Tag: ಸಂಕ್ರಾಂತಿ ಹಬ್ಬ

  • ತೋಟದ ಮನೆಯಲ್ಲಿ ರಾಸುಗಳ ಕಿಚ್ಚು ಹಾಯಿಸಿ ಸಂಕ್ರಾಂತಿ ಸಂಭ್ರಮಿಸಿದ ಡಿಬಾಸ್

    ತೋಟದ ಮನೆಯಲ್ಲಿ ರಾಸುಗಳ ಕಿಚ್ಚು ಹಾಯಿಸಿ ಸಂಕ್ರಾಂತಿ ಸಂಭ್ರಮಿಸಿದ ಡಿಬಾಸ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ತೋಟದ ಮನೆಯಲ್ಲಿ ರಾಸುಗಳ ಕಿಚ್ಚು ಹಾಯಿಸಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

    ಡಿಬಾಸ್ ದರ್ಶನ್ ಅವರು ಮೈಸೂರಿನ ಟಿ.ನರಸೀಪುರದ ರಸ್ತೆಯಲ್ಲಿರುವ ತಮ್ಮ ತೂಗುದೀಪ ಫಾರಂನಲ್ಲಿ ಆಪ್ತರು ಹಾಗೂ ಗೆಳೆಯರೊಂದಿಗೆ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ತೋಟದ ಮನೆಯಲ್ಲಿರುವ ದನಗಳ ಜೊತೆ ತಮ್ಮಿಷ್ಟದ ಕುದುರೆಗಳನ್ನು ಕಿಚ್ಚು ಹಾಯಿಸಿ ಸಂಕ್ರಾಂತಿಯನ್ನು ಸಂಭ್ರಮಿಸಿದ್ದಾರೆ.

    https://twitter.com/DBossFc171/status/1217458422993440768

    ನಟ ದರ್ಶನ್ ಅವರು ತಮ್ಮಿಷ್ಟದ ಬಿಳಿ ಕುದುರೆಯನ್ನು ಹಿಡಿದು ಕಿಚ್ಚು ಹಾಯಿಸುತ್ತಿರುವ ಫೋಟೋ ಹಾಗೂ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ರಾಬರ್ಟ್’ ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, `ಎಲ್ಲರಿಗೂ ವರ್ಷದ ಮೊದಲನೆಯ ಹಬ್ಬ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ಎಳ್ಳು, ಬೆಲ್ಲ ಸವಿಯುತ್ತಾ ನಮ್ಮ ರಾಬರ್ಟ್ ಚಿತ್ರದ ಎರಡನೇ ಲುಕ್ ಪೋಸ್ಟರ್ ನಿಮಗಾಗಿ ಬಿಡುಗಡೆ ಮಾಡುತ್ತಿದ್ದೇವೆ. ನೋಡಿ ಆಶೀರ್ವದಿಸಿ’ ಎಂದು ಬರೆದುಕೊಂಡಿದ್ದರು.

    ರಿಲೀಸ್ ಆಗಿರುವ ಲುಕ್ ಮೋಷನ್ ಪೋಸ್ಟರ್ 53 ಸೆಕೆಂಡ್‍ಗಳಿದ್ದು, ಅದ್ಭುತವಾಗಿ ಮೂಡಿ ಬಂದಿದೆ. ದರ್ಶನ್ ಆಂಜನೇಯ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಹೆಗಲ ಮೇಲೆ ರಾಮನ ಪಾತ್ರದ ಮಗುವನ್ನು ಕೂರಿಸಿಕೊಂಡಿದ್ದಾರೆ. ಪುಟ್ಟ ರಾಮ ರಾವಣ ನ ಪ್ರತಿಕೃತಿಯನ್ನು ದಹಿಸಲು ಬಿಲ್ಲು ಹಿಡಿದಿರುವುದನ್ನು ಕಾಣಬಹುದಾಗಿದೆ.

    ಕುರುಕ್ಷೇತ್ರದಲ್ಲಿ ದುರ್ಯೋಧನನಾಗಿ ನೋಡಿದ್ದ ಅಭಿಮಾನಿಗಳು `ರಾಬರ್ಟ್’ ಸಿನಿಮಾದಲ್ಲಿ ಆಂಜನೇಯನ ಅವತಾರದಲ್ಲಿ ದರ್ಶನ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ರಿಲೀಸ್ ಆಗಿರುವ ಎರಡನೇ ಪೋಸ್ಟರ್ ಸಿನಿಮಾದ ಮೇಲಿನ ಕೂತುಹಲವನ್ನು ಮತ್ತುಷ್ಟು ಹೆಚ್ಚಿಸಿದೆ.

