೆಹಲಿಯ ಪ್ರಧಾನಿ ಕಚೇರಿಗೆ, ಅಮಿತ್ ಶಾ ಕಚೇರಿಗೆ ನೋಟಿಸ್ ಕೊಟ್ಟಿದ್ದರು. ಕೇಂದ್ರ ನೀಡಿದ್ದ ಸ್ಪಷ್ಟನೆಗೆ ಆ ಬಗ್ಗೆ ಉತ್ತರ ನೀಡಿದ್ದೇನೆ. ಆಗ ಕಾಮಗಾರಿಗಳಿಗೆ ಟೆಂಡರ್‌ ನೀಡುವುದರಲ್ಲಿ ಕೆಲವು ನಿಯಮಗಳಿರುತ್ತವೆ. ಅವುಗಳನ್ನು ನೀಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಈಶ್ವರಪ್ಪರನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಗೋಪಾಲಯ್ಯ

    ಖಾಸಗಿ ಚಾನೆಲ್‌ ಅವರು ನಡೆಸಿದ್ದ ಸಂದರ್ಶನದಲ್ಲಿ ಆ ಕಾಪಿ ಮೊನ್ನೆ ನನಗೆ ಸಿಕ್ಕಿದೆ. ಅದನ್ನು ತೆಗೆದುಕೊಂಡು ನಾನು ಗುತ್ತಿಗೆದಾರ ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಮಾನನಷ್ಟ ಮೊಕದ್ದಮೆ ಹಾಕಿದ್ದಕ್ಕೆ ಸಂತೋಷ್‌ ಅವರಿಗೆ ಕೋರ್ಟ್ ನೋಟಿಸ್ ಕೊಟ್ಟಿದೆ ಎಂದ ಅವರು, ಯಾಕೆ ಹೆದರಿದರು ಎನ್ನುವುದು ನನ್ನ ಪ್ರಶ್ನೆ ಎಂದರು. ಇದನ್ನೂ ಓದಿ: ಪರ್ಸೆಂಟೇಜ್ ಕೊಡದಿದ್ದರೆ ಗುದ್ದಲಿ ಪೂಜೆನೂ ಮಾಡಲ್ಲ: ಸಿದ್ದಣ್ಣ ಶೇಗಜಿ

    ಕಾಂಗ್ರೆಸ್‌ ಆರೋಪಗಳಿಗೆ ನಾನು ಹೆದರುವುದಿಲ್ಲ. ಇಂತಹ ನೂರು ಕೇಸ್‌ಗಳನ್ನು ನೋಡಿದ್ದೇನೆ. ಷಡ್ಯಂತ್ರ ಮಾಡಿದವರ ವಿರುದ್ಧ ಶಿಕ್ಷೆಯಾಗಬೇಕು. ನಾನು ಸಂತೋಷ್‌ ಪಾಟೀಲ್‌ ಮುಖವನ್ನು ಕೂಡ ನೋಡಿಲ್ಲ. ದಾಖಲೆ ಸಮೇತವಾಗಿ ಮಾತನಾಡುತ್ತಿದ್ದೇನೆ. ಈ ದಾಖಲೆಯನ್ನು ಕಟೀಲ್‌ ಅವರಿಗೆ ನೀಡಿದ್ದೇನೆ. ರಾಜಕಾರಣದಲ್ಲಿ ಮಾತನಾಡುವವರಿಗೆ ರಾಜಕಾರಣದಲ್ಲಿ ಉತ್ತರ ನೀಡಿದ್ದೇನೆ.

  • ಈಶ್ವರಪ್ಪರನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಗೋಪಾಲಯ್ಯ

    ಈಶ್ವರಪ್ಪರನ್ನು ಸಮರ್ಥಿಸಿಕೊಂಡ ಸಿ.ಟಿ ರವಿ, ಗೋಪಾಲಯ್ಯ

    – ಈಶ್ವರಪ್ಪ ದೊಡ್ಡ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ

    ಚಿಕ್ಕಮಗಳೂರು/ಮೈಸೂರು: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಅತ್ಮಹತ್ಯೆಗೆ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಅಲ್ಲದೆ ಕೆಲವೆಡೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ಕೂಡ ನಡೆಯುತ್ತಿವೆ. ಆದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಸಚಿವ ಗೋಪಾಲಯ್ಯ ಸಮರ್ಥಿಸಿಕೊಂಡಿದ್ದಾರೆ.

