Tag: ಶ್ರೀರಾಮ

  • ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

    ಇರಾಕ್ ಬಂಡೆಯ ಮೇಲೆ ರಾಮನ ಚಿತ್ರ ಪತ್ತೆ

    ಲಖನೌ: ಭಾರತೀಯ ನಿಯೋಗವೊಂದು ಜೂನ್‍ನಲ್ಲಿ ಇರಾಕ್ ಯಾತ್ರೆ ಕೈಗೊಂಡಿದ್ದ ವೇಳೆ ಕ್ರಿಸ್ತಪೂರ್ವ 2000ನೇ ಇಸವಿಯ ಕಾಲದ್ದು ಎನ್ನಲಾದ ಪ್ರಾಚೀನ ಬಂಡೆಯ ಮೇಲೆ ಶ್ರೀರಾಮನ ಚಿತ್ರ ಕಾಣಿಸಿಕೊಂಡಿವೆ ಎಂದು ಅಯೋಧ್ಯಾ ಶೋಧ ಸಂಸ್ಥಾನ ಹೇಳಿದೆ.

    ಇರಾಕ್‍ನ ಹೊರೇನ್ ಶೇಖಾನ್ ಪ್ರದೇಶಕ್ಕೆ ಹೋಗುವ ಕಿರುದಾದ ದಾರಿಯ ಎದುರಿನ ಮಣ್ಣಿನ ಗೋಡೆಯೊಂದರಲ್ಲಿ (ದರ್ಬಂದ್-ಇ-ಬೆಲುಲಾ) ಈ ಚಿತ್ರ ಕಂಡುಬಂದಿದೆ. ಈ ಚಿತ್ರದಲ್ಲಿ ಎದೆಯ ಮೇಲೆ ಯಾವುದೇ ಅಲಂಕಾರವಿಲ್ಲದ ರಾಜನೊಬ್ಬ ಧನುಸ್ಸನ್ನು ಹಿಡಿದು ಬಾಣ ಹೂಡುತ್ತಿರುವ ಚಿತ್ರಣವಿದೆ. ಅಲ್ಲದೇ ರಾಜನ ಸೊಂಟಕ್ಕೆ ಖಡ್ಗವನ್ನು ಸಿಕ್ಕಿಸಿಕೊಂಡಂತೆ ಇದೆ. ರಾಜನ ಎದುರಿಗೆ ಪಾದದ ಬಳಿ ಕೈಮುಗಿದು ಕುಳಿತ ಸೇವಕನ ಚಿತ್ರವಿದ್ದು, ಅದು ಹನುಮಂತನದ್ದಾಗಿರಬಹುದು ಎಂದು ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕರು ಹೇಳಿದ್ದಾರೆ.

    ಇರಾಕ್‍ನಲ್ಲಿರುವ ಭಾರತದ ರಾಯಭಾರಿ ಪ್ರದೀಪ್ ಸಿಂಗ್ ರಾಜಪುರೋಹಿತ್ ನೇತೃತ್ವದ ನಿಯೋಗವು ಅಯೋಧ್ಯಾ ಶೋಧ ಸಂಸ್ಥಾನದ ಕೋರಿಕೆ ಮೇರೆಗೆ ಈ ಪ್ರದೇಶಕ್ಕೆ ಯಾತ್ರೆ ಕೈಗೊಂಡಿತ್ತು. ಅಯೋಧ್ಯಾ ಶೋಧ ಸಂಸ್ಥಾನವು ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಅಧ್ಯಯನ ಸಂಸ್ಥೆಯಾಗಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿ ಚಂದ್ರಮೌಳಿ ಕರ್ಣ, ಸುಲೈಮಾನಿಯಾ ವಿಶ್ವವಿದ್ಯಾಲಯದ ಇತಿಹಾಸ ತಜ್ಞರು ಮತ್ತು ಕುರ್ದಿಸ್ಥಾನದ ಇರಾಕಿ ಗವರ್ನರ್ ಕೂಡ ಈ ಶೋಧ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

