ಬೆಳಗಾವಿ: ನನ್ನ ಸಿಡಿ ಪ್ರಕರಣ ಹಾಗೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ಬೆಳಗಾವಿ ತಾಲೂಕಿನ ಬಡಸ ಗ್ರಾಮದ ಸಂತೋಷ್ ಮನೆಗೆ ಭೇಟಿ ನೀಡಿದ ರಮೇಶ್ ಜಾರಕಿಹೊಳಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕೇಸ್ ಹಿಂದೆಯೂ ‘ಮಹಾನಾಯಕ’ನ ತಂಡ ಕೆಲಸ ಮಾಡುತ್ತಿದೆ. ಹೆಸರು ಹೇಳುವುದು ಬೇಡ. ನನ್ನ ಸಿಡಿ ಕೇಸ್‌ನಲ್ಲಿ ಇದ್ದ ತಂಡವೇ ಸಂತೋಷ ಕೇಸ್‌ನಲ್ಲೂ ಇದೆ. ನನ್ನ ಸಿಡಿ ಕೇಸ್ ಮತ್ತು ಸಂತೋಷ್ ಕೇಸ್‌ನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಂತೋಷ್ ಕೇಸ್ ಹಿಂದೆಯೂ ‘ಮಹಾನಾಯಕ’ ಇದ್ದಾನೆ: ರಮೇಶ್ ಜಾರಕಿಹೊಳಿ
ಸಚಿವ ಕೆ.ಎಸ್.ಈಶ್ವರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು. ಅವರು ತಪ್ಪು ಮಾಡಿದ್ದರೆ ಗಲ್ಲು ಶಿಕ್ಷೆಯಾಗಲಿ. ಷಡ್ಯಂತ್ರಕ್ಕೆ ಸಿಲುಕಿ ನಾನು ಒಂದು ವರ್ಷದಿಂದ ನೋವು ಅನುಭವಿಸಿದ್ದೇನೆ. ಈಶ್ವರಪ್ಪ ಅವರು ತಪ್ಪು ಮಾಡಿದ್ದರೆ ಕೋರ್ಟ್ ಬೇಕಾದ ಶಿಕ್ಷೆ ಕೊಡಲಿ ಎಂದು ಹೇಳಿದ್ದಾರೆ.
ಬೆಳಗಾವಿ: ನನ್ನ ವಿರುದ್ಧದ ಸಿಡಿ ಪ್ರಕರಣದಂತೆಯೇ, ಗುತ್ತಿಗೆದಾರ ಸಂತೋಷ್ ಪಾಟೀಲ್ ಕೇಸ್ ಹಿಂದೆಯೂ ‘ಮಹಾನಾಯಕ’ ಇದ್ದಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ಸಂತೋಷ್ ಪಾಟೀಲ್ ನನ್ನ ಹಳೆಯ ಕಾರ್ಯಕರ್ತ. ಸೋಮವಾರ ಸುದ್ದಿಗೋಷ್ಠಿ ಮಾಡಿ ಎಲ್ಲವನ್ನೂ ಬಿಚ್ಚಿಡುತ್ತೇನೆ. ಈ ಕೇಸ್ ಹಿಂದೆಯೂ ಮಹಾನಾಯಕ ಇದ್ದಾನೆ. ನನ್ನ ಸಿಡಿ ಕೇಸ್‌ನಲ್ಲಿ ಇದ್ದ ಮಹಾನಾಯಕನ ತಂಡ ಸಂತೋಷ ಕೇಸ್‌ನಲ್ಲೂ ಇದೆ. ಆ ನಾಯಕನ ಟೀಂ ಇಲ್ಲಿ ಕೆಲಸ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಯಾವಾಗ? – ಬಿಜೆಪಿಯ ನೈತಿಕತೆ ಎಲ್ಲಿ ಹೋಯ್ತು?
ಸಂತೋಷ್ ಪಾಟೀಲ್ ನನ್ನ ಹಳೆಯ ಕಾರ್ಯಕರ್ತ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ನನ್ನ ಜೊತೆ ಇದ್ದ ಮನುಷ್ಯ. ಬಿಜೆಪಿಯಲ್ಲಿದ್ದಾಗ ಬಿಜೆಪಿಯಲ್ಲಿ ಕೆಲಸ ಮಾಡಿದ. ಈಶ್ವರಪ್ಪ, ನನ್ನ ವಿರುದ್ಧ ಸೇಮ್ ಟೀಮ್ ಷಡ್ಯಂತ್ರ ಮಾಡಿದೆ. ಹೈಕಮಾಂಡ್ ನಾಯಕರ ಅನುಮತಿ ಪಡೆದು ಸುದ್ದಿಗೋಷ್ಠಿ ನಡೆಸುತ್ತೇನೆ ಎಂದಿದ್ದಾರೆ.
ಕೋಲಾರ: ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ. ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜೀನಾಮೆ ಅನ್ನೋದು ಗೌರವಯುತವಾದ ಪದ. ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಈ ದೇಶದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ರೈಲ್ವೇ ಅಪಘಾತವಾಗಿ ಅಷ್ಟೂ ಜನ ಸತ್ತಾಗ ರಾಜೀನಾಮೆ ಕೊಟ್ಟರು. ಯಶೋದಮ್ಮ ದಾಸಪ್ಪನವರು ಕೂಡ ರಾಜೀನಾಮೆ ಕೊಡ್ತಾರೆ. ಅಷ್ಟು ಗೌರವಯುತವಾದ ಪದವನ್ನು ಇವರಿಗೆ ಬಳಸುವುದು ಬೇಡ. ಇವರು ರಾಜೀನಾಮೆ ಕೊಡುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬ್ಯಾರಿಕೇಡ್ ಹತ್ತಿ ಪೊಲೀಸರ ಮೇಲೆ ಡಿಕೆಶಿ ಜಂಪ್
ಇವರನ್ನು ವಜಾಗೊಳಿಸಬೇಕು. ಈಗಾಗಲೆ ಈಶ್ವರಪ್ಪ ರಾಜೀನಾಮೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ. ಅದನ್ನು ಬಿಡಿ ಬಿಡಿಯಾಗಿ ಹೇಳುವ ಅವಶ್ಯಕತೆ ಇಲ್ಲ. ದೇಶದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಜೀವಂತ ಇರುವವರೆಗೂ ಅವಕಾಶ ನೀಡಲ್ಲ. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಬಿಡುವುದಿಲ್ಲ. ನಾವು ಕಳೆದು ಹೋದ ಮೇಲೆ ಏನಾಗುತ್ತೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಮಧ್ಯೆ ಪ್ರದೇಶ, ಬಿಹಾರ ಬಿಡಿ ರಾಜ್ಯದಲ್ಲಿ ಸಾಮರಸ್ಯದಿಂದ ಬದುಕುತ್ತೇವೆ. ಯಾರು ಏನೇ ಪ್ರಯತ್ನ ಮಾಡಿದರೂ ಅಲ್ಪಸಂಖ್ಯಾತರು, ಧೀನದಲಿತರು, ಬಡವರನ್ನು ಗೌರವಯುತವಾಗಿ ಕರೆದುಕೊಂಡು ಹೋಗುತ್ತೇವೆ. ಪ್ರಾಣ ತ್ಯಾಗ ಮಾಡಲು ನಾವು ಮೊದಲು ನಿಂತಿರುತ್ತೇವೆ. ನಾವು ಸತ್ತರೆ ಅವರಿಗೇನಾದ್ರು ತೊಂದರೆಯಾಗಬಹುದು. ನಾವು ಜೀವಂತವಿದ್ದರೆ ಅವರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮನ ಭಜನೆ ಮಾಡೋರ ಹೃದಯ ಇಷ್ಟೊಂದು ಕಠೋರವಾಯ್ತಾ: ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: 24 ಗಂಟೆ ರಾಮನ ಭಜನೆ ಮಾಡೋರು, ದೇವರ ಪೂಜಿಸುವವರ ಹೃದಯ ಇಷ್ಟೊಂದು ಕಠೋರವಾಯ್ತಾ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದರು.
ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಸಂತೋಷ್ ತಾಯಿ, ಪತ್ನಿ ಕುಟುಂಬಸ್ಥರು ಊಟ, ನಿದ್ರೆ ಇಲ್ಲದೇ ಸಂಕಷ್ಟದಲ್ಲಿದ್ದರು. ಹೀಗಾಗಿ ಸಮಾಧಾನದಿಂದ ಸಂತೋಷ್ ಅಂತ್ಯಕ್ರಿಯೆ ನಡೆಯಲಿ ಅಂತಾ ಸುಮ್ಮನಾಗಿದ್ದೇವೆ ಎಂದರು.
ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ. ಬಿಎಸ್‌ವೈ ಹಾಗೂ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಆದರೆ ಸೌಜನ್ಯಕ್ಕೂ ಹಾಗೂ ಮಾನವೀಯತೆ ದೃಷ್ಟಿಯಿಂದಲೂ ಯಾವೊಬ್ಬ ಬಿಜೆಪಿ ಮುಖಂಡನೂ ಇಲ್ಲಿ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಬಿಜೆಪಿ ಅವರು ಇಷ್ಟೊಂದು ಕಠೋರ ಆಗಿ ಬಿಟ್ರಾ ಎಂದು ಹರಿಹಾಯ್ದರು. ಇದನ್ನೂ ಓದಿ:ಪ್ರಾಥಮಿಕ ತನಿಖೆ ಮುಗಿಯುವವರೆಗೆ ಈಶ್ವರಪ್ಪ ವಿರುದ್ಧ ಕ್ರಮವಿಲ್ಲ: ಸಿಎಂ
ಕೊನೆಪಕ್ಷ ಸಂತೋಷ್ ಕುಟುಂಬಸ್ಥರಿಗೆ 4 ಕೋಟಿ ಕಾಮಗಾರಿ ಬಿಲ್ ತಕ್ಷಣ ರಿಲೀಸ್ ಮಾಡಿ, 1 ಕೋಟಿ ಪರಿಹಾರ ನೀಡಬೇಕು. ಸಂತೋಷ್ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಮನವಿ ಮಾಡಿದರು.
ನಿನ್ನೆ ಸಂತೋಷ್ ಮೃತದೇಹವನ್ನು ಪೋಸ್ಟಮಾರ್ಟ್‌ಂ ಮಾಡಿದ್ದರು. ಸಂತೋಷ್ ಮೊಬೈಲ್‍ನಲ್ಲಿ ಎಲ್ಲಾ ಸಾಕ್ಷ್ಯಗಳು ಸಿಕ್ಕಿದೆ ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಮೇಲೆ ಕೇಸ್ ದಾಖಲಾಗಿದೆ. ಆದರೆ ಅವರನ್ನು ಈವರೆಗೂ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಂತೋಷ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರಿಂದಲೇ ಹೈಡ್ರಾಮಾ
ಅವರನ್ನು ಬಂಧಿಸಲು ಮೊಬೈಲ್‍ನಲ್ಲಿ ಎಲ್ಲಾ ಸಾಕ್ಷಿ ಇದೆ. ಸಾಕ್ಷಿ ಏನಾದರೂ ತಿರುಚಲು ನಿಂತಿದ್ದೀರಾ? ಸಂತೋಷ್ ಮೃತರಾಗಿದ್ದಾರೆ. ಅವನು ಮರಳಿ ಬರುವುದಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈಶ್ವರಪ್ಪ ಅವರನ್ನು ಮಂತ್ರಿಗಿರಿಯಿಂದ ವಜಾ ಗೊಳಿಸುವುದಷ್ಟೇ ಅಲ್ಲ, ಈಶ್ವರಪ್ಪ ಅವರಿಗೆ ಶಿಕ್ಷೆ ಆಗಬೇಕು. ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಸಿಎಂ ಬಿಎಸ್‍ವೈ ಗಮನಕ್ಕೆ ಎಲ್ಲಾ ಇದೆ. ಬಿಎಸ್‍ವೈ ಕಟ್ಟಾ ಅಭಿಮಾನಿ, ನಮ್ಮ ಸಮಾಜದ ಹಿರಿಯ ಮುಖಂಡರು ಅಂತಾ ಅವರ ಹೆಸರು ಮೆಸೇಜ್‍ನಲ್ಲಿ ಉಲ್ಲೇಖಿಸಿದ್ದಾರೆ. ಯಡಿಯೂರಪ್ಪರವರು ಅಂತ್ಯಕ್ರಿಯೆಗೆ ಬರಬಹುದಾಗಿತ್ತು. ಹಿರಿಯರಿದ್ದಾರೆ ಇನ್ನೊಬ್ಬರನ್ನಾದರೂ ಕಳಿಸಬಹುದಾಗಿತ್ತು. ಅವರಿಗೆ ಪಕ್ಷ ಮುಖ್ಯ ಅಲ್ಲ, ರಾಜಕಾರಣ ಮುಖ್ಯ. ಈ ಹೊಲಸು ರಾಜಕಾರಣಕ್ಕೆ ಅದೆಷ್ಟು ಜನರ ಬಲಿ ಪಡೀತಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜಾತ್ಯಾತೀತವಾಗಿ ನಾವು ಒಂದೇ ಕೇಳ್ತಿದೀವಿ ಅವನು ಬಿಜೆಪಿ ಕಾರ್ಯಕರ್ತರೀ. ಅವನು ಸಾವನ್ನಪ್ಪಿದಾಗ ಕೊರಳಲ್ಲಿ ಕೇಸರಿ ಶಾಲು ಹಾಕಿಕೊಂಡಿದ್ದ. ಅಷ್ಟೊಂದು ಬಿಜೆಪಿ ಕಟ್ಟರ್ ಅಭಿಮಾನಿಗೆ ನಿಮ್ಮ ಮನಸ್ಸು ಕರಗಲಿಲ್ವಾ? ನಿಮ್ಮ ಹೊಲಸ್ಸು ರಾಜಕಾರಣ ಬದಿಗಿಡಿ ಅವರ ಕುಟುಂಬಕ್ಕೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ನಾಯಕರು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ತಡೆಯಲು ಹಾಕಿದ್ದ ಬ್ಯಾರಿಕೇಡ್ ಹತ್ತಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪೊಲೀಸರ ಮೇಲೆ ಜಂಪ್ ಮಾಡಿದ ಪ್ರಸಂಗ ನಡೆಯಿತು.
ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕು. ಇಲ್ಲವೇ ಸರ್ಕಾರ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಇಂದು ನಗರದಲ್ಲಿ ರ‍್ಯಾಲಿ ನಡೆಸಿದರು. ಇದೇ ವೇಳೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ರೇಸ್ ವ್ಯೂವ್ ಹೋಟೆಲ್ ಬಳಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ವೇಳೆ ಬ್ಯಾರಿಕೇಡ್ ಹತ್ತಿದ ಡಿಕೆಶಿ, ಪೊಲೀಸರ ಮೇಲೆಯೇ ಜಿಗಿದಿದ್ದಾರೆ. ತಕ್ಷಣ ಪೊಲೀಸರು, ಡಿ.ಕೆ.ಶಿವಕುಮಾರ್ ಕೆಳಗೆ ಬೀಳದಂತೆ ಹಿಡಿದುಕೊಂಡಿದ್ದಾರೆ. ನಂತರ ಎಲ್ಲರನ್ನೂ ವಶಕ್ಕೆ ಪಡೆದ ಘಟನೆ ನಡೆಯಿತು. ಇದನ್ನೂ ಓದಿ: ಪ್ರಾಥಮಿಕ ತನಿಖೆ ಮುಗಿಯುವವರೆಗೆ ಈಶ್ವರಪ್ಪ ವಿರುದ್ಧ ಕ್ರಮವಿಲ್ಲ: ಸಿಎಂ
ಕಾಂಗ್ರೆಸ್ ಭವನದಿಂದ ಹೊರಟ ಪ್ರತಿಭಟನಾಕಾರರು ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು, ಕಾಂಗ್ರೆಸ್ ನಾಯಕರ ಮನವೊಲಿಸಲು ಪ್ರಯತ್ನಿಸಿದರು. ಬೆಂಗಳೂರು ಕೇಂದ್ರ ಡಿಸಿಪಿ ಅನುಚೇತ್ ಸದಾಶಿವನಗರದಲ್ಲಿ ಡಿಕೆಶಿ ನಿವಾಸಕ್ಕೆ ಭೇಟಿ ಮಾಡಿದ್ದರು. ಆದರೆ ಅವರ ಮನವೊಲಿಕೆಗೆ ಬಗ್ಗದ ಕಾಂಗ್ರೆಸ್ ನಾಯಕರು ರ‍್ಯಾಲಿ ನಡೆಸಿದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದನ್ನೂ ಓದಿ:ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ
ಬೆಳಗಾವಿ: ಸಚಿವ ಕೆ.ಎಸ್.ಈಶ್ವರಪ್ಪ ಹೆಸರು ಬರೆದಿಟ್ಟು ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಅಂತ್ಯಕ್ರಿಯೆ ಬೆಳಗಾವಿ ತಾಲೂಕಿನ ಬಡಸ್ ಗ್ರಾಮದಲ್ಲಿ ನೆರವೇರಿತು.