    ESHWARAPPA

    ಈಶ್ವರಪ್ಪ ಅವರ ಮೇಲೆ ಬಂದಿರುವ ಆರೋಪ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ರಾಜೀನಾಮೆ ಕೇಳೋದು ಸ್ವಾಭಾವಿಕ. ನಾವು ವಿಪಕ್ಷದಲ್ಲಿದ್ರೂ ಅದೇ ಮಾಡ್ತಾ ಇದ್ವಿ. ಸಿಎಂ ಬೊಮ್ಮಾಯಿ, ಈಶ್ವರಪ್ಪ ಇದ್ದಾರೆ. ಅವರು ವಯಸ್ಸು ಅನುಭವ ಎರಡರಲ್ಲೂ ದೊಡ್ಡವರು. ಸಾರ್ವಜನಿಕ ಜೀವನದಲ್ಲಿ ಅನಿರ್ವಾಯವಾಗಿ ತಲೆಕೊಡುವ ಪರಿಸ್ಥಿತಿ ಬರುತ್ತದೆ. ಸಿಎಂ ಮತ್ತು ಈಶ್ವರಪ್ಪ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

    ಸಾರ್ವಜನಿಕ ಸಂಶಯ ದೂರಾಗಿಸಲು ಸಿಎಂ, ಈಶ್ವರಪ್ಪ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷದಿಂದ ಯಾವುದೇ ಸೂಚನೆ ನೀಡಿಲ್ಲ. ಮೇಲ್ನೋಟಕ್ಕೆ ಈಶ್ವರಪ್ಪ ಅವರ ಪಾತ್ರ ಕಂಡುಬಂದಿಲ್ಲ. ನಾನು ಹೇಳಿದ್ರೆ ಯಾರೂ ನಂಬಲ್ಲ. ನಾನು ತನಿಖಾ ಏಜೆನ್ಸಿಯಲ್ಲ. ಕಾಂಗ್ರೆಸ್, ಬೇರೆಯವರು ದಾಖಲೆ ಇದ್ರೆ ತನಿಖಾ ಏಜೆನ್ಸಿ ಮುಂದೆ ಸಲ್ಲಿಸಲಿ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸ್ತಾರೆ ಎಂದು ಸವಾಲು ಹಾಕಿದರು.

    ಸಂತೋಷ್ ಪಾಟೀಲ್ ಸಾವು ದುರದೃಷ್ಟಕರ. ಯಾವುದೇ ಜೀವಕ್ಕೂ ಬೆಲೆ ಇರುತ್ತೆ. ಅವರು ಆತ್ಮಹತ್ಯೆ ದಾರಿ ಹಿಡಿಯಬಾರದಿತ್ತು. ಸಮಗ್ರ ತನಿಖೆಯಾಗಬೇಕು ಸಿಎಂಗೆ ಮನವಿ ಮಾಡ್ತೇನೆ. ಈ ಹಿಂದೆ ಪತ್ರ ಸಂಬಂಧ ಈಶ್ವರಪ್ಪ ಜೊತೆ ಮಾತನಾಡಿದ್ದೆ. ವರ್ಕ್ ಅರ್ಡರ್ ತೆಗೆದುಕೊಂಡಿಲ್ಲ, ಸ್ಯಾಂಕ್ಷನ್ ಅರ್ಡರ್ ಇಲ್ಲ. ಅಧಿಕಾರಿಗಳ ಹತ್ರ ಮಾತನಾಡಿದೆ, ಅವರು ಕೆಲಸ ಮಾಡಿದ್ದೇನೆ ಅಂತಿದ್ದಾರೆ. ವರ್ಕ್ ಅರ್ಡರ್ ಇಲ್ಲದೆ ಹೇಗೆ ಪೇಮೆಂಟ್ ಮಾಡೋದು ಅಂತಿದ್ದಾರೆ ಎಂದು ವಿವರಿಸಿದರು.

