Tag: ಸಂಜಯ್ ಸವ್ರೆ

  • ಕೊಳೆಗೇರಿ ಮಕ್ಕಳ ಪಾಲಿನ ಶಿಕ್ಷಕನಾದ ಪೊಲೀಸ್ ಕಾನ್‍ಸ್ಟೇಬಲ್

    ಕೊಳೆಗೇರಿ ಮಕ್ಕಳ ಪಾಲಿನ ಶಿಕ್ಷಕನಾದ ಪೊಲೀಸ್ ಕಾನ್‍ಸ್ಟೇಬಲ್

    ಇಂದೋರ್: ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಶಾಲೆ ಮತ್ತು ಆನ್‍ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದಿರುವ 40 ಕೊಳೆಗೇರಿ ಮಕ್ಕಳ ಪಾಲಿಗೆ ಇಂದೋರ್ ನ ಪೊಲೀಸ್ ಕಾನ್‍ಸ್ಟೇಬಲ್ ಸಂಜಯ್ ಸಂವ್ರೆ ಈಗ ಶಿಕ್ಷಕರಾಗಿದ್ದಾರೆ.

    ಸಿಎಸ್‍ಪಿ ಅನ್ನಪೂರ್ಣ ನಿವಾಸದಲ್ಲಿ ವಾಸವಾಗಿರುವ ಸಂಜಯ್ ಸಂವ್ರೆ, 4 ವರ್ಷಗಳ ಹಿಂದೆ ಪ್ರತಿ ಭಾನುವಾರ ಕೊಳೆಗೇರಿ ಮಕ್ಕಳಿಗೆ ಕಲಿಸಲು ಪ್ರಾರಂಭಿಸಿದರು. ಪ್ರಸ್ತುತ ಇಂದೋರ್ ನ ಲಾಲ್‍ಬಾಗ್ ಬಳಿ ಪ್ರತಿ ಭಾನುವಾರ 40 ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ. ತನ್ನ ಸ್ವಂತ ಹಣ ಮತ್ತು ಇತರ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಬೇಕಾದ ಶಾಲಾ ಚೀಲಗಳು, ಪುಸ್ತಕಗಳು, ಪೆನ್ಸಿಲ್ ಮತ್ತು ಇತರ ಲೇಖನ ಸಾಮಾಗ್ರಿಗಳನ್ನು ನೀಡುತ್ತ ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದಾರೆ.

    ಆಪರೇಷನ್ ಸ್ಮೈಲ್ ಎಂಬ ಯೋಜನೆಯಡಿ ಶಿಕ್ಷಣ ನೀಡುತ್ತಿರುವ ಸಂವ್ರೆ ತನ್ನ ಕುಟುಂಬದ ಆರ್ಥಿಕ ಸ್ಥಿತಿಯಿಂದಾಗಿ ನಾನು ಸ್ಪೂರ್ತಿ ಪಡೆದು ಈ ಕೆಲಸಕ್ಕೆ ಮುಂದಾಗಿದ್ದೇನೆ. ಇಲ್ಲಿರುವ 40 ಮಕ್ಕಳಲ್ಲಿ ಎಲ್ಲಾ ವರ್ಗದ ಮಕ್ಕಳಿದ್ದಾರೆ. ಕೊಳಗೇರಿಯಲ್ಲಿ ವಾಸಿಸುತ್ತ ಶಿಕ್ಷಣದಿಂದ ವಂಚಿತರಾಗಿದ್ದವರಿಗೆ ಹೆಚ್ಚಿನ ಒತ್ತು ನೀಡಿ ನಾನು ಯಾವ ರೀತಿ ಶಿಕ್ಷಣ ಪಡೆದಿದ್ದೇನೊ ಅದೇ ರೀತಿ ಶಿಕ್ಷಣವನ್ನು ನೀಡಲು ಪ್ರಯತ್ತಿಸುತ್ತಿದ್ದೇನೆ. ಆರಂಭದಲ್ಲಿ ಕೆಲ ಮಕ್ಕಳು ಮಾತ್ರ ಇದ್ದರು ಇದೀಗ ಮಕ್ಕಳ ಪೋಷಕರಿಗೆ ಅರಿವಾಗಿ ಮಕ್ಕಳ ಸಂಖ್ಯೆ ಏರಿಕೆ ಯಾಗಿದೆ ಎಂದರು.