ಕಾಂಗ್ರೆಸ್ ನಾಯಕರ ತೀವ್ರ ವಿರೋಧದ ನಡುವೆಯೂ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು. ಸಂತೋಷ್ ಪಾಟೀಲ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ಸಂತೋಷ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರಿಂದಲೇ ಹೈಡ್ರಾಮಾ
ಇಂದು ಗ್ರಾಮದಲ್ಲಿ ಮೂರು ಮದುವೆ ಇದ್ದ ಕಾರಣ ಅಂತ್ಯಕ್ರಿಯೆ ನೆರವೇರಿಸಿ ಎಂದು ಗ್ರಾಮಸ್ಥರು ಕೋರಿದರು. ಅಲ್ಲದೇ ಸಂಬಂಧಿಕರು ಕೂಡ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಕ್ಕಾಗಿ ಹೋರಾಟ ಮಾಡೋಣ. ಬಾಕಿ ಬಿಲ್ ಮಂಜೂರಾತಿ ಹಾಗೂ ಕುಟುಂಬಸ್ಥರ ಪರಿಹಾರಕ್ಕೆ ಸರ್ಕಾರಕ್ಕೆ ಆಗ್ರಹಿಸೋಣ. ಆದರೆ ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಡುವಂತೆ ಕೋರಿದರು. ಇದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು. ಬಳಿಕ ಗ್ರಾಮದಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಜಮೀನಿಗೆ ತರಲಾಯಿತು. ಲಿಂಗಾಯತ ವಿಧಿವಿಧಾನಗಳ ಮೂಲಕ ಸಂತೋಷ್ ಪಾಟೀಲ್ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಶವದ ಮುಂದೆ ಕಾಂಗ್ರೆಸ್ ಧರಣಿ
ವಿಧಿವಿಧಾನಗಳು ಮುಗಿಯುತ್ತಿದ್ದಂತೆ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಆಪ್ತ ಅಡಿವೇಶ ಇಟಗಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿದರು. ಪರಿಹಾರ ಘೋಷಣೆ ಮಾಡಬೇಕು ಹಾಗೂ ಬಾಕಿ ಬಿಲ್ ಮಂಜೂರಾತಿ ಮಾಡಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲೇ ಇರುವ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಇಲ್ಲವೇ ಬಿಜೆಪಿ ಮುಖಂಡರು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಇದನ್ನೂ ಓದಿ:ಸಂತೋಷ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆಗ್ರಹ
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಅಡಿವೇಶ ಇಟಗಿಗೆಗೆ ಸಾಥ್ ನೀಡಿದರು. ಗ್ರಾಮಸ್ಥರು ಪ್ರತಿಭಟನೆಯನ್ನು ವಿರೋಧಿಸಿದರು. ನ್ಯಾಯಕ್ಕಾಗಿ ಹೋರಾಡೋಣ, ಈಗ ಅಂತ್ಯಕ್ರಿಯೆ ನೆರವೇರಿಸೋಣ ಎಂದರು. ಅಡಿವೇಶ ಇಟಗಿಯನ್ನು ಎಳೆದು ಪಕ್ಕಕ್ಕ ಕರೆತರಲಾಯಿತು. ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜೆಸಿಬಿ ಮೂಲಕ ಶವದ ಮೇಲೆ ಮಣ್ಣು ಹಾಕಲಾಯಿತು.