    ESHWARAPPA

    ಅಧಿಕಾರಿಗಳು ಹೇಳಿದ್ದಾರೆ ಎಂದು ಈಶ್ವರಪ್ಪ ಅವರು ನನ್ನ ಗಮನಕ್ಕೆ ತಂದಿದ್ದರು. ಜನರ ಪ್ರೀತಿಗಳಿಸಲು ಜಾತ್ರೆ ಎಂದು ಕೆಲಸ ಮಾಡಿರುವ ಸಾಧ್ಯತೆಯಿದೆ. ಆದರೆ ಸರ್ಕಾರ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು. ವರ್ಕ್ ಆರ್ಡರ್ ಇಲ್ಲದೆ ಬಿಲ್ ಕೊಡೋಕೆ ಸಾಧ್ಯವಿಲ್ಲ. ಯಾರ ಮಾತು ಕೇಳಿ ಕೆಲಸ ಮಾಡಿದ ತನಿಖೆಯಿಂದ ಗೊತ್ತಾಗಬೇಕು. ಕೋಟ್ಯಂತರ ರೂ. ಕೆಲಸವನ್ನು ಪಿಸ್ ವರ್ಕ್ ಕೆಲಸ ಮಾಡಿಸಿದ್ದಾರೆ ಎಂದು ಹೇಳೋಕಾಗಲ್ಲ. ವರ್ಕ್ ಆರ್ಡರ್ ಇಲ್ಲದೆ ಕೆಲಸ ಯಾಕೆ ಮಾಡಿದ್ರು ಹೇಗೆ ಮಾಡಿದ್ರು. ಈ ಸಮಗ್ರ ತನಿಖೆಗೆ ಆಗ್ರಹಿಸ್ತೇನೆ ಎಂದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ

    ಜೆಡಿಎಸ್ ಭದ್ರಕೋಟೆ ಹಾಸನ‌ ಜಿಲ್ಲೆಯ ಉಸ್ತುವಾರಿ ಯಾಗಿ ಸಚಿವ ಕೆ.ಗೋಪಾಲಯ್ಯ ನೇಮಕ | Minister K Gopalya Appointedn as a in charge of Hassan– News18 Kannada

    ಇತ್ತ ಮೈಸೂರಿನಲ್ಲಿ ಸಚಿವ ಸಚಿವ ಗೋಪಾಲಯ್ಯ ಅವರು ಪ್ರತಿಕ್ರಿಯಿಸಿದ್ದು, ಈಶ್ವರಪ್ಪ ಅವರು ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ. ಅವರ ವಿರುದ್ಧ ದೊಡ್ಡ ಪಿತೂರಿ ನಡೆಸಲಾಗಿದೆ. ಈಶ್ವರಪ್ಪ ಜೊತೆ ನಾವೆಲ್ಲರೂ ಇರ್ತೀವಿ. ಅವನಿಗೆ ಯಾರು ಫ್ಲೈಟ್ ಟಿಕೆಟ್ ಮಾಡಿಕೊಟ್ಟಿದ್ದು. ಉಡುಪಿಗೆ ಹೋಗಿ ಯಾಕೆ ಆತ್ಮಹತ್ಯೆ ಮಾಡಿಕೊಂಡ. ಕಂಟ್ರಾಕ್ಟರ್ ಸಂತೋಷ್ ದೆಹಲಿಗೆ ಯಾಕೆ ಹೋದ ಎಂದು ಪ್ರಶ್ನೆ ಕೇಳಿದ್ದು, ಅವನ ಜೊತೆ ಯಾರ್ಯಾರು ಇದ್ರು ಹೀಗೆ ಎಲ್ಲವೂ ಬಯಲಿಗೆ ಬರುತ್ತೆ. ಒಂದಂತೂ ಸ್ಪಷ್ಟ ಈಶ್ವರಪ್ಪ ದೊಡ್ಡ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ ಎಂದು ಈಶ್ವರಪ್ಪ ಪರ ಅವರು ಬ್ಯಾಟಿಂಗ್ ಮಾಡಿದರು.

  • ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ

    ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ

    ಬೆಳಗಾವಿ: ಯಾವುದೇ ಕಾರಣಕ್ಕೂ ಈಶ್ವರಪ್ಪನವರು ರಾಜೀನಾಮೆ ಕೊಡಬಾರದು ಎಂದು ಹೇಳುವ ಮೂಲಕ ಸಚಿವ ಈಶ್ವರಪ್ಪ ಪರ‌ ಸಚಿವ ಮುರುಗೇಶ್ ನಿರಾಣಿ ಬ್ಯಾಟಿಂಗ್ ಮಾಡಿದ್ದಾರೆ.

