Tag: ಸಂಚಾರಿ ನಿಯಮ

  • ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

    ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

    ಹೈದರಾಬಾದ್: ಟೋಲ್ ಅಥವಾ ಪಾರ್ಕಿಂಗ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಅನೇಕ ವಾಹನ ಸವಾರರು ಪೊಲೀಸ್, ಪ್ರೆಸ್, ನ್ಯಾಯಾಧೀಶರು ಅಥವಾ ಶಾಸಕರ ಸ್ಟಿಕ್ಕರ್ ಗಳನ್ನು ಬಳಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಐಡಿಯಾ ನೋಡಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿ ಎಂ.ಹರಿ ರಾಕೇಶ್, ಟೋಲ್ ಶುಲ್ಕ ಕಟ್ಟುವುದನ್ನು ತಪ್ಪಿಸಿಕೊಳ್ಳಲು ತನ್ನ ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ. ಕೇವಲ ಕಾರ್ ಮೇಲೆ ಸ್ಟಿಕ್ಕರ್ ಮಾತ್ರ ಅಂಟಿಸಿಕೊಂಡಿಲ್ಲ. ಬದಲಿಗೆ ಮುಂಭಾಗ ಹಾಗೂ ಹಿಂಭಾಗದ ನಂಬರ್ ಪ್ಲೇಟನ್ನು ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ.

    ಜಡಿಮೆಟ್ಲಾದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಈತ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಈತನನ್ನು ವಿಚಾರಣೆ ನಡೆಸಿದ್ದು, ಟೋಲ್ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯಲು ಹಾಗೂ ಸಂಚಾರಿ ಪೊಲೀಸರ ತಪಾಸಣೆಯಿಂದ ತಪ್ಪಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ.

    ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ರಾಕೇಶ್ ವಿರುದ್ಧ ಮೋಸ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ಸಿಎಂ, ಗವರ್ನರ್ ನಡುವೆ ಹೆಲ್ಮೆಟ್ ವಾರ್- ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಟಾಂಗ್

    ಸಿಎಂ, ಗವರ್ನರ್ ನಡುವೆ ಹೆಲ್ಮೆಟ್ ವಾರ್- ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಟಾಂಗ್

    ಪುದುಚೇರಿ: ಹೆಲ್ಮೆಟ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಉಪರಾಜ್ಯಪಾಲೆ ಕಿರಣ್ ಬೇಡಿ ನಡುವಿನ ಟ್ವೀಟ್ ವಾರ್ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಕಿರಣ್ ಬೇಡಿ ಹಾಗೂ ನಾರಾಯಣಸ್ವಾಮಿ ಇಬ್ಬರೂ ಸಹ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದೀಗ ಹೆಲ್ಮೆಟ್ ಕುರಿತು ಒಬ್ಬರಿಗೊಬ್ಬರು ಟ್ವೀಟ್ ಮಾಡುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.

    ನಾರಾಯಣಸ್ವಾಮಿಯವರು ಹೆಲ್ಮೆಟ್ ಧರಿಸದೆ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಿದ್ದನ್ನು ಕಂಡು ಕಿರಣ್ ಬೇಡಿ ಕಿಡಿಕಾರಿದ್ದರು. ಈ ಕುರಿತು ಟ್ವೀಟ್ ಮಾಡಿ ಮೋಟಾರು ವಾಹನಗಳ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನಾರಾಯಣಸ್ವಾಮಿಯವರ ಫೋಟೋವನ್ನು ಟ್ವೀಟ್ ಮಾಡಿದ್ದರು.

    ಸುಪ್ರೀಂ ಕೋರ್ಟ್, ಮದ್ರಾಸ್ ಹೈ ಕೋರ್ಟ್ ನಿರ್ದೇಶನ ಹಾಗೂ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿರುವ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಕುರಿತು ಪುದುಚೇರಿ ಪೊಲೀಸ್ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ್ ಅವರಿಗೆ ನಿವೃತ್ತ ಐಪಿಎಸ್ ಅಧಿಕಾರಿಯೂ ಆಗಿರುವ ಕಿರಣ್ ಬೇಡಿ ನಿರ್ದೇಶನ ನೀಡಿದ್ದಾರೆ.

    ಕಿರಣ್ ಬೇಡಿ ಅವರು ಪುದುಚೇರಿ ಡಿಜಿಪಿ ಹಾಗೂ ನಿತಿನ್ ಗಡ್ಕರಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಪುದುಚೇರಿ ಮುಖ್ಯಮಂತ್ರಿ ಕಾಮರಾಜ್ ನಗರದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಚಾರ ಮಾಡುತ್ತಿರುವ ಫೋಟೋವನ್ನು ಹಾಕಿದ್ದಾರೆ.

    ಇದಕ್ಕೆ ಪ್ರತಿಯಾಗಿ ಸಿಎಂ ನಾರಾಯಣಸ್ವಾಮಿ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪ ರಾಜ್ಯಪಾಲೆ ಕಿರಣ್ ಬೇಡಿ ಅವರು 2017ರಲ್ಲಿ ಹೆಲ್ಮೆಟ್ ಇಲ್ಲದೆ ಸ್ಕೂಟರ್‍ನಲ್ಲಿ ಸಂಚರಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅಧಿಕೃತ ಸಂವಹನಕ್ಕಾಗಿ ಟ್ವಿಟ್ಟರ್ ಬಳಸುವ ಮೂಲಕ ಮದ್ರಾಸ್ ಹೈ ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಉಪರಾಜ್ಯಪಾಲೆ ಕಿರಣ್ ಬೇಡಿ ಅವರು ಮತ್ತೊಬ್ಬರಿಗೆ ಬೋಧಿಸುವ ಮುನ್ನ ತಾವು ತಿಳಿದುಕೊಳ್ಳಲಿ ಎಂದು ಟ್ವೀಟ್‍ನಲ್ಲಿ ಸಾಲುಗಳನ್ನು ಬರೆದಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ನಾರಾಯಣಸ್ವಾಮಿ, ಉಪರಾಜ್ಯಪಾಲರು ವಸ್ತು ಸ್ಥಿತಿಯನ್ನು ಅರಿಯಬೇಕು. ಚುನಾವಣೆ ನಡೆಯುತ್ತಿದೆ. ಚುನಾವಣೆಗಳನ್ನು ಶಾಂತಿಯುತವಾಗಿ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ ಎಂದರು.

