Tag: ಶ್ರೀಷ್ಮಾ ಹೆಗ್ಡೆ

  • ಪರೇಡ್‍ನಲ್ಲಿ ಒಂದೊಂದು ಹೆಜ್ಜೆಯೂ ಮುಖ್ಯ: ಎನ್‍ಸಿಸಿ ಮಹಿಳಾ ತಂಡದ ನಾಯಕಿ ಕನ್ನಡತಿ ಶ್ರೀಷ್ಮಾ ಹೆಗ್ಡೆ

    ಪರೇಡ್‍ನಲ್ಲಿ ಒಂದೊಂದು ಹೆಜ್ಜೆಯೂ ಮುಖ್ಯ: ಎನ್‍ಸಿಸಿ ಮಹಿಳಾ ತಂಡದ ನಾಯಕಿ ಕನ್ನಡತಿ ಶ್ರೀಷ್ಮಾ ಹೆಗ್ಡೆ

    -ಪರೇಡ್‍ಗಾಗಿ ಐಸ್ ಕ್ರೀಂ, ಚಾಕಲೇಟ್ ಬಿಟ್ಟೆ

    ನವದೆಹಲಿ : ಮೂರು ವರ್ಷದ ಕನಸು ಇಂದು ನನಾಸಾಗಿದೆ. ಜೀವನದಲ್ಲಿ ಇದು ಮರೆಯದ ದಿನ. ಪರೇಡ್ ಇಂಡಿಯಾ ಗೇಟ್ ಬಳಿ ಅಂತ್ಯವಾದಗ ಖುಷಿಗೆ ಕಣ್ಣೀರು ಬಂತು. ಹೀಗೆ ಮನದಾಳದ ಮನಸ್ಸು ಬಿಚ್ಚಿಟ್ಟಿರುವುದು ದಾವಣಗೆರೆ ಜಿಲ್ಲೆ ಹರಿಹರ ಮೂಲದ ಶ್ರೀಷ್ಮಾ ಹೆಗ್ಡೆ. 71ನೇ ಗಣರಾಜೋತ್ಸವದ ಹಿನ್ನೆಲೆ ರಾಜಪಥ್ ನಲ್ಲಿ ನಡೆದ ಎನ್‍ಸಿಸಿ ಹಿರಿಯ ಮಹಿಳಾ ಪರೇಡ್ ನೇತೃತ್ವವನ್ನ ಶ್ರೀಷ್ಮಾ ಹೆಗ್ಡೆ ವಹಿಸಿಕೊಂಡಿದ್ದರು.

    ಪಂಥ ಸಂಚಲನ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿರುವ ಶ್ರೀಷ್ಮಾ, 2017ರಲ್ಲಿ ನಡೆದ ಕಿರಿಯ ಬಾಲಕಿಯರ ಎನ್‍ಸಿಸಿ ಪರೇಡ್ ನಲ್ಲಿ ಭಾಗವಹಿಸಿದ್ದೆ. ಅಂದೇ ಹಿರಿಯರ ವಿಭಾಗದ ನೇತೃತ್ವ ವಹಿಸಿಕೊಳ್ಳುವ ಕನಸು ಕಂಡಿದೆ. ಮೂರು ವರ್ಷಗಳ ಕನಸು ಇಂದು ನನಸಾಗಿದ್ದು ಜೀವನದಲ್ಲಿ ಈ ದಿನವನ್ನು ಮರೆಯಲು ಸಾಧ್ಯವಿಲ್ಲ ಎಂದರು.

    ಕಳೆದ ಮೂರು ತಿಂಗಳಿಂದ ಇದಕ್ಕಾಗಿ ತಯಾರಿ ನಡೆಸಿಕೊಳ್ಳುತ್ತಿದ್ದು, ಐಸ್ ಕ್ರೀಂ, ಚಾಕಲೇಟ್ ಎಲ್ಲವನ್ನು ಬಿಟ್ಟಿದ್ದೇನೆ. ದೆಹಲಿಗೂ ಮುನ್ನ ನಡೆದ ಎಂಟು ತರಬೇತಿ ಪರೇಡಗಳ ನೇತೃತ್ವ ವಹಿಸಿಕೊಂಡಿದ್ದೆ ದೆಹಲಿಗೆ ಬಂದಾಗ ರಾತ್ರಿ ಎರಡು ಗಂಟೆಯಿಂದ ಬೆಳಗ್ಗೆ ಎಂಟು ಗಂಟೆವರೆಗೂ ತರಬೇತಿ ಪಡೆದಿದ್ದೇವೆ. ಸಾಕಷ್ಟು ಪರಿಶ್ರಮದ ಬಳಿಕ ಇಂದು ಯಾವುದೇ ಭಯ ಇಲ್ಲದೇ ಪರೇಡ್ ಲೀಡ್ ಮಾಡಿದೆ ಎಂದು ಖುಷಿ ವ್ಯಕ್ತಪಡಿಸಿದರು.

    ರಾಜಪಥ್ ನಲ್ಲಿ ಪರೇಡ್ ಮಾಡುವಾಗ ಇಡೀ ದೇಶವನ್ನು ಪ್ರತಿನಿಧಿಸುವ ಹೆಮ್ಮೆಯಾಗುತ್ತಿತ್ತು. ಇಡೀ ನಮ್ಮ ಟೀಂ ನನ್ನ ಅನುಸರಿಸಿಸುತ್ತೆ, ಪ್ರತಿ ಹೆಜ್ಜೆಯ ಮೇಲೂ ಗಮನವಿರಬೇಕು ಮತ್ತು ಬ್ಯಾಂಡ್ ಸೌಂಡ್ ಮೇಲೆ ಹೆಚ್ಚಿನ ಗಮನ ಹೊಂದಿರಬೇಕು. ಪರೇಡ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಅದೃಷ್ಟಶಾಲಿಗಳು ಎಂದು ಸಂಭ್ರಮಿಸಿದರು. ಬಿಎಸ್‍ಸಿ ಬಳಿಕ ವಾಯುಸೇನೆ ಸೇರುವ ಆಸೆ ಇದ್ದು ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ತಮ್ಮ ಕನಸು ಬಿಚ್ಚಿಟ್ಟರು.