    ESHWARAPPA

    ನಗರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್‌ನಲ್ಲಿ ಸಚಿವ ಈಶ್ವರಪ್ಪ ಮೇಲೆ ಬಂದಿರೋ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ಈಶ್ವರಪ್ಪ ಅವರ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಟೆಂಡರ್‌ಗೆ ಅದರದೇ ಆದ ಪ್ರಕ್ರಿಯೆ ಇದೆ. ಜಾಹೀರಾತು ನೀಡುವುದು, ಸರ್ಕಾರ ಆರ್ಡರ್ ಮಾಡೋದು ಹೀಗೆ ಹಲವು ಪ್ರಕ್ರಿಯೆಗಳಿವೆ. ಈ ಕೇಸ್‌ನಲ್ಲಿ ಇದ್ಯಾವುದೂ ನಡೆದೇ ಇಲ್ಲ. ಕಾಂಗ್ರೆಸ್‌ನವರು ಈಶ್ವರಪ್ಪ ಮೇಲೆ ಮಾಡುತ್ತಿರುವ ಆಪಾದನೆ ರಾಜಕೀಯ ಪ್ರೇರಿತವಾಗಿದೆ. ಯಾವುದೇ ಕಾರಣಕ್ಕೂ ಈಶ್ವರಪ್ಪನವರು ರಾಜೀನಾಮೆ ಕೊಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ಮುಜುಗರ ತರಿಸಲ್ಲ, ರಾಜೀನಾಮೆ ಕೊಡ್ತೀನಿ: ಈಶ್ವರಪ್ಪ

    ಸಚಿವ ಈಶ್ವರಪ್ಪ ವಿರುದ್ಧ ಯಾವುದೇ ಸಾಕ್ಷಿ ಇಲ್ಲದೇ ಆಪಾದನೆ ಮಾಡುವುದು ಸರಿಯಲ್ಲ. ಯಾರೋ ಒಬ್ಬರು ಬಂದು ಆಪಾದನೆ ಮಾಡಿದ ತಕ್ಷಣ ಈ ರೀತಿ ಲಿಂಕ್ ಮಾಡೋದು ಸರಿಯಲ್ಲ. ಸಂತೋಷ್ ನಮ್ಮ ಕಾರ್ಯಕರ್ತ ಇರಬಹುದು. ಸಾಕಷ್ಟು ಜನ ಇರ್ತಾರೆ. ಆದರೆ ಇಷ್ಟು ಹಣ ಕೊಡುವುದಿತ್ತು ಅಂತ ಹೇಳುವುದು ಸರಿಯಲ್ಲ. ತನಿಖೆ ವೇಳೆ ಸತ್ಯಾಸತ್ಯತೆ ತಿಳಿಯುತ್ತದೆ. ಪೊಲೀಸರು ತನಿಖೆ ಮಾಡಿ ರಿಪೋರ್ಟ್ ಸಲ್ಲಿಸುತ್ತಾರೆ. ತನಿಖೆ ವೇಳೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ ಕೊಲೆ, ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಬೇಕು: ಜಯಶ್ರೀ ಪಾಟೀಲ್

    ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ ಕೊಲೆ, ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಬೇಕು: ಜಯಶ್ರೀ ಪಾಟೀಲ್

    ಬೆಳಗಾವಿ: ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ, ಕೊಲೆಯಾಗಿದ್ದು ಗಂಡನ ಸಾವಿಗೆ ಕಾರಣವಾದ ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮೃತ ಸಂತೋಷ ಪತ್ನಿ ಜಯಶ್ರೀ ಪಾಟೀಲ್ ಕಿಡಿಕಾರಿದರು.

    ನಗರದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಗಂಡನ ಸಾವು ಆತ್ಮಹತ್ಯೆ ಅಲ್ಲ ಕೊಲೆ. ಗಂಡನ ಸಾವಿಗೆ ಕಾರಣವಾದ ಈಶ್ವರಪ್ಪನಿಗೆ ತಕ್ಕ ಶಿಕ್ಷೆಯಾಗಬೇಕು. ಈಶ್ವರಪ್ಪ ಕೇಳಿರುವ ಕಮಿಷನ್ ಬಗ್ಗೆ ನನ್ನ ಮುಂದೆ ಹೇಳಿಕೊಂಡಿದ್ದರು. 4 ಕೋಟಿ ಕಾಮಗಾರಿ ಮಾಡಿದ್ದೇನೆ. ಈಶ್ವರಪ್ಪ 40% ಕಮಿಷಿನ್ ಕೇಳುತ್ತಿದ್ದಾರೆ. 40% ಕಮಿಷನ್ ಕೊಟ್ಟರೆ ನಾನು ಸಂಪೂರ್ಣ ಹಾಳಾಗುತ್ತೇನೆ ಎನ್ನುತ್ತಿದ್ದರು.