    ನಿನ್ನೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ್ದರಿಂದ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ನಾನೂ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದೆ. ನಾನು ಹೆಲ್ಮೆಟ್ ಧರಿಸಿದರೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು ಯಾರಿಗೆ ತಿಳಿಯುತ್ತದೆ. ಅಲ್ಲದೆ ಹೆಲ್ಮೆಟ್ ಧರಿಸದ್ದನ್ನು ಟ್ವೀಟ್ ಮೂಲಕ ಡಿಜಿಪಿಗೆ ತಿಳಿಸಿದ್ದಾರೆ. ಆದರೆ ಅಧಿಕೃತ ಸಂವಹನಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಕಿರಣ್ ಬೇಡಿಯವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

  • ‘ನಾನ್ ಸೈಡ್ ಬಿಡಲ್ಲ’- ರಸ್ತೆಯ ಮಧ್ಯೆ ಸ್ಕೂಟಿ ನಿಲ್ಲಿಸಿ ಬಸ್ ಚಾಲಕನಿಗೆ ಪಾಠ ಕಲಿಸಿದ ಮಹಿಳೆ

    ‘ನಾನ್ ಸೈಡ್ ಬಿಡಲ್ಲ’- ರಸ್ತೆಯ ಮಧ್ಯೆ ಸ್ಕೂಟಿ ನಿಲ್ಲಿಸಿ ಬಸ್ ಚಾಲಕನಿಗೆ ಪಾಠ ಕಲಿಸಿದ ಮಹಿಳೆ

    ತಿರುವನಂತಪುರಂ: ಕೇರಳದಲ್ಲಿ ಮಹಿಳೆಯೊಬ್ಬರು ಬಸ್‍ಗೆ ಸ್ಕೂಟಿಯನ್ನು ಅಡ್ಡಲಾಗಿ ನಿಲ್ಲಿಸುವ ಮೂಲಕ ಚಾಲಕನಿಗೆ ಬುದ್ಧಿ ಕಲಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದ್ದು,

    ವೈರಲ್ ಆದ ವಿಡಿಯೋದಲ್ಲಿ ಬಸ್ ಚಾಲಕ ಬಲ ಭಾಗದಲ್ಲಿ ಸಂಚರಿಸಿದ್ದು, ಇದನ್ನು ಕಂಡ ಮಹಿಳೆ ಕೆಂಡಾಮಂಡಲವಾಗಿ ತಾನೂ ಸಹ ತನ್ನ ಸ್ಕೂಟಿಯನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾರೆ. ಬಸ್ ಸಣ್ಣ ಜಾಗದಲ್ಲೇ ನುಗ್ಗಲು ಯತ್ನಿಸಿದ್ದು, ಆಗ ಮಹಿಳಾ ರೈಡರ್ ತನ್ನ ಸ್ಕೂಟಿಯನ್ನು ರಸ್ತೆಯ ಬಲಭಾಗದಲ್ಲಿ ನಿಲ್ಲಿಸುತ್ತಾರೆ.

    ಬಸ್ ಮುಂದೆ ಸ್ಕೂಟಿ ಸಿಕ್ಕದಾಗಿ ಕಾಣುತ್ತದೆ, ಇನ್ನೊಂದೆಡೆ ಬಸ್ ಡ್ರೈವರ್ ಮಹಿಳೆಯನ್ನು ಹೆದರಿಸಲು ನೋಡುತ್ತಾನೆ. ಆದರೆ ಮಹಿಳೆ ಮಾತ್ರ ಅವರ ಸ್ಥಾನ ಬಿಟ್ಟು ಕದಲುವುದಿಲ್ಲ. ನಂತರ ಚಾಲಕನೇ ಬಸ್ಸನ್ನು ಮಹಿಳೆಯ ಬಲಕ್ಕೆ ಅಂದರೆ, ರಸ್ತೆಯ ಎಡಕ್ಕೆ ಸಂಚಾರಿ ನಿಯಮದಂತೆ ಚಲಿಸುತ್ತಾನೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೆಚ್ಚು ಜನ ಶೇರ್ ಮಾಡಿ ಮಹಿಳೆಯ ಧೈರ್ಯವನ್ನು ಮೆಚ್ಚಿದ್ದಾರೆ. ಕಮೆಂಟ್ ಮಾಡುತ್ತಿದ್ದಾರೆ.

    ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ನಂತರ ನೆಟ್ಟಿಗರು ಮಹಿಳೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸ್ ರಾಂಗ್ ರೂಟ್‍ನಲ್ಲಿ ಕಿರಿದಾದ ರಸ್ತೆಯಲ್ಲಿ ಚಲಿಸಲು ಯತ್ನಿಸಿದರೂ ಮಹಿಳೆ ಕದಲದೆ ನಿಂತಿರುವುದಕ್ಕೆ ಶಹಬ್ಬಾಶ್ ಎಂದಿದ್ದಾರೆ.

