Tag: ಸಂಜು ಸಮ್ಸನ್

  • ರಾಜಸ್ತಾನ್ ರಾಯಲ್ಸ್‌ಗೆ, ರಾಯಲ್ ಚಾಲೆಂಜರ್ಸ್ ಸವಾಲು

    ರಾಜಸ್ತಾನ್ ರಾಯಲ್ಸ್‌ಗೆ, ರಾಯಲ್ ಚಾಲೆಂಜರ್ಸ್ ಸವಾಲು

    ದುಬೈ: ಐಪಿಎಲ್ ದ್ವಿತೀಯಾರ್ಧದ 43ನೇ ಪಂದ್ಯದಲ್ಲಿಂದು ರಾಜಸ್ತಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ.

    ಬೆಂಗಳೂರು ಪ್ಲೇ ಆಫ್ ಪ್ರವೇಶಿಸಬೇಕಾದರೆ ಉಳಿದಿರುವ ನಾಲ್ಕು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. ಆರ್​ಸಿಬಿ  ಆಡಿರುವ ಓಟ್ಟು 10 ಪಂದ್ಯಗಳಲ್ಲಿ 6 ರಲ್ಲಿ ಜಯ ಹಾಗೂ ನಾಲ್ಕರಲ್ಲಿ ಸೋಲು ಕಂಡಿದೆ. ಇನ್ನೊಂದೆಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ಟೂರ್ನಿಯಲ್ಲಿ ಉಳಿಯಬೇಕಾದರೆ ಗೆಲುವು ಅನಿವಾರ್ಯವಾಗಿದೆ. ಒಟ್ಟು 10 ಪಂದ್ಯಗಳನ್ನಾಡಿರುವ ರಾಜಸ್ತಾನ್ 4 ಗೆಲುವು ಹಾಗೂ 6 ಸೋಲುಗಳನ್ನು ಕಂಡಿದೆ. ಅಂಕಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ 7ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10K ಕಿಂಗ್

    ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಆರ್​ಸಿಬಿ  11, ರಾಜಸ್ತಾನ್ 10ರಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲದ ಹೋರಾಟ ನಡೆಸಿವೆ. ಸದ್ಯ ಆರ್​ಸಿಬಿಯ ಆಟಗಾರರು ಉತ್ತಮ ಫಾರ್ಮ್‍ನಲ್ಲಿದ್ದು, ಪಂದ್ಯವನ್ನು ಗೆಲ್ಲುವ ಹುಮ್ಮಸಿನಲ್ಲಿದೆ.

    ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿದ ಬಳಿಕ ಬೆಂಗಳೂರು ತಂಡಕ್ಕೆ ಹೊಸ ಹುರುಪು ಸಿಕ್ಕಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಕ್ಸ್‍ವೆಲ್ ಅಬ್ಬರ ಆರ್‍ಸಿಬಿ ತಂಡಕ್ಕೆ ಆನೆ ಬಲ ತಂದುಕೊಟ್ಟಿದೆ. ಬೌಲಿಂಗ್ ವಿಭಾಗದಲ್ಲೂ ಸಾಕಷ್ಟು ಸುಧಾರಿಸಿರುವ ಬೆಂಗಳೂರು ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಇದನ್ನೂ ಓದಿ: ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ

    ರಾಜಸ್ಥಾನ್ ರಾಯಲ್ಸ್ ಕೂಡ ಬಲಿಷ್ಟ ತಂಡವಾಗಿದ್ದರೂ, ಆಟಗಾರರು ಹೇಳಿಕೊಳ್ಳುವಂತ ಪ್ರದರ್ಶನ ನೀಡುತ್ತಿಲ್ಲ. ಟೂರ್ನಿಯ ಆರಂಭದಲ್ಲಿ ಪಂಜಾಬ್ ವಿರುದ್ಧ ಮೊದಲ ಪಂದ್ಯ ಗೆದ್ದು ಉಳಿದ ಪಂದ್ಯಗಳನ್ನು ಗೆಲುವಿನ ಅಂತರದಲ್ಲಿ ಕೈಚೆಲ್ಲಿದೆ. ನಾಯಕ ಸಂಜು ಸಮ್ಸನ್, ಲಿವಿಸ್ ಬಿಟ್ಟರೆ ಉಳಿದ ಬ್ಯಾಟ್ಸ್‍ಮನ್‍ಗಳು ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗುತ್ತಿದ್ದಾರೆ. ಬೌಲಿಂಗ್ ವಿಭಾಗ ಕೂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ಸು ಕಾಣದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.

