Tag: ಶ್ರೀಮುರುಳಿ

  • ಶ್ರೀಮುರುಳಿ ಸಮ್ಮುಖದಲ್ಲಿ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಟ್ರೈಲರ್ ರಿಲೀಸ್‌

    ಶ್ರೀಮುರುಳಿ ಸಮ್ಮುಖದಲ್ಲಿ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಟ್ರೈಲರ್ ರಿಲೀಸ್‌

    ಮಹಿರಾ ಖ್ಯಾತಿಯ ಮಹೇಶ್ ಗೌಡ (Mahesh Gowdha) ನಿರ್ಮಾಣ, ನಿರ್ದೇಶನ ಮಾಡಿ ನಟಿಸಿರುವ, ರೋರಿಂಗ್ ಸ್ಟಾರ್ ಶ್ರೀಮುರುಳಿ ಅರ್ಪಿಸುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ (Bili Chukki Halli Hakki Film) ಅಕ್ಟೋಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಟ್ರೈಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆಗೊಳಿಸಿದ್ದಾರೆ. ಒಂದಿಡೀ ಸಿನಿಮಾದ ಅಂತಃಸತ್ವವನ್ನು ಆಳವಾಗಿ ಗ್ರಹಿಸಿಕೊಂಡು ಚಿತ್ರತಂಡದ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲೇ ಮೊದಲೆಂಬಂಥಾ ಕಥಾ ಹಂದರ ಹೊಂದಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರಕ್ಕೆ ಶುಭ ಕೋರಿದ್ದಾರೆ.

    ಅತ್ಯಂತ ಹುರುಪಿನಿಂದ ಟ್ರೈಲರ್ ಬಿಡುಗಡೆ ಮಾಡಿ ಮಾತಾಡಿದ ರೋರಿಂಗ್ ಸ್ಟಾರ್ ಶ್ರೀಮುರುಳಿ (Sri Murali), ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಸಲ ʻತೊನ್ನುʼ ಎಂಬ ಸಮಸ್ಯೆಯ ಸುತ್ತ ರೂಪುಗೊಂಡಿರೋ ಚಿತ್ರವಿದು. ಸ್ವತಃ ಆ ಸಮಸ್ಯೆ ಹೊಂದಿರುವ ವ್ಯಕ್ತಿಯೇ ನಿರ್ದೇಶನ ಮಾಡಿ, ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡು ನಟಿಸಿರುವ ಮೆಚ್ಚುಗೆ ವ್ಯಕ್ತಪಡಿಸಿದರು.

    ವಿಟಿಲಿಗೋ ಕೇಂದ್ರಿತವಾದ ಈ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡು ಹೆಮ್ಮೆಯಿಂದ ಅರ್ಪಿಸಲು ಮುಂದಾಗಿರೋದಾಗಿಯೂ ಶ್ರೀಮುರುಳಿ ಹೇಳಿದ್ದಾರೆ. ಕಥೆಯ ನೆಪದಲ್ಲಿ ನೆನಪೊಂದನ್ನ ಹಂಚಿಕೊಂಡ ರೋರಿಂಗ್ ಸ್ಟಾರ್ ಶಾಲಾ ದಿನಗಳಲ್ಲಿ ವಿಟಿಲಿಗೋ ಸಮಸ್ಯೆಯಿಂದ ಬಾಧಿತನಾಗಿದ್ದ ಗೆಳೆಯನ ಬಗ್ಗೆ ಹೇಳುತ್ತಲೇ, ವಿಟಿಲಿಗೋವನ್ನು ಸಮಸ್ಯೆ ಅಂದುಕೊಳ್ಳಬಾರದೆಂಬ ಸಂದೇಶವನ್ನೂ ರವಾನಿಸಿದರು. ಇದೇ ಹೊತ್ತಿನಲ್ಲಿ ಈ ಚಿತ್ರದ ವಿತರಣೆಗೂ ಸಹಾಯ ಮಾಡುವ ಭರವಸೆ ನೀಡಿದರು.

