ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಕೊನೆಗೂ ಗೆದ್ದಿದ್ದಾರೆ. ಶ್ವೇತಭವನದಿಂದ (White House) ಆದ ಅವಮಾನಕ್ಕೆ ಮಸ್ಕ್ ಈಗ ತನ್ನ ಬೆಂಬಲಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಅಲ್ಲಿಗೆ ಕಳುಹಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಅಮೆರಿಕ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ (Kamala Harris) ಮತ್ತು ಡೊನಾಲ್ಡ್ ಟ್ರಂಪ್ ಮಧ್ಯೆ ನೆಕ್‌ಟು ನೆಕ್ ಫೈಟ್ ಇದೆ ಎಂದು ಸಮೀಕ್ಷೆಗಳು ಹೇಳಿದ್ದವು. ಇವರಿಬ್ಬರು ಸುದ್ದಿಯಾಗುತ್ತಿರುವ ಸಮಯದಲ್ಲಿ ಮಸ್ಕ್ ಸಹ ಪ್ರತಿ ನಿತ್ಯ ಸುದ್ದಿಯಾಗುತ್ತಿದ್ದರು.
ಅಟೋಮೊಬೈಲ್ ಕಂಪನಿ ಟೆಸ್ಲಾ, ಬಾಹ್ಯಾಕಾಶ ಕಂಪನಿ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಅವರು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ಬಹಿರಂಗ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೇ ಭಾರೀ ಪ್ರಮಾಣದಲ್ಲಿ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಪ್ರತಿ ದಿನ 1 ಮಿಲಿಯನ್ ಡಾಲರ್ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಸುಮಾರು 8.40 ಕೋಟಿ ರೂ ನೀಡುವುದಾಗಿ ಘೋಷಣೆ ಮಾಡಿದ್ದರು. ದೇಣಿಗೆ ನೀಡಿದ್ದು ಮಾತ್ರವಲ್ಲದೇ ಟ್ರಂಪ್ ಪರ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡಿದ್ದರು.
ಅಮೆರಿಕ ಉಳಿಯಬೇಕಾದರೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು. ಟ್ರಂಪ್ ಪರ ಯುವ ಜನತೆಯನ್ನು ಮಸ್ಕ್ ಸೆಳೆದಿದ್ದರು. ಇದೆಲ್ಲದರ ಪರಿಣಾಮ ಟ್ರಂಪ್ ಈಗ 47ನೇ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಂದು ವಿರೋಧ, ಇಂದು ಲವ್!
ಹಾಗೆ ನೋಡಿದರೆ ಮಸ್ಕ್ ಈ ಹಿಂದೆ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸುತ್ತಿದ್ದರು. ಮಸ್ಕ್‌ಗೆ ಅಮೆರಿಕ ಪೌರತ್ವ ಸಿಕ್ಕಿದ್ದು 2002ರಲ್ಲಿ. ಈ ಹಿಂದೆ ಬರಾಕ್ ಒಬಾಮಾ (Barack Obama) ನಂತರ ಹಿಲರಿ ಕ್ಲಿಂಟನ್ (Hillary Clinton) ನಂತರ ಜೋ ಬೈಡನ್ (Joe Biden) ಅವರನ್ನು ಮಸ್ಕ್ ಬೆಂಬಲಿಸಿದ್ದರು. 2016ರಲ್ಲಿ ಟ್ರಂಪ್ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಒಪ್ಪಿಗೆ ಆಗುವ ವ್ಯಕ್ತಿಯಲ್ಲ ಎಂದಿದ್ದರು. ರಿಪಬ್ಲಿಕನ್ ಪಕ್ಷದ ವಿರೋಧಿಯಾಗಿದ್ದ ಮಸ್ಕ್ ಈಗ ಆ ಪಕ್ಷದ ಪರ ಒಲವು ಹೊಂದಲು ಕಾರಣವಾದ ಮೊದಲ ಘಟನೆ ಯಾವುದು ಎಂದರೆ ಅದು ಕೋವಿಡ್.