    ಉಭಯ ತಂಡಗಳು ಇಂದು ದುಬೈನಲ್ಲಿ ಸೆಣಸಾಟ ನಡೆಸಲಿದ್ದು, ಸೋಲಿನ ಸರಪಳಿ ಕಳಚಲು ರಾಜಸ್ತಾನ್ ರಾಯಲ್ಸ್ ಸಿದ್ದವಾಗಿದೆ. ಮತ್ತೊಂದೆಡೆ ಪ್ಲೇ ಆಫ್ ಗೆ ಲಗ್ಗೆ ಹಾಕಲು ಆರ್​ಸಿಬಿಗೆ ಇನ್ನೆರೆಡು ಗೆಲುವ ಅಗತ್ಯವಾಗಿದೆ.

  • ಓರ್ವನಿಗಾಗಿ ರಾಜಸ್ಥಾನ ತಂಡವನ್ನು ಬೆಂಬಲಿಸ್ತಿದ್ದೇನೆ: ಸ್ಮೃತಿ ಮಂದಾನ

    ಓರ್ವನಿಗಾಗಿ ರಾಜಸ್ಥಾನ ತಂಡವನ್ನು ಬೆಂಬಲಿಸ್ತಿದ್ದೇನೆ: ಸ್ಮೃತಿ ಮಂದಾನ

    ನವದೆಹಲಿ: ಭಾರತದ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಅವರು ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಹೆಸರಿಸಿದ್ದು, ಓರ್ವ ಬ್ಯಾಟ್ಸ್ ಮ್ಯಾನಿಗಾಗಿ ಆ ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ರಾಷ್ಟ್ರೀಯ ಮಾಧ್ಯಮದ ಜೊತೆಗೆ ಮಾತನಾಡಿರುವ ಸ್ಮೃತಿ ಮಂದಾನ, ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಸಂಜು ಸಮ್ಸನ್ ಅವರಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಸಂಜು ಸಮ್ಸನ್ ಅವರು ಉತ್ತಮವಾಗಿ ಆಡುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

    ಸಂಜು ಸಮ್ಸನ್ ವಿಚಾರವಾಗಿ ಮಾತನಾಡಿರುವ ಸ್ಮೃತಿ ಮಂದಾನ, ಓರ್ವ ಯುವ ಆಟಗಾರ ಸ್ಫೋಟಕವಾಗಿ ಬ್ಯಾಟ್ ಬೀಸುವುದನ್ನು ನೋಡಲು ಬಹಳ ಸ್ಫೂರ್ತಿದಾಯಕವಾಗಿದೆ. ಸಂಜು ಸಮ್ಸನ್ ಅವರು ಬ್ಯಾಟ್ ಬೀಸುವ ಶೈಲಿ ನೋಡಿ ನಾನು ಅವರಿಗೆ ದೊಡ್ಡ ಅಭಿಮಾನಿಯಾಗಿದ್ದೇನೆ. ಆತನಿಗಾಗಿಯೇ ನಾನು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸಲು ಆರಂಭಿಸಿದ್ದೇನೆ. ಅವರ ಬ್ಯಾಟಿಂಗ್ ನೆಕ್ಟ್ ಲೆವೆಲಿನಲ್ಲಿದೆ ಆತನಿಂದ ನಾನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