    ಚಿತ್ರತಂಡದೊಂದಿಗೆ ಈ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ಮಹೇಶ್ ಗೌಡ ಅವರು ಸಿನಿಮಾ ಬಗ್ಗೆ ಒಂದಷ್ಟು ಸೂಕ್ಷ್ಮ ವಿಚಾರಗಳನ್ನ ಹಂಚಿಕೊಂಡರು. ವಿಟಿಲಿಗೋ ಸಮಸ್ಯೆಯ ಸುತ್ತ ಹೆಣೆದಿರುವ ಕಥೆ ಅಂದಾಕ್ಷಣ ಮನೋರಂಜನೆ ಇರುವುದಿಲ್ಲ ಅಂದುಕೊಳ್ಳಬೇಕಿಲ್ಲ. ಇದೊಂದು ಪಕ್ಕಾ ಕಮರ್ಶಿಯಲ್ ಧಾಟಿಯ ಸಿನಿಮಾ. ಎಂಥಾ ಗಹನವಾದ ಕಥೆಯನ್ನಾದರೂ ಗಂಭೀರವಾಗಿ ಕಟ್ಟಿಕೊಟ್ಟರೆ ಪ್ರೇಕ್ಷಕರಿಗೆ ತಲುಪೋದು ಕಷ್ಟ. ಹಾಗಿರೋದರಿಂದಲೇ ದುಗುಡವನ್ನೂ ಕೂಡಾ ತೆಳು ಹಾಸ್ಯದ ಮೂಲಕ ದಾಟಿಸುತ್ತಲೇ ಸಾಮಾಜಿಕ ಸಂದೇಶ ನೀಡಲಾಗಿದೆ ಎಂದಿರುವ ಮಹೇಶ್ ಗೌಡ, ಕುಟುಂಬ ಸಮೇತ ಕೂತು ನೋಡುವಂಥಾ ಈ ಪ್ರಯತ್ನ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವ ಭರವಸೆ ವ್ಯಕ್ತಪಡಿಸಿದರು.

    ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ನಾರಾಯಣ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಗೊಂಡಿರುವ ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರ ಬೆನ್ನಲ್ಲಿಯೇ ಟ್ರೈಲರ್ ಬಿಡುಗಡೆಗೊಂಡಿದೆ.

  • ಹೊಸ ಹುಲಿ ಬರ್ತಿದೆ: ಯುವರಾಜ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

    ಹೊಸ ಹುಲಿ ಬರ್ತಿದೆ: ಯುವರಾಜ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

    ಶ್ರೀಮುರಳಿ (Srimuruli) ಗುಡುಗಿದ್ದಾರೆ. ಇಷ್ಟು ದಿನ ಸುಮ್ನನಿದ್ದ ಹುಲಿ ಏಕಾಎಕಿ ಗರ್ಜಿಸಿದೆ. `ದೊಡ್ಮನೆ ಯುಗ ಮುಗಿಯಿತು ಅನ್ನಬೇಡಿ. ಈಗ ಹೊಸ ಹುಲಿ ಬರುತ್ತಿದೆ. ಹುಷಾರಾಗಿರಿ…’ ಹೀಗಂತ ಧಗಧಗಿಸಿದ್ದಾರೆ ಶ್ರೀಮುರಳಿ. ಅದಕ್ಕೆ ಕಾರಣ ಏನು? ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು? ದೊಡ್ಮನೆ ಯುವ ನೆನಪಾಗಿದ್ದೇಕೆ? ಇನ್ನು ಮುಂದೆ ಯರ‍್ಯಾರಿಗೆ ಕಾದಿದೆ ಮಾರಿ ಹಬ್ಬ? ಅದರ ಇಂಚಿಂಚು ಮಾಹಿತಿ ನಿಮ್ಮ ಮುಂದೆ.