    ಕೆಲವು ಉತ್ತರ ಭಾರತೀಯರು ಇದಕ್ಕೆ ಪ್ರತಿಕ್ರಿಯಿಸಿ, ಇದೇ ಘಟನೆ ಉತ್ತರ ಭಾರತದಲ್ಲಿ ನಡೆದಿದ್ದರೆ ಡ್ರೈವರ್ ಬಸ್ಸನ್ನು ನಿಲ್ಲಿಸುತ್ತಿರಲಿಲ್ಲ. ಇದೊಂದು ಅವಿವೇಕಿಗಳ ತಾಣವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  • 18 ಸಾವಿರ ದಂಡ ಕಟ್ಟುವ ಚಿಂತೆಯಲ್ಲಿ ಪ್ರಾಣಬಿಟ್ಟ ಆಟೋ ಚಾಲಕ

    18 ಸಾವಿರ ದಂಡ ಕಟ್ಟುವ ಚಿಂತೆಯಲ್ಲಿ ಪ್ರಾಣಬಿಟ್ಟ ಆಟೋ ಚಾಲಕ

    ಲಕ್ನೋ: ಸಂಚಾರಿ ನಿಯಮ ಉಲ್ಲಂಘನೆಗೆ ಪೊಲೀಸರು ಹಾಕಿದ್ದ 18 ಸಾವಿರ ದಂಡವನ್ನು ಕಟ್ಟುವ ಚಿಂತೆಯಿಂದ ಅನಾರೋಗ್ಯಕ್ಕೀಡಾಗಿ ಆಟೋ ಚಾಲಕರೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರದಲ್ಲಿ ನಡೆದಿದೆ.

    ಕಲಿಚಾಬಾದಿನ ನಿವಾಸಿ ಗಣೇಶ್ ಅಗರ್ವಾಲ್ ಮೃತ ದುರ್ದೈವಿ. ಗಣೇಶ್ ಆಟೋ ಓಡಿಸಿಕೊಂದು ಜೀವನ ನಡೆಸುತ್ತಿದ್ದರು. ಕಳೆದ ಆಗಸ್ಟ್ 31ರಂದು ಜೌನ್ಪುರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಪೊಲೀಸರು ಗಣೇಶ್ ಅವರಿಗೆ 18 ಸಾವಿರ ರೂಪಾಯಿ ದಂಡ ಹಾಕಿದ್ದರು. ಈ ಭಾರೀ ಮೊತ್ತದ ದಂಡವನ್ನು ಹೇಗೆ ಕಟ್ಟುವುದು ಎಂಬ ಚಿಂತೆಯಲ್ಲಿಯೇ ಗಣೇಶ್ ಅವರು ಅನಾರೋಗ್ಯಕ್ಕಿಡಾಗಿದ್ದರು.

    ಕೆಲದಿನಗಳಿಂದ ಗಣೇಶ್ ಅವರ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಅವರ ಸ್ಥಿತಿ ಗಂಭೀರವಾದ ಬಳಿಕ ವಾರಣಾಸಿಯ ಖಾಸಗಿ ಆಸ್ಪತ್ರೆಗೆ ಅವರನ್ನು ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಗಣೇಶ್ ಅವರು ಸ್ಪಂದಿಸದ ಕಾರಣಕ್ಕೆ ಸೆಪ್ಟೆಂಬರ್ 23ರಂದು ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಗಣೇಶ್ ಅವರ ಸಾವಿಗೆ ಸಂಚಾರಿ ಪೊಲೀಸರು ವಿಧಿಸಿದ ಭಾರೀ ದಂಡವೇ ಕಾರಣ. ಹೇಗೆ ಇಷ್ಟು ಮೆತ್ತದ ದಂಡ ಕಟ್ಟಬೇಕು ಎಂದು ತಿಳಿಯದೆ ಗಣೇಶ್ ಯಾವಾಗಲೂ ಚಿಂತೆಯಲ್ಲಿಯೇ ಇರುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ವಿಚಾರ ಜಿಲ್ಲಾಧಿಕಾರಿವರೆಗೂ ತಲುಪಿದಾಗ, ಡಿಸಿ ಅರವಿಂದ್ ಮಲ್ಲಪ್ಪ ಅವರು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ(ಎಆರ್‌ಟಿಒ) ಉದಯ್‍ವೀರ್ ಸಿಂಗ್ ಬಳಿ ಈ ಬಗ್ಗೆ ಮಾಹಿತಿ ಕೇಳಿದರು. ಅವರು ಜೌನ್ಪುರದ ಸಂಚಾರಿ ಪೊಲೀಸರನ್ನು ವಿಚಾರಿಸಿದರು. ಆಗ ಪೊಲೀಸರು, ಆಗಸ್ಟ್ 31ರಂದು ಗಣೇಶ್ ಅವರನ್ನು ತಡೆದು ಪರಿಶೀಲನೆ ನಡೆಸಿದ್ದೆವು. ಆಗ ಅವರು ಆಟೋ ಪರ್ಮಿಟ್ ಹೊಂದಿರಲಿಲ್ಲ. ಹಾಗೆ ಮಾಲಿನ್ಯ ಪ್ರಮಾಣ ಪತ್ರ ಹಾಗೂ ಚಾಲನಾ ಪ್ರಮಾಣಪತ್ರ ಕೂಡ ಅವರ ಬಳಿಯಿರಲಿಲ್ಲ. ಇದಲ್ಲದೆ ಇನ್ನೂ ಮೂರು ತಪ್ಪುಗಳನ್ನು ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದಕ್ಕೆ ಎಲ್ಲಾ ಸೇರಿ ಅವರಿಗೆ 18 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, ಇದರಲ್ಲಿ ಪೊಲೀಸರ ತಪ್ಪಿಲ್ಲ. ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಮೇಲೆ ದಂಡದ ಪ್ರಮಾಣ ಹೆಚ್ಚಾಗಿದೆ. ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

