Tag: ಷೇರು ಮಾರುಕಟ್ಟೆ

  • ಆಕಾಶ್ ಏರ್ ಹಾರಾಟ ಆರಂಭಿಸಿದ ಒಂದೇ ವಾರದಲ್ಲಿ ಇಹಲೋಕ ತ್ಯಜಿಸಿದ ಜುಂಜುನ್‍ವಾಲ – ಈಡೇರಿತು ಮಹತ್ತರವಾದ ಕನಸು

    ಆಕಾಶ್ ಏರ್ ಹಾರಾಟ ಆರಂಭಿಸಿದ ಒಂದೇ ವಾರದಲ್ಲಿ ಇಹಲೋಕ ತ್ಯಜಿಸಿದ ಜುಂಜುನ್‍ವಾಲ – ಈಡೇರಿತು ಮಹತ್ತರವಾದ ಕನಸು

    ಮುಂಬೈ: ಷೇರು ಮಾರುಕಟ್ಟೆ ತಜ್ಞ, ಮುಂಬೈನ ದಲಾಲ್ ಸ್ಟ್ರೀಲ್ ಕಿಂಗ್ ಎಂದೇ ಖ್ಯಾತರಾಗಿದ್ದ ರಾಕೇಶ್ ಜುಂಜುನ್‍ವಾಲ ಇಂದು ಇಹಲೋಕ ತ್ಯಜಿಸಿದ್ದಾರೆ. ಇಂದು ಅವರು ಮೃತಪಟ್ಟರೂ ಅವರು ಸಾಧನೆಯ ಕಥೆಯಿಂದ ಮುಂದೆಯೂ ಜೀವಂತವಾಗಿರುತ್ತಾರೆ. ಜುಂಜುನ್‍ವಾಲ ಅವರ ಕನಸು ಕೆಲವೇ ದಿನಗಳ ಮೊದಲು ನನಸಾಗಿತ್ತು. ಕಡಿಮೆ ಬೆಲೆಗೆ ಜನ ಸಾಮಾನ್ಯರಿಗೂ ವಿಮಾನ ಸೇವೆ ನೀಡಲು ಆರಂಭಿಸಿದ್ದ ಅವರ ‘ಆಕಾಶ್’ ಕಂಪನಿಯ ವಿಮಾನ ಟೇಕಾಫ್ ಆಗಿತ್ತು.

    ಹೌದು. ರಾಕೇಶ್ ಜುಂಜುನ್‍ವಾಲ 5,000 ರೂಪಾಯಿಇಂದ ಹೂಡಿಕೆ ಆರಂಭಿಸಿ ಆ ಬಳಿಕ ಕೋಟ್ಯಧಿಪತಿಯಾಗಿ ಹೆಸರುವಾಸಿಯಾದರು. ಅವರ ಹೆಸರು ಹೇಳಿದ ತಕ್ಷಣ ಷೇರು ಮಾರುಕಟ್ಟೆಯಲ್ಲಿ ಹಲ್ ಚೆಲ್ ಶುರುವಾಗುವ ಹಂತಕ್ಕೆ ಬೆಳೆದರು. ಅಲ್ಲದೇ ಷೇರು ಹೂಡಿಕೆದಾರರು ಅವರನ್ನು ಅನುಸರಿಸಲು ಪ್ರಾರಂಭಿಸಿದ್ದರು. ಈ ನಡುವೆ ರಾಕೇಶ್ ಜುಂಜುನ್‍ವಾಲ ಏರ್‌ಲೈನ್ಸ್‌ ಒಂದರ ಆರಂಭಕ್ಕೆ ಮುಂದಾಗಿದ್ದರು. ಈ ಕಾರ್ಯದಲ್ಲಿ ಯಶಸ್ವಿ ಕೂಡ ಆಗಿದ್ದರು. ಜುಂಜುನ್‍ವಾಲ ಹಾಗೂ ವಿಮಾನಯಾನ ಉದ್ಯಮಿ ಆದಿತ್ಯ ಘೋಷ್ ಸೇರಿಕೊಂಡು ಆಕಾಶ್ ಏರ್ ಕಂಪನಿಯಲ್ಲಿ ಹೂಡಿಕೆ ಮಾಡಿ 2021ರ ಆಗಸ್ಟ್ ತಿಂಗಳಲ್ಲಿ ವಿಮಾನ ಕಾರ್ಯಾಚರಣೆಗೆ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣ ಪತ್ರ ದೊರೆಕಿತ್ತು. ಆದರೆ ಕೋವಿಡ್‍ನಿಂದಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆ ಬಳಿಕ ಆಕಾಶ್ ಏರ್‌ಲೈನ್ಸ್‌ ಭಾರತದಲ್ಲಿ ಹಾರಾಟ ಆರಂಭಿಕ ಕಾರ್ಯಕ್ರಮದಲ್ಲಿ ರಾಕೇಶ್ ಜುಂಜುನ್‍ವಾಲ ಕೈಗಾಡಿಯಲ್ಲಿ ಆಗಮಿಸಿ ಉಪಸ್ಥಿತರಿದ್ದರು. ಆ ಬಳಿಕ ಆಗಸ್ಟ್ 7 ರಿಂದ ಮುಂಬೈ ಮತ್ತು ಅಹಮದಾಬಾದ್ ಮಧ್ಯೆ ಆಕಾಶ್ ವಿಮಾನ ಹಾರಾಟ ಆರಂಭಿಸಿತು ಆದಾದ ಒಂದೇ ವಾರದಲ್ಲಿ ಜುಂಜುನ್‍ವಾಲ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ: ಸಾವಿರಾರು ಕೋಟಿ ಆಸ್ತಿ ಒಡೆಯ, ಬಿಗ್‌ಬುಲ್‌ ರಾಕೇಶ್‌ ಜುಂಜುನ್‌ವಾಲ ನಿಧನ

    ಜುಂಜುನ್‍ವಾಲ ಈ ಏರ್‌ಲೈನ್ಸ್‌ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ವಹಿಸಿದ್ದರು. ಅಲ್ಲದೇ ದೇಶದ ಜನರಿಗೆ ಕಡಿಮೆ ಟಿಕೆಟ್ ದರ ಒದಗಿಸಿ ಎಲ್ಲರಿಗೂ ವಿಮಾನಯಾನದ ಸೇವೆ ನೀಡಬೇಕೆಂಬ ಮಹತ್ತರವಾದ ಕನಸು ಹೊಂದಿದ್ದರು. ಅಲ್ಲದೇ ಆರಂಭಿಕ ಹಂತದಲ್ಲೇ ಆಕಾಶ್ ಏರ್ ಕಂಪನಿ ಕಡಿಮೆ ಟಿಕೆಟ್ ದರವನ್ನು ನಿಗದಿ ಪಡಿಸುವುದಾಗಿ ಹೇಳಿಕೊಂಡಿತ್ತು. ಹಾಗಾಗಿ ಆಕಾಶ ಏರ್ ಕಂಪನಿಯ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಟಯರ್ 2, ಟಯರ್ 3 ನಗರಗಳಿಗೆ ವಿಮಾನ ಸೇವೆಯನ್ನು ನೀಡಲು ಕಂಪನಿ ಮುಂದಾಗಿದೆ. ಆಕಾಶ ಕಂಪನಿ 72 ಬೋಯಿಂಗ್ 737 ಮ್ಯಾಕ್ಸ್ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಮಾರ್ಚ್ ಒಳಗೆ 18 ವಿಮಾನ ಬರಲಿದ್ದರೆ 4 ವರ್ಷದ ಒಳಗೆ 54 ವಿಮಾನ ಸಿಗಲಿದೆ.

