Tag: ಶ್ರೀ ಕೃಷ್ಣ ದೇವಸ್ಥಾನ

  • ಬಹ್ರೇನ್‍ನ 200 ವರ್ಷ ಪುರಾತನ ಶ್ರೀ ಕೃಷ್ಣ ದೇವಾಲಯ ಜೀರ್ಣೋದ್ಧಾರಕ್ಕೆ ಮೋದಿ ಅಸ್ತು

    ಬಹ್ರೇನ್‍ನ 200 ವರ್ಷ ಪುರಾತನ ಶ್ರೀ ಕೃಷ್ಣ ದೇವಾಲಯ ಜೀರ್ಣೋದ್ಧಾರಕ್ಕೆ ಮೋದಿ ಅಸ್ತು

    ಮನಮಾ: ಪ್ರಧಾನಿ ನರೇಂದ್ರ ಮೋದಿ ಅವರು ಬಹ್ರೇನ್ ಪ್ರವಾಸದಲ್ಲಿದ್ದು, ಈ ವೇಳೆ ಅಲ್ಲಿನ ರಾಜಧಾನಿ ಮನಮಾದಲ್ಲಿರುವ 200 ವರ್ಷಕ್ಕೂ ಹಳೆಯದಾದ ಶ್ರೀ ಕೃಷ್ಣ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸುವ ಯೋಜನೆಗೆ 4.2 ಮಿಲಿಯನ್ ಯುಎಸ್ ಡಾಲರ್(30.03 ಕೋಟಿ ರೂ.) ನೀಡುವುದಾಗಿ ಘೋಷಿಸಿದ್ದಾರೆ.

    ಇಂದು ಬಹ್ರೇನ್ ಪ್ರವಾಸದಲ್ಲಿರುವ ನರೇಂದ್ರ ಮೋದಿ 200 ವರ್ಷಕ್ಕೂ ಹಳೆಯದಾದ ಶ್ರೀನಾಥ್ ಜೀ(ಶ್ರೀ ಕೃಷ್ಣ) ದೇವಸ್ಥಾನದಲ್ಲಿ ಬಹ್ರೇನ್‍ನಲ್ಲಿರುವ ಭಾರತೀಯರನ್ನು ಭೇಟಿ ಮಾಡಿದರು. ಇದೇ ವೇಳೆ ಶ್ರೀನಾಥ್ ಜೀ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 4.2 ಮಿಲಿಯನ್ ಯುಎಸ್ ಡಾಲರ್ ಘೋಷಿಸಿದ್ದಾರೆ.

    ಗಲ್ಫ್‍ನ ಪ್ರಮುಖ ರಾಷ್ಟ್ರ ಬಹ್ರೇನ್‍ಗೆ ಭಾರತದ ಪ್ರಧಾನಿಯ ಮೊದಲ ಭೇಟಿ ಇದಾಗಿದೆ. ಮನಮಾದಲ್ಲಿರುವ ಶ್ರೀನಾಥ್ ಜೀ ದೇವಸ್ಥಾನಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಪೂಜೆ ಸಲ್ಲಿಸಿದ್ದು, ಪೂಜೆ ನಂತರ ಯುಎಇಯಲ್ಲಿ ಶನಿವಾರ ಬಿಡುಗಡೆ ಮಾಡಿದ ರೂಪೇ ಕಾರ್ಡ್ ಮೂಲಕವೇ ಪ್ರಸಾದವನ್ನು ಖರೀದಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನದ ಫಲಕವನ್ನು ಇಂದು ಅನಾವರಣಗೊಳಿಸಿದ್ದು, ಸಾಂಪ್ರದಾಯಿಕ ದೇವಸ್ಥಾನದ ಜೀರ್ಣೋದ್ಧಾರದ ಯೋಜನೆಯನ್ನು ಇದೇ ವೇಳೆ ಘೋಷಿಸಿದರು.

    ಪ್ರೀತಿ ಹಾಗೂ ವಾತ್ಸಲ್ಯವನ್ನು ತೋರಿದ ಬಹ್ರೇನ್‍ಗೆ ಧನ್ಯವಾದ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಪ್ರದೇಶದ ಅತ್ಯಂತ ಹಳೆಯ ದೇವಸ್ಥಾನ, 200 ವರ್ಷದ ಇತಿಹಾಸವಿರುವ ಶ್ರೀನಾಥ್ ಜೀ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಈ ದೇವಾಲಯವು ಬಹ್ರೇನ್ ಸಮಾಜದ ಬಹುತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

    ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಈಗಾಗಲೇ ಸ್ಥಳದ ಅಳತೆ ಮಾಡಲಾಗಿದ್ದು, 16,500 ಚದರ ಅಡಿ ಭೂಮಿಯಲ್ಲಿ ನವೀಕರಣವಾಗಲಿದೆ. 45 ಸಾವಿರ ಚದರ ಅಡಿ ವಿಸ್ತೀರ್ಣದ ನಾಲ್ಕು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಮಾಡಲು ಚಿಂತಿಸಲಾಗಿದೆ. 30 ಮೀ. ಎತ್ತರದಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ದೇವಸ್ಥಾನದ 200 ವರ್ಷದ ಪರಂಪರೆಯನ್ನು ಜೀರ್ಣೋದ್ಧಾರ ಮಾಡಲಾಗುವ ಕಟ್ಟಡದಲ್ಲಿ ಪ್ರತಿಬಿಂಬಿಸುವಂತೆ ಮಾಡಲಾಗುವುದು. ಗರ್ಭಗುಡಿ, ಪ್ರಾರ್ಥನಾ ಮಂದಿರ, ಸಾಂಪ್ರದಾಯಿಕ ಹಿಂದೂ ವಿವಾಹ ಹಾಗೂ ಇತರೆ ಸಮಾರಂಭಗಳನ್ನು ಮಾಡಲು ಸಭಾಂಗಣದ ವ್ಯವಸ್ಥೆಯನ್ನೂ ಈ ದೇವಸ್ಥಾನದಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಬಹ್ರೇನ್‍ನ್ನು ವಿವಾಹದ ತಾಣವಾಗಿ ಉತ್ತೇಜಿಸುವುದು, ಪ್ರವಾಸೋದ್ಯಮವನ್ನು ಹೆಚ್ಚಿಸಲಾಗುತ್ತಿದೆ.