  • ಒಂದೇ ದಿನಕ್ಕೆ 21.52 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹಿಸಿದ ಬೆಂಗ್ಳೂರು ಟ್ರಾಫಿಕ್ ಪೊಲೀಸರು

    ಒಂದೇ ದಿನಕ್ಕೆ 21.52 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹಿಸಿದ ಬೆಂಗ್ಳೂರು ಟ್ರಾಫಿಕ್ ಪೊಲೀಸರು

    ಬೆಂಗಳೂರು: ರಾಜ್ಯ ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಮೊತ್ತ ಇಳಿಸಿದ್ದರೂ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಒಂದೇ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರು ಬರೋಬ್ಬರಿ 21.52 ಲಕ್ಷಕ್ಕೂ ಅಧಿಕ ದಂಡ ಸಂಗ್ರಹಿಸಿದ್ದಾರೆ.

    ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಕೇಂದ್ರ ಸರ್ಕಾರ ದುಬಾರಿ ದಂಡ ವಿಧಿಸಿತ್ತು. ಆದರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದುಬಾರಿ ದಂಡಕ್ಕೆ ಬ್ರೇಕ್ ಹಾಕಿ, ದಂಡದ ಮೊತ್ತವನ್ನ ಇಳಿಸಿತ್ತು. ಈ ಬೆನ್ನಲ್ಲೇ ವಾಹನ ಸವಾರರು ತಮ್ಮ ಹಳೇ ಚಾಳಿಯನ್ನ ಮುಂದುವರಿಸಿದ್ದಾರೆ. 24 ಗಂಟೆಯಲ್ಲಿ ಅಂದರೆ ಮಂಗಳವಾರ ಒಂದೇ ದಿನಕ್ಕೆ 6,782 ಟ್ರಾಫಿಕ್ ನಿಯಮ ಉಲ್ಲಂಘನೆಯ ಪ್ರಕರಣಗಳು ಸಿಲಿಕಾನ್ ಸಿಟಿ ವಾಹನ ಸವಾರರಿಂದ ದಾಖಲಾಗಿವೆ.

    ಈ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಾಲನೆಯ ಕೇಸ್‍ಗಳೇ ಹೆಚ್ಚು ದಾಖಲಾಗಿವೆ. ಬರೋಬ್ಬರಿ 1,546 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಇದರಿಂದ ಸುಮಾರು 2,87,500 ರೂ. ದಂಡ ಸಂಗ್ರಹವಾಗಿದೆ. ಹಿಂಬದಿ ಸವಾರ ಹೆಲ್ಮೆಟ್ ಧರಿಸದ ಪ್ರಕರಣಗಳು 1,046 ದಾಖಲಾಗಿದ್ದು, ಇದರಿಂದ 2,22,000 ರೂ. ದಂಡ ವಸೂಲಾಗಿದೆ.

    806 ವಾಹನಗಳನ್ನು ತಪ್ಪಾಗಿ ಪಾರ್ಕಿಂಗ್ ಮಾಡಿದ ಪ್ರಕರಣಗಳು ದಾಖಲಾಗಿದ್ದು 1,66,100 ರೂ. ದಂಡವನ್ನು ವಾಹನ ಸವಾರರಿಂದ ಪೊಲೀಸರು ವಸೂಲಿ ಮಾಡಿದ್ದಾರೆ. ಸಿಗ್ನಲ್ ಜಂಪ್ 818 ಪ್ರಕರಣದಿಂದ 1,41,800 ರೂ., ನೋ ಎಂಟ್ರಿ ಪ್ರಕರಣಗಳು 355, ಅದರಿಂದ 1,03,800 ರೂ., ಅಲ್ಲದೆ ವಾಹನದಲ್ಲಿ ಉದ್ದದ ಸಾಮಾಗ್ರಿಗಳನ್ನು ಸಾಗಿಸಿದ 318 ಪ್ರಕರಣಗಳಿಂದ 3,18,100 ರೂ. ದಂಡ ಸಂಗ್ರಹಿಸಲಾಗಿದೆ.

    ಸುಮಾರು 65 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ 6,782 ಪ್ರಕರಣಗಳಿಂದ ಸಂಚಾರಿ ಪೊಲೀಸರು ಒಂದೇ ದಿನಕ್ಕೆ ಬರೋಬ್ಬರಿ 21,52,100 ರೂಪಾಯಿಯನ್ನು ದಂಡ ವಸೂಲಿ ಮಾಡಿದ್ದಾರೆ.

  • ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

    ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

    ಲಕ್ನೋ: ಉತ್ತರ ಪ್ರದೇಶದ ನೊಯ್ದಾದ ಖಾಸಗಿ ಬಸ್ ಮಾಲೀಕರೊಬ್ಬರು ತಮ್ಮ ಬಸ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ಸಾರಿಗೆ ಇಲಾಖೆ 500 ರೂ. ದಂಡದ ಚಲನ್ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.

    ಸೆಪ್ಟೆಂಬರ್ 11ರಂದು ಆನ್‍ಲೈನ್ ಮೂಲಕ ಚಲನ್ ಕಳುಹಿಸಲಾಗಿದ್ದು, ನಮ್ಮ ಸಹೋದ್ಯೋಗಿಯೊಬ್ಬರು ಶುಕ್ರವಾರ ಇದನ್ನು ಪರಿಶೀಲಿಸಿದ್ದಾರೆ ಎಂದು ಬಸ್ ಮಾಲೀಕ ನಿರಂಕರ್ ಸಿಂಗ್ ಹೇಳಿದ್ದಾರೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ದಂಡ ಪಾವತಿಸುವುದಾಗಿಯೂ ಸಿಂಗ್ ತಿಳಿಸಿದ್ದಾರೆ.

