Tag: ಶ್ರೀಲಂಕಾ

  • ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    – `ಶಕ್ತಿ’ ಹೆಸರು ಕೊಟ್ಟಿದ್ದೇ ಲಂಕಾ; ಅ.7ರ ವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ

    ಮುಂಬೈ: ಅರಬ್ಬಿ ಸಮುದ್ರದಲ್ಲಿ ಶಕ್ತಿ ಚಂಡಮಾರುತ (Shakti Cyclone) ಅಬ್ಬರ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಅ.7ರ ವರೆಗೆ ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಇದು ಮುಂಗಾರು ಬಳಿಕ ಅರಬ್ಬಿ ಸಮುದ್ರದಲ್ಲಿ ಅಪ್ಪಳಿಸುವ ಮೊದಲ ಚಂಡಮಾರುತವಾಗಿದೆ.

    ಚಂಡಮಾರುತ ಬೀಸುವ ಹಿನ್ನೆಲೆ ಮುಂಬೈ (Mumbai), ಥಾಣೆ, ಪಾಲ್ಘರ್, ರಾಯಗಡ್, ರತ್ನಗಿರಿ ಮತ್ತು ಸಿಂಧುದುರ್ಗ ಸೇರಿದಂತೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಮಹಾರಾಷ್ಟ್ರದ ಒಳಭಾಗಗಳಲ್ಲಿ, ಅದ್ರಲ್ಲೂ ಮುಖ್ಯವಾಗಿ ಪೂರ್ವ ವಿದರ್ಭ ಮತ್ತು ಮರಾಠವಾಡದ ಕೆಲ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

    ಉತ್ತರ ಕೊಂಕಣದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಸ್ಥಳೀಯ ಆಡಳಿತ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

    ಗುಜರಾತ್‌ಗೆ ಅಪ್ಪಳಿಸಲಿದೆ ಚಂಡಮಾರುತ
    ಹವಾಮಾನ ಇಲಾಖೆ (IMD) ವಿಜ್ಞಾನಿ ಅಭಿಮನ್ಯು ಚೌಹಾಣ್ ಪ್ರಕಾರ, ಈಶಾನ್ಯ ಅರೇಬಿಯನ್‌ ಸಮುದ್ರದಲ್ಲಿ (Arabian Sea) ಚಂಮಾರುತ ತೀವ್ರಗೊಂಡಿದೆ. ಗಂಟೆಗೆ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಅಕ್ಟೋಬರ್‌ 6ರಂದು ಬೆಳಗ್ಗಿನ ವೇಳೆಗೆ ಚಂಡಮಾರುತವು ಗುಜರಾತ್‌ ಕಡೆಗೆ ಬೀಸುವ ನಿರೀಕ್ಷೆಯಿದೆ. ಆದಾಗ್ಯೂ ರಾಜ್ಯದಲ್ಲಿ ಮಳೆಯ ಪರಿಣಾಮ ಕಡಿಮೆ ಇರಲಿದ್ದು, ಗಾಳಿಯು ಗಂಟೆಗೆ 40-55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

    ಶಕ್ತಿ ಚಂಡಮಾರುತ ಎದುರಿಸಲು ಸಕಲ ತಯಾರಿ
    ಇನ್ನೂ ಶಕ್ತಿ ಚಂಡ ಮಾರುತ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ (Maharashtra Government) ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ವಿಪತ್ತು ನಿರ್ವಹಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಬೇಕು, ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿ ನೆಲೆಸಿರುವ ಜನರನ್ನ ಸ್ಥಳಾಂತರಿಸಲು ಕ್ರಮ ವಹಿಸಬೇಕು, ಮೀನುಗಾರರು ಸಮುದ್ರಕ್ಕಿಳಿದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ‌

    ಸೈಕ್ಲೋನ್‌ ಶಕ್ತಿ ಈಗ ಎಲ್ಲಿದೆ?
    ಹವಾಮಾನ ಇಲಾಖೆ ಪ್ರಕಾರ, ಶಕ್ತಿ ಚಂಡಮಾರುತವು ಪ್ರಸ್ತುತ ಗುಜರಾತ್‌ನ ನಲಿಯಾದಿಂದ ನೃಋತ್ಯಕ್ಕೆ ಸುಮಾರು 270 ಕಿಮೀ ದೂರದಲ್ಲಿ, ಪೋರ್‌ಬಂದರ್‌ನಿಂದ ಪಶ್ಚಿಮಕ್ಕೆ 300 ಕಿಮೀ ಮತ್ತು ದಕ್ಷಿಣಕ್ಕೆ 360 ಕಿಮೀ ದೂರದಲ್ಲಿದೆ. ಸುಮಾರು 8 ಕಿಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಚಲಿಸುತ್ತಿದ್ದು, 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದನ್ನೂ ಓದಿ: ಪಾಕಿನ ಎಫ್‌-16 , ಜೆಎಫ್‌-17 ಯುದ್ಧ ವಿಮಾನಗಳನ್ನು ಹೊಡೆದಿದ್ದೇವೆ: ಏರ್ ಚೀಫ್ ಮಾರ್ಷಲ್

    `ಶಕ್ತಿ’ ಹೆಸರು ಕೊಟ್ಟಿದ್ದೇ ಶ್ರೀಲಂಕಾ
    ʻಶಕ್ತಿʼ ಚಂಡಮಾರುತದ ಹೆಸರು ಗಮನ ಸೆಳೆದಿದೆ. ಆದ್ರೆ ಚಂಡಮಾರುತಕ್ಕೆ ʻಶಕ್ತಿʼ ಎಂದು ಹೆಸರು ಕೊಟ್ಟಿದ್ದೇ ಶ್ರೀಲಂಕಾ. ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಏಷ್ಯಾ ಮತ್ತು ಪೆಸಿಫಿಕ್‌ನ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ನಿರ್ವಹಿಸುವ ಸಂಘಟಿತ ವ್ಯವಸ್ಥೆಯ ಅಡಿಯಲ್ಲಿ ಶ್ರೀಲಂಕಾ ʻಶಕ್ತಿʼ ಎಂದು ಹೆಸರಿಸಿದೆ. 2020ರಲ್ಲಿ ಪರಿಚಯಿಸಲಾದ ಈ ಸಂಘಟಿತ ವ್ಯವಸ್ಥೆಯು ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದೆ.