    2016ರಲ್ಲಿ ನಾನು ತರಗತಿಗಳನ್ನು ಆರಂಭಿಸಿದಾಗ 3 ರಿಂದ 4 ಮಕ್ಕಳು ಹಾಜರಾಗುತ್ತಿದ್ದರು. ಆದರೆ ಪ್ರಸ್ತುತ 1ನೇ ತರಗತಿಯಿಂದ 10ನೇ ತರಗತಿವರೆಗೆ 45 ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಾರೆ. ಪ್ರತಿ ಭಾನುವಾರ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯ ವರೆಗೆ ತರಗತಿಗಳನ್ನು ನಡೆಸುತ್ತೇನೆ ನನ್ನೊಂದಿಗೆ ಇದೀಗ ನನ್ನ ಸಹೋದ್ಯೋಗಿ ಮಿತ್ರರಾದ ಟ್ರಾಫಿಕ್ ಕಾನ್‍ಸ್ಟೇಬಲ್ ರಂಜೀತ್ ಸಿಂಗ್, ಪೊಲಿಸ್ ಕಾನ್‍ಸ್ಟೇಬಲ್ ಅಜಾಬ್ ಸಿಂಗ್, ಮತ್ತು ಅನಿಲ್ ಬೆಲ್ವಂಶಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ಸ್ವಯಂ ಸೇವಕರಾಗಿ ಸಹಕರಿಸುತ್ತಿದ್ದಾರೆ. ಕಲಿಕೆಯೊಂದಿಗೆ ಇತರ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹಿಸುತ್ತಿರುವುದಾಗಿ ಸಂವ್ರೆ ತಿಳಿಸಿದರು.

    ಪ್ರತಿ ಭಾನುವಾರ ತರಗತಿಗೆ ಆಗಮಿಸುವ ವಿದ್ಯಾರ್ಥಿಗಳು ಸಂವ್ರೆಯವರಿಗೆ ಕೃತಜ್ಞತೆ ಅರ್ಪಿಸಲು ಬಯಸುತ್ತೀವೆಂದು ಸಂತಸ ವ್ಯಕ್ತಪಡಿದ್ದಾರೆ. ತರಗತಿಯ ಕುರಿತು ಅಭಿಪ್ರಾಯ ತಿಳಿಸಿದ 6ನೇ ತರಗತಿಯ ಪಾಯಲ್ ನಾನು ಪ್ರತಿ ದಿನ ಇತರ ಜನರ ಮನೆಕೆಲಸಕ್ಕೆ ಹೊಗುತ್ತೇನೆ. ಭಾನುವಾರದಂದು ತರಗತಿ ಪಡೆಯಲು ಇಲ್ಲಿಗೆ ಬರುತ್ತೇನೆ. ಇಲ್ಲಿಯ ಶಿಕ್ಷಣವನ್ನು ಉಚಿತವಾಗಿ ಪಡೆಯುವ ನಾನು ಮುಂದೆ ಪೊಲೀಸ್ ಅಧಿಕಾರಿಯಾಗಲು ಬಯಸಿದ್ದೇನೆಂದಿದ್ದಾನೆ.

    ಇನ್ನೊಬ್ಬ ವಿದ್ಯಾರ್ಥಿ ಲಾಲಿ ಮಾತಾನಾಡಿ ನನ್ನ ಪೋಷಕರು ಕೂಲಿ ಕೆಲಸ ಮಾಡುತ್ತಾರೆ. ಅವರು ಶಿಕ್ಷಣದಿಂದ ವಂಚಿತರಾಗಿದ್ದರು ಅವರಂತೆ ನಾವೂ ಆಗಬಾರದೆಂಬ ಉದ್ದೇಶದಿಂದ ಶಿಕ್ಷಣ ಪಡೆಯುತ್ತಿದ್ದು ನನ್ನೊಂದಿಗೆ ನನ್ನ ಸಹೋದರ ಮತ್ತು ಸಹೋದರಿಯು ಬರುತ್ತಿದ್ದಾರೆ ನಾನು ಪೊಲೀಸ್ ಅಧಿಕಾರಿಯಾಗುವ ಗುರಿ ಹೊಂದಿದ್ದೇನೆ ಎನ್ನುತ್ತಾನೆ.

    ನನಗೆ ಇಲ್ಲಿ ಉತ್ತಮವಾದ ವಾತಾವರಣದಲ್ಲಿ ಶಿಕ್ಷಣ ಸಿಗುತ್ತಿದ್ದು, ನಾಲ್ಕು ವರ್ಷಗಳಿಂದ ಇಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ ಇದಕ್ಕಾಗಿ ಸಂಜಯ್ ಸರ್‍ಗೆ ಧನ್ಯವಾದ ತಿಳಿಸುತ್ತೇನೆ ಎಂದು ವಿದ್ಯಾರ್ಥಿ ಕೃಷ್ಣ ಸಂಭ್ರಮ ವ್ಯಕ್ತಪಡಿಸುತ್ತಾನೆ.

    ಇಲ್ಲಿನ ತರಗತಿಯ ಬಗ್ಗೆ ತಿಳಿದು ಭೇಟಿ ನೀಡಿದ ಇಂದೋರ್ ನ ಎಸ್‍ಪಿ ವಿಜಯ್ ಖತ್ರಿ, ಸಂಜಯ್ ಮತ್ತು ಬಳಗ ಅತ್ಯುತ್ತಮವಾದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಬಹಳ ಸಂತೋಷವಾಗಿದೆ. ಇಲ್ಲಿನ ಈ ಯೋಜನೆಗಾಗಿ ನಾನು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 500 ರೂಪಾಯಿಯನ್ನು ಕಲ್ಯಾಣ ನಿಧಿಯಾಗಿ ಕೊಡುತ್ತಿದ್ದೇನೆ ಎಂದಿದ್ದಾರೆ.