Tag: ಶ್ರೀ ಶಿವಕುಮಾರ ಸ್ವಾಮೀಜಿ

  • ಸಿದ್ದಗಂಗಾ ಮಠಕ್ಕೆ ಪ್ರವೇಶಿಸುವ 2 ಗೇಟ್‍ ಬಂದ್

    ಸಿದ್ದಗಂಗಾ ಮಠಕ್ಕೆ ಪ್ರವೇಶಿಸುವ 2 ಗೇಟ್‍ ಬಂದ್

    ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಸದ್ಯ ಸ್ವಲ್ಪ ಚೇತರಿಕೆ ಕಂಡು ಬಂದಿದ್ದು, ಆದರೂ ಮುಂಜಾಗ್ರತಾ ಕ್ರಮವಾಗಿ ಮಠಕ್ಕೆ ಪ್ರವೇಶಿಸುವ ಎರಡೂ ಗೇಟ್ ಗಳನ್ನೂ ಬಂದ್ ಮಾಡಲಾಗಿದೆ.

    ಎರಡು ಗೇಟ್ ಗಳ ಬಳಿಯೂ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಗಣ್ಯರು, ಮಠದ ಸಿಬ್ಬಂದಿ, ಮಠದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಮಾಡಿಕೊಡಲಾಗಿದೆ. ಸಾರ್ವಜನಿಕರು, ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

    ಶ್ರೀಗಳ ಆರೋಗ್ಯದ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಮಠದಲ್ಲಿ ವಿದ್ಯಾರ್ಥಿಗಳು ಶ್ರೀಗಳ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಮಠಕ್ಕೆ ಸಾವಿರಾರು ಮಂದಿ ಭಕ್ತರು ಹಾಗೂ ಗಣ್ಯರು ಇಂದು ಬೆಳಗ್ಗಿನಿಂದಲೇ ಆಗಮಿಸುತ್ತಿದ್ದಾರೆ.

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೃಹ ಮಂತ್ರಿ ಎಂಬಿ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಇಂದಿನ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮಠದತ್ತ ತೆರಳಿ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.


    ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಇಂದು, ಹೊಸಮಠದ ಕಿರಿಯ ಶ್ರೀಗಳ ಕಚೇರಿಯಲ್ಲಿ ಎಸ್ಪಿ, ಡಿಸಿ, ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಸಭೆಯಲ್ಲಿ ಮಠದ ಎಲ್ಲಾ ಗೇಟ್ ಗಳಲ್ಲೂ ಹೈ ಸೆಕ್ಯೂರಿಟಿ ನೀಡುವಂತೆ ಸೂಚನೆ ನೀಡಿದ್ದಾರೆ. ಎಲ್ಲಾ ವಿಐಪಿ ವಾಹನಗಳಿಗೂ ಗೇಟ್‍ನ ಹೊರಗಡೆಯೇ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಬೇಕು. ಈಗಿನಿಂದಲೇ ಸಾರ್ವಜನಿಕರ ಪ್ರವೇಶ ಬಂದ್ ಮಾಡಿ ಮಠದ ಎಲ್ಲಾ ಗೇಟ್ ಗಳಲ್ಲೂ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

    ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಶ್ರೀಗಳಿಗೆ ನಿಶ್ಯಕ್ತಿ ತುಂಬಾ ಕಡಿಮೆ ಇದ್ದು, ಕಳೆದ ದಿನ ಆಯುರ್ವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಮಠಕ್ಕೆ ನಿಯೋಜನೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ- ಒಂದು ವಾರ ಭಕ್ತರಿಗೆ ದರ್ಶನವಿಲ್ಲ

    ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ- ಒಂದು ವಾರ ಭಕ್ತರಿಗೆ ದರ್ಶನವಿಲ್ಲ

    ತುಮಕೂರು: ಬೆಂಗಳೂರಿನ ಕೆಂಗೇರಿಯಲ್ಲಿರೋ ಬಿಜಿಎಸ್ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್ ಆದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

    ಎಂದಿನಂತೆ ಹಳೇ ಮಠದ ಕೊಠಡಿಯಲ್ಲಿ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ನಸುಕಿನ ಜಾವವೇ ಎದ್ದಿರುವ ಶ್ರೀಗಳು, ಇಷ್ಟಲಿಂಗ ಪೂಜೆಯಲ್ಲಿ ನಿರತರಾಗಿದ್ದಾರೆ.

    ಇನ್ನು ಮೂರ್ನಾಲ್ಕು ದಿನ ಶ್ರೀಮಠದಲ್ಲೇ ನಡೆದಾಡುವ ದೇವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಶ್ರೀಗಳ ವಿಶ್ರಾಂತಿ ಕೊಠಡಿಯಲ್ಲಿ ಎಲ್ಲಾ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ವೈದ್ಯರ ತಂಡ ಶ್ರೀಗಳ ಆರೋಗ್ಯದ ಬಗ್ಗೆ ನಿಗಾವಹಿಸಲಿದ್ದಾರೆ. ಹೀಗಾಗಿ ಒಂದು ವಾರಗಳ ಕಾಲ ಶ್ರೀಗಳ ದರ್ಶನ ಲಭ್ಯವಿರುವುದಿಲ್ಲ. ಭಕ್ತರು ಸಹಕರಿಸಬೇಕಾಗಿ ವೈದ್ಯರು ಮನವಿ ಮಾಡಿದ್ದಾರೆ.

    ಪಿತ್ತಕೋಶಕ್ಕೆ ಸ್ಟಂಟ್ ಅಳವಡಿಸಿ ಆರು ತಿಂಗಳು ಕಳೆದ ಹಿನ್ನೆಲೆಯಲ್ಲಿ ಶತಾಯುಷಿ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು, ಜನರಲ್ ಚೆಕ್ ಅಪ್ ಗಾಗಿ ಬಿಜಿಎಸ್ ಆಸ್ಪತ್ರೆಗೆ ನಿನ್ನೆ ಆಗಮಿಸಿದ್ದರು. ಮುಂಜಾನೆ ಆಗಮಿಸಿದ ಶ್ರೀಗಳು ಕಾರಿನಿಂದ ಇಳಿದು ವ್ಹೀಲ್ ಚೇರ್ ನಂತಹ ಸೌಲಭ್ಯ ನಿರಾಕರಿಸಿ ನಡೆದುಕೊಂಡೇ ಆಸ್ಪತ್ರೆ ಒಳಗೆ ಹೋಗಿದ್ದರು.

    ಜನವರಿ 27 ರಂದು ಬಿಜಿಎಸ್‍ಗೆ ದಾಖಲಾಗಿದ್ದ ಶ್ರೀಗಳಿಗೆ ಮೂರು ಸ್ಟಂಟ್ ಅಳವಡಿಸಲಾಗಿತ್ತು. ಅದಕ್ಕೂ ಮುನ್ನ 5 ಸ್ಟಂಟ್ ಸೇರಿ ಒಟ್ಟು 8 ಸ್ಟಂಟ್ ಅಳವಡಿಸಲಾಗಿದೆ. ಸ್ಟಂಟ್ ಅಳವಡಿಸಿದ ಆರು ತಿಂಗಳಾದ ಕಾರಣ ಜನರಲ್ ಚೆಕ್ ಅಪ್ ಗಾಗಿ ಶ್ರೀಗಳು ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿದ್ದು, ಡಾ. ರವೀಂದ್ರ ನೇತೃತ್ವದಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದರು.

  • ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಬಹುದು ಎಂಬ ಸುದ್ದಿಯನ್ನು ಹೇಳಿದ್ದೆವು. ಆದರೆ ಇದೀಗ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ.

    ಶ್ರೀಗಳಿಗೆ ಕಫ, ಜ್ವರ ಕಾಣಿಸಿಕೊಂಡು ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ ಶಿವಪೂಜೆ ಮುಗಿದ ಬಳಿಕ ಸ್ವಾಮೀಜಿಯವರ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದಿದೆ. ತಕ್ಷಣ ನಸುಕಿನ ಜಾವ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬರಲಾಗಿದ್ದು, ಸದ್ಯ ಶ್ರೀಗಳಿಗೆ ನುರಿತ ವೈದ್ಯರ ತಂಡವೊಂದು ಚಿಕಿತ್ಸೆ ನೀಡುತ್ತಿದೆ.

    ಭಾರತ ರತ್ನ ಪ್ರಶಸ್ತಿಗೆ ಮನವಿ:
    ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದರು.

    ಮನವಿಯಲ್ಲೇನಿದೆ?:
    ಶತಮಾನಗಳಷ್ಟು ಹಳೆಯದಾದ ತುಮಕೂರಿನ ಸಿದ್ದಗಂಗಾ ಮಠ ಕಳೆದ 600 ವರ್ಷಗಳಿಂದ ಶಿಕ್ಷಣ, ಅನ್ನ ದಾಸೋಹ ಮಾಡುತ್ತಾ ಬಂದಿದೆ. ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾಗಿರುವ ಶತಾಯುಷಿ, ಶಿಕ್ಷಣ, ಅನ್ನದಾಸೋಹದ ಪ್ರಮುಖ ರೂವಾರಿಯಾಗಿರೋ ಸಿದ್ದಗಂಗಾ ಶ್ರೀಗಳ ಕೊಡುಗೆ ಅನನ್ಯವಾಗಿದೆ. ಸ್ವಾಮೀಜಿಯವರು ಈಗ 110 ವರ್ಷಗಳನ್ನು ಪೂರೈಸಿದ್ದಾರೆ. ಎಲ್ಲ ಸಮುದಾಯದ ಕಡುಬಡವ ಮಕ್ಕಳಿಗೆ ಅನ್ನ ದಾಸೋಹ ಮಾಡುವ ಮೂಲಕ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ಮಾಡಿದ ಕೀರ್ತಿ ಸ್ವಾಮೀಜಿಗೆ ಸಲ್ಲುತ್ತದೆ. ಇದು ಅವರ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂದಿಗೂ ಸಿದ್ದಗಂಗಾ ಮಠ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ, ಶಿಕ್ಷಣ ಜೊತೆಗೆ ಉಚಿತ ಪ್ರಸಾದವನ್ನು ನೀಡುತ್ತಾ ಬಂದಿದೆ. ದೇಶದಲ್ಲೇ ಅತ್ಯುನ್ನತ ಶಿಕ್ಷಣ ಸಂಸ್ಥೆ ಎಂದು ಖ್ಯಾತಿಯಾಗಿದೆ. ಇದರ ರೂವಾರಿಯಾಗಿರುವ ಡಾ. ಶಿವಕುಮಾರ ಸ್ವಾಮೀಜಿ ಅವರ ಅನನ್ಯ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನಕ್ಕೆ ಶಿಫಾರಸು ಮಾಡಬೇಕೆಂದು ರಾಜ್ಯದ ಪರವಾಗಿ ನಾನು ವಿನಂತಿಸಿಕೊಳ್ಳುತ್ತಿದ್ದೆನೆ ಎಂದು ಪತ್ರದಲ್ಲಿ ಸಿಎಂ ಉಲ್ಲೇಖಿಸಿದ್ದರು.