Tag: ಶ್ರೀ ಕನ್ಯಕ ಪರಮೇಶ್ವರಿ ದೇವಿ

  • 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ದುರ್ಗೆಗೆ ಅಲಂಕಾರ

    4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ದುರ್ಗೆಗೆ ಅಲಂಕಾರ

    ವಿಶಾಖಪಟ್ಟಣಂ: ನವರಾತ್ರಿ ಸಂಭ್ರಮದಲ್ಲಿ ನವ ದುರ್ಗೆಯರ ಆರಾಧನೆ ದೇಶದೆಲ್ಲೆಡೆ ಅದ್ಧೂರಿಯಾಗಿ ನಡೆಯುತ್ತದೆ. ಆದ್ದರಿಂದ ಈ ಬಾರಿ ನವರಾತ್ರಿ ಆಚರಣೆ ವಿಶಾಖಪಟ್ಟಣದಲ್ಲಿ ಜೋರಾಗಿಯೇ ನಡೆಯುತ್ತಿದ್ದು, ಶ್ರೀ ಕನ್ಯಕ ಪರಮೇಶ್ವರಿ ದೇವಿಗೆ ಬರೋಬ್ಬರಿ 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟಿನಿಂದ ಸಿಂಗರಿಸಿ ಆರಾಧಿಸಲಾಯಿತು.

    ಭಾನುವಾರ ದುರ್ಗಾಷ್ಠಮಿ ದಿನದ ಆರಾಧನೆ ಹಿನ್ನೆಲೆಯಲ್ಲಿ ಶ್ರೀ ಕನ್ಯಕ ಪರಮೇಶ್ವರಿ ದೇವಸ್ಥಾನವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಜೊತೆಗೆ ಕನ್ಯಕ ಪರಮೇಶ್ವರಿ ದೇವಿಗೆ 4 ಕೆಜಿ ಚಿನ್ನ ಹಾಕಿ, ದೇವಿಯ ಸುತ್ತಲು ನೋಟುಗಳಿಂದ ಅಲಂಕರಿಸಲಾಗಿತ್ತು. ಈ ವಿಶೇಷ ಅಲಂಕಾರಕ್ಕೆ ಬರೋಬ್ಬರಿ ಎರಡು ಕೋಟಿ ರೂಪಾಯಿ ನೋಟುಗಳನ್ನು ಬಳಸಲಾಗಿತ್ತು. ಈ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು.

    ಈ ವಿಶೇಷ ಅಲಂಕಾರಕ್ಕೆ ವಿದೇಶಿ ನೋಟುಗಳನ್ನು ಕೂಡ ಬಳಸಲಾಗಿತ್ತು. ಅಲ್ಲದೆ ದೇವಿಗೆ ಸುಮಾರು 200 ಭಕ್ತಾದಿಗಳು ಹಣ ಹಾಗೂ ಚಿನ್ನವನ್ನು ದೇಣಿಗೆ ಕೊಟ್ಟಿದ್ದರು. ಅದರಿಂದಲೇ ದುರ್ಗಾಷ್ಠಮಿಗೆ ದೇವಿಯ ಅಲಂಕಾರ ಮಾಡಿದ್ದೇವೆ. ಹಾಗೆಯೇ ಈ ಅಲಂಕಾರಕ್ಕೆ 1 ರೂ. ಮುಖಬೆಲೆಯ ನೋಟುಗಳಿಂದ ಹಿಡಿದು 2,000 ರೂ. ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ:ದೇಶದ ದುಬಾರಿ ಮೂರ್ತಿ – 50 ಕೆ.ಜಿ ಚಿನ್ನದಲ್ಲಿ ದುರ್ಗೆಗೆ ಅಲಂಕಾರ

    ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೆಂಡಾಲ್‍ನಲ್ಲಿ ದುರ್ಗೆಗೆ 50 ಕೆಜಿ ಚಿನ್ನದಿಂದ ಅಲಂಕರಿಸಿ, ಪೆಂಡಾಲ್ ನಿರ್ಮಿಸಲು 20 ಕೋಟಿ ರೂ. ಖರ್ಚು ಮಾಡಿದ್ದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದುರ್ಗಾ ಪೂಜೆಯನ್ನು ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ಮಾಡಲಾಗುತ್ತಿದ್ದು, ಕೊಲ್ಕತ್ತಾದ ಸಂತೋಷ್ ಮಿತ್ರ ದುರ್ಗಾ ಉತ್ಸವ ಸಮಿತಿ ಸದಸ್ಯರು ಹಾಕಿರುವ ದುರ್ಗಾ ಪೆಂಡಲ್‍ನಲ್ಲಿ ಪ್ರತಿಷ್ಠಾಪಿರುವ ದುರ್ಗೆಗೆ ಬರೋಬ್ಬರಿ 50 ಕೆ.ಜಿ ಚಿನ್ನವನ್ನು ಹಾಕಿದ್ದಾರೆ. ದುರ್ಗಾ ದೇವಿಯ ಮೂರ್ತಿ ಹಾಗೂ ಪೆಂಡಾಲ್‍ಗೆ ಹಾಕಿರುವ ಬಂಗಾರವೆಲ್ಲಾ ಸೇರಿ ಒಟ್ಟು 20 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

    ಈ ಬಾರಿಯ ನವರಾತ್ರಿಯಲ್ಲಿ ಕೋಲ್ಕತ್ತಾದ ದುರ್ಗಾ ದೇವಿಯ ಪ್ರತಿಮೆ ದೇಶದ ಅತ್ಯಂತ ದುಬಾರಿ ಮೂರ್ತಿ ಎಂದು ಸಮಿತಿ ಹೇಳಿಕೊಂಡಿತ್ತು. ಸಂತೋಷ್ ಮಿತ್ರ ಚೌಕದಲ್ಲಿ ನಿರ್ಮಿಸಲಾದ ಪೆಂಡಾಲ್‍ನಲ್ಲಿರುವ ದುರ್ಗಾ ದೇವಿ ಪ್ರತಿಮೆ 13 ಅಡಿ ಎತ್ತರವಿದೆ. ದುರ್ಗಾ ಪ್ರತಿಮೆಗೆ ಚಿನ್ನವನ್ನು ಲೇಪಿಸಲಾಗಿದ್ದು, ದೇವಿಯ ಮೈಮೇಲೆ ಕೂಡ ಚಿನ್ನಾಭರಣವನ್ನು ಹಾಕಲಾಗಿದೆ. ಅಲ್ಲದೆ ದೇವಿಯ ವಾಹನವಾದ ಸಿಂಹದ ಪ್ರತಿಮೆಗೂ ಕೂಡ ಚಿನ್ನವನ್ನು ಲೇಪಿಸಲಾಗಿದೆ.