    Yuvaraj Kumar

    ದೊಡ್ಡಮನೆ… ಹೆಡ್ಡಾಫೀಸು… ಅಣ್ಣಾವ್ರ ಮನೆ… ಸದಾಶಿವನಗರದ ಬಂಗಲೆ… ವಾಟ್ ಎ ವರ್ಡ್ಸ್? ಸದಾಶಿವನಗರ ಅಂದರೆ ಸಾಕು ಕರುನಾಡಿನ ಯಾವುದೇ ಮೂಲೆಯಲ್ಲಿ ನಿಂತ ವ್ಯಕ್ತಿಯೂ ಹೇಳುತ್ತಿದ್ದ ಒಂದೇ ಒಂದು ಸಾಲು ಏನು ಗೊತ್ತೆ? `ಓಹ್…ಅಣ್ಣಾವ್ರು ಇರುತ್ತಾರಲ್ಲ ಆ ಏರಿಯಾನಾ?’ ಅದು ನೋಡಿ ರಾಜ್‌ಕುಮಾರ್‌ಗಿದ್ದ ತಾಕತ್ತು. ಅದು ನೋಡಿ ಅಣ್ಣಾವ್ರ ಹೆಸರಿಗಿದ್ದ ದೌಲತ್ತು. ಅದೊಂದೇ ಸಾಕು ರಾಜ್ಕುಮಾರ್ ಆಗಲೂ ಈಗಲೂ ಆಳಿ, ಬೆಳಗಿಮೆರೆಯುತ್ತಿರುವುದು. ಶಿವಣ್ಣ ಬಂದರು. ಜಾಗವನ್ನು ಭರ್ತಿ ಮಾಡಿಕೊಂಡರು. ಅಪ್ಪು ಬಂದ ಮೇಲಂತೂ ಅಣ್ಣಾವ್ರನ್ನೇ ನಾವು ನೋಡುತ್ತಿದ್ದೇವೆ ಎಂದು ಬಿಟ್ಟಿತು ಕರುನಾಡು. ಅಲ್ಲಿಗೆ ನಯಾ ರಾಜಕುಮಾರನ ಕಣ್ಣಲ್ಲಿ ಅಣ್ಣಾವ್ರ ನೆರಳು ದೀಪ ಹಚ್ಚಿತು.

    ಅಪ್ಪು (Puneeth) ನೋಡನೋಡುತ್ತಲೇ ಪುನೀತ್ ರಾಜ್‌ಕುಮಾರ್, ಅಣ್ಣಾವ್ರ ಜಾಗವನ್ನು ತುಂಬಲು ಸಜ್ಜಾದರು. ಸೇಮ್ ಟು ಸೇಮ್ ಅಣ್ಣಾವ್ರ ರೀತಿ ವಿಭಿನ್ನ ಪಾತ್ರಗಳನ್ನು ಮಾಡಿದರು. ಮಾಸ್, ಕ್ಲಾಸ್, ಫ್ಯಾಮಿಲಿ ಮ್ಯಾನ್, ಆಕ್ಷನ್ ಹೀರೋ, ಲವ್ವರ್ ಬಾಯ್…ಎಲ್ಲವೂ ಅಪ್ಪು ಸಿನಿಮಾಗಳಲ್ಲಿ ಹೊಳೆದವು. ಕರುನಾಡು ಆ ದೀಪ ಆರದಂತೆ ನೋಡಿಕೊಳ್ಳಲು ನಿರ್ಧರಿಸಿತು. ಒಂದೊಂದೇ ಸಿನಿಮಾಕ್ಕೆ ಜೀವ ತುಂಬುತ್ತಾ ತುಂಬುತ್ತಾ ಅಪ್ಪು ಕಡೇ ದಿನಗಳಲ್ಲಿ ಮೆರವಣಿಗೆ ಹೊರಟರು. ಅದೇ ರಾಜಕುಮಾರ ಸಿನಿಮಾ. ಅಕ್ಷರಶಃ ಆ ಚಿತ್ರದಲ್ಲಿ ಅಪ್ಪು ಥೇಟ್ ಅಣ್ಣಾವ್ರನ್ನೇ ಮೈ ಮೇಲೆ ಆವಾಹಿಸಿಕೊಂಡಿದ್ದರು. ನಯಾ ರಾಜಕುಮಾರ ಸಿಂಹಾಸನದಲ್ಲಿ ವಿರಾಜಮಾನರಾದರು.

    ಇಲ್ಲ ದೇವರು ಅದ್ಯಾಕೊ ಕ್ರೂರಿಯಾಗಿಬಿಟ್ಟ. ಕೆಲವೇ ಕೆಲವು ನಿಮಿಷಗಳಲ್ಲಿ ಅಪ್ಪು ಈ ಲೋಕಕ್ಕೆ ವಿದಾಯ ಹೇಳಬೇಕಾಯಿತು. ಅದು ನಂಬುವ ಮಾತಾ? ಅದು ಅರಗಿಸಿಕೊಳ್ಳುವ ವಿಷಯವಾ? ಎದೆ ಎದೆ ಬಡಿದುಕೊಂಡಿತು ಕರುನಾಡು. ವಾರಗಟ್ಟಲೆ ಒಲೆ ಊರಿಯಲಿಲ್ಲ. ನಿದ್ದೆ ಹತ್ತಲಿಲ್ಲ.  ಜೀವ ಕಳೆದುಕೊಂಡವರು ಎಷ್ಟೋ ಮಂದಿ ಸಾಕು ಈ ಜನ್ಮ ಎಂದಿದ್ದು ಸುಳ್ಳಲ್ಲ. ಅದು ಅಪ್ಪು ನೀಡಿದ ಮರ್ಮಾಘಾತ. ಅಲ್ಲಿಂದ ಕೆಲವು ಕಿಡಿಗೇಡಿಗಳು ಬೊಗಳಲು ಆರಂಭಿಸಿದವು. `ಅಣ್ಣಾವ್ರ ಸಾಮ್ರಾಜ್ಯ ಅಷ್ಟೇ…ಇನ್ನು…ಮುಗೀತು ಬಿಡಿ…’ ಎಲುಬಿಲ್ಲದ ನಾಲಿಗೆ ಅಲ್ಲಾಡಿದವು. ಅದಕ್ಕೆ ಉತ್ತರ ಎನ್ನುವಂತೆ ಶ್ರೀಮುರಳಿ ಗುಡುಗಿದ್ದಾರೆ. `ಯುವ  (Yuvaraj Kumar) ಹುಲಿ ಬರ್ತಿದೆ, ನೋಡ್ತಾ ಇರಿ…’