    ನಮ್ಮ ಬಸ್‍ಗಳು ನಗರ ಸಾರಿಗೆಯಾಗಿದ್ದು, ಬಸ್ ವ್ಯವಹಾರವನ್ನು ನಮ್ಮ ಮಗ ನೋಡಿಕೊಳ್ಳುತ್ತಾನೆ. ನಮ್ಮ ಬಳಿ 40-50 ಬಸ್‍ಗಳಿವೆ, ಶಾಲೆಗಳಿಗೆ ಹಾಗೂ ವಿವಿಧ ಕಂಪನಿಗಳಿಗೆ ಬಸ್‍ಗಳನ್ನು ಬಾಡಿಗೆಗೆ ನೀಡಲಾಗಿದೆ. ಇವು ನೊಯ್ಡಾ ಹಾಗೂ ಗ್ರೇಟರ್ ನೊಯ್ಡಾದಲ್ಲಿ ಸಂಚರಿಸುತ್ತವೆ ಎಂದು ತಿಳಿಸಿದ್ದಾರೆ.

    ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಜವಾಬ್ದಾರಿಯುತ ಇಲಾಖೆ ಇಂತಹ ಸಣ್ಣ ತಪ್ಪುಗಳನ್ನು ಮಾಡಿದರೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೆ ನಿತ್ಯ ಸಾರಿಗೆ ಇಲಾಖೆ ಇಂತಹ ಅನಗತ್ಯ ಚಲನ್‍ಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಹಾಗೂ ಆತಂಕವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಾನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ. ಅಗತ್ಯವಿದ್ದರೆ ಕೋರ್ಟ್ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಸಾರಿಗೆ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲಿಸಲಾಗುತ್ತಿದೆ, ದೋಷವಾಗಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಹೊಸ ಮೋಟಾರ್ ವಾಹನ ಕಾಯ್ದೆಯ ನಿಯಮದಂತೆ ಚಲನ್ ನೀಡಲಾಗಿದೆ.

    ಈ ಚಲನ್‍ನ್ನು ನೋಯ್ಡಾ ಟ್ರಾಫಿಕ್ ಪೊಲೀಸರು ನೀಡಿಲ್ಲ. ಬದಲಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಹೊರಡಿಸಿದ್ದಾರೆ. ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಈ ಹಿಂದೇ ಅದೇ ಬಸ್‍ಗೆ ನಾಲ್ಕು ಬಾರಿ ದಂಡ ವಿಧಿಸಲಾಗಿತ್ತು. ಈ ಬಾರಿಯೂ ಸೀಟ್ ಬೆಲ್ಟ್ ಅಪರಾಧವಾಗಿದ್ದರೆ ಚಲನ್‍ನಲ್ಲಿ ಸೀಟ್ ಬೆಲ್ಟ್ ನಿಯಮ ಉಲ್ಲಂಘಿಸಿದ್ದಕ್ಕೆ ಎಂದು ಉಲ್ಲೇಖಿಸಬೇಕು, ಹೆಲ್ಮೆಟ್ ಧರಿಸದ್ದಕ್ಕೆ ಎಂದಲ್ಲ ಎಂದು ನಿರಂಕರ್ ಸಿಂಗ್ ವಾದಿಸಿದ್ದಾರೆ. ನಮ್ಮ ಕಡೆಯಿಂದ ಏನಾದರೂ ದೋಷವಿದ್ದರೆ, ನಾವು ದಂಡವನ್ನು ಪಾವತಿಸುತ್ತೇವೆ. ಆದರೆ ಅದು ನಿಜವಾಗಿರಬೇಕು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

  • ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟ ಕ್ಯಾಬ್ ಚಾಲಕರು!

    ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟ ಕ್ಯಾಬ್ ಚಾಲಕರು!

    ನವದೆಹಲಿ: ಹೊಸ ಮೋಟಾರು ಕಾಯ್ದೆ ಬಂದ ನಂತರ ದಂಡದಿಂದ ತಪ್ಪಿಸಿಕೊಳ್ಳಲು ರಾಷ್ಟ್ರ ರಾಜಧಾನಿಯಲ್ಲಿ ಕ್ಯಾಬ್ ಚಾಲಕರು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟುಕೊಂಡು ಓಡಾಡುತ್ತಿದ್ದಾರೆ.

    ಹೌದು, ಕೇಂದ್ರ ಸರ್ಕಾರದ ಹೊಸ ಸಂಚಾರಿ ನಿಯಮದ ಬಗ್ಗೆ ವಿಧಿಸಲಾಗಿರುವ ಭಾರೀ ದಂಡವನ್ನು ತಿಳಿದುಕೊಂಡು ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಚಾಲಕರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ದಂಡದ ನಿಯಮಗಳ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ನಾನಾ ಸಂದೇಶಗಳು ಹರಿದಾಡುತ್ತಿದ್ದು, ಸಂಚಾರಿ ನಿಯಮದ ಪ್ರಕಾರ ಕ್ಯಾಬ್ ಡ್ರೈವರ್‍ ಗಳು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಟ್ಟಿಕೊಳ್ಳಬೇಕು ಇಲ್ಲವಾದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ಎಂಬ ಗಾಳಿ ಸುದ್ದಿ ಹಬ್ಬಿದೆ. ಇದನ್ನೇ ನಂಬಿದ ಕ್ಯಾಬ್ ಚಾಲಕರು ಕಾರಿನಲ್ಲಿ ಕಾಂಡೋಮ್ ಇಟ್ಟುಕೊಂಡು ಕಾರು ಚಾಲನೆ ಮಾಡುತ್ತಿದ್ದಾರೆ.