    ನಾನು ಐಪಿಎಲ್‍ನಲ್ಲಿ ಎಲ್ಲ ಪಂದ್ಯಗಳನ್ನು ನೋಡುತ್ತೇನೆ. ಯಾವುದೋ ಒಂದೇ ಒಂದು ನಿರ್ದಿಷ್ಟ ತಂಡವನ್ನು ನಾನು ಬೆಂಬಲಿಸುವುದಿಲ್ಲ. ನಾನು ಎಲ್ಲ ತಂಡವನ್ನು ಬೆಂಬಲಿಸುತ್ತೇನೆ. ಎಲ್ಲ ತಂಡದ ಆಟಗಾರರನ್ನು ಇಷ್ಟಪಡುತ್ತೇನೆ. ನನಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಎಂದರೆ ಇಷ್ಟ. ಹೀಗಾಗಿ ಎಲ್ಲರ ಪಂದ್ಯವನ್ನು ನೋಡುತ್ತೇನೆ. ಎಲ್ಲರನ್ನೂ ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಸ್ಮೃತಿ ಮಂದಾನ ಅವರು ಮಹಿಳಾ ಐಪಿಎಲ್ ಆಡಲು ಸಿದ್ಧವಾಗಿದ್ದಾರೆ. ಪ್ರಪಂಚದ ಉನ್ನತ ಮಟ್ಟದ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಜೊತೆ ಯುಎಇನಲ್ಲಿ ಟಿ-20 ಆಡಲು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ಬಿಸಿಸಿಐ ಮಹಿಳಾ ಐಪಿಎಲ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ ಮಹಿಳಾ ಐಪಿಎಲ್, ನವೆಂಬರ್ 4ರಿಂದ 9ರವರೆಗೆ ನಡೆಯಲಿದೆ ಎನ್ನಲಾಗಿದೆ. ಮೂರು ಮಹಿಳಾ ತಂಡಗಳು ನಾಲ್ಕು ಪಂದ್ಯಗಳನ್ನು ಆಡಲಿವೆ ಎಂದು ಹೇಳಲಾಗಿದೆ.

    ಈ ಬಾರಿಯ ಐಪಿಎಲ್‍ನಲ್ಲಿ ಸಂಜು ಸಮ್ಸನ್ ಅವರು ಉತ್ತಮವಾಗಿ ಆಡಿದ್ದಾರೆ. ತಾವು ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿರುವ ಮೂರು ಪಂದ್ಯಗಲ್ಲಿ ಎರಡು ಭರ್ಜರಿ ಅರ್ಧಶತಕದ ಸಮೇತ 167 ರನ್ ಗಳಿಸಿದ್ದಾರೆ. ಜೊತೆಗೆ 16 ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 42 ಬಾಲಿಗೆ 85 ರನ್ ಸಿಡಿಸಿರುವುದು ಈ ಬಾರಿಯ ಐಪಿಎಲ್‍ನ ಗರಿಷ್ಠ ಮೊತ್ತವಾಗಿದೆ.

  • ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್

    ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್

    ಬೆಂಗಳೂರು: ಪ್ರತಿ ವರ್ಷ ಐಪಿಎಲ್ ಎಂದರೆ ಅಲ್ಲಿ ಹೆಚ್ಚು ಮಿಂಚುತ್ತಿದ್ದವರು ವಿದೇಶಿ ಆಟಗಾರರು. ಆದರೆ ಈ ಬಾರಿಯ ಐಪಿಎಲ್‍ನಲ್ಲಿ ಬದಲಾವಣೆ ಎಂಬಂತೆ ನಮ್ಮ ಭಾರತದ ಯುವ ಆಟಗಾರರ ಆರಂಭದಲ್ಲೇ ಅಬ್ಬರಿಸುತ್ತಿದ್ದಾರೆ.

    ಈ ಬಾರಿಯ ಐಪಿಎಲ್‍ನಲ್ಲಿ ವಿದೇಶಿ ಆಟಗಾರರು ಮಂಕಾಗಿದ್ದಾರೆ. ಆದರೆ ನಮ್ಮ ಭಾರತದ ಯುವ ಆಟಗಾರರು ಐಪಿಎಲ್ ಆರಂಭದಲ್ಲೇ ರೊಚ್ಚಿಗೆಂದು ಆಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲ. ಇಂಡಿಯನ್ಸ್ ಪ್ಲೇಯರ್ ಲೀಗ್ ಎಂದು ಸಾಮಾಜಿಕ ಜಾಲತಾಣದಲ್ಲಿ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಬದಲಾವಣೆಗೆ ಕಾರಣ ದ್ರಾವಿಡ್ ಎಂಬ ಅಭಿಪ್ರಾಯ ಕೇಳಿಬಂದಿದೆ.

