Tag: ಷರತ್ತು

  • ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು- ಸುಪ್ರೀಂ ವಿಧಿಸಿದ ಷರತ್ತುಗಳೇನು..?

    ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು- ಸುಪ್ರೀಂ ವಿಧಿಸಿದ ಷರತ್ತುಗಳೇನು..?

    – ಜೂನ್‌ 2ಕ್ಕೆ ಶರಣಾಗುವಂತೆ ಸೂಚನೆ

    ನವದೆಹಲಿ: ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ (Supreme Court) ಕೆಲವೊಂದು ಷರತ್ತುಗಳನ್ನು ವಿಧಿಸಿ ಮಧ್ಯಂತ ಜಾಮೀನು ನೀಡಿದೆ.

    ಹೌದು. ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಜೂನ್ 1 ರವರೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ನಂತರ ಅರವಿಂದ್ ಕೇಜ್ರಿವಾಲ್ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ವಿಧಿಸಿದ ಕಠಿಣ ಷರತ್ತುಗಳ ಪಟ್ಟಿ ಇಲ್ಲಿದೆ.

    * ದೆಹಲಿ ಮುಖ್ಯಮಂತ್ರಿಯು 50,000 ರೂ. ಮೌಲ್ಯದ ಬೇಲ್‌ ಬಾಂಡ್‌ಗಳನ್ನು ಒದಗಿಸಬೇಕು.
    * ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಸಚಿವಾಲಯಕ್ಕೆ ಭೇಟಿ ನೀಡುವಂತಿಲ್ಲ.
    * ಯಾವುದೇ ಸರ್ಕಾರಿ ಕಡತಗಳಿಗೆ ಸಹಿ ಹಾಕಬಾರದು.
    * ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಬಹಿರಂಗ ಹೇಳಿಕೆಗಳನ್ನು ನೀಡಬಾರದು.
    * ಪ್ರಕರಣ ಸಂಬಂಧ ಸಾಕ್ಷ್ಯಗಳ ಜೊತೆ ಮಾತುಕತೆ ನಡೆಸಬಾರದು.

    ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ವರೆಗೂ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಚುನಾವಣಾ ಪ್ರಚಾರಕ್ಕಾಗಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

    ಚುನಾವಣಾ ಫಲಿತಾಂಶ ಜೂನ್ 4 ರಂದು ಪ್ರಕಟಗೊಳ್ಳಲಿದೆ ಅಲ್ಲಿವರೆಗೂ ಜಾಮೀನು ವಿಸ್ತರಿಸಬೇಕು ಎಂದು ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಮನವಿ ಮಾಡಿದರು. ಇದಕ್ಕೆ ನಿರಾಕರಿಸಿದ ಕೋರ್ಟ್, ಕಡೆಯ ಹಂತದ 48 ಗಂಟೆಗೂ ಮುನ್ನ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಜೂನ್ 31 ರ ಪ್ರಚಾರಕ್ಕೆ ಕಡೆಯ ದಿನವಾಗಿದ್ದು ಈ ಹಿನ್ನೆಲೆ ಜೂನ್ 1 ವರೆಗೂ ಜಾಮೀನು ಮಂಜೂರು ಮಾಡಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿತು. ಅಲ್ಲದೇ ಜೂನ್‌ 2 ರಂದು ಬಂದು ಶರಣಾಗುವಂತೆ ಕೋರ್ಟ್‌ ಸೂಚಿಸಿದೆ.

  • 200 ಯೂನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ – ವಾರ್ಷಿಕ ಸರಾಸರಿ ಅಸ್ತ್ರ ಬಳಸಿ ಬಿಲ್ ವಸೂಲಿ

    200 ಯೂನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ – ವಾರ್ಷಿಕ ಸರಾಸರಿ ಅಸ್ತ್ರ ಬಳಸಿ ಬಿಲ್ ವಸೂಲಿ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೂ (Election) ಮುನ್ನ 200 ಯೂನಿಟ್ ಉಚಿತ ಉಚಿತ (200 Units Of Free Power) ಎಂದು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಹೇಳಿಕೊಂಡು ಓಡಾಡಿದ್ದ ಕಾಂಗ್ರೆಸ್ (Congress) ಇದೀಗ ಮಾತು ತಪ್ಪಿದಂತೆ ಕಂಡುಬರುತ್ತಿದೆ. ಇಂದು 5 ಗ್ಯಾರಂಟಿಗಳ ಜಾರಿ ಬಗ್ಗೆ ಘೋಷಣೆ ಮಾಡಿದ್ದರೂ, ರಾಜ್ಯದ ಜನತೆಗೆ ಕರೆಂಟ್ ಶಾಕ್ ಕೊಟ್ಟಿದೆ.

