Tag: ಶ್ರೀಶಾಂತ್

  • ಕನ್ನಡ ಚಿತ್ರದ ಬಗ್ಗೆ ಬಾಲಿವುಡ್ ನಟನ ಜೊತೆ ಮಾತನಾಡಿದ್ರು ಕ್ರಿಕೆಟಿಗ ಶ್ರೀಶಾಂತ್

    ಕನ್ನಡ ಚಿತ್ರದ ಬಗ್ಗೆ ಬಾಲಿವುಡ್ ನಟನ ಜೊತೆ ಮಾತನಾಡಿದ್ರು ಕ್ರಿಕೆಟಿಗ ಶ್ರೀಶಾಂತ್

    ಮುಂಬೈ: ಭಾನುವಾರದಿಂದ ಬಿಗ್ ಬಾಸ್-12 ರಿಯಾಲಿಟಿ ಶೋ ಶುರುವಾಗಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಶ್ರೀಶಾಂತ್ ಎಂಟ್ರಿ ಕೊಟ್ಟಿದ್ದಾರೆ. ಶ್ರೀಶಾಂತ್ ಎಂಟ್ರಿ ಕೊಡುವ ಮೊದಲು ಕನ್ನಡ ಚಿತ್ರದ ಬಗ್ಗೆ ಭಾಯ್‍ಜಾನ್ ಸಲ್ಮಾನ್ ಖಾನ್ ಜೊತೆ ಮಾತನಾಡಿದ್ದಾರೆ.

    ಶ್ರೀಶಾಂತ್ ನಾನು ಸಿನಿಮಾದಲ್ಲಿ ನಟಿಸಿದ್ದೇನೆ ಎಂದರು. ಇದನ್ನು ಕೇಳಿ ಸಲ್ಮಾನ್ ಸಿನಿಮಾನಾ ಎಂದು ಆಶ್ಚರ್ಯಪಟ್ಟರು. ಈ ವೇಳೆ ಶ್ರೀಶಾಂತ್, ಹೌದು. ನಾನು ಸೌತ್ ಸಿನಿಮಾ ಕೆಂಪೇಗೌಡ-2 ಚಿತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ವಿಲನ್ ಪಾತ್ರವನ್ನು ನಿಭಾಯಿಸಿದ್ದೇನೆ. ಹಾಗಾಗಿ ನಾನು ದಪ್ಪಗಾಗ ಬೇಕಾಯಿತ್ತು ಎಂದು ಶ್ರೀಶಾಂತ್, ಸಲ್ಮಾನ್ ಖಾನ್ ಬಳಿ ಹೇಳಿದರು.

    ಸದ್ಯ ಸಲ್ಮಾನ್ ಖಾನ್ ಜೊತೆ ಶ್ರೀಶಾಂತ್ ಕೆಂಪೇಗೌಡ-2 ಚಿತ್ರದ ಬಗ್ಗೆ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನವರಸನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜಗ್ಗೇಶ್ ವಿಡಿಯೋ ಶೇರ್ ಮಾಡಿ ತಮ್ಮ ಸಹೋದರ ಕೋಮಲ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಶ್ರೀಶಾಂತ್ ಮಾತನಾಡಿದ ವಿಡಿಯೋವನ್ನು ನಟ ಜಗ್ಗೇಶ್ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಕೋಮಲ್ ನಟಿಸಿರುವ ಕೆಂಪೇಗೌಡ-2 ಚಿತ್ರದಲ್ಲಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ವಿಲನ್ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ಬಗ್ಗೆ ಸಲ್ಮಾನ್ ಖಾನ್‍ಗೆ ಬಿಗ್‍ಬಾಸ್‍ಗೆ ಆಯ್ಕೆಯಾದ ಸಂದರ್ಭದಲ್ಲಿ ಶ್ರೀಶಾಂತ್ ಸಲ್ಮಾನ್‍ಗೆ ತಿಳಿಸುತ್ತಿರುವುದು ಕೇಳಿ ಕೋಮಲ್ ಅಣ್ಣನಾಗಿ ತುಂಬ ಸಂತೋಷವಾಯಿತು. ನಿಮ್ಮ ಶುಭಹಾರೈಕೆ ಇರಲಿ ಕೋಮಲ್‍ಗೆ” ಎಂದು ಟ್ವೀಟ್ ಮಾಡಿದ್ದರು.

  • ಶ್ರೀಶಾಂತ್ ಮೇಲೆ ಅಜೀವ ನಿಷೇಧ-ಬಿಸಿಸಿಐಗೆ ಸುಪ್ರೀಂನಿಂದ ನೋಟಿಸ್ ಜಾರಿ

    ಶ್ರೀಶಾಂತ್ ಮೇಲೆ ಅಜೀವ ನಿಷೇಧ-ಬಿಸಿಸಿಐಗೆ ಸುಪ್ರೀಂನಿಂದ ನೋಟಿಸ್ ಜಾರಿ

    ನವದೆಹಲಿ: ಶ್ರೀಶಾಂತ್ ಮೇಲೆ ಅಜೀವ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಬಿಸಿಸಿಐಗೆ ನೋಟಿಸ್ ಜಾರಿ ಮಾಡಿದೆ.

    ಬಿಸಿಸಿಐ ಅಜೀವ ನಿಷೇಧ ವಿಧಿಸಿದ್ದನ್ನು ಪ್ರಶ್ನಿಸಿ ಶ್ರೀಶಾಂತ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ.ದೀಪಕ್ ಮಿಶ್ರಾ, ನ್ಯಾ.ಎಎಂ ಖಾನ್ವಿಲ್ಕರ್ ಮತ್ತು ನ್ಯಾ.ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು.

    ವಿಚಾರಣೆ ವೇಳೆ ಪೀಠ ನಿಷೇಧ ಸಂಬಂಧ ನಾಲ್ಕು ವಾರಗಳಲ್ಲಿ ವಿವರಣೆ ನೀಡುವಂತೆ ಬಿಸಿಸಿಐಗೆ ನೋಟಿಸ್ ಜಾರಿ ಮಾಡಿತು. ಬಿಸಿಸಿಐ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಉತ್ತರಿಸುವಂತೆ ಶ್ರೀಶಾಂತ್ ಅವರಿಗೂ ಕೋರ್ಟ್ ನಾಲ್ಕು ವಾರಗಳ ಕಾಲ ಸಮಯಾವಕಾಶ ನೀಡಿತು.

    ಬಿಸಿಸಿಐ ಪರ ಹಿರಿಯ ವಕೀಲ ಪ್ರರಾಗ್ ತ್ರಿಪಾಠಿ ನ್ಯಾಯಾಲಯ ನೋಟಿಸ್ ಸ್ವೀಕರಿಸಿದರು. ಶ್ರೀಶಾಂತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ಕೇರಳ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಶ್ರೀಶಾಂತ್ ಅವರಿಗೆ ಕ್ಲೀನ್ ಚಿಟ್ ನೀಡಿದೆ. ಆದರೂ ಅವರ ಮೇಲೆ ಅಜೀವ ನಿಷೇಧ ಹೇರಿದ ಕ್ರಮ ಸರಿಯಲ್ಲ ಎಂದು ವಾದಿಸಿದರು.

    ಏನಿದು ಪ್ರಕರಣ?
    2013 ರ ಐಪಿಎಲ್ ವೇಳೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀಶಾಂತ್ ಮೇಲೆ ಬಿಸಿಸಿಐ ಅಜೀವ ನಿಷೇಧ ವಿಧಿಸಿತ್ತು. ಅಜೀವ ನಿಷೇಧವನ್ನು ಪ್ರಶ್ನಿಸಿ ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಕೇರಳ ಹೈಕೋರ್ಟ್ ಏಕಸದಸ್ಯ ಪೀಠ 2017ರ ಆಗಸ್ಟ್ ನಲ್ಲಿ ಸಾಕ್ಷ್ಯಧಾರಗಳ ಕೊರತೆಯಿಂದಾಗಿ ಅಜೀವ ನಿಷೇಧವನ್ನು ತೆರವುಗೊಳಿಸುವಂತೆ ಬಿಸಿಸಿಐಗೆ ಆದೇಶಿಸಿತ್ತು.

    ಈ ಆದೇಶದ ಬಳಿಕ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕೆಂದು ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ನ ದ್ವಿಸದಸ್ಯ ಪೀಠ ಎತ್ತಿ ಹಿಡಿದಿತ್ತು. ವಿಭಾಗಿಯ ಪೀಠದ ಆದೇಶವನ್ನು ಪ್ರಶ್ನಿಸಿ ಶ್ರೀಶಾಂತ್ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

    2013 ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್ ಜೊತೆಗೆ ರಾಜಸ್ಥಾನ ರಾಯಲ್ಸ್ ತಂಡದ ಅಜಿತ್ ಚಾಂಡೀಲ, ಅಂಕಿತ್ ಚೌಹಣ್, ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡಗಳನ್ನು ಬಿಸಿಸಿಐ ಎರಡು ವರ್ಷಗಳ ಕಾಲ ನಿಷೇಧಿಸಿತ್ತು. ಆದರೆ ಕೋರ್ಟ್ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದ ನಂತರವು ಬಿಸಿಸಿಐ ಶ್ರೀಶಾಂತ್ ಮೇಲಿನ ಅಜೀವ ನಿಷೇಧವನ್ನು ಹಿಂಪಡೆಯಲು ನಿರಾಕರಿಸಿತ್ತು.

  • ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ದುಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡಲು ಆಸಕ್ತಿ ತೋರಿದ್ದಾರೆ. ಬಿಸಿಸಿಐ ನನಗೆ ಟೀಂ ಇಂಡಿಯಾ ಪರವಾಗಿ ಅವಕಾಶ ನೀಡದಿದ್ದರೆ ನಾನು ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡುತ್ತೇನೆ ಎಂದು ಶ್ರೀಶಾಂತ್ ದುಬೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಆದರೆ ಶ್ರೀಶಾಂತ್ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಜೀವ ನಿಷೇಧಕ್ಕೊಳಗಾಗಿರುವುದರಿಂದ ಶ್ರೀಶಾಂತ್ ಬೇರೆ ಯಾವುದೇ ಕ್ರಿಕೆಟ್ ಅಸೋಸಿಯೇಷನ್ ಪರ ಆಡುವುದು ಸಾಧ್ಯವಿಲ್ಲ ಎಂದು ಹೇಳಿದೆ. ಮೊನ್ನೆಯಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಬಿಸಿಸಿಐ ಅಜೀವ ನಿಷೇಧ ತೆರವಿಗೆ ತಡೆಯಾಜ್ಞೆ ನೀಡಿತ್ತು.

    ನನ್ನ ಮೇಲೆ ಬಿಸಿಸಿಐ ಮಾತ್ರ ನಿಷೇಧ ಹೇರಿದೆಯೇ ವಿನಃ ಐಸಿಸಿ ನಿಷೇಧ ಹೇರಿಲ್ಲ. ಭಾರತದಲ್ಲಿ ಅವಕಾಶ ಸಿಗದಿದ್ದರೆ ನಾನು ಬೇರೆ ದೇಶದ ಪರ ಆಡಬಹುದು. ಸದ್ಯ ನನಗೆ 34 ವರ್ಷ ವಯಸ್ಸಾಗಿದ್ದು ಇನ್ನೂ 6 ವರ್ಷ ಕ್ರಿಕೆಟ್ ಆಡಬಹುದು ಎಂದು ಹೇಳಿದ್ದಾರೆ. ಓರ್ವ ಕ್ರಿಕೆಟ್ ಪ್ರೇಮಿಯಾಗಿ ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಬಿಸಿಸಿಐ ಎನ್ನುವುದು ಖಾಸಗಿ ಸಂಸ್ಥೆ. ಇದನ್ನು ನಾವು ಮಾತ್ರ ಟೀಂ ಇಂಡಿಯಾ ಎಂದು ಕರೆಯುತ್ತೇವೆ. ಆದರೆ ವಾಸ್ತವದಲ್ಲಿ ಅದೊಂದು ಖಾಸಗಿ ಸಂಸ್ಥೆ ಎಂದು ಹೇಳಿದ್ದಾರೆ.

    ಕೇರಳ ಪರ ರಣಜಿ ಆಡುವುದು ಬೇರೆಯೇ ವಿಚಾರ. ನನಗೆ ಕೇರಳ ಪರ ರಣಜಿ ಹಾಗೂ ಇರಾನಿ ಟ್ರೋಫಿ ಆಡಬೇಕು ಎಂಬ ಆಸೆಯಿತ್ತು. ಆದರೆ ಇದರ ಬಗ್ಗೆ ಬಿಸಿಸಿಐ ನಿರ್ಧರಿಸಬೇಕು ಎಂದು ಹೇಳಿದರು. ಮೊನ್ನೆ ಬಂದ ಕೇರಳ ಹೈಕೋರ್ಟ್ ತೀರ್ಪಿನಿಂದಾಗಿ ಶ್ರೀಶಾಂತ್ ಗೆ ಈಗ ಕೇರಳ ತಂಡದಲ್ಲಿ ಆಡುವುದು ಸಾಧ್ಯವಿಲ್ಲ. ಜೊತೆಗೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಡಿ ಬರುವ ಯಾವುದೇ ಜಾಗದಲ್ಲೂ ಪ್ರಾಕ್ಟೀಸ್ ಕೂಡಾ ನಡೆಸುವಂತಿಲ್ಲ.