Tag: ಶ್ರೀರಾಮನವಮಿ

  • ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

    ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

    ಹಿಂದೂ ಹಬ್ಬಗಳಲ್ಲಿ ರಾಮನವಮಿಯೂ ಕೂಡ ಒಂದು ಪ್ರಮುಖವಾದ ಹಬ್ಬ. ರಾಮನವಮಿಯನ್ನು ಶ್ರೀ ರಾಮನ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಲ್ಲಿ ಅಂದರೆ ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀ ರಾಮನವಮಿ ಆಚರಿಸಲಾಗುತ್ತದೆ. ಅಥವಾ ಯುಗಾದಿ ಹಬ್ಬದ ಎಂಟು ದಿನಗಳ ನಂತರ ರಾಮನವಮಿ ಆಚರಿಸಲಾಗುತ್ತದೆ.

    ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಶ್ರೀರಾಮ ಜನಿಸಿದ್ದು, ಏ.5 ರಂದು ಸಂಜೆ 7: 26ಕ್ಕೆ ತಿಥಿ ಪ್ರಾರಂಭವಾಗಿ ಏ.6 ರಂದು ಸಂಜೆ 7:22 ಕ್ಕೆ ಕೊನೆಗೊಳ್ಳುತ್ತದೆ. ಕೆಲವು ಕಡೆ ಚೈತ್ರ ಮಾಸದ ಪ್ರತಿಪಾದದಿಂದ 9 ದಿನಗಳವರೆಗೆ ರಾಮನವಮಿ ಉತ್ಸವ ನಡೆಯುತ್ತದೆ. ಈ ಸಮಯದಲ್ಲಿ ಕೆಲವರು 9 ದಿನಗಳ ಕಾಲ ಉಪವಾಸ ಮಾಡುವ ಆಚರಣೆಯನ್ನು ಪಾಲಿಸುತ್ತಾರೆ.

    RAMANAVAMI

    ಇತಿಹಾಸ:
    ರಾಮನವಮಿ ಶ್ರೀ ರಾಮಾಯಣದ ಪ್ರಮುಖ ಪಾತ್ರಧಾರಿ ಭಗವಾನ್ ಶ್ರೀರಾಮನ ಜನ್ಮದಿನ. ಅಯೋಧ್ಯಾಧಿಪತಿ ದಶರಥ ಹಾಗೂ ಕೌಸಲ್ಯ ಪುತ್ರನಾದ ಶ್ರೀರಾಮ ವಿಷ್ಣುವಿನ 7ನೆಯ ಅವತಾರದಲ್ಲಿ ಜನಿಸುತ್ತಾನೆ. ಪ್ರಾರಂಭದಲ್ಲಿ ದಶರಥ ಹಾಗೂ ಆತನ ಮೂವರು ಪತ್ನಿಯರಿಗೂ ಸಂತಾನ ಭಾಗ್ಯ ಇರಲಿಲ್ಲ. ಆಗ ಋಷಿ ವಶಿಷ್ಠರ ಸಲಹೆಯ ಮೇರೆಗೆ ದಶರಥ ಮಹಾರಾಜ ಪುತ್ರ ಕಾಮೇಷ್ಟಿ ಯಜ್ಞವನ್ನು ಮಾಡಿದನು. ಬಳಿಕ ರಾಣಿ ಕೌಸಲ್ಯಗೆ ರಾಮ, ಸುಮಿತ್ರಿಗೆ ಶತ್ರುಘ್ನ ಹಾಗೂ ಲಕ್ಷ್ಮಣ, ಕೈಕೆಯಿಗೆ ಭರತ ಜನಿಸಿದರು. ಹೀಗೆ ರಾಮ ಜನಿಸಿದ ದಿನವನ್ನು ಶ್ರೀರಾಮನವಮಿ ಎಂದು ಆಚರಿಸಲಾಗುತ್ತದೆ. ತ್ರೇತಾಯುಗದಲ್ಲಿ ಜನಿಸಿದ ರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ದೈವಿಕ ಶಕ್ತಿ ನೆಲೆಸುತ್ತದೆ ಎಂಬುದು ನಂಬಿಕೆಯಾಗಿದೆ.

    ಆಚರಣೆ ಹೇಗೆ?
    ಶ್ರೀರಾಮ ನವಮಿಯಂದು ಭಕ್ತರು ಉಪವಾಸ ಮಾಡಿ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಮಾಯಣ ಪಾರಾಯಣ ಮಾಡುವುದು ಈ ಹಬ್ಬದ ಇನ್ನೊಂದು ವಿಶೇಷ. ಜೊತೆಗೆ ಭಜನೆ ರಾಮನ ಕೀರ್ತನೆಗಳನ್ನು 30 ಪಠಿಸುತ್ತಾರೆ. ಅನೇಕ ಕಡೆಗಳಲ್ಲಿ ರಾಮನ ದೇಗುಲಗಳಲ್ಲಿ ಕೀರ್ತನೆ, ರಥೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಕೆಲವು ಕಡೆ 9 ದಿನದ ರಾಮನ ಉತ್ಸವವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ರಾಮ ಪಟ್ಟಾಭಿಷೇಕ ಹಾಗೂ ರಾಮ ಪಂಚಾಯತನದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ರಾಮನವಮಿಯಂದು ಪಾನಕ ಕೋಸಂಬರಿ ನೈವೇದ್ಯ ಇಟ್ಟು ಪೂಜೆ ಮಾಡೋದು ವಿಶೇಷ. ಇನ್ನು ಕೆಲವರು ರಾಮನವಮಿಯಂದು ರಾಮ ನಾಮ ಬರೆಯುತ್ತಾರೆ.

    ದೇಶದ ಕೆಲವು ಪ್ರದೇಶಗಳಲ್ಲಿ ವಿಜೃಂಭಗಳಿಂದ ರಾಮನವಮಿ ಆಚರಿಸಲಾಗುತ್ತದೆ.
    ಅಯೋಧ್ಯೆ: ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಶ್ರೀರಾಮನವಮಿಯಂದು ವಿಜೃಂಭಣೆಯಿಂದ ಪೂಜೆ, ಪವಿತ್ರ ಸ್ನಾನ, ಭವ್ಯ ಮೆರವಣಿಗೆ, ರಾಮಾಯಣ ಪಾಠ ನಡೆಯುತ್ತದೆ.

    ಸೀತಾಮಡಿ
    ಸೀತಾದೇವಿಯ ಜನ್ಮಸ್ಥಳವಾದ ಸೀತಾಮಡಿಯಲ್ಲಿ ರಾಮನವಮಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ವಿಶೇಷ ಪೂಜೆ, ಜಾತ್ರೆ ಕೂಡ ನಡೆಯುತ್ತದೆ.

    ಭದ್ರಾಚಲಂ:
    ಶ್ರೀರಾಮನವಮಿಯಂದು ಈ ದೇವಾಲಯದಲ್ಲಿ ಶ್ರೀ ಸೀತಾರಾಮ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ದೇಶದೆಲ್ಲಡೆ ಭಕ್ತಾದಿಗಳು ಈ ದಿವ್ಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿರುತ್ತಾರೆ.

    ರಾಮೇಶ್ವರಂ:
    ರಾಮನ ತೀರ್ಥಯಾತ್ರೆಯ ಪ್ರಮುಖ ಕೇಂದ್ರಗಳಲ್ಲಿ ಒಂದಾದ ರಾಮೇಶ್ವರಂ ನಲ್ಲಿ ರಾಮನವಮಿ ಎಂದು ವಿಶೇಷ, ಹೋಮ ಮತ್ತು ಮಹಾಪ್ರಸಾದ ವಿತರಣೆಯೊಂದಿಗೆ ಆಚರಿಸಲಾಗುತ್ತದೆ.

  • ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು

    ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು

    – ಸೋಶಿಯಲ್ ಮೀಡಿಯಾದಲ್ಲಿ ಭುಗಿಲೆದ್ದ ಆಕ್ರೋಶ

    ಬೀದರ್: ಬಿಜೆಪಿ ಶಾಸಕ (BJP MLA) ರೊಬ್ಬರು ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಶ್ರೀರಾಮನ ನವಮಿಯಂದು ಬಿಜೆಪಿ ಶಾಸಕ ಮಾಡಿಕೊಂಡಿರುವ ಎಡವಟ್ಟಿನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮೂಲಕ ಶಾಸಕರು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಶ್ರೀರಾಮ(Shri Rama) ನಿಗೆ ಅವಮಾನ ಮಾಡಿದ್ರಾ ಎಂಬ ಪ್ರಶ್ನೆ ಹುಟ್ಟಿದೆ.

    ಬಸವಕಲ್ಯಾಣದಲ್ಲಿ ನಡೆದ ಶ್ರೀರಾಮನ ಶೋಭಾಯಾತ್ರೆ ವೇಳೆ ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ಅವರು ಶ್ರೀರಾಮನ ಎಡಗಡೆಯ ತೊಡೆ ಮೇಲೆ ನಿಂತು ಕೊರಳಿಗೆ ಹೂವಿನ ಹಾರ ಹಾಕಿ ಪೋಸ್ ಕೊಟ್ಟಿದ್ದಾರೆ. ಈ ದೃಶ್ಯವನ್ನು ನೆರೆದಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಈ ವೀಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಶಾಸಕರ ನಡೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.

    ಒಟ್ಟಿನಲ್ಲಿ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಎಡವಟ್ಟು ಮಾಡಿಕೊಂಡ ಶಾಸಕರ ವಿರುದ್ಧ ಶ್ರೀರಾಮನ ಭಕ್ತ ಅಸಮಾಧಾನ ಹೊರಹಾಕಿದ್ದು, ಬಸವಕಲ್ಯಾಣವನ್ನು ಬಿಡದ ಶಾಸಕರು ಶ್ರೀರಾಮನನ್ನು ಬಿಟ್ಟಿಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸಿದ ಯುವಕನ ಮೇಲೆ ಮರಾಠಿಗರಿಂದ ಹಲ್ಲೆ

  • ನಿಷೇಧದ ನಡುವೆಯೂ ಶೋಭಾಯಾತ್ರೆ- ಎಸ್‍ಪಿ ವಾರ್ನಿಂಗ್‍ನಿಂದ ಜಾಗ ಖಾಲಿ ಮಾಡಿದ ಮುತಾಲಿಕ್

    ನಿಷೇಧದ ನಡುವೆಯೂ ಶೋಭಾಯಾತ್ರೆ- ಎಸ್‍ಪಿ ವಾರ್ನಿಂಗ್‍ನಿಂದ ಜಾಗ ಖಾಲಿ ಮಾಡಿದ ಮುತಾಲಿಕ್

    ಕೋಲಾರ: ಶ್ರೀರಾಮನವಮಿ ಅಂಗವಾಗಿ ಕೋಲಾರದಲ್ಲಿ ಹಲವು ವಿವಾದಗಳ ನಡುವೆ, ಆತಂಕದ ಮಧ್ಯೆ ಶ್ರೀರಾಮ ಶೋಭಾಯಾತ್ರೆ ನಡೆಯಿತು. ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಶ್ರೀರಾಮನ ಭಕ್ತರು ಶೋಭಾಯಾತ್ರೆಯಲ್ಲಿ ಕುಣಿದು ಕುಪ್ಪಳಿಸಿದರು.

    ಅದ್ದೂರಿಯಾಗಿ ಆಯೋಜನೆ ಮಾಡಿರುವ ಶ್ರೀರಾಮನ ಶೋಭಾಯಾತ್ರೆಗೆ ಚಾಲನೆ ನೀಡಿದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್. ಇವತ್ತು ಶ್ರೀರಾಮನವಮಿ ಪ್ರಯುಕ್ತ ಶ್ರೀರಾಮಸೇನೆ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಶೋಭಾಯಾತ್ರೆ ಆಯೋಜನೆ ಮಾಡಿತ್ತು. ಆದರೆ ಶುಕ್ರವಾರ ಮುಳಬಾಗಿಲಿನಲ್ಲಿ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲುತೂರಾಟ ಪ್ರಕರಣವಾದ ಕಾರಣ ಶೋಭಾಯಾತ್ರೆಗೆ ನೀಡಿದ್ದ ಅನುಮತಿಯನ್ನು ಪೊಲೀಸರು ವಾಪಸ್ ಪಡೆದಿದ್ದರು. ಅದರೆ ಮತ್ತೆ ಶ್ರೀರಾಮಸೇನೆ ಮುಖಂಡರು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡ ನಂತರ ಶೋಭಾಯಾತ್ರೆಗೆ ಅನುಮತಿ ನೀಡಲಾಯಿತು. ಆದರೆ ಶೋಭಾಯಾತ್ರೆ ಇನ್ನೇನು ಆರಂಭವಾಗಬೇಕು ಎನ್ನುವಷ್ಟರಲ್ಲಿ ಯಾವುದೇ ಮುನ್ಸೂಚನೆ ನೀಡದೆ, ಅನುಮತಿ ಪಡೆಯದೆ ಶೋಭಾಯಾತ್ರೆ ಆಯೋಜನೆ ಮಾಡಿದ್ದ ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ಪ್ರಮೋದ್ ಮುತಾಲಿಕ್  ಬಂದಿದ್ದರು.