    200 ಯೂನಿಟ್ ವಿದ್ಯುತ್ (Gruha Jyothi) ಘೋಷಣೆ ಮಾಡಿದ್ದರೂ, ಕೆಲವೊಂದು ಷರತ್ತುಗಳನ್ನು ಹಾಕಿದೆ. ವಾರ್ಷಿಕ ಸರಾಸರಿ ಬಳಕೆ ಆಧಾರದಡಿ 200 ಯೂನಿಟ್ ಗ್ಯಾರಂಟಿ ಸ್ಕೀಂ ಜಾರಿಗೆ ತಂದಿದೆ. ವಾರ್ಷಿಕ ಸರಾಸರಿ ಜೊತೆಗೆ 10 ಪರ್ಸೆಂಟ್‍ಗಿಂತ ಹೆಚ್ಚು ಯೂನಿಟ್ ವಿದ್ಯುತ್ ಬಳಸಿದ್ರೆ ಮಾಮೂಲಿಯಂತೆ ಎಲ್ಲ ಚಾರ್ಜ್‍ಗಳನ್ನೊಳಗೊಂಡ ವಿದ್ಯುತ್ ಬಿಲ್ ಕಟ್ಟಬೇಕಿದೆ. ಇದು ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

    ಎಲ್ಲಾ  ಆರ್‌ಆರ್ ನಂಬರ್‌ಗಳಿಗೆ ಉಚಿತ ಎಂದು ಡಿಸಿಎಂ ಶಿವಕುಮಾರ್‌ (DK Shivakumar) ಹೇಳಿದ್ದಾರೆ. ಆದ್ರೆ ಒಂದಕ್ಕಿಂತ ಹೆಚ್ಚು ಮನೆಗಳನ್ನ ಬಾಡಿಗೆ ಕೊಟ್ಟ ಮಾಲೀಕರ ವಿಚಾರದಲ್ಲಿ ಸರ್ಕಾರ ಏನು ಮಾಡಲಿದೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಇದನ್ನು ವಾಣಿಜ್ಯ ಎಂದು ಪರಿಗಣಿಸುತ್ತಾ? ಅಥವಾ ಒಬ್ಬ ಮಾಲೀಕ ಎಷ್ಟೇ ಮನೆಗಳನ್ನ ಬಾಡಿಗೆಗೆ ಕೊಟ್ಟಿದ್ದರೂ ಆ ಎಲ್ಲ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸಿಗುತ್ತಾ ಎಂಬ ಪ್ರಶ್ನೆಗಳಿಗೆ  ಉತ್ತರ ಸಿಗಬೇಕಿದೆ.  ಇದನ್ನೂ ಓದಿ: 5 ಗ್ಯಾರಂಟಿ ಘೋಷಣೆ – ಯಾವ ಯೋಜನೆಗೆ ಎಷ್ಟು ಹಣ ಬೇಕು?

     

    ಗೃಹಜ್ಯೋತಿ ಯೋಜನೆ ಹೇಗೆ?
    200 ಯೂನಿಟ್‍ವರೆಗೆ ಉಚಿತ ವಿದ್ಯುತ್ ಎಲ್ಲಾ ಕುಟುಂಬಗಳಿಗೂ ಇದು ಅನ್ವಯವಾಗುತ್ತದೆ. ದುರ್ಬಳಕೆ ತಡೆಯಲು ಒಂದು ವರ್ಷದ ಸರಾಸರಿ ಬಳಕೆ ಲೆಕ್ಕ ಹಾಕಲಾಗುತ್ತದೆ. ಸರಾಸರಿ ವಿದ್ಯುತ್ ಬಳಕೆಯ ಶೇ.10ರಷ್ಟು ಹೆಚ್ಚು ಬಳಸಲು ಅವಕಾಶವಿದೆ. ಜುಲೈ ತಿಂಗಳಿನಿಂದ ಈ ಯೋಜನೆ ಜಾರಿಯಾಗಲಿದ್ದು, ಆಗಸ್ಟ್ ತಿಂಗಳಿನಿಂದ ವಿದ್ಯುತ್‌ ಬಿಲ್‌ ಪಾವತಿಸುವ ಅಗತ್ಯವಿಲ್ಲ. ಎಪಿಎಲ್, ಬಿಪಿಎಲ್ ಎಂಬ ಬೇಧಭಾವ ಇಲ್ಲ. ಆದರೆ ಗೃಹ ಬಳಕೆಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.

     

    ಹೆಚ್ಚು ವಿದ್ಯುತ್ ಬಳಸಿದ್ರೆ ಶಾಕ್?
    12 ತಿಂಗಳ ವಿದ್ಯುತ್ ಬಿಲ್‍ನ ಸರಾಸರಿ ಪರಿಗಣಿಸಿ ಹೆಚ್ಚುವರಿಯಾಗಿ 10% ರಷ್ಟು ಬಳಸಲು ಅವಕಾಶವಿದೆ. ಉದಾಹರಣೆಗೆ ಸರಾಸರಿ 100 ಯೂನಿಟ್ ಬಳಸಿದ್ದಲ್ಲಿ ಅಂದಾಜು 110 ಯೂನಿಟ್‍ವರೆಗೆ ಬಳಸಬಹುದು. 110 ಯೂನಿಟ್‍ಗಿಂತ ಜಾಸ್ತಿ ಬಳಸಿದ್ರೆ ಬಿಲ್ ಕಟ್ಟಬೇಕಾಗುತ್ತದೆ. ಒಂದು ಬಿಲ್ಡಿಂಗ್‍ನ ಎಲ್ಲರಿಗೂ ಈ ಯೋಜನೆ ಅನ್ವಯವಾಗುತ್ತಾ?‌ ಬರೀ ಮಾಲೀಕರನ್ನು ಮಾತ್ರ ಪರಿಗಣಿಸುತ್ತಾರಾ? ಬಾಡಿಗೆದಾರರಿಗೂ ಇದು ಅನ್ವಯವಾಗುತ್ತಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

  • ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು

    ರೇಪ್ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು

    ಪಾಟ್ನಾ: ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಮಹಿಳೆಯರ ಬಟ್ಟೆ ಒಗೆಯುವ ಷರತ್ತು ನೀಡಿ ಜಾಮೀನು ನೀಡಿರುವ ಘಟನೆ ನಡೆದಿದೆ.

