Tag: ಶ್ರೀಲಂಕಾ ಪ್ರಧಾನಿ

  • ಹರಕೆ ತೀರಿಸಲು ಕೊಲ್ಲೂರಿಗೆ ಆಗಮಿಸಿದ ಲಂಕಾ ಪ್ರಧಾನಿ

    ಹರಕೆ ತೀರಿಸಲು ಕೊಲ್ಲೂರಿಗೆ ಆಗಮಿಸಿದ ಲಂಕಾ ಪ್ರಧಾನಿ

    ಉಡುಪಿ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.

    ಬೆಳಗ್ಗೆಯೇ ನೂರಾರು ಭಕ್ತರು ದೇವರ ದರ್ಶನ ಪೂಜೆ ಕೈಗೊಂಡರು. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಆಗಮನ ಹಿನ್ನೆಲೆಯಲ್ಲಿ ಕೊಲ್ಲೂರು ದೇವಳದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಾರತೀಯ ಸೇನೆ ಲಂಕಾ ಪ್ರಧಾನಿಗೆ ಭದ್ರತೆ ಕೊಟ್ಟಿದೆ. ದೇವಸ್ಥಾನ ಭದ್ರತೆಯ ಮೇಲೂ ನಿಗಾ ವಹಿಸಿದೆ. ಲಂಕಾ ಪ್ರಧಾನಿ ದೇವಳ ಭೇಟಿ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ.

    ಕೊಲಂಬೋ ಟು ಕೊಲ್ಲೂರು:
    ಕೊಲಂಬೋದಿಂದ ಬೆಂಗಳೂರಿಗೆ ಬಂದಿರುವ ಸಿಂಘೆ, ಅಲ್ಲಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದಾರೆ. ಹೆಲಿಕಾಪ್ಟರ್ ಮೂಲಕ ಲಂಕಾ ಪ್ರಧಾನಿ ಬೈಂದೂರು ತಾಲೂಕಿನ ಅರೆ ಶೀರೂರಿಗೆ ಬಂದಿಳಿಯಬೇಕಿತ್ತು. ಉಡುಪಿಯಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆ. ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ.

    ಹೀಗಾಗಿ ರಸ್ತೆ ಮೂಲಕ ಕೊಲ್ಲೂರಿಗೆ ತೆರಳುವಂತೆ ಸೂಚಿಸಿದ್ದಾರೆ. ಮಂಗಳೂರಿಂದ ಕೊಲ್ಲೂರು ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 130 ಕೀ.ಮಿ. ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಿದ್ದಾರೆ.

    ಈ ನಡುವೆ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನವಚಂಡಿಕಾ ಯಾಗ ಆರಂಭವಾಗಿದ್ದು, ದೇವಸ್ಥಾನದ ಋತ್ವಿಜರಿಂದ ಹೋಮದ ವಿಧಿ ವಿಧಾನ ನಡೆದಿದೆ. ವಿಶೇಷ ಪೂಜೆಯ ಜೊತೆ ಯಜ್ಞಶಾಲೆಯಲ್ಲಿ ಹೋಮ ಆರಂಭವಾಗಿದೆ. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಮಧ್ಯಾಹ್ನ 12.30 ರ ಸುಮಾರಿಗೆ ನಡೆಯಲಿರುವ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲಂಕಾ ಪ್ರಧಾನಿ ನವಚಂಡಿಕಾಯಾಗದ ಹರಕೆಯನ್ನು ಈ ಹಿಂದೆಯೇ ಹೇಳಿದ್ದರು.

  • ಶ್ರೀಲಂಕಾ ಸ್ಫೋಟಕ್ಕೆ 160 ಬಲಿ – ಸ್ಫೋಟಕ್ಕೆ ಮೇಲ್ಚಾವಣಿ ಹಾರಿತು, ಎಲ್ಲಿ ನೋಡಿದರಲ್ಲಿ ರಕ್ತ: ವಿಡಿಯೋ

    ಶ್ರೀಲಂಕಾ ಸ್ಫೋಟಕ್ಕೆ 160 ಬಲಿ – ಸ್ಫೋಟಕ್ಕೆ ಮೇಲ್ಚಾವಣಿ ಹಾರಿತು, ಎಲ್ಲಿ ನೋಡಿದರಲ್ಲಿ ರಕ್ತ: ವಿಡಿಯೋ

    ಕೊಲಂಬೋ: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಮೂರು ಚರ್ಚ್, ಮೂರು ಫೈವ್‍ಸ್ಟಾರ್ ಹೋಟೆಲ್‍ಗಳು ಸೇರಿದಂತೆ ಒಟ್ಟು 6 ಕಡೆ ಸರಣಿ ಬಾಂಬ್ ಸ್ಫೋಟಕ್ಕೆ 160 ಮಂದಿ ಮಂದಿ ಮೃತಪಟ್ಟು, 400ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ಕ್ಕೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಕೊಚ್ಚಿಕೇಡ್‍ನ ಸೆಂಟ್ ಅಂಟೋನಿ ಚರ್ಚ್, ನೆಗೊಂಬೆ ಚರ್ಚ್ ನಲ್ಲಿ ಬಾಂಬ್ ಸ್ಫೋಟಗೊಂಡಿದೆ.

    ಬಾಂಬ್ ಸ್ಫೋಟದ ತೀವ್ರತೆಗೆ ಚರ್ಚ್ ಗಳ ಮೇಲ್ಛಾವಣಿ ಕಿತ್ತು ಹಾರಿಹೋಗಿದೆ. ಚರ್ಚ್ ಒಳಗಡೆಯಿದ್ದ ಬೆಂಚ್‍ಗಳು ಮುರಿದು ಹೋಗಿದೆ. ಚರ್ಚ್ ಒಳಗಡೆ ಎಲ್ಲಿ ನೋಡಿದರಲ್ಲಿ ರಕ್ತವೇ, ಛಿದ್ರ ಛಿದ್ರ ಮೃತದೇಹಗಳೇ ಕಾಣಸಿಗುತ್ತಿದೆ. ಈ ನಡುವೆ ಗಾಯಳುಗಳ ನರಳಾಟ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂಧನ ಮುಗಿಲು ಮುಟ್ಟಿದೆ.

    ಶಾಂಗ್ರಿಲಾ ಹಾಗೂ ಸಿನಾಮೊನ್ ಗ್ರ್ಯಾಂಡ್ ಹೋಟೆಲ್‍ಗಳಲ್ಲಿ ಸ್ಫೋಟ ನಡೆದಿದೆ. ಭಾರತೀಯರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

    ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಈ ದಾಳಿಯನ್ನು ಖಂಡಿಸಿದ್ದು, ಭಯಪಡಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ಈ ಸಮಯದಲ್ಲಿ ನಮಗೆ ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇಂದು ನಮ್ಮ ಜನರ ಮೇಲೆ ನಡೆದಿರುವ ಹೇಡಿತನದ ದಾಳಿಗಳನ್ನು ಬಲವಾಗಿ ಖಂಡಿಸುತ್ತಿದ್ದೇನೆ. ಈ ದುರ್ಘಟನೆಯ ಸಮಯದಲ್ಲಿ ಎಲ್ಲಾ ಶ್ರೀಲಂಕಾದ ನಾಗರಿಕರು ಒಟ್ಟಾಗಿದ್ದು ನಮಗೆ ಸಹಕರಿಸಬೇಕು. ದಯವಿಟ್ಟು ಸುಳ್ಳು ವರದಿಗಳು ಹಾಗೂ ಊಹಾಪೋಹಗಳನ್ನು ಪ್ರಚಾರ ಮಾಡುವುದನ್ನು ತಪ್ಪಿಸಿ, ಈ ಪರಿಸ್ಥಿತಿಯನ್ನು ಸರಿಪಡಿಸಲು ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ. ಅಲ್ಲದೆ ಸ್ಫೋಟ ಸಂಭವಿಸಿರುವ ಸ್ಥಳಗಳಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು ಈ ಬಗ್ಗೆ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಟ್ವೀಟ್ ಮಾಡಿದೆ.

    ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ್ದು, ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ನಾನು ಕೊಲಂಬೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಡನೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಲ್ಲಿನ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಶ್ರೀಲಂಕಾದಲ್ಲಿರುವ ಭಾರತೀಯರ ಬಗ್ಗೆ ಮಾಹಿತಿ ಬೇಕಾದಲ್ಲಿ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಹಾಯವಾಣಿ ಸಂಖ್ಯೆಯನ್ನು ಟ್ವೀಟ್ ಮಾಡಿದ್ದಾರೆ.

    https://www.youtube.com/watch?v=Kp4p-WCXmmg

    https://www.youtube.com/watch?v=toEBKqvDA3c&feature=youtu.be

  • ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಉಡುಪಿ: ಇಲ್ಲಿನ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಶ್ರೀಲಂಕಾ ಪ್ರಧಾನಿ ಕುಟುಂಬ ಸಮೇತರಾಗಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ತನ್ನ ಪತ್ನಿಯ ಬಹು ವರ್ಷದ ಹರಕೆ ತೀರಿಸಿದ್ದಾರೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಪತ್ನಿ ಡಾ. ಮೈತ್ರಿ ಜೊತೆ ಆಗಮಿಸಿದರು. ಎರಡು ತಿಂಗಳಿಂದ ಕೊಲ್ಲೂರಿಗೆ ಬರಲು ಪ್ರಯತ್ನಿಸುತ್ತಿದ್ದ ಲಂಕಾ ಪ್ರಧಾನಿಗೆ ಇಂದು ಮೂಕಾಂಬಿಕೆಯ ಸನ್ನಿಧಿಗೆ ಬರಲು ಕಾಲ ಕೂಡಿ ಬಂದಿದೆ.

    ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅಲ್ಲಿಂದ ಮಂಗಳೂರು ಮೂಲಕ ಅರೆಶೀರೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ಆಗಮಿಸಿದ ಪ್ರಧಾನಿ ವಿಕ್ರಮಸಿಂಘೆಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ದೇವಸ್ಥಾನದ ಮುಂಭಾಗದಲ್ಲಿ ಕಾಲು ತೊಳೆದು ದೇವಸ್ಥಾನ ಮುಖ್ಯದ್ವಾರದ ಮೂಲಕ ಬಲಗಾಲಿಟ್ಟು ಪ್ರವೇಶಿಸಿದರು.

    ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಮಂತ್ರ ಪಠಣೆ ಮೂಲಕ ದೇವಾಲಯದ ಪ್ರಮುಖ ಅರ್ಚಕರು ಪ್ರಧಾನಿ ಮತ್ತು ಪತ್ನಿಯನ್ನು ಒಳಗೆ ಕರೆಸಿಕೊಂಡರು. ಗರುಡಗಂಭಕ್ಕೆ ನಮಸ್ಕರಿಸಿ – ಮೂಕಾಂಬಿಕೆಯ ದರ್ಶನ ಮಾಡಿದ ಪ್ರಧಾನಿ, ಚಂಡಿಕಾ ಹೋಮ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆ ಸಲ್ಲಿಕೆ ಮಾಡಿದರು.

    ಪ್ರಧಾನಿ ಪತ್ನಿ ಡಾ. ಮೈತ್ರಿ ಕೇರಳ ಮೂಲದವರು. ಕೊಲ್ಲೂರಿನಲ್ಲಿ ಡಾ. ಮೈತ್ರಿಯ ಹಿಂದಿನ ಹರಕೆ ತೀರಿಸಲು ಬಾಕಿಯಿತ್ತು. ಹೀಗಾಗಿ ಆಗಸ್ಟ್ 26 ಮತ್ತು 27ರಂದು ಕೊಲ್ಲೂರಿಗೆ ಬರಲು ಯತ್ನಿಸಿದ್ದರು. ಆದ್ರೆ ಸಿಕ್ಕಾಪಟ್ಟೆ ಮಳೆ ಮತ್ತು ಮೋಡ ಕವಿದ ಕಾರಣ ಕೊಲ್ಲೂರು ಭೇಟಿ ರದ್ಧಾಗಿತ್ತು. ಇದೀಗ ಕೊಲ್ಲೂರು ಬಂದು ದೇವಿ ದರ್ಶನ ಮಾಡಿ ಹರಕೆ ತೀರಿಸುವ ಬಯಕೆ ಪೂರ್ಣಗೊಂಡಿದೆ.

  • ಇಂದು ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿ

    ಇಂದು ಶ್ರೀಲಂಕಾ ಪ್ರಧಾನಿ ಕೊಲ್ಲೂರಿಗೆ ಭೇಟಿ

    ಮಂಗಳೂರು: ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಲೆಂದು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಮಂಗಳೂರಿಗೆ ಆಗಮಿಸಿದ್ದಾರೆ.

    ಶ್ರೀಲಂಕಾದಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಸಿಂಘೆ, ಬುಲೆಟ್ ಪ್ರೂಫ್ ಅಂಬಾಸಿಡರ್ ಕಾರಿನಲ್ಲಿ ರಸ್ತೆಯ ಮೂಲಕ ಮಂಗಳೂರು ನಗರಕ್ಕೆ ಆಗಮಿಸಿದರು. ಪತ್ನಿ ಮೈತ್ರಿ ವಿಕ್ರಮ ಸಿಂಘೆ ಜೊತೆಗೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಗೇಟ್ ವೇ ತ್ರೀ ಸ್ಟಾರ್ ಹೊಟೇಲ್ ನಲ್ಲಿ ಕೆಲಕಾಲ ತಂಗಿದ್ರು.

    ಬಳಿಕ ಅಲ್ಲಿಯೇ ಬೆಳಗ್ಗಿನ ಉಪಹಾರ ಸೇವಿಸಿದ ಪ್ರಧಾನಿ ದಂಪತಿ, ಚಹಾದ ಜೊತೆಗೆ ಮಂಗಳೂರು ಭಾಗದ ಸಾಂಪ್ರದಾಯಿಕ ಉಪಾಹಾರ ನೀರುದೋಸೆ ಮತ್ತು ಚಟ್ನಿ ಸೇವಿಸಿದ್ರು. ನಂತರ ಹೊಟೇಲ್ ನಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೊಲ್ಲೂರಿಗೆ ತೆರಳಿದ್ರು.

    ಮಧ್ಯಾಹ್ನ 3 ಗಂಟೆಗೆ ಮತ್ತೆ ಇದೇ ಗೇಟ್ ವೇ ಹೊಟೇಲಿಗೆ ಆಗಮಿಸಲಿದ್ದು, ಊಟಕ್ಕೆ ಕಾಣೆ ಮೀನಿನ ಸ್ಪೆಷಲ್ ಮೀಲ್ ರೆಡಿ ಮಾಡೋಕೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.