    ಗುರು ದ್ರಾವಿಡ್ ಗರಡಿಯಲ್ಲಿ ಪಳಗಿದ ಹುಡುಗರು
    ಇಂದು ಐಪಿಎಲ್‍ನಲ್ಲಿ ಭಾರತದ ಹೊಸ ಪ್ರತಿಭೆಗಳು ಮಿಂಚುತ್ತಿವೆ. ಈ ಮೂಲಕ ಭಾರತದ ಮುಂದಿನ ಕ್ರಿಕೆಟ್ ಭವಿಷ್ಯ ಉತ್ತಮ ಆಟಗಾರರ ಕೈಲಿದೆ ಎಂಬ ಸಂದೇಶ ಜಗತ್ತಿಗೆ ರವಾನೆಯಾಗುತ್ತಿದೆ. ಇದಕ್ಕೆ ಒಂದು ಕಡೆಯಿಂದ ಭಾರತ ಮಾಜಿ ಆಟಗಾರ ಮತ್ತು ಇಂಡಿಯನ್ ಅಂಡರ್-19 ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರೇ ಕಾರಣ ಎಂಬುದು ಹಲವರ ವಾದ. ಅವರ ಗರಡಿಯಲ್ಲಿ ಪಳಗಿದ ಹಲವಾರು ಯುವ ಆಟಗಾರರು ಇಂದು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಿದ್ದಾರೆ.

    ಈ ಬಾರಿಯ ಐಪಿಎಲ್‍ನಲ್ಲಿ ಆರಂಭದಲ್ಲೇ ಯುವ ಬ್ಯಾಟ್ಸ್ ಮ್ಯಾನ್‍ಗಳಾದ ಆರ್‍ಸಿಬಿ ತಂಡ ದೇವದತ್ ಪಡಿಕಲ್, ರಾಜಸ್ಥಾನ್ ತಂಡದ ಸಂಜು ಸಮ್ಸನ್, ಕೋಲ್ಕತ್ತಾ ತಂಡದ ಶುಭಮನ್ ಗಿನ್, ಡೆಲ್ಲಿ ತಂಡದ ಪೃಥ್ವಿ ಶಾ ಮತ್ತು ಮುಂಬೈ ತಂಡದ ಇಶಾನ್ ಕಿಶಾನ್ ಮಿಂಚುತ್ತಿದ್ದಾರೆ. ಅಂತೆಯೇ ಬೌಲಿಂಗ್‍ನಲ್ಲಿ ಕೋಲ್ಕತ್ತಾ ತಂಡದ ಶಿವಮ್ ಮಾವಿ, ಕಮಲೇಶ್ ನಾಗರಕೋಟಿ ಮತ್ತು ಹೈದರಾಬಾದ್ ತಂಡದ ಟಿ ನಟರಾಜನ್ ಅವರು ಐಪಿಎಲ್‍ನಲ್ಲಿ ಮಿಂಚಿ ತಮ್ಮ ಟ್ಯಾಲೆಂಟ್ ಅನ್ನು ತೋರಿಸುತ್ತಿದ್ದಾರೆ. ಈ ಎಲ್ಲ ಆಟಗಾರರು ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಹುಡುಗರು.

    ದೇವದತ್ ಪಡಿಕಲ್, ಶುಭಮನ್ ಗಿನ್, ಪೃಥ್ವಿ ಶಾ ಮತ್ತು ಇಶಾನ್ ಕಿಶಾನ್ ಅವರು ಭಾರತದ ಅಂಡರ್-19 ತಂಡದಲ್ಲಿ ಮಿಂಚಿದ್ದವರು. ಅಂದು ಅವರಿಗೆ ತರಬೇತಿ ನೀಡಿದ್ದು, ಇದೇ ಲೆಜೆಂಡ್ ದ್ರಾವಿಡ್ ಅವರು. ಜೊತೆಗೆ ಬೌಲರ್ ಆಗಿ ಮಿಂಚುತ್ತಿರುವ ಮಾವಿ, ನಾಗರಕೋಟಿ ಮತ್ತು ಟಿ ನಟರಾಜನ್ ಅವರು ಕೂಡ 2018ರ ಅಂಡರ್-19 ತಂಡದಲ್ಲಿ ಇದ್ದವರು. ಈ ಯುವ ಬೌಲರ್ ಗಳಿಗೂ ಕೂಡ ರಾಹುಲ್ ಅವರ ಸಲಹೆ ನೀಡಿ ಉತ್ತಮ ಆಟಗಾರರನ್ನಾಗಿ ಮಾಡಿದ್ದಾರೆ.

