Tag: ಸಂತೋಷ್ ಕೆ. ಗಂಗ್ವಾರ್

  • ದೇಶದಲ್ಲಿ ವಿಫುಲ ಉದ್ಯೋಗಾವಕಾಶ ಇದ್ದರೂ ಆಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆಯಿದೆ: ಕೇಂದ್ರ ಸಚಿವ

    ದೇಶದಲ್ಲಿ ವಿಫುಲ ಉದ್ಯೋಗಾವಕಾಶ ಇದ್ದರೂ ಆಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆಯಿದೆ: ಕೇಂದ್ರ ಸಚಿವ

    ಲಕ್ನೋ: ದೇಶದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಆದರೆ ಆಕಾಂಕ್ಷಿಗಳಲ್ಲಿ ಕೌಶಲ್ಯ ಮತ್ತು ಸಾಮರ್ಥ್ಯದ ಕೊರತೆ ಕಾಣುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕೆ. ಗಂಗ್ವಾರ್ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಕೇಂದ್ರ ಸಚಿವರು, ದೇಶದಲ್ಲಿ ಆರ್ಥಿಕ ಹಿಂಜರಿತದ ಭಯವಿದ್ದರೂ ನಿರುದ್ಯೋಗದ ಸಮಸ್ಯೆಯಿಲ್ಲ. ದೇಶದ ವಿವಿಧ ವಿಭಾಗಗಳಲ್ಲಿ ಅನೇಕ ಉದ್ಯೋಗಾವಕಾಶಗಳಿವೆ. ಆದರೆ ಆಕಾಂಕ್ಷಿಗಳ ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗಗಳು ದೊರಕುತ್ತಿಲ್ಲ ಎಂದು ತಿಳಿಸಿದ್ದಾರೆ.

    ನಾನು ಕಾರ್ಮಿಕ ಸಚಿವಾಲಯದ ಜವಾಬ್ದಾರಿ ಹೊಂದಿದ್ದೇನೆ. ಇಲ್ಲಿನ ಪರಿಸ್ಥಿತಿಯನ್ನು ಪ್ರತಿದಿನವೂ ವಿಚಾರಿಸುತ್ತೇನೆ. ನನಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ. ಒಂದು ಉದ್ದೇಶಕ್ಕಾಗಿ ಉದ್ಯೋಗ ವಿನಿಮಯ ಮಾಡುತ್ತೇವೆ ಹಾಗೂ ಪ್ರತ್ಯೇಕ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಿದ್ದೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

    ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಅವರ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಉಸ್ತುವಾರಿ ಪ್ರಿಯಾಂಕ ಗಾಂಧಿ, ಮಂತ್ರಿಗಳೇ ನಿಮ್ಮದೇ ಸರ್ಕಾರ ಕಳೆದ 5 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಉದ್ಯೋಗಗಳನ್ನು ಸೃಷ್ಟಿಸಿಲ್ಲ. ಸರ್ಕಾರದ ನೀತಿಗಳಿಂದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದ್ದು, ಇದ್ದ ಉದ್ಯೋಗಗಳೂ ಕಣ್ಮರೆಯಾಗುತ್ತಿವೆ. ಸರ್ಕಾರ ಏನಾದರೂ ಉತ್ತಮವಾದದ್ದು ಮಾಡುತ್ತದೆ ಎಂದು ಯುವಜನತೆ ಭರವಸೆಯಿಂದ ಕಾಯುತ್ತಿದ್ದಾರೆ. ಉತ್ತರ ಭಾರತೀಯರನ್ನು ಹೀಯಾಳಿಸಿ ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಟ್ವಿಟ್ ಮಾಡಿ ಕಿಡಿಕಾರಿದ್ದಾರೆ.