Tag: ಶ್ವಾನಗಳು

  • ಸಾವಿನಲ್ಲೂ ಒಂದಾದ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಪೊಲೀಸರು

    ಸಾವಿನಲ್ಲೂ ಒಂದಾದ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಪೊಲೀಸರು

    ಕೊಪ್ಪಳ: ಶ್ವಾನ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ವಾನವೊಂದು ಸಾವನ್ನಪ್ಪಿದ ರಾತ್ರಿಯೇ ಅದರ ಸ್ನೇಹಿತನಾಗಿದ್ದ ಇನ್ನೊಂದು ಶ್ವಾನ ಕೂಡ ಕೊನೆಯುಸಿರೆಳೆದಿದ್ದು, ಈ ಮೂಲಕ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಹೌದು. ಕೊಪ್ಪಳ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೇತಕ್ ಹಾಗೂ ಟೆರರ್ ಹೆಸರಿನ ಎರಡು ಶ್ವಾನಗಳು ಶನಿವಾರ ಅಸುನೀಗಿವೆ. ಈ ಎರಡು ಶ್ವಾನಗಳು ಹಲವು ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದವು. ಕಳೆದ ಎರಡು ತಿಂಗಳಿಂದ ಚೇತಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಶನಿವಾರ ಮಧ್ಯಾಹ್ನ ಸಾವನ್ನಪ್ಪಿತ್ತು. ಈ ವೇಳೆ ಪೊಲೀಸರು ಸರ್ಕಾರಿ ಗೌರವಗಳೊಂದಿಗೆ ಶ್ವಾನದ ಅಂತ್ಯಕ್ರಿಯೆ ಮಾಡಿದ್ದರು.

    ಸ್ನೇಹಿತನನ್ನು ಕಳೆದುಕೊಂಡ ನೋವಿನಲ್ಲಿ ಶನಿವಾರ ರಾತ್ರಿ ಶ್ವಾನ ಟೆರರ್ ಕೂಡ ಸಾವನ್ನಪ್ಪಿದೆ. ಹಲವಾರು ಅಪರಾಧ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಎರಡೂ ಶ್ವಾನಗಳನ್ನ ಕಳೆದುಕೊಂಡ ಕೊಪ್ಪಳ ಪೊಲೀಸ್ ಸಿಬ್ಬಂದಿಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಒಟ್ಟಿನಲ್ಲಿ ಒಂದೇ ದಿನ ಎರಡೂ ಶ್ವಾನಗಳು ಮೃತಪಟ್ಟು ಸಾವಿನಲ್ಲೂ ಒಂದಾಗಿವೆ.

  • ‘ಶ್ವಾನವಾಗಿ ಹುಟ್ಟಿ, ಯೋಧನಾಗಿ ನಿವೃತ್ತಿ’- ಸಿಐಎಸ್‍ಎಫ್ ಶ್ವಾನಗಳಿಗೆ ವಿದಾಯ ಕೂಟ

    ‘ಶ್ವಾನವಾಗಿ ಹುಟ್ಟಿ, ಯೋಧನಾಗಿ ನಿವೃತ್ತಿ’- ಸಿಐಎಸ್‍ಎಫ್ ಶ್ವಾನಗಳಿಗೆ ವಿದಾಯ ಕೂಟ

    ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ(ಸಿಐಎಸ್‍ಎಫ್) ಸೇವೆ ಸಲ್ಲಿಸಿದ್ದ 7 ಶ್ವಾನಗಳು ಮಂಗಳವಾರ ನಿವೃತ್ತಿ ಪಡೆದಿದೆ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ಈ ಶ್ವಾನಗಳಿಗೆ ಸೇನಾ ಗೌರವದೊಂದಿಗೆ ವಿದಾಯ ನೀಡಲಾಯ್ತು.

    ಮಂಗಳವಾರದಂದು ನಡೆದ ವಿದಾಯ ಕೂಟ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ನಿವೃತ್ತಿಯಾದ ಯೋಧನಿಗೆ ಗೌರವ ಸಲ್ಲಿಸಿ ಬೀಳ್ಕೊಡುವ ರೀತಿ ಶ್ವಾನಗಳಿಗೂ ಗೌರವದಿಂದ ನಿವೃತ್ತಿ ನೀಡಲಾಯ್ತು. ಮಂಗಳವಾರ ಈ ಶ್ವಾನಗಳ ಸೇವೆಯ ಕೊನೆಯ ದಿನವಾದರಿಂದ ಅವುಗಳಿಗೆ ಸೆಲ್ಯೂಟ್ ಹೊಡೆದು, ಸೇನಾ ಗೌರವದೊಂದಿಗೆ ಸೈನಿಕನಂತೆ ಬೀಳ್ಕೊಡಲಾಯ್ತು. ಇದನ್ನೂ ಓದಿ:ಯೋಧರಿಗಾಗಿ ‘ಐರನ್ ಮ್ಯಾನ್’ ಸೂಟ್ ತಯಾರಿಸಿದ ದೇಶಭಕ್ತ

    ಸಿಐಎಸ್‍ಎಫ್ ತನ್ನ ತಂಡದಲ್ಲಿ ಸೇವೆ ಸಲ್ಲಿಸಿದ್ದ ಶ್ವಾನಗಳ ನಿವೃತ್ತಿ ಕುರಿತಾಗಿ ಟ್ವೀಟ್ ಮಾಡಿ, ‘ಶ್ವಾನವಾಗಿ ಹುಟ್ಟಿ, ಯೋಧನಾಗಿ ನಿವೃತ್ತಿ’ ಎಂದು ಬರೆದು, ಕಾರ್ಯಕ್ರಮದ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.

    ಕೆ9 ಹೀರೋಗಳಿಗೆ ವಿದಾಯ ನೀಡಿದ್ದೇವೆ. ಜೆಸ್ಸಿ(ಜಿಎಸ್‍ಡಿ/ಎಫ್), ಲಕ್ಕಿ(ಲ್ಯಾಬ್/ಎಫ್) ಮತ್ತು ಲವ್ಲಿ(ಲ್ಯಾಬ್/ಎಫ್) ಅಧಿಕೃತವಾಗಿ ನಿವೃತ್ತಿ ಹೊಂದಿವೆ. ದೆಹಲಿ ಮೆಟ್ರೋ ವಿಭಾಗದಲ್ಲಿ ಈ ಶ್ವಾಗಳ ನಿಸ್ವಾರ್ಥ ಸೇವೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವುಗಳನ್ನು ನಾವು ನೆನಪಿಸಿಕೊಳ್ಳುತ್ತಿರುತ್ತೇವೆ ಎಂದು ಸಿಐಎಸ್‍ಎಫ್ ಟ್ವೀಟ್ ಮಾಡಿದೆ.

    ನಿವೃತ್ತಗೊಂಡ ಶ್ವಾನಗಳು ದೆಹಲಿ ಮೆಟ್ರೋ ವಿಭಾಗದ ಸಿಐಎಸ್‍ಎಫ್ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಹಾಗೆಯೇ ಪ್ಯಾರಾ ಮಿಲಿಟರಿ ಪಡೆಯಲ್ಲೂ ಸೇವಿಸಲ್ಲಿಸಿದ್ದವು. ಸತತ 8 ವರ್ಷಗಳ ಕಾಲ ಈ ಶ್ವಾನಗಳು ದೇಶಕ್ಕಾಗಿ ಸೇವೆ ಸಲ್ಲಿಸಿವೆ. ಹೀಗಾಗಿ ಸಮಾರಂಭದಲ್ಲಿ ಶ್ವಾನಗಳಿಗೆ ಸ್ಮರಣಿಕೆ, ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರೀತಿಯಿಂದ ಗೌರವಿಸಲಾಯಿತು.

    ಅದರಲ್ಲೂ ಇದೇ ಮೊದಲ ಬಾರಿಗೆ ಸೇನಾ ವಿಭಾಗವೊಂದು ಶ್ವಾನಗಳ ನಿವೃತ್ತಿಗಾಗಿ ಇಂತಹ ವಿಶೇಷ ಹಾಗೂ ಅದ್ಧೂರಿ ವಿದಾಯ ಕೂಟ ಕಾರ್ಯಕ್ರಮ ಏರ್ಪಡಿಸಿದ್ದು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಕಾರ್ಯಕ್ರಮದ ನಂತರ ಈ ಶ್ವಾನಗಳನ್ನು ಎನ್‍ಜಿಒ ಒಂದಕ್ಕೆ ಒಪ್ಪಿಸಲಾಯ್ತು.

  • ಪ್ರವಾಹದ ಮಧ್ಯೆ ಶ್ವಾನಗಳ ಮೂಕವೇದನೆ

    ಪ್ರವಾಹದ ಮಧ್ಯೆ ಶ್ವಾನಗಳ ಮೂಕವೇದನೆ

    ಗದಗ: ಎಡ ಬಿಡದೆ ಸುರಿಯುತ್ತಿರುವ ಮಳೆಗೆ ಜಿಲ್ಲೆಯಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ನವಲಗುಂದ ಪ್ರದೇಶದ ಬೆಣ್ಣೆಹಳ್ಳದ ಬಳಿ ಶ್ವಾನಗಳು ನೀರಿನ ಮಧ್ಯೆ ಸಿಲುಕಿಕೊಂಡು ರಕ್ಷಣೆಗಾಗಿ ಪರದಾಡುತ್ತಿದೆ.

    ಮಳೆಗೆ ಬೆಣ್ಣೆಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಸುತ್ತಮುತ್ತಲ ಜಮೀನುಗಳು ನಡುಗಡ್ಡೆಯಂತಾಗಿದೆ. ಈ ನಡುವೆ ಶ್ವಾನಗಳೆರಡು ಪ್ರವಾಹದಲ್ಲಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಮೊರೆ ಇಡುತ್ತಿವೆ. ಜಮೀನಿನಲ್ಲಿ ಉಂಟಾದ ಪ್ರವಾಹಕ್ಕೆ ಬುಧವಾರ ರಾತ್ರಿಯಿಂದಲೂ ಶ್ವಾನಗಳು ನೀರಿನ ಮಧ್ಯೆ ಸಿಲುಕಿಕೊಂಡಿದೆ. ಎತ್ತ ನೋಡಿದರು ನೀರೇ ಕಾಣುತ್ತಿರುವ ಕಾರಣಕ್ಕೆ ಎತ್ತರದ ಪ್ರದೇಶಲ್ಲಿ ನಿಂತು ಪ್ರಾಣ ರಕ್ಷಿಸಿಕೊಂಡಿದೆ. ಆದರೆ ಸುತ್ತಲು ತುಂಬಿರುವ ನೀರಿನಿಂದ ಸುರಕ್ಷಿತ ಜಾಗಕ್ಕೆ ಬರಲು ಆಗದೆ ಆಹಾರ ಸಿಗದೆ ರೋಸಿಹೋಗಿವೆ.

    ಶ್ವಾನಗಳ ಪರದಾಟ ನೋಡಿದ ಸ್ಥಳೀಯರು ಮಮ್ಮಲ ಮರುಗಿದ್ದು, ಪ್ರಾಣಿಗಳನ್ನು ರಕ್ಷಣೆ ಮಾಡಿ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶ್ವಾನಗಳು ಜೀವ ರಕ್ಷಣೆಗಾಗಿ ಪರದಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಪ್ರವಾಹ ಸೃಷ್ಟಿ ಮಾಡಿರುವ ಅವಾಂತರಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಎತ್ತ ನೋಡಿದರು ಬರೀ ನೀರು ಮಾತ್ರ ಕಾಣಸಿಗುತ್ತಿದೆ. ಅಲ್ಲದೆ ಅಲ್ಲಿನ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡಿದೆ. ಒಂದೆಡೆ ರಕ್ಷಣಾ ತಂಡಗಳು ಜನರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ, ಪ್ರವಾಹ ಸಂತ್ರಸ್ತರು ಆಹಾರ, ಆಶ್ರಯ ಸಿಗದೇ ತತ್ತರಿಸಿ ಹೋಗಿದ್ದಾರೆ. ಇನ್ನೊಂದೆಡೆ ಮೂಕ ಪ್ರಾಣಿಗಳು ಜೀವ ರಕ್ಷಣೆಗಾಗಿ ಪರದಾಡುತ್ತಿವೆ. ಸರಿಯಾಗಿ ಆಹಾರ ಸಿಗದೆ ಮೂಕರೋದನೆ ಪಡುತ್ತಿವೆ.