    ಚಂಡಮಾರುತವನ್ನು ಸುಲಭವಾಗಿ ಗುರುತಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇದಕ್ಕೆ ಹೆಸರುಗಳನ್ನು ನೀಡಲಾಗುತ್ತದೆ. ಈ ಋತುವಿನ ಮೊದಲ ಚಂಡಮಾರುತ ಇದಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಅಬ್ಬರ – ಮಹಾರಾಷ್ಟ್ರದಲ್ಲಿ ಅ.7ರವರೆಗೆ ಭಾರೀ ಮಳೆ ಸಾಧ್ಯತೆ

  • ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್‌ – ಸೂಪರ್‌ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ

    ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್‌ – ಸೂಪರ್‌ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ

    ದುಬೈ: ಏಷ್ಯಾಕಪ್‌ (Asia Cup) ಸೂಪರ್‌4 ಸೂಪರ್‌ ಓವರ್‌ನಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಭಾರತ (Team India) ಜಯಗಳಿಸಿ ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ.

    ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಪಂದ್ಯದಲ್ಲಿ ಪಾತುಮ್ ನಿಸ್ಸಂಕ (Pathum Nissanka) ಅವರ ಸ್ಫೋಟಕ ಶತಕ, ಕುಸಾಲ್ ಪೆರೆರಾ (Kusal Perera) ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ 5 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಆದರೆ ಸೂಪರ್‌ ಓವರ್‌ನಲ್ಲಿ ಸೂರ್ಯ ಕುಮಾರ್‌ ಮೊದಲ ಎಸೆತದಲ್ಲಿ 3 ರನ್‌ ಹೊಡೆಯುವ ಮೂಲಕ ಭಾರತ ರೋಚಕ ಜಯ ಗಳಿಸಿತು.

    ಸೂಪರ್‌ ಓವರ್‌ ಹೇಗಿತ್ತು?
    ಆರ್ಶ್‌ದೀಪ್‌ ಎಸೆದ ಮೊದಲ ಓವರ್‌ ಮೊದಲ ಎಸೆತವನ್ನು ಕುಸಲ್ ಪೆರೆರಾ ಸಿಕ್ಸ್‌ ಹೊಡೆಯಲು ಹೋಗಿ ರಿಂಕು ಸಿಂಗ್‌ಗೆ ಕ್ಯಾಚ್‌ ನೀಡಿದರು. ನಂತರ ಎರಡನೇ ಎಸೆತದಲ್ಲಿ ಒಂದು ರನ್‌ ಬಂತು. ನಂತರದ ಎರಡು ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 4ನೇ ಎಸೆತ ವೈಡ್‌ ಆಯ್ತು. ನಂತರ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5 ಎಸೆತದಲ್ಲಿ ಶನಕ ಸಿಕ್ಸ್‌ ಸಿಡಿಸಲು ಹೋಗಿ ಜಿತೇಶ್‌ ಶರ್ಮಾಗೆ ಕ್ಯಾಚ್‌ ನೀಡಿದರು. ಸೂಪರ್‌ ಓವರ್‌ನಲ್ಲಿ ಎರಡು ವಿಕೆಟ್‌ ಪತನಗೊಂಡರೆ ಇನ್ನಿಂಗ್ಸ್‌ ಮುಗಿದ ಕಾರಣ ಲಂಕಾ ಭಾರತಕ್ಕೆ 3 ರನ್‌ಗಳ ಗುರಿಯನ್ನು ನೀಡಿತ್ತು.

    ಭಾರತದ ಪರ ಓಪನರ್‌ಗಳಾಗಿ ನಾಯಕ ಸೂರ್ಯಕುಮಾರ್‌ ಮತ್ತು ಶುಭಮನ್‌ ಗಿಲ್‌ ಕ್ರೀಸ್‌ಗೆ ಆಗಮಿಸಿದರು. ಹಸರಂಗ ಎಸೆದ ಮೊದಲ ಎಸೆತವನ್ನು ಸೂರ್ಯಕುಮಾರ್‌ ಎಕ್ಸ್‌ಟ್ರಾ ಕವರ್‌ಗೆ ತಳ್ಳಿ ಮೂರು ರನ್‌ ಓಡುವ ಮೂಲಕ ಭಾರತ ಜಯ ಸಾಧಿಸಿತು.