    ಗ್ರಾಮದಲ್ಲಿ ಇರುವ ಎಲ್ಲ ಮಹಿಳೆಯರ ಬಟ್ಟೆಗಳನ್ನು ತೊಳೆಯಬೇಕು ಮತ್ತು ಇಸ್ತ್ರಿ ಮಾಡಬೇಕು ಎಂಬ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. 20 ವರ್ಷದ ಲಾಲನ್ ಕುಮಾರ್ ಸಫೀ ಈ ಷರತ್ತಿನನ್ವಯ ಜಾಮೀನು ಪಡೆದಿದ್ದಾನೆ. ಆರು ತಿಂಗಳ ಕಾಲ ಮಹಿಳೆಯರ ಬಟ್ಟೆ ಒಗೆಯಬೇಕು, ಅದಕ್ಕೆ ಬೇಕಾದ ಡಿಟರ್ಜೆಂಟ್ ಮತ್ತು ಇತರೆ ವಸ್ತುಗಳನ್ನು ಸ್ವಯಂ ಖರೀದಿಸಬೇಕು ಎಂದೂ ಷರತ್ತಿನಲ್ಲಿ ಹೇಳಲಾಗಿದೆ. ಗ್ರಾಮದಲ್ಲಿ ಸರಿಸುಮಾರು 2000 ಮಹಿಳೆಯರು ಇದ್ದಾರೆ. ಇದನ್ನೂ ಓದಿ: ಸಾಮಾನ್ಯ ಶೀತವಾಗಲಿದೆ ಕೊರೊನಾ ವೈರಸ್ – ತಜ್ಞರ ಭವಿಷ್ಯ

    ಬಿಹಾರದ ಮಜ್ಹೋರ್ ಗ್ರಾಮದ ಕುಮಾರ್ ಧೋಬಿಯಾಗಿ ಕೆಲಸ ಮಾಡುತ್ತಿದ್ದನು. ಅತ್ಯಾಚಾರ ಯತ್ನ ಸೇರಿ ವಿವಿಧ ಆರೋಪಗಳಡಿ 2021 ಏಪ್ರಿಲ್ ತಿಂಗಳಲ್ಲಿ ಬಂಧಿಸಲಾಗಿತ್ತು. ಲಾಲನ್ ಕುಮಾರ್ ಷರತ್ತು ಜಾರಿಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಕೋರ್ಟಿನ ತೀರ್ಮಾನವು ಗ್ರಾಮದ ಎಲ್ಲ ಮಹಿಳೆಯರಿಗೆ ಸಂತಸ ತಂದಿದೆ ಎಂದು ಮಧುಬನಿ ಜಿಲ್ಲೆಯ ಪೊಲೀಸ್ ಅಧಿಕಾರಿಯಾದ ಸಂತೋಷ್ ಕುಮಾರ್ ಸಿಂಗ್ ತಿಳಿಸಿದರು.

    ಗ್ರಾಮ ಪರಿಷತ್‍ನ ಮುಖ್ಯಸ್ಥೆಯಾಗಿರುವ ನಸೀಮಾ ಖತೂನ್. ಇದು ಐತಿಹಾಸಿಕ ನಿರ್ಧಾರ. ಮಹಿಳೆಯರ ಬಗೆಗಿನ ಗೌರವ ಹೆಚ್ಚಿಸಲಿದೆ ಎಂದಿದ್ದಾರೆ. ಈ ಆದೇಶವು ಸಕಾರಾತ್ಮಕ ಪರಿಣಾಮ ಬೀರಿದೆ. ಮಹಿಳೆಯರ ವಿರುದ್ಧ ದೌರ್ಜನ್ಯವು ಚರ್ಚೆಗೆ ಗ್ರಾಸವಾಗಿದೆ. ಇದು ಗಮನಾರ್ಹ ಹೆಜ್ಜೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಅಂಜುಂ ಪರ್ವೀನ್ ಹೇಳಿದರು.

    ನಿರ್ಭಯಾ ಪ್ರಕರಣದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣ ಸಂಬಂಧಿತ ಕಾಯ್ದೆ ಬಿಗಿಗೊಂಡಿವೆ. 2020ರಲ್ಲಿ 28,000ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ.

  • ಜು.26 ರಂದು ಸಿಎಂ ನಿರ್ಗಮನ – ಷರತ್ತು ವಿಧಿಸಿದ ಹೈಕಮಾಂಡ್

    ಜು.26 ರಂದು ಸಿಎಂ ನಿರ್ಗಮನ – ಷರತ್ತು ವಿಧಿಸಿದ ಹೈಕಮಾಂಡ್

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೈಕಮಾಂಡ್ ಷರತ್ತು ವಿಧಿಸಿರುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಜುಲೈ 26ರವರೆಗೆ ಸಣ್ಣ-ಪುಟ್ಟ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ ಸಿಎಂ ಅಗಿ ಇರುವವರೆಗೆ ಯಾವುದೇ ಮಹತ್ವದ ದೊಡ್ಡ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂಬ ಷರತ್ತು ವಿಧಿಸಿದೆ.

    ಷರತ್ತು ಏನು?
    ಹಣಕಾಸು ವಿಚಾರವಾಗಿ ದೊಡ್ಡ ನಿರ್ಧಾರ ಕೈಗೊಳ್ಳುವಂತಿಲ್ಲ. ದೊಡ್ಡ ಮಟ್ಟದ ಅನುದಾನಗಳನ್ನು ಬಿಡುಗಡೆ ಮಾಡಬಾರದು. ಇದರ ಜೊತೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ.

    ವಿಶೇಷ ಯೋಜನೆಗಳಿಗೂ ಅನುಮೋದನೆ ನೀಡಬಾರದು ಮತ್ತು ದೊಡ್ಡ ಪ್ರಾಜೆಕ್ಟ್ ಫೈಲ್‍ಗಳನ್ನು ಯಾವುದೇ ಕಾರಣಕ್ಕೂ ಕ್ಲಿಯರ್ ಮಾಡಬಾರದು.

    ಅಧಿಕಾರಿಗಳ ವರ್ಗಾವಣೆಯಲ್ಲೂ ಪ್ರಮುಖ ನಿರ್ಧಾರ ಮಾಡುವಂತಿಲ್ಲ. ಪ್ರಮುಖ ಸ್ಥಳಗಳ ಸ್ಥಾನಗಳಿಗೆ ಅಧಿಕಾರಿಗಳ ನಿಯೋಜನೆ ಮಾಡಬಾರದು. ಮುಖ್ಯವಾಗಿ ಸರ್ಕಾರದ ಮಟ್ಟದಲ್ಲಿ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಇದನ್ನೂ ಓದಿ : ಕನಕದಾಸರ ಏಕಶಿಲಾ ವಿಗ್ರಹಕ್ಕೆ 10 ಕೋಟಿ ನೀಡಿ – ಸಿಎಂಗೆ ಮನವಿ

  • ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್ ಓಪನ್

    ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್ ಓಪನ್

    – ಮಾರ್ಗಸೂಚಿಯಲ್ಲಿ ಏನಿದೆ..?

    ಬೆಂಗಳೂರು: ಕಂಟೈನ್ಮೆಂಟ್ ಝೋನ್‍ಗಳನ್ನ ಹೊರತುಪಡಿಸಿ ಬೇರೆಡೆ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.

    ಕೊರೊನಾ ಭೀತಿಯಿಂದ ಕಳೆದ ಮೂರು ತಿಂಗಳಿಂದ ಶಾಪಿಂಗ್ ಮಾಲ್‍ಗಳನ್ನು ಕ್ಲೋಸ್ ಮಾಡಲಾಗಿದೆ. ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದರೂ ಕೆಲ ಸಡಿಲಿಕೆಗಳನ್ನು ಮಾಡಲಾಗುತ್ತಿದೆ. ಇದರ ನಡುವೆ ಈಗ ಕಂಟೈನ್ಮೆಂಟ್ ಝೋನ್‍ಗಳಲ್ಲದೇ ಇರುವಂತಹ ಪ್ರದೇಶಗಳಲ್ಲಿನ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಲು ಸರ್ಕಾರ ತೀರ್ಮಾನ ಮಾಡಿದೆ.

    ಈ ಹಿಂದೆಯೇ ಜೂನ್ 8ರಿಂದ ಮಾಲ್‍ಗಳನ್ನು ಓಪನ್ ಮಾಡಲಾಗುವುದು ಎಂದು ಹೇಳಲಾಗಿತ್ತು. ಅಂತೆಯೇ ಸರ್ಕಾರ ಈ ತೀರ್ಮಾನ ಮಾಡಿದ್ದು, 65 ವರ್ಷದೊಳಗಿನ ವೃದ್ಧರು ಹಾಗೂ 10 ವರ್ಷದೊಳಗಿನ ಮಕ್ಕಳು ಮಾಲ್‍ಗಳಿಗೆ ಪ್ರವೇಶಿಸುವಂತಿಲ್ಲ. ಜೊತೆಗೆ ಪ್ರತಿಯೊಬ್ಬರೂ ಕೂಡ 6 ಅಡಿಯಷ್ಟು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳಬೇಕು ಎಂಬ ಷರತ್ತು ವಿಧಿಸಿದೆ.

    ಮಾಲ್‍ಗಳಿಗೆ ಮಾರ್ಗಸೂಚಿ
    ಮಾಲ್ ಪ್ರವೇಶಿಸುವ ಅಂಗಡಿಗಳ ನೌಕರರು, ಮಾಲ್ ಕೆಲಸಗಾರರು, ಗ್ರಾಹಕರು, ಸಿಬ್ಬಂದಿಗೆ ಫೇಸ್ ಮಾಸ್ಕ್ ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಸಾಮಾಜಿಕ ಅಂತರ ನಿಯಮ ಪಾಲಿಸಲು ಸಿಬ್ಬಂದಿ ನೇಮಿಸಬೇಕು. ವೃದ್ಧ ನೌಕಕರು, ಗರ್ಭಿಣಿ ಕೆಲಸಗಾರು ಕೆಲಸಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಜೊತೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು. ಪಾರ್ಕಿಂಗ್ ಮತ್ತು ಮಾಲ್ ಆವರಣದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ನಿಭಾಯಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿಲಾಗಿದೆ.

    ಪಾರ್ಕಿಂಗ್ ಸಿಬ್ಬಂದಿಗೆ ಮಾಸ್ಕ್, ಗ್ಲವ್ಸ್ ಬಳಕೆ ಕಡ್ಡಾಯವಾಗಿರಬೇಕು. ಮಾಲ್ ಒಳಗೆ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಸೀಮಿತ ಜನರ ಪ್ರವೇಶಕ್ಕೆ ಆದ್ಯತೆ ನೀಡಬಹುದು. ಎಸ್ಕಲೇಟರ್‍ನಲ್ಲಿ ಒಂದು ಮೆಟ್ಟಿಲು ನಡುವೆ ಅಂತರ ಕಾಪಾಡಿಕೊಳ್ಳಬೇಕು. ಎಸಿ ಅವಶ್ಯಕ ಇದ್ದರೆ 24-30 ಡಿಗ್ರಿ ಬಳಕೆ ಮಾಡಬಹುದು, ಇಲ್ಲದಿದ್ದರೆ ನೈಸರ್ಗಿಕ ಗಾಳಿಗೆ ಒತ್ತು ನೀಡಬೇಕು. ದೊಡ್ಡ ಪ್ರಮಾಣ ಜನ ಸೇರಿ ಪಾರ್ಟಿ ಸಭೆ ಮಾಡುವಂತಿಲ್ಲ. ಮಾಲ್‍ನಲ್ಲಿ ಬಳಕೆಯಾದ ಎಲ್ಲ ವಸ್ತುಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.

    ಶೌಚಾಲಯಗಳನ್ನು ಆಗ್ಗಾಗ್ಗೆ ಸ್ವಚ್ಛ ಮಾಡಬೇಕು. ಫುಡ್ ಕೋರ್ಟ್ ನಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮಾಲ್‍ನಲ್ಲಿರಿವ ರೆಸ್ಟೋರೆಂಟ್ ನಲ್ಲಿ ಶೇ.50 ಸಾರ್ಮಥ್ಯಕ್ಕೆ ಅವಕಾಶ ನೀಡಬೇಕು. ಜೊತೆಗೆ ಕೂರುವಾಗ ಅಂತರವಿರಬೇಕು. ಪ್ರತಿ ಗ್ರಾಹಕರು ಬದಲಾದ ಮೇಲೆ ಟೇಬಲ್ ಸ್ಯಾನಿಟೈಜ್ ಮಾಡಬೇಕು. ಕಿಚನ್‍ನಲ್ಲೂ ಅಂತರ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು. ಮಾಲ್‍ನಲ್ಲಿರುವ ಗೇಮಿಂಗ್ ಸೆಂಟರ್, ಮಕ್ಕಳ ಆಟದ ಪ್ರದೇಶ, ಸಿನಿಮಾ ಮಂದಿರ ಬಂದ್ ಆಗಬೇಕು. ಒಂದು ವೇಳೆ ಮಾಲ್‍ನಲ್ಲಿ ಸೋಂಕು ಪತ್ತೆಯಾದರೆ ಸೋಂಕಿತ ಓಡಾಡಿದ ಪ್ರದೇಶ ಐಸೋಲೇಟ್ ಮಾಡಬೇಕು. ಜೊತೆಗೆ ಹತ್ತಿರದ ಆರೋಗ್ಯ ಇಲಾಖೆ ಮಾಹಿತಿ ನೀಡಬೇಕು ಎಂದು ಮಾರ್ಗ ಸೂಚಿಯಲ್ಲಿ ವಿವರಿಸಲಾಗಿದೆ.

  • 14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

    14 ದಿನದ ಷರತ್ತಿಗೆ ಒಪ್ಪುವುದಾದ್ರೆ ಉಡುಪಿಗೆ ಸ್ವಾಗತ: ಜಿಲ್ಲಾಧಿಕಾರಿ ಜಿ. ಜಗದೀಶ್

    ಉಡುಪಿ: ಹೊರ ದೇಶ ಮತ್ತು ಹೊರ ರಾಜ್ಯದಿಂದ ಬರುವವರು ಸರ್ಕಾರಿ ಕ್ವಾರಂಟೈನ್ ಒಪ್ಪುವುದಾದರೆ ಉಡುಪಿ ಜಿಲ್ಲೆಗೆ ನಿಮಗೆ ಸ್ವಾಗತ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.

    ಇಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊರ ದೇಶ ಮತ್ತು ಹೊರ ರಾಜ್ಯದಿಂದ ಉಡುಪಿ ಜಿಲ್ಲೆಗೆ ಬರುವವರು ಸೇವಾ ಸಿಂಧು ಆ್ಯಪ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್‍ಗೆ ಈ ಪಾಸ್ ಬರುತ್ತದೆ. ತಪಾಸಣೆ ಮಾಡಿ ಉಡುಪಿ ಜಿಲ್ಲಾ ಪ್ರವೇಶ ಮಾಡಬಹುದು ಎಂದು ಡಿಸಿ ಜಗದೀಶ್ ಮಾಹಿತಿ ನೀಡಿದರು.

    ಉಡುಪಿ ಜಿಲ್ಲೆಯಲ್ಲಿ ಕಳೆದ ನಲವತ್ತು ದಿನಗಳಿಂದ ಯಾವುದೇ ಪಾಸಿಟಿವ್ ಕೇಸುಗಳು ಇಲ್ಲ. ಹಾಗಾಗಿ ಕೇಂದ್ರ ಸರ್ಕಾರ ಉಡುಪಿ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಘೋಷಣೆ ಮಾಡಿದೆ. ಜಿಲ್ಲೆಯನ್ನು ಗ್ರೀನ್ ಝೋನ್ ವ್ಯಾಪ್ತಿಯಲ್ಲಿ ಮುಂದುವರಿಸಲು ಹೊರ ರಾಜ್ಯ ಮತ್ತು ಹೊರ ದೇಶದಿಂದ ಬರುವವರು ಸಹಕರಿಸಿ ಎಂದು ವಿನಂತಿ ಮಾಡಿದ್ದಾರೆ. ಈ ಪಾಸ್ ತೆಗೆದುಕೊಂಡು ಬಂದವರನ್ನು ಹದಿನಾಲ್ಕು ದಿನ ಕಡ್ಡಾಯವಾಗಿ ಸರ್ಕಾರ ಕ್ವಾರಂಟೈನ್ ಮಾಡುತ್ತೇವೆ. ಈಗಾಗಲೇ ಹಾಸ್ಟೆಲ್ ಗಳನ್ನು ನಿಗದಿ ಮಾಡಿದ್ದೇವೆ. ಉಪಹಾರ ಮತ್ತು ಊಟವನ್ನು ಉಚಿತವಾಗಿ ಕೊಡುತ್ತೇವೆ. ಕ್ವಾರಂಟೈನ್ ಅವಧಿ ಮುಗಿಸಿ ಅವರು ಸೇಫ್ ಆಗಿ ಮನೆಗೆ ಹೋಗಬಹುದು ಎಂದು ಡಿಸಿ ಹೇಳಿದರು.

    ಸರ್ಕಾರಿ ವ್ಯವಸ್ಥೆಯಲ್ಲಿ ಉಳಿದುಕೊಳ್ಳುವ ಇಚ್ಛೆ ಇಲ್ಲದಿದ್ದರೆ ಹೋಟೆಲ್ ಅಥವಾ ಲಾಡ್ಜಿಂಗ್ ಅರೇಂಜ್ಮೆಂಟ್ ಮಾಡುತ್ತೇವೆ. ಅಲ್ಲಿನ ಸಂಪೂರ್ಣ ವೆಚ್ಚವನ್ನು ಅವರೇ ಭರಿಸತಕ್ಕದ್ದು ಎಂದು ಅವರು ತಿಳಿಸಿದರು. ಜನಪ್ರತಿನಿಧಿಗಳು, ಅಧಿಕಾರಿಗಳು, ವೈದ್ಯರ ತಂಡ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಹೇಳಿದರು.

  • ಹೈಕಮಾಂಡ್ ಮುಂದೆ 3 ಅಸ್ತ್ರ- ಸಂಪುಟ ವಿಸ್ತರಣೆಯೋ? ಪುನಾರಚನೆಯೋ?

    ಹೈಕಮಾಂಡ್ ಮುಂದೆ 3 ಅಸ್ತ್ರ- ಸಂಪುಟ ವಿಸ್ತರಣೆಯೋ? ಪುನಾರಚನೆಯೋ?

    ಬೆಂಗಳೂರು: ಯಡಿಯೂರಪ್ಪ ಯಾವ ಬಾಲ್ ಹಾಕಿದ್ರೂ ಬ್ಯಾಟಿಂಗ್ ಮಾಡಲು ಹೈಕಮಾಂಡ್ ತಯಾರಿ ನಡೆಸಿದೆ. ಹೈಕಮಾಂಡ್ ಅಂಗಳದಲ್ಲಿ ಯಾರು ಸಿಕ್ಸರ್ ಹೊಡಿತಾರೆ? ಯಾರು ಔಟ್ ಆಗ್ತಾರೆ ಅನ್ನೋದೇ ಸದ್ಯದ ಕುತೂಹಲ. ಬಿಜೆಪಿ ಹೈಕಮಾಂಡ್ ಮುಂದೆ ಮೂರು ಅಸ್ತ್ರಗಳಿವೆ ಎನ್ನಲಾಗಿದೆ. ಆ ಅಸ್ತ್ರಗಳನ್ನ ಯಡಿಯೂರಪ್ಪ ಒಪ್ಪಿಕೊಳ್ತಾರಾ..? ಇಲ್ಲ ತಮ್ಮದೇ ಸೂತ್ರಕ್ಕೆ ಅಂಟಿಕೊಳ್ತಾರಾ ಅನ್ನೋ ಚರ್ಚೆ ಜೋರಾಗಿದೆ.

    ಅಂದಹಾಗೆ ಸಂಪುಟ ವಿಸ್ತರಣೆ ಕಗ್ಗಂಟು ಮುಂದುವರಿದಿದೆ. ಹೈಕಮಾಂಡ್ ಜತೆಗಿನ ಮಾತುಕತೆ ಯಶಸ್ವಿಯಾದರೆ ಫೆಬ್ರವರಿ 2ಕ್ಕೆ ಪ್ರಮಾಣ ವಚನ ಫಿಕ್ಸ್ ಆಗುತ್ತೆ. ಒಂದು ವೇಳೆ ವಿಫಲ ಆದ್ರೆ ಫೆಬ್ರವರಿ 8ರ ಬಳಿಕವಷ್ಟೇ ಸಂಪುಟ ವಿಸ್ತರಣೆ ಸಾದ್ಯತೆ ಅನ್ನೋ ಮಾತುಗಳು ಕೇಳಿಬಂದಿವೆ. ಬಿಎಸ್‍ವೈ, ಹೈಕಮಾಂಡ್ ನಡುವಿನ ಮಾತುಕತೆಯಲ್ಲಿ ಬಿಎಸ್‍ವೈ ಫಾರ್ಮೂಲಾ ಸಕ್ಸಸ್ಸೋ..? ಹೈಕಮಾಂಡ್ ಫಾರ್ಮೂಲಾ ಗೆಲ್ಲುತ್ತೋ..? ಅನ್ನೋದ್ರ ಮೇಲೆ ಎಲ್ಲವೂ ನಿಂತಿದೆ.