    ಇದಕ್ಕೆ ಸಾಕ್ಷಿ ಎಂಬಂತೆ ಬುಧವಾರ ನಡೆದ ಕೋಲ್ಕತ್ತಾ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದ ಕಮಲೇಶ್ ನಾಗರಕೋಟಿ ಪಂದ್ಯ ಮುಗಿದ ನಂತರ ಮಾತನಾಡಿ, ರಾಹುಲ್ ದ್ರಾವಿಡ್ ಅವರಿಗೆ ಧನ್ಯವಾದ ಹೇಳಿದ್ದರು. ಜೊತೆಗೆ ಅವರ ತರಬೇತಿಯಲ್ಲಿ ಬಹಳ ಕಲಿತ್ತಿದ್ದೇವೆ ಎಂದು ತಿಳಿಸಿದ್ದರು. ಈ ಹಿಂದೆಯೇ ಕಮಲೇಶ್ ನಾಗರಕೋಟಿ ಬಗ್ಗೆ ಮಾತನಾಡಿದ್ದ ದ್ರಾವಿಡ್ ಅವರು, ಕಮಲೇಶ್ ಓರ್ವ ಉತ್ತಮ ಬೌಲರ್ ಮತ್ತು ಫೀಲ್ಡರ್. ಭಾರತಕ್ಕೆ ಈತ ಉತ್ತಮ ಆಟಗಾರನಾಗುತ್ತಾರೆ ಎಂದು ಹೇಳಿದ್ದರು.

    ಅಂತಯೇ ಈ ಹಿಂದೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಟಿ ನಟರಾಜನ್ ಅವರು, ಭಾರತ-ಎ ತಂಡ ಸೌತ್ ಆಫ್ರಿಕಾಗೆ ಟೂರ್ ಹೋದಾಗ ದ್ರಾವಿಡ್ ಅವರು ನನಗೆ ಉತ್ತಮ ಸಲಹೆ ನೀಡಿದ್ದನ್ನು ನೆನಪಿಸಕೊಂಡಿದ್ದರು. ಇಂದು ಐಪಿಎಲ್‍ನಲ್ಲಿ ಸಿಕ್ಸರ್ ಸಿಡಿಸಿ ಮಿಂಚುತ್ತಿರುವ ಸಂಜು ಸಮ್ಸನ್ ಕೂಡ ಡ್ರಾವಿಡ್ ನನ್ನ ಗುರುಗಳಾದ ದ್ರಾವಿಡ್ ಅವರು ರಾಜಸ್ಥಾನಕ್ಕೆ ಮೆಂಟರ್ ಆಗಿದ್ದ ಸಮಯದಲ್ಲಿ ನನಗೆ ಉತ್ತಮವಾಗಿ ತರಬೇತಿ ನೀಡಿದ್ದರು ಎಂದು ಹೇಳಿಕೊಂಡಿದ್ದರು.

    ಈ ಹಿಂದೆ ಒಂದು ಬಾರಿ ಭಾರತದ ಮುಖ್ಯ ತಂಡಕ್ಕೆ ರಾಹುಲ್ ದ್ರಾವಿಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ತೀರ್ಮಾನ ಮಾಡಿತ್ತು. ಆದರೆ ಈ ಹುದ್ದೆಯನ್ನು ತಿರಸ್ಕರಿಸಿದ್ದ ದ್ರಾವಿಡ್ ಅವರು, ಅಂದು ಭಾರತದ-ಎ ತಂಡಕ್ಕೆ ಕೋಚ್ ಆಗಿದ್ದರು. ಇಂದು ಅವರ ಪರಿಶ್ರಮದ ಫಲ ಎಂಬಂತೆ ಅವರ ಗರಡಿಯಲ್ಲಿ ಪಳಗಿದ ಹುಡುಗರು ಐಪಿಎಲ್‍ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. ಜೊತೆಗೆ ಬೌಲಿಂಗ್‍ನಲ್ಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ.