Tag: ಶ್ರೇಯಾಸ್ ಅಯ್ಯರ್

  • 33 ರನ್ ಅಂತರದಲ್ಲಿ 5 ವಿಕೆಟ್ ಪತನ- ಆರ್‌ಸಿಬಿಗೆ ಹೀನಾಯ ಸೋಲು

    33 ರನ್ ಅಂತರದಲ್ಲಿ 5 ವಿಕೆಟ್ ಪತನ- ಆರ್‌ಸಿಬಿಗೆ ಹೀನಾಯ ಸೋಲು

    – ಮೊದಲ ಸ್ಥಾನಕ್ಕೆ ಏರಿದ ಡೆಲ್ಲಿ
    – ಮೂರನೇ ಸ್ಥಾನದಲ್ಲಿ ಆರ್‌ಸಿಬಿ

    ದುಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಬೆಂಗಳೂರು ವಿರುದ್ಧ 59 ರನ್ ಗಳ ಗೆಲುವು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ಅಂಕಗಳೊಂದಿಗೆ ಪಟ್ಟಿಯಲ್ಲಿ ನಂ.1 ಪಟ್ಟಕ್ಕೇರಿದೆ.

    ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 197 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್.ಸಿ.ಬಿ ತಂಡದ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಐಪಿಎಲ್‍ನಲ್ಲಿ ಟೂರ್ನಿಯ ಪಂದ್ಯದಲ್ಲಿ 190 ಪ್ಲಸ್ ರನ್ ಗಳಿಸಿದ ಯಾವುದೇ ಪಂದ್ಯವನ್ನು ಇದುವರೆಗೂ ಸೋಲದೇ ಡೆಲ್ಲಿ ತಂಡ ತನ್ನ ಸಾಧನೆಯನ್ನು ಮುಂದುವರಿಸಿತು.

    94 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿ ಯಾವುದೇ ಹೋರಾಟ ನಡೆಸದೇ 33 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಪರಿಣಾಮ ಹೀನಾಯ ಸೋಲು ಕಾಣುವುದರೊಂದಿಗೆ -1.355 ರನ್ ರೇಟ್‍ನೊಂದಿಗೆ ಮೂರನೇ ಸ್ಥಾನದಲ್ಲಿದೆ.

    197 ರನ್ ಗಳ ಬೃಹತ್ ಮೊತ್ತದ ಗುರಿ ಪಡೆದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ಇನ್ನಿಂಗ್ಸ್ ನ 2ನೇ ಓವರಿನ ಅಂತಿಮ ಎಸೆತದಲ್ಲಿ 4 ರನ್ ಗಳಿಸಿದ್ದ ಪಡಿಕ್ಕಲ್ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಇದರ ಬೆನ್ನಲ್ಲೇ 13 ರನ್ ಗಳಿಸಿದ್ದ ಫಿಂಚ್, ಅಕ್ಷರ್ ಪಟೇಲ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಗೆ ನಡೆದರು. ಇದಕ್ಕೂ ಮುನ್ನ ಇನ್ನಿಂಗ್ಸ್ ನ ಮೊದಲ ಓವರ್ ಬೌಲ್ ಮಾಡಿದ ರಬಾಡಾ ಬೌಲಿಂಗ್‍ನಲ್ಲಿ ಫಿಂಚ್ ಜೀವದಾನ ಪಡೆದಿದ್ದರು ಮಿಂಚಲು ವಿಫಲರಾದರು.

    ಅಶ್ವಿನ್ ಮಂಕಡ್ ವಾರ್ನಿಂಗ್: ಈ ಹಿಂದೆ ಮಂಕಡ್ ಔಟ್ ಮಾಡಿ ಹೆಚ್ಚು ಚರ್ಚೆಗೆ ಕಾರಣವಾಗಿದ್ದ ಆರ್.ಅಶ್ವಿನ್ ಇಂದಿನ ಪಂದ್ಯದಲ್ಲಿ ಫಿಂಚ್ ವಾರ್ನಿಂಗ್ ನೀಡಿದ್ದರು. 3ನೇ ಓವರಿನ 4ನೇ ಎಸೆತದಲ್ಲಿ ನಾನ್‍ಸ್ಟ್ರೈಕ್‍ನಲ್ಲಿದ್ದ ಫಿಂಚ್, ಬೌಲರ್ ಬೌಲ್ ಮಾಡುವ ಮುನ್ನವೇ ಕ್ರಿಸ್ ಬಿಟ್ಟು ತೆರಳಿದ್ದರು. ಈ ಸಂದರ್ಭದಲ್ಲಿ ಫಿಂಚ್ ಅವರತ್ತ ನೋಡಿ ನಕ್ಕ ಅಶ್ವಿನ್ ಮಂಕಡ್ ವಾರ್ನಿಗ್ ನೀಡಿದರು.

    4ನೇ ಓವರ್ ಅಂತ್ಯದ ವೇಳೆಗೆ 27 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ಕೊಹ್ಲಿ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಇನ್ನಿಂಗ್ಸ್ ನಲ್ಲಿ ಎದುರಿಸಿದ ಮೊದಲ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಎಚ್ಚರಿಕೆ ಸಂದೇಶ ರವಾಸಿದರು. ಆದರೆ 9 ರನ್ ಗಳಿಸಿ ಆಡುತ್ತಿದ್ದ ಎಬಿ ಡಿಲಿಯರ್ಸ್, ಅನ್ರಿಚ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಆರ್.ಸಿ.ಬಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು 43 ರನ್ ಗಳಿಸಿತ್ತು.

    ಪ್ರಮುಖ ವಿಕೆಟ್‍ಗಳು ಉರುಳುತ್ತಿದಂತೆ ಕೊಹ್ಲಿ, ಮೋಯಿನ್ ಅಲಿ ನಿಧಾನಗತಿ ಬ್ಯಾಟಿಂಗ್‍ಗೆ ಮುಂದಾಗಿ ತಂಡದ ಮೊತ್ತವನ್ನು ಹೆಚ್ಚಿಸಲು ಮುಂದಾದರು, ಆದರೆ 12ನೇ ಓವರಿನಲ್ಲಿ ದಾಳಿಗಿಳಿದ ಅಕ್ಷರ್ ಪಟೇಲ್ 11 ರನ್ ಗಳಿಸಿದ್ದ ಅಲಿ ವಿಕೆಟ್ ಕಬಳಿಸಿ ಎದುರಾಳಿ ತಂಡಕ್ಕೆ ಹೊಡೆತ ನೀಡಿದರು. 14ನೇ ಓವರ್ ಎಸೆತ ರಬಾಡಾ ಬೌಲಿಂಗ್‍ನಲ್ಲಿ ಬಿರುಸಿನ ಆಟಕ್ಕೆ ಮುಂದಾದ ವಿರಾಟ್ ಕೊಹ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂದ್ಯದಲ್ಲಿ 39 ಎಸೆತ ಎದುರಿಸಿದ್ದ ಕೊಹ್ಲಿ 2 ಬೌಂಡರಿ, ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದ್ದರು.

    15ನೇ ಓವರ್ ಅಂತ್ಯಕ್ಕೆ ಆರ್.ಸಿ.ಬಿ ಗೆಲುವಿಗೆ 30 ಎಸೆತಗಳಲ್ಲಿ 92 ರನ್ ಗಳ ಅಗತ್ಯವಿತ್ತು. ಆದರೆ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆರ್‌ಸಿಬಿ ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಮೊಯಿನ್ ಅಲಿ 11 ರನ್, ಸುಂದರ್ 17 ರನ್, ದುಬೆ 11 ರನ್, ಉದಾನ 1 ರನ್, ಸಿರಾಜ್ 5 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. 12 ರನ್ ಗಳಿಸಿದ ಸೈನಿ, ಯಾವುದೇ ರನ್ ಗಳಿಸದೆ ಚಹರ್ ಅಜೇಯರಾಗಿ ಉಳಿದರು.

     

    ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ರಬಾಡಾ 4 ಓವರ್ ಗಳಲ್ಲಿ 24 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿಸಿದರು. ಉಳಿದಂತೆ ಅಕ್ಷರ್ ಪಟೇಲ್, ಅನ್ರಿಚ್ ತಲಾ 2, ಅಶ್ವಿನ್ 1 ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣರಾದರು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸ್ಟೋಯ್ನಿಸ್ 53 ರನ್, ಪೃಥ್ವಿ ಶಾ 42 ರನ್, ಶಿಖರ್ ಧವನ್ 32 ರನ್ ಗಳ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತ್ತು.

  • ಅಂತಿಮ 5 ಓವರ್ ಗಳಲ್ಲಿ 79 ರನ್, ಸ್ಟೋಯ್ನಿಸ್ ಫಿಫ್ಟಿ- ಕೊಹ್ಲಿ ಪಡೆಗೆ 197 ಗುರಿ

    ಅಂತಿಮ 5 ಓವರ್ ಗಳಲ್ಲಿ 79 ರನ್, ಸ್ಟೋಯ್ನಿಸ್ ಫಿಫ್ಟಿ- ಕೊಹ್ಲಿ ಪಡೆಗೆ 197 ಗುರಿ

    ದುಬೈ: ಐಪಿಎಲ್ 2020ರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಬೆಂಗಳೂರು ರಾಯಲ್ಸ್ ತಂಡದ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 197 ರನ್ ಗಳ ಸ್ಪಧಾತ್ಮಕ ಮೊತ್ತದ ಗುರಿಯನ್ನು ಪಡೆದುಕೊಂಡಿದೆ.

    ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಸ್ಫೋಟಕ ಆರಂಭ ನೀಡಿದರು. ಬೌಂಡರಿ, ಸಿಕ್ಸರ್ ಗಳೊಂದಿಗೆ ಬೌಲರ್ ಗಳನ್ನು ದಂಡಿಸಿದ ಈ ಜೋಡಿ ಪವರ್ ಪ್ಲೇ ಅಂತ್ಯಕ್ಕೆ ಬರೋಬ್ಬರಿ 63 ರನ್ ಗಳಿಸಿತ್ತು. ಇದರಲ್ಲಿ 5 ಬೌಂಡರಿ, 2 ಸಿಕ್ಸರ್ ಗಳೊಂದಿಗೆ ಪೃಥ್ವಿ ಶಾ 22 ಎಸೆತಗಳಲ್ಲಿ 42 ರನ್ ಗಳಿಸಿದ್ದರು. ಧವನ್ 14 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 20 ರನ್ ಕಾಣಿಕೆ ನೀಡಿದ್ದರು.

    ಮೊದಲ 6 ಓವರ್ ಗಳಲ್ಲಿ 63 ರನ್ ಜೊತೆಯಾಟ ನೀಡಿದ್ದ ಧವನ್-ಶಾ ಜೋಡಿ ಟೂರ್ನಿಯಲ್ಲಿ 2ನೇ ಅತ್ಯಧಿಕ ಪವರ್ ಪ್ಲೇ ಸ್ಕೋರ್ ದಾಖಲಿಸಿತು. ಇದಕ್ಕೂ ಮುನ್ನ ರಾಜಸ್ಥಾನ ತಂಡ ಪವರ್ ಪ್ಲೇನಲ್ಲಿ 69 ರನ್ ಗಳಿಸಿತ್ತು.

    ಬಿರುಸಿನ ಬ್ಯಾಟಿಂಗ್‍ನೊಂದಿಗೆ ಮುನ್ನುತ್ತಿದ್ದ ಪೃಥ್ವಿ ಶಾ ವೇಗಕ್ಕೆ ಸಿರಾಜ್ ಬ್ರೇಕ್ ಹಾಕಲು ಯಶಸ್ವಿಯಾದರು. 23 ಎಸೆತಗಳಲ್ಲಿ 42 ರನ್ ಗಳಿಸಿದ್ದ ಪೃಥ್ವಿ ಶಾ, ಸಿರಾಜ್ ಬೌಲಿಂಗ್‍ನಲ್ಲಿ ಎಬಿಡಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಡೆಲ್ಲಿ ನಾಯಕ ಅಯ್ಯರ್ ಧವನ್‍ರೊಂದಿಗೆ ಕೂಡಿ ತಾಳ್ಮೆಯ ಆಟದೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ತಂಡ 82 ರನ್ ಗಳಿಸಿದ್ದ ಸಂದರ್ಭದಲ್ಲಿ ಬೌಲಿಂಗ್ ದಾಳಿಗೆ ಇಳಿದ ಉದಾನ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 32 ರನ್ ಗಳಿಸಿದ್ದ ಧವನ್ ವಿಕೆಟ್ ಪಡೆದು ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟರು. 10 ಓವರ್ ಅಂತ್ಯದ ವೇಳೆಗೆ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತ್ತು.

    ಪಡಿಕ್ಕಲ್ ಸೂಪರ್ ಕ್ಯಾಚ್: ಡೆಲ್ಲಿ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಲು ನಿರ್ಧರಿಸಿ ಕ್ಯಾಪ್ಟನ್ ಕೊಹ್ಲಿ 12ನೇ ಓವರಿನಲ್ಲಿ ಮೊಯಿನ್ ಅಲಿಗೆ ಬೌಲಿಂಗ್ ನೀಡಿದ್ದರು. ಈ ಓವರಿನ 3ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿದ ಅಯ್ಯರ್‍ರನ್ನು ಬೌಂಡರಿ ಲೈನ್‍ನಲ್ಲಿ ಪಡಿಕ್ಕಲ್ ಅದ್ಭುತ ಕ್ಯಾಚ್ ಪಡೆದು ಔಟ್ ಮಾಡಿದರು.

    ಸ್ಟೋಯ್ನಿಸ್ ಫಿಫ್ಟಿ: ಬಳಿಕ ಬಂದ ಸ್ಟೋಯ್ನಿಸ್, ರಿಷಬ್ ಪಂತ್‍ಗೆ ಸಾಥ್ ನೀಡಿ ಬಿರುಸಿನ ಆಟಕ್ಕೆ ಮುಂದಾದರು. 14ನೇ ಓವರ್ ಅಂತ್ಯಕ್ಕೆ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತ್ತು. 15ನೇ ಓವರ್ ನಲ್ಲಿ ದಾಳಿಗಿಳಿದ ಸೈನಿ ಬೌಲಿಂಗ್‍ನಲ್ಲಿ ಸ್ಟೋಯ್ನಿಸ್ ಲಾಗ್‍ಆನ್‍ನಲ್ಲಿ ಕ್ಯಾಚ್ ನೀಡಿದ್ದರು. ಆದರೆ ಚಹಲ್, ಸ್ಟೋಯ್ನಿಸ್‍ಗೆ ಜೀವದಾನ ನೀಡಿದರು. ಸ್ಲಾಗ್ ಓವರ್ ನಲ್ಲಿ ರನ್ ನೀಡುವುದನ್ನು ನಿಯಂತ್ರಿಸಲು ಮತ್ತೆ ವಿಫಲವಾದ ಆರ್ ಸಿಬಿ ಬೌಲರ್ ಗಳು ದುಬಾರಿಯಾಗಿ ಪರಿಣಮಿಸಿದರು.

    ಮೊದಲ ಎಸೆತದಿಂದಲೂ ಚೆಂಡನ್ನು ಬೌಂಡರಿಗೆ ಅಟ್ಟಬೇಕು ಎಂದು ಪವರ್ ಫುಲ್ ಹೊಡೆತಗಳಿಗೆ ಮುಂದಾದ ಸ್ಟೋಯ್ನಿಸ್ 3 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 25 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದರು. 18 ಓವರ್ ಗಳ ಅಂತ್ಯಕ್ಕೆ ಡೆಲ್ಲಿ 171 ರನ್ ಪೇರಿಸಿತ್ತು. ಈ ಹಂತದಲ್ಲಿ ಭಾರೀ ಹೊಡೆತಕ್ಕೆ ಮುಂದಾದ ಪಂತ್, ಸಿರಾಜ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಂತಿಮ 5 ಓವರ್ ಗಳಲ್ಲಿ ಡೆಲ್ಲಿ ತಂಡದ ಆಟಗಾರರು 79 ರನ್ ಗಳಿಸಿ ಆರ್‍ಸಿಬಿಗೆ ಭಾರೀ ಮೊತ್ತದ ಗುರಿಯನ್ನೇ ನೀಡಿದರು. ಸ್ಟೋಯ್ನಿಸ್ 53 ರನ್, ಹೆಟ್ಮಾಯರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು.

    ಆರ್.ಸಿ.ಬಿ ಪರ ಸಿರಾಜ್ ಮೂರು ವಿಕೆಟ್ ಪಡೆದರೆ, ಉದಾನ ಮತ್ತು ಅಲಿ 1 ವಿಕೆಟ್ ಪಡೆದರು. ಸೈನಿ 3 ಓವರ್ ಬೌಲ್ ಮಾಡಿ 48 ರನ್ ಬಿಟ್ಟುಕೊಡುವುದರೊಂದಿಗೆ ದುಬಾರಿಯಾಗಿ ಪರಿಣಮಿಸಿದರು.

    ಪಂದ್ಯದ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆಯಿಂದ ಅಮಿತ್ ಮಿಶ್ರಾ ಅಲಭ್ಯರಾದರು. ಈ ಹಿನ್ನೆಲೆಯಲ್ಲಿ ರವಿಚಂದ್ರನ್ ಅಶ್ವಿನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇತ್ತ ಪಂದ್ಯದಲ್ಲಿ ಡೆಲ್ಲಿ ತಂಡದ ಹೊಸ ಜರ್ಸಿಯೊಂದಿಗೆ ಕಣಕ್ಕೆ ಇಳಿದಿತ್ತು.

  • ವಿಲಿಯಮ್ಸನ್ ಬೆನ್ನಲ್ಲೇ ನಾಯಿಗೆ ಕ್ಯಾಚ್ ಟ್ರೈನಿಂಗ್ ಕೊಟ್ಟ ಅಯ್ಯರ್

    ವಿಲಿಯಮ್ಸನ್ ಬೆನ್ನಲ್ಲೇ ನಾಯಿಗೆ ಕ್ಯಾಚ್ ಟ್ರೈನಿಂಗ್ ಕೊಟ್ಟ ಅಯ್ಯರ್

    ನವದೆಹಲಿ: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೆನ್ನಲ್ಲೇ ಟೀಂ ಇಂಡಿಯಾ ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರು ತಮ್ಮ ಸಾಕು ನಾಯಿಗೆ ಕ್ಯಾಚ್ ಹಿಡಿಯುವುದನ್ನು ಕಲಿಸಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಕ್ರೀಡಾಪಟುಗಳು, ಕ್ರಿಕೆಟಿಗರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರಲ್ಲಿ ಕೆಲವರು ತಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದರಲ್ಲಿ ನಿರತರಾಗಿದ್ದರೆ. ಇನ್ನು ಕೆಲವರು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋ, ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    https://www.instagram.com/p/B-O4UB-nQ87/

    ಕೇನ್ ವಿಲಿಯಮ್ಸನ್ ಅವರು ಇತ್ತೀಚೆಗೆ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ನಾಯಿ ಸ್ಯಾಂಡಿ ಜೊತೆ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ, ವಿಲಿಯಮ್ಸನ್ ಬಾಲ್ ಅನ್ನು ತಮ್ಮ ನಾಯಿ ಸ್ಯಾಂಡಿ ಕಡೆಗೆ ಹೊಡೆಯುತ್ತಾರೆ. ಆಗ ಸ್ಯಾಂಡಿ ಕ್ಯಾಚ್ ಹಿಡಿಯುತ್ತದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೂಡ ತಮ್ಮ ನಾಯಿ ಬ್ರೆಟ್ಟಿಯೊಂದಿಗೆ ಕ್ರಿಕೆಟ್ ಆಡಿದ್ದಾರೆ. ಮೊದಲ ಪ್ರಯತ್ನದಲ್ಲಿ ಬ್ರೆಟ್ಟಿ ಕ್ಯಾಚ್ ಮಿಸ್ ಮಾಡಿ, ನಂತರ ಹಿಡಿಯುತ್ತದೆ. ಈ ವಿಡಿಯೋ ಅಯ್ಯರ್ ತಮ್ಮ ಟ್ವಿಟ್ಟರ್ ಹಾಗೂ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ‘ಕೇನ್ ವಿಲಿಯಮ್ಸನ್ ಅವರ ನಾಯಿ ಸ್ಯಾಂಡಿ ಬಾಲ್ ಹಿಡಿದಿದ್ದನ್ನು ನೋಡಿದ ನಂತರ ಬೆಟ್ಟಿ ಕೂಡ ಕ್ಯಾಚ್ ಹಿಡಿಯಲು ಬಯಸಿತ್ತು. ಸ್ವಲ್ಪ ಸಮಯ ತೆಗೆದುಕೊಂಡರೂ ಮೊದಲ ಕ್ಯಾಚ್ ಬಿಟ್ಟು, ಎರಡನೇ ಕ್ಯಾಚ್ ಅನ್ನು ಹಿಡಿಯಿತು ಎಂದು ಶ್ರೇಯಸ್ ಅಯ್ಯರ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.