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟಿಲ್ ಅಂತ್ಯಕ್ರಿಯೆ ವಿಚಾರದಲ್ಲಿ ಸಂಬಂಧಿಕರ ಮಧ್ಯೆಯೇ ಕೈ ಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಬಡಸ ಗ್ರಾಮದಲ್ಲಿ ನಡೆದಿದೆ.
ಸಂತೋಷ್ ಮೃತದೇಹವನ್ನು ಬೆಳಗಾವಿಯಲ್ಲಿರುವ ಅವರ ಮನೆ ಮುಂದೆ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಶಾಸಕಿ ಮಾತನಾಡಿ, ಸಂತೋಷ್ ಆತ್ಮಹತ್ಯೆಗೆ ನ್ಯಾಯ ಸಿಗಬೇಕು. ಜೊತೆಗೆ ಪರಿಹಾರ ಸಿಗಬೇಕು. ಅಲ್ಲಿಯವರೆಗೂ ಸಂತೋಷ್ ಅವರ ಮೃತದೇಹವನ್ನು ಕದಲಿಸುವುದು ಬೇಡಾ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಂತೋಷ್ ಸಂಬಂಧಿಗಳು ಅಂತ್ಯಕ್ರಿಯೆ ಮಾಡೋಣ. ಸಂತೋಷ್ ಮೃತದೇಹ ಇಟ್ಟು ಪ್ರತಿಭಟನೆ ಮಾಡುವುದು ಬೇಡ ಎಂದಿದ್ದರು. ಆ ಬಳಿಕ ಸಂತೋಷ್ ಪಾಟೀಲ್ ಸಂಬಂಧೀಕರ ಮಧ್ಯೆಯೇ ಕೈಕೈ ಮಿಲಾಯಿಸುವ ಹಂತಕ್ಕೆ ವಾಗ್ವಾದ ನಡೆದಿದೆ. ಕೂಡಲೇ ಅಲ್ಲಿದ್ದ ಗ್ರಾಮಸ್ಥರು ಮಧ್ಯಸ್ಥಿಕೆ ವಹಿಸಿ ಇಬ್ಬರನ್ನೂ ಶಾಂತ ಪಡಿಸಿದರು. ಇದನ್ನೂ ಓದಿ:ಸಂತೋಷ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆಗ್ರಹ
ಬೆಳಗಾವಿ ತಾಲೂಕಿನ ಬಡಸ ಗ್ರಾಮದ ಮನೆಯಿಂದ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಸಂತೋಷ್ ಪಾಟೀಲ್ ಅವರ ಮೃತದೇಹ ರವಾನೆ ಆಗಿದೆ. ಗ್ರಾಮದ ಹೊರವಲಯದ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲಿದ್ದು, ಲಿಂಗಾಯತ ವಿಧಿ ವಿಧಾನದಂತೆ ನೆರವೇರಲಿರುವ ಸಂತೋಷ ಪಾಟೀಲ್ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ:ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಪಿ ಹೋಟೆಲ್‍ನಲ್ಲಿ ಪಂಚನಾಮೆ