    ಈ ಎಲ್ಲವನ್ನು ನೋಡಬೇಕೆಂದಿದ್ದ ಜುಂಜುನ್‍ವಾಲ ಎರಡು ಕಿಡ್ನಿ ವೈಫಲ್ಯದಿಂದ ನಿರಂತರ ಡಯಾಲಿಸಿಸ್‍ಗೆ ಒಳಪಟ್ಟಿದ್ದರು. ಆರೋಗ್ಯದಲ್ಲಿ ಏರುಪೇರು ಕಂಡುಬಂದು ಇಂದು ಬೆಳಗ್ಗೆ ಅವರನ್ನು ಮುಂಬೈನಾ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆ ತಲುಪು ವೇಳೆಗೆ ನಿಧನ ಹೊಂದಿದ್ದರು. ಸದ್ಯ ಅವರು 11,000 ಕೋಟಿಯ ಒಡೆಯನಾಗಿ ವಿಶ್ವಕ್ಕೆ ಪರಿಚಿತರಾಗಿ ಎಲ್ಲರಿಂದ ದೂರ ಹೋಗಿದ್ದಾರೆ. ಇದನ್ನೂ ಓದಿ: 5,000 ರೂಪಾಯಿಯಿಂದ ಕೋಟ್ಯಧಿಪತಿಯಾದ ಜುಂಜುನ್‌ವಾಲ ಜೀವನ ರೋಚಕ

    ಜುಂಜುನ್‍ವಾಲ ನಿಧನಕ್ಕೆ ಪ್ರಧಾನಿ ಮೋದಿ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಆಕಾಶ ಏರ್ ಕೂಡ ಸಂತಾಪ ಸೂಚಿಸಿದೆ ಮತ್ತು ತನ್ನ ಉದ್ಯೋಗಿಗಳು ಮತ್ತು ಗ್ರಾಹಕರ ಯೋಗಕ್ಷೇಮಕ್ಕಾಗಿ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅಕಾಶ್ ಏರ್ ಒಂದು ಶ್ರೇಷ್ಠ ವಿಮಾನಯಾನವನ್ನು ಆರಂಭಿಸಲು ಶ್ರಮಿಸಿದ ಅವರ ನಿಷ್ಠೆಗೆ ಆಕಾಶ್ ಏರ್ ಕಂಬನಿ ಮಿಡಿಯುತ್ತದೆ ಎಂದು ಸಂತಾಪ ಸೂಚಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಶೇ.8.62 ಡಿಸ್ಕೌಂಟ್‌ – ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

    ಶೇ.8.62 ಡಿಸ್ಕೌಂಟ್‌ – ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

    ಮುಂಬೈ: ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮದ(ಎಲ್‌ಐಸಿ) ಷೇರು ಪೇಟೆಯಲ್ಲಿ ಲಿಸ್ಟಿಂಗ್‌ ಆಗಿದೆ.

    ಬಾಂಬೆ ಷೇರು ಮಾರಕಟ್ಟೆಯಲ್ಲಿ ಶೇ.8.62 ರಷ್ಟು ರಿಯಾಯಿತಿ ದರದೊಂದಿಗೆ 867.2 ರೂ. ಬೆಲೆಯಲ್ಲಿ ಲಿಸ್ಟ್‌ ಆಗಿದೆ. ಇಂದು ಲಿಸ್ಟ್‌ ಆಗುವ ಮೂಲಕ ಹೂಡಿಕೆದಾರರು ಷೇರುಗಳನ್ನು ಖರೀದಿ ಮಾಡಬಹುದು.

    ಆರಂಭದಲ್ಲಿ ಎಲ್‌ಐಸಿ ಷೇರುಗಳು ಭಾರೀ ಏರಿಕೆ ಆಗಲಿದೆ ಎಂದು ಗ್ರೇ ಮಾರ್ಕೆಟ್‌ ಸುಳಿವು ನೀಡಿತ್ತು. ಆದರೆ ಕಳೆದ ಒಂದು ವಾರದಿಂದ ಗ್ರೇ ಮಾರ್ಕೆಟ್‌ನಲ್ಲಿ ಎಲ್‌ಐಸಿ ಷೇರುಗಳ ಬೇಡಿಕೆ ಕುಸಿತ ಕಂಡಿದ್ದರಿಂದ ಈಗ ಕಡಿಮೆ ಬೆಲೆಯಲ್ಲಿ ಷೇರು ಲಿಸ್ಟ್‌ ಆಗಿದೆ. ಇಂದು ಮಧ್ಯಾಹ್ನದ ವೇಳೆಗೆ 890 ರೂ. ಬೆಲೆಯಲ್ಲಿ ಎಲ್‌ಐಸಿ ಷೇರು ಮಾರಾಟವಾಗುತ್ತಿದೆ. ಇದನ್ನೂ ಓದಿ: ಸಂಕಷ್ಟದಲ್ಲಿರುವ ಲಂಕಾಕ್ಕೆ ಭಾರತದಿಂದ ಪೆಟ್ರೋಲ್

    ಕೇಂದ್ರ ಸರ್ಕಾರ ಮೇ 4 ರಂದು ಎಲ್‌ಐಸಿ ಷೇರನ್ನು ಬಿಡುಗಡೆ ಮಾಡಿತ್ತು. ಐಪಿಒ ವೇಳೆ ಒಂದು ಷೇರಿಗೆ 949 ರೂ. ದರವನ್ನು ನಿಗದಿ ಮಾಡಲಾಗಿತ್ತು. ಈ ಸರ್ಕಾರ ಪಾಲಿಸಿದಾರರಿಗೆ ಮತ್ತು ರಿಟೇಲ್‌ ಹೂಡಿಕೆದಾರರಿಗೆ ರಿಯಾಯಿತಿ ದರವನ್ನು ಪ್ರಕಟಿಸಿತ್ತು. ಪಾಲಿಸಿದಾರರು 889 ರೂ. ರಿಟೇಲ್‌ ಹೂಡಿಕೆದಾರರು 904 ರೂ. ರಿಯಾಯಿತಿ ದರದಲ್ಲಿ ಷೇರನ್ನು ಖರೀದಿ ಮಾಡಿದ್ದರು. ಐಪಿಒ ಮೂಲಕ 20,557 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ.

    ಅಸ್ಥಿರ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಎಲ್ಐಸಿ ಕಳೆದ ತಿಂಗಳು ತನ್ನ ಐಪಿಒ ಗಾತ್ರವನ್ನು ಶೇ. 5 ರಿಂದ ಶೇಕಡ 3.5 ಕ್ಕೆ ಇಳಿಸಿತ್ತು. ಎಲ್‌ಐಸಿಯ ಐಪಿಒ ಗಾತ್ರವನ್ನು ಇಳಿಕೆ ಮಾಡಿದರೂ ಇದು ದೇಶದ ಅತೀ ದೊಡ್ಡ ಐಪಿಒ ಆಗಿ ದಾಖಲೆ ಬರೆದಿದೆ.

    ಕಳೆದ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಪೇಟಿಎಂ 18,300 ಕೋಟಿ ರೂ. ಸಂಗ್ರಹಿಸಿದ್ದೇ ಈವರೆಗೆನ ದೇಶದ ದೊಡ್ಡ ಐಪಿಒ ಆಗಿದೆ. ಕೋಲ್‌ ಇಂಡಿಯಾ 2010 ರಲ್ಲಿ 15,500 ಕೋಟಿ ಮತ್ತು ರಿಲಯನ್ಸ್‌ ಪವರ್‌ 2008ರಲ್ಲಿ 11,700 ಕೋಟಿ ರೂ. ಐಪಿಒ ಮೂಲಕ ಸಂಗ್ರಹಿಸಿತ್ತು.

    ಕೇಂದ್ರ ಸರ್ಕಾರ 2021-22ರ ಹಣಕಾಸು ವರ್ಷದಲ್ಲಿ ಎಲ್‌ಐಸಿಯ 31.6 ಕೋಟಿ ಅಥವಾ ಶೇ.5 ರಷ್ಟು ಪಾಲನ್ನು ಮಾರಾಟ ಮಾಡಿ 60 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಇದು ಮುಂದೂಡಿಕೆಯಾಗಿತ್ತು.

  • ಮೇ 4 ರಿಂದ ಎಲ್‌ಐಸಿ ಐಪಿಒ?

    ಮೇ 4 ರಿಂದ ಎಲ್‌ಐಸಿ ಐಪಿಒ?

    ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ಮೇ 4ರಿಂದ 9ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

    ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಎಲ್‌ಐಸಿಯಲ್ಲಿರುವ ಶೇ.3.5 ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸಕಾರ ಮುಂದಾಗಿದೆ. ಮಾರಾಟದಿಂದ ಬೊಕ್ಕಸಕ್ಕೆ 21 ಸಾವಿರ ಕೋಟಿ ರೂ. ಬರಲಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು 6 ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ.

    ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್‌ಐಸಿಯ ಶೇ. 5-7ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ 50 ರಿಂದ 65 ಸಾವಿರ ಕೋಟಿ ರೂ. ಸಂಗ್ರಹಿಸಲು ಮುಂದಾಗಿತ್ತು. ಆದರೆ ರಷ್ಯಾ–ಉಕ್ರೇನ್‌ ಯುದ್ಧ ಮತ್ತು ಹೂಡಿಕೆದಾರರಿಂದ ಹೆಚ್ಚಿನ ಬೇಡಿಕೆ ಇಲ್ಲದ ಹಿನ್ನೆಲೆಯಲ್ಲಿ ಐಪಿಒ ಬಿಡುಗಡೆ ಮುಂದೂಡಿಕೆಯಾಗಿತ್ತು. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

    ಎಲ್‌ಐಸಿಯ ಐಪಿಒ ಗಾತ್ರವನ್ನು ಇಳಿಕೆ ಮಾಡಿದರೂ ಇದು ದೇಶದ ಅತೀ ದೊಡ್ಡ ಐಪಿಒ ಆಗಿ ದಾಖಲೆ ಬರೆಯಲಿದೆ. ಕಳೆದ ನವೆಂಬರ್‌ನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಪೇಟಿಎಂ 18,300 ಕೋಟಿ ರೂ. ಸಂಗ್ರಹಿಸಿದ್ದೇ ಈವರೆಗೆನ ದೇಶದ ದೊಡ್ಡ ಐಪಿಒ ಆಗಿದೆ. ಕೋಲ್‌ ಇಂಡಿಯಾ 2010 ರಲ್ಲಿ 15,500 ಕೋಟಿ ಮತ್ತು ರಿಲಯನ್ಸ್‌ ಪವರ್‌ 2008ರಲ್ಲಿ 11,700 ಕೋಟಿ ರೂ. ಐಪಿಒ ಮೂಲಕ ಸಂಗ್ರಹಿಸಿತ್ತು.

    ಕೇಂದ್ರ ಸರ್ಕಾರ 2021-22ರ ಹಣಕಾಸು ವರ್ಷದಲ್ಲಿ ಎಲ್‌ಐಸಿಯ 31.6 ಕೋಟಿ ಅಥವಾ ಶೇ.5 ರಷ್ಟು ಪಾಲನ್ನು ಮಾರಾಟ ಮಾಡಿ 60 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಇದು ಮುಂದೂಡಿಕೆಯಾಗಿತ್ತು.

  • Russia Ukraine War – ಭಾರತದ ಮೇಲೆ ಪರಿಣಾಮ ಏನು? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವುದರಿಂದ ಇದರ ಪ್ರಭಾವ ನೇರವಾಗಿ ಜಾಗತಿಕ ಮಾರುಕಟ್ಟೆ ಮೇಲೆ ಬಿದ್ದಿದೆ. ಇದರಲ್ಲಿ ಭಾರತೀಯ ಷೇರು ಮಾರುಕಟ್ಟೆ ಕೂಡಾ ಹೊರತಾಗಿಲ್ಲ.

    ಇಂದು ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಷೇರುಪೇಟೆಗಳಲ್ಲಿ ಭಾರೀ ನಷ್ಟ ಉಂಟಾಗಿದೆ. ಒಂದೇ ದಿನ 13 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಿಎಸ್‍ಇ ಸೂಚ್ಯಂಕದಲ್ಲಿ 2,702 ಅಂಶ, ಎನ್‍ಎಸ್‍ಇ ಸೂಚ್ಯಂಕದಲ್ಲಿ 815.30 ಅಂಶ ನಷ್ಟವಾಗಿದೆ. ಈ ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಷೇರುಪೇಟೆ ನಷ್ಟಹೋಗಿರುವುದು ಇದೇ ಮೊದಲು.

    ವಿದೇಶಿ ಹೂಡಿಕೆದಾರರ ಜೊತೆ ದೇಶಿಯ ಇನ್ವೆಸ್ಟರ್‍ಗಳು ಕೂಡ ಷೇರುಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಷೇರುಪೇಟೆಗೆ ಭಾರೀ ನಷ್ಟವಾಗಿದೆ. ಡಾಲರ್ ಎದುರು ರೂ. ಮೌಲ್ಯ 75.61 ರೂ.ಗೆ ಕುಸಿದಿದೆ. ಇನ್ನೂ ಉಕ್ರೇನ್ ಮೇಲಿನ ದಾಳಿಯಿಂದ ದೇಶದ ಮೇಲೆ ಏನೇನು ಪರಿಣಾಮ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ಮೆಟ್ರೋ ಸುರಂಗದಲ್ಲಿ ಅವಿತಿದ್ದಾರೆ ಕನ್ನಡಿಗರು!

    100 ಡಾಲರ್ ದಾಟಿದ ಕಚ್ಛಾ ತೈಲ ಬೆಲೆ:
    ಕಳೆದ 2-3 ದಿನಗಳಿಂದ 97.98 ಡಾಲರ್(7,429 ರೂ.) ಆಚೆ ಈಚೆ ಇದ್ದ 1 ಬ್ಯಾರಲ್ ಕಚ್ಛಾ ತೈಲದ ಬೆಲೆ ಯುದ್ಧ ಪ್ರಾರಂಭವಾಗುತ್ತಿದ್ದಂತೆ 105 ಡಾಲರ್(7,961 ರೂ.) ದಾಟಿದೆ. ಇದು 2014ರ ಬಳಿಕದ ಗರಿಷ್ಠ ಮಟ್ಟವಾಗಿದೆ.

    ತೈಲ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಎರಡನೇ ಅತೀದೊಡ್ಡ ದೇಶ ರಷ್ಯಾ. ಯುರೋಪ್ ರಾಷ್ಟ್ರಗಳಿಗೆ ಶೇ.35 ರಷ್ಟು ಕಚ್ಚಾ ತೈಲ ರಷ್ಯಾದಿಂದಲೇ ಪೂರೈಕೆಯಾಗುತ್ತದೆ. ಯುದ್ಧ ನಿಲ್ಲದೇ ಹೀಗೆ ಮುಂದುವರೆದಲ್ಲಿ, ಆರ್ಥಿಕ ನಿರ್ಬಂಧಗಳ ಹೇರಿಕೆ ಹೆಚ್ಚಳವಾದಲ್ಲಿ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲಾಗದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

    ಪಂಚರಾಜ್ಯ ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಕನಿಷ್ಟ 7-8 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.

    ಚಿನ್ನದ ಬೆಲೆ ಶೇ.30 ರಷ್ಟು ಹೆಚ್ಚಳ:
    ಯುದ್ಧದ ಪ್ರಭಾವ ನೇರವಾಗಿ ಬಂಗಾರದ ಮೇಲೆ ಬಿದ್ದಿದೆ. ಕೇವಲ ಒಂದೇ ದಿನದಲ್ಲಿ ಬಂಗಾರದ ಬೆಲೆ ಶೇ.30 ರಷ್ಟು ಹೆಚ್ಚಿದೆ. ಇಂದು 10 ಗ್ರಾಂ. 24 ಕ್ಯಾರೆಟ್ ಚಿನ್ನದ ಬೆಲೆ 2,500 ರೂ. ಹೆಚ್ಚಿದ್ದು, 54 ಸಾವಿರದ ಗಡಿದಾಟಿದೆ. ಆಭರಣದ ಚಿನ್ನದ ಬೆಲೆ 1,000 ರೂ. ಹೆಚ್ಚಿದ್ದು, 47ಸಾವಿರದ ಅಂಚಿನಲ್ಲಿದೆ. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ನಾಗರಿಕರಿಗೂ ಶಸ್ತ್ರಾಸ್ತ್ರ ನೀಡಿದ ಉಕ್ರೇನ್

    ರಸಗೊಬ್ಬರ ಪೂರೈಕೆ ವ್ಯತ್ಯಯ/ಬೆಲೆ ಹೆಚ್ಚಳ ಸಾಧ್ಯತೆ:
    ಭಾರತಕ್ಕೆ ಡಿಎಪಿ ಸೇರಿ ಮೂರು ಬಗೆಯ ರಸಗೊಬ್ಬರವನ್ನು ಪೂರೈಸುವ ದೇಶಗಳಲ್ಲಿ ರಷ್ಯಾ ಪ್ರಮುಖ. ಯುದ್ಧದಿಂದ ಭಾರತಕ್ಕೆ ರಸಗೊಬ್ಬರ ಆಮದು ಕಷ್ಟಕರವಾಗಿದ್ದು, ಮುಂಗಾರು ಬೆಳೆಯ ಸಿದ್ಧತೆಯಲ್ಲಿರುವ ರೈತರಿಗೆ ಸಮಸ್ಯೆಯಾಗಲಿದೆ ಜೊತೆಗೆ ಬೆಲೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ.

    ಸೂರ್ಯಕಾಂತಿ ಎಣ್ಣೆ ದರ ಹೆಚ್ಚಳ:
    ಉಕ್ರೇನ್‍ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ ಹೆಚ್ಚಿನ ಮಟ್ಟದಲ್ಲಿ ಆಮದು ಆಗುತ್ತದೆ. ಯುದ್ಧದಿಂದ ಆಮದು ಕಷ್ಟಸಾಧ್ಯವಾಗುವುದರಿಂದ ಸೂರ್ಯಕಾಂತಿ ಎಣ್ಣೆ ದುಬಾರಿಯಾಗುವ ಸಾಧ್ಯತೆ ಇದೆ.

    ಮದ್ಯ ಪ್ರಿಯರಿಗೆ ಶಾಕ್:
    ಯುದ್ಧದಿಂದ ಮದ್ಯದ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಉಕ್ರೇನ್ ವಿಶ್ವದಲ್ಲೇ ಅತೀ ಹೆಚ್ಚು ಬಾರ್ಲಿ ಪೂರೈಸುವ 5 ಪ್ರಮುಖ ದೇಶಗಳಲ್ಲಿ ಒಂದು. ಮದ್ಯ ತಯಾರಿಕೆಗೆ ಬಾರ್ಲಿ ಅಗತ್ಯ. ಯುದ್ಧದಿಂದಾಗಿ ಬಾರ್ಲಿ ಪೂರೈಕೆ ಏರುಪೇರಾಗುವುದರಿಂದ ಮದ್ಯದ ಬೆಲೆಯೂ ಹೊರೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಯುದ್ಧ ವಿಚಾರದಲ್ಲಿ ಇತರ ರಾಷ್ಟ್ರಗಳು ಮೂಗು ತೂರಿಸಬೇಡಿ – ಪುಟಿನ್ ನೇರ ಎಚ್ಚರಿಕೆ

    ಮೊಬೈಲ್ ಉದ್ಯಮಕ್ಕೆ ಆಘಾತ:
    ಮೊಬೈಲ್ ಬಿಡಿಭಾಗಗಳ ಪೂರೈಕೆಯಲ್ಲಿ ರಷ್ಯಾ ಮುಂದಿದೆ. ಯುದ್ಧದಿಂದ ಆಮದು-ರಫ್ತಿಗೆ ತೊಡಕಾಗುವ ಸಾಧ್ಯತೆ ಇರುವುದರಿಂದ ಮೊಬೈಲ್ ಉದ್ಯಮಕ್ಕೆ ಕಷ್ಟವಾಗಲಿದೆ.

    ವಾಹನ ಉದ್ಯಮಕ್ಕೆ ಪೆಟ್ಟು:
    ವಾಹನ ಎಕ್ಸಾಸ್ಟ್ ವ್ಯವಸ್ಥೆಗೆ ಪಲಾಡಿಯಂ ಲೋಹ ಅಗತ್ಯ. ಪಲಾಡಿಯಂ ಲೋಹವನ್ನು ಹೆಚ್ಚು ರಫ್ತು ಮಾಡುವ ದೇಶ ರಷ್ಯಾ. ಯುದ್ಧ ಬಿಕ್ಕಟ್ಟಿನ ಬಳಿಕ ಪಲಾಡಿಯಂ ಲೋಹದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ.

    ಕೆಮಿಕಲ್ಸ್, ಕಬ್ಬಿಣ, ಉಕ್ಕು, ಪ್ಲಾಸ್ಟಿಕ್‍ಗಳೊಂದಿಗೆ ಕೈಗಾರಿಕೆಯಲ್ಲಿ ಬಳಕೆಯಾಗುವ ರಿಯಾಕ್ಟರ್ಸ್, ಬಾಯ್ಲರ್ ಯಂತ್ರ, ಮೆಕಾನಿಕಲ್ ವಸ್ತು, ಎಣ್ಣೆ ಬೀಜ ಕೂಡಾ ದುಬಾರಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕಣ್ಣು ಯಾಕೆ? ರಷ್ಯಾಗೆ ಯಾಕೆ ಯಾರ ಭಯವಿಲ್ಲ?

    ಕೇವಲ ರಷ್ಯಾ ಹಾಗೂ ಉಕ್ರೇನ್‍ನಿಂದ ಆಮದು ಆಗುವ ವಸ್ತುಗಳಿಗಷ್ಟೇ ಭಾರತದಲ್ಲಿ ಪೆಟ್ಟು ಬೀಳದೇ ರಫ್ತಿನಿಂದಲೂ ನಷ್ಟವಾಗುವ ಸಾಧ್ಯತೆ ಇದೆ. ಭಾರತದಿಂದ ಉಕ್ರೇನ್‍ಗೆ ರಫ್ತಾಗುವ ವಸ್ತುಗಳ ಪೈಕಿ ಸಿಂಹಭಾಗ ಔಷಧಿಗಳದ್ದಾಗಿದೆ. ಮೌಲ್ಯದ ಲೆಕ್ಕದಲ್ಲಿ ಉಕ್ರೇನ್‍ಗೆ ಔಷಧಿ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಅತೀದೊಡ್ಡ ದೇಶವಾಗಿದೆ.

    ಹಣ್ಣು, ಕಾಫಿ, ಟೀ ಪುಡಿ ಉದ್ಯಮಕ್ಕೂ ಯುದ್ಧದಿಂದ ಹೊಡೆತ ಬೀಳಲಿದ್ದು, ಇವುಗಳ್ನು ಉಕ್ರೇನ್‍ಗೆ ಭಾರತ ರಫ್ತು ಮಾಡುತ್ತದೆ.

  • ಆಭರಣ ಖರೀದಿಸುವ ಮಂದಿಗೆ ಸಿಹಿ ಸುದ್ದಿ – ಚಿನ್ನದ ಬೆಲೆ ಮತ್ತಷ್ಟು ಇಳಿಕೆ

    ಆಭರಣ ಖರೀದಿಸುವ ಮಂದಿಗೆ ಸಿಹಿ ಸುದ್ದಿ – ಚಿನ್ನದ ಬೆಲೆ ಮತ್ತಷ್ಟು ಇಳಿಕೆ

    ನವದೆಹಲಿ: ಚಿನ್ನದ ಆಭರಣ ಖರೀದಿಸುವ ಮಂದಿಗೆ ಸಿಹಿ ಸುದ್ದಿ. ಗಣನೀಯವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಈಗ 1 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 4,664 ರೂ. ಆಗಿದೆ.

    ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ದೆಹಲಿಯ ಜಿಎಸ್‌ಟಿ ಹೊರತದ ದರವನ್ನು ಪ್ರಕಟಿಸಿದ್ದು, 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 4,506 ರೂ., 18 ಕ್ಯಾರೆಟ್‌ ಚಿನ್ನದ ದರ 3,732 ರೂ. ಆಗಿದೆ.

    ಕೋವಿಡ್‌ ಸಮಯದಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ ಹತ್ತು ಗ್ರಾಂಗಳಿಗೆ 56 ಸಾವಿರ ರೂ. ದಾಟಿ 57 ಸಾವಿರ ರೂ. ಸನಿಹಕ್ಕೆ ಹೋಗಿತ್ತು. ಅನಂತರ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿ ಈಗ 47 ಸಾವಿರ ರೂ.ಗಳ ಹತ್ತಿರಕ್ಕೆ ಬಂದಿದೆ. ಫೆಬ್ರವರಿ ಆರಂಭದಿಂದಲೂ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.

    ಯಾಕೆ ಇಳಿಕೆ?
    ಬಜೆಟ್‌ನಲ್ಲಿ ಬಂಗಾರದ ಆಮದು ಸುಂಕವನ್ನು ಇಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಯುತ್ತಿದೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಜನರು ಬಂಗಾರದ ಮೇಲೆ ಜಾಸ್ತಿ ಹೂಡಿಕೆ ಮಾಡುತ್ತಿದ್ದರು. ಪರಿಣಾಮ ಬೆಲೆ ಏರಿಕೆ ಆಗಿತ್ತು. ಈಗ ನಿಧನವಾಗಿ ಆರ್ಥಿಕ ಚಟುವಟಿಕೆ ಆರಂಭಗೊಂಡಿದ್ದು ಹೂಡಿಕೆದಾರರು ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

  • ಗ್ರಾನೈಟ್ ಉದ್ಯಮಿಗೆ ಟೋಪಿ – ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ 35 ಲಕ್ಷ ರೂ. ವಂಚನೆ

    ಗ್ರಾನೈಟ್ ಉದ್ಯಮಿಗೆ ಟೋಪಿ – ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ 35 ಲಕ್ಷ ರೂ. ವಂಚನೆ

    ಗದಗ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿ ಕೊಡುವುದಾಗಿ ಹೇಳಿ ಗ್ರಾನೈಟ್ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಗದಗದಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆ ಇಳಕಲ್ ಪಟ್ಟಣದ ಪ್ರಕಾಶ್ ಮಲ್ಲನಗೌಡ ಪಾಟೀಲ್ ವಂಚನೆಗೊಳಗಾದ ಉದ್ಯಮಿ. ದಾವಣಗೆರೆ ಮೂಲದ ವಿನಯ್ ಯಲಿಗಾರ ಮತ್ತು ಶಂಕರ್ ಯಲಿಗಾರ ಎಂಬವರು ಉದ್ಯಮಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.

    ಎಲಿಗಾರ ಸಹೋದರರು ತಮ್ಮ ವಿ.ವೈ ಕ್ಯಾಪಿಟಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ತಾವು ಕಟ್ಟಿದ ಹಣಕ್ಕೆ ನಾಲ್ಕು ತಿಂಗಳಿಗೊಮ್ಮೆ ಶೇ.30 ರಷ್ಟು ಹಣ ಲಾಭ ಪಡೆಯಬಹುದು ಎಂದು ಉದ್ಯಮಿಗೆ ಇಲ್ಲ-ಸಲ್ಲದ ಮಾಹಿತಿ ನೀಡಿ ನಂಬಿಸಿ ಬಲೆಗೆ ಹಾಕಿಕೊಂಡಿದ್ದಾರೆ.

    ಬಣ್ಣದ ಮಾತುಗಳನ್ನು ನಂಬಿದ ಉದ್ಯಮಿ ಪ್ರಕಾಶ್ ಪಾಟೀಲ್, ಕಳೆದ 2020 ಜೂನ್ 28 ರಂದು ಗದಗನ ಪಂಚಾಕ್ಷರಿ ನಗರದಲ್ಲಿ ಇರುವ ಉದ್ಯಮಿಯ ಸಹೋದರ ನಾಗರಾಜ್ ಪಾಟೀಲ್ ಮನೆಯಲ್ಲಿ ವ್ಯವಹಾರ ಕುದುರಿಸಿದ್ದಾರೆ. ಈ ವೇಳೆ 35 ಲಕ್ಷ ರೂಪಾಯಿ ಹಣವನ್ನು ಆರೋಪಿತರ ಕೈಗೆ ಕೊಟ್ಟಿದ್ದಾರೆ. ಹಣ ಪಡೆದು ಕಳೆದ ಏಳೆಂಟು ತಿಂಗಳಿಂದ ಒಂದು ನಯಾ ಪೈಸೆನೂ ಸಹ ಉದ್ಯಮಿಗೆ ಕೊಡದೆ ವಂಚಿಸಿದ್ದಾರೆ.

    ಸದ್ಯ ಉದ್ಯಮಿ ಪ್ರಕಾಶ್ ಗದಗ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗದಗ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆಯಲ್ಲಿ ಇದೇ ರೀತಿ ಹಲವರಿಗೆ ವಂಚನೆ ಮಾಡಿರುವ ಮಾಹಿತಿ ಮೇರೆಗೆ ಆ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

  • ಕೇವಲ 2 ವರ್ಷದಲ್ಲಿ 10 ಸಾವಿರ ಅಂಕಗಳ ಹೈ ಜಂಪ್ – 50 ಸಾವಿರ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್

    ಕೇವಲ 2 ವರ್ಷದಲ್ಲಿ 10 ಸಾವಿರ ಅಂಕಗಳ ಹೈ ಜಂಪ್ – 50 ಸಾವಿರ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್

    ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 300 ಅಂಕಗಳ ಜಿಗಿತ ಕಂಡು ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿ ದಾಖಲೆ ಬರೆದಿದೆ.

    ಬುಧವಾರ 49,792ಕ್ಕೆ ಅಂತ್ಯಕಂಡಿದ್ದ ಸೆನ್ಸೆಕ್ಸ್ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಏರಿಕೆಯಾಗಿ 50 ಸಾವಿರದ ಗಡಿಯನ್ನು ದಾಟಿತು. 300 ಅಂಕಗಳಿಗೆ ಜಿಗಿತ ಕಂಡು ಮೊದಲ ಬಾರಿಗೆ 50,184ಕ್ಕೆ ತಲುಪಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು.

    ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಏರಿಕೆ ಆಗಿದ್ದ ಸೆನ್ಸೆಕ್ಸ್ ಬಳಿಕ ಸ್ಥಿರತೆ ಕಾಪಾಡಿ ಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಗೆ ಇಳಿಕೆಯಾಗುತ್ತಾ ಸಾಗಿ ಅಂತಿಮವಾಗಿ 49,625ಕ್ಕೆ ಮುಕ್ತಾಯ ಕಂಡಿತು.

    ಬುಧವಾರ 14,644ರಲ್ಲಿ ಮುಕ್ತಾಯವಾಗಿದ್ದ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಇಂದು 14,754ಕ್ಕೆ ತಲುಪಿತ್ತಾದರೂ ಬಳಿಕ ಅಂತಿಮವಾಗಿ 14,590ಕ್ಕೆ ಕೊನೆಯಾಯಿತು. ಆರಂಭದಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಎರಡೂ ಏರಿಕೆ ಕಂಡಿದ್ದರಿಂದ ಹೂಡಿಕೆದಾರರು ಸಂಭ್ರಮಿಸಿದ್ದರು.

    1999 ರಲ್ಲಿ ಸೆನ್ಸೆಕ್ಸ್ 5000ಕ್ಕೆ ಏರಿಕೆಯಗಿತ್ತು. 20,000ಕ್ಕೆ ಜಿಗಿಯಲು 8 ವರ್ಷಗಳು ಬೇಕಾಯಿತು. 12 ವರ್ಷಗಳ ಬಳಿಕ ಮೇ 23, 2019ರಂದು 40,000ಕ್ಕೆ ಜಿಗಿದಿತ್ತು. ಇದೀಗ ಕೇವಲ ಎರಡೇ ವರ್ಷಗಳ ಅವಧಿಯಲ್ಲಿ 10,000 ಅಂಕಗಳ ಜಿಗಿತ ಕಂಡು ಇಂದು 50,000 ದ ಗಡಿಯನ್ನು ದಾಟಿ ಇಳಿಕೆಯಾಗಿದೆ.

  • ಪಾಕ್‌ ಷೇರು ಮಾರುಕಟ್ಟೆಯ ಮೇಲೆ ಉಗ್ರರ ದಾಳಿ – ವಿಡಿಯೋ

    ಪಾಕ್‌ ಷೇರು ಮಾರುಕಟ್ಟೆಯ ಮೇಲೆ ಉಗ್ರರ ದಾಳಿ – ವಿಡಿಯೋ

    – ನಾಲ್ವರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ
    – ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ಗಂಭೀರ ಗಾಯ

    ಇಸ್ಲಾಮಾಬಾದ್‌: ಪಾಕಿಸ್ತಾನದ ಕರಾಚಿಯಲ್ಲಿರುವ ಷೇರು ಮಾರುಕಟ್ಟೆಯ ಮೇಲೆ ಉಗ್ರರು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

    ಕಾರಿನಲ್ಲಿ ಆಗಮಿಸಿದ ನಾಲ್ವರು ಉಗ್ರರು ಆರಂಭದಲ್ಲಿ ಮುಖ್ಯ ದ್ವಾರದಲ್ಲಿ ಗ್ರೆನೇಡ್‌ ಎಸೆದು ಒಳ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

    https://twitter.com/RT_com/status/1277485379998932994

    ಕೂಡಲೇ ಭದ್ರತಾ ಸಿಬ್ಬಂದಿ ಕಟ್ಟಡವನ್ನು ಸುತ್ತುವರಿದು ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಮೃತ ಉಗ್ರರಿಂದ ಆಯುಧ ಮತ್ತು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

    ಕಳೆದ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂಸತ್‍ನಲ್ಲೇ ಅಮೆರಿಕ ಸೈನಿಕರು ಹತ್ಯೆ ಮಾಡಿದ ಅಲ್ ಖೈದಾ ಮುಖ್ಯಸ್ಥ, ಉಗ್ರ ಒಸಾಮಾ ಬಿನ್ ಲಾಡೆನ್‍ಗೆ ಹುತಾತ್ಮ ಪಟ್ಟವನ್ನು ನೀಡಿ ಗೌರವಿಸಿದ್ದರು. ಈ ಹೇಳಿಕೆ ನೀಡಿದ ಐದು ದಿನದ ಒಳಗಡೆ ಈ ದಾಳಿ ನಡೆದಿದೆ. ಉಗ್ರರನ್ನು ಪೋಷಣೆ ಮಾಡಿದ್ದಕ್ಕೆ ಈಗ ಉಗ್ರರೇ ಪಾಕ್‌ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/RT_com/status/1277492471900094464

    ಯಾವುದೇ ಮಾಹಿತಿ ನೀಡದೆ ಅಮೆರಿಕ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ಒಸಾಮಾ ಬಿನ್ ಲಾಡೆನ್‍ನನ್ನು ಹತ್ಯೆ ಮಾಡಿದರು. ಬಳಿಕ ವಿಶ್ವದ ಪ್ರತಿಯೊಬ್ಬರೂ ಪಾಕಿಸ್ತಾನವನ್ನು ನಿಂದಿಸಲು ಪ್ರಾರಂಭಿಸಿದರು. ಈ ಮೂಲಕ ಮುಜುಗರಕ್ಕೀಡು ಮಾಡಿದರು ಎಂದು ಇಮ್ರಾನ್‌ ಖಾನ್‌ ದೂರಿದ್ದರು.

    ಭಯೋತ್ಪಾದನೆ ವಿರುದ್ಧ ಯುಎಸ್ ನಡೆಸಿದ ಯುದ್ಧದಲ್ಲಿ 70 ಸಾವಿರ ಪಾಕಿಸ್ತಾನಿಗಳು ಸಾವನ್ನಪ್ಪಿದರು ಎಂದು ಖಾನ್ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಸಾಮಾ ಬಿನ್ ಲಾಡೆನ್ ಹುತಾತ್ಮನೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.

  • ಎಚ್‍ಡಿಎಫ್‍ಸಿ ಷೇರು ಖರೀದಿಸಿದ ಚೀನಾದ ಬ್ಯಾಂಕ್

    ಎಚ್‍ಡಿಎಫ್‍ಸಿ ಷೇರು ಖರೀದಿಸಿದ ಚೀನಾದ ಬ್ಯಾಂಕ್

    ಮುಂಬೈ: ಭಾರತೀಯ ಬ್ಯಾಕಿಂಗ್ ಕ್ಷೇತ್ರದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದ್ದು, ಚೀನಾದ ಬ್ಯಾಂಕ್‍ವೊಂದು ಎಚ್‍ಡಿಎಫ್‍ಸಿ ಬ್ಯಾಂಕ್‍ನ ಶೇ.1.01 ಷೇರು ಖರೀದಿಸಿದೆ.

    ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ)ಯು ಎಚ್‍ಡಿಎಫ್‍ಸಿ ಬ್ಯಾಂಕ್ ಶೇಕಡಾ 1.01 ಪಾಲನ್ನು ಪಡೆದುಕೊಂಡಿದೆ. ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಚೀನಾ ಎಚ್‍ಡಿಎಫ್‍ಸಿಯಲ್ಲಿ ಸುಮಾರು 1.75 ಕೋಟಿ ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಕಂಪನಿ ಬಾಂಬೆ ಸ್ಟಾಕ್ ಎಕ್ಸ್‍ಚೇಂಜ್ (ಬಿಎಸ್‍ಇ) ತಿಳಿಸಿದೆ.

    ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಳೆದ ಒಂದು ತಿಂಗಳಲ್ಲಿ ಎಚ್‍ಡಿಎಫ್‍ಸಿಯ ಷೇರುಗಳ ಬೆಲೆ ಶೇ.25ಕ್ಕಿಂತಲೂ ಕಡಿಮೆಯಾಗಿದೆ. ಇದೇ ವಿಚಾರವಾಗಿ ಮಾತನಾಡಿರುವ ಎಚ್‍ಡಿಎಫ್‍ಸಿಯ ಉಪಾಧ್ಯಕ್ಷ ಮತ್ತು ಸಿಇಒ ಕೆಕಿ ಮಿಸ್ತ್ರಿ, ಪಿಬಿಒಸಿ ಈ ಹಿಂದೆಯೇ ಬ್ಯಾಂಕಿನ ಷೇರು ಖರೀದಿಸಿದೆ. ಮಾರ್ಚ್ 2019ರ ವೇಳೆಗೆ ಕಂಪನಿಯಲ್ಲಿ ಶೇ.0.8ರಷ್ಟು ಒಡೆತನವನ್ನು ಹೊಂದಿದೆ. ಈಗ ಈ ಪಾಲು ಶೇ.1ಕ್ಕೆ ತಲುಪಿದ ಕಾರಣ ಬಹಿರಂಗ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಎಚ್‍ಡಿಎಫ್‍ಸಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಶೇ.70.88 ರಷ್ಟು ಪಾಲನ್ನು ಹೊಂದಿದ್ದಾರೆ. ಇದು ಸಿಂಗಾಪುರ್ ಸರ್ಕಾರದ ಶೇ. 3.23ರಷ್ಟು ಷೇರುಗಳನ್ನು ಒಳಗೊಂಡಿದೆ. ಪ್ರಸ್ತುತ ಎಚ್‍ಡಿಎಫ್‍ಸಿಯ ಪ್ರತಿ ಷೇರಿಗೆ 1,701.95 ರೂ. ಬೆಲೆಯಿದೆ.

    ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಎಚ್‍ಡಿಎಫ್‍ಸಿ ಅಷ್ಟೇ ಅಲ್ಲದೆ ಬಿಪಿ ಪಿಎಲ್‍ಸಿ ಹಾಗೂ ರಾಯಲ್ ಡಚ್ ಶೆಲ್ ಪಿಎಲ್‍ಸಿ ಸೇರಿದಂತೆ ವಿಶ್ವದಾದ್ಯಂತದ ಕಂಪನಿಗಳಲ್ಲಿ ಪಾಲನ್ನು ಹೊಂದಿದೆ.

  • ಕೇಂದ್ರದ ಒಂದು ನಿರ್ಧಾರದಿಂದ ಒಂದೇ ದಿನ ಹೂಡಿಕೆದಾರರಿಗೆ ಸಿಕ್ತು 7 ಲಕ್ಷ ಕೋಟಿ

    ಕೇಂದ್ರದ ಒಂದು ನಿರ್ಧಾರದಿಂದ ಒಂದೇ ದಿನ ಹೂಡಿಕೆದಾರರಿಗೆ ಸಿಕ್ತು 7 ಲಕ್ಷ ಕೋಟಿ

    ಮುಂಬೈ: ಕೆಲ ತಿಂಗಳಿನಿಂದ ನಷ್ಟ ಅನುಭವಿಸುತ್ತಿದ್ದ ಹೂಡಿಕೆದಾರರು ಇವತ್ತು ಒಂದೇ ದಿನ 7 ಲಕ್ಷ ಕೋಟಿ ರೂ. ಹಣವನ್ನು ಗಳಿಸಿದ್ದಾರೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಇಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ದಶಕದ ಬಳಿಕ ಭಾರೀ ಏರಿಕೆಯಾಗಿದ್ದರಿಂದ ಹೂಡಿಕೆದಾರರು ಭರ್ಜರಿ ಲಾಭಗಳಿಸಿದ್ದಾರೆ.

    ಕುಸಿತ ಹಾದಿಯಲ್ಲಿರುವ ದೇಶದ ಆರ್ಥಿಕತೆಗೆ ಇವತ್ತು ಕೇಂದ್ರ ಸರ್ಕಾರ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಿಯ ಕಂಪನಿಗಳ ಮೇಲಿನ ಎಲ್ಲಾ ಸೆಸ್ ಒಳಗೊಂಡಂತೆ ಕಾರ್ಪೋರೇಟ್ ತೆರಿಗೆಯನ್ನು ಶೇ.34.94ರಿಂದ ಶೇ. 25.17ಕ್ಕೆ ಇಳಿಸಿದೆ. ಹೆಚ್ಚು ಕಡಿಮೆ ಶೇ. 10ರಷ್ಟು ಕಾರ್ಪೋರೇಟ್ ತೆರಿಗೆ ಇಳಿಕೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಿಂದಲೇ ಅನ್ವಯವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

    ಈ ಬೆನ್ನಲ್ಲೇ ನಿರಂತರ ನಷ್ಟ ಅನುಭವಿಸುತ್ತಿದ್ದ ಷೇರು ಪೇಟೆಯಲ್ಲಿ ಲಾಭದ ಹೊಳೆಯೇ ಹರಿಯಿತು. ಷೇರುಪೇಟೆ ಸೂಚ್ಯಂಕ ಲಾಭಾಂಶದಲ್ಲಿ ದಶಕದ ಬಳಿಕ ಹೊಸ ದಾಖಲೆ ಬರೆಯಿತು. ಹಿಂದೆಂದೂ ಕಾಣದ ರೀತಿಯಲ್ಲಿ ಮುಂಬೈ ಷೇರುಪೇಟೆ ಒಂದೇ ದಿನ 2,000 ಅಂಶಗಳಿಗೂ ಹೆಚ್ಚು ಏರಿಕೆ ಕಂಡಿತು. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಕೂಡ ಏರಿಕೆಯಲ್ಲಿ ಮುಳುಗೆದ್ದಿತು. ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ಬೆನ್ನಲ್ಲೇ ಬಿಎಸ್‍ಇ ಮಾರ್ಕೆಟ್ ಮೌಲ್ಯ 143.45 ಲಕ್ಷ ಕೋಟಿಗೆ ಜಿಗಿಯಿತು. ಹೂಡಿಕೆದಾರರ ಸಂಪತ್ತು 7 ಲಕ್ಷ ಕೋಟಿಗೂ ಹೆಚ್ಚು ಏರಿಕೆ ಕಂಡಿತು.

    ಎಷ್ಟು ಏರಿಕೆ ಆಯ್ತು?
    ಸೆನ್ಸೆಕ್ಸ್ ಗುರುವಾರ 36,093.43 ಅಂಶಗಳಲ್ಲಿ ಮುಕ್ತಾಯಗೊಂಡರೆ ಇಂದು 1,921.25 (ಶೇ.5.32) ಅಂಶಗಳ ಏರಿಕೆ ಕಂಡು 38,014.62 ಅಂಶಗಳಲ್ಲಿ ಕೊನೆಗೊಂಡಿತು. ನಿಫ್ಟಿ ನಿನ್ನೆ 10,704.80 ಅಂಶಗಳಲ್ಲಿ ಕೊನೆಯಾಗಿದ್ದರೆ ಇಂದು 569.40(ಶೇ.5.32) ಅಂಶ ಏರಿಕೆಯಾಗಿ 11,274.20 ಅಂಶಗಳಲ್ಲಿ ಮುಕ್ತಾಯವಾಯಿತು.

    ಈ ಹಿಂದೆ ಸೆನ್ಸೆಕ್ಸ್ 2009ರ ಮೇ 18 ರಂದು 2,111 ಅಂಶ ಏರಿಕೆ ಕಂಡಿದ್ದು ಇದು ಈವರೆಗೆ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚಿನ ಏರಿಕೆಯಾಗಿದೆ. ನಿಫ್ಟಿ 2009ರ ಮೇ 18 ರಂದು 713 ಅಂಶಗಳ ಏರಿಕೆ ಕಂಡಿತ್ತು.

    ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಏನು?
    ಗೋವಾದ ಪಣಜಿಯಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಿಯ ಕಂಪೆನಿಗಳಿಗೆ ವಿಧಿಸುತ್ತಿದ್ದ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೊಸ ಸ್ಥಳೀಯ ಸಂಸ್ಥೆಗಳಿಗೂ ಕಾರ್ಪೋರೇಟ್ ಮಾದರಿಯಲ್ಲಿ ತೆರಿಗೆಯಲ್ಲಿ ವಿನಾಯಿತಿ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಶೇ.30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ.22.2ಕ್ಕೆ ಇಳಿಸಲಾಗಿದೆ. ಈ ಹಿಂದೆ ಕಾರ್ಪೋರೇಟ್ ತೆರಿಗೆ, ಸೆಸ್, ಸಚಾರ್ಜ್ ಸೇರಿ ಶೇ.35 ಆಗುತಿತ್ತು. ಈಗ ಇದೆಲ್ಲ ಸೇರಿ ತೆರಿಗೆ ಶೇ.25.2ಕ್ಕೆ ಇಳಿಕೆಯಾಗಿದೆ. ಈ ತೆರಿಗೆ ದರ ಈ ವರ್ಷದ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.

    ತೆರಿಗೆ ಕಡಿತಗೊಳಿಸಿ ಘೋಷಣೆ ಮಾಡಿದ ಬಳಿಕ ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ನೆರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉದ್ಯೋಗಾವಕಾಶ ಹಾಗೂ ಆರ್ಥಿಕ ಚೇತರಿಕೆಗೆ ಸ್ಫೂರ್ತಿ ನೀಡಲಿದೆ ಎಂದು ತಿಳಿಸಿದರು.