  • ಸ್ವೀಟಿ ಕನ್ನಡ ಪ್ರೇಮಕ್ಕೆ ಕನ್ನಡಿಗರು ಫಿದಾ

    ಸ್ವೀಟಿ ಕನ್ನಡ ಪ್ರೇಮಕ್ಕೆ ಕನ್ನಡಿಗರು ಫಿದಾ

    ಬೆಂಗಳೂರು: ಟಾಲಿವುಡ್‍ನಲ್ಲಿ ಖ್ಯಾತಿ ನಟಿಯಾಗಿದ್ದರೂ ಅನುಷ್ಕಾ ಶೆಟ್ಟಿ ಅವರಿಗೆ ಕನ್ನಡದ ಮೇಲಿರುವ ಪ್ರೀತಿ ಕಿಂಚಿತ್ತು ಕಡಿಮೆಯಾಗಿಲ್ಲ. ಬೇರೆ ಭಾಷೆ ಸಿನಿಮಾಗಳಲ್ಲಿ ಚಾನ್ಸ್ ಸಿಕ್ಕ ಬಳಿಕ ಹಲವರು ಕನ್ನಡವನ್ನೇ ಮರೆತಂತೆ ಆಡುತ್ತಾರೆ. ಆದರೆ ಅನುಷ್ಕಾ ಶೆಟ್ಟಿ ಅವರು ಮಾತ್ರ ಅಭಿಮಾನಿಗಳಿಗೆ ಕನ್ನಡದಲ್ಲಿ ಸಂಕ್ರಾಂತಿ ಶುಭಾಶಯ ತಿಳಿಸಿ ಎಲ್ಲರ ಮನಗೆದ್ದಿದ್ದಾರೆ.

    ಮಂಗಳೂರು ಮೂಲದವರಾದ ನಟಿ ಅನುಷ್ಕಾ ಶೆಟ್ಟಿ ಅವರು ಹೆಚ್ಚು ನಟಿಸಿದ್ದು ಮಾತ್ರ ತೆಲುಗು, ತಮಿಳು ಸಿನಿಮಾದಲ್ಲಿ. ಆದರೆ ಸ್ವೀಟಿ ಕನ್ನಡ ಪ್ರೇಮ, ತಾಯ್ನಾಡಿಗೆ ಮಿಡಿಯುವ ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಮಕರ ಸಂಕ್ರಾಂತಿ ಹಬ್ಬ. ಹೌದು ಅನುಷ್ಕಾ ಶೆಟ್ಟಿ ಕನ್ನಡದಲ್ಲಿಯೇ ಮಕರ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ. ಇದನ್ನೂ ಓದಿ: ಒಂದು ಪೋಸ್ಟ್ ಮೂಲಕ ಕನ್ನಡಿಗರ ಮನಸ್ಸು ಗೆದ್ದ ಅನುಷ್ಕಾ

    https://www.facebook.com/AnushkaShetty/photos/a.10150245834470193/10163148769415193/?type=3&theater

    ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಅನುಷ್ಕಾ ಸಂಕ್ರಾಂತಿ ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಬರೆದು ಅಭಿಮಾನಿಗಳ ಮನಗೆದ್ದಿದ್ದಾರೆ. ತೆಲುಗು ತಮಿಳಿನ ಸ್ಟಾರ್ ನಟಿಯಾದರೂ ಕನ್ನಡದಲ್ಲಿಯೇ ಶುಭಕೋರಿದ ಅನುಷ್ಕಾ ಕನ್ನಡ ಪ್ರೀತಿಗೆ ಕನ್ನಡಿಗರ ದಿಲ್ ಖುಷ್ ಆಗಿದೆ.

    ಈ ಹಿಂದೆ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬ ಶುಭಾಶಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದರು. ತಮ್ಮ ತಾಯಿ ಪ್ರಫುಲ್ಲಾ ಅವರ ಹುಟ್ಟುಹಬ್ಬದ ದಿನದಂದು ತಾಯಿ ಹಾಗೂ ಇತರೆ ಕುಟುಂಬಸ್ಥರೊಂದಿಗೆ ಅನುಷ್ಕಾ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.

    ಫೋಟೋ ಹಾಕಿ ಅದಕ್ಕೆ, “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದಿದ್ದರು. ಅನುಷ್ಕಾ ಶೆಟ್ಟಿ ಅವರ ಕನ್ನಡ ಪ್ರೇಮ ನೋಡಿ ಅಭಿಮಾನಿಗಳು ಖುಷಿಯಾಗಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಕೆಆರ್‌ಪೇಟೆಯಲ್ಲಿ ಮಕ್ಕಳ, ಪೋಷಕರ ಸುಗ್ಗಿ ಸಂಭ್ರಮ

    ಕೆಆರ್‌ಪೇಟೆಯಲ್ಲಿ ಮಕ್ಕಳ, ಪೋಷಕರ ಸುಗ್ಗಿ ಸಂಭ್ರಮ

    ಮಂಡ್ಯ: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜಿಲ್ಲೆಯ ಕೆಆರ್‌ಪೇಟೆ ಪಟ್ಟಣದ ಪ್ರಗತಿ ಪಾಠಶಾಲೆಯಲ್ಲಿ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.

    ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಕ್ಕಳು ಹಾಗೂ ಪೋಷಕರು ಸಾಂಪ್ರದಾಯಿಕ ಉಡುಗೆ-ತೊಡುಗೆಯನ್ನು ತೊಟ್ಟು, ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ಎಳ್ಳು ಬೆಲ್ಲವನ್ನು ವಿತರಿಸಿ ಭಾವೈಕ್ಯತೆ ಹಾಗೂ ನಮ್ಮ ಸಂಸ್ಕೃತಿ ಪರಂಪರೆಗೆ ಸಾಕ್ಷಿಯಾದರು.