    ಮೈಮೇಲೆ ಇದ್ದ ಬಂಗಾರ ಅಡವಿಟ್ಟು 108 ಕಾಮಗಾರಿ ಮಾಡಿಸಿದರು. ಬಿಲ್ ಬಂದ ಮೇಲೆ ಬಂಗಾರ ಆಭರಣಗಳನ್ನು ಬಿಡಿಸಿ ಕೊಡುತ್ತೇನೆ ಅಂತಾ ಹೇಳಿದ್ದರು. ಆತ್ಮಹತ್ಯೆಗೂ ಮುನ್ನ ಸಂಜೆ ಏಳು ಗಂಟೆಗೆ ನನ್ನ ಮತ್ತು ಮಗನ ಜೊತೆಗೆ ಚೆನ್ನಾಗಿಯೇ ಮಾತನಾಡಿದ್ದರು. ನೆಟ್‍ವರ್ಕ್ ಸಿಗುತ್ತಿಲ್ಲ ಬೆಳಗ್ಗೆ ಮಾತನಾಡುತ್ತೇನಿ ಅಂತ ನನ್ನ ಜೊತೆಗೆ ನಗು, ನಗುತ್ತಲೇ ಮಾತನಾಡಿದ್ದರು. ಬೆಳಗ್ಗೆ ಫೋನ್ ಮಾಡಿದರೆ ಫೋನ್ ರಿಸೀವ್ ಮಾಡಲಿಲ್ಲ. ಬೇರೆಯವರ ಮೂಲಕ ವಿಷಯ ಗೊತ್ತಾಯಿತು ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ – ಈಶ್ವರಪ್ಪ ವಿರುದ್ಧ ಎಫ್‍ಐಆರ್ ದಾಖಲು

    ಸಾಲಸೋಲ ಮಾಡಿ ಸ್ವ ಗ್ರಾಮದಲ್ಲಿ ಕನಸಿನ ಮನೆಯನ್ನು ಕಟ್ಟಿಸಿದ್ದರು. ಅದು ಅವರ ಕನಸಿನ ಮನೆ ಆಗಿತ್ತು. ಅದಕ್ಕೆ ಕನಸ್ಸು ಅಂತಾನೇ ಹೆಸರು ಇಟ್ಟಿದ್ದರು. ಕಾಮಗಾರಿ ಬಿಲ್ ಬರುತ್ತದೆ. ಮನೆ ಗೃಹಪ್ರವೇಶ ಮಾಡೋಣ ಎಂದು ಹೇಳುತ್ತಿದ್ದರು. ಆದರೀಗ ಎಲ್ಲವನ್ನು ಬಿಟ್ಟು ಹೋಗಿದ್ದಾರೆ. ನನ್ನ, ನನ್ನ ಮಗನನ್ನು ಅನಾಥರಾಗಿ ಮಾಡಿದ್ದಾರೆ. ನಮಗೆ ನ್ಯಾಯ ಬೇಕು. ಸಚಿವ ಈಶ್ವರಪ್ಪಗೆ ಶಿಕ್ಷೆ ಆಗಲೇಬೇಕು ಎಂದು ದುಃಖ ತೋಡಿಕೊಂಡರು.

    ಇದೇ ವೇಳೆ ಮಾತಾನಾಡಿದ ಮೃತ ಸಂತೋಷ ತಾಯಿ, ನನ್ನ ಮಗ ಬೇಕು, ನನ್ನ ಮಗನನ್ನು ತಂದು ಕೊಡಿ ಅಂತ ಕಣ್ಣೀರು ಹಾಕಿದರು. ನನ್ನನ್ನು ಮಮ್ಮಿ ಮಮ್ಮಿ ಎಂದು ಕರೆಯುವ ಮಗ ವಾಪಸ್ ಬರುತ್ತಾನಾ? ಬಿಲ್ ಆಗುತ್ತಿಲ್ಲ ಅಮ್ಮ, ಬಿಲ್ ಮಾಡಿಸಿಕೊಂಡು ಬರುತ್ತೇನೆ ಅಂತ ಹೇಳಿದ್ದನು. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂತ ವ್ಯಕ್ತಿ ಅಲ್ಲ. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಬಿಗಿಪಟ್ಟು- ಇಂದು ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

  • ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ಸೂಚನೆ

    ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಹೈಕಮಾಂಡ್ ಸೂಚನೆ

    ಬೆಂಗಳೂರು: ಉಡುಪಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೆಸರು ಕೇಳಿಬರುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಿದೆ.