ಬೆಂಗಳೂರು: ಸಂತೋಷ್ ಪಾಟೀಲ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಇಲ್ಲವಾದಲ್ಲಿ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಸಾವಿಗೆ ಸರ್ಕಾರವೇ ನೇರ ಹೊಣೆ. ಸಂತೋಷ್ ಮಾಡಿಸಿರುವ ಕಾಮಗಾರಿ ಮೊತ್ತವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಸಂತೋಷ್ ಕುಟುಂಬಕ್ಕೆ 2 ಕೋಟಿ ಪರಿಹಾರ ಕೊಡ್ಬೇಕು. ನೀರಾವರಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಬಿಬಿಎಂಪಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೀತಿದೆ. ಸದ್ಯದಲ್ಲೇ ಸಚಿವರು ಹಾಗೂ ಶಾಸಕರ ಪಟ್ಟಿ ಬಿಡುಗಡೆ ಮಾಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಪಿ ಹೋಟೆಲ್‍ನಲ್ಲಿ ಪಂಚನಾಮೆ
ಕಮಿಷನ್ ದಂಧೆಗೆ ಸರ್ಕಾರ ಕಡಿವಾಣ ಹಾಕಬೇಕು ಇಲ್ಲದೇ ಹೊದರೆ ಮುಂದಿನ ಮೇ 25 ರಂದು 50 ಸಾವಿರ ಗುತ್ತಿಗೆದಾರರನ್ನು ಸೇರಿಸಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಗುತ್ತೆ ಎಂದು ಕೆಂಪಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಂತೋಷ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಕಾಂಗ್ರೆಸ್ ನಾಯಕರ ಸಾಂತ್ವನ
ಉಡುಪಿ: ಸಂತೋಷ್ ಪಾಟೀಲ್ ಇದ್ದ ಶಾಂಭವಿ ಲಾಡ್ಜ್‌ನ 207ರ ಕೊಠಡಿಯಲ್ಲಿ ಉಡುಪಿ ಪೊಲೀಸರು ಪಂಚನಾಮೆ ಮಾಡಿದ್ದಾರೆ.
ಸಂತೋಷ್ ಸ್ನೇಹಿತರಾದ ಪ್ರಶಾಂತ್ ಶೆಟ್ಟಿ, ಸಂತೋಷ್ ಮೇದಪ್ಪ ಸೇರಿ ಕುಟುಂಬದ 7 ಜನರ ಸಮ್ಮುಖದಲ್ಲಿ ಎಫ್‍ಎಸ್‍ಎಲ್, ಶ್ವಾನದಳ, ಬೆರಳಚ್ಚು ತಜ್ಞರು ಸುಮಾರು 2 ಗಂಟೆಗಳ ಕಾಲ ಪರಿಶೀಲನೆ ನಡೆಸಿ ಸ್ಥಳ ಮಹಜರು ನಡೆಸಿದರು.
ಬಾಟಲ್, ಪ್ಯಾಕೆಟ್, ಬ್ಯಾಗ್, ಚಪ್ಪಲಿ, ವಾಟರ್ ಬಾಟಲ್ ಅನ್ನು ಸೀಜ್ ಮಾಡಲಾಗಿದೆ. ಲಾಡ್ಜ್ ಆವರಣದಲ್ಲಿದ್ದ ಕಾರನ್ನು ಪೊಲೀಸರು ಪರಿಶೀಲಿಸಿ, ಕಾರಿನಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಸಂತೋಷ್ ಕುಟುಂಬಸ್ಥರು ಈಶ್ವರಪ್ಪ ಮತ್ತವರ ಆಪ್ತರ ಬಂಧನ ಆಗುವರೆಗೂ ದೇಹ ಮುಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಪೊಲೀಸರು ಮನವೊಲಿಸಿದರು. ಇದನ್ನೂ ಓದಿ: ವರ್ಕ್ ಆರ್ಡರ್ ಇಲ್ಲದೇ 4 ಕೋಟಿ ಕಾಮಗಾರಿ ಮಾಡಿದ್ದ ಸಂತೋಷ್ – ಆತ್ಮಹತ್ಯೆಗೆ ಕಾರಣ ಏನು?