    ಅಲ್ಲದೇ ಕೆಆರ್‌ಪೇಟೆ ಪಟ್ಟಣದ ಪುರಾಣ ಪ್ರಸಿದ್ಧವಾದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಸಂಕ್ರಾಂತಿ ಸುಗ್ಗಿ ಸಂಭ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಕೆ.ಕಾಳೇಗೌಡ ಅವರು ಚಾಲನೆ ನೀಡಿದರು. ನಂತರ ಶ್ರವಣಬೆಳಗೊಳ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ರಂಗಸ್ಥಳದಲ್ಲಿ ಸುಗ್ಗಿ ನೃತ್ಯವನ್ನು ಮಾಡಿ ಸಂಭ್ರಮಿಸಿದರು.

    ಮಕ್ಕಳು ಪಟ್ಟಣದ ಜನತೆಗೆ ಹಾಗೂ ಮಕ್ಕಳಿಗೆ ಎಳ್ಳುಬೆಲ್ಲವನ್ನು ವಿತರಿಸಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಕ್ಕಳ ಈ ಸಂಭ್ರಮವನ್ನು ವೀಕ್ಷಣೆ ಮಾಡಿದ ಜನರು ಸಹ ಫುಲ್ ಏಂಜಾಯ್ ಮಾಡಿದರು.

  • ಸಂಕ್ರಾಂತಿ ಎಫೆಕ್ಟ್ – ಹೆಚ್ಚಾಯ್ತು ತರಕಾರಿಗಳ ಬೆಲೆ

    ಸಂಕ್ರಾಂತಿ ಎಫೆಕ್ಟ್ – ಹೆಚ್ಚಾಯ್ತು ತರಕಾರಿಗಳ ಬೆಲೆ

    – ಪೆಟ್ರೋಲ್, ಡಿಸೇಲ್ ರೀತಿ ತರಕಾರಿ ದರ ಅಧಿಕ!

    ಬೆಂಗಳೂರು: ಸಂಕ್ರಾಂತಿ ವರ್ಷದ ಮೊದಲ ಹಬ್ಬ. ಚೆನ್ನಾಗಿ ಆಚರಿಸಬೇಕು ಎಂಬ ಉತ್ಸಾಹಕ್ಕೆ ತರಕಾರಿ ಬೆಲೆಗಳು ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿವೆ.

    ಬೆಂಗಳೂರಿನ ಹಾಪ್ ಕಾಮ್ಸ್ ಮಳಿಗೆಗಳ ಬಳಿ ವ್ಯಾಪಾರಿಗಳು ಖಾಲಿ ಖಾಲಿ ಹೊಡೆಯುತ್ತಿದ್ದಾರೆ. ಈರುಳ್ಳಿ ಬೆಲೆ ಇನ್ನೂ ಮೊದಲ ಬೆಲೆಗೆ ಬಂದಿಲ್ಲ. ಜೊತೆಗೆ ತರಕಾರಿಗಳ ಬೆಲೆ ಸ್ವಲ್ಪ ಸ್ವಲ್ಪ ಹೆಚ್ಚಾಗುತ್ತಲೇ ಇದೆ. ನುಗ್ಗೇಕಾಯಿ ಕೆಜಿಗೆ 230 ರೂಪಾಯಿ ಆಗಿದೆ. ಬಟಾಣಿ, ಗುಂಡು ಬದನೆ ಬೆಲೆ ಕಳೆದ ದಿನಕ್ಕಿಂತ 15 ರೂಪಾಯಿ ಜಾಸ್ತಿಯಾಗಿದೆ. ಕ್ಯಾರೆಟ್ 90 ರೂ. ಆಗಿದೆ.

    ಹಬ್ಬದ ಹಿಂದಿನ ದಿನಕ್ಕಿಂತ ಸಂಕ್ರಾಂತಿಗೆ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿರುವುದು ಹಬ್ಬದ ಮೂಡ್‍ನಲ್ಲಿ ಬೇಜಾರು ತರಿಸಿದೆ. ಹಬ್ಬದ ಎಫೆಕ್ಟ್ ಗೆ ಗ್ರಾಹಕನ ಜೇಬು ತರಕಾರಿಗೆ ಖಾಲಿಯಾಗುವಂತಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಕಡಲೆಕಾಯಿ ಹಾಗೂ ಅವರೆಕಾಯಿ ಬೇಕೆ ಬೇಕು. ಅವರೆಕಾಯಿ ಕೆಜಿಗೆ 50-60 ರೂಪಾಯಿಯಾಗಿದ್ದರೆ, ಕಡಲೆಕಾಯಿ ಬೆಲೆ ಕೆಜಿಗೆ 90 ರೂಪಾಯಿಯಾಗಿದೆ. ಪ್ರತಿದಿನವೂ ಹಾಪ್ ಕಾಮ್ಸ್ ತರಕಾರಿ ದರ ಏರಿಕೆಯಾಗುತ್ತಲೇ ಇದೆ.

    ಎಷ್ಟೇ ಬೆಲೆಯಾದರೂ ತರಕಾರಿ ಖರೀದಿಮಾಡಲೇಬೇಕು. ಖರೀದಿ ಮಾಡುತ್ತಿದ್ದೇವೆ. ಹಬ್ಬಕ್ಕಾದರೂ ದರ ಕಡಿಮೆಯಾದರೆ ಸಾಕು ಅನ್ನಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ದರ ಏರಿಕೆಗೆ ಕಡಿವಾಣ ಹಾಕಿ ಜನರು ಕೊಂಡುಕೊಳ್ಳುವಂತೆ ಮಾಡಬೇಕು. ಇಲ್ಲವಾದರೆ ನಾವು ಇನ್ನೂ ಕಷ್ಟದ ದಿನಗಳನ್ನ ನೋಡಬೇಕಾಗುತ್ತೆ ಎಂದು ಗ್ರಾಹಕರು ಹೇಳುತ್ತಿದ್ದಾರೆ.