    ಹೈಕಮಾಂಡ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಅಲ್ಲದೆ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಚಿವರು ಮೈಸೂರು ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಂದು ಮಧ್ಯಾಹ್ನ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ. ಇತ್ತ ಮಂಗಳೂರು ಪ್ರವಾಸದಲ್ಲಿರುವ ಸಿಎಂ ಮಧ್ಯಾಹ್ನ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.

    ಕಳೆದ ರಾತ್ರಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ದೆಹಲಿಯಲ್ಲಿ ಅಮಿತ್ ಶಾ ಜೊತೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಕರಣ ರಾಜ್ಯದಲ್ಲಿ ಸರ್ಕಾರ ಮತ್ತು ಪಕ್ಷದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಮಾಹಿತಿ ಪಡೆದುಕೊಂಡ ಬಳಿಕ ಹೈಕಮಾಂಡ್ ಈಶ್ವರಪ್ಪ ರಾಜೀನಾಮೆಗೆ ಸೂಚನೆ ಕೊಟ್ಟಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.  ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ – ಈಶ್ವರಪ್ಪ ವಿರುದ್ಧ ಎಫ್‍ಐಆರ್ ದಾಖಲು

    ಇಂದು ಬೆಳಗ್ಗೆ ಹೈಕಮಾಂಡ್ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮಾತುಕತೆ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮೂಲಕ ಹೈಕಮಾಂಡ್ ಗೆ ವಿವರಣೆ ನೀಡಲಾಗಿದೆ. ಈಶ್ವರಪ್ಪ ಅವರಿಂದ ವಿವರಣೆ ಪಡೆದು ಹೈಕಮಾಂಡ್ ಗೆ ರವಾನೆ ಮಾಡಲಾಗಿದೆ. ಈಶ್ವರಪ್ಪ ವಿವರಣೆಗೆ ಹೈಕಮಾಂಡ್ ಗರಂ ಆಗಿದೆ. ಇದನ್ನೂ ಓದಿ: ವರ್ಕ್‌ ಆರ್ಡರ್‌ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್‌ – ಆತ್ಮಹತ್ಯೆಗೆ ಕಾರಣ ಏನು?

    ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಮಾಧ್ಯಮ ಪತ್ರಿನಿಧಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೋಮವಾರ ತಡರಾತ್ರಿ ವಾಟ್ಸಪ್ ಮೆಸೇಜ್ ಮಾಡಿದ್ದರು. ತಮ್ಮ ವಾಟ್ಸಪ್ ಸಂದೇಶದ್ಲಿ, ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ್ದರು. ಈಶ್ವರಪ್ಪ ಅವರಿಗೆ ಶಿಕ್ಷೆಯಾಗಬೇಕು. ನನ್ನೆಲ್ಲಾ ಆಸೆ ಬದಿಗೊತ್ತಿ ಆತ್ಮಹತ್ಯೆ ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು, ಬಿ.ಎಸ್.ಯಡಿಯೂರಪ್ಪ ಸಹಾಯ ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

    ಪತ್ರದ ಸಾರಾಂಶ:
    ನನ್ನ ಸಾವಿಗೆ ನೇರ ಕಾರಣ ಗ್ರಾಮೀಣ ಅಭಿವೃದ್ಧಿ ಪಂಚಾಯಿತ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ. ಕರ್ನಾಟಕ ಸರ್ಕಾರ ಇವರಿಗೆ ತಕ್ಕ ಶಿಕ್ಷೆ ಆಗಬೇಕು. ನನ್ನೆಲ್ಲಾ ಆಸೆಗಳನ್ನು ಬದಿಗೋತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಹಾಗೆ ಅವರಿವರೆನ್ನದೇ ಎಲ್ಲರು ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ನನ್ನ ಗೆಳಯರಾದ ಸಂತೋಷ್ ಮತ್ತು ಪ್ರಶಾಂತ್‍ಗೆ ನಾನು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡ ಬಂದಿರುತ್ತೇನೆ ಅಷ್ಟೇ. ಅವರಿಗೂ ನನ್ನ ಸಾವಿಗೂ ಯಾವುದೇ ಸಂಬಂಧ ಇರುವುದಿಲ್ಲ ಎಂದಿದ್ದರು.