    ಶ್ರೀಮುರುಳಿ ಹೇಳಿದ್ದು ಇಷ್ಟೇ. ಆದರೆ ಅದರಲ್ಲಿ ಅದೆಷ್ಟೋ ವರ್ಷಗಳ ಕಿಚ್ಚು ಕೆರಳಿತ್ತು. ಮನಸೊಳಗೆ ಹುದುಗಿಸಿಟ್ಟಿದ್ದ ನೋವು, ಅಸಮಾಧಾನ, ಸಂಕಟ ಎಲ್ಲವನ್ನೂ ಅದೊಂದು ಮಾತಿನಲ್ಲಿ ಹೇಳಿ ನಿರಮ್ಮಳವಾದರು ಶ್ರೀಮುರುಳಿ. ಅಪ್ಪು ಹೋದ ಮೇಲೆ ಹಿಂದಿಂದೆ ಕುಹಕ ಮಾಡಿದವರು ಅದ್ಯಾವುದೋ ಶಾಪ ಎಂದು ಹೀಗಳೆದವರು. ಅಪ್ಪು ಹೋದ ಮೇಲೆ ನಮ್ಮದೇ ಸಾಮ್ರಾಜ್ಯ ಎಂದು ವಿಕೃತಿ ತೋರಿಸಿದವರಿಗೆ ಮುರುಳಿ ಮರಳಿ ಮರಳಿ ಹೊರಳಿ ಏಳದಂತೆ ಉತ್ತರ ನೀಡಿದ್ದಾರೆ. ಪರಿಣಾಮ ಕಣ್ಣ ಮುಂದಿದೆ. ಯುವರಾಜ್‌ಕುಮಾರ್ ಯುವನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಯಾರ‍್ಯಾರು ನಶೆ ಏರಿಸಿಕೊಂಡು ಬೊಗಳಿದ್ದರೊ ಅವರಿಗೆಲ್ಲ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ.

     

    ಇದು ನೋಡಿ ಶ್ರೀಮುರುಳಿ ಮಾತಿನ ಮರ್ಮ. ಬಣ್ಣದ ಲೋಕ ಅಂದರೆ ಅಸೂಯೆ, ಕೋಪ, ಅಸಹನೆ ಇದ್ದದ್ದೇ. ಆದರೆ ಅದ್ಯಾವಾಗ ದ್ವೇಷಕ್ಕೆ ತಿರುಗುತ್ತದೋ ಆಗಿನಿಂದಲೇ ಆರಂಭ ರಕ್ತಪಾತದ ಸಂಚು, ಸ್ಕೆಚ್ಚು. ಅಂಥ ದೇಹಗಳಿಗೆ ನೀರಿಳಿಸಲು ಯುವ ಮೈ ಕೊಡವಿ ಎದ್ದು ನಿಂತಿದ್ದಾರೆ. ಅಪ್ಪು ಬಿಟ್ಟು ಹೋದ ಸಿಂಹಾಸನ ಖಾಲಿಯಾಗಿದೆ. ಅದರ ಮೇಲೆ ನೀವೇ ಕೂಡಬೇಕು ಎನ್ನುತ್ತಿದ್ದಾರೆ ಜನ. ಬರೀ ಅಪ್ಪು ರಾಜ್ ಭಕ್ತಗಣ ಮಾತ್ರ ಅಲ್ಲ. ಸಕಲ ಅಸಲಿ ಕನ್ನಡಿಗರು ಇದನ್ನೆ ಜಪ ಮಾಡುತ್ತಿದ್ದಾರೆ. ಆ ಯುದ್ಧ ಆರಂಭವಾಗಲಿದೆ. ಇನ್ನೇನಿದ್ದರೂ ದೊಡ್ಮನೆ ಮೆರವಣಿಗೆಯಷ್ಟೇ ಬಾಕಿ.