    ಯಾವುದಕ್ಕೆ ಎಷ್ಟು?
    ಹುರಳಿಕಾಯಿ 58 ರೂ, ಕ್ಯಾರೆಟ್ 92 ರೂ. ಆಗಿದೆ. ಇನ್ನೂ ಬೀಟ್‍ರೋಟ್ ಕೆಜಿಗೆ 39 ರೂ. ಇದೆ. ನವಿಲು ಕೋಸು 30 ರೂ., ಬದನೆ ಕಾಯಿ 40 ರೂ., ಬಿಳಿ ಬದನೆ 67 ರೂ. ಆಗಿದೆ. ಟೊಮೊಟೋ ಕೆಜಿಗೆ 28 ರೂ. ಆಗಿದೆ. ಈರುಳ್ಳಿ- 65 ರೂ., ಕಡ್ಲೆಕಾಯಿ 90 ರೂ. ಆಗಿದೆ. ನುಗ್ಗೆಕಾಯಿ 230 ರೂ., ಬಟಾಣಿ ಕೆಜಿಗೆ 80 ರೂ. ಆಗಿದೆ.

  • ಹಿಂದೂ, ಕ್ರೈಸ್ತರು ಜೊತೆಗೂಡಿ ಸಂಕ್ರಾಂತಿ ಆಚರಣೆ – ಪೊಂಗಲ್ ತಯಾರಿಸಿ ವಿಶೇಷ ಪೂಜೆ

    ಹಿಂದೂ, ಕ್ರೈಸ್ತರು ಜೊತೆಗೂಡಿ ಸಂಕ್ರಾಂತಿ ಆಚರಣೆ – ಪೊಂಗಲ್ ತಯಾರಿಸಿ ವಿಶೇಷ ಪೂಜೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹಿಂದೂ, ಕ್ರೈಸ್ತರು ಒಟ್ಟಿಗೆ ಸೇರಿ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸುವ ಮೂಲಕ ಧಾರ್ಮಿಕ ಸಹಿಷ್ಣುತೆ ಮೆರೆದಿದ್ದಾರೆ.

    ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆ ನಡೆಯಿತು. ವಿಶೇಷವಾಗಿ ಕ್ರೈಸ್ತ ಪಾದ್ರಿ ಸಗಯ್ ರಾಜುರವರಿಂದ ಸಂಕ್ರಾಂತಿ ಹಿನ್ನೆಲೆ ಪೂಜೆ, ಪ್ರಾರ್ಥನೆ ನಡೆಯಿತು.

    ಯಾವುದೇ ಬೇಧವಿಲ್ಲದೆ ಹಿಂದೂ, ಕ್ರೈಸ್ತ ಭಾಂದವರು ಜೊತೆಯಾಗಿ ಪೊಂಗಲ್ ತಯಾರಿಸಿ, ಎಲ್ಲರಿಗೂ ಹಂಚಿ ಸಂಭ್ರಮ ಸಡಗರದಿಂದ ಜೊತೆಗೂಡಿ ಸಂಕ್ರಾಂತಿ ಹಬ್ಬ ಆಚರಿಸಿದ್ದು ಬಹಳ ವಿಶೇಷವಾಗಿತ್ತು.

    ಇತ್ತ ಮೈಸೂರಿನಲ್ಲಿ ವಿದೇಶಿಗರು ಸಂಕ್ರಾಂತಿ ಸಂಭ್ರಮದಲ್ಲಿ ಭಾಗಿಯಾಗಿ ಎಲ್ಲರ ಮನಗೆದ್ದಿದ್ದಾರೆ. ಭಾರತೀಯ ಸಂಪ್ರದಾಯದಂತೆ ಗೋಪೂಜೆ ಮಾಡಿ ಗೋಮಾತೆಗೆ ನಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಗೋವುಗಳಿಗೆ ಪೂಜೆ ಮಾಡಿ ಫಲತಾಂಬುಲ ಕೂಡ ನೀಡಿದರು. ಜೊತೆಗೆ ಭತ್ತದ ರಾಶಿ, ನೇಗಿಲು, ಎತ್ತಿನ ಗಾಡಿ ಪರಿಕರಗಳಿಗೂ ಪೂಜೆ ಸಲ್ಲಿಸಿದರು.

  • ಒಂದೇ ದಿನ ರಸ್ತೆ ಅಪಘಾತಕ್ಕೆ 7 ಬಲಿ

    ಒಂದೇ ದಿನ ರಸ್ತೆ ಅಪಘಾತಕ್ಕೆ 7 ಬಲಿ

    ಧಾರವಾಡ: ಸಂಕ್ರಾಂತಿ ಹಬ್ಬದ ಸಂಭ್ರಮ ಜಿಲ್ಲೆಯ ಪಾಲಿಗೆ ಸೂತಕದ ದಿನವಾಗಿ ಪರಿಣಿಮಿಸಿದೆ. ಯಾಕೆಂದರೆ ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 2 ವರ್ಷದ ಮಗು ಸೇರಿ ಒಟ್ಟು ಏಳು ಜನರು ಮೃತಪಟ್ಟಿದ್ದಾರೆ. ಇದನ್ನೂ ಓದಿ:  ಟಿಫಿನ್ ಮಾಡಿ ಹೊರಟ 5 ನಿಮಿಷದಲ್ಲೇ ನಾಲ್ವರು ದುರ್ಮರಣ