    ಅಯೋಧ್ಯಾ ಶೋಧ ಸಂಸ್ಥಾನದ ನಿರ್ದೇಶಕ ಯೋಗೇಂದ್ರ ಪ್ರತಾಪ್ ಸಿಂಗ್ ಹೇಳುವ ಪ್ರಕಾರ, ನಿಯೋಗ ಈಗ ಸಂಗ್ರಹಿಸಿರುವ ಭೌಗೋಳಿಕ ದಾಖಲೆಗಳ ವಿಸ್ತೃತ ಅಧ್ಯಯನದಿಂದ ಭಾರತೀಯ ಮತ್ತು ಮೆಸೊಪೊಟೇಮಿಯಾ ಸಂಸ್ಕೃತಿಗಳ ನಡುವಣ ಕೊಂಡಿಯನ್ನು ಪತ್ತೆ ಮಾಡಬಹುದು. ಮತ್ತು ಮಣ್ಣಿನ ಕೆತ್ತನೆಯಲ್ಲಿ ಕಂಡು ಬರುವ ದೊರೆ ಮತ್ತು ಸೇವಕನ ಚಿತ್ರಣವು ನಮ್ಮಲ್ಲಿ ಹಲವರಿಗೆ ಭಗವಾನ್ ಶ್ರೀರಾಮ ಮತ್ತು ಹನುಮಂತನನ್ನು ನೆನಪಿಗೆ ತಂದಿತು ಎಂದಿದ್ದಾರೆ.

    ಇರಾಕಿನ ವಿದ್ವಾಂಸರು, ಮಣ್ಣಿನ ಗೋಡೆಯ ಚಿತ್ರಣವು ಪರ್ವತ ಪ್ರದೇಶದ ಬುಡಕಟ್ಟು ನಾಯಕ ತಾರ್ದುನ್ನಿಯನ್ನು ಹೋಲುತ್ತದೆ. ಹಿಂದೆಯೂ ಇರಾಕ್‍ನ ಕೆಲವೆಡೆ ಈ ರೀತಿಯ ಮಣ್ಣಿನ ಭಿತ್ತಿ ಕೆತ್ತನೆಗಳಲ್ಲಿ ರಾಜ ಹಾಗೂ ಅವನ ಮುಂದೆ ಮಂಡಿಯೂರಿ ಕುಳಿತ ಸೇವಕನ ಚಿತ್ರಗಳು ಕಂಡು ಬಂದಿವೆ. ಈ ಸೇವಕನನ್ನು ರಾಜನು ಬಂಧಿಸಿ ಕರೆತಂದ ಕೈದಿಯಾಗಿರಬಹುದು ಎಂದು ಹೇಳಿದ್ದಾರೆ.

    ಇರಾಕಿನ ಪ್ರಾಚೀನ ವಸ್ತು ಸಂಶೋಧಕರು ಮತ್ತು ಇತಿಹಾಸಕಾರರ ಪ್ರಕಾರ ಈ ಚಿತ್ರಗಳಿಗೂ ಭಗವಾನ್ ರಾಮನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಪ್ರತಾಪ್ ಸಿಂಗ್ ಅವರು ಎರಡೂ ನಾಗರಿಕತೆಗಳ ನಡುವಣ ಸಂಬಂಧದ ಕೊಂಡಿಯನ್ನು ಶೋಧಿಸಲು ಇರಾಕ್ ಸರ್ಕಾರದ ಅನುಮತಿ ಅಗತ್ಯವಿದೆ. ಅನುಮತಿಗಾಗಿ ನಾವು ಸರ್ಕಾರಕ್ಕೆ ಕೋರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

    ಜಗತ್ತಿನ ಹಲವು ಭಾಗಗಳಲ್ಲಿ ಶ್ರೀರಾಮನ ಹೆಜ್ಜೆ ಗುರುತುಗಳ ದಾಖಲೆಗಳು ಲಭ್ಯವಾಗಿವೆ. ಹೀಗೆ ಜಗತ್ತಿನ ನಾನಾ ಭಾಗಗಳಲ್ಲಿ ಪತ್ತೆಯಾದ ದಾಖಲೆಗಳ ಪ್ರತಿಕೃತಿಗಳನ್ನು ಅಯೋಧ್ಯೆಯಲ್ಲಿ ಒಂದೇ ಕಡೆ ಸಂಗ್ರಹಿಸಿ ಇಡುವ ಉದ್ದೇಶವಿದೆ. ಸಿಂಧೂ ನಾಗರಿಕತೆ ಮತ್ತು ಮೆಸೊಪೊಟೇಮಿಯಾ ನಾಗರಿಕತೆಗಳ ನಡುವೆ ಸಂಬಂಧ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮೊದಲ ಅಧಿಕೃತ ಪ್ರಯತ್ನ ಇದಾಗಿದೆ ಎಂದು ಸಿಂಗ್ ತಿಳಿಸಿದರು.

  • ಕೇರಳ ಸರ್ಕಾರಕ್ಕೆ ಸಾಹಿತಿ ಚಂಪಾ ಅಭಿನಂದನೆ

    ಕೇರಳ ಸರ್ಕಾರಕ್ಕೆ ಸಾಹಿತಿ ಚಂಪಾ ಅಭಿನಂದನೆ

    ಧಾರವಾಡ: ಇಬ್ಬರು ಮಹಿಳೆಯರಿಗೆ ಭದ್ರತೆ ನೀಡಿ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಸಹಾಯ ಮಾಡಿದ್ದಕ್ಕೆ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು ಕೇರಳ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕೇರಳ ಸರ್ಕಾರ ನಡೆದುಕೊಂಡಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಹೀಗಾಗಿ ಕೇರಳ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೆನೆ. ಅಲ್ಲಿನ ಸರ್ಕಾರ ಸೂಕ್ತವಾದ ನಿರ್ಣಯ ತೆಗೆದುಕೊಂಡಿದೆ. ಮಹಿಳೆಯರ ಪ್ರವೇಶಕ್ಕೆ ವಿರೋಧಿಸಿದರೆ ಸುಪ್ರಿಂಗೆ ಅಗೌರವ ಸಲ್ಲಿಸಿದಂತಾಗುತ್ತದೆ. ನಾವು ಇಡೀ ಕೇರಳ ಜನತೆಗೆ ಅಭಿನಂದನೆ ಸಲ್ಲಿಸಬೇಕು. ಒಬ್ಬರಿಗೆ ಎಂಟ್ರಿ ಸಿಕ್ಕರೆ ಸಾಕು ಮೂಢನಂಬಿಕೆ, ಕೋಮುವಾದ ಆಧುನಿಕ ಮೌಲ್ಯಗಳಲ್ಲ ಅಂತ ಅವರು ಹೇಳಿದ್ರು.

    ಇದೇ ವೇಳೆ ಪ್ರೋ. ಭಗವಾನ್ ಪುಸ್ತಕದಲ್ಲಿ ಶ್ರೀರಾಮನಿಗೆ ಅವಮಾನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದ ಮುಖ್ಯ ಗುಣ ಪ್ರತಿರೋಧವಾಗಿದೆ. ಪ್ರಜಾಪ್ರಭುತ್ವದಲ್ಲಿ ವೈಚಾರಿಕ ವಿರೋಧಗಳಿರಬೇಕು. ರಾಮಮಂದಿರ ಏಕೆ ಬೇಡ? ಹಳೆಯ ಪುಸ್ತಕವಾಗಿದೆ. ಇದೀಗ ಅದರ ಎರಡನೇ ಮುದ್ರಣ ಹೊರ ಬರುತ್ತಿದೆ. ಈಗ ಅದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ‘ಬೇಡ’ ಅನ್ನೋ ಪುಸ್ತಕ ಬರೆಯಲಾಗಿದೆ. ಅದನ್ನು ಎದುರಿಸಲು ‘ಏಕೆ ಬೇಕು?’ ಅನ್ನೋದನ್ನು ಬರೆಯಬೇಕು ಅಂದ್ರು. ಇದನ್ನೂ ಓದಿ: ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದ್ದು, ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದ್ರಲ್ಲಿ ತಪ್ಪೇನಿದೆ- ಜಯಮಾಲಾ ಪ್ರಶ್ನೆ

    ‘ಏಕೆ ಬೇಕು?’ ಅನ್ನೋ ಪುಸ್ತಕ ಬರೆದು ಎದುರಿಸಲಿ. ಆಗ ಅದು ಪ್ರಜಾಪ್ರಭುತ್ವದ ಗುಣವೆನ್ನಿಸಿಕೊಳ್ಳುತ್ತದೆ. ನಾನು ಮೂಲತಃ ನಾಸ್ತಿಕ. ಹೀಗಾಗಿ ದೇವರು, ಪುರಾಣಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಮಂದಿರ ನಿರ್ಮಾಣದ ವಿಚಾರ ನನ್ನ ವ್ಯಾಪ್ತಿಯಲ್ಲಿ ಬರೋದಿಲ್ಲ. ವಾಲ್ಮೀಕಿ ಮುಂಚೆಯೂ ರಾಮಾಯಣದ ಕಥೆ ಇದೆ ಅಂತಾರೆ. ನನ್ನ ಪಾಲಿಗೆ ಅದೊಂದು ಮಹಾಕಾವ್ಯವಾಗಿದೆ. ವಾಲ್ಮೀಕಿ ರಾಮಾಯಣ ಸಂಸ್ಕೃತ ಮೂಲದ್ದಾಗಿದೆ. ಆದರೆ ಸಂಸ್ಕೃತ ನನಗೆ ಬರೋದಿಲ್ಲ. ಹೀಗಾಗಿ ನಾನು ವಾಲ್ಮೀಕಿ ರಾಮಾಯಣ ಓದಿಲ್ಲ. ನಾನು ಕುವೆಂಪು ರಾಮಾಯಣ ಓದಿದ್ದೇನೆ. ನಮ್ಮಲ್ಲಿ ಒಟ್ಟು 300 ರಾಮಾಯಣಗಳಿವೆ. ರಾಮ ದೇವರೋ, ಇತಿಹಾಸ ಪುರುಷನೋ ಅನ್ನೋದನ್ನು ಸಂಶೋಧಕರಿಗೆ ಬಿಡಬೇಕು. ಹೀಗಾಗಿ ಈ ವಿಚಾರ ನನ್ನ ವ್ಯಾಪ್ತಿಗೆ ಬರೋದಿಲ್ಲ ಅಂತ ಅವರು ತಿಳಿಸಿದ್ರು.

    ರಾಮಮಂದಿರ ನಿರ್ಮಾಣ ವಿಚಾರದ ಕುರಿತು ಮಾತನಾಡಿದ ಸಾಹಿತಿ, ಮೋದಿಯವರು ಕೋರ್ಟ್ ಆದೇಶ ಬಂದ ಮೇಲೆ ನೋಡೋಣ ಅಂದಿದ್ದಾರೆ. ಹೀಗಾಗಿ ಪ್ರಧಾನಿ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

    ಧಮ್ ಇದ್ರೆ ನನ್ನ ಸಾಧನೆ ತೋರಿಸಿ – ನನ್ನನ್ನು ಟಿವಿಗೆ ಚರ್ಚೆಗೆ ಕರೆಯಿರಿ ಎಂದ ಕೊಪ್ಪಳ ಶಾಸಕ ಅನ್ಸಾರಿ

    ಕೊಪ್ಪಳ: ಶ್ರೀರಾಮನ ಹೆಸರಲ್ಲಿ ಕೊಲೆ, ಸುಲಿಗೆ ಮಾಡ್ತಾರೆ ಅನ್ನೋ ವಿವಾದಿತ ಹೇಳಿಕೆಯನ್ನ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಸಮರ್ಥಿಸಿಕೊಂಡಿದ್ದಾರೆ.

    ಗಂಗಾವತಿಯಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಯೊಳಗೆ ಶ್ರೀರಾಮನ ಪೂಜೆ ಮಾಡ್ತಾರೆ. ಹೊರಗಡೆ ಬಂದು ಬೆಂಕಿ ಹಚ್ಚುತ್ತಾರೆ. ಅತ್ಯಾಚಾರ ಮಾಡ್ತಾರೆ. ಈ ರೀತಿ ಮಾಡಲು ದೇವರು ಹೇಳಿದ್ದಾರಾ? ಯಾವ ಧರ್ಮ ಗ್ರಂಥದಲ್ಲಿ ಇಂಥ ಕೆಲಸ ಮಾಡಿ ಅಂತ ಹೇಳಿಲ್ಲ ಅಂತ ಹೇಳುವುದರ ಮೂಲಕ ತನ್ನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