ಕೊರೊನಾಗೆ ಲಸಿಕೆ ಕಂಡು ಹಿಡಿದ ನಂತರ ವಿಶ್ವಾದ್ಯಂತ ವಿತರಣೆ ಆರಂಭವಾಯಿತು. ಈ ವೇಳೆ ಮಸ್ಕ್ ಲಸಿಕೆಯನ್ನು ನಾನು ಲಸಿಕೆಯನ್ನು ತೆಗೆದುಕೊಳ್ಳಲ್ಲ ಎಂದಿದ್ದರು. ಇದು ಅಮೆರಿಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಯಿತು. ನಂತರ ಮಸ್ಕ್ ಲಸಿಕೆಯನ್ನು ತೆಗೆದುಕೊಂಡಿದ್ದರು. ತೆಗೆದುಕೊಂಡಿದ್ದರೂ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವುದು ಸರಿಯಲ್ಲ ಎಂದು ಹೇಳಿದ್ದರು. ಬೈಡನ್ ಸರ್ಕಾರದ ವಿರುದ್ಧ ಅಸಮಾಧಾನವಿದ್ದರೂ ಮಸ್ಕ್ ಅದನ್ನು ಎಲ್ಲಿಯೂ ಬಹಿರಂಗವಾಗಿ ತೋರಿಸಿಕೊಂಡಿರಲಿಲ್ಲ.

2021 ರಲ್ಲಿ ಅಮೆರಿಕದ ಅಧ್ಯಕ್ಷರ ನಿವಾಸವಾದ ಶ್ವೇತ ಭವನದಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಕಾರ್ಯಕ್ರಮ ನಿಗದಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಅಮೆರಿಕದ ಅಟೋಮೊಬೈಲ್ ಕಂಪನಿಯ ಮಾಲೀಕರನ್ನು ಆಹ್ವಾನಿಸಲಾಗಿತ್ತು. ಆದರೆ ವಿಶ್ವದ ನಂಬರ್ ಒನ್ ಎಲೆಕ್ಟ್ರಿಕ್ ಕಾರು ಕಂಪನಿಯಾಗಿರುವ ಟೆಸ್ಲಾ ಮಾಲೀಕ ಮಸ್ಕ್ ಅವರನ್ನು ಆಹ್ವಾನಿಸಿರಲಿಲ್ಲ. ಉದ್ದೇಶಪೂರ್ವಕವಾಗಿ ಅಮೆರಿಕ ಸರ್ಕಾರ ನನ್ನನ್ನು ಕಡೆಗಣಿಸಿ ಅವಮಾನ ಮಾಡಿದ್ದರೆ ಎಂದು ತಿಳಿದ ಮಸ್ಕ್ 2022 ರಿಂದ ರಿಪಬ್ಲಿಕನ್ ಗುಂಪುಗಳಿಗೆ ಹಣಕಾಸಿನ ನೆರವು ನೀಡಲು ಆರಂಭಿಸಿದರು.
ನಂತರದ ದಿನದಲ್ಲಿ ಮಸ್ಕ್ ಕಂಪನಿಯ ವಿರುದ್ಧ ಬೈಡನ್ ಸರ್ಕಾರ ಹಲವಾರು ತನಿಖೆ ಆರಂಭಿಸಿತು. ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪ ಬಂದಾಗಲೂ ತನಿಖೆ ನಡೆಯಿತು. ಟ್ವಿಟ್ಟರ್ ಕಂಪನಿಯ ಸ್ವಾಧೀನ ಪ್ರಕ್ರಿಯೆ, ಟೆಸ್ಲಾ ಅಟೋಪೈಲಟ್ ವಿಶೇಷತೆ ಮೇಲೆ ತನಿಖೆಯನ್ನು ಎದುರಿಸಬೇಕಾಯಿತು. 2023ರಲ್ಲಿ ನೇರವಾಗಿಯೇ ನಾನು ಜೋ ಬೈಡನ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಸಂದರ್ಶನದಲ್ಲಿ ಮಸ್ಕ್ ಹೇಳಿದರು.

ಖಾತೆ ಕೊಟ್ಟ ಮಸ್ಕ್!
ಅಮೆರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಹಿಲ್ ಅಂದರೆ ಅಮೆರಿಕದ ಸಂಸತ್ ಮೇಲೆ ದಾಳಿ ಮಾಡಿದ್ದರು. ಈ ದಾಳಿಗೆ ಟ್ರಂಪ್ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಟ್ವಿಟ್ಟರ್ ಕಂಪನಿ 2021 ಟ್ರಂಪ್ ಖಾತೆ ಶಾಶ್ವತ ನಿಷೇಧ ಹೇರಿತ್ತು. ಈ ರೀತಿಯ ನಿಷೇಧ ಹೇರಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಒಂದು ಕ್ಷಣದಲ್ಲಿ ಲಕ್ಷಾಂತರ ಮಂದಿಯನ್ನು ತಲುಪುವ ಸಾಮರ್ಥ್ಯ ಹೊಂದಿರುವ ಸಾಮಾಜಿಕ ಜಾಲತಾಣಗಳು ವ್ಯಕ್ತಿಯೊಬ್ಬನನ್ನು ನಿಷೇಧ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿತ್ತು. ಏನೇ ಟೀಕೆ ಬಂದಿದ್ದರೂ ಅಂದಿನ ಟ್ವಿಟ್ಟರ್ ಸಿಇಒ ಆಗಿದ್ದ ಜಾಕ್ ಡಾರ್ಸಿ ನೇತೃತ್ವದ ತಂಡ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ಇದನ್ನೂ ಓದಿ: ಎಡಪಂಥೀಯರ ವಿಕಿಪೀಡಿಯಗೆ ದೇಣಿಗೆ ನೀಡಬೇಡಿ: ಮಸ್ಕ್ ಕರೆ
ಅಮೆರಿಕ ಸಾಮಾಜಿಕ ಜಾಲತಾಣ ಕಂಪನಿಗಳು ತನ್ನನ್ನು ನಿಷೇಧ ಮಾಡಿದ್ದಕ್ಕೆ ಸಿಟ್ಟಾದ ಟ್ರಂಪ್ 2022 ಫೆಬ್ರವರಿಯಲ್ಲಿ ಟ್ರೂಥ್ ಹೆಸರಿನಲ್ಲಿ ಒಂದು ವೇದಿಕೆಯನ್ನು ತೆರೆಯುತ್ತಾರೆ. ಆಂಡ್ರಾಯ್ಡ್ ಮತ್ತು ಐಓಸ್ ಆಪ್ ರಿಲೀಸ್ ಮಾಡುತ್ತಾರೆ. ಇಂದು ಟ್ರಂಪ್ ಬೆಂಬಲಿಗರನ್ನು ಮಾತ್ರ ಸೆಳೆದಿತ್ತು. 2022 ರಲ್ಲಿ ಮಸ್ಕ್ ಟ್ವಿಟ್ಟರ್ ಕಂಪನಿಯನ್ನು ಖರೀದಿಸುತ್ತಾರೆ. 2022ರ ಅಕ್ಟೋಬರ್‌ನಲ್ಲಿ ಟ್ವಿಟ್ಟರ್ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಟ್ಟಿಟ್ಟರ್ ಒಡೆತನ ಸಂಪೂರ್ಣ ಮಸ್ಕ್ ಸಿಕ್ಕಿದ ಬೆನ್ನಲ್ಲೇ 2022 ರ ನವೆಂಬರ್‌ನಲ್ಲಿ ನಿಷೇಧಗೊಂಡಿದ್ದ ಟ್ರಂಪ್ ಖಾತೆಗೆ ಮತ್ತೆ ಜೀವ ನೀಡುತ್ತಾರೆ. ಟ್ರಂಪ್ ಖಾತೆ ಮತ್ತೆ ಚಾಲನೆ ಸಿಕ್ಕಿದ್ದು ಬೈಡನ್ ಸರ್ಕಾರ ಕಣ್ಣನ್ನು ಕೆಂಪಗೆ ಮಾಡಿತ್ತು. ಇದರ ಬೆನ್ನಲ್ಲೇ ಮಸ್ಕ್ ಕಂಪನಿಯ ವಿರುದ್ಧ ತನಿಖೆಗಳು ಮತ್ತಷ್ಟು ಚುರುಕು ಪಡೆಯುತ್ತದೆ.

ರಾಜಕೀಯ ಪಕ್ಷಗಳಿಂದ ದೇಣಿಗೆ
ಅಮೆರಿಕ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಕಂಪನಿಗಳು ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುತ್ತಿವೆ. ಗೂಗಲ್, ಮೈಕ್ರೋಸಾಫ್ಟ್, ಆಪಲ್, ಒರಾಕಲ್, ಜಾನ್‌ಸನ್ ಆಂಡ್ ಜಾನ್‌ಸನ್ ಕಂಪನಿಗಳು ಕಮಲಾಗೆ ಹಣಸುಕಾಸಿನ ನೆರವು ನೀಡಿದರೆ ಅಮೆರಿಕನ್ ಏರ್‌ಲೈನ್ಸ್, ವಾಲ್‌ಮಾರ್ಟ್, ಬೋಯಿಂಗ್, ಲಾಕ್‌ಹಿಡ್ ಮಾರ್ಟಿನ್ ಕಂಪನಿಗಳು ಟ್ರಂಪ್‌ಗೆ ಬೆಂಬಲ ನೀಡಿವೆ.