    ದೆಹಲಿ ಕಾರು ಚಾಲಕ ರಮೇಶ್ ಪಾಲ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ವಿಚಾರದ ಬಗ್ಗೆ ಬಹಳ ಗೊಂದಲವಿದೆ. ಕಾರಿನಲ್ಲಿ ಕಡ್ಡಾಯವಾಗಿ ಕಾಂಡೋಮ್ ಇಟ್ಟಿರಬೇಕು ಎಂಬ ನಿಯಮದ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಆದರೆ ಇತರ ಕ್ಯಾಬ್ ಚಾಲಕರು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಕಾಂಡೋಮ್ ಇಡಬೇಕು ಇಲ್ಲವಾದರೆ ದಂಡ ಹಾಕುತ್ತಾರೆ ಎಂದು ಹೇಳಿದರು. ಅದಕ್ಕಾಗಿಯೇ ನಾನು ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ಕಾಂಡೋಮ್ ಇಡುವ ವಿಚಾರದಲ್ಲಿ ಬೇರೆಯದೇ ಕಾರಣ ಹೇಳುವ ಕೆಲ ಕಾರು ಚಾಲಕರು, ನಾವು ಕಾಂಡೋಮ್ ಇಡುವುದು ಪೊಲೀಸರು ದಂಡ ವಿಧಿಸುತ್ತಾರೆ ಎಂದು ಅಲ್ಲ. ಕಾಂಡೋಮ್ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಬಳಸಿಕೊಳ್ಳಲು ಇಟ್ಟಿಕೊಂಡಿರುತ್ತೇವೆ. ಏನಾದರೂ ಅಪಘಾತವಾದರೆ ಮೂಳೆ ಮುರಿದರೆ ಆ ಜಾಗಕ್ಕೆ ಕಾಂಡೋಮ್‍ನನ್ನು ಕಟ್ಟಿ ರಕ್ತಸ್ರಾವವನ್ನು ತಡೆಯಬಹುದು ಎಂದು ಹೇಳಿದ್ದಾರೆ.

    ಎಲ್ಲಾ ಸಾರ್ವಜನಿಕ ಸೇವಾ ವಾಹನಗಳಲ್ಲಿ ಎಲ್ಲಾ ಸಮಯದಲ್ಲೂ ಮೂರು ಕಾಂಡೋಮ್‍ಗಳನ್ನು ಪ್ರಥಮ ಚಿಕೆತ್ಸೆ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯ. ಏಕೆಂದರೆ ಒಬ್ಬ ವ್ಯಕ್ತಿಗೆ ಗಾಯವಾಗಿ ರಕ್ತಸ್ರಾವವಾದರೆ ರಕ್ತ ಬಾರದಂತೆ ಕಟ್ಟಲು ಕಾಂಡೋಮ್ ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಮೂಳೆ ಮುರಿದು ಹೋದರೆ ಅವರು ಆಸ್ಪತ್ರೆ ತಲುಪುವವರೆಗೆ ಆ ಪ್ರದೇಶದ ಸುತ್ತಲೂ ಕಾಂಡೋಮ್ ಅನ್ನು ಕಟ್ಟಬಹುದು. ಈ ಎಲ್ಲಾ ಕಾರಣದಿಂದ ಕಾಂಡೋಮ್ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ದೆಹಲಿಯ ಸರ್ವೋದಯ ಚಾಲಕ ಸಂಘದ ಅಧ್ಯಕ್ಷ ಕಮಲ್ಜೀತ್ ಗಿಲ್ ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ದೆಹಲಿ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ, ಕಾರಿನಲ್ಲಿ ಕಾಂಡೋಮ್ ಇಟ್ಟುಕೊಳ್ಳಬೇಕು ಎಂಬ ಯಾವುದೇ ನಿಯಮವಿಲ್ಲ. ನಾವು ತಪಾಸಣಾ ಸಮಯದಲ್ಲಿ ಇದರ ಬಗ್ಗೆ ಕೇಳುವುದು ಇಲ್ಲ. ಆದರೆ ಕೆಲ ಎನ್‍ಜಿಒ ಸಂಸ್ಥೆಗಳು ಸುರಕ್ಷಿತ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸುವಾಗ ಚಾಲಕರು ಕಾರಿನಲ್ಲಿ ಕಾಂಡೋಮ್ ಇಟ್ಟುಕೊಂಡಿರಬೇಕು ಎಂದು ಹೇಳುತ್ತಾರೆ. ಈ ಸುದ್ದಿಯೇ ಗಾಳಿ ಸುದ್ದಿಯಾಗಿ ಹಬ್ಬಿರಬಹುದು ಎಂದು ಹೇಳಿದ್ದಾರೆ.

  • ಕೇಂದ್ರ ಸಚಿವ ಜೋಷಿಯಿಂದಲೂ ಸಂಚಾರಿ ನಿಯಮ ಉಲ್ಲಂಘನೆ

    ಕೇಂದ್ರ ಸಚಿವ ಜೋಷಿಯಿಂದಲೂ ಸಂಚಾರಿ ನಿಯಮ ಉಲ್ಲಂಘನೆ

    ಧಾರವಾಡ: ಹೊಸ ಸಂಚಾರಿ ನಿಯಮ ಜಾರಿಯಾಗಿದ್ದರೂ ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಮಾತ್ರ ಯಾವುದಕ್ಕೂ ಡೋಂಟ್ ಕೇರ್ ಎಂದು ತಾವಿರಲಿ, ತಮ್ಮ ಚಾಲಕನಿಗೂ ಸಹ ಸೀಟ್ ಬೆಲ್ಟ್ ಧರಿಸುವಂತೆ ಸೂಚಿಸುವುದಿಲ್ಲ.