  • ಮರಾಠಿ `ಉಗ್ರಂ’ ಸಿನಿಮಾಗೆ ಶಾನ್ವಿ ಶ್ರೀವಾಸ್ತವ್‌ ನಾಯಕಿ

    ಮರಾಠಿ `ಉಗ್ರಂ’ ಸಿನಿಮಾಗೆ ಶಾನ್ವಿ ಶ್ರೀವಾಸ್ತವ್‌ ನಾಯಕಿ

    ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ನಟನೆಯ `ಉಗ್ರಂ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಈ ಸಿನಿಮಾ ಅದೆಷ್ಟು ಜನರ ಪಾಲಿಗೆ ಗಾಂಧಿನಗರದಲ್ಲಿ ನೆಲೆ ನಿಲ್ಲಲು ಕಾರಣವಾಯ್ತು. ಇದೀಗ ಈ ಉಗ್ರಂ ಸಿನಿಮಾ ಪರಭಾಷೆಯಲ್ಲಿ ತೆರೆ ಕಾಣಲು ಸಜ್ಜಾಗಿದೆ. ಮರಾಠಿಯಲ್ಲಿ ಉಗ್ರಂ ಸಿನಿಮಾ ರಿಮೇಕ್ ಆಗಲಿದೆ.

    `ಉಗ್ರಂ’ ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರಳಿ ಕೆರಿಯರ್‌ಗೆ ಮರು ಜೀವ ಕೊಟ್ಟಂತಹ ಸಿನಿಮಾ. ಈ ಚಿತ್ರದಿಂದ ಶ್ರೀಮುರುಳಿ ಸಿನಿ ಕೆರಿಯರ್‌ಗೆ ಬಿಗ್ ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಇದೀಗ ಈ ಸಿನಿಮಾ ಮೇಲೆ ಪರಭಾಷಿಗರ ಕಣ್ಣು ಬಿದ್ದಿದೆ. 8 ವರ್ಷಗಳ ನಂತರ ಈ ಚಿತ್ರವನ್ನು ಮರಾಠಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ

    ಉಗ್ರಂ ಸಿನಿಮಾ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಸುಮಿತ್ ಕಕ್ಕಡ್ ಎಂಬುವವರು ಈ ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ. ಶ್ರೀಮುರುಳಿ ನಟಿಸಿದ ಪಾತ್ರಕ್ಕೆ ಶರದ್ ಖೇಳ್ಕರ್ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಳ್ತಿದ್ದಾರೆ. ಹರಿಪ್ರಿಯಾ ಪಾತ್ರಕ್ಕೆ ಶಾನ್ವಿ ಜೀವತುಂಬಲಿದ್ದಾರೆ. ಕನ್ನಡದಲ್ಲಿ `ಉಗ್ರಂ’ ಸಿನಿಮಾ ಸೌಂಡ್ ಮಾಡಿದಷ್ಟು, ಮರಾಠಿಯಲ್ಲೂ ಸೌಂಡ್ ಮಾಡುತ್ತಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

    ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

    ಕೆಜಿಎಫ್ 2 ಬಾಕ್ಸ್ ಆಫೀಸಿನಲ್ಲಿ ಎಲ್ಲ ದಾಖಲೆಗಳನ್ನು ಹಿಂದಿಕ್ಕೆ ಮತ್ತಷ್ಟು ದಾಖಲೆಗಳನ್ನು ಮಾಡುವತ್ತ ದಾಪುಗಾಲಿಟ್ಟಿದೆ. ಆ ಯಶಸ್ಸನ್ನು ತನ್ನ ಪಾಡಿಗೆ ತಾನು ಬಿಟ್ಟು, ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದ ಶೂಟಿಂಗ್ ನಿತ್ತ ಮುಖ ಮಾಡಿದ್ದಾರೆ. ಆದರೂ, ಈ ಮಧ್ಯ ಕೆಜಿಎಫ್ 3 ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿತ್ತು. ಈ ವರ್ಷವೇ ಕೆಜಿಎಫ್ 3 ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದೂ ಸುದ್ದಿ ಆಗಿತ್ತು. ಆದರೆ, ಐದಾರು ವರ್ಷ ಪ್ರಶಾಂತ್ ನೀಲ್, ಕನ್ನಡ ಸಿನಿಮಾ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

