Tag: ಶ್ರೀ ಕೃಷ್ಣ ಮಠ

  • ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

    ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

    ಉಡುಪಿ: ಇಲ್ಲಿನ ಶ್ರೀ ಕೃಷ್ಣ ಮಠದಲ್ಲಿ (Krishna Matha) ಒಂದು ತಿಂಗಳ ಕಾಲ ನಡೆದ ಶ್ರೀ ಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭದಲ್ಲಿ ಕೇರಳ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಭಾಗವಹಿಸಿದರು. ಎರಡು ದಿನದ ಉಡುಪಿ (Udupi) ಪ್ರವಾಸ ಮಾಡಿದ ಆರಿಫ್ ಮೊಹಮ್ಮದ್ ಖಾನ್ ಕೊಲ್ಲೂರು ಮೂಕಾಂಬಿಕೆ ಹಾಗೂ ಉಡುಪಿಯ ಶ್ರೀ ಕೃಷ್ಣದೇವರ ದರ್ಶನ ಪಡೆದರು.

    ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಆರಿಫ್ ಮೊಹಮ್ಮದ್ ಖಾನ್ ಅವರನ್ನು ಸನ್ಮಾನಿಸಿದರು. ಈ ವೇಳೆ ಶ್ರೀ ಕೃಷ್ಣ ಮಠದ ಇತಿಹಾಸ ಪುರಾಣಗಳ ಬಗ್ಗೆ ಆರಿಫ್ ಮೊಹಮ್ಮದ್ ಖಾನ್ ಸ್ವಾಮೀಜಿಯವರಿಂದ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆ| ಎಲ್ಲಾ ಕನ್ನಡಿಗರಿಗೆ ನಮಸ್ಕಾರ : ಸಮಿತ್ ದ್ರಾವಿಡ್ ಮೊದಲ ಪ್ರತಿಕ್ರಿಯೆ

    ಬಳಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಧರ್ಮಗಳು ಬೇರೆ ಆಗಿರಬಹುದು. ಆದರೆ ನಾವೆಲ್ಲರೂ ಭಾರತೀಯರು ಮತ್ತು ಒಂದೇ ಸಂಸ್ಕೃತಿಯವರು. ಭಿನ್ನ-ಭಿನ್ನ ಹೆಸರಿನಲ್ಲಿ ದೇವರನ್ನು ಪೂಜಿಸಿದರೂ ಕೊನೆಗೆ ನಮ್ಮೆಲ್ಲರ ಪ್ರಾರ್ಥನೆ ಕೇಶವನಿಗೆ ಸಲ್ಲುವುದು. ವಿವಿಧತೆಯಲ್ಲಿ ಏಕತೆ ನಮ್ಮ ಸಂಸ್ಕೃತಿಯ ಆತ್ಮ ಎಂದು ಬಣ್ಣಿಸಿದರು. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ – ಹಾರಂಗಿ ಜಲಾಶಯದಿಂದ 11,800 ಕ್ಯುಸೆಕ್ ನೀರು ಹೊರಕ್ಕೆ

  • ಉಡುಪಿ ಕೃಷ್ಣ ಮಠದಲ್ಲಿ ಹಗಲು ಉತ್ಸವ – ಅಷ್ಟಮಠಾಧೀಶರು ಭಾಗಿ

    ಉಡುಪಿ ಕೃಷ್ಣ ಮಠದಲ್ಲಿ ಹಗಲು ಉತ್ಸವ – ಅಷ್ಟಮಠಾಧೀಶರು ಭಾಗಿ

    ಉಡುಪಿ: ಅಷ್ಟಮಠಗಳ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಮಠದ ವಾರ್ಷಿಕೋತ್ಸವ ನಡೆಯಿತು. ಕೃಷ್ಣನ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಹಗಲಿನಲ್ಲಿ ಒಂದು ಉತ್ಸವವನ್ನು ಮಾಡಿದ್ದರು. ಆ ಪರಂಪರೆ ಇಂದಿಗೂ ಮುಂದುವರೆದಿದ್ದು, ಕೊರೊನಾ ಸಾಂಕ್ರಾಮಿಕದ ನಡುವೆ ಸಾಂಪ್ರದಾಯಕ್ಕೆ ಚ್ಯುತಿ ಬರದಂತೆ ಉತ್ಸವ ನಡೆಸಲಾಯಿತು.

    ದೇವಾಲಯಗಳ ನಗರಿ ಉಡುಪಿಯಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ ನಡೆಯಿತು. ಕೃಷ್ಣ ಮುಖ್ಯಪ್ರಾಣ ದೇವರನ್ನು ರಥದಲ್ಲಿಟ್ಟು ಸಾಂಪ್ರದಾಯಿಕ ಹಗಲು ಉತ್ಸವ ಮಾಡಲಾಯಿತು. 8 ಶತಮಾನದ ಹಿಂದೆ ಆಚಾರ್ಯ ಮಧ್ವರು ಉಡುಪಿ ಕೃಷ್ಣ ಮಠವನ್ನು ಸ್ಥಾಪನೆ ಮಾಡಿದರು. ಸಂಕ್ರಾಂತಿಯಂದು ಕಡೆಗೋಲು ಕೃಷ್ಣನ ಪ್ರತಿಷ್ಠಾಪನೆ ಮಾಡಿದ ಮಾರನೆ ದಿನ ಬೆಳಗ್ಗೆ ಹಗಲು ಉತ್ಸವ ನಡೆಸಿದ್ದಾರೆ. ಈ ಪ್ರತೀತಿ ಇಂದಿಗೂ ನಡೆದುಕೊಂಡು ಬರುತ್ತಿದೆ. ಇದನ್ನೂ ಓದಿ: ನೇತಾಜಿ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭ

    ಕೆಲ ಭಕ್ತರಿಂದ ನಿಯಮ ಉಲ್ಲಂಘನೆ
    ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ವ್ಯಾಪಿಸಿರುವ ಕಾರಣ ಉತ್ಸವದಲ್ಲಿ ಸಾವಿರಾರು ಜನ ಭಾಗಿಯಾಗುತ್ತಿಲ್ಲ. ಉಡುಪಿ ಜಿಲ್ಲಾಡಳಿತ ಸಾಂಪ್ರದಾಯಿಕ ಆಚರಣೆಗೆ ಅವಕಾಶ ಕೊಟ್ಟಿರುವುದರಿಂದ ಇಂದು 500 ರಿಂದ 600 ಜನ ರಥೋತ್ಸವದಲ್ಲಿ ಭಾಗಿಯಾದರು.  ಭಾಗವಹಿಸಿದ್ದ ಬಹುತೇಕ ಜನ ಮಾಸ್ಕ್‌ ಧರಿಸಿದ್ದರೂ ಕೆಲವರು ಮಾಸ್ಕ್‌ ಧರಿಸದೇ ಕೋವಿಡ್‌ ನಿಯಮವನ್ನು ಉಲ್ಲಂಘಿಸಿದ್ದರು.

    ರಥ ಎಳೆಯುವ ಸಂದರ್ಭ ಮತ್ತು ರಥದಿಂದ ಪ್ರಸಾದ ಸ್ವೀಕರಿಸುವ ಸಂದರ್ಭ ಭಕ್ತರು ಕೊರೊನಾ ನಿಯಮ ಪಾಲಿಸಿಲ್ಲ. ಪ್ರತಿ ವರ್ಷ ನಡೆಯುವ ಹಗಲು ಉತ್ಸವದಲ್ಲಿ 10 ರಿಂದ 20 ಸಾವಿರ ಜನ ಪಾಲ್ಗೊಳ್ಳುತ್ತಾರೆ. ಅದ್ಧೂರಿ ಅವಕಾಶ ಇರದ ಕಾರಣ ಕೆಲ ಭಕ್ತರಿಗೆ ನೋವಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಮಠದ ಭಕ್ತ ರವಿಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ರಾಜಭವನದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದ ರಾಜ್ಯಪಾಲರು

    ಅಷ್ಟಮಠಗಳ ಯತಿಗಳು ಉತ್ಸವದಲ್ಲಿ ಭಾಗಿಯಾಗಿ ದೇವರಿಗೆ ಪೂಜೆ ಸಲ್ಲಿಸಿದರು. ಕೃಷ್ಣನ ಪ್ರಸಾದವನ್ನು ತೇರಿನಿಂದಲೇ ವಿತರಣೆ ಮಾಡಿದರು. ಎರಡು ವರ್ಷಗಳ ಕಾಲ ಉಡುಪಿ ಕೃಷ್ಣನ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠಕ್ಕಿತ್ತು. ಜನವರಿ 18 ರಿಂದ ಮುಂದಿನ ಎರಡು ವರ್ಷ ಅಧಿಕಾರ ಕೃಷ್ಣಾಪುರ ಮಠಕ್ಕೆ ಹಸ್ತಾಂತರ ಆಗಲಿದೆ.

  • ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್

    ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್

    ಉಡುಪಿ: ಶ್ರೀಕೃಷ್ಣ ಮಠಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿ ಕಡೆಗೋಲು ಶ್ರೀಕೃಷ್ಣನ ವಿಶೇಷ ದರ್ಶನ ಪಡೆದರು.

    ಕರಾವಳಿ ಪ್ರವಾಸದಲ್ಲಿರುವ ರಾಜ್ಯಪಾಲರು ಇಂದು ಉಡುಪಿ ಕೃಷ್ಣ ಮಠಕ್ಕೆ ಆಗಮಿಸಿದ್ದರು. ಈ ವೇಳೆ ಮಠದಲ್ಲೇ ಸ್ವಲ್ಪ ಸಮಯ ಸ್ವಾಮೀಜಿ ಹಾಗೂ ರಾಜ್ಯಪಾಲರು ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಪರ್ಯಾಯ ಅದಮಾರು ಮಠದಿಂದ ಗೌರವಿಸಲಾಯಿತು. ರಾಜ್ಯಪಾಲರು ಸ್ವಾಮೀಜಿಯನ್ನು ಸನ್ಮಾನಿಸಿದರು.

    ಈ ಸಂದರ್ಭದಲ್ಲಿ ಪರ್ಯಾಯ ಈಶಪ್ರೀಯ ತೀರ್ಥಶ್ರೀಪಾದರ ಭೇಟಿಯಾದರು. ಶಾಸಕ ರಘುಪತಿ ಭಟ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

    ನಂತರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ ರಾಜ್ಯಪಾಲರು ಮೂಕಾಂಬಿಕೆಯ ದರ್ಶನ ಪಡೆದರು. ದೇಗುಲದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಪೋಷಕರು 2 ಡೋಸ್ ಲಸಿಕೆ ಪಡೆಯದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ: ಅಶೋಕ್

    ಕೊಲ್ಲೂರು ಮೂಕಾಂಬಿಕಾ ದೇವಳ ವತಿಯಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಸಲಾಯಿತು. ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಲ್ಲಿಂದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ರಾಜ್ಯಪಾಲರು ತೆರಳಿದರು. ಇದನ್ನೂ ಓದಿ: ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ

  • ನಾಳೆಯಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ- ತೀರ್ಥ, ಪ್ರಸಾದ ಇಲ್ಲ

    ನಾಳೆಯಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ- ತೀರ್ಥ, ಪ್ರಸಾದ ಇಲ್ಲ

    ಉಡುಪಿ: ಜುಲೈ 11 ಭಾನುವಾರ ಮಧ್ಯಾಹ್ನದಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪರ್ಯಾಯ ಅದಮಾರು ಮಠ ಹೇಳಿದೆ.

    ವಾರದ ಹಿಂದೆ ರಾಜ್ಯ ಸರ್ಕಾರ ದೇವಸ್ಥಾನಗಳನ್ನು ತೆರೆಯಲು ಅವಕಾಶ ಕಲ್ಪಿಸಿತ್ತು. ರಾಜ್ಯಾದ್ಯಂತ ಮಠ, ಮಂದಿರಗಳು ತೆರೆದರೂ, ಉಡುಪಿ ಶ್ರೀ ಕೃಷ್ಣ ಮಠ ತೆರೆದಿರಲಿಲ್ಲ. ಕೊರೊನಾ ಹತೋಟಿಗೆ ಬಂದ ನಂತರ ಮಠದಲ್ಲಿ ಅವಕಾಶ ಕಲ್ಪಿಸುವುದಾಗಿ ಹೇಳಿತ್ತು.

    ಇದೀಗ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಇದೇ ಭಾನುವಾರದಿಂದ ಭಕ್ತರಿಗೆ ಮಠ ಪ್ರವೇಶಿಸಲು ಅವಕಾಶ ನೀಡಿದ್ದಾರೆ. ಮಧ್ಯಾಹ್ನದ ಪೂಜೆಯ ನಂತರ ಉಡುಪಿ ಶ್ರೀಕೃಷ್ಣನ ದರ್ಶನ ಮಾಡಬಹುದು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಠದ ಒಳಗೆ ಬರುವ ಅವಕಾಶವನ್ನು ನೀಡಲಾಗಿದೆ.

    ಉಡುಪಿ ಶ್ರೀಕೃಷ್ಣ ಮಠದ ಒಳಗೆ ಪ್ರವೇಶಿಸುವ ಸರತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿ ಮಠದೊಳಗೆ ಬರಬೇಕು ಎಂದು ಮಠ ಹೇಳಿದೆ. ತೀರ್ಥ ಪ್ರಸಾದದ ಅವಕಾಶ ಇಲ್ಲ. ದೇವರ ದರ್ಶನಕ್ಕೆ ಮಾತ್ರ ವ್ಯವಸ್ಥೆ ಕಲ್ಪಿಸಲಾಗಿದೆ.

  • 2 ದಿನ ಸಿಎಂ ಉಡುಪಿ ಪ್ರವಾಸ- ಯಾವೆಲ್ಲ ಸ್ಥಳಕ್ಕೆ ಭೇಟಿ?

    2 ದಿನ ಸಿಎಂ ಉಡುಪಿ ಪ್ರವಾಸ- ಯಾವೆಲ್ಲ ಸ್ಥಳಕ್ಕೆ ಭೇಟಿ?

    ಉಡುಪಿ: ಬಿಜೆಪಿಯ ಸಚಿವಾಕಾಂಕ್ಷಿಗಳ ಅಸಮಾದನ ಮತ್ತು ಸಿಡಿ ಗದ್ದಲದ ನಡುವೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎರಡು ದಿನ ಕರಾವಳಿಯ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

    ಮುಖ್ಯಮಂತ್ರಿಯಾದ ನಂತರ ಎರಡನೇ ಬಾರಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಿಎಸ್‍ವೈ ಭೇಟಿ ನೀಡುತ್ತಿದ್ದು, ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಠದ ಕಾರ್ಯಕ್ರಮ ನಂತರ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

    ಕರಂಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜೊತೆ ಸಿಎಂ ಬಿಎಸ್‍ವೈ ಆಗಮಿಸಲಿದ್ದಾರೆ. ಕಾಪು ತಾಲೂಕಿನ ಹೆಜಮಾಡಿ ಬಂದರಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿ ಮಧ್ಯಾಹ್ನ ಕುಂದಾಪುರ ತಾಲೂಕು ಕುಂಭಾಸಿ ಆನೆಗುಡ್ಡೆ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

    ಸಿಎಂ ಆದ ನಂತರ ಬಿಎಸ್ ಯಡಿಯೂರಪ್ಪ ಅವರದ್ದು ಇದು ಉಡುಪಿಗೆ ನಾಲ್ಕನೇ ಭೇಟಿ. ಉಡುಪಿ ಜಿಲ್ಲೆಯ ಐದು ಬಿಜೆಪಿ ಶಾಸಕರು, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

  • ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

    ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

    – ಶ್ರೀಗಳ ಚಾತುರ್ಮಾಸ್ಯ ಸಮಾಪ್ತಿ

    ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ವೃತಾಚರಣೆ ಅಂತ್ಯಗೊಂಡಿದೆ. ಪೇಜಾವರ ಮಠದ ಶಾಖಾ ಮಠವಾಗಿರುವ ನೀಲಾವರದಲ್ಲಿ ಈ ಬಾರಿ ಶ್ರೀಗಳು ವೃತಾಚರಣೆ ಕೈಗೊಂಡಿದ್ದರು. ಎರಡು ತಿಂಗಳುಗಳ ಕಾಲ ಪೂಜೆ ಪುನಸ್ಕಾರ, ವ್ರತಾಚರಣೆ ಜೊತೆ ಗೋವುಗಳ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.

    ಚಾತುರ್ಮಾಸ್ಯದ ಕೊನೆಯ ಪೂಜೆಯನ್ನು ಶ್ರೀಗಳು ನೆರವೇರಿಸಿದದರು. ಆರಂಭದಲ್ಲಿ ಪಟ್ಟದ ದೇವರಿಗೆ ನಂತರ ಗೋಶಾಲೆಯ ಕೆರೆಯ ಮಧ್ಯೆ ಇರುವ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆಯನ್ನು ಅರ್ಪಿಸಿದರು. ಚಾತುರ್ಮಾಸ್ಯ ಆರಂಭದಲ್ಲಿ ಮೃತ್ತಿಕೆಯನ್ನು ಮಾಡಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಚಾತುರ್ಮಾಸದ ಅಂತ್ಯಕಾಲದಲ್ಲಿ ಮೃತ್ತಿಕಾ ವಿಸರ್ಜನೆಯನ್ನು ದೇವಸ್ಥಾನದ ಕೆರೆಯಲ್ಲಿ ಶ್ರೀಗಳು ನೆರವೇರಿಸಿದರು. ಚಾತುರ್ಮಸ್ಯ ವೃತಾಚರಣೆಯನ್ನು ಬಿಟ್ಟ ನಂತರ ಭಕ್ತಾದಿಗಳಿಗೆ ತೀರ್ಥವನ್ನು ಕೊಡುವ ಸಂಪ್ರದಾಯವಿದೆ. ಹೀಗಾಗಿ ಸ್ವತಃ ಸ್ವಾಮೀಜಿಯವರೇ ತೀರ್ಥ ವಿತರಣೆ ಮಾಡಿದರು.

    ಚತುರ್ಮಸ್ಯ ಸಮಾಪ್ತಿ ಆದ ಹಿನ್ನೆಲೆ ನೀಲಾವರ ಗೋಶಾಲೆಯಲ್ಲಿ ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ ಏರ್ಪಡಿಸಲಾಗಿತ್ತು. ಒಂದು ಊರಿನಲ್ಲಿ ಸ್ವಾಮೀಜಿ ವ್ರತಾಚರಣೆಯನ್ನು ಕೈಗೊಂಡರೆ ವೃತ ಮುಗಿದ ಮೇಲೆ ಅವರು ಊರನ್ನು ಬಿಡಬೇಕು ಎಂಬ ನಂಬಿಕೆಯಿದೆ. ಸಂಪ್ರದಾಯದಂತೆ ಸ್ವಾಮೀಜಿಯವರು ಸೀಮೋಲ್ಲಂಘನ ಮಾಡಿದರು. ನೀಲಾವರದಿಂದ ಎರಡು ಕಿಲೋಮೀಟರ್ ನಷ್ಟು ದೂರ ಇರುವ ಸೀತಾನದಿಯಲ್ಲಿ ಪ್ರಕ್ರಿಯೆ ನೆರವೇರಿತು. ನದಿ ತಟದ ಪಂಚಮಿಕಾನ ನಾಗ ಕ್ಷೇತ್ರದಲ್ಲಿ ಸ್ವಾಮೀಜಿಗಳು ದೋಣಿಯಲ್ಲಿ ಕುಳಿತು ಸೀತಾನದಿಯನ್ನು ದಾಟುವ ಪ್ರಕ್ರಿಯೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಗ್ರಾಮಸ್ಥರು, ಸ್ಥಳೀಯರಿಂದ ಗೌರವ ಸಲ್ಲಿಸಲಾಯಿತು. ಸ್ವಾಮೀಜಿ ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಿ ಊರಿನ ಸಕಲ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಿದರು. ಬಿಳಿ ಕುದುರೆ ಏರಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪುರಪ್ರವೇಶ ನಡೆಸಿದರು.

    ಯತಿಗಳಿಗೆ ಚಾತುರ್ಮಾಸ್ಯ ವ್ರತ ಬಹಳ ಮಹತ್ವದ್ದು. ಈ ಸಂದರ್ಭದಲ್ಲಿ ಆಹಾರದ ನಿಯಮ, ಒಂದು ಪ್ರದೇಶದಲ್ಲಿ ಉಳಿದು ದೇವರ ಕಾರ್ಯ ಮಾಡುವಂತದ್ದು. ಈ ಸಂದರ್ಭದಲ್ಲಿ ನಾಲ್ಕು ತಿಂಗಳು ವೃತ ಆಚರಣೆ ಆಗುತ್ತದೆ. ಭಗವಂತ ಪವಡಿಸುವ ಸಂದರ್ಭದಲ್ಲಿ ವಿಶೇಷ ಸಾಧನ ಅನುಷ್ಠಾನಗಳನ್ನು ಮಾಡಬೇಕು. ನಾಲ್ಕು ಮಾಸಗಳ ಕಾಲ ನಾಲ್ಕು ಪ್ರತ್ಯೇಕ ಆಹಾರ ಪದ್ಧತಿಯನ್ನು ಕೂಡ ಅನುಸರಿಸಲಾಗುತ್ತದೆ. ಮೊದಲ ಮಾಸದಲ್ಲಿ ತರಕಾರಿ ಮತ್ತು ಕೆಲವು ಧಾನ್ಯಗಳನ್ನು ಸೇವಿಸುವುದು ನಿಷೇಧ ವಾಗಿರುತ್ತದೆ. 2ನೇ ಮಾಸ ಮೊಸರನ್ನು ಸಂಪೂರ್ಣವಾಗಿ ತ್ಯಾಗ ಮಾಡುತ್ತೇವೆ. 3ನೇ ತಿಂಗಳಿನಲ್ಲಿ ಹಾಲನ್ನು ಸಂಪೂರ್ಣವಾಗಿ ತ್ಯಾಗ ಮಾಡಿ, ಮತ್ತೆಲ್ಲ ವಸ್ತುಗಳನ್ನು ಉಪಯೋಗ ಮಾಡುತ್ತೇವೆ. ನಾಲ್ಕನೆ ತಿಂಗಳು ದ್ವಿದಳ ಧಾನ್ಯಗಳನ್ನು ಒಳಗೊಳ್ಳುವಂತಹ ತರಕಾರಿ ಮತ್ತು ಯಾವುದೇ ಆಹಾರ ವಸ್ತುಗಳನ್ನು ಸೇವನೆ ಮಾಡುವುದಿಲ್ಲ. ಅಹಿಂಸಾ ವ್ರತವನ್ನು ಪಾಲನೆ ಮಾಡಬೇಕು. ಅದರಲ್ಲೂ ಚಾತುರ್ಮಾಸ್ಯ ಸಂದರ್ಭದಲ್ಲಿ ಓಡಾಟ ಮಾಡುವಂತಿಲ್ಲ. ಇದಕ್ಕೆ ಧೃಡವಾದ ಕಾರಣಗಳಿವೆ. ಮಳೆಗಾಲದಲ್ಲಿ ಹುಳು ಹುಪ್ಪಟೆಗಳು ಜಂತುಗಳು ಹುಟ್ಟುವಂತಹ ಕಾಲ. ಸಂಚಾರ ಕಾಲದಲ್ಲಿ ನಡಿಗೆ, ವಾಹನಗಳ ಅಡಿಗೆ ಬಿದ್ದು ಜೀವಿಗಳು ಸಾವನ್ನಪ್ಪುವ ಸಾಧ್ಯತೆ ಇರುವುದರಿಂದ ಓಡಾಟ ಸಲ್ಲದು ಎಂದು ಪೇಜಾವರಶ್ರೀ ಹೇಳಿದರು.

    ಈ ಕುರಿತು ಮಠದ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ಹಿಂದಿನ ಕಾಲದಲ್ಲಿ ಒಂದು ಊರನ್ನು ಬೇರ್ಪಡಿಸುವುದು ಒಂದು ಬೆಟ್ಟ ಒಂದು ನದಿ. ಚಾತುರ್ಮಾಸ್ಯ ಕುಳಿತುಕೊಂಡ ಯತಿ ಊರನ್ನು ದಾಟಿ ಹೋಗುವುದು, ಒಂದು ಸೀಮೆಯನ್ನು ಬಿಡುವ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಚಾತುರ್ಮಾಸ್ಯ ವ್ರತವನ್ನು ಸಂಪೂರ್ಣಗೊಳಿಸಿದಂತಹ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೀತಾ ನದಿಯನ್ನು ದಾಟಿ ನಮ್ಮ ಸಂಚಾರವನ್ನು ಆರಂಭಿಸಿದ್ದಾರೆ. ಅವರ ಮಠಾಧೀಶರು 33ನೇ ಚಾತುರ್ಮಾಸ್ಯವನ್ನು ನೀಲಾವರದಲ್ಲಿ ಮಾಡಿದ್ದಾರೆ. ಅಷ್ಟಮಠಗಳ ಪೈಕಿ ಕಲ್ಯಾಣಪುರ ಹೊಳೆಯನ್ನು ದಾಟಿ ಸೀತಾ ನದಿ ಮತ್ತು ಸುವರ್ಣಾ ನದಿಯ ನಡುವೆ ಚಾತುರ್ಮಾಸ್ಯ ಕುಳಿತುಕೊಂಡಿರುವ ಮೊದಲ ಯತಿ ಎಂದು ಹೇಳಿದರು.

  • ಚಿನ್ನದ ತೊಟ್ಟಿಲಲ್ಲಿ ಆಡಿದ ಉಡುಪಿಯ ಮುದ್ದು ಕೃಷ್ಣ

    ಚಿನ್ನದ ತೊಟ್ಟಿಲಲ್ಲಿ ಆಡಿದ ಉಡುಪಿಯ ಮುದ್ದು ಕೃಷ್ಣ

    ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಸಡಗರ ಉಡುಪಿಯಲ್ಲಿ ಎಂದಿನಂತೆ ಜೋರಾಗಿದೆ ಇದೆ. ಅದರಲ್ಲೂ ಶ್ರೀ ಕೃಷ್ಣ ಮಠವನ್ನು ಸಂಪೂರ್ಣವಾಗಿ ಹೂವಿನಿಂದ ಅಲಂಕರಿಸಲಾಗಿದ್ದು, ಮಠದ ಗರ್ಭಗುಡಿಯಂತೂ ನಂದನವನವಾಗಿದೆ.

    ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಭಗವಾನ್ ಶ್ರೀಕೃಷ್ಣನ ದರ್ಶನದಲ್ಲಿ ತಲ್ಲೀನರಾಗಿದ್ದಾರೆ. ಪರ್ಯಾಯ ಪಲಿಮಾರು ಮಠಾಧೀಶರಾದ ವಿದ್ಯಾಧೀಶ ಸ್ವಾಮೀಜಿ ಮತ್ತು ಅದಮಾರು ಕಿರಿಯ ಶ್ರೀಗಳು ಉಡುಪಿ ಕೃಷ್ಣನಿಗೆ ಯಶೋಧೆ ಕೃಷ್ಣ ಅಲಂಕಾರ ಮಾಡಿದ್ದಾರೆ. ಶ್ರೀ ಕೃಷ್ಣನ ಮೂಲ ಮೂರ್ತಿಗೆ ಅಲಂಕಾರ ಮಾಡಿ, ಉತ್ಸವ ಮೂರ್ತಿಯನ್ನು ಚಿನ್ನದ ತೊಟ್ಟಿಲಿನಲ್ಲಿ ಇಟ್ಟು ಪೂಜಿಸಲಾಗಿದೆ.

    ಯಶೋಧೆ ಶ್ರೀಕೃಷ್ಣನನ್ನು ತೊಟ್ಟಿಲಲ್ಲಿ ಕೂರಿಸಿ ತೂಗುವಂತೆ ಕಾಣುವ ವಿಭಿನ್ನ ಅಲಂಕಾರ ಭಕ್ತರ ಗಮನ ಸೆಳೆದಿದೆ. ಅಷ್ಟಮಿಯ ದಿನದ ಮಹಾಪೂಜೆಯನ್ನು ಪಲಿಮಾರು ಸ್ವಾಮೀಜಿ ಮಾಡಿದ್ದು, ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆಯನ್ನು ನೆರವೇರಿಸಿದ್ದಾರೆ.

    ಈ ದಿನದ ವಿಶೇಷವೆಂದರೆ ಒಂದು ದಿನಪೂರ್ತಿ ಶ್ರೀಕೃಷ್ಣ ಭಕ್ತರು ಉಪವಾಸ ಇರುತ್ತಾರೆ. ಮಧ್ಯರಾತ್ರಿ 12.12ಕ್ಕೆ ಭಗವಂತನ ಜನನವಾಗುವ ಸಂದರ್ಭ ದೇವರಿಗೆ ಹಾಲು ಮತ್ತು ನೀರು ಸಮರ್ಪಿಸಿ ಸ್ವಾಗತಿಸಲಾಗುತ್ತದೆ. ನಂತರ ಶ್ರೀ ಕೃಷ್ಣನ ಭಕ್ತರು ಅನ್ನಾಹಾರ ಸ್ವೀಕಾರ ಮಾಡುತ್ತಾರೆ.

  • ಚುನಾವಣೆಗೆ ಆಶೀರ್ವಾದ ಮಾಡಿ- ಪೇಜಾವರ ಶ್ರೀಗಳ ಬಳಿ ಸಿಎಂ ಕುಮಾರಸ್ವಾಮಿ ನಿವೇದನೆ

    ಚುನಾವಣೆಗೆ ಆಶೀರ್ವಾದ ಮಾಡಿ- ಪೇಜಾವರ ಶ್ರೀಗಳ ಬಳಿ ಸಿಎಂ ಕುಮಾರಸ್ವಾಮಿ ನಿವೇದನೆ

    ಉಡುಪಿ: ಲೋಕಸಭಾ ಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ಉಡುಪಿಗೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದು, ಮಠದ ಸುವರ್ಣ ಗೋಪುರ ಯೋಜನೆಯನ್ನು ವೀಕ್ಷಿಸಿದ ಬಳಿಕ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿಯ ಆಶೀರ್ವಾದ ಪಡೆದರು.

    ಕೃಷ್ಣ ಮಠಕ್ಕೆ ಆಗಮಿಸಿದ್ದ ಸಿಎಂ, ಕನಕ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದ ಬಳಿಕ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು. ಇದೇ ವೇಳೆ ಪೇಜಾವರ ಮಠಕ್ಕೂ ಸಿಎಂ ತೆರೆಳಿದ್ದು, ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ವಿಶ್ವಪ್ರಸನ್ನ ಸ್ವಾಮೀಜಿಗಳನ್ನು ಭೇಟಿ ಮಾಡಿ ಚುನಾವಣೆಗೆ ಆಶೀರ್ವಾದ ಮಾಡಿ ಎಂದು ಕೋರಿಕೊಂಡರು.

    ತದನಂತರ ಶ್ರೀಗಳ ಬಳಿ ಪೇಜಾವರ ಮಠದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿ, ನೀಲಾವರ ಗೋಶಾಲೆಯ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡರು. ಈ ವೇಳೆ ಮೂರು ಕಡೆ ಗೋಶಾಲೆ ನಿರ್ಮಾಣಕ್ಕೆ ಪೇಜಾವರ ಶ್ರೀ ಒತ್ತಾಯಿಸಿದ್ದು, ಈಗ ನೀತಿಸಂಹಿತೆ ಜಾರಿಯಲ್ಲಿದೆ. ಚುನಾವಣೆ ನಂತರ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಸಿಎಂಗೆ ಸಾಥ್ ನೀಡಿದರು

  • ಬೆಳಗ್ಗೆ ಮುದುಡಿದ್ದ ಮುಖ, ಮಧ್ಯಾಹ್ನವಾಗುತ್ತಲೇ ಅರಳುವ ಮೂಲಕ ನನಗ್ಯಾವ ಚಿಂತೆ ಇಲ್ಲರೀ ಎಂದ ಸಿಎಂ

    ಬೆಳಗ್ಗೆ ಮುದುಡಿದ್ದ ಮುಖ, ಮಧ್ಯಾಹ್ನವಾಗುತ್ತಲೇ ಅರಳುವ ಮೂಲಕ ನನಗ್ಯಾವ ಚಿಂತೆ ಇಲ್ಲರೀ ಎಂದ ಸಿಎಂ

    ಉಡುಪಿ: ಬೆಳಗಾವಿಯಲ್ಲಿನ ಪಿಎಲ್‍ಡಿ ಬ್ಯಾಂಕಿನ ಚುನಾವಣೆಯ ವಿಚಾರದಲ್ಲೇ ಸಿಎಂ ಕುಮಾರಸ್ವಾಮಿಯವರ ಮುಖ ಬೆಳಗ್ಗೆ ಮುದುಡಿದ್ದರೆ, ಮಧ್ಯಾಹ್ನದ ಹೊತ್ತಿಗೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಲೇ ಅರಳುವ ಹಾಗೆ ಮಾಡಿತ್ತು.

    ಬೆಳಗ್ಗೆ 10 ಕ್ಕೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಗೆ ಸಮಯ ನಿಗದಿಯಾಗಿತ್ತು. ಎಲ್ಲಾ ಅಧಿಕಾರಿಗಳು, ಪರಿಷತ್ ವಿಪಕ್ಷದ ನಾಯಕರು, ಐದು ಶಾಸಕರು ಅರ್ಧಗಂಟೆ ಮೊದಲೇ ಬಂದಿದ್ದರು. ಆದರೆ ಕೊನೆ ಕ್ಷಣದಲ್ಲಿ ಸಿಎಂ ತಮ್ಮ ನಿರ್ಧಾರ ಬದಲಿಸಿ, ಮಣಿಪಾಲಕ್ಕೆ ಬಾರದೆ ನೇರವಾಗಿ ಕೃಷ್ಣಮಠಕ್ಕೆ ಭೇಟಿ ನೀಡಿದರು. ಕೃಷ್ಣ ಒಬ್ಬ ಚಾಣಾಕ್ಷ್ಯ ರಾಜಕಾರಣಿ. ಬೆಳಗಾವಿ ಬೆಳವಣಿಗೆಯ ಸಂದರ್ಭ ಕೃಷ್ಣನ ದರ್ಶನದಿಂದ ಯಶಸ್ಸು ಸಿಗುತ್ತದೆ ಎನ್ನುವ ಮಾತು ಇಂದು ಮಹತ್ವ ಪಡೆದಿತ್ತು.

    ಕೃಷ್ಣನ ದರ್ಶನದ ನಂತರ ದೇಗುಲದಿಂದ 5 ಕಿಲೋ ಮೀಟರ್ ದೂರದ ಮಣಿಪಾಲಕ್ಕೆ ಸಿಎಂ ಆಗಮಿಸಿದರು. ಅಷ್ಟರಲ್ಲೇ ಬೆಳಗಾವಿ ಬೆಳವಣಿಗೆ ಎಲ್ಲಾ ಸುಖಾಂತ್ಯ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಭಿತ್ತರವಾಗಿತ್ತು, ಇದನ್ನು ಕೇಳಿದ ಬಳಿಕ ನಿರಾಳರಾದ ಸಿಎಂ ತಮ್ಮ ಸಭೆಯನ್ನು ಮುಂದುವರಿಸಿದರು. ಮೂರೂವರೆ ಗಂಟೆಗಳ ಕಾಲ ನಡೆದ ಸುಧೀರ್ಘ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳು, ಐದು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು, ಸರ್ಕಾರದ ಅನುದಾನದ ಬಳಕೆ ಹಾಗೂ ಹೊಸ ಆಶ್ವಾಸನೆಗಳನ್ನು ಘೋಷಣೆ ಮಾಡಿದರು. ಬೆಳಗೆ ಇದ್ದ ಗೊಂದಲ ಸಿಎಂ ಮುಖದಲ್ಲಿ ಸಂಜೆ ಕಾಣಿಸಲಿಲ್ಲ. ಕೊನೆದಾಗಿ ಹೊರಡುವ ಮುನ್ನ ನಾನು ಟೆನ್ಶನ್ ಮಾಡಿಕೊಳ್ಳುವ ಆಸಾಮಿಯೇ ಅಲ್ಲ, ನನಗ್ಯಾಕೆ ಚಿಂತೆ ಎಂದು ಹೇಳಿ ಹೊರಟರು.

    ಸೆಪ್ಟೆಂಬರ್ 7 ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ತಲೆನೋವು ನೀಡಿದ ದಿನ. ಬೆಳಗಾವಿಯ ಒಂದು ಗ್ರಾಮೀಣ ಬ್ಯಾಂಕ್ ಚುನಾವಣೆ ರಾಜಕೀಯ ವಲಯದಲ್ಲೇ ಸಂಚಲನ ಮೂಡಿಸಿತ್ತು. ದೋಸ್ತಿ ಸರ್ಕಾರ ಬಿದ್ದೇ ಹೋಗುತ್ತೆ ಅನ್ನುವ ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿರುವಾಗ, ಸಿಎಂ ಕುಮಾರಸ್ವಾಮಿ ಉಡುಪಿ ಶ್ರೀ ಕೃಷ್ಣನ ದರ್ಶನಗೈದು ವಿಶೇಷ ಪೂಜೆ ಸಲ್ಲಿಸಿದರು. ಮಧ್ವ ಸರೋವರದ ಪವಿತ್ರ ತೀರ್ಥ ಜಲ ಪ್ರೋಕ್ಷಣೆ ಮಾಡಿಕೊಂಡು, ಮಠದೊಳಗೆ ಬಂದು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಿದರು.

    ಶ್ರೀ ಕೃಷ್ಣನನ್ನು ಆಶೀರ್ವಾದ ಪಡೆದ ಬಳಿಕ ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿಯನ್ನು ಭೇಟಿಯಾಗಿ ಸರ್ಕಾರ ಸುಭದ್ರವಾಗಿ ನಡೆಯುವಂತೆ ಪ್ರಾರ್ಥನೆ ಮಾಡಲು ಕೋರಿದರು. ನಾಡಿಗೂ, ನೆರೆಪೀಡಿತ ಕೊಡಗಿಗೂ ಭಗವಂತ ಶ್ರೇಯಸ್ಸು ಕೊಡಲಿ ಎಂದು ಪ್ರಾರ್ಥಿಸಿಕೊಂಡರು. ನಮ್ಮ ಕುಟುಂಬಕ್ಕೆ ದೇವರ ಮೇಲೆ ಭಕ್ತಿ ಜಾಸ್ತಿ. ಉಡುಪಿ ಕೃಷ್ಣನಲ್ಲಿ ನಾಡಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯ ಸಮೃದ್ಧವಾಗುವಂತೆ ದೇವರಲ್ಲಿ ಕೋರಿದ್ದೇನೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿಯಲ್ಲಿ ಪರ್ಯಾಯ ಸಂಭ್ರಮ- ಪಲಿಮಾರು ಶ್ರೀಗಳ 2ನೇ ಪರ್ಯಾಯ ಶುರು

    ಉಡುಪಿ: ವಿದ್ಯಾಧೀಶ ತೀರ್ಥ ಸ್ವಾಮೀಜಿ ಕೃಷ್ಣ ಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ 2ನೇ ಪರ್ಯಾಯ ಆರಂಭಿಸಿದ್ದಾರೆ.

    ಪಲಿಮಾರು ಪರ್ಯಾಯ ಉತ್ಸವದಲ್ಲಿ ಭಕ್ತಿ-ಭಾವ, ಅಭಿಮಾನ ಮನೆ ಮಾಡಿತು. ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಶ್ರೀಗಳು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಈ ಮೂಲಕ ದ್ವಿತೀಯ ಪರ್ಯಾಯ ಆರಂಭವಾಯಿತು. ಅದ್ಧೂರಿ ಸಮಾರಂಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಅಲ್ಲದೇ ಸಂಪ್ರದಾಯದಂತೆ ಕಾಪುವಿನ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಬಂದ ಪಲಿಮಾರು ಮಠಾಧೀಶರಿಗೆ ಭವ್ಯ ಸ್ವಾಗತ ಕೋರಲಾಯಿತು.

    ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ವೈಭವದ ಮೆರವಣಿಗೆ ರಥಬೀದಿಯಲ್ಲಿ ಸಾಗಿತು. ಮೆರವಣಿಗೆಯಲ್ಲಿ ಅಷ್ಟಮಠಾಧೀಶರು ಭಾಗಿಯಾದ್ರು. ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅಖಂಡ ಭಜನೋತ್ಸವಕ್ಕೆ ಅವರು ಚಾಲನೆ ನೀಡಿದರು. ಜೊತೆಗೆ ಎರಡು ವರ್ಷಗಳ ಕಾಲ ಕಡೆಗೋಲು ಕೃಷ್ಣನ ಪೂಜಾ ಕೈಂಕರ್ಯವನ್ನು ಸ್ವಾಮೀಜಿ ನಿಭಾಯಿಸಲಿದ್ದಾರೆ. ಒಟ್ಟಿನಲ್ಲಿ ಪರ್ಯಾಯವನ್ನು ಜನರು ಹಬ್ಬದಂತೆ ಆಚರಿಸಿದರು.

    ಈ ಬಾರಿಯ ಪರ್ಯಾಯ ಕಾರ್ಯಕ್ರಮ ಹಿಂದೆಂದಿಗಿಂತಲೂ ವೈಭವದಿಂದ ನಡೆಯಿತು. ವಿದ್ಯುತ್ ಅಲಂಕರದಿಂದ ಉಡುಪಿ ನಗರಿ ಕಂಗೊಳಿಸಿದ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿತು. ನಗರದ ಜೋಡುಕಟ್ಟೆಯಲ್ಲಿ 3.15 ರ ಸುಮಾರಿಗೆ ಅಷ್ಟಮಠಾಧೀಶರ ಸಂಗಮವಾಯಿತು. ಪಲಿಮಾರು ಸ್ವಾಮಿಗಳ ಎರಡನೇ ಪರ್ಯಾಯ ಮಹೋತ್ಸವ ಆರಂಭಕ್ಕೆ ಮುನ್ನ ಜೋಡುಕಟ್ಟೆಯಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಕೆ ಮಾಡಲಾಯ್ತು. ಪಲಿಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಸೋದೆ, ಅದಮಾರುಕಿರಿಯ ಸ್ವಾಮೀಜಿ ಪರ್ಯಾಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ರಾಷ್ಟ್ರದ ವಿವಿಧೆಡೆಯಿಂದ ಬಂದ ಸಾಂಸ್ಕೃತಿಕ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಜೋಡುಕಟ್ಟೆಯಲ್ಲಿ ಕುಳಿತು ಅಷ್ಟಮಠಾಧೀಶರು ಮೆರವಣಿಗೆ ವೀಕ್ಷಣೆ ಮಾಡಿದರು. ಜೋಡು ಕಟ್ಟೆಯಿಂದ ರಾಜ ಮಾರ್ಗದಲ್ಲಿ ಮೆರವಣಿಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದರು.

    ತಟ್ಟಿರಾಯ, ಬಿರುದಾವಳಿಗಳು, ಛತ್ರ, ಚಾಮರ, ಕೊಂಬು ಕಹಳೆ, ಚಂಡೆ, ನಾಸಿಕದ ಬ್ಯಾಂಡ್, ಭಜನಾ ತಂಡಗಳು, ಬೆಂಕಿಯ ಚೆಂಡು, ಕವಾಯತು, ವೀರಗಾಸೆ, ಕುಡುಬಿ ನೃತ್ಯ, ಪಟ್ಟದ ಕುಣಿತ ಸಹಿತ ಹತ್ತಾರು ಜನಪದ ತಂಡಗಳು, ಕೀಲುಕುದುರೆ, ಬೇತಾಳ ಡೊಳ್ಳುಕುಣಿತ, ಗೊಂಬೆ ಕುಣಿತ, ಕರಗ ಗೊಂಬೆ, ಹುಲಿ ವೇಷ ಕುಣಿತ ಎಲ್ಲರನ್ನು ಸೆಳೆಯಿತು. ಯಕ್ಷಗಾನ ತಂಡ, ಕೇರಳ ಚೆಂಡೆ, ಪೂಜಾ ಕುಣಿತ, ಮಹಿಷಾಸುರ ಟ್ಯಾಬ್ಲೋ, ದೇವಿ, ಮಧ್ವಾಚಾರ್ಯರು, ವಾದಿರಾಜ ಸ್ವಾಮೀಜಿ, ಉಡುಪಿ ಕೃಷ್ಣನ ಟ್ಯಾಬ್ಲೋ ಮೆರವಣಿಗೆಯಲ್ಲಿದ್ದವು.

    ಮೂವರು ಟ್ಯಾಬ್ಲೋ ಪಲ್ಲಕ್ಕಿಯಲ್ಲಿ- ಇಬ್ಬರು ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಪರ್ಯಾಯ ಮಹೋತ್ಸವದ ಸ್ವಾಮೀಜಿಗಳ ಪಲ್ಲಕ್ಕಿ ಮೆರವಣಿಗೆ ಮೂರು ರೀತಿಯ ಸಂಪ್ರದಾಯಗಳಿಗೆ ಸಾಕ್ಷಿಯಾಯ್ತು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯೇರಿ ಮುಂದಿನ ಪರ್ಯಾಯ ಪೀಠಾಧಿಪತಿ ಪಲಿಮಾರುಶ್ರೀ ಬಂದರು. ಒಟ್ಟು ಮೂರು ವಿಧದ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳ ಮೆರವಣಿಗೆ ನಡೆಯಿತು.

    ಪಲ್ಲಕ್ಕಿಯನ್ನು ಟ್ಯಾಬ್ಲೋದಲ್ಲಿಟ್ಟು ಹೊರಟ ಪಲಿಮಾರು ಸ್ವಾಮೀಜಿಯನ್ನು ಕೃಷ್ಣಾಪುರಶ್ರೀ, ಕಾಣಿಯೂರು ಸ್ವಾಮೀಜಿ ಟ್ಯಾಬ್ಲೋ ಪಲ್ಲಕ್ಕಿಯ ಮೂಲಕವೇ ಹಿಂಬಾಲಿಸಿದರು. ಆದ್ರೆ ಶೀರೂರು ಸ್ವಾಮೀಜಿ ವಿಭಿನ್ನತೆ ಪ್ರದರ್ಶನ ಮಾಡಿದ್ರು. ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಗಣಪತಿ ಮೂರ್ತಿಯಿಟ್ಟ ಶೀರೂರುಶ್ರೀ, ತಾನು ಟ್ಯಾಬ್ಲೋದಲ್ಲಿ ಸಾಗಿದರು. ಶೀರೂರು ಸ್ವಾಮೀಜಿ ಪೇಟ ತೊಟ್ಟು ಪುಟ್ಟ ಟ್ಯಾಬ್ಲೋದಲ್ಲಿ ಕುಳಿತು ಭಕ್ತರ ಗಮನ ಸೆಳೆದರು.

    ಸೋದೆ ಸ್ವಾಮೀಜಿ ಮತ್ತು ಅದಮಾರು ಸ್ವಾಮೀಜಿ ಮಾನವ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು. ಸೋದೆ ವಿಶ್ವವಲ್ಲಭ ಸ್ವಾಮೀಜಿ ಮತ್ತು ಅದಮಾರು ಕಿರಿಯಶ್ರೀ ಈಶಪ್ರಿಯರು ಸಾಂಪ್ರದಾಯಿಕತೆ ಕಾಪಾಡಿಕೊಂಡರು. ಪಲ್ಲಕ್ಕಿಯನ್ನು ಮಾನವರು ಹೊತ್ತು ಸಾಗಿದರು. ಸಾಂಪ್ರದಾಯಿಕ ಪಲ್ಲಕ್ಕಿಯಲ್ಲಿ ಸ್ವಾಮೀಜಿಗಳನ್ನು ಹೊರುವ ಪದ್ಧತಿ ನಡೆದುಕೊಂಡು ಬರುತ್ತಿದೆ. ಪಲ್ಲಕ್ಕಿಯಲ್ಲಿ ಇಬ್ಬರು ಸ್ವಾಮೀಜಿ ಸಾಗಿ ಸಂಪ್ರದಾಯ ಮುಂದುವರೆಸಿದರು.

    ಟ್ಯಾಬ್ಲೋ ಪಲ್ಲಕ್ಕಿಯ ಸಲಹೆ ಎರಡು ವರ್ಷದ ಹಿಂದೆ ಪೇಜಾವರಶ್ರೀ ನೀಡಿದ್ದರು. ಟ್ಯಾಬ್ಲೋ ಮೇಲೆ ಪಲ್ಲಕ್ಕಿಯಿಟ್ಟು ಮಾನವರು ಹೊರುವ ಸಂಪ್ರದಾಯ ನಿಲ್ಲಿಸೋಣ ಅಂತ ಹೇಳಿ ಕಳೆದ ಪರ್ಯಾಯದಲ್ಲಿ ಬದಲಾವಣೆ ತಂದಿದ್ದರು. ಪೇಜಾವರ ಸಲಹೆಯನ್ನು ನಾಲ್ವರು ಸ್ವಾಮೀಜಿ ಒಪ್ಪಿದ್ದರು, ಇಬ್ಬರು ಒಪ್ಪಿಲ್ಲ. ಒಬ್ಬರು ಎರಡೂ ಬೇಡವೆಂದು ಪಲ್ಲಕ್ಕಿಯಲ್ಲಿ ದೇವರನ್ನು ಇಟ್ಟು, ತಾನು ಟ್ಯಾಬ್ಲೋದಲ್ಲಿ ಬಂದಿದ್ದಾರೆ.