    ಬಿಜೆಪಿ ಹೈಕಮಾಂಡ್ ಬಳಿ ಮೊದಲ ಅಸ್ತ್ರ ಸಂಪುಟ ಪುನಾರಚನೆ ಎನ್ನಲಾಗಿದೆ. ಈ ಅಸ್ತ್ರಕ್ಕೆ ಯಡಿಯೂರಪ್ಪ ಓಕೆ ಅಂದ್ರೆ ಹಿರಿಯರಿಗೆ ಕಷ್ಟ ಆಗುವ ಸಾಧ್ಯತೆ ಇದೆ. ಇಡೀ ಕ್ಯಾಬಿನೆಟ್ ಸಚಿವರಿಂದ ರಾಜೀನಾಮೆ ಪಡೆಯುವ ಅಸ್ತ್ರ ಇದು ಎನ್ನಲಾಗಿದ್ದು, ಯಡಿಯೂರಪ್ಪ ಒಪ್ಪಿದ್ರೆ ಸಂಪುಟ ಪುನಾರಚನೆಗೆ ಹೈಕಮಾಂಡ್ ರೆಡಿ ಅನ್ನೋದು ಲೇಟೆಸ್ಟ್ ಸುದ್ದಿ.

    * ಬಿಜೆಪಿ `ಹೈ’ಅಸ್ತ್ರ ನಂ.1- ಸಂಪುಟ ಪುನಾರಚನೆ!
    > ಎಲ್ಲಾ ಸಚಿವರಿಂದ ರಾಜೀನಾಮೆ ಪಡೆಯುವುದು
    > ಹೊಸದಾಗಿ ಸಂಪುಟ ರಚನೆ ಮಾಡುವುದು
    > ಹಿರಿಯರಿಗೆ ಕೊಕ್ ಕೊಟ್ಟು ಹೊಸಮುಖಗಳಿಗೆ ಮu?
    > ಬಿಎಸ್‍ವೈ ಹೇಳಿದ 14 ಶಾಸಕರಿಗೆ ಸಚಿವ ಸ್ಥಾನ
    > ಹೈಕಮಾಂಡ್ ಹೇಳಿದ 16 ಶಾಸಕರಿಗೆ ಸಚಿವ ಸ್ಥಾನ?

    * ಬಿಜೆಪಿ `ಹೈ’ಅಸ್ತ್ರ ನಂ.2- 9+5 ಫಾರ್ಮುಲಾ!
    > ವಲಸಿಗ 9 ಶಾಸಕರಿಗೆ ಸಚಿವ ಸ್ಥಾನ ನೀಡುವುದು
    > ಮೂಲ 5 ಶಾಸಕರಿಗೆ ಸಚಿವ ಸ್ಥಾನ ನೀಡುವುದು
    > 2 ಸಚಿವ ಸ್ಥಾನಗಳನ್ನ ಮಾತ್ರ ಖಾಲಿ ಉಳಿಸಿಕೊಳ್ಳುವುದು
    > ಜೂನ್ ಬಳಿಕ ಸಂಪುಟ ಪುನಾರಚನೆ ಮಾಡುವುದು

    * ಬಿಜೆಪಿ `ಹೈ’ಅಸ್ತ್ರ ನಂ.3- 9+3 ಫಾರ್ಮುಲಾ!
    > ಯಡಿಯೂರಪ್ಪ ಸೂತ್ರದ ಸಚಿವ ಸ್ಥಾನ ಹಂಚಿಕೆ
    > 9 ವಲಸಿಗರಿಗೆ, 3 ಮೂಲಬಿಜೆಪಿ ಶಾಸಕರಿಗೆ ಸಚಿವ ಸ್ಥಾನ
    > ಜೂನ್ ತನಕ 4 ಸಚಿವ ಸ್ಥಾನ ಖಾಲಿ ಉಳಿಸಿಕೊಳ್ಳುವುದು
    > ಮುಂದೆ ಸಂಪುಟ ಪುನಾರಚನೆ ಪವರ್ ಹೈಕಮಾಂಡ್‍ಗೆ ಕೊಡುವುದು

  • ಷರತ್ತು ವಿಧಿಸಿ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳಿಗೆ ಅನುಮತಿ

    ಷರತ್ತು ವಿಧಿಸಿ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನಗಳಿಗೆ ಅನುಮತಿ

    ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಷರತ್ತು ವಿಧಿಸಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

    ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಪ್ರಕಟಿಸಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಮಾತ್ರ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

    ಕಳೆದ ತಿಂಗಳು ಸುರಿದ ಮಹಾಮಳೆಯಿಂದಾಗಿ ಗುಡ್ಡ ಕುಸಿದು, ಹಲವೆಡೆ ರಸ್ತೆಗಳು ಕೊಚ್ಚಿ ಹೋಗಿತ್ತು. ಹೀಗಾಗಿ ಆಗಸ್ಟ್ 9 ರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಬಂದ್ ಆಗಿದ್ದರಿಂದ ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕ ಕಡಿತವಾಗಿತ್ತು.