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಐಜಿಪಿ ದೇವಜ್ಯೋತಿ ರೇ ಮಾತಾಡಿ, ಅಸಹಜ ಸಾವು, ಆತ್ಮಹತ್ಯೆ ಎರಡು ಕೇಸ್ ದಾಖಲಿಸಿದ್ದೇವೆ. ದೂರಿನ ಅನ್ವಯ ಈಶ್ವರಪ್ಪ ಮತ್ತಿಬ್ಬರು ಆಪ್ತರ ಮೇಲೆ ಎಫ್‍ಐಆರ್ ದಾಖಲಿಸಿದ್ದೇವೆ ಎಂದು ತಿಳಿಸಿದರು. ಆಘಾತಗೊಂಡಿರುವ ಪತ್ನಿ ಜಯಶ್ರೀ, ತಾಯಿ ಪಾರ್ವತಿ ಎಲ್ಲರೂ ನ್ಯಾಯ ಸಿಗಬೇಕು ಅಂತ ಆಗ್ರಹಿಸಿದ್ದಾರೆ.
ಬೆಳಗಾವಿ: ನಗರದ ಸಮರ್ಥ ಕಾಲೋನಿಯಲ್ಲಿರುವ ಮೃತ ಸಂತೋಷ್ ಪಾಟೀಲ್ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಸಂತೋಷ ಪಾಟೀಲ್ ಪತ್ನಿ ಜಯಶ್ರೀ ಹಾಗೂ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಬಳಿ 40% ಕಮಿಷನ್ ವಸಲಿ ಮಾಡೋದು ರಾಕ್ಷಸ ಪ್ರವೃತ್ತಿ: ಸಿದ್ದರಾಮಯ್ಯ
ಈ ವೇಳೆ ಕಾಂಗ್ರೆಸ್ ನಾಯಕರ ಮುಂದೆ ಸಂತೋಷ್ ಕುಟುಂಬಸ್ಥರು ಕಣ್ಣೀರು ಹಾಕಿದ್ದಲ್ಲದೇ, 40 ಪರ್ಸೆಂಟ್ ಕಮಿಷನ್ ವಿಚಾರವಾಗಿ ನೋವು ತೋಡಿಕೊಂಡರು. 40ಪರ್ಸೆಂಟ್ ಕಮಿಷನ್ ಕೊಡದೇ ಇದ್ದರೆ ಯಾರ ಕಡೆಯಿಂದ ಬಿಲ್ ಮಾಡಿಸಿಕೊಳ್ಳುತ್ತೀಯಾ ಮಾಡಿಸಿಕೋ ಅಂತಾ ಸಂತೋಷನಿಗೆ ಹೇಳುತ್ತಿದ್ದರು ಎಂದು ಸಂತೋಷ್ ಪತ್ನಿ, ಈಶ್ವರಪ್ಪ ವಿರುದ್ಧ ದೂರಿದರು.
ಈ ವೇಳೆ ಈಶ್ವರಪ್ಪ ಹತ್ತಿರ ಕರೆದುಕೊಂಡು ಹೋಗಿದ್ದು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ಕರೆದುಕೊಂಡ ಹೋಗಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಡಿಕೆಶಿ, ನೋಡಮ್ಮ ನಿನಗೆ ನ್ಯಾಯ ಕೊಡಿಸೋಕೆ ಬಂದಿದ್ದೇವೆ. ನೀನು ಧೈರ್ಯದಿಂದ ಇರು ಎಂದು ಸಮಾಧಾನಪಡಿಸಿದರು. ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಮಾಡ್ಕೋಳ್ಳೋದಿದ್ರೆ ತಮ್ಮ ಜಿಲ್ಲೆಯಲ್ಲೇ ಮಾಡ್ಕೋಬೇಕಿತ್ತು: ಸೋಮಲಿಂಗ ಸ್ವಾಮೀಜಿ