    ಇಂದು ಧಾರವಾಡದ ಹೊಸ ಬಸ್ ನಿಲ್ದಾದ ಬಳಿ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲನೆ ಮಾಡಲು ಕಾರಿನಲ್ಲಿ ಬಂದಿದ್ದ ಸಚಿವರು ಬೆಲ್ಟ್ ಹಾಕಿರಲಿಲ್ಲ. ಸಚಿವರಿರಲಿ, ಅವರ ಡ್ರೈವರ್ ಸಹ ಸೀಟ್ ಬೆಲ್ಟ್ ಹಾಕಿರಲಿಲ್ಲ.

    ಹೊಸ ಸಂಚಾರಿ ನಿಯಮ ಜಾರಿಯಾದ ನಂತರ ಸಾರ್ವಜನಿಕರು ಹಾಗೂ ವಿರೋಧ ಪಕ್ಷಗಳಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಕೂಡಲೇ ದಂಡವನ್ನು ಕಡಿಮೆ ಮಾಡಿ ಇಲ್ಲವೇ ರಸ್ತೆಗಳನ್ನು ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ತಿಕ್ಕಾಟದ ನಡುವೆ ಕೇಂದ್ರ ಸಚಿವರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಕಾರಿನಲ್ಲಿ ರಾಜಾರೋಷವಾಗಿ ಪ್ರಯಾಣ ಮಾಡುತ್ತಿದ್ದಾರೆ.

    ನಿಯಮವನ್ನು ಜಾರಿಗೆ ತಂದ ಕೇಂದ್ರ ಸಚಿವ ಸಂಪುಟದ ಸಚಿವರೇ ನಿಯಮವನ್ನು ಪಾಲಿಸುತ್ತಿಲ್ಲ ಇವರಿಗೆ ದಂಡ ಹಾಕುವವರು ಯಾರು? ನಿಯಮ ಅಂದಮೇಲೆ ಎಲ್ಲರಿಗೂ ಅನ್ವಯಿಸುತ್ತದೆ. ಆದರೆ, ಸಾರ್ವಜನಿಕರಿಗೆ ವಿನಾಕಾರಣ ಕ್ಯಾತೆ ತೆಗೆಯೋ ಪೊಲೀಸರು ಸಚಿವರ ವರಸೆ ನೋಡಿಯೂ ನೋಡದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಮಾಡಿತ್ತು. ಅವರದ್ದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿ ಅವರು ಸಂಚಾರಿ ನಿಯಮವನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಆದರೆ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಬಹುತೇಕ ರಾಜಕಾರಣಿಗಳು ಸೀಟ್ ಬೆಲ್ಟ್ ಧರಿಸದೆ, ಕಾರಿನಲ್ಲಿ ಪ್ರಯಾಣಿಸುತ್ತಾರೆ ಎಂಬುದರ ಕುರಿತು ಬೆಳಕು ಚೆಲ್ಲಲಾಗಿತ್ತು.

  • ತಲೆ ಕೆಟ್ಟ ಬಿಎಸ್‍ವೈಗೆ ಅರಳು ಮರಳಾಗಿದೆ, ಸಂಚಾರಿ ನಿಯಮ ಬದಲಾಗಬಾರದು – ಎಸ್.ಆರ್ ಶ್ರೀನಿವಾಸ್

    ತಲೆ ಕೆಟ್ಟ ಬಿಎಸ್‍ವೈಗೆ ಅರಳು ಮರಳಾಗಿದೆ, ಸಂಚಾರಿ ನಿಯಮ ಬದಲಾಗಬಾರದು – ಎಸ್.ಆರ್ ಶ್ರೀನಿವಾಸ್

    ತುಮಕೂರು: ತಲೆ ಕೆಟ್ಟ ಯಡಿಯೂರಪ್ಪಗೆ ಅರಳು ಮರಳಾಗಿದೆ. ಅಲ್ಲೆಲ್ಲೋ ಗುಜರಾತ್‍ನಲ್ಲಿ ಟ್ರಾಫಿಕ್ ಹಳೆ ರೂಲ್ಸ್ ಫಾಲೋ ಮಾಡಿದ್ದಾರೆ ಎಂದು ಇಲ್ಲೂ ಮಾಡೋಕೆ ಹೊರಟಿದ್ದಾರೆ ಎಂದು ಸಿಎಂ ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರಿ ಹೊಸ ನಿಯಮ ಜಾರಿಯಾಗಬೇಕು. ಹೊಸ ನಿಯಮಕ್ಕೆ ವಿನಾಯತಿ ಕೊಡಬಾರದು. ಹೊರದೇಶದಲ್ಲಿ ಅಪಘಾತ ಆದರೆ ಅತಿ ಹೆಚ್ಚು ದಂಡ ಹಾಕುತ್ತಾರೆ. ಎರಡು ಬಾರಿ ಅಪಘಾತ ಮಾಡಿದರೆ 6 ತಿಂಗಳು ಜೈಲಿಗೆ ಹಾಕುತ್ತಾರೆ. ಮೂರು ಬಾರಿ ಅಪಘಾತ ಮಾಡಿದೆ ಮೂರು ವರ್ಷ ಜೈಲು, ಲೈಸನ್ಸ್ ರದ್ದು ಮಾಡುತ್ತಾರೆ. ಹಾಗಾಗಿ ಅಲ್ಲಿನ ವಾಹನ ಸವಾರರಿಗೆ ಭಯ ಇರುತ್ತದೆ ಎಂದರು.