    ಆದರೆ ಈ ಹಿಂದೆ ಪ್ರಮೋದ್ ಮುತಾಲಿಕ್ ಅವರಿಗೆ ಜಿಲ್ಲೆಯ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಭಂದ ವಿಧಿಸಿದ್ದ ಕಾರಣ ಅವರಿಗೆ ಶೋಭಾಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡದೆ ಕೇವಲ ಶ್ರೀರಾಮನಿಗೆ ಪೂಜೆ ಸಲ್ಲಿಸಿ. 20 ನಿಮಿಷಗಳ ಕಾಲವಾಕಾಶ ಕೊಟ್ಟು ಪೊಲೀಸರು ವಾಪಸ್ ತೆರಳುವಂತೆ ಸೂಚನೆ ನೀಡಿದರು. ಮುತಾಲಿಕ್ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೇಸರಿ ಬಾವುಟ ಹಾರಿಸಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿ ಹೊರಟರು. ಇದೇ ವೇಳೆ ಮಾತನಾಡಿದ ಮುತಾಲಿಕ್, ಕೋಲಾರ ಪಾಕಿಸ್ತಾನದಲ್ಲಿಲ್ಲ ನಾನು ಕೋಲಾರಕ್ಕೆ ಬಾರದಂತೆ ನಿರ್ಬಂಧ ವಿಧಿಸಲಾಗಿದೆ. ಇದು, ತಪ್ಪು ಯಾರು ಸಂಚು ಮಾಡಿ ಗಲಭೆ ಸೃಷ್ಟಿಸುತ್ತಾರೋ ಅವರನ್ನು ಬಂಧಿಸಬೇಕು ಎಂದರು. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

    ಪೊಲೀಸರ ಸೂಚನೆ ಮೇರೆಗೆ ಕೋಲಾರದಿಂದ ಪ್ರಮೋದ್ ಮುತಾಲಿಕ್ ವಾಪಸ್ ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಶೋಭಾಯಾತ್ರೆಗೆ ಮಾಡಿಕೊಂಡಿದ್ದ ಸಿದ್ಧತೆ ಹಿನ್ನೆಲೆ ಹಾಗೂ ನಗರದ ಎಂ.ಜಿ.ರಸ್ತೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಿದ್ದ ಶ್ರೀರಾಮ ಮೂರ್ತಿಯನ್ನು ವಿಸರ್ಜನೆ ಮಾಡುವ ಸಲುವಾಗಿ ಎಂ.ಜಿ ರಸ್ತೆ ಮೂಲಕ, ಗಾಂಧಿ ಚೌಕ್, ಕಾಲೇಜು ವೃತ್ತ, ಬಂಗಾರಪೇಟೆ ವೃತ್ತದ ಮೂಲಕ ಶ್ರೀರಾಮ ಮೂರ್ತಿಯ ಮೆರವಣಿಗೆ ಹಾಗೂ ಶೋಭಾಯಾತ್ರೆ ನಡೆಯಿತು. ಕೋಲಾರ ಎಸ್‍ಪಿ ಡಿ.ದೇವರಾಜ್ ಸ್ವತಃ ಬಂದೋಬಸ್ತ್ ಉಸ್ತುವಾರಿ ವಹಿಸಿಕೊಂಡು ಶೋಭಾಯಾತ್ರೆಗೆ ಅನುವು ಮಾಡಿಕೊಟ್ಟರು. ಈವೇಳೆ ಅಲ್ಲಿದ್ದ ಶ್ರೀರಾಮ ಸೇನೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಶೋಭಾಯಾತ್ರೆ ಮಧ್ಯದಲ್ಲಿ ಸಂಸದ ಮುನಿಸ್ವಾಮಿ ಹಾಗೂ ಶಾಸಕ ರಾಜೂಗೌಡ ಕೂಡ ಶಾಭಾಯಾತ್ರೆಯಲ್ಲಿ ಕೆಲ ಕಾಲ ಭಾಗವಹಿಸಿ ನಂತರ ನಿರ್ಗಮಿಸಿದರು. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ- ಜಮೀರ್ ಹೇಳಿಕೆ ಬೆನ್ನಲ್ಲೇ ಸೈಮನ್ ರಾಜ್ ಕಣ್ಮರೆ

    ಕಳೆದ 2 ದಿನಗಳಿಂದ ಹಲವು ವಿದಾದ ಗೊಂದಲಗಳನ್ನು ಸೃಷ್ಟಿ ಮಾಡಿದ್ದ, ಕೋಲಾರದ ಶೋಭಾಯಾತ್ರೆ ಕೊನೆಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಡೆಯಿತು. ಕ್ಷಣ ಕ್ಷಣದ ಬದಲಾವಣೆಗಳನ್ನು ಪೊಲೀಸರು ಮಾತ್ರ ಬುದ್ದಿವಂತಿಕೆಯಿಂದ ನಿಭಾಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು ವಿಶೇಷ.

  • ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲುತೂರಾಟ- ಪವರ್ ಕಟ್ ಮಾಡಿ ಕಿಡಿಗೇಡಿಗಳ ದುಷ್ಕೃತ್ಯ

    ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲುತೂರಾಟ- ಪವರ್ ಕಟ್ ಮಾಡಿ ಕಿಡಿಗೇಡಿಗಳ ದುಷ್ಕೃತ್ಯ

    ಕೋಲಾರ: ಶ್ರೀರಾಮ ನವಮಿ ಅಂಗವಾಗಿ ಅದ್ಧೂರಿಯಾಗಿ ಶೋಭಾಯಾತ್ರೆ ಆಯೋಜನೆ ಮಾಡಲಾಗಿತ್ತು. ಶೋಭಾಯಾತ್ರೆ ಕಾರ್ಯಕ್ರಮದ ಮೊದಲ ದಿನವಾಗಿ ಶ್ರೀರಾಮನ ಶೋಭಾಯಾತ್ರೆ ನಡೆಯುತ್ತಿತ್ತು. ಅದ್ಧೂರಿಯಾಗಿ ನಡೆಯುತ್ತಿದ್ದ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಪರಿಣಾಮ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.

    ಹೌದು. ಇಂದು ಲವಕುಶ ಜನ್ಮಭೂಮಿ ಪುಣ್ಯಕ್ಷೇತ್ರ ಟ್ರಸ್ಟ್ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಅದರ ಮೊದಲ ದಿನದ ಅಂಗವಾಗಿ ಶ್ರೀರಾಮನ ಶೋಭಾಯಾತ್ರೆ ಮುಳಬಾಗಿಲು ಪಟ್ಟಣದಲ್ಲಿ ನಡೆಯುತ್ತಿತ್ತು. 3 ಗಂಟೆ ಸುಮಾರಿಗೆ ಆರಂಭವಾದ ಶೋಭಾಯಾತ್ರೆ ಮುಳಬಾಗಿಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತಿತ್ತು. ಶೋಭಾಯಾತ್ರೆ ಸಂಜೆ 7.30ರ ಸುಮಾರಿಗೆ ಮುಳಬಾಗಿಲು ಪಟ್ಟಣದ ಜಹಂಗೀರ್ ಸರ್ಕಲ್ ಬಳಿ ಬರುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.

    ರಸ್ತೆಯಲ್ಲಿ ಕತ್ತಲು ಆವರಿಸುತ್ತಿದ್ದ ಕೆಲವೇ ಕ್ಷಣಗಳಲ್ಲಿ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ತಣ್ಣಗಿದ್ದ ವಾತಾವರಣ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಶೋಭಾಯಾತ್ರೆಯಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಲು ಆರಂಭಿಸಿದ್ದಾರೆ. ಕೆಲವರು ಕಲ್ಲು ತೂರಾರಟ ನಡೆಸಿದವರ ಮೇಲೆ ಪ್ರತಿಯಾಗಿ ಕಲ್ಲುತೂರಲು ಆರಂಭಿಸಿ ಈವೇಳೆ ಪರಿಸ್ಥಿತಿಯಲ್ಲಿ ನಿಯಂತ್ರಿಸಿಲು ಪೊಲೀಸರ ಲಾಠಿ ಚಾರ್ಜ್ ಮಾಡಿದ್ದಾರೆ. ಇದನ್ನೂ ಓದಿ: ತಾಯಿ ಆಗಬೇಕು ಎಂದಿದ್ದಕ್ಕೆ ಆಕೆ ಗಂಡನಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್

    ಶೋಭಾಯಾತ್ರೆ ಸಾಗುತ್ತಿದ್ದ ರಸ್ತೆಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದೇ ಮತ್ತೆ ವಿದ್ಯುತ್ ಬರುವಷ್ಟರಲ್ಲಿ ಶಾಂತವಾಗಿದ್ದ ಶೋಭಾಯಾತ್ರೆಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿ ಹೋಗಿತ್ತು. ರಸ್ತೆ ಬಳಿ ಇದ್ದ ಜನರೆಲ್ಲಾ ಅಂಗಡಿಗಳನ್ನು ಬಂದ್ ಮಾಡಿ, ಕೆಲವು ಕಿಡಿಗೇಡಿಗಳು ರಸ್ತೆ ಬಳಿ ಇದ್ದ ಬೈಕ್‍ವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ರಸ್ತೆ ಬದಿ ಇದ್ದ ಕೆಲವು ಕಾರ್‍ಗಳ ಮೇಲೆ ಪೊಲೀಸರ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿದ್ದಾರೆ. ಕ್ಷಣದಲ್ಲಿ ಎರಡು ಕೋಮಿನ ಜನರ ನಡುವೆ ಸಂಘರ್ಷಕ್ಕೆ ದಾರಿ ಮಾಡುವ ಸಾಧ್ಯತೆ ಇದ್ದ ಹಿನ್ನೆಲೆ ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ.

    ಶೋಭಾಯಾತ್ರೆ ಹಿನ್ನೆಲೆ ಈಗಾಗಲೇ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿದ್ದ ಪರಿಣಾಮ ಪರಿಸ್ಥಿತಿಯನ್ನು ತಹಬದಿಗೆ ತರಲಾಯಿತು. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿ ಶೋಭಾಯಾತ್ರೆಯನ್ನು ಮುಂದುವರೆಯಲು ಅನುವು ಮಾಡಿಕೊಟ್ಟಿದ್ದಾರೆ. ಮುಳಬಾಗಿಲು ತಾಲೂಕು ಆವನಿ ಗ್ರಾಮಕ್ಕೆ ತಲುಪಬೇಗಿದ್ದ ಶೋಭಾಯಾತ್ರೆ ತಲುಪಿದೆ. ಇದನ್ನೂ ಓದಿ: ಬೆಂಗಳೂರಿನ 15 ಪ್ರತಿಷ್ಠಿತ ಶಾಲೆಗಳಲ್ಲಿ ಹುಸಿ ಬಾಂಬ್ ಬೆದರಿಕೆ – ಅಮೆರಿಕ ಐಪಿ ಅಡ್ರೆಸ್ ಶಂಕೆ

    ಸದ್ಯ ಮುಳಬಾಗಿಲು ಪಟ್ಟಣದಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದು, ಸ್ಥಳಕ್ಕೆ ಎಸ್ಪಿ ದೇವರಾಜ್, ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಮುಳಬಾಗಿಲು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ಘಟನೆ ಸಂಬಂಧ ನಾಲ್ಕೈದು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಒಟ್ಟಿನಲ್ಲಿ ಶ್ರೀರಾಮ ನವಮಿ ಅಂಗವಾಗಿ ಅದ್ಧೂರಿಯಾಗಿ ನಡೆಯಬೇಕಿದ್ದ ಶೋಭಾಯಾತ್ರೆ ಸಂಘರ್ಷದ ಯಾತ್ರೆಯಾಗಿ ಪರಿಣಮಿಸಿದೆ. ಸದ್ಯ ಮುಳಬಾಗಿಲು ಪಟ್ಟಣದಲ್ಲಿ ಹಾಗೂ ಕೋಲಾರ ಜಿಲ್ಲೆಯಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದ್ದು, ಇಲ್ಲಿ ಶುರುವಾದ ಸಂಘರ್ಷ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದೆ ಸದ್ಯದ ಕುತೂಹಲ.

  • ಭಾನುವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

    ಭಾನುವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

    ಬೆಂಗಳೂರು: ರಾಮನವಮಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಏಪ್ರಿಲ್ 10ರಂದು (ಭಾನುವಾರ) ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

    ಮಾಂಸ ಮಾರಾಟ ನಿಷೇಧ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದ್ದು, ಹಿಂದೂ ಧಾರ್ಮಿಕ ಹಬ್ಬ ರಾಮನವಮಿ ಏಪ್ರಿಲ್ 10ರಂದು ಬಂದಿದೆ. ಭಾನುವಾರ ರಾಮನವಮಿ ಹಬ್ಬದ ಆಚರಣೆ ಹಿನ್ನೆಲೆ ಈ ಆದೇಶವನ್ನು ಬಿಬಿಎಂಪಿ ಜಾರಿಗೆ ತಂದಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ, ಯಾವುದೇ ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ: ಸಿದ್ದರಾಮಯ್ಯ

    ಶ್ರೀರಾಮನವಮಿಯಂದು ಪ್ರಾಣಿ, ವಧೆ ಮತ್ತು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಕಸಾಯಿಖಾನೆಯಲ್ಲೂ ಪಾಣಿವಧೆ, ಮಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಈ ನಿಯಮಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಜಂಟಿ ನಿರ್ದೇಶಕ ಪಶುಪಾಲನಾ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.

  • ರಾಯಚೂರಿನಲ್ಲಿ ರಾಮನವಮಿ ಸಂಭ್ರಮ: ಹಣ್ಣುಗಳ ವಿಶೇಷ ಅಲಂಕಾರ

    ರಾಯಚೂರಿನಲ್ಲಿ ರಾಮನವಮಿ ಸಂಭ್ರಮ: ಹಣ್ಣುಗಳ ವಿಶೇಷ ಅಲಂಕಾರ

    ರಾಯಚೂರು: ಶ್ರೀ ರಾಮನವಮಿಯನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ಸ್ಟೇಷನ್ ರಸ್ತೆಯ ರಾಮ ಮಂದಿರದಲ್ಲಿ ಈ ಬಾರಿ ವಿಶೇಷವಾಗಿ ಅಯೋಧ್ಯ ರಾಮ ಮಂದಿರದ ಮಾದರಿಯನ್ನ ಥರ್ಮಕೋಲ್‍ನಿಂದ ತಯಾರಿಸಿ ರಾಮನಿಗೆ ಪೂಜೆ ಸಲ್ಲಿಸಲಾಗುತ್ತಿದೆ.

    ಸೀತಾರಾಮರಿಗೆ ನಾನಾ ಬಗೆಯ ಹಣ್ಣುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ದ್ರಾಕ್ಷಿ, ಬಾಳೆಹಣ್ಣು, ಸೇಬು, ಪೈನಾಪಲ್ ಹಣ್ಣುಗಳ ಅಲಂಕಾರ ಭಕ್ತರನ್ನ ಸೆಳೆಯುತ್ತಿದೆ. ಪಂಚಾಮೃತ ಅಭಿಷೇಕ, ಪ್ರತ್ಯೇಕ ಪೂಜೆ, ಅಲಂಕಾರ ಸೇವೆ, ತೊಟ್ಟಿಲಲ್ಲಿ ರಾಮನನ್ನ ತೂಗುವ ಮೂಲಕ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಗುತ್ತಿದೆ. ಸಂಜೆ ಆರು ಗಂಟೆಯಿಂದ ಹತ್ತು ಗಂಟೆವರೆಗೆ ಧರ್ಮದರ್ಶನ ಏರ್ಪಡಿಸಲಾಗಿದೆ.

    ರಾಮ ಜನನದ ಈ ದಿನದಂದು ಶ್ರೀರಾಮನಿಗೆ ಪೂಜೆ ಸಲ್ಲಿಸಿದರೆ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ ಅನ್ನೋ ನಂಬಿಕೆಯಿದೆ. ನಗರದ ಶ್ರೀರಾಮನಗರ ಕಾಲೋನಿಯ ಕೊದಂಡರಾಮ ದೇವಾಲಯ, ಗಂಗಾ ನಿವಾಸದ ರಾಮ ದೇವಾಲಯದಲ್ಲಿ ಮಾರ್ಯಾದಾ ಪುರುಷೋತ್ತಮನಿಗೆ ವಿಶೇಷ ಪೂಜೆಗಳನ್ನ ಸಲ್ಲಿಸಲಾಗುತ್ತಿದೆ.