Tag: ಷರಿಯಾ ಕಾನೂನು

  • ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನಿಗಳು

    ಆಫ್ಘಾನ್ ಸಂಗೀತಗಾರನ ಮುಂದೆಯೇ ವಾದ್ಯ ಸುಟ್ಟ ತಾಲಿಬಾನಿಗಳು

    ಕಾಬೂಲ್: ಆಫ್ಘಾನ್ ಸಂಗೀತಗಾರನ ಮುಂದೆಯೇ ತಾಲಿಬಾನ್ ಸಿಬ್ಬಂದಿ ಆತನ ವಾದ್ಯವನ್ನು ಸುಟ್ಟುಹಾಕಿದ್ದಾನೆ.

    ಅಫ್ಘಾನಿಸ್ತಾನದಲ್ಲಿ ಸಂಗೀತಗಾರನ ಮುಂದೆಯೇ ತಾಲಿಬಾನ್ ಸಂಗೀತ ವಾದ್ಯವನ್ನು ಸುಟ್ಟು ಹಾಕಿರುವುದರ ಕುರಿತ ವೀಡಿಯೋವನ್ನು ಅಲ್ಲಿನ ವರದಿಗಾರ ಟ್ವಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. ಸಂಗೀತ ವಾದ್ಯ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ. ಇದನ್ನು ನೋಡಿ ಸಂಗೀತಗಾರ ಅಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

    ಅಫ್ಘಾನಿಸ್ತಾನದ ಹಿರಿಯ ವರದಿಗಾರ ಅಬ್ದುಲ್ಹಕ್ ಒಮೆರಿ ಟ್ವಿಟ್ಟರ್ ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಂದೂಕು ಹಿಡಿದ ಸಿಬ್ಬಂದಿ, ಅಳುತ್ತಿದ್ದ ಸಂಗೀತಗಾರನನ್ನು ನೋಡಿ ನಗುತ್ತಿರುವ ದೃಶ್ಯ ಸಹ ಸೆರೆಯಾಗಿದೆ. ಇದನ್ನು ನೋಡಿದ ನೆಟ್ಟಿಗರು ತಾಲಿಬಾನ್ ಕ್ರೂರತೆ ಎಷ್ಟರ ಮಟ್ಟಿಗೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ವಾರಪೂರ್ತಿ ಜನಜಾತ್ರೆ, ವಾರಾಂತ್ಯದಲ್ಲಿ ಕರ್ಫ್ಯೂ – ಆತಂಕದಲ್ಲಿ ಕಾಫಿನಾಡು ಜನತೆ

    ಸಂಗೀತಗಾರ ಎಷ್ಟೇ ಕೇಳಿಕೊಂಡರೂ, ಅತ್ತರೂ ಆತನ ಕಡೆ ಗಮನಕೊಡದೆ ಸಿಬ್ಬಂದಿ ಸಂಗೀತಗಾರನ ಸಂಗೀತ ವಾದ್ಯವನ್ನು ಸುಟ್ಟುಹಾಕಿದರು. ಇದನ್ನು ನೋಡಿದ ಸಂಗೀತಗಾರನ ಅಳು ಮುಗಿಲು ಮುಟ್ಟಿತ್ತು. ಈ ಘಟನೆಯು ಅಫ್ಘಾನಿಸ್ತಾನದ ಝಜೈಅರುಬ್ ಜಿಲ್ಲೆಯಲ್ಲಿ ನಡೆದಿದೆ ಎಂದು ಒಮೆರಿ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ತಾಲಿಬಾನಿಗಳು ವಾಹನಗಳಲ್ಲಿ ಸಂಗೀತ ಪ್ರದರ್ಶನ ಹಾಗೂ ಮದುವೆಗಳಲ್ಲಿ ಲೈವ್ ಸಂಗೀತವನ್ನು ನಿಷೇಧಿಸಿದೆ.

    ಇದರ ಜೊತೆಗೆ ತಾಲಿಬಾನಿಗಳು ಷರಿಯಾ ಕಾನೂನನ್ನು ಸಹ ಜಾರಿಗೆ ತಂದಿದ್ದು, ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ಬಟ್ಟೆ ಅಂಗಡಿಗಳಲ್ಲಿ ಇದ್ದ ಹೆಣ್ಣು ಗೊಂಬೆಗಳ ಶಿರಚ್ಛೇದ ಮಾಡಲಾಗುತ್ತಿದೆ. ಇದನ್ನೂ ಓದಿ: ಗಾಳಿಪಟ ಹಾರಿಸುವಾಗ ಬಿದ್ದು ಒಂದೇ ದಿನ 63ಕ್ಕೂ ಹೆಚ್ಚು ಮಂದಿಗೆ ಗಾಯ

    ಬಟ್ಟೆ ಅಂಗಡಿಯಲ್ಲಿ ಹೆಣ್ಣು ಗೊಂಬೆಗಳನ್ನು ಬಳಸುವುದು ಷರಿಯಾ ಕಾನೂನಿನ ಉಲ್ಲಂಘನೆ ಎಂದು ತಾಲಿಬಾನ್ ತಿಳಿಸಿದೆ. ಈ ಹೊಸ ಮಾರ್ಗಸೂಚಿಗಳನ್ನು ನಾವು ಅನುಸರಿಸುವುದಿಲ್ಲ ಎಂದು ಕೆಲವು ಗುಂಪುಗಳು ವಿರೋಧವನ್ನು ವ್ಯಕ್ತಪಡಿಸಿವೆ.

  • ಶ್ರೀಲಂಕಾದಲ್ಲಿ ದಾಳಿ ನಡೆಸಿದ ಜೆಎನ್‍ಟಿ ಸಂಘಟನೆ ಉದ್ದೇಶ ಏನು? – ಇಲ್ಲಿದೆ ಪೂರ್ಣ ಮಾಹಿತಿ

    ಶ್ರೀಲಂಕಾದಲ್ಲಿ ದಾಳಿ ನಡೆಸಿದ ಜೆಎನ್‍ಟಿ ಸಂಘಟನೆ ಉದ್ದೇಶ ಏನು? – ಇಲ್ಲಿದೆ ಪೂರ್ಣ ಮಾಹಿತಿ

    ಕೊಲಂಬೋ: ಶ್ರೀಲಂಕಾದಲ್ಲಿ ಬಾಂಬ್ ದಾಳಿ ನಡೆಸಿದ್ದು ನ್ಯಾಷನಲ್ ತೌಹೀತ್ ಜಮಾತ್(ಜೆಎನ್‍ಟಿ) ಸಂಘಟನೆಯ ಸದಸ್ಯರು ಎಂಬುದನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.

    ಭಾನುವಾರ ಸ್ಫೋಟ ನಡೆದ ಬಳಿಕ ಯಾವೊಂದು ಸಂಘಟನೆ ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಆದರೆ ಈಗ ಶ್ರೀಲಂಕಾದ ಆರೋಗ್ಯ ಸಚಿವ ಮತ್ತು ಸರ್ಕಾರದ ವಕ್ತಾರರಾದ ರಜಿತಾ ಸೆನೆರತ್ನೆ ಈ ಕೃತ್ಯವನ್ನು ಜೆಎನ್‍ಟಿ ಸಂಘಟನೆ ನಡೆಸಿದೆ. ಶ್ರೀಲಂಕಾದ ಪ್ರಜೆಗಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಂಘಟನೆಗೆ ಅಂತರಾಷ್ಟ್ರೀಯ ಸಂಬಂಧ ಇರುವ ಸಾಧ್ಯತೆ ಇರಬಹುದು ಎಂದು ಶಂಕಿಸಿದ್ದಾರೆ. 8 ಬಾಂಬ್ ಸ್ಫೋಟದ ಸಂಬಂಧ ಇಲ್ಲಿಯವರೆಗೂ 24 ಮಂದಿಯನ್ನು ಬಂಧಿಸಲಾಗಿದೆ.

    ಶ್ರೀಲಂಕಾದಲ್ಲಿ ದಾಳಿ ನಡೆಸಲು ಉಗ್ರರು ಪ್ಲಾನ್ ಮಾಡುತ್ತಿದ್ದಾರೆ. ಹೀಗಾಗಿ ಎಚ್ಚರದಲ್ಲಿ ಇರುವಂತೆ ಭಾರತದ ಗುಪ್ತಚರ ಇಲಾಖೆ ಶ್ರೀಲಂಕಾಕ್ಕೆ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು ಎಂದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಏನಿದು ಎನ್‍ಟಿಜೆ?
    2014ರಲ್ಲಿ ಶ್ರೀಲಂಕಾದಲ್ಲಿ ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆ ಸ್ಥಾಪನೆಯಾಗಿದೆ. ಮುಸ್ಲಿಮರು ಹೆಚ್ಚಾಗಿ ನೆಲೆಸಿರುವ ಪೂರ್ವ ಭಾಗದ ಕಟ್ಟನ್‍ಕುಡಿಯಲ್ಲಿ ಈ ಸಂಘಟನೆ ತಲೆ ಎತ್ತಿದೆ. ಈ ಸಂಘಟನೆ ಕ್ರಾಂತಿಕಾರವಾಗಿ ಷರಿಯಾ ಕಾನೂನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದು, ಮಹಿಳೆಯರು ಬುರ್ಕಾವನ್ನು ಮಾತ್ರ ಧರಿಸಬೇಕು ಎಂದು ಬೋಧಿಸುತ್ತಿದೆ.

    ಕ್ರಾಂತಿಕಾರಕ ಚಟುವಟಿಕೆಯಲ್ಲಿ ತೊಡಗಿದ್ದ ಈ ಸಂಘಟನೆ ಕೆಲಸಗಳು ಬೆಳಕಿಗೆ ಬಂದಿರಲಿಲ್ಲ. ಕಳೆದ ವರ್ಷ ಶ್ರೀಲಂಕಾದಲ್ಲಿ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಸಂದರ್ಭದಲ್ಲಿ ಮೊದಲ ಬಾರಿಗೆ ಈ ಸಂಘಟನೆಯ ಹೆಸರು ಪ್ರಚಲಿತಕ್ಕೆ ಬಂತು. ಈ ಸಂಘಟನೆಯ ಕೃತ್ಯದಿಂದಾಗಿ ಬೌದ್ಧರು ಮತ್ತು ಮುಸ್ಲಿಮರ ಮಧ್ಯೆ ಗಲಾಟೆ ನಡೆಯಲು ಆರಂಭಗೊಂಡಿತ್ತು.

    2017ರಲ್ಲಿ ಎನ್‍ಟಿಜೆ ಸಂಘಟನೆ ಬುದ್ಧನ ಬಗ್ಗೆ ದ್ವೇಷ ಕಾರುವ ವಿಡಿಯೋಗಳನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೋದಿಂದಾಗಿ ಲಂಕಾದಲ್ಲಿ ಸಿಂಹಳಿಯರಿಗೆ ಮತ್ತು ಬೌದ್ಧರ ಭಾವನೆಗಳಿಗೆ ಧಕ್ಕೆಯಾಗಿತ್ತು.

    ಬಾಂಬ್ ಸ್ಫೋಟಕ್ಕೆ ಸಂಬಂಧ ಏನು?
    ಭಾನುವಾರ ಶಾಂಗ್ರಿಲಾ ಹೋಟೆಲ್‍ನಲ್ಲಿ ಆತ್ಮಹುತಿ ಬಾಂಬ್ ದಾಳಿ ನಡೆಸಿದ ವ್ಯಕ್ತಿಯನ್ನು ಮೌಲ್ವಿ ಝರಂ ಹಶೀಂ ಎಂದು ಗುರುತಿಸಲಾಗಿದೆ. ಈತ ಎಲ್ಲ ಬಾಂಬ್ ಸ್ಫೋಟಗಳ ಮಾಸ್ಟರ್ ಮೈಂಡ್ ಆಗಿದ್ದು, ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆಯಲ್ಲಿ ಉಪನ್ಯಾಸಕನಾಗಿದ್ದ.

    ನಾವು ಕೃತ್ಯ ಎಸಗಿಲ್ಲ:
    ಶ್ರೀಲಂಕಾ ಸರ್ಕಾರ ಈ ಕೃತ್ಯವನ್ನು ನ್ಯಾಷನಲ್ ತೌಹೀತ್ ಜಮಾತ್ ಸಂಘಟನೆ ಎಸಗಿದೆ ಎಂದು ದೃಢಪಡಿಸಿದರೂ ಈ ಸಂಘಟನೆ ಕೃತ್ಯವನ್ನು ಖಂಡಿಸಿದೆ. ತನ್ನ ಫೇಸ್‍ಬುಕ್ ಪೋಸ್ಟ್ ನಲ್ಲಿ ದೇಶಕ್ಕೆ ಸಹಾಯ ಮಾಡಲು ನಮ್ಮ ಸಂಘಟನೆ ಸಿದ್ಧವಿದೆ ಎಂದು ತಿಳಿಸಿದೆ. ತನ್ನ ಫೇಸ್‍ಬುಕ್ ಪೇಜ್‍ನಲ್ಲಿ ಭಾನುವಾರ ಕ್ಯಾಂಡಿಯಲ್ಲಿ ತಾನು ಆಯೋಜಿಸಿದ್ದ ರಕ್ತದಾನ ಶಿಬಿರದ ಫೋಟೋವನ್ನು ಹಂಚಿಕೊಂಡಿದೆ.

    10 ದಿನದ ಮೊದಲೇ ಮಾಹಿತಿ ಸಿಕ್ಕಿತ್ತು:
    ದೇಶದಲ್ಲಿ ಬಾಂಬ್ ದಾಳಿ ನಡೆಯುವ 10 ದಿನದ ಮೊದಲೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರು ದೇಶದ ವಿವಿಧೆಡೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಂಚಿಕೊಂಡಿದ್ದರು.

    ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿರುವ ಪುನೀತ್ ಜಯಸುಂದರ ಅವರು ಏ.11 ರಂದು ಎಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನು ಹಂಚಿಕೊಂಡು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. “ವಿದೇಶಿ ಗುಪ್ತಚರ ಇಲಾಖೆಯೊಂದು ಶ್ರೀಲಂಕಾದಲ್ಲಿ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಸಂಘಟನೆ ಸ್ಫೋಟ ನಡೆಸಲು ಸಿದ್ಧತೆ ನಡೆಸಿದೆ. ಅಲ್ಲದೇ ಚರ್ಚ್‍ಗಳು ಹಾಗೂ ಭಾರತದ ಧೂತವಾಸ ಕಚೇರಿಯೇ ಉಗ್ರರ ಗುರಿ” ಈ ಮಾಹಿತಿಯನ್ನು ಹಂಚಿಕೊಂಡಿದ್ದರು. ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲವಾಗಿತ್ತು.