    ನಮ್ಮ ದೇಶದಲ್ಲೂ ಹೊಸ ದಂಡ ಜಾರಿಯಾದರೆ ಭಯ ಹುಟ್ಟಿ ನಿಯಮ ಉಲ್ಲಂಘನೆ ಕಡಿಮೆಯಾಗುತಿತ್ತು. ಹೊಸ ರೂಲ್ಸ್ ಹಾಗೇ ಇದ್ದರೆ ಜನರು ದೇಶದ ಕಾನೂನಿಗೆ ಬೆಲೆ ನೀಡುತ್ತಾರೆ. ಕಾನೂನು ಪಾಲನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳೋರು. ಹೊಸ ನಿಯಮ ಹಾಗೆಯೇ ಜಾರಿಯಾಗಬೇಕು, ಪರಿಷ್ಕರಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

    ಹೊಸ ನಿಯಮಕ್ಕೂ ಮುಂಚೆಯೇ 6.53 ಲಕ್ಷ ದಂಡ ಕಟ್ಟಿದ್ದ ಟ್ರಕ್ ಮಾಲೀಕ

    ಭುವನೇಶ್ವರ: ಟ್ರಕ್ ಮಾಲೀಕನೊಬ್ಬ ಹೊಸ ಮೋಟಾರು ವಾಹನಗಳ ಕಾಯ್ದೆ ಬರುವ ಮೊದಲೇ 6.53 ಲಕ್ಷ ದಂಡ ಕಟ್ಟಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ.

    ನಾಗಾಲ್ಯಾಂಡ್ ನೋಂದಾಯಿತ ಟ್ರಕ್ಕೊಂದು ಏಳು ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 6.53 ಲಕ್ಷ ದಂಡವನ್ನು ಮಾಲೀಕ ಕಟ್ಟಿದ್ದಾರೆ. ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಹೊಸ ಸಂಚಾರಿ ನಿಯಮ ಸೆಪ್ಟಂಬರ್ 1 ರಿಂದ ಜಾರಿಗೆ ಬಂದಿದ್ದರೆ ಈ ಟ್ರಕ್ ಮಾಲೀಕನಿಗೆ ಆಗಸ್ಟ್ 10 ರಂದೇ ಹಳೆಯ ಕಾಯ್ದೆಯ ಅಡಿ ಬರೋಬ್ಬರಿ 6.53 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಸಂಬಲ್ಪುರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್.ಟಿ.ಒ) ಟ್ರಕ್ ಚಾಲಕ ದಿಲೀಪ್ ಕಾರ್ತಾ ಮತ್ತು ಲಾರಿ ಮಾಲೀಕ ಶೈಲೇಶ್ ಶಂಕರ್ ಲಾಲ್ ಗುಪ್ತ ಅವರ ಲಾರಿಗೆ ಒಡಿಶಾ ಮೋಟಾರು ವಾಹನಗಳ ತೆರಿಗೆ (ಒಎಂವಿಟಿ) ಕಾಯ್ದೆಯಡಿ ರಸ್ತೆ ತೆರೆಗೆ ಪಾವತಿಸದ್ದಕ್ಕೆ 6,40,500 ರೂ ದಂಡ ಹಾಕಲಾಗಿದೆ.

    ಶೈಲೇಶ್ ಶಂಕರ್ ಲಾಲ್ ಗುಪ್ತ ಲಾರಿಯನ್ನು 2014ರ ಜುಲೈ 21 ರಂದು ಖರೀದಿಸಿದ ನಂತರ ರಸ್ತೆ ತೆರಿಗೆಯನ್ನು ಪಾವತಿಸಿರಲಿಲ್ಲ. ಸೆ.30 ರಂದು ದಂಡವನ್ನು ಪಾವತಿ ಮಾಡಲು ತೆರಳಿದ್ದಾರೆ. ಹೀಗಾಗಿ 5 ವರ್ಷ ತೆರಿಗೆ ಪಾವತಿ ಮಾಡದೇ ಲಾರಿ ಚಾಲನೆ ಮಾಡಿದಕ್ಕೆ ಅವರಿಗೆ 6,40,500 ದಂಡ ಹಾಕಿದ್ದರೆ ಇತರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಉಳಿದ 12,500 ರೂ. ದಂಡವನ್ನು ವಿಧಿಸಲಾಗಿದೆ.

    ಮಾಲೀಕನಿಗೆ ನೀಡಿರುವ ಚಲನ್ ಪ್ರತಿ ಪ್ರಕಾರ, ರಸ್ತೆ ತೆರಿಗೆ ದಂಡದ ಜೊತೆಗೆ, ಸಾಮಾನ್ಯ ಅಪರಾಧಕ್ಕೆ 100 ರೂ. ಹಾಗೂ ಆದೇಶಗಳ ಅವಿಧೇಯತೆ ಮತ್ತು ಅಡಚಣೆಗೆ 500 ರೂ, ವಾಯು ಮತ್ತು ಶಬ್ದ ಮಾಲಿನ್ಯ ಮಾಡಿದ್ದಕ್ಕೆ 1,000 ರೂ. ಮತ್ತು ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಕ್ಕೆ 5,000 ರೂ., ಇದಲ್ಲದೆ ಪರವಾನಗಿ ಇಲ್ಲದೆ ವಾಹನವನ್ನು ಬಳಸಿದ್ದಕ್ಕಾಗಿ ಅಥವಾ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 5,000 ರೂ. ವಿಮೆಯಿಲ್ಲದೆ ಲಾರಿ ಚಲಿಸಿದಕ್ಕೆ 1,000 ರೂ. ಸೇರಿ ಒಟ್ಟು 6.53 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.