     

    ಪಂದ್ಯ ಟೈ ಆಗಿದ್ದು ಹೇಗೆ?
    ಕೊನೆಯ ಎರಡು ಓವರ್‌ಗಳಲ್ಲಿ 2 ಓವರ್‌ಗಳಲ್ಲಿ 23 ರನ್‌ ಬೇಕಿತ್ತು. ಅರ್ಶ್‌ದೀಪ್‌ ಎಸೆದ 19ನೇ ಓವರ್‌ನಲ್ಲಿ 11 ರನ್‌ ನೀಡಿದರು. ಕೊನೆಯ ಓವರ್‌ನಲ್ಲಿ 12 ರನ್‌ ಬೇಕಿತ್ತು. ಇದನ್ನೂ ಓದಿ:  ಸಿಕ್ಸ್‌ ಆಯ್ತು ಈಗ ಏಷ್ಯಾಕಪ್‌ನಲ್ಲಿ ಮತ್ತೊಂದು ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಹರ್ಷಿತ್‌ ರಾಣಾ ಎಸೆದ ಮೊದಲ ಓವರ್‌ನಲ್ಲಿ  107 ರನ್‌(58 ಎಸೆತ, 7 ಬೌಂಡರಿ, 6 ಸಿಕ್ಸ್‌) ಹೊಡೆದಿದ್ದ ಪಾತುಮ್ ನಿಸ್ಸಂಕ ವರುಣ್‌ ಚಕ್ರವರ್ತಿಗೆ ಕ್ಯಾಚ್‌ ನೀಡಿ ಔಟಾದರು. ಇದು ಪಂದ್ಯಕ್ಕೆ ರೋಚಕ ತಿರುವು ನೀಡಿತು. ನಂತರದ ಎಸೆತದಲ್ಲಿ 2, 1 ಬೈ, 2, 4 ರನ್‌ ಬಂತು. ಕೊನೆಯ ಓವರ್‌ನಲ್ಲಿ 3 ರನ್‌ ಬೇಕಿತ್ತು. ಶನಕ ಬೌಂಡರಿ ಹೊಡೆಯುವ ಪ್ರಯತ್ನ ನಡೆಸಿದರೂ 2 ರನ್‌ ಓಡಿದ ಪರಿಣಾಮ ಪಂದ್ಯ ಟೈನಲ್ಲಿ ಅಂತ್ಯವಾಯಿತು.


    ಲಂಕಾದ ಉತ್ತಮ ಆಟ:
    ಗೆಲ್ಲಲು 203 ರನ್‌ಗಳ ಕಠಿಣ ಸವಾಲನ್ನು ಪಡೆದ ಲಂಕಾ ಮೊದಲ ಓವರಿನಲ್ಲಿ ಕುಸಾಲ್ ಮೆಂಡಿಸ್ ಅವರ ವಿಕೆಟ್‌ ಕಳೆದುಕೊಂಡಿತ್ತು. ಎರಡನೇ ವಿಕೆಟಿಗೆ ಪಾತುಮ್ ನಿಸ್ಸಂಕ, ಕುಸಾಲ್ ಪೆರೆರಾ 70 ಎಸೆತಗಳಲ್ಲಿ 127 ರನ್‌ ಜೊತೆಯಾಟವಾಡಿ ಭದ್ರವಾದ ಇನ್ನಿಂಗ್ಸ್‌ ಕಟ್ಟಿದರು. ಕುಸಾಲ್ ಪೆರೆರಾ 58 ರನ್‌ (32 ಎಸೆತ, 8 ಬೌಂಡರಿ, 1 ಸಿಕ್ಸ್‌) ಗಳಿಸಿದ್ದಾಗ ಸ್ಟಂಪ್‌ ಔಟಾದರು. ನಂತರ ಬಂದ ನಾಯಕ ಚರಿತ್‌ ಅಸಲಂಕಾ ಸಿಕ್ಸ್‌ ಸಿಡಿಸಲು ಹೋಗಿ 5 ರನ್‌ ಗಳಿಸಿ ಕ್ಯಾಚ್‌ ನೀಡಿದರು. ಕಮಿಂಡು ಮೆಂಡಿಸ್‌ 3 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

    ಇಂದಿನ ಪಂದ್ಯದಲ್ಲಿ ಬುಮ್ರಾ ಬದಲು ಅರ್ಶ್‌ದೀಪ್‌ ಸಿಂಗ್‌ ಅವರನ್ನು ಆಡಿಸಲಾಗಿತ್ತು. ಆದರೆ ಭಾರತದ ಬೌಲರ್‌ಗಳು ರನ್‌ ನಿಯಂತ್ರಣಕ್ಕೆ ಕಡಿವಾಣ ಹಾಕಲು ವಿಫಲರಾದರು. ಪಾಂಡ್ಯ ಕೇವಲ ಒಂದು ಓವರ್‌ ಎಸೆದು ಮೈದಾನ ತೊರೆದಿದ್ದು ಭಾರತಕ್ಕೆ ಹಿನ್ನಡೆ ಆಗಿತ್ತು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಅಭಿಷೇಕ್‌ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 202 ರನ್‌ ಗಳಿಸಿತ್ತು.ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ 31 ಎಸೆತಗಳಲ್ಲಿ 61 ರನ್‌(8 ಬೌಂಡರಿ, 2 ಸಿಕ್ಸ್‌ ) ಸಿಡಿಸಿ ಔಟಾದರು. ತಿಲಕ್‌ ವರ್ಮಾ ಔಟಾಗದೇ 49 ರನ್‌(34 ಎಸೆತ, 4 ಬೌಂಡರಿ, 1 ಸಿಕ್ಸ್‌), ಸಂಜು ಸ್ಯಾಮ್ಸನ್‌ 39 ರನ್‌(23 ಎಸೆತ, 1 ಬೌಂಡರಿ, 3 ಸಿಕ್ಸ್‌), ಅಕ್ಷರ್‌ ಪಟೇಲ್‌ ಔಟಾಗದೇ 21 ರನ್‌(15 ಎಸೆತ, 1 ಬೌಂಡರಿ, 1 ಸಿಕ್ಸ್‌) ಹೊಡೆದರು.

  • ಸಿಕ್ಸ್‌ ಆಯ್ತು ಈಗ ಏಷ್ಯಾಕಪ್‌ನಲ್ಲಿ ಮತ್ತೊಂದು ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಸಿಕ್ಸ್‌ ಆಯ್ತು ಈಗ ಏಷ್ಯಾಕಪ್‌ನಲ್ಲಿ ಮತ್ತೊಂದು ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ದುಬೈ: ಸಿಕ್ಸ್‌ ಸಿಡಿಸಿ ದಾಖಲೆ ಬರೆದಿದ್ದ ಅಭಿಷೇಕ್‌ ಶರ್ಮಾ (Abhishek Sharma) ಈಗ ಏಷ್ಯಾಕಪ್‌ (Asia Cup) ವಿರಾಟ್‌ ಕೊಹ್ಲಿ, ಮೊಹಮ್ಮದ್‌ ರಿಜ್ವಾನ್‌ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.

    ಏಷ್ಯಾಕಪ್‌ ಒಂದು ಆವೃತ್ತಿಯಲ್ಲಿ 300 ರನ್‌ ಗಡಿ ದಾಟಿದ ಮೊದಲ ಬ್ಯಾಟರ್‌ ಅಲ್ಲದೇ ಅತಿ ಹೆಚ್ಚು ರನ್‌ ಸಿಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಸದ್ಯ ಈಗ 309 ರನ್‌ ಸಿಡಿಸುವ ಮೂಲಕ ಅತಿ ಹೆಚ್ಚು ರನ್‌ ಸಿಡಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

    ಅತಿಹೆಚ್ಚು ರನ್‌ ಹೊಡೆದ ಆಟಗಾರರ ಪೈಕಿ ಮೊದಲ ಸ್ಥಾನದಲ್ಲಿ ಇಲ್ಲಿಯವರೆಗೆ ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್‌ ಇದ್ದರೆ ಎರಡನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಇದ್ದರು. 2022 ರ ಆವೃತ್ತಿಯಲ್ಲಿ ರಿಜ್ವಾನ್‌ 281 ರನ್‌ ಹೊಡೆದರೆ ಕೊಹ್ಲಿ 276 ರನ್‌ ಹೊಡೆದಿದ್ದರು. ಇದನ್ನೂ ಓದಿ: ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ 31 ಎಸೆತಗಳಲ್ಲಿ 61 ರನ್‌(8 ಬೌಂಡರಿ, 2 ಸಿಕ್ಸ್‌) ಸಿಡಿಸಿ ಔಟಾದರು. ತಿಲಕ್‌ ವರ್ಮಾ ಔಟಾಗದೇ 49 ರನ್‌(34 ಎಸೆತ, 4 ಬೌಂಡರಿ, 1 ಸಿಕ್ಸ್‌), ಸಂಜು ಸ್ಯಾಮ್ಸನ್‌ 39 ರನ್‌(23 ಎಸೆತ, 1 ಬೌಂಡರಿ, 3 ಸಿಕ್ಸ್‌), ಅಕ್ಷರ್‌ ಪಟೇಲ್‌ 21 ರನ್‌(15 ಎಸೆತ, 1 ಬೌಂಡರಿ, 1 ಸಿಕ್ಸ್‌) ನೆರವಿನಿಂದ ಭಾರತ 202 ರನ್‌ ಹೊಡೆದಿದೆ.

  • ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಬಂಧನ

    ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಬಂಧನ

    ಕೊಲಂಬೊ: ಸರ್ಕಾರಿ ನಿಧಿ ದುರುಪಯೋಗದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಅವರನ್ನು ಬಂಧಿಸಲಾಗಿದೆ.

    ಅಧ್ಯಕ್ಷರಾಗಿದ್ದಾಗ ಖಾಸಗಿ ವಿದೇಶ ಪ್ರವಾಸಕ್ಕಾಗಿ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವಿಕ್ರಮಸಿಂಘೆ ಅವರನ್ನು ಶುಕ್ರವಾರ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದೆ. ಇದನ್ನೂ ಓದಿ: ಪುಟಿನ್‌-ಝೆಲೆನ್ಸ್ಕಿ ಮೊದಲು ನೇರ ಮಾತುಕತೆ ನಡೆಸಬೇಕು – ಬ್ರೋಕರ್‌ ಕೆಲಸದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧಾರ

    2023 ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಷ್ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ತಮ್ಮ ಪತ್ನಿ ಪ್ರೊಫೆಸರ್ ಮೈತ್ರೀ ವಿಕ್ರಮಸಿಂಘೆ ಅವರ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು, ಇಂಗ್ಲೆಂಡ್‌ಗೆ ಪ್ರಯಾಣಿಸಲು ಸಾರ್ವಜನಿಕ ಹಣವನ್ನು ಬಳಸಿದ್ದಾರೆ ಎಂದು ವಿಕ್ರಮಸಿಂಘೆ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾವು ಅವರನ್ನು ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುತ್ತಿದ್ದೇವೆ ಎಂದು ಅಧಿಕಾರಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ವೈಯಕ್ತಿಕ ಉದ್ದೇಶಗಳಿಗಾಗಿ ರಾಜ್ಯದ ಸಂಪನ್ಮೂಲಗಳನ್ನು ಬಳಸಿದ್ದಕ್ಕಾಗಿ ಅವರ ಮೇಲೆ ಆರೋಪ ಹೊರಿಸಲಾಗಿದೆ.

    ಪೊಲೀಸರು ಈ ಹಿಂದೆ ಅವರ ಸಿಬ್ಬಂದಿಯನ್ನು ಪ್ರಯಾಣ ವೆಚ್ಚದ ಬಗ್ಗೆ ಪ್ರಶ್ನಿಸಿದ್ದರು. 2023 ರಲ್ಲಿ ಹವಾನಾದಲ್ಲಿ ನಡೆದ G77 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಕ್ರಮಸಿಂಘೆ ಅವರು ಲಂಡನ್‌ಗೆ ಹಿಂತಿರುಗುವಾಗ ಅಲ್ಲಿ ತಂಗಿದ್ದರು. ಯುಕೆ ರಾಜಧಾನಿಯಲ್ಲಿ ಅವರು ಮತ್ತು ಅವರ ಪತ್ನಿ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಚೀನಾವನ್ನ ಎದುರಿಸಬೇಕಾದ್ರೆ ಭಾರತ-ಅಮೆರಿಕ ಸಂಬಂಧವನ್ನ ಹಳಿಗೆ ತನ್ನಿ – ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಮತ್ತೆ ಎಚ್ಚರಿಕೆ

    ವಿಕ್ರಮಸಿಂಘೆ ಅವರು ತಮ್ಮ ಪತ್ನಿಯ ಪ್ರಯಾಣ ವೆಚ್ಚವನ್ನು ಅವರೇ ಭರಿಸುತ್ತಿದ್ದರು. ಯಾವುದೇ ರಾಜ್ಯ ನಿಧಿಯನ್ನು ಬಳಸಲಾಗಿಲ್ಲ ಎಂದು ವಾದಿಸಿದ್ದರು. ಆದಾಗ್ಯೂ, ವಿಕ್ರಮಸಿಂಘೆ ಅವರು ಖಾಸಗಿ ಭೇಟಿಗಾಗಿ ಸರ್ಕಾರಿ ಹಣವನ್ನು ಬಳಸಿಕೊಂಡಿದ್ದಾರೆ. ಅವರ ಅಂಗರಕ್ಷಕರಿಗೂ ರಾಜ್ಯದಿಂದ ವೇತನ ನೀಡಲಾಗಿದೆ ಎಂದು ಸಿಐಡಿ ಆರೋಪಿಸಿದೆ.

  • ಚೆನ್ನೈಗೆ ಬಂದು ಶ್ರೀಲಂಕಾಗೆ ಹೋದ್ರಾ ಪಹಲ್ಗಾಮ್ ಉಗ್ರರು? – ಶ್ರೀಲಂಕಾ ಏರ್‌ಪೋರ್ಟಲ್ಲಿ ತಪಾಸಣೆ

    ಚೆನ್ನೈಗೆ ಬಂದು ಶ್ರೀಲಂಕಾಗೆ ಹೋದ್ರಾ ಪಹಲ್ಗಾಮ್ ಉಗ್ರರು? – ಶ್ರೀಲಂಕಾ ಏರ್‌ಪೋರ್ಟಲ್ಲಿ ತಪಾಸಣೆ

    ಚೆನ್ನೈ/ಕೊಲಂಬೊ: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ಹಿಂದೂಗಳ ನರಮೇಧ ನಡೆಸಿದ ಉಗ್ರರು (Terrorists) ಇದೀಗ ಶ್ರೀಲಂಕಾದಲ್ಲಿ ರಲೆ ಮರೆಸಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಉಗ್ರರು ಚೆನ್ನೈನಿಂದ ವಿಮಾನದಲ್ಲಿ ಲಂಕಾ ರಾಜಧಾನಿ ಕೊಲಂಬೊ ತಲುಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಈ ಕುರಿತು ಭಾರತೀಯ ಗುಪ್ತಚರ ಇಲಾಖೆ (Indian Intelligence Department) ಲಂಕಾ ಅಧಿಕಾರಿಗಳಿಗೆ ನೀಡಿದ ಮಾಹಿತಿ ನೀಡಿ ಆಧರಿಸಿ ಬಂಡರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BIA) ತೀವ್ರ ಶೋಧ ನಡೆಸಲಾಯಿತು. ಕೊಲಂಬೊ ಪೊಲೀಸರು ಹಾಗೂ ವಿಶೇಷ ಭದ್ರತಾ ಪಡೆಗಳಿಂದ ಏರ್‌ಪೋರ್ಟ್‌ನಲ್ಲಿ ತೀವ್ರ ತಪಾಸಣೆ ನಡೆಸಲಾಯಿತು.

    ಇಂದು (ಮೇ.3) ಬೆಳಗ್ಗೆ 9:55ಕ್ಕೆ ಚೆನ್ನೈನಿಂದ ಹೊರಟಿದ್ದ ವಿಮಾನದಲ್ಲಿ ಭಯೋತ್ಪಾದಕರ ಕುರಿತು ಭಾರತೀಯ ಗುಪ್ತಚರ ಇಲಾಖೆ ಲಂಕಾ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಶ್ರೀಲಂಕಾ ಏರ್‌ಲೈನ್ಸ್‌ನ UL-122 ವಿಮಾನವು 11:32ರ ವೇಳೆಗೆ ಕೊಲಂಬೊದಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಭದ್ರತಾ ಅಧಿಕಾರಿಗಳು ತೀವ್ರ ಶೋಧ ನಡೆಸಿದರು. ಈ ಹಿನ್ನೆಲೆ ಸಿಂಗಾಪುರಕ್ಕೆ ತಲುಪಬೇಕಿದ್ದ ವಿಮಾನ ಸೇವೆಯಲ್ಲಿ ಕೊಂಚ ವ್ಯತ್ಯಯವಾಯಿತು ಎಂದು ಶ್ರೀಲಂಕಾದ ಏರ್‌ಲೈನ್ಸ್‌ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    ಏ.22ರಂದು ನಡೆದಿತ್ತು ನರಮೇಧ
    ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ ಕಳೆದ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿ ನಡೆಸಿದ ಭೀಕರ ದಾಳಿ ಇದಾಗಿದೆ. ಇದುವರೆಗೂ ಭದ್ರತಾಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಉಗ್ರರು, ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಅಮಾಯಕ ಪ್ರವಾಸಿಗರನ್ನು ಟಾರ್ಗೆಟ್‌ ಮಾಡಿ ಹತ್ಯೆ ಗೈದಿದ್ದರು. ಈ ಘಟನೆ ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ತಂದೊಡ್ಡಿದೆ.

  • ನಮ್ಮ ಭೂಮಿಯನ್ನು ಭಾರತದ ಭದ್ರತಾ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲು ಬಿಡಲ್ಲ: ಶ್ರೀಲಂಕಾ ಭರವಸೆ

    ನಮ್ಮ ಭೂಮಿಯನ್ನು ಭಾರತದ ಭದ್ರತಾ ಹಿತಾಸಕ್ತಿಗೆ ವಿರುದ್ಧವಾಗಿ ಬಳಸಲು ಬಿಡಲ್ಲ: ಶ್ರೀಲಂಕಾ ಭರವಸೆ

    – ಭಾರತ – ಶ್ರೀಲಂಕಾ ಮೊದಲ ರಕ್ಷಣಾ ಒಪ್ಪಂದಕ್ಕೆ ಸಹಿ

    ಕೊಲಂಬೊ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ (Anura Kumara Dissanayake) ಅವರನ್ನ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ರಕ್ಷಣಾ ಒಪ್ಪಂದ ಸೇರಿದಂತೆ ಸುಮಾರು 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

    ಚರ್ಚೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ, ಭಾರತದ ಭದ್ರತೆಗೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಅಡ್ಡಿಯುಂಟು ಮಾಡುವ ಯಾವುದೇ ಚಟುವಟಿಕೆ ನಡೆಸಲು ನಮ್ಮ ಭೂಮಿಯನ್ನು ಬಳಸುವುದಕ್ಕೆ ಬಿಡಲ್ಲ ಎಂದು ಭರವಸೆ ನೀಡಿದ್ದಾರೆ.

    ಶ್ರೀಲಂಕಾದ ವಿಶೇಷ ಆರ್ಥಿಕ ವಲಯವನ್ನು ಮೀರಿ ವರ್ತಿಸುವುದಕ್ಕೆ ಯಾವುದೇ ಕಾರಣಕ್ಕೂ ಲಂಕಾ ಸರ್ಕಾರ ಅವಕಾಶ ನೀಡುವುದಿಲ್ಲ. ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆರ್ಥಿಕ ವಲಯಗಳ ಬಳಕೆಗೆ ಇತಿಮಿತಿ ಹೇರುವ ಅವಶ್ಯಕತೆ ಇದೆ. ಈ ಬಗ್ಗೆ ಗಮನಹರಿಸಬೇಕಾಗಿದೆ. ವಿಶ್ವಸಂಸ್ಥೆಯ ಆಯೋಗಕ್ಕೆ ಶ್ರೀಲಂಕಾ ಇತ್ತೀಚೆಗೆ ಸಲ್ಲಿಸಿದ ಮನವಿಯಲ್ಲೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ಬೇಕು ಎಂದು ಅವರು ಹೇಳಿದ್ದಾರೆ.

    ರಕ್ಷಣಾ ಒಪ್ಪಂದಕ್ಕೆ ಸಹಿ:
    ಪ್ರಧಾನಿ ನರೇಂದ್ರ ಮೋದಿ ಅವರ ಈ ಲಂಕಾ ಭೇಟಿಯಲ್ಲಿ ಭಾರತ ಮತ್ತು ಶ್ರೀಲಂಕಾ ಮೊದಲ ಬಾರಿಗೆ ಮಹತ್ವಾಕಾಂಕ್ಷೆಯ ರಕ್ಷಣಾ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಿವೆ. ಇದು ವಿಸ್ತೃತ ದ್ವಿಪಕ್ಷೀಯ ಸಹಕಾರದ ಮಾರ್ಗಸೂಚಿಯಾಗಿ ಕೆಲಸ ಮಾಡಲಿದೆ. ಎರಡೂ ರಾಷ್ಟ್ರಗಳ ಸುರಕ್ಷತೆಯು ಪರಸ್ಪರ ಸಂಬಂಧ ಹೊಂದಿದೆ ಎಂದು ರಕ್ಷಣಾ ಪರಿಣಿತರು ಹೇಳಿದ್ದಾರೆ.

    ಇದೇ ವೇಳೆ ಚೀನಾದ ಬೆಲ್ಡ್‌ ಅಂಡ್‌ ರೊಡ್‌ ಜಾಗತಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪಾಲುದಾರರಾಗುವಂತೆ ಚೀನಾ ದೇಶವು ಶ್ರೀಲಂಕಾದ ಮೇಲೆ ಸಹಕಾರದ ನೆಪದಲ್ಲಿ ಒತ್ತಡ ಹೇರುತ್ತಲೇ ಬಂದಿದೆ. 2022ರಲ್ಲಿ ಲಂಕಾದ ಅರ್ಥವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದಾಗ ಭಾರತಕ್ಕೆ ಹೊಸ ಅವಕಾಶ ಸಿಕ್ಕಿತು. ನವದೆಹಲಿ ಶ್ರೀಲಂಕಾಕ್ಕೆ ಹಣಕಾಸಿನ ನೆರವು, ಆಹಾರ, ಇಂಧ, ಔಷಧ ಸೇರಿ ಎಲ್ಲ ರೀತಿಯ ನೆರವನ್ನು ಪೂರೈಸಿತು. ಅಲ್ಲಿಂದ ಚಿತ್ರಣ ಬದಲಾಯಿತು ಎಂಬುದನ್ನು ತಜ್ಞರು ನೆನಪಿಸಿಕೊಂಡಿದ್ದಾರೆ.

  • ಭಾರತ ಮೂಲದ ತಮಿಳು ಸಮುದಾಯಕ್ಕೆ 10,000 ಮನೆ ನಿರ್ಮಾಣ ಭರವಸೆ ನೀಡಿದ ಮೋದಿ

    ಭಾರತ ಮೂಲದ ತಮಿಳು ಸಮುದಾಯಕ್ಕೆ 10,000 ಮನೆ ನಿರ್ಮಾಣ ಭರವಸೆ ನೀಡಿದ ಮೋದಿ

    ಕೊಲಂಬೊ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರನ್ನ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಲಂಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ತಮಿಳು ಸಮುದಾಯಕ್ಕೆ (Indian-Origin Tamil community) ಸಿಹಿ ಸುದ್ದಿ ಕೊಟ್ಟಿದ್ದಾರೆ.

    ಹೌದು. ಶ್ರೀಲಂಕಾದಲ್ಲಿ (Sri Lanka) ನೆಲೆಸಿರುವ ಭಾರತೀಯ ಮೂಲದ ತಮಿಳು ಸಮುದಾಯಕ್ಕೆ 10,000 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಜೊತೆಗೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’‌ ಪ್ರಶಸ್ತಿ ಪ್ರದಾನ

    ಭಾರತ ಸರ್ಕಾರ ತಮಿಳುನಾಡು ಮತ್ತು ಶ್ರೀಲಂಕಾದಲ್ಲಿರುವ ಭಾರತದ ಜನರ ನಡುವೆ ಶಾಂತಿಯುತ ಸಂಬಂಧ ಕಾಪಾಡಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಮೊದಲ ಹೆಜ್ಜೆಯನ್ನಿಟ್ಟಿದೆ. ಶ್ರೀಲಂಕಾ ಸರ್ಕಾರವು ತಮಿಳರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಮತ್ತು ಸಂವಿಧಾನತ್ಮಕವಾಗಿ ಕೆಲಸ ಮಾಡುತ್ತದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

    ಪ್ರಧಾನಿ ಮೋದಿ ಹಾಗೂ ಲಂಕಾ ಅಧ್ಯಕ್ಷರ ಮಧ್ಯೆ ವಿಸ್ತೃತವಾದ ಮಾತುಕತೆಯ ಬಳಿಕ 7 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇದನ್ನೂ ಓದಿ: ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ

    ಮೀನುಗಾರರ ಬಿಡುಗಡೆ:
    ಉಭಯ ದೇಶಗಳ ರಕ್ಷಣಾ ಒಪ್ಪಂದದ ಮಾತುಕತೆಯ ನಡುವೆ ಮೀನುಗಾರರ ಜೀವನೋಪಾಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ: ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ – ಉತ್ತರ ಭಾರತದಲ್ಲೂ ಎಫೆಕ್ಟ್‌

    ಈ ವಿಷಯದಲ್ಲಿ ಮಾನವೀಯ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಮೀನುಗಾರರನ್ನು ತಕ್ಷಣ ಬಿಡುಗಡೆ ಮಾಡಲು ಮತ್ತು ಅವರ ದೋಣಿಗಳನ್ನು ಹಿಂದಿರುಗಿಸಲು ಒತ್ತಿ ಹೇಳಿದರು. ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧವು ಪರಸ್ಪರ ನಂಬಿಕೆ ಮತ್ತು ಸದ್ಭಾವನೆಯನ್ನು ಆಧರಿಸಿದೆ ಎಂದು ಅವರು ಹೇಳಿದರು.

  • ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’‌ ಪ್ರಶಸ್ತಿ ಪ್ರದಾನ

    ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’‌ ಪ್ರಶಸ್ತಿ ಪ್ರದಾನ

    – ಭಾರತದ 140 ಕೋಟಿ ದೇಶವಾಸಿಗಳಿಂದ ಬಂದ ಗೌರವ ಎಂದ ಮೋದಿ

    ಕೊಲೊಂಬೊ: ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ (Anura Kumara Dissanayake) ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Modi) ‘ಮಿತ್ರ ವಿಭೂಷಣ’‌ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

    ಥೈಲ್ಯಾಂಡ್‌ ಬಳಿಕ ಈಗ ಪ್ರಧಾನಿ ಮೋದಿ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ದೇಶದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಇದನ್ನೂ ಓದಿ: ಬ್ಯಾಂಕಾಕ್‌ನ ಬುದ್ಧ ಟೆಂಪಲ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ

    ಬಳಿಕ ಮೋದಿಗೆ ‘ಮಿತ್ರ ವಿಭೂಷಣ’‌ (Mitra Vibhushana) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಲಂಕಾ ಸರ್ಕಾರವು ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ದೇಶಗಳ ಮುಖ್ಯಸ್ಥರಿಗೆ ಈ ಗೌರವವನ್ನು ನೀಡುತ್ತದೆ.

    ಭಾರತವು ಐತಿಹಾಸಿಕವಾಗಿ ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೆ, ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಸಹಾಯಹಸ್ತ ಚಾಚಿದ ಮೊದಲ ದೇಶ ಭಾರತವಾಗಿತ್ತು. ಈಗ ಈ ಉತ್ತಮ ಸಂಬಂಧಗಳನ್ನು ಗುರುತಿಸಿ, ಶ್ರೀಲಂಕಾ ಸರ್ಕಾರ ಪ್ರಧಾನಿ ಮೋದಿಯವರಿಗೆ ಈ ಗೌರವವನ್ನು ನೀಡಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾರತದ 140 ಕೋಟಿ ದೇಶವಾಸಿಗಳಿಂದ ಬಂದ ಗೌರವ ಎಂದು ಮೋದಿ ಬಣ್ಣಿಸಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ – ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಭಾಗಿ

  • ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ ಸಾಧ್ಯತೆ

    ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ ಸಾಧ್ಯತೆ

    ನವದೆಹಲಿ: ಮುಂಬರುವ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ರೀಲಂಕಾಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಇದು ಭಾರತ-ಶ್ರೀಲಂಕಾ ಸಂಬಂಧಗಳ ಸುಧಾರಣೆಯ ಬಲವಾದ ಸಂಕೇತವಾಗಿದೆ. ಶ್ರೀಲಂಕಾದಲ್ಲಿ (Srilanka) ಭಾರತೀಯ ಭದ್ರತಾ ಸಿಬ್ಬಂದಿ ಹಿಂಪಡೆದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ.

    ಶ್ರೀಲಂಕಾ ಅಧ್ಯಕ್ಷ ಅನುರಾ ದಿಸನಾಯಕ ಅವರು ಕಳೆದ ಡಿಸೆಂಬರ್‌ನಲ್ಲಿ ದೆಹಲಿಗೆ ಭೇಟಿ ನೀಡಿದ್ದರು. ಈ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅವರ ಭೇಟಿ ನಡೆಯಲಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ 2015, 2017 ಮತ್ತು 2019ರಲ್ಲಿ ಮೂರು ಬಾರಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು.ಇದನ್ನೂ ಓದಿ: ಬಾಯಿಯಲ್ಲಿ ಚಾಕು ಹಿಡಿದು ರಗಡ್ ಅವತಾರದಲ್ಲಿ ಬಂದ ಜಾನ್ವಿ ಕಪೂರ್

    ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ, ಎರಡೂ ದೇಶಗಳ ನಡುವಿನ ಚರ್ಚೆಗಳು ಸಂಪರ್ಕ ಮತ್ತು ಆರ್ಥಿಕ ಸಂಬಂಧಗಳನ್ನು ಒಳಗೊಳ್ಳುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಭಾರತದ ರಾಮೇಶ್ವರಂ ಮತ್ತು ಶ್ರೀಲಂಕಾದ ತಲೈಮನ್ನರ್ ನಡುವೆ ಹೊಸ ದೋಣಿ ಮಾರ್ಗದ ಬಗ್ಗೆ ಚರ್ಚಿಸಲಾಗುತ್ತಿದೆ.

    ನಾಗಪಟ್ಟಣಂ ಅನ್ನು ತ್ರಿಕೋನಮಲಿಯೊಂದಿಗೆ ಸಂಪರ್ಕಿಸುವ ಬಹು ಉತ್ಪನ್ನ ಪೆಟ್ರೋಲಿಯಂ ಪೈಪ್‌ಲೈನ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಕೂಡ ಮುಂದುವರಿಯುವ ಸಾಧ್ಯತೆಯಿದೆ. ಈ ಯೋಜನೆಯಲ್ಲಿ ಭಾರತೀಯ ತೈಲ ನಿಗಮವು ಪ್ರಮುಖ ಪಾತ್ರ ವಹಿಸಿದೆ.ಇದನ್ನೂ ಓದಿ: ಮೈಸೂರು ಮಹಾರಾಜರ ಕುಟುಂಬ ರಕ್ಷಿಸಿದ್ದ `ಶ್ಯಾಡೋ’ ಚಿರತೆ ದಿಢೀರ್ ಸಾವು

  • ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ ಜೇವರ್ಗಿ ಮೂಲದ ಟೆಕ್ಕಿ ಸಾವು

    ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದ ಜೇವರ್ಗಿ ಮೂಲದ ಟೆಕ್ಕಿ ಸಾವು

    ಕಲಬುರಗಿ: ಶ್ರೀಲಂಕಾ (Sri Lanka) ಪ್ರವಾಸಕ್ಕೆ ತೆರಳಿದ್ದ ಜೇವರ್ಗಿ ಮೂಲದ ಟೆಕ್ಕಿ (Techie) ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ (Swimming Pool) ಈಜಾಡುವಾಗ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ.

    ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್‌ಕೆ ಗ್ರಾಮದ ಸಂತೋಷ್ ಮಲ್ಲೆದ್ (34) ಮೃತ ಟೆಕ್ಕಿ. ಇದನ್ನೂ ಓದಿ: ಗಿಲ್‌ ಶತಕದಾಟ, ಶಮಿ ಬೆಂಕಿ ಬೌಲಿಂಗ್ – ಬಾಂಗ್ಲಾ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ

    ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಂತೋಷ್, ಫೆ.15 ರಂದು ಸ್ನೇಹಿತರೊಂದಿಗೆ ಶ್ರೀಲಂಕಾದ ಕ್ಯಾಂಡಿಗೆ ಪ್ರವಾಸ ಕೈಗೊಂಡಿದ್ದರು. ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುತ್ತಿದ್ದಾಗ ತಲೆಗೆ ಪೆಟ್ಟು ಬಿದ್ದು ಸಂತೋಷ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಹಗರಣ – ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಬಿಗ್ ರಿಲೀಫ್!

    ಟೆಕ್ಕಿ ಸಂತೋಷ್ ಮೃತದೇಹ ಶುಕ್ರವಾರ ಹೈದರಾಬಾದ್ ಮೂಲಕ ಕಲಬುರಗಿಗೆ ಆಗಮಿಸಲಿದೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