    ನಾನು ಏನು ಹೇಳಿದ್ದೀನಿ ಅನ್ನೋದು ಟಿವಿಯವರು ಪೂರ್ಣ ತೋರಿಸುವುದಿಲ್ಲ. ಹಿಂದೆ- ಮುಂದೆ ಏನು ಹೇಳಿದ್ದೀನಿ ಅನ್ನೋದು ಬಿಟ್ಟು ಶ್ರೀರಾಮ ಹೆಸ್ರಲ್ಲಿ ಕೊಲೆ ಅನ್ಸಾರಿ ಹೇಳಿಕೆ ಅಂತ ತೋರಿಸ್ತಾರೆ. ಇದಕ್ಕೆ ಗೋಮಧುಸೂದನ್ ಕರೆದು ಡಿಬೆಟ್ ಮಾಡ್ತಾರೆ. ಗಡ್ಡ ಬಿಟ್ಟ ಅಮಾಯಕ ಮುಸ್ಲಿಮ್ ವ್ಯಕ್ತಿಗಳನ್ನು ಕರೆದು ಏನ್ರಿ ಶಾಸಕ ಅನ್ಸಾರಿ ಹೀಗೆ ಹೇಳಿದ್ದಾರೆ ಅಂತ ಕೇಳ್ತಾರೆ. ಅದಕ್ಕೆ ಅವರು ಈ ರೀತಿ ಹೇಳೊದು ತಪ್ಪು ಅಂತಾರೆ ಎಂದು ಟಿವಿ ಮಾಧ್ಯಮದ ವಿರುದ್ಧ ಅನ್ಸಾರಿ ಹರಿಹಾಯ್ದಿದರು. ಇದನ್ನೂ ಓದಿ: ಮನೆಯೊಳಗೆ ಜೈ ಶ್ರೀರಾಮ್, ಹೊರಗೆ ಕೊಲೆ ಸುಲಿಗೆ: ಶಾಸಕ ಇಕ್ಬಾಲ್ ಅನ್ಸಾರಿ ವಿವಾದಿತ ಹೇಳಿಕೆ

    ಪದೇ ಪದೇ ಗೋಮಧುಸೂದನ್ ನನ್ನ ಡಿಬೇಟ್ ಗೆ ಯಾಕೆ ಕರೀತಿರಾ. ನೀವು ಏನಾದ್ರೂ ಅವರಿಗೆ ಜಾಹೀರಾತಿಗೆ ಇಟ್ಟುಕೊಂಡಿದ್ದೀರಾ? ಬಿಜೆಪಿಯಲ್ಲಿ ಮತ್ತ್ಯಾರು ಇಲ್ವಾ. ಗೋಮಧುಸೂದನ್ ಒಬ್ಬರೇ ಇರೋದಾ? ನಿಮಗೆ ಧೈರ್ಯ ಇದ್ರೆ ಚರ್ಚೆಗೆ ನಮ್ಮಂತವರನ್ನು ಕರೆಯಿರಿ. ದೇಶದಲ್ಲಿ ಪ್ರಚೋದನಾಕಾರಿ ನಡೆಯುತ್ತಿದೆ ಅಂದ್ರೆ ಇವರಿಂದಲೇ ಮಾತ್ರ ನಡೆಯುತ್ತಿದೆ ಎಂದು ಮಾಧ್ಯಮದ ವಿರುದ್ಧ ಕಿಡಿ ಕಾರಿದ್ರು.

    ಇಂದು ಟಿವಿ ನಡೆಯಬೇಕಲ್ಲ, ರಾಜ್ಯದಲ್ಲಿ ಸುದ್ದಿ ಇರೋಲ್ಲ. ಹೀಗಾಗಿ ಇಷ್ಟ ಇರೋ ಸುದ್ದಿಯನ್ನ ತಗೊಂಡು ಸೆವಂಟಿ ಎಂಎಂ ಮಾಡಿ ಇಷ್ಟುದ್ದ ತೋರಿಸ್ತಾರೆ. ನಿಮಗೆ ಧಮ್ ಇದ್ರೆ ಇಕ್ಬಾಲ್ ಅನ್ಸಾರಿ ಮಂತ್ರಿ ಏನು ಮಾಡಿದ್ದಾನೆ ಅನ್ನೋದು ತೋರಿಸಿ. ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಟ್ಟಿದ್ದಾರೆ ಅನ್ನೋದು ಏನೆಲ್ಲಾ ಮಾಡಿದೀನಿ ತೋರಿಸಿ ನೋಡೋಣ ಅಂತ ಟಿವಿ ಮಾಧ್ಯಮಕ್ಕೆ ಪಂಥಾಹ್ವಾನ ನೀಡಿದರು.

  • ಶ್ರೀರಾಮನ ಅಸ್ತಿತ್ವಕ್ಕೆ ಸರಿಯಾದ ದಾಖಲೆ ಇಲ್ಲ, ಏಸು-ಪೈಗಂಬರ್ ಅಸ್ತಿತ್ವಕ್ಕೆ ಸಾಕ್ಷ್ಯವಿದೆ: ದ್ವಾರಕನಾಥ್ ಹೇಳಿಕೆ

    ಶ್ರೀರಾಮನ ಅಸ್ತಿತ್ವಕ್ಕೆ ಸರಿಯಾದ ದಾಖಲೆ ಇಲ್ಲ, ಏಸು-ಪೈಗಂಬರ್ ಅಸ್ತಿತ್ವಕ್ಕೆ ಸಾಕ್ಷ್ಯವಿದೆ: ದ್ವಾರಕನಾಥ್ ಹೇಳಿಕೆ

    ಮಂಗಳೂರು: ಶ್ರೀರಾಮ ಚಂದ್ರನ ಅಸ್ತಿತ್ವಕ್ಕೆ ಸರಿಯಾದ ದಾಖಲೆ ಇಲ್ಲ. ಅದೊಂದು ಅಪ್ಪಟ ಸುಳ್ಳು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮಂಗಳೂರಿನ ಪುರಭವನದಲ್ಲಿ ಮಂಗಳವಾರ ನಡೆದ ಬಾಬ್ರಿ ಮಸೀದಿ ಧ್ವಂಸ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ದ್ವಾರಕನಾಥ್ ನಾಲಗೆ ಹರಿಬಿಟ್ಟಿದ್ದು, ಶ್ರೀರಾಮ ಚಂದ್ರನ ಅಸ್ತಿತ್ವಕ್ಕೆ ಯಾವುದೇ ದಾಖಲೆಗಳಿಲ್ಲ. ರಾಮನ ಕುರಿತು ಸರಿಯಾದ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.

    ನಮ್ಮ ತಾತನ ಹೆಸರು ಹೇಳಿ ಎಂದರೆ ಹೇಳಬಹುದು. ಅವರ ಅಪ್ಪನ ಹೆಸರು ಹೇಳಿ ಅಂದರೆ ಆಗುತ್ತಾ. ಆದರೆ 9 ಲಕ್ಷ ವರ್ಷಗಳ ಹಿಂದೆ ಇದ್ದ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆ ಎಂದರೆ ಇದಕ್ಕೆ ಏನು ಹೇಳಬೇಕು ಗೊತ್ತಿಲ್ಲ ಎಂದು ಹೇಳಿದರು.

    ನಮಗೆ ಜ್ಞಾನ ಬಂದ ನಂತರ ದಾಖಲಾತಿಗಳ ಪ್ರಕಾರ ನಾನು ಜಗತ್ತಿನಲ್ಲಿ ಮೂರು ವ್ಯಕ್ತಿಗಳನ್ನು ಗುರುತಿಸಬಹುದು. ಮೊದಲನೆಯದ್ದಾಗಿ ಬುದ್ದ. ಇವರು ಸುಮಾರು 2600 ವರ್ಷಗಳ ಹಿಂದೆ ಇದ್ದರು ಎಂಬುದಕ್ಕೆ ದಾಖಲಾತಿಗಳಿವೆ. ಎರಡನೆಯದಾಗಿ ಜೀಸಸ್. ಇವರು ಸುಮಾರು 1600 ವರ್ಷಗಳ ಹಿಂದೆ ಇದ್ದರು, ಇದಕ್ಕೂ ಪುರಾವೆಗಳಿವೆ. ಇನ್ನು ಮೂರನೆಯದಾಗಿ ಪೈಗಂಬರ್. ಇವರು ಸುಮಾರು 600 ವರ್ಷಗಳ ಹಿಂದೆ ಇದ್ದರು ಎಂಬುವುದಕ್ಕೆ ದಾಖಲಾತಿಗಳಿವೆ.

    ಇವುಗಳನ್ನು ಹೊರತುಪಡಿಸಿದರೆ ಇನ್ನು ಯಾವ ದಾಖಲಾತಿಗಳೂ ವಿಜ್ಞಾನದ ಕಣ್ಣಿಗೆ ಸಿಗುತ್ತಿಲ್ಲ. ಹಿಂದಿನಿಂದಲೂ ಸುಳ್ಳು ಹೇಳಿಕೊಂಡೇ ಸತ್ಯಾವನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಗೆ ಬೆಳ್ಳಿ ಬಾಣ ಉಡುಗೊರೆ ನೀಡಲು ವಕ್ಫ್ ಮಂಡಳಿ ನಿರ್ಧಾರ

    ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಗೆ ಬೆಳ್ಳಿ ಬಾಣ ಉಡುಗೊರೆ ನೀಡಲು ವಕ್ಫ್ ಮಂಡಳಿ ನಿರ್ಧಾರ

    ಲಕ್ನೋ: 100 ಮಿಟರ್ ಎತ್ತರದ ಶ್ರೀರಾಮನ ಮೂರ್ತಿ ನಿರ್ಮಿಸಲು ಮುಂದಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ಧಾರವನ್ನ ಸ್ವಾಗತಿಸಿರೋ ರಾಜ್ಯ ಶಿಯಾ ವಕ್ಫ್ ಮಂಡಳಿ ರಾಮನ ಮೂರ್ತಿಗಾಗಿ 10 ಬೆಳ್ಳಿ ಬಾಣಗಳನ್ನು ಉಡುಗೊರೆಯಾಗಿ ನೀಡಲು ಬಯಸಿದೆ.

    ಈ ಬಗ್ಗೆ ಸಿಎಂ ಯೋಗಿ ಆಗಿತ್ಯನಾಥ್‍ಗೆ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ ಪತ್ರ ಬರೆದಿದ್ದಾರೆ. ಶ್ರೀರಾಮನಿಗೆ ಶಿಯಾಗಳ ಪರವಾಗಿ ಪ್ರೀತಿ ಹಾಗೂ ಗೌರವದ ಸಂಕೇತವಾಗಿ ಬೆಳ್ಳಿ ಬಾಣಗಳನ್ನ ನೀಡಲಾಗ್ತಿದೆ ಎಂದಿದ್ದಾರೆ.

    ಶ್ರೀರಾಮ ಬಾಣಗಳಿಂದ ರಾಕ್ಷಸರನ್ನು ಸಂಹಾರ ಮಾಡಿದ ರಿತಿಯಲ್ಲೇ ಈ ಬಾಣಗಳು ಭಾರತದ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಸೂಚಿಸುತ್ತದೆ ಎಂದು ರಿಜ್ವಿ ಬರೆದಿದ್ದಾರೆ. ರಾಮ ತನ್ನ ಬಾಣದಿಂದ ರಾಕ್ಷಸರನ್ನು ನಾಶ ಮಾಡಿದಂತೆಯೇ ಭಾರತ ಭಯೋತ್ಪದಾನೆಯಿಂದ ಮುಕ್ತವಾಗುತ್ತದೆ ಎಂದು ಶಿಯಾ ಸಮುದಾಯ ಅಪೇಕ್ಷಿಸುತ್ತದೆ ಎಂದು ಹೇಳಿದ್ದಾರೆ.

    ಈ ಪ್ರದೇಶದ ನವಾಬರು ಸದಾ ಅಯೋಧ್ಯೆಯ ದೇವಾಲಯಗಳನ್ನ ಗೌರವಿಸಿದ್ದರು. ಕೇಂದ್ರ ಅಯೋಧ್ಯಾದಲ್ಲಿರುವ ಹನುಮಾನ್ ಗರ್ಹಿಯ ಭೂಮಿಯೂ ಕೂಡ 1739ರಲ್ಲಿ ನವಾಬ್ ಶುಜಾ ಉದ್ ದೌಲಾ ದಾನ ಮಾಡಿದ್ದು. ದೇವಾಲಯ ನಿರ್ಮಾಣಕ್ಕೆ ನವಾಬ್ ಆಸಿಫ್ ಉದ್ ದೌಲಾ ಧನಸಹಾಯ ಮಾಡಿದ್ದರು ಎಂದು ರಿಜ್ವಿ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ಸರಯೂ ನದಿಯ ತೀರದಲ್ಲಿ 100 ಮೀಟರ್ ಎತ್ತರದ ಶ್ರೀರಾಮನ ಮೂರ್ತಿ ನಿರ್ಮಿಸಲು ಇಲ್ಲಿನ ಬಿಜೆಪಿ ಸರ್ಕಾರ ಯೋಜನೆ ರೂಪಿಸಿದೆ. ಈ ಬಗ್ಗೆ ರಾಜ್ಯಪಾಲರಾದ ರಾಮ್ ನಾಯ್ಕ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.