    ಬಿರುಗಾಳಿ ಸಹಿತ ಭಾರೀ ಮಳಯಾದ ಪರಿಣಾಮ ಹಾಳಾದ ರಸ್ತೆಯನ್ನು ಶಾಶ್ವತವಾಗಿ ದುರಸ್ತಿ ಮಾಡಲು ಸುಮಾರು 300 ಕೋಟಿ ರೂ. ಅನುದಾನದ ಅವಶ್ಯಕತೆಯಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

    ಷರತ್ತು ಏನು?
    ಘಾಟಿಯಲ್ಲಿ ಪ್ರತಿ ಗಂಟೆಗೆ 20 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸುವುದು, ಭೂ ಕುಸಿತದಿಂದ ರಸ್ತೆಗೆ ಸಮಸ್ಯೆ ಆಗಿರುವುದರಿಂದ ಜಾಗರೂಕತೆಯಿಂದ ಚಾಲನೆ ಮಾಡುವುದು, ಫೋಟೋಗ್ರಫಿ, ಸೆಲ್ಫಿ ತೆಗೆಯುವುದಕ್ಕೆ ನಿಷೇಧ ವಿಧಿಸಲಾಗಿದೆ.

    ಕಾರುಗಳು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ(ಮಿನಿ ವ್ಯಾನ್), ಅಂಬುಲೆನ್ಸ್, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ.

  • ಷರತ್ತು ಒಡ್ಡಿ ಬಿಎಸ್‍ವೈ ಪ್ರಮಾಣ ವಚನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್

    ಷರತ್ತು ಒಡ್ಡಿ ಬಿಎಸ್‍ವೈ ಪ್ರಮಾಣ ವಚನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್

    ಬೆಂಗಳೂರು: ಬಿ.ಎಸ್.ಯಡಿಯೂರಪ್ಪಗೆ ಸರ್ಕಾರ ರಚನೆಗೆ ಹೈಕಮಾಂಡ್ ದಿಢೀರ್ ಅನುಮತಿ ನೀಡಿದೆ. ಗುರುವಾರದವರೆಗೆ ಸ್ಪೀಕರ್ ನಡೆಯನ್ನು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದ ಬಿಜೆಪಿ ಹೈಕಮಾಂಡ್ ಈಗ ಕೆಲ ಷರತ್ತುಗಳನ್ನು ಒಡ್ಡಿ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ.

    ಹೌದು. ರಾಜ್ಯ ಪರವಾಗಿ ಜಗದೀಶ್ ಶೆಟ್ಟರ್, ಮಾಧುಸ್ವಾಮಿ, ವಿಜಯೇಂದ್ರ ಅವರು ದೆಹಲಿಗೆ ತೆರಳಿ ಅಮಿತ್ ಶಾ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಅತೃಪ್ತರ ಬಗ್ಗೆ ಹಲವು ಚರ್ಚೆ ನಡೆದು ಕೊನೆಗೆ ಇಂದು ಬೆಳಗ್ಗೆ ಸರ್ಕಾರ ನಡೆಸಲು ಶಾ ಅನುಮತಿ ನೀಡಿದ್ದಾರೆ.

    ಷರತ್ತು ಏನು?
    ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಜವಾಬ್ದಾರಿ ಸಂಪೂರ್ಣವಾಗಿ ನೀವೇ ನಿಭಾಯಿಸಬೇಕು. ಈಗ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಸದನದ ಬಲ 221 ಕ್ಕೆ ಕುಸಿದಿದೆ. ಇದರಿಂದ ಬಹುಮತಕ್ಕೆ 112 ಸಂಖ್ಯೆ ಬೇಕಾಗುತ್ತದೆ. ಆದರೆ ಬಿಜೆಪಿ ಬಳಿ ಒಬ್ಬ ಪಕ್ಷೇತರ ಶಾಸಕ ಸೇರಿ ಒಟ್ಟು 106 ಇದೆ. ಇನ್ನುಳಿದ ಸಂಖ್ಯೆಯನ್ನು ನೀವೇ ನಿಭಾಯಿಸಬೇಕು ಎಂದು ಮೊದಲ ಷರತ್ತು ವಿಧಿಸಿದೆ.

    ಅತೃಪ್ತ ಶಾಸಕರು ತಮ್ಮ ನಿಲುವನ್ನು ಬದಲಿಸದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನೀವೇ ಹೊರಬೇಕು. 2018ರಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತು ಪಡಿಸಲು ವಿಫಲರಾಗಿದ್ದೇವೆ. ಹೀಗಾಗಿ ಈ ಬಾರಿ ಯಾವುದೇ ಎಡವಟ್ಟು ಆಗದಂತೆ ನೋಡಿಕೊಳ್ಳಬೇಕು. ಮುಂದೆ ಏನಾದರೂ ಎಡವಟ್ಟುಗಳಾದರೆ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಡ್ಯಾಮೇಜ್ ಆಗಬಹುದು. ಎಲ್ಲಾ ಜವಾಬ್ದಾರಿ ನಿಮ್ಮದೇ ಎಂದು ಯಡಿಯೂರಪ್ಪ ಪಾಳಯಕ್ಕೆ ಹೈಕಮಾಂಡ್ ಎಚ್ಚರಿಕೆ ಕೊಟ್ಟಿದೆ.

    ಎಲ್ಲ ಷರತ್ತುಗಳನ್ನು ಒಪ್ಪಿ ಕೇಳಿದ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ಹೈಕಮಾಂಡ್ ಸರ್ಕಾರ ರಚಿಸಲು ಬಿಎಸ್‍ವೈಗೆ ಅನುಮತಿ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.