    ಇಂದು ಬೆಳಗ್ಗೆ ಧಾರವಾಡ ಹೊರವಲಯದ ಯರಿಕೊಪ್ಪ ಬೈಪಾಸ್ ಬಳಿ ನಡೆದ ಟೆಂಪೋ ಮತ್ತು ಕಾರು ಮಧ್ಯದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಧಾರವಾಡ-ಬೆಳಗಾವಿ ರಸ್ತೆಯ ಪೆಪ್ಸಿ ಕಂಪನಿ ಬಳಿಯ ಸರಣಿ ಅಪಘಾತದಲ್ಲಿ ಓರ್ವ ಟಾಟಾ ಏಸ್ ಚಾಲಕ ಸಾವನ್ನಪ್ಪಿದ್ದನು. ಸಂಜೆ ಹೊತ್ತಿಗೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ನಡೆದ ಬಸ್ ಹಾಗೂ ಬೈಕ್ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

    ಹುಬ್ಬಳ್ಳಿ-ಗದಗ ಹೆದ್ದಾರಿಯಲ್ಲಿ ಸಾರಿಗೆ ಸಂಸ್ಥೆ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಈ ಅಪಘಾತದಿಂದ ಬೈಕ್ ಮೇಲಿದ್ದ ಶಿವಪ್ಪ ಕಾಳೆ (25) ಹಾಗೂ ದುರ್ಗಪ್ಪ ಅಬ್ಬಿಗೇರಿ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಬೈಕ್ ಮೇಲಿದ್ದ ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯಲ್ಲಿ ಸಂಕ್ರಮಣದ ಸಂದರ್ಭದಲ್ಲಿ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದು, ಸಂಭ್ರಮದ ಬದಲಿಗೆ ಕರಾಳ ಸಂಕ್ರಾಂತಿಯಾಗಿ ಹೋಗಿದೆ.

  • ಸಂಕ್ರಾಂತಿ ಸ್ಪೆಷಲ್- ಮಾರುಕಟ್ಟೆಗೆ ಲಗ್ಗೆಯಿಟ್ಟ ಕಪ್ಪುಕಬ್ಬು

    ಸಂಕ್ರಾಂತಿ ಸ್ಪೆಷಲ್- ಮಾರುಕಟ್ಟೆಗೆ ಲಗ್ಗೆಯಿಟ್ಟ ಕಪ್ಪುಕಬ್ಬು

    – ಕೇರಳ, ತಮಿಳುನಾಡು, ಗುಜರಾತಿಗೂ ರಫ್ತು

    ರಾಮನಗರ: ಹೊಸ ವರ್ಷದ ಆರಂಭದ ಮೊದಲ ಹಬ್ಬವೇ ಸಂಕ್ರಾಂತಿ. ದೇಶದಾದ್ಯಂತ ಅನೇಕ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಆದರೆ ಸಂಕ್ರಾಂತಿ ಆಚರಣೆಗೆ ಎಳ್ಳು, ಬೆಲ್ಲ, ಕೊಬ್ಬರಿ ಜೊತೆಗೆ ಕಪ್ಪು ಕಬ್ಬು ಇರಲೇ ಬೇಕು. ಹಾಗಾಗಿ ಈ ಕಪ್ಪುಕಬ್ಬಿಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಡಿಮ್ಯಾಂಡ್ ಇದೆ. ಅದರಲ್ಲೂ ಚನ್ನಪಟ್ಟಣದ ಪಟ್ಲು ಗ್ರಾಮದ ಕಬ್ಬು ಅಂದರೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಸಂಕ್ರಾಂತಿಯ ವಿಶೇಷ ಕಬ್ಬು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

    ಜಿಲ್ಲೆಯ ಚನ್ನಪಟ್ಟಣ ಕೇವಲ ಬೊಂಬೆಗಳ ಖ್ಯಾತಿಗಷ್ಟೇ ಸೀಮಿತವಾಗಿಲ್ಲ. ಸಂಕ್ರಾಂತಿಯ ಹಬ್ಬಕ್ಕೆಂದು ವಿಶೇಷವಾದ ಕಪ್ಪುಕಬ್ಬನ್ನು ಬೆಳೆಯುವ ವಿಶೇಷತೆ ಕೂಡ ಪಡೆದಿದೆ. ಚನ್ನಪಟ್ಟಣ ತಾಲೂಕಿನ ಪಟ್ಲು ಗ್ರಾಮ ರಾಮನಗರ ಜಿಲ್ಲೆಯಲ್ಲಿಯೇ ಕಪ್ಪುಕಬ್ಬನ್ನು ಬೆಳೆಯುವ ಏಕೈಕ ಗ್ರಾಮವಾಗಿದೆ. ಈ ಕಪ್ಪುಕಬ್ಬಿಗೆ ರಾಜ್ಯದ ದೊಡ್ಡ ನಗರಗಳಲ್ಲದೇ ನೆರೆಯ ಕೇರಳ, ತಮಿಳುನಾಡು, ಗುಜರಾತ್ ರಾಜ್ಯಗಳಿಗೂ ಇಲ್ಲಿನ ಕಬ್ಬು ರಫ್ತಾಗುತ್ತದೆ. ಜೊತೆಗೆ ಬೆಂಗಳೂರಿನ ಜನತೆ ಕೂಡ ಕಪ್ಪು ಕಬ್ಬಿಗೆ ಮಾರು ಹೋಗಿದ್ದು ಮಾರುಕಟ್ಟೆಯಲ್ಲಿ ಕಪ್ಪುಕಬ್ಬನ್ನೇ ಕೊಂಡುಕೊಳ್ಳುತ್ತಿದ್ದಾರೆ.

    ಈ ವರ್ಷ ಪಟ್ಲು ಗ್ರಾಮವೊಂದರಲ್ಲೇ ಸುಮಾರು 100 ಎಕರೆಗೂ ಹೆಚ್ಚು ಜಮೀನಿನಲ್ಲಿ ರೈತರು ಕಪ್ಪುಕಬ್ಬು ಬೆಳೆದಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಪಟ್ಲು ಕಬ್ಬಿಗೆ ಸಾಕಷ್ಟು ಬೇಡಿಕೆಯಿತ್ತು. ಆದರೆ ಇತ್ತೀಚೆಗೆ ಹೊಸಕೋಟೆ ಭಾಗದಲ್ಲಿ ಕಬ್ಬು ಬೆಳೆಯುತ್ತಿರೋದು ಇಲ್ಲಿನ ರೈತರಿಗೆ ಹೊಡೆತ ಬಿದ್ದಿದ್ದರೂ ಸಹ ಉತ್ತಮವಾದ ಬೆಲೆಯಲ್ಲಿ ಈ ಬಾರಿ ಪಡೆದುಕೊಂಡ ಖುಷಿಯಿದೆ. ಸಾಮಾನ್ಯ ಕಬ್ಬಿನ ರೈತರ ಜೊತೆಗೆ ಕಪ್ಪುಕಬ್ಬಿನ ರೈತರ ನೆರವಿಗೆ ಸರ್ಕಾರ ನಿಲ್ಲದಿರುವ ಕಬ್ಬು ಬೆಳೆಗಾರರ ಅಸಮಧಾನಕ್ಕೂ ಕಾರಣವಾಗಿದೆ.

    ಅಂದಹಾಗೆ ಈ ಕಪ್ಪುಕಬ್ಬನ್ನ ಸಂಕ್ರಾಂತಿ ಹಬ್ಬದಲ್ಲಿಯೇ ಹೆಚ್ಚಾಗಿ ಬಳಸುವಂತಹದ್ದು. ಸಂಕ್ರಾಂತಿ ನಂತರ ಈ ಕಬ್ಬನ್ನ ಬಳಕೆ ಮಾಡೋದಿಲ್ಲ. ಈ ಕಪ್ಪುಕಬ್ಬನ್ನ ಜ್ಯೂಸ್ ಮಾಡೋಕೆ, ಬೆಲ್ಲ, ಸಕ್ಕರೆ ಮಾಡುವುದಕ್ಕೂ ಸಹ ಬಳಸುವುದಿಲ್ಲ. ಕೇವಲ ಸಂಕ್ರಾಂತಿ ಹಬ್ಬದ ವಿಶೇಷವಾಗಿಯೇ ಈ ಕಬ್ಬನ್ನ ಬಳಕೆ ಮಾಡಲಾಗುತ್ತದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಒಂದು ಗಿಣ್ಣು ಕರಿಕಬ್ಬು ತಿಂದರೆ ನೆಮ್ಮದಿ ಎಂಬ ವಾಡಿಕೆ ಜನರಲ್ಲಿದೆ. ಹಾಗಾಗಿ ಕಪ್ಪುಕಬ್ಬಿಗೆ ಸಂಕ್ರಾಂತಿ ಹಬ್ಬದ ವೇಳೆ ಇನ್ನಿಲ್ಲದ ಬೇಡಿಕೆ ಇದೆ.

    ವರ್ಷಕ್ಕೊಮ್ಮೆ ವಿಶೇಷವಾಗಿ ಬೆಳೆಯುವ ಈ ಕಪ್ಪುಕಬ್ಬು ಈ ಬಾರಿಯು ರೈತರಿಗೆ ಅಲ್ಪಸ್ವಲ್ಪ ಲಾಭವನ್ನ ತಂದುಕೊಟ್ಟಿದೆ. ಆದರೆ ಮಧ್ಯವರ್ತಿಗಳ, ದಲ್ಲಾಳಿಗಳ ಹಾವಳಿಯಿಂದ ಬೆಳೆದ ಬೆಳೆಗೆ ಸರಿಯಾದ ಲಾಭ ಸಿಗದಂತಾಗಿದೆ. ಆದರೂ ಸಹ ಬಂದಷ್ಟು ಬೆಲೆಗೆ ಮಾರಾಟವಾಗಿರೋ ರೈತರ ಕಪ್ಪುಕಬ್ಬು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ

  • ಗ್ರಾಮಸ್ಥರಲ್ಲಿ ಸಂಕ್ರಾಂತಿ ಅಂದ್ರೆ ಭಯ- ಹಬ್ಬದ ಬದಲಿಗೆ ಬಸವ ಜಯಂತಿ ಆಚರಣೆ

    ಗ್ರಾಮಸ್ಥರಲ್ಲಿ ಸಂಕ್ರಾಂತಿ ಅಂದ್ರೆ ಭಯ- ಹಬ್ಬದ ಬದಲಿಗೆ ಬಸವ ಜಯಂತಿ ಆಚರಣೆ

    ಕೋಲಾರ: ಸಂಕ್ರಾಂತಿ ವರ್ಷದ ಮೊದಲ ಹಬ್ಬವಾದ ಕಾರಣ ನಾಡಿನ ಎಲ್ಲೆಡೆ ರೈತರು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಆದರೆ ಕೋಲಾರ ಅರಾಭಿಕೊತ್ತನೂರು ಗ್ರಾಮಸ್ಥರಲ್ಲಿ ಸಂಕ್ರಾಂತಿ ಎಂದರೇ ಭಯ, ಆತಂಕ ಎದುರಾಗುತ್ತದೆ. ಸಂಕ್ರಾಂತಿ ಹಬ್ಬ ಮಾಡಿದರೆ ಗ್ರಾಮಕ್ಕೆ ಕೇಡಾಗುತ್ತದೆ, ದನ-ಕರುಗಳು ಒಂದೊಂದಾಗಿ ಸಾಯುತ್ತವೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿದೆ.

    ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಇತ್ತೀಚೆಗಂತೂ ಗ್ರಾಮದ ಹಲವರು ಉತ್ತಮ ಶಿಕ್ಷಣ ಪಡೆದು ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಸಂಕ್ರಾಂತಿ ಹಬ್ಬವನ್ನು ಮಾಡಿದ್ರೆ ಊರಿಗೆ ಕೆಟ್ಟದಾಗುತ್ತದೆ ಎಂಬ ಹಿರಿಯ ನಂಬಿಕೆಯಂತೆ ಇಂದಿಗೂ ಈ ಗ್ರಾಮದಲ್ಲಿ ಹಬ್ಬ ಆಚರಣೆ ಮಾಡುವುದಿಲ್ಲ.

    ಪಕ್ಕದ ಗ್ರಾಮಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರೂ ಅರಾಭಿಕೊತ್ತನೂರಲ್ಲಿ ಮಾತ್ರ ಅಂದು ಯಾವುದೇ ವಿಶೇಷ ಆಚರಣೆ ಮಾಡುವುದಿಲ್ಲ. ಕಳೆದ 300 ವರ್ಷಗಳ ಹಿಂದೆ ಅರಾಭಿಕೊತ್ತನೂರು ಗ್ರಾಮದಲ್ಲಿ ಕಾಯಿಲೆಯೊಂದು ಕಾಣಿಸಿಕೊಂಡು ಊರಲ್ಲಿದ್ದ ದನ-ಕರುಗಳು ಇದ್ದಕ್ಕಿಂದ್ದಂತೆ ಸಾವನ್ನಪ್ಪುತ್ತಿದ್ದವು. ಈ ವೇಳೆ ದಿಕ್ಕು ತೋಚದಂತಾದ ಊರಿನ ಹಿರಿಯರು ಅನಾಹುತವನ್ನು ತಪ್ಪಿಸುವಂತೆ ಊರಿನ ಬಸವಣ್ಣನಲ್ಲಿ ಮನವಿ ಮಾಡಿದ್ದರು. ಕಾಯಿಲೆ ನಿಯಂತ್ರಣಕ್ಕೆ ಬಂದು ಜಾನುವಾರುಗಳ ಸಾವು ನಿಂತರೆ ಸಂಕ್ರಾಂತಿ ಹಬ್ಬದಂದು ದನ-ಕರುಗಳಿಗೆ ಮಾಡುವ ಪೂಜೆಯನ್ನು ನಿಲ್ಲಿಸಿ ಬೇರೊಂದು ದಿನ ಬಸವಣ್ಣನಿಗೆ ಪೂಜೆ ಮಾಡುವುದಾಗಿ ಪ್ರಾರ್ಥನೆ ಮಾಡಿಕೊಂಡಿದ್ದರಂತೆ.

    ಹಿರಿಯರ ಪ್ರಾರ್ಥನೆ ಬಳಿಕ ರಾಸುಗಳ ಸಾವು ನಿಯಂತ್ರಣಕ್ಕೆ ಬಂದಿತ್ತು. ಅಂದಿನಿಂದಲೂ ಈ ಗ್ರಾಮದಲ್ಲಿ ಸಂಕ್ರಾಂತಿಯಂದು ಜಾನುವಾರುಗಳಿಗೆ ಯಾವುದೇ ಪೂಜೆ ಮಾಡದೆ, ಸಂಕ್ರಾಂತಿ ಬಳಿಕ ಗ್ರಾಮದಲ್ಲಿರುವ ಬಸವಣ್ಣನ ದೇವಸ್ಥಾನಕ್ಕೆ ರಾಸುಗಳನ್ನು ಅಲಂಕಾರ ಮಾಡಿಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಇಂದಿಗೂ ಇದೇ ಪದ್ದತಿಯನ್ನು ಗ್ರಾಮಸ್ಥರು ಪಾಲಿಸಿಕೊಂಡು ಬರುತ್ತಿದ್ದಾರೆ.

  • ಸಸ್ಯಕಾಶಿಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ

    ಸಸ್ಯಕಾಶಿಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ

    ಬೆಂಗಳೂರು: ಬುಧವಾರ(ನಾಳೆ) ಮಕರ ಸಂಕ್ರಾಂತಿ ಹಬ್ಬವಾಗಿದ್ದು, ಹಬ್ಬದ ತಯಾರಿಯಲ್ಲಿ ಸಿಲಿಕಾನ್ ಸಿಟಿ ಜನ ಬ್ಯುಸಿಯಾಗಿದ್ದಾರೆ. ಹಬ್ಬ ಅಂದ್ಮೇಲೆ ಸಂಭ್ರಮ ಸಡಗರಕ್ಕೇನು ಕಡಿಮೆ ಇರುವುದಿಲ್ಲ.

    ಸುಗ್ಗಿ ಹಬ್ಬವೆಂದೇ ಪ್ರಸಿದ್ಧಿಯಾಗಿಯೋ ಸಂಕ್ರಾಂತಿ ಹಬ್ಬವನ್ನು ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ರೈತಾಪಿ ವರ್ಗದವರು ತಾವು ಬೆಳೆದ ಬೆಳೆಗಳನ್ನು ಪೂಜಿಸಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

    ಹಳ್ಳಿ ಸೊಗಡಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ತಮ್ಮ ದನಕರುಗಳಿಗೆ ಸ್ನಾನ ಮಾಡಿಸಿ ಅಲಂಕಾರ ಮಾಡುವ ಮೂಲಕ ಪ್ರಾಣಿಗಳ ಜೊತೆಗೂ ಹಬ್ಬದ ಆಚರಣೆ ನಡೆಯುತ್ತದೆ. ನಾಳೆ ಸರ್ಕಾರಿ ರಜೆ ಹಿನ್ನೆಲೆಯಲ್ಲಿ ಲಾಲ್ ಬಾಗ್ ನ ನೌಕರರು ಇಂದೇ ಹಬ್ಬವನ್ನು ಆಚರಿಸಿದ್ದಾರೆ.

    ಲಾಲ್ ಬಾಗ್ ನಲ್ಲಿ ಹಬ್ಬಕ್ಕಾಗಿ ವಿಶೇಷವಾಗಿ ಅಲಂಕಾರ ಮಾಡಿ ಸಂಕ್ರಾಂತಿ ಸ್ಪೆಷಲ್ ಆದ ಕಬ್ಬು, ಅವರೇಕಾಯಿ, ಗೆಣಸು, ಕಡಲೇಕಾಯಿ ಹಾಗೂ ರಾಗಿಯನ್ನ ಒಂದು ಕಡೆ ಇಟ್ಟು ರೈತರು ಹೇಗೆ ಹಳ್ಳಿಗಳಲ್ಲಿ ತಮ್ಮ ಧವಸ ಧಾನ್ಯಗಳನ್ನು ಪೂಜಿಸಿತ್ತಾರೋ ಹಾಗೆಯೇ ಪೂಜೆ ಮಾಡಿ ಸಂಕ್ರಾಂತಿ ಹಬ್ಬವನ್ನ ಆಚರಿಸಿದ್ದಾರೆ.

  • ಸಂಕ್ರಾಂತಿಗೆ ಸಿಹಿ ಪೊಂಗಲ್ ಮಾಡುವ ಸರಳ ವಿಧಾನ

    ಸಂಕ್ರಾಂತಿಗೆ ಸಿಹಿ ಪೊಂಗಲ್ ಮಾಡುವ ಸರಳ ವಿಧಾನ

    ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಗ್ರಿಗಳು:
    1. ಹೆಸರುಬೇಳೆ – 1 ಕಪ್
    2. ಅಕ್ಕಿ – 1 ಕಪ್
    3. ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
    4. ಏಲಕ್ಕಿ – 4
    5. ದ್ರಾಕ್ಷಿ ,ಗೋಡಂಬಿ- 50 ಗ್ರಾಂ
    6. ತುಪ್ಪ – 4 ಚಮಚ

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
    * ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
    * ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ.(ಒಂದು ವೇಳೆ ಬೆಲ್ಲದಲ್ಲಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ)
    * ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕ ಹಾಕಿ ಚೆನ್ನಾಗಿ ತಿರುವಿ.
    * ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ.
    (ಇದಕ್ಕೆ ಬೇಕಿದ್ದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು)

    ಇದನ್ನೂ ಓದಿ: ಸಂಕ್ರಾಂತಿ ಸ್ಪೆಷಲ್ – ಎಳ್ಳು, ಬೆಲ್ಲ ಮಾಡುವ ವಿಧಾನ

    ಇದನ್ನೂ ಓದಿ: ಸಂಕ್ರಾಂತಿ ಯಾಕೆ ಮಾಡ್ತಾರೆ? ಈ ದಿನ ಎಳ್ಳಿಗೆ ಮಹತ್ವ ಯಾಕೆ?

    ಇದನ್ನೂ ಓದಿ: ಮಕರ ಸಂಕ್ರಾಂತಿಗೆ ಗಾಳಿಪಟ ಹಾರಿಸೋದೇಕೆ? ವಿಶೇಷತೆ ಏನು?

    ಇದನ್ನೂ ಓದಿ:  ಸಂಕ್ರಾಂತಿಗೆ ಚಟಾಪಟ್ ಅಂತಾ ಮಾಡಿ ಸಕ್ಕರೆ ಅಚ್ಚು

    ಇದನ್ನೂ ಓದಿ:  ಸಂಕ್ರಾಂತಿಗೆ ನಿಮ್ಮ ಮನೆಯಲ್ಲಿರಲಿ ಅವಲಕ್ಕಿ ಸಿಹಿ ಪೊಂಗಲ್