ಈ ವಿಚಾರವನ್ನು ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ (Elon Musk) ಪ್ರಸ್ತಾಪಿಸಿ, ಗೂಗಲ್ ಮತ್ತು ಮೈಕ್ರೋಸಾಫ್ಟ್ ಡೆಮಾಕ್ರಟಿಕ್ ಪಕ್ಷಕ್ಕೆ ಭಾರೀ ದೇಣಿಗೆ ನೀಡಿವೆ. ಈ ಎರಡೂ ಕಂಪನಿಗಳು ಸುಮಾರು 100% ಸರ್ಚ್ ನಿಯಂತ್ರಿಸುತ್ತವೆ. ಇವರು ಸಹಾಯ ಮಾಡದೇ ಇದ್ದರೂ ಪಕ್ಷಪಾತವನ್ನು ಪರಿಚಯಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸದ್ಯ ಈಗ ಟ್ರಂಪ್‌ಗೆ ಅತಿ ಹೆಚ್ಚು ದೇಣಿಗೆ ನೀಡಿದ ವ್ಯಕ್ತಿಗಳ ಪೈಕಿ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ. ಅಕ್ಟೋಬರ್ 16ರ ವೇಳೆಗೆ ಒಟ್ಟು 75 ಮಿಲಿಯನ್ ಡಾಲರ್ ಹಣವನ್ನು ಮಸ್ಕ್ ಟ್ರಂಪ್‌ಗೆ ದೇಣಿಗೆ ನೀಡಿದ್ದರು. ಅಷ್ಟೇ ಅಲ್ಲದೇ ಎಕ್ಸ್‌ನಲ್ಲಿ ಮಸ್ಕ್ ಟ್ರಂಪ್ ಅವರನ್ನು ಸಂದರ್ಶನ ಸಹ ಮಾಡಿದ್ದರು. ನಾನು ಚುನಾವಣೆಯಲ್ಲಿ ಜಯಗಳಿಸಿದರೆ ಮಸ್ಕ್ ಅವರನ್ನು ‘Government Efficiency’ ತಂಡದ ಮುಖ್ಯಸ್ಥರನ್ನಾಗಿ ಮಾಡುತ್ತೇನೆ ಎಂದು ಟ್ರಂಪ್ ಘೋಷಿಸಿದ್ದರು.
ಈ ಚುನಾವಣೆಯಲ್ಲಿ ಮಸ್ಕ್ ಅಮೆರಿಕ ಮಾಧ್ಯಮಗಳನ್ನು ಬಹಿರಂಗವಾಗಿಯೇ ದೂರಿದ್ದರು. ಟ್ರಂಪ್ ವಿರುದ್ಧ ಉದ್ದೇಶಪೂರ್ವವಾಗಿಯೇ ಅಪಪ್ರಚಾರ ಮಾಡಲಾಗುತ್ತದೆ. ಇವುಗಳಲ್ಲಿ ಬಂದ ಸುದ್ದಿಗಳನ್ನು ನಂಬಬೇಡಿ. ಎಕ್ಸ್ ಅನ್ನು ಫಾಲೋ ಮಾಡಿ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಎಕ್ಸ್‌ನಲ್ಲಿ ಅಮೆರಿಕ ಹೆಸರಿನ ಖಾತೆಯನ್ನು ತೆರೆದು ಟ್ರಂಪ್ ಪರ ಪ್ರಚಾರ ಮಾಡಿದ್ದರು.
ಟ್ರಂಪ್ ಅವರ ವಿಜಯೋತ್ಸವ ಪಾರ್ಟಿಯಲ್ಲಿ ಮಸ್ಕ್ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ತಮ್ಮ ಭಾಷಣದಲ್ಲಿ ಟ್ರಂಪ್, ನಮ್ಮಲ್ಲಿ ಹೊಸ ನಕ್ಷತ್ರವಿದೆ, ನಕ್ಷತ್ರ ಹುಟ್ಟಿದೆ ಅದು ಎಲೋನ್. ಅವರು ಅದ್ಭುತ ವ್ಯಕ್ತಿ. ಇಂದು ರಾತ್ರಿ ನಾವು ಒಟ್ಟಿಗೆ ಕುಳಿತಿದ್ದೆವು. ನಿಮಗೆ ಗೊತ್ತಾ, ಅವರು ಎರಡು ವಾರಗಳ ಕಾಲ ಫಿಲಡೆಲ್ಫಿಯಾದಲ್ಲಿ, ಪೆನ್ಸಿಲ್ವೇನಿಯಾದ ವಿವಿಧ ಭಾಗಗಳಲ್ಲಿ ಪ್ರಚಾರ ಮಾಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.