    ಕೆಜಿಎಫ್ 3 ಸಿನಿಮಾಗೆ ಇದೇ ವರ್ಷದಿಂದ ಚಾಲನೆ ಸಿಗುತ್ತಿದೆ ಎಂದಾಗ, ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿ, ಈ ಸುದ್ದಿಯೇ ಸುಳ್ಳು ಎಂದು ಹೇಳಿದ್ದರು. ಸದ್ಯಕ್ಕೆ ಈ ಕುರಿತು ಯೋಚಿಸಿಲ್ಲ ಎನ್ನುವಂತೆ ಉತ್ತರಿಸಿದ್ದರು. ಈ ಮಾತಿಗೆ ಪುಷ್ಠಿ ಕೊಡುವಂತೆ ತೆಲುಗಿನಲ್ಲಿ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ ಮೈತ್ರಿ ಮೂವ್ಹಿ ಮೇಕರ್ಸ್. ಇದನ್ನೂ ಓದಿ: 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    ಸದ್ಯ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ತಿಂಗಳು ಅಂತ್ಯದೊಳಗೆ ಈ ಸಿನಿಮಾದ ಶೂಟಿಂಗ್ ಶುರುವಾಗುತ್ತದೆ. ಈವರೆಗೂ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಗಳು ತಡವಾಗಿಯೇ ಬಿಡುಗಡೆ ಆಗಿದ್ದರಿಂದ, ಸಲಾರ್ ಚಿತ್ರದ ಬಿಡುಗಡೆ ಕೂಡ ಮುಂದಿನ ವರ್ಷಕ್ಕೆ ಹೋಗಬಹುದು ಎನ್ನಲಾಗುತ್ತಿದೆ. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಅವರು ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಹೊಸ ಚಿತ್ರ ಘೋಷಣೆ ಮಾಡಿದ ಪ್ರಶಾಂತ್‌ನೀಲ್-ತಾರಕ್

    ಸಲಾರ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಈ ಸಿನಿಮಾಗಳು ರೆಡಿಯಾಗಿ ಬಿಡುಗಡೆ ಆಗುವ ಹೊತ್ತಿಗೆ ನಾಲ್ಕೈದು ವರ್ಷಗಳೇ ಆಗಬಹುದು. ಆನಂತರ ಪ್ರಶಾಂತ್ ನೀಲ್, ಕನ್ನಡದ ಸಿನಿಮಾ ಮಾಡಲಿದ್ದಾರೆ ಎನ್ನುತ್ತಾರೆ ಅವರ ಆಪ್ತರು. ಹಾಗಂತ ಸಲಾರ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಚಿತ್ರಗಳು ಕನ್ನಡದಲ್ಲಿ ಬರುವುದಿಲ್ಲವಾ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾಕೆಂದರೆ, ಎರಡೂ ಚಿತ್ರಗಳು ನೇರವಾಗಿ ಕನ್ನಡದಲ್ಲಿ ಆಗದೇ ಇದ್ದರೂ, ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಲಿವೆ. ಇದನ್ನೂ ಓದಿ: `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    ಈ ಎರಡೂ ಚಿತ್ರಗಳು ಮುಗಿದ ನಂತರ ಪ್ರಶಾಂತ್ ನೀಲ್ ಮತ್ತ್ಯಾವ ಚಿತ್ರಗಳನ್ನು ಮಾಡಲಿದ್ದಾರೆ ಎನ್ನುವ ಕುತೂಹಲವಿದೆ. ಅದಕ್ಕೆ ಉತ್ತರ ಇನ್ನೂ ಸಿಗದೇ ಇದ್ದರೂ, ಅವರ ಮುಂದೆ ಇನ್ನೂ ಎರಡು ಕನ್ನಡ ಚಿತ್ರಗಳಿವೆ. ಒಂದು ಶ್ರೀಮುರುಳಿಗಾಗಿ ಅವರು ಒಂದು ಚಿತ್ರ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಮತ್ತೊಂದು ಕೆಜಿಎಫ್ 3. ಈ ಎರಡು ಚಿತ್ರಗಳಲ್ಲಿ ಮೊದಲು ಯಾವುದು ಎನ್ನುವುದೇ ಸದ್ಯಕ್ಕಿರುವ ಕುತೂಹಲ.

  • ