Tag: ಸಂತಸ

  • ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

    ರೈತರಿಗೆ ಒಂದೆಡೆ ಸಂತಸ- ಮತ್ತೊಂದೆಡೆ ಪ್ರವಾಹದ ಭೀತಿ!

    ರಾಯಚೂರು: ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತ ಒಂದೆಡೆ ಸಂತಸ ಪಡುತ್ತಿದ್ದರೆ, ಮತ್ತೊಂದೆಡೆ ಪ್ರವಾಹದ ಭೀತಿ ಎದುರಿಸುತ್ತಿದ್ದಾನೆ.

    ಹೌದು, ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಸಿರುವುದು ಒಂದೆಡೆ ರೈತರಿಗೆ ಸಂತಸ ತಂದರೆ, ಇನ್ನೊಂದೆಡೆ ಪ್ರವಾಹ ಭೀತಿ ಎದುರಾಗಿದೆ. ಜಲಾಶಯದಿಂದ 1 ಲಕ್ಷ ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟ ಹಿನ್ನೆಲೆ ಜಿಲ್ಲೆಯ ನಡುಗಡ್ಡೆ ಗ್ರಾಮಗಳು ಜಲಾವೃತವಾಗಿವೆ.

    ಲಿಂಗಸುಗೂರಿನ ಮ್ಯಾದರಗಡ್ಡಿ, ಕಡದರ ಗಡ್ಡಿ ಸೇರಿದಂತೆ ಮೂರು ಗಡ್ಡೆಗಳ ಸುತ್ತಲೂ ನೀರು ಆವರಿಸಿಕೊಂಡಿದೆ. ಸಂಚಾರ, ವಿದ್ಯುತ್ ಸೇರಿದಂತೆ ಎಲ್ಲವೂ ಕಡಿತಗೊಂಡಿದೆ. ಜಾನುವಾರುಗಳನ್ನ ಕಟ್ಟಿಕೊಂಡು ಗಡ್ಡೆಯಲ್ಲೇ ಕುಟುಂಬಗಳು ಉಳಿದುಕೊಂಡಿವೆ. ಶೀಲಹಳ್ಳಿ ಸೇತುವೆ ಈಗಾಗಲೇ ಮುಳುಗಿದ್ದು, ಐದಾರು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡಿದೆ.

    ರಾಯಚೂರು ತಾಲೂಕಿನ ಕುರ್ವಕುಲಾ, ಕುರ್ವಾಕುರ್ದಾ ಗ್ರಾಮಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಹೆಚ್ಚಿನ ಪ್ರಮಾಣ ನೀರು ನದಿಗೆ ಹರಿದು ಬಂದಿದ್ದರಿಂದ ರೈತರ ಪಂಪ್ ಸೆಟ್ ಗಳು ಸಹ ನೀರಿನಲ್ಲಿ ಮುಳುಗಿಹೋಗಿವೆ.

    ಈಗಾಗಲೇ ಜಿಲ್ಲಾಡಳಿತವು ನೀರಿನಲ್ಲಿ ಈಜುವುದು, ತೆಪ್ಪ ಬಳಸುವುದನ್ನೂ ನಿಷೇಧಿಸಿದೆ. ಅಲ್ಲದೇ ನದಿ ತಟದ ಬಳಿ ಯಾರೂ ಹೋಗಬಾರದು ಎಂದು ಮುನ್ನೆಚ್ಚರಿಕೆ ನೀಡಿದೆ. ಅಗತ್ಯವಿದ್ದಲ್ಲಿ ಗಂಜಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

  • ಕೆಆರ್ ಎಸ್ ಜಲಾಶಯದಲ್ಲಿ 100 ಅಡಿ ನೀರು ಸಂಗ್ರಹ- ರೈತರು ಫುಲ್ ಖುಷ್

    ಕೆಆರ್ ಎಸ್ ಜಲಾಶಯದಲ್ಲಿ 100 ಅಡಿ ನೀರು ಸಂಗ್ರಹ- ರೈತರು ಫುಲ್ ಖುಷ್

    ಮಂಡ್ಯ: ಕೆಆರ್ ಎಸ್ ಜಲಾಶಯದಲ್ಲಿ  ನೂರು ಅಡಿ ನೀರು ಸಂಗ್ರವಾಗಿದೆ. ಇದರಿಂದ ಇನ್ಮುಂದೆ ಕೃಷಿಗೆ ನೀರು ಲಭ್ಯವಾಗುತ್ತದೆ ಎನ್ನುವುದನ್ನು ಅರಿತ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

    ಕಾವೇರಿ ನದಿ ಸಮೀಪದಲ್ಲಿ ಭಾರೀ ಮಳೆಯಾಗಿದೆ. ಹೀಗಾಗಿ ಕೆಆರ್ ಎಸ್ ಅಣೆಕಟ್ಟು 124.80 ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಹೊಂದಿದ್ದು, ಅದರಲ್ಲಿ ಈಗಾಗಲೇ 100 ಅಡಿ ಸಂಗ್ರಹವಾಗಿದೆ. ಅಣೆಕಟ್ಟಿನಲ್ಲಿ ನೀರು ತುಂಬಿರುವುದರಿಂದ ಸದ್ಯ ಜಿಲ್ಲೆ ಹಾಗೂ ನೆರೆ ಜಿಲ್ಲೆಯ ರೈತರ ಸಂತಸಕ್ಕೆ ಕಾರಣವಾಗಿದೆ.

    2017ರಲ್ಲಿ ಇದೇ ಸಮಯದಲ್ಲಿ ಅಣೆಕಟ್ಟೆಯಲ್ಲಿ ಕೇವಲ 68 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ ನೀರಿನ ಸಂಗ್ರಹದಲ್ಲಿ ಒಂದಷ್ಟು ಏರಿಕೆಯಾಗಿದೆ. ಕಳೆದ ವರ್ಷ ಕೇವಲ 114 ಅಡಿಗಳಷ್ಟು ಮಾತ್ರ ಗರಿಷ್ಠವಾಗಿ ನೀರು ಸಂಗ್ರಹವಾಗಿತ್ತು. ಅಷ್ಟೇ ಅಲ್ಲದೆ ಸತತ ಮೂರು ವರ್ಷಗಳಿಂದ ಅಣೆಕಟ್ಟು ಭರ್ತಿಯಾಗದೇ ರೈತರು ಸಂಕಷ್ಟ ಅನುಭವಿಸಿದ್ದರು.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಸಾಮಾನ್ಯ ಗೆಲುವಲ್ಲ, ಕಾರ್ಯಕರ್ತರಿಂದ ಶೂನ್ಯದಿಂದ ಶಿಖರದವರೆಗೆ ಬೆಳೆದಿದ್ದೇವೆ: ಮೋದಿ

    ಸಾಮಾನ್ಯ ಗೆಲುವಲ್ಲ, ಕಾರ್ಯಕರ್ತರಿಂದ ಶೂನ್ಯದಿಂದ ಶಿಖರದವರೆಗೆ ಬೆಳೆದಿದ್ದೇವೆ: ಮೋದಿ

    ನವದೆಹಲಿ: ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಡಿದ್ದಾರೆ.

    ಬಿಜೆಪಿಯ ಈ ಭರ್ಜರಿ ಗೆಲುವಿಗೆ ಸಾಥ್ ನೀಡಿದ ಮೇಘಾಲಯಾ, ನಾಗಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಜನರಿಗೆ ನೀಡರುವ ಭರವಸೆಗಳನ್ನ ನಮ್ಮ ಸರ್ಕಾರ ಈಡೇರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

    2018ರ ತ್ರಿಪುರಾ ಚುನಾವಣೆಯು ದೇಶದ ಇತಿಹಾಸದಲ್ಲೇ ಮರೆಯಲಾಗದ ದಿನವಾಗಿದೆ. ತ್ರಿಪುರದ ನನ್ನ ಸಹೋದರ, ಸಹೋದರಿಯರೇ ನೀವು ಮಾಡಿದ ಸಾಧನೆ ಅಸಾಮಾನ್ಯವಾಗಿದೆ. ನೀವು ನೀಡಿರುವ ಬೆಂಬಲಕ್ಕೆ ಧನ್ಯವಾದ ಹೇಳಲು ನನ್ನ ಬಳಿ ಪದಗಳೇ ಸಿಗುತ್ತಿಲ್ಲ. ತ್ರಿಪುರಾವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ತ್ರಿಪುರ ಚುನಾವಣೆಯ ಗೆಲುವು ಯಾವ ಸಾಮಾನ್ಯ ಚುನಾವಣೆಯ ಗೆಲುವಲ್ಲ. ಈ ಪಯಣವು ಶೂನ್ಯದಿಂದ ಶಿಖರದ ವರೆಗೆ ಬೆಳೆದಿರುವ ಗೆಲುವಾಗಿದೆ. ಇದರಿಂದ ನಮ್ಮ ಸರ್ಕಾರದ ಅಭಿವೃದ್ಧಿ ಮತ್ತು ಬಲವನ್ನ ಹೆಚ್ಚಿಸಿದೆ. ಇಷ್ಟು ವರ್ಷಗಳ ಕಾಲ ಬಿಜೆಪಿಗೆ ದುಡಿದ ಪ್ರತಿ ಕಾರ್ಯಕರ್ತನಿಗೆ ನಾನು ತಲೆ ಬಾಗಿ ನಮಿಸುತ್ತೇನೆ ಎಂದು ಹೇಳುವ ಮೂಲಕ ವಂದನೆ ಸಲ್ಲಿಸಿದರು.

    ಅನಾಗರಿಕ ಮತ್ತು ಬೆದರಿಕೆಯ ವಿರುದ್ಧ ಪ್ರಜಾಪ್ರಭುತ್ವತ್ವದ ಗೆಲುವು ಇದಾಗಿದೆ. ಇಂದು ಶಾಂತಿ ಮತ್ತು ಅಹಿಂಸೆ ಎಂಬ ಭಯದಿಂದ ಮುಕ್ತಿ ಸಾಧಿಸಿದೆ. ತ್ರಿಪುರದ ರಾಜ್ಯಕ್ಕೆ ಅರ್ಹವಾದ ಉತ್ತಮ ಸರ್ಕಾರವನ್ನ ನೀಡುತ್ತೀವೆ ಎಂದು ಹೇಳಿದರು.

    ಭಾರತದ ಜನ ಎನ್‍ಡಿಎ ಸರ್ಕಾರದ ಧನಾತ್ಮಕ ಮತ್ತು ಅಭಿವೃದ್ಧಿ ಆಧಾರಿತ ಕಾರ್ಯಸೂಚಿಯಲ್ಲಿ ನಂಬಿಕೆ ಇಟ್ಟಿದ್ದಾರೆ. ಜನರು ಋಣಾತ್ಮಕ, ವಿಘಟಿತ ರಾಜಕೀಯಕ್ಕೆ ಬೆಲೆ, ಸಮಯ ನೀಡುವುದಿಲ್ಲ ಎನ್ನುವುದು ಈ ಫಲಿತಾಂಶದಿಂದ ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.