Tag: ಷೇರು

  • ಅದಾನಿ ಬಳಿಕ ಡಾರ್ಸೆ ಕಂಪನಿ ವಿರುದ್ಧ ರಿಪೋರ್ಟ್‌ ಔಟ್‌ – ಷೇರು ಮೌಲ್ಯ ಭಾರೀ ಕುಸಿತ

    ಅದಾನಿ ಬಳಿಕ ಡಾರ್ಸೆ ಕಂಪನಿ ವಿರುದ್ಧ ರಿಪೋರ್ಟ್‌ ಔಟ್‌ – ಷೇರು ಮೌಲ್ಯ ಭಾರೀ ಕುಸಿತ

    ನವದೆಹಲಿ: ಅದಾನಿ ಗ್ರೂಪ್‍ನ ವರದಿ ನಂತರ ಅಮೆರಿಕ ಮೂಲದ ಹಿಂಡೆನ್‍ಬರ್ಗ್ (Hindenburg) ರಿಸರ್ಚ್ ಇದೀಗ ಮಾಜಿ ಟ್ವಿಟ್ವರ್ ಸಿಇಒ ಹಾಗೂ ಸಂಸ್ಥಾಪಕ ಜಾಕ್ ಡಾರ್ಸೆ (Jack Dorsey) ಸ್ಥಾಪಿಸಿದ ಪೇಮೆಂಟ್ ಕಂಪನಿಯಾದ ಬ್ಲಾಕ್ (Block) ವಿರುದ್ಧ ಹೊಸ ವರದಿಯನ್ನು ಬಿಡುಗಡೆ ಮಾಡಿದೆ.

    ಹಿಂಡೆನ್‍ಬರ್ಗ್ ರಿಸರ್ಚ್ ಇದೀಗ ಬಿಡುಗಡೆ ಮಾಡಿರುವ ವರದಿಯಲ್ಲಿ ಬ್ಲಾಕ್ ಇಂಕ್‌ನ ಮೇಲೆ ಕಣ್ಣಿಟ್ಟಿದ್ದೆವು. ಈ ಹಿಂದೆ ಬ್ಲಾಕ್ ಇಂಕ್ ಕಂಪನಿಯನ್ನು ಅನ್ನು ಹಿಂದೆ ಸ್ಕ್ವೇರ್ ಇಂಕ್ ಎಂದು ಕರೆಯಲಾಗುತ್ತಿತ್ತು. ಬ್ಲಾಕ್ ಕಂಪನಿಯಲ್ಲಿ ಹಲವಾರು ಅವ್ಯವಹಾರಗಳು ನಡೆದಿವೆ. ಈ ಕಂಪನಿಯು ಹೂಡಿಕೆದಾರರಿಗೆ ತನ್ನ ಅಂಕಿ ಅಂಶಗಳ ಮಾಹಿತಿಯನ್ನು ತಪ್ಪಾಗಿ ಬಿಂಬಿಸುತ್ತಿದೆ. ಬ್ಲಾಕ್‍ನಲ್ಲಿರುವ ಖಾತೆಗಳು 40 – 75% ನಕಲಿಯಾಗಿದೆ. ಈ ಬಗ್ಗೆ 2 ವರ್ಷಗಳ ತನಿಖೆ ನಡೆಸಿರುವುದಾಗಿ ತಿಳಿಸಿದೆ.

    ಬ್ಲಾಕ್‍ನ ಮಾಜಿ ಉದ್ಯೋಗಿಗಳನ್ನು, ಇಂಡಸ್ಟ್ರಿಯ ಪರಿಣಿಯತರನ್ನೂ ಸಂದರ್ಶಿಸಲಾಗಿದ್ದು, ಕಂಪನಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿದೆ.

    ವರದಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬ್ಲಾಕ್‍ನ ಷೇರು ದರ 20% ಕುಸಿದಿದೆ. ಜಾಕ್ ಡೋರ್ಸೆ ಒಡೆತನದ ಬ್ಲಾಕ್ ಕಂಪನಿಯು ಮೊಬೈಲ್ ಪೇಮೆಂಟ್ ಕಂಪನಿಯಾಗಿದ್ದು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇದರ ಷೇರು ದರದಲ್ಲಿ 639% ಏರಿಕೆಯಾಗಿತ್ತು. ಇದನ್ನೂ ಓದಿ: ಗ್ರಾಹಕರಿಗೆ ಶಾಕ್‌ ಕೊಟ್ಟ Maruti Suzuki – ಏಪ್ರಿಲ್‌ನಿಂದ ಬೆಲೆ ಮತ್ತಷ್ಟು ದುಬಾರಿ!

    ಈ ಹಿಂದೆ ಜನವರಿಯಲ್ಲಿ ಹಿಂಡೆನ್‍ಬರ್ಗ್ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದ ಎಂದು ಆರೋಪಿಸಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ವರದಿಯ ಬೆನ್ನಲ್ಲೆ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದವು. ಇದನ್ನೂ ಓದಿ: ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್

  • ಅದಾನಿ ಬಳಿಕ ಹೊಸ ವರದಿ ಬಿಡುಗಡೆಯ ಸೂಚನೆ ಕೊಟ್ಟ ಹಿಂಡೆನ್‍ಬರ್ಗ್

    ಅದಾನಿ ಬಳಿಕ ಹೊಸ ವರದಿ ಬಿಡುಗಡೆಯ ಸೂಚನೆ ಕೊಟ್ಟ ಹಿಂಡೆನ್‍ಬರ್ಗ್

    ನವದೆಹಲಿ: ಅದಾನಿ ಗ್ರೂಪ್‍ನ (Adani group) ವರದಿಯ ನಂತರ ಅಮೆರಿಕ (America) ಮೂಲದ ಹಿಂಡೆನ್‍ಬರ್ಗ್ ರಿಸರ್ಚ್ ಸಂಸ್ಥೆ  (Hindenburg) ಗುರುವಾರ ಮತ್ತೊಂದು ಹೊಸ ವರದಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ತನ್ನ ಟ್ವೀಟ್‍ನಲ್ಲಿ ಶೀಘ್ರದಲ್ಲೇ ಹೊಸ ವರದಿ ಬಿಡುಗಡೆ ಮಾಡುವುದಾಗಿ ಸಂಸ್ಥೆ ಪ್ರಕಟಿಸಿದೆ.

    ಜನವರಿಯಲ್ಲಿ ಹಿಂಡೆನ್‍ಬರ್ಗ್ ಅದಾನಿ ಸಮೂಹ ಷೇರು ಮಾರುಕಟ್ಟೆಯಲ್ಲಿ ಅಕ್ರಮ ಎಸಗಿದೆ. ಅಕ್ರಮದ ಮೂಲಕ ತನ್ನ ಸಮೂಹದ ಕಂಪನಿಯ ಷೇರು ಬೆಲೆಯನ್ನು ಏರಿಕೆ ಮಾಡಿದ ಎಂದು ಆರೋಪಿಸಿ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಷೇರಿನ ಮೌಲ್ಯ ಹೆಚ್ಚಿಸಲು ಹಲವಾರು ಶೆಲ್ ಕಂಪನಿಗಳನ್ನು (shell companies) ಬಳಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಇದನ್ನೂ ಓದಿ: ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ – ಅಮೃತ್‌ಪಾಲ್ ಕರಾಳ ಮುಖ ಬಯಲು

    ವರದಿಯ ಬೆನ್ನಲ್ಲೆ ಅದಾನಿ ಗ್ರೂಪ್ ಷೇರುಗಳು ಕುಸಿತ ಕಂಡಿದ್ದವು. ಈ ಬಗ್ಗೆ ಅದಾನಿ ಸಮೂಹ ಸಂಸ್ಥೆಗಳು ವರದಿಯ ಅಂಶಗಳನ್ನು ದುರುದ್ದೇಶಪೂರಿತ ಮತ್ತು ಆಧಾರರಹಿತ ಎಂದಿತ್ತು. ಅಲ್ಲದೇ ಭಾರತದ (India) ಮೇಲಿನ ದಾಳಿ ಇದಾಗಿದೆ ಎಂದು ತಿರುಗೇಟು ನೀಡಿತ್ತು. ಇದನ್ನೂ ಓದಿ: ಮನೆ ಬಿಟ್ಟು ನಾಪತ್ತೆಯಾದ ದಂಪತಿ – ಬೆಂಗಳೂರು ಪೊಲೀಸರಿಗೆ ಪೀಕಲಾಟ

  • 100 ದಿನಗಳೊಳಗೆ 2 ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್‌ಫ್ಲಿಕ್ಸ್

    100 ದಿನಗಳೊಳಗೆ 2 ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್‌ಫ್ಲಿಕ್ಸ್

    ವಾಷಿಂಗ್ಟನ್: ವಿಶ್ವದ ಪ್ರಮುಖ ಒಟಿಟಿ ಸ್ಟ್ರೀಮಿಂಗ್ ಕಂಪನಿ ನೆಟ್‌ಫ್ಲಿಕ್ಸ್ ದಶಕದಲ್ಲೇ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ತನ್ನ ಚಂದಾದಾರರನ್ನು ಕಳೆದುಕೊಂಡಿದೆ.

    ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈ ಕಾರಣದಿಂದಾಗಿ ನೆಟ್‌ಫ್ಲಿಕ್ಸ್ ಬರೋಬ್ಬರಿ 2 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಈ ವರ್ಷದ ಮೊದಲ ತ್ರೈಮಾಸಿಕ ವರದಿಯಲ್ಲಿ ನೆಟ್‌ಫ್ಲಿಕ್ಸ್ 22.06 ಕೋಟಿ ಚಂದಾದಾರರನ್ನು ಹೊಂದಿರುವುದಾಗಿ ತಿಳಿಸಿದೆ. ಇದು ಕಳೆದ ವರ್ಷದ ವರದಿಗಿಂತಲೂ ಕಡಿಮೆಯಾಗಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಒಂದೇ ದಿನ ಪೆಟ್ರೋಲ್ ಬೆಲೆ 84 ರೂ. ಏರಿಕೆ – ಪ್ರತಿಭಟನಾಕಾರರ ಮೇಲೆ ಫೈರಿಂಗ್

    ನೆಟ್‌ಫ್ಲಿಕ್ಸ್‌ನ ಕಳೆದ ವರ್ಷದ ನಿವ್ವಳ ಆದಾಯ 1.7 ಶತಕೋಟಿ ಡಾಲರ್(12.98 ಸಾವಿರ ಕೋಟಿ ರೂ.) ಇತ್ತು. ಈ ವರ್ಷ 1.6 ಶತಕೋಟಿ ಡಾಲರ್(12.22 ಸಾವಿರ ಕೋಟಿ ರೂ.)ಗೆ ಇಳಿಕೆಯಾಗಿದೆ ಎಂದು ಸಿಲಿಕಾನ್ ವ್ಯಾಲಿ ಟೆಕ್ ಸಂಸ್ಥೆ ವರದಿ ಮಾಡಿದೆ. ಈ ಅಂಕಿ ಅಂಶ ಬಿಡುಗಡೆಯ ಬಳಿಕ ನೆಟ್‌ಫ್ಲಿಕ್ಸ್ ಷೇರು ಸುಮಾರು ಶೇ.25 ರಷ್ಟು ಕುಸಿದಿದೆ. ಇದನ್ನೂ ಓದಿ: ಚೀನಾ ಮೀರಿಸಿದ ಭಾರತ – ವಿಶ್ವದಲ್ಲೇ ಅತೀ ವೇಗದ ಅಭಿವೃದ್ಧಿ

    ನಾವು ಬಯಸಿದಷ್ಟು ವೇಗವಾಗಿ ನಮ್ಮ ಆದಾಯ ಹೆಚ್ಚುತ್ತಿಲ್ಲ. 2020ರಲ್ಲಿ ಕೋವಿಡ್ ಕಾರಣದಿಂದ ನಮ್ಮ ಕಂಪನಿಯ ಆದಾಯ ಗಣನೀಯವಾಗಿ ಏರಿಕೆ ಕಂಡಿತ್ತು. 2021ರಲ್ಲಿ ಕೋವಿಡ್ ಇಳಿಕೆಯಿಂದಾಗಿ ನಿಧಾನಗತಿಯಲ್ಲಿ ಆದಾಯವೂ ಇಳಿಯತೊಡಗಿತು ಎಂದು ನೆಟ್‌ಫ್ಲಿಕ್ಸ್ ಇತ್ತೀಚೆಗೆ ತಿಳಿಸಿದೆ.

  • ಟ್ವಿಟ್ಟರ್ ಕಂಪನಿಯನ್ನೇ ಖರೀದಿಸುವುದಾಗಿ ಆಫರ್ ಕೊಟ್ಟ ಮಸ್ಕ್

    ಟ್ವಿಟ್ಟರ್ ಕಂಪನಿಯನ್ನೇ ಖರೀದಿಸುವುದಾಗಿ ಆಫರ್ ಕೊಟ್ಟ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟ್ಟರ್‌ನ ಶೇ.9.2 ಷೇರನ್ನು ಖರೀದಿಸಿದ್ದರು. ಬಳಿಕವೂ ಟ್ವಿಟ್ಟರ್‌ನ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಮಸ್ಕ್ ಇದೀಗ ಸಂಪೂರ್ಣವಾಗಿ ಕಂಪನಿಯನ್ನೇ ಖರೀದಿಸಲು ಮುಂದಾಗಿದ್ದಾರೆ.

    ಹೌದು, ಮಸ್ಕ್ ಮೈಕ್ರೋಬ್ಲಾಗಿಂಗ್ ಸೈಟ್‌ನ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಕೆಲವೇ ದಿಗಳಲ್ಲಿ 41 ಬಿಲಿಯನ್ ಡಾಲರ್(ಸುಮಾರು 3 ಲಕ್ಷ ಕೋಟಿ ರೂ.)ಗೆ ಟ್ವಿಟ್ಟರ್‌ನ ಶೇ.100 ಪಾಲನ್ನು ಖರೀದಿಸುವಂತೆ ಕಂಪನಿಗೆ ಆಫರ್ ನೀಡಿದ್ದಾರೆ. ತನ್ನ ಖರೀದಿ ನಿರ್ಧಾರವನ್ನು ಅಮೆರಿಕದ ಸೆಕ್ಯೂರಿಟಿ ಆಂಡ್ ಎಕ್ಸ್ಚೇಂಜ್ ಕಮಿಷನ್‌ಗೆ ಮಸ್ಕ್ ತಿಳಿಸಿದ್ದಾರೆ. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್

    ಟ್ವಿಟ್ಟರ್ ಜಗತ್ತಿನಾದ್ಯಂತ ಒಂದು ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ್ಯದ ವೇದಿಕೆಯಾಗಬಹುದು ಎಂಬ ಕಾರಣಕ್ಕೆ ಹೂಡಿಕೆ ಮಾಡಿದ್ದೇನೆ. ನಾನು ಹೂಡಿಕೆ ಮಾಡಿದ ಬಳಿಕ ಕಂಪನಿ ಅಭಿವೃದ್ಧಿ ಹೊಂದುವುದಿಲ್ಲ ಅಥವಾ ಸದ್ಯ ಸಾಮಾಜಿಕ ಅಗತ್ಯಗಳು ಪೂರೈಸುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಟ್ವಿಟ್ಟರ್ ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: 10 ಕೋಟಿ ಭಾರತೀಯ ಬಳಕೆದಾರರಿಗೆ ಯುಪಿಐ ಸೇವೆ ನೀಡಲಿದೆ ವಾಟ್ಸಪ್

    ನಾನೀಗ ಟ್ವಿಟ್ಟರ್‌ನ ಶೇ.100 ಪಾಲನ್ನು ಪ್ರತಿ ಷೇರಿಗೆ 54.20(4,126 ರೂ.) ಡಾಲರ್ ನಗದು ರೂಪದಲ್ಲಿ ಖರೀದಿಸಲು ಆಫರ್ ನೀಡುತ್ತಿದ್ದೇನೆ. ನಾನು ಟ್ವಿಟ್ಟರ್‌ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ ಹಿಂದಿನ ದಿನ ಶೇ.54 ಪ್ರೀಮಿಯಂ ಹಾಗೂ ನನ್ನ ಹೂಡಿಕೆಯನ್ನು ಸಾರ್ವಜನಿಕವಾಗಿ ಘೋಷಿಸುವ ಹಿಂದಿನ ದಿನ ಶೇ.38 ಪ್ರೀಮಿಯಂ ಖರೀದಿಸಲು ಇಚ್ಛಿಸುತ್ತೇನೆ. ಈ ನನ್ನ ಆಫರ್ ಅತ್ಯುತ್ತಮ ಹಾಗೂ ಅಂತಿಮ ಎಂದು ನಾನು ಭಾವಿಸಿದ್ದೇನೆ. ಒಂದು ವೇಳೆ ಈ ಆಫರ್ ಅನ್ನು ನಿರಾಕರಿಸಿದ್ದಲ್ಲಿ, ನಾನು ಟ್ವಿಟ್ಟರ್‌ನ ಷೇರುದಾರ ಸ್ಥಾನವನ್ನು ಬದಲಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಫೇಸ್‍ಬುಕ್ ಒಡೆಯನಿಗಿಂತ ಈಗ ಅದಾನಿ, ಅಂಬಾನಿ ಶ್ರೀಮಂತರು

    ಫೇಸ್‍ಬುಕ್ ಒಡೆಯನಿಗಿಂತ ಈಗ ಅದಾನಿ, ಅಂಬಾನಿ ಶ್ರೀಮಂತರು

    ನ್ಯೂಯಾರ್ಕ್: ಜಗತ್ತಿನ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಬಳಕೆದಾರರ ಸಂಖ್ಯೆ ತಗ್ಗಿದ ಹಿನ್ನೆಲೆಯಲ್ಲಿ ಅದರ ಮಾತೃಸಂಸ್ಥೆ ಮೆಟಾ ಕಂಪನಿಯ ಷೇರುಗಳು ಶೇ.26ರಷ್ಟು ಕುಸಿತ ಕಂಡಿವೆ. ಇದರ ಪರಿಣಾಮವಾಗಿ ಆ ಕಂಪನಿಯ ಒಡೆಯ ಮಾರ್ಕ್ ಜುಕರ್‌ಬರ್ಗ್ ಸಂಪತ್ತಿನ ಮೌಲ್ಯವೂ ಇಳಿಕೆಯಾಗಿದೆ.

    ಸಿರಿವಂತಿಕೆಯಲ್ಲಿ ಭಾರತದ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿಗಿಂತಲೂ ಮಾರ್ಕ್ ಜುಕರ್‌ಬರ್ಗ್ ಹಿಂದೆ ಬಿದ್ದಿದ್ದಾರೆ. ಶ್ರೀಮಂತರ ಪಟ್ಟಿಯಿಂದ ಮಾರ್ಕ್ ಜುಕರ್‌ಬರ್ಗ್ ಅವರು 12ನೇ ಸ್ಥಾನಕ್ಕೆ ಜಾರಿದ್ದಾರೆ. ಗೌತಮ್ ಅದಾನಿ 10ನೇ ಸ್ಥಾನದಲ್ಲಿದ್ದಾರೆ. ಮುಕೇಶ್ ಅಂಬಾನಿ 11 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

    18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೇಸ್‍ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. 3 ತಿಂಗಳ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 192.9 ಕೋಟಿಗೆ ಕುಸಿದಿದ್ದು, ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 193 ಕೋಟಿಯಷ್ಟು ಬಳಕೆದಾರರಿದ್ದರು ಎಂದು ಫೇಸ್‍ಬುಕ್ ಸಂಸ್ಥೆಯ ಮಾತೃಸಂಸ್ಥೆ ಮೆಟಾ ಬಹಿರಂಗಪಡಿಸಿದೆ.

    ಮೇಟಾ ಹಣಕಾಸು ಅಧಿಕಾರಿ ಡೇವಿಡ್ ವೆಹ್ನಾರ್ ಪ್ರಕಾರ, ಭಾರತದಲ್ಲಿ ಡೇಟಾ ಪ್ಯಾಕೇಜ್ ಬೆಲೆಯಲ್ಲಿನ ಹೆಚ್ಚಳವಾಗಿದೆ. ಹೀಗಾಗಿ ಒಟ್ಟಾರೆಯಾಗಿ ದೇಶದಾದ್ಯಂತ ಫೇಸ್‍ಬುಕ್ ಬಳಕೆದಾರರ ಸಂಖ್ಯೆಯು ಕೂಡಾ ಕಡಿಮೆಯಾಗುತ್ತಾ ಬರುತ್ತಿದೆ. ನಾವು ಈ ಅಂಶಗಳ ಜೊತೆಗೆ ಸ್ಪರ್ಧೆಯನ್ನು ಮಾಡಬೇಕಾಗಿದೆ. ಈ ಬೆಳವಣೆಗೆ ಹೊಸ ಬಳಕೆದಾರರ ಮೇಲೆ ನೆಗಿಟಿವ್ ಪ್ರಭಾವಬೀರುತ್ತದೆ ಎಂದು ಹೇಳಿದ್ದಾರೆ.

    ಏರ್ಟೆಲ್, ರಿಲಯನ್ಸ್ ಜಿಯೋ, ವೋಡಫೋನ್ ನೆಟ್‍ವರ್ಕ್‍ಗಳು ತಮ್ಮ ಡಾಟಾ ಪ್ಲ್ಯಾನ್ ಬೆಲೆಯಲ್ಲಿ ಹೆಚ್ಚಳ ಮಾಡಿವೆ. ಹೀಗಾಗಿ ಕೆಲವು ಬಳಕೆದಾರರ ಮೇಲೆ ಡಾಟಾ ಪ್ಲ್ಯಾನ್ ಬೆಲೆ ಹೆಚ್ಚಳದ ಹೊಡೆತ ಬೀಳುತ್ತಿದೆ ಎನ್ನಲಾಗಿದೆ.

    ಮೆಟಾ ಸಂಸ್ಥೆ ವರ್ಚುವಲ್ ರಿಯಾಲಿಟಿ ಮೇಲೆ ಹೆಚ್ಚಿನ ಹೂಡಿಕೆ ಮಾಡಿದೆ. ಟಿಕ್‍ಟಾಕ್ ಮತ್ತು ಯೂಟ್ಯೂಬ್‍ನಿಂದ ಹೆಚ್ಚಿನ ಸ್ಪರ್ಧೆ ನೀಡುತ್ತಿದೆ. ಇದರಿಂದ ಫೇಸ್‍ಬುಕ್ ಜಾಹೀರಾತುಗಳು ಕಡಿಮೆಯಾಗಬಹುದಾದ ಸಾಧ್ಯತೆಯಿದೆ ಎಂದು ಕಂಪನಿ ತಿಳಿಸಿದೆ. ಬಳಕೆದಾರರ ಸಂಖ್ಯೆ ಕಡಿಮೆಯಾದ ವಿಚಾರ ತಿಳಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಮೆಟಾ ಷೇರುಗಳು ಶೇ.23ರಷ್ಟು ಕುಸಿದಿದ್ದು, ಕಂಪನಿಗೆ ಒಂದೇ ದಿನದಲ್ಲಿ 16 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

  • ವೊಡಾಫೋನ್‌ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

    ವೊಡಾಫೋನ್‌ ಐಡಿಯಾದಲ್ಲಿ ಈಗ ಭಾರತ ಸರ್ಕಾರವೇ ಅತಿ ದೊಡ್ಡ ಪಾಲುದಾರ

    – ಸರ್ಕಾರಕ್ಕೆ ಶೇ.36ರಷ್ಟು ಷೇರನ್ನು ಮಾರಾಟ ಮಾಡಲು ಮುಂದಾದ ವಿಐಎಲ್‌
    – ಎಜಿಆರ್‌ ಸುಳಿಯಲ್ಲಿ ಸಿಲುಕಿ ಷೇರು ಮಾರಾಟ

    ನವದೆಹಲಿ: ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ ಈಗ ಭಾರತ ಸರ್ಕಾರ ಅತಿ ದೊಡ್ಡ ಪಾಲುದಾರನಾಗಿ ಹೊರಹೊಮ್ಮಿದೆ.

    ಹೌದು. ಭಾರತ ಸರ್ಕಾರವೇ ಷೇರುಗಳನ್ನು ಖರೀದಿಸಿಲ್ಲ ಬದಲಾಗಿ ವಿಐಎಲ್‌ ಕಂಪನಿಯೇ ಶೇ.36 ರಷ್ಟು ಷೇರನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡುವುದಾಗಿ ಘೋಷಿಸಿದೆ.

    ಸಾಲದ ಸುಳಿಯಲ್ಲಿರುವ ವಿಐಎಲ್ ಕಂಪನಿ ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪಾವತಿಸಬೇಕಿದೆ. ಅಂದಾಜಿನ ಪ್ರಕಾರ ಕಂಪನಿ ಬಡ್ಡಿಯ ಮೊತ್ತವಾಗಿ ಸುಮಾರು 16,000 ಕೋಟಿ ರೂ.ವನ್ನು ಪಾವತಿಸಬೇಕಿದೆ. ಇಷ್ಟೊಂದು ಮೊತ್ತವನ್ನು ಪಾವತಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತನ್ನ ಬಳಿ ಇರುವ ಷೇರನ್ನೇ ಮಾರಾಟ ಮಾಡಲು ಆಡಳಿತ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ 16,000 ಕೋಟಿ ರೂ. ಬಡ್ಡಿ ಮೊತ್ತ ಪಾವತಿ ಸಂಬಂಧ ಸರ್ಕಾರಕ್ಕೆ 10 ರೂ. ಮುಖಬೆಲೆಗೆ 1 ಷೇರನ್ನು ಮಾರಾಟ ಮಾಡಲು ಆಡಳಿತ ಮಂಡಳಿಯ ನಿರ್ದೇಶಕರು ಅನುಮೋದಿಸಿದ್ದಾರೆ ಎಂದು ವಿಐಎಲ್‌ ತಿಳಿಸಿದೆ. ಶೇ.36 ರಷ್ಟು ಷೇರನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿದ ಬಳಿಕ ವಿಐಎಲ್‌ನಲ್ಲಿ ವೊಡಾಫೋನ್ ಗ್ರೂಪ್ ಶೇ.28.5 ಆದಿತ್ಯ ಬಿರ್ಲಾ ಗ್ರೂಪ್‌ ಶೇ.17.8 ರಷ್ಟು ಷೇರನ್ನು ಉಳಿಸಿಕೊಳ್ಳಲಿದೆ.

    ಈ ನಿರ್ಧಾರ ಪ್ರಕಟವಾಗುತ್ತಿದಂತೆ ವಿಐಎಲ್‌ ಷೇರು ಬೆಲೆ ಭಾರೀ ಕುಸಿತ ಕಂಡಿದೆ. ಇಂದು 3.05 ರೂ. ಕುಸಿತಗೊಂಡು ಅಂತಿಮವಾಗಿ 11.80 ರೂ.ಯಲ್ಲಿ ಇಂದಿನ ವ್ಯವಹಾರ ಮುಗಿಸಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ ನೀಡಿದ ಕೇಂದ್ರ

    SUPREME COURT

    ಬಾಕಿ ಎಷ್ಟಿದೆ?
    ಎಜಿಆರ್ ಪ್ರಕರಣದಲ್ಲಿ ವೊಡಾಫೋನ್ ಐಡಿಯಾ ಲಿಮಿಟೆಡ್ ಕಂಪನಿ ಒಟ್ಟು 58,254 ಕೋಟಿ ರೂ.ವನ್ನು ಪಾವತಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಕಂಪನಿ ಕೇವಲ 7,584 ಕೋಟಿ ರೂ. ಪಾವತಿಸಿದ್ದು ಇನ್ನೂ 50,399 ಕೋಟಿ ರೂ. ಪಾವತಿಸಬೇಕಿದೆ. ಸುಪ್ರೀಂ ಕೋರ್ಟ್‌ 2031ರ ಒಳಗಡೆ ಈ ಹಣವನ್ನು ಪಾವತಿಸಬೇಕು ಎಂದು ಕಂಪನಿಗಳಿಗೆ ಗಡುವು ನೀಡಿದೆ.

    ಏರ್‌ಟೆಲ್‌ ಕಂಪನಿಯೂ ಎಜಿಆರ್‌ ಮೊತ್ತವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿದೆ. ಆದರೆ ನಾನು ಸರ್ಕಾರಕ್ಕೆ ತನ್ನ ಷೇರನ್ನು ಮಾರಾಟ ಮಾಡುವುದಿಲ್ಲ ಎಂದು ಕಂಪನಿ ತಿಳಿಸಿದೆ.

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ. ಇದನ್ನೂ ಓದಿ: ಡಿಸೆಂಬರ್ 1 ರಿಂದ ಜಿಯೋ ದುಬಾರಿ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

    ನುಡಿದಂತೆ ನಡೆದ ಬಿರ್ಲಾ
    ಈ ಹಿಂದೆ ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ ತಾವು ಹೊಂದಿರುವ ಷೇರುಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಹೇಳಿದ್ದರು. ಬಿರ್ಲಾ ಅವರು ಕಂಪನಿಯಲ್ಲಿ ಶೇ. 27ರಷ್ಟು ಷೇರು ಹೊಂದಿದ್ದಾರೆ.

    ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದರು. ಈ ಸಂಬಂಧ ಬಿರ್ಲಾ ಅವರು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಜೂನ್ 7ರಂದು ಪತ್ರ ಬರೆದಿದ್ದರು. ಸರ್ಕಾರ ಮಾತ್ರ ಅಲ್ಲದೆ ವಿಐಎಲ್ ಕಂಪನಿಯನ್ನು ಮುನ್ನಡೆಸುವ ಶಕ್ತಿ ಇದೆ ಎಂದು ಸರ್ಕಾರ ಹೇಳುವ ಯಾವುದೇ ಕಂಪನಿಗೆ ಕೂಡ ಷೇರು ವರ್ಗಾವಣೆ ಮಾಡುವುದಾಗಿ ತಿಳಿಸಿದ್ದರು.

    ಸರ್ಕಾರ ಹಾಕಿರುವ ಎಜಿಆರ್ ಲೆಕ್ಕ ಸರಿಯಿಲ್ಲ ಎಂದು ಎಂದು ವಿಐಎಲ್ ಸೇರಿದಂತೆ ಟೆಲಿಕಾಂ ಕಂಪನಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕಂಪನಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ತಿರಸ್ಕರಿಸಿ 10 ವರ್ಷದ ಒಳಗಡೆ ಪಾವತಿಸಬೇಕು ಎಂದು ಗಡುವು ನೀಡಿತ್ತು.

    ವಿಐಎಲ್ ಕಂಪನಿಗೆ 25 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ಕಂಪನಿಯ ಆಡಳಿತ ಮಂಡಳಿ 2020ರ ಸೆಪ್ಟೆಂಬರ್ ನಲ್ಲಿ ಅನುಮತಿ ನೀಡಿತ್ತು. ಆದರೆ ಅಷ್ಟು ಮೊತ್ತವನ್ನು ಸಂಗ್ರಹಿಸಲು ಕಂಪನಿ ವಿಫಲವಾಗಿತ್ತು.

  • ಚೀನಾದ ಕುತಂತ್ರ ಬುದ್ಧಿಗೆ ಫುಲ್‍ಸ್ಟಾಪ್ ಇಟ್ಟ ಭಾರತ

    ಚೀನಾದ ಕುತಂತ್ರ ಬುದ್ಧಿಗೆ ಫುಲ್‍ಸ್ಟಾಪ್ ಇಟ್ಟ ಭಾರತ

    – ಎಫ್‍ಡಿಐ ನೀತಿ ಪರಿಷ್ಕರಿಸಿದ ಕೇಂದ್ರ ಸರ್ಕಾರ
    – ಭಾರತದಲ್ಲಿ ಚೀನಾ ಹೂಡಿಕೆಯ ಬೆನ್ನಲ್ಲೇ ಪರಿಷ್ಕರಣೆ
    – ಕೇಂದ್ರದ ನಿರ್ಧಾರಕ್ಕೆ ರಾಹುಲ್ ಗಾಂಧಿ ಧನ್ಯವಾದ

    ನವದೆಹಲಿ: ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಭಾರತದ ಎಚ್‍ಡಿಎಫ್‍ಸಿಯಲ್ಲಿ ತನ್ನ ಪಾಲನ್ನು ಹೆಚ್ಚಿಸಿದ್ದರಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತವು ವಿದೇಶಿ ನೇರ ಹೂಡಿಕೆ (ಎಫ್‍ಡಿಐ) ನೀತಿಯನ್ನು ಪರಿಷ್ಕರಿಸಿದೆ. ಈ ಪರಿಷ್ಕೃತ ಎಫ್‍ಡಿಐ ನೀತಿಯ ಪ್ರಕಾರ ಚೀನಾದ ಹೂಡಿಕೆಗೆ ಈಗ ಕೇಂದ್ರ ಸರ್ಕಾರದಿಂದ ಅನುಮತಿ ಅಗತ್ಯವಾಗಿದೆ.

    ಹೆಮ್ಮಾರಿ ಕೊರೊನಾ ವೈರಸ್ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಜೊತೆಗೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇದೇ ಅವಕಾಶವನ್ನು ಪಡೆದುಕೊಂಡು ಚೀನಾ ಭಾರತೀಯ ಕಂಪನಿಗಳಲ್ಲಿ ಹೆಚ್ಚಿನ ಷೇರು ಖರೀದಿಸಲು ಮುಂದಾಗುತ್ತಿದೆ. ಚೀನಾದ ಇಂತಹ ಕುಂತಂತ್ರ ಬುದ್ಧಿಯ ನಡೆಗೆ ಫುಲ್‍ಸ್ಟಾಪ್ ಹಾಕಲು ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಎಚ್‍ಡಿಎಫ್‍ಸಿ ಷೇರು ಖರೀದಿಸಿದ ಚೀನಾದ ಬ್ಯಾಂಕ್

    ”ನಿಷೇಧಿತ ಕ್ಷೇತ್ರಗಳು, ಚಟುವಟಿಕೆಗಳನ್ನು ಹೊರತುಪಡಿಸಿ ಎಫ್‍ಡಿಐ ನೀತಿಗೆ ಒಳಪಟ್ಟು ಅನಿವಾಸಿ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಬಹುದು. ಆದರೆ ಭಾರತದ ಭೂ ಗಡಿಯನ್ನು ಹಂಚಿಕೊಳ್ಳುವ ದೇಶದ ಒಂದು ಕಂಪನಿ ಅಥವಾ ಯಾವುದೇ ದೇಶದ ಪ್ರಜೆ ಸರ್ಕಾರದ ಒಪ್ಪಿಗೆ ಪಡೆದೆ ಹೂಡಿಕೆ ಮಾಡಬೇಕು” ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಶನಿವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಇನ್ನು ಮುಂದೆ ಚೀನಾ ಹಾಗೂ ನೆರೆಹೊರೆಯ ದೇಶಗಳಿಗೆ ಭಾರತದಲ್ಲಿ ಯಾವುದೇ ರೀತಿಯ ಹೂಡಿಕೆಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಲಿದೆ. ಭಾರತದೊಂದಿಗೆ ಗಡಿಯನ್ನು ಹಂಚಿ­ಕೊಂಡಿರುವ ಎಲ್ಲಾ ದೇಶಗಳು ದೇಶದಲ್ಲಿ ನೇರ ಅಥವಾ ಪರೋಕ್ಷ ಹೂಡಿಕೆಗೆ ಕೇಂದ್ರದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

    ಚೀನಾದ ಕಂಪನಿಗಳು ಭಾರತದಲ್ಲಿ ಅನೇಕ ಸ್ಟಾರ್ಟಪ್‍ಗಳಲ್ಲಿ 400 ಕೋಟಿ ಡಾಲರ್‍ಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿವೆ. ಮುಂಬರುವ ತಿಂಗಳುಗಳಲ್ಲಿ ಚೀನಾ ಹೂಡಿಕೆ ಮೇಲೆ ಪರಿಷ್ಕೃತ ನಿಯಮಗಳು ಪ್ರಭಾವ ಬೀರಲಿವೆ. ಇದರಿಂದಾಗಿ ಸ್ಪೇನ್, ಜರ್ಮನಿ, ಆಸ್ಪ್ರೇಲಿಯಾ, ಇಟಲಿ ಸೇರಿದಂತೆ ಅನೇಕ ದೇಶಗಳು ಎಫ್‍ಡಿಐ ನಿಯಮಗಳನ್ನು ಬಿಗಿಗೊಳಿಸಿವೆ.

    ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಹಿಂದೆ ನಾನು ನೀಡಿದ್ದ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಅಂದ್ರೆ ಏಪ್ರಿಲ್ 12ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ”ಕೊರೊನಾ ವೈರಸ್ ರೋಗ ಹರಡಿದ ನಂತರ ದೇಶದ ಆರ್ಥಿಕತೆ ದುರ್ಬಲವಾಗಿರುವು­ದರಿಂದ ಭಾರತೀಯ ಕಂಪನಿ­ಗಳನ್ನು ಖರೀದಿ­ಸಲು ವಿದೇಶಿ ಕಾರ್ಪೊ­ರೇಟ್ ಕಂಪನಿಗಳು ಯತ್ನಿಸಬಹುದು. ಇದನ್ನು ತಡೆಯಬೇಕು ಎಂದು ತಿಳಿಸಿದ್ದರು.

  • ಮೈಂಡ್ ಟ್ರೀಯಲ್ಲಿ ಸಿದ್ಧಾರ್ಥ್ ಷೇರು ಎಷ್ಟಿತ್ತು? ಕೋಕಾ ಕೋಲಾ ಡೀಲ್ ಎಲ್ಲಿಯವರೆಗೆ ಬಂದಿತ್ತು? ಸಾಲ ಎಷ್ಟಿತ್ತು?

    ಮೈಂಡ್ ಟ್ರೀಯಲ್ಲಿ ಸಿದ್ಧಾರ್ಥ್ ಷೇರು ಎಷ್ಟಿತ್ತು? ಕೋಕಾ ಕೋಲಾ ಡೀಲ್ ಎಲ್ಲಿಯವರೆಗೆ ಬಂದಿತ್ತು? ಸಾಲ ಎಷ್ಟಿತ್ತು?

    ಬೆಂಗಳೂರು: ಕಾಫಿ ಡೇ ಮಾಲೀಕ ಸಿದ್ಧರ್ಥ್ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲವಾದರೂ ಅವರು ಸಾಲದ ಸುಳಿಗೆ ಸಿಲುಕಿ ಈ ನಿರ್ಧಾರ ತೆಗೆದುಕೊಂಡಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.

    ಮಾಧ್ಯಮಗಳ ವರದಿ ಪ್ರಕಾರ 2019ರ ಮಾರ್ಚ್ ವೇಳೆ ಸಿದ್ಧಾರ್ಥ್ ಅವರು ಒಟ್ಟು 6,500 ಕೋಟಿ ರೂ. ಸಾಲದಲ್ಲಿದ್ದರು. ಈ ಸಾಲ ತೀರಿಸಲು ಮೈಂಡ್ ಟ್ರೀ ಕಂಪನಿಯಲ್ಲಿದ್ದ ಷೇರನ್ನು ಲಾರ್ಸನ್ ಆಂಡ್ ಟ್ಯಾಬ್ರೋ ಕಂಪನಿಗೆ ಮಾರಾಟ ಮಾಡಿದ್ದರು. ತನ್ನ ಬಳಿಯಿದ್ದ ಒಟ್ಟು ಶೇ.20.32 ಷೇರನ್ನು 3,200 ಕೋಟಿ ರೂ.ಗೆ ಮಾರಾಟ ಮಾಡಿ ಕೆಲ ಸಾಲವನ್ನು ತೀರಿಸಿದ್ದರು.

    ಮತ್ತಷ್ಟು ಸಾಲ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಅವರು ತಮ್ಮ ಕನಸಿನ ‘ಕೆಫೆ ಕಾಫಿ ಡೇ’ಯನ್ನು ಬಹು ರಾಷ್ಟ್ರೀಯ ಕೋಕಾ ಕೋಲಾ ಕಂಪನಿಗೆ ಮಾರಾಟ ಮಾಡಲು ಮುಂದಾಗಿದ್ದರು. ಈಗಾಗಲೇ ಅಮೆರಿಕದಿಂದ ಕೋಕಾ ಕೋಲಾ ಅಧಿಕಾರಿಗಳು ಸಿದ್ಧಾರ್ಥ ಒಡೆತನದ ಕಂಪನಿಗೆ ಭೇಟಿ ನೀಡಿ ಖರೀದಿ ಸಂಬಂಧ ಮಾತುಕತೆ ನಡೆಸಿದ್ದರು.

    ಅಂದಾಜು 10 ಸಾವಿರ ಕೋಟಿ ರೂ.ಗೆ ತನ್ನ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಮಾತುಕತೆ ನಡೆದಿದ್ದರೂ ಇಲ್ಲಿಯವರೆಗೆ ಯಾವುದೂ ಅಂತಿಮವಾಗಿರಲಿಲ್ಲ. ಕಂಪನಿಯನ್ನು ಮಾರಾಟ ಮಾಡಿದರೂ, ಅದರಲ್ಲಿ ಒಂದಷ್ಟು ಪ್ರಮಾಣದ ಷೇರು ಉಳಿಸಿಕೊಳ್ಳಲು ಸಿದ್ಧಾರ್ಥ್ ಅವರು ಮುಂದಾಗಿದ್ದರು. ಇದು ಕೋಕಾ ಕೋಲಾಗೆ ತೊಡಕಾಗಿತ್ತು ಎಂದು ವರದಿಯಾಗಿತ್ತು.

    ಮೈಂಡ್ ಟ್ರೀ ಷೇರು ಎಷ್ಟಿತ್ತು?
    2011ರಲ್ಲಿ ಒಂದು ಷೇರಿಗೆ 87 ರೂ. ನೀಡಿ ಶೇ.6.95 ಅಥವಾ 28 ಲಕ್ಷ ಮೈಂಡ್ ಟ್ರೀ ಷೇರುಗಳನ್ನು 24.36 ಕೋಟಿ ರೂ. ನೀಡಿ ಸಿದ್ಧಾರ್ಥ್ ಖರೀದಿ ಮಾಡಿದ್ದರು. ಇದಾದ ನಂತರ 2012 ರಲ್ಲಿ ಒಂದು ಷೇರಿಗೆ 122.3 ರೂ. ನೀಡಿ ಶೇ.3.27 ಅಥವಾ 13.47 ಲಕ್ಷ ಷೇರುಗಳನ್ನು 122.33 ಕೋಟಿ ರೂ. ನೀಡಿ ಖರೀದಿಸಿದ್ದರು. 2017 ರಲ್ಲಿ ಶೇ. 0.23 ಅಥವಾ 4.41 ಷೇರುಗಳನ್ನು ಖರೀದಿಸಿದ್ದರು. ಒಂದು ಷೇರನ್ನು 529 ರೂ. ನೀಡಿ ಖರೀದಿಸಿದ್ದ ಪರಿಣಾಮ ಸಿದ್ಧಾರ್ಥ್ ಅವರು ಒಟ್ಟು ಮೈಂಡ್ ಟ್ರೀಯಲ್ಲಿ ಶೇ.19.94 ಪಾಲು ಷೇರನ್ನು ಹೊಂದಿದ್ದರು. ಈ ಮಧ್ಯೆ ಮೈಂಡ್ ಟ್ರೀ ಕಂಪನಿ ಬೋನಸ್ ರೂಪದಲ್ಲಿ ಸಿದ್ಧಾರ್ಥ್ ಅವರಿಗೆ ಷೇರುಗಳನ್ನು ನೀಡಿತ್ತು.

    2018ರಲ್ಲಿ ಸಿದ್ಧಾರ್ಥ್ ಅವರು ಮೈಂಡ್ ಟ್ರೀ ಕಂಪನಿಯಲ್ಲಿ ಒಟ್ಟು ಶೇ.20.41 ರಷ್ಟು ಷೇರುಗಳನ್ನು ಹೊಂದಿದ್ದರು. ಇದರಲ್ಲಿ ಶೇ.3.33 ಅಥವಾ 54.69 ಲಕ್ಷ ಷೇರುಗಳು ನೇರವಾಗಿ ಸಿದ್ಧಾರ್ಥ್ ಅವರ ಹೆಸರಿನಲ್ಲಿದ್ದರೆ ಶೇ.10.63 ಅಥವಾ 1.74 ಷೇರುಗಳು ಕಾಫಿ ಡೇ ಎಂಟರ್‍ಪ್ರೈಸ್ ಹೆಸರಿನಲ್ಲಿತ್ತು. ಉಳಿದ ಶೇ.6.45 ಷೇರುಗಳು ಅಥವಾ 1.05 ಕೋಟಿ ಷೇರುಗಳು ಕಾಫಿ ಡೇ ಟ್ರೇಡಿಂಗ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿತ್ತು.

    ಷೇರು ಬೆಲೆ ಇಳಿಕೆ: ವಿಜಿ ಸಿದ್ಧಾರ್ಥ್ ನಾಪತ್ತೆಯಾದ ಬೆನ್ನಲ್ಲೇ ಕೆಫೆ ಕಾಫಿ ಡೇ ಕಂಪನಿಯ ಷೇರು ಮೌಲ್ಯ ಶೇ.20ರಷ್ಟು ಇಳಿಕೆಯಾಗಿದೆ. 2018ರ ಸಪ್ಟೆಂಬರ್ ತಿಂಗಳಿನಲ್ಲಿ ಒಂದು ಷೇರಿನ ಮೌಲ್ಯ ಗರಿಷ್ಟ 325 ರೂ.ಗೆ ಏರಿಕೆಯಾಗಿದ್ದರೆ ಮಂಗಳವಾರ ಬೆಳಗ್ಗೆ 154.05 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ. ಸೋಮವಾರದ ಮುಕ್ತಾಯಕ್ಕೆ 192 ರೂ. ಬೆಲೆಯಲ್ಲಿ ಮಾರಾಟವಾಗುತ್ತಿದ್ದ ಷೇರು ಇಂದು 38 ರೂ.ಗೆ ಕುಸಿದಿದೆ.

    ಕೆಫೆ ಕಾಫಿ ಡೇ 2018ರ ಹಣಕಾಸು ವರ್ಷದಲ್ಲಿ 1,777 ಕೋಟಿ ರೂ. ಆದಾಯ ಗಳಿಸಿದ್ದರೆ, 2019ರ 1,814 ಕೋಟಿ ರೂ. ಆದಾಯ ಗಳಿಸಿತ್ತು. 2020ರ ಮಾರ್ಚ್ ವೇಳೆಗೆ 2,250 ಕೋಟಿ ರೂ. ಆದಾಯ ಗಳಿಸುವ ಗುರಿಯನ್ನು ಹಾಕಿಕೊಂಡಿತ್ತು.

    ದೇಶದೆಲ್ಲೆಡೆ ಒಟ್ಟು 1,752 ಕೆಫೆಗಳನ್ನು ಹೊಂದಿದ್ದ ಕಂಪನಿ ಒಟ್ಟು 60 ಸಾವಿರಕ್ಕೂ ಅಧಿಕ ಕಾಫಿ ವೆಂಡಿಂಗ್ ಮಷೀನ್‍ಗಳನ್ನು ಹೊಂದಿದೆ. ಭಾರತ ಅಲ್ಲದೆ ವಿಯೆನ್ನಾ, ಝೆಕ್ ರಿಪಬ್ಲಿಕ್, ಮಲೇಷ್ಯಾ, ನೇಪಾಳ ಮತ್ತು ಈಜಿಪ್ಟ್ ನಲ್ಲೂ ಕಂಪನಿ ವ್ಯವಹಾರ ನಡೆಸುತಿತ್ತು.

    https://www.youtube.com/watch?v=S8AvtIh5VB8

  • ಮೋದಿ ಸರ್ಕಾರಕ್ಕೆ 4 ವರ್ಷ: ಮೇ 26 ರಂದು ದೇಶಾದ್ಯಂತ ಕಾಂಗ್ರೆಸ್‍ನಿಂದ ವಿಶ್ವಾಸಘಾತ ದಿನಾಚರಣೆ

    ಮೋದಿ ಸರ್ಕಾರಕ್ಕೆ 4 ವರ್ಷ: ಮೇ 26 ರಂದು ದೇಶಾದ್ಯಂತ ಕಾಂಗ್ರೆಸ್‍ನಿಂದ ವಿಶ್ವಾಸಘಾತ ದಿನಾಚರಣೆ

    ನವದೆಹಲಿ: ಮೋದಿ ಸರ್ಕಾರದ 4ನೇ ಸಂಭ್ರಮಾಚರಣೆಯ ದಿನವಾದ ಮೇ 26ರಂದು ಕಾಂಗ್ರೆಸ್ ವಿಶ್ವಾಸಘಾತ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.

    ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ರಣದೀಪ್ ಸುರ್ಜೆವಾಲ, ಮೋದಿ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಜನರು ಇಟ್ಟಿದ್ದ ವಿಶ್ವಾಸ ಕೇಂದ್ರ ಸರ್ಕಾರ ಉಳಿಸಿಕೊಂಡಿಲ್ಲ. ಹೀಗಾಗಿ ಮೇ 26ರಂದು ವಿಶ್ವಾಸಘಾತ ದಿನವನ್ನಾಗಿ ದೇಶಾದ್ಯಂತ ಆಚರಿಸುವುದಾಗಿ ಹೇಳಿದ್ದಾರೆ.

    ತೈಲ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಅಧಿಕಾರಕ್ಕೆ ಬರುವಾಗ ಎಲ್ಲಾ ವಸ್ತುಗಳ ಬೆಲೆ ಕಡಿಮೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ನಾಲ್ಕು ವರ್ಷ ತುಂಬಿದರೂ ಬೆಲೆ ಗಗನಕ್ಕೆ ಏರುತ್ತಿದೆ. ಹಾಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಶ್ವಾಸಘಾತ್ ದಿನಾಚರಣೆಯನ್ನು ಮಾಡುತ್ತೇವೆ ಎಂದು ಹೇಳಿದರು.

    ಯುವಕರಿಗೆ ಉದ್ಯೋಗ ನೀಡುವ ಭರವಸೆ ಹುಸಿಯಾಗಿದೆ. ಭ್ರಷ್ಟಾಚಾರ ವಿಚಾರ ಇಟ್ಟುಕೊಂಡು ಸರ್ಕಾರ ರಚನೆ ಮಾಡಿದರು. ಆದರೆ ಕೇಂದ್ರ ಸರ್ಕಾರವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಪಿಯೂಷ್ ಗೊಯೆಲ್ 10 ರೂಪಾಯಿ ಷೇರು 10 ಸಾವಿರಕ್ಕೆ ವ್ಯಾಪಾರ ಆಗುತ್ತದೆ. ಕೋಟ್ಯಾಂತರ ರೂಪಾಯಿ ಲೂಟಿ ಮಾಡಿ ವಿದೇಶಕ್ಕೆ ಹೋಗುತ್ತಿದ್ದಾರೆ. ಪ್ರತಿ ನಾಗರಿಕನ ಅಕೌಂಟಿಗೆ 15 ಲಕ್ಷ ಹಣ ಬರಲಿಲ್ಲ. ಐಟಿ ಮತ್ತು ಇಡಿಯನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ. ಹಾಗಾಗಿ ವಿಶ್ವಾಸಘಾತ ಹೆಸರಿನಲ್ಲಿ ಮೇ 26ರಂದು ಎಲ್ಲಾ ರಾಜ್ಯಗಳಲ್ಲಿ ಆಚರಣೆ ಮಾಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ ಎಂದು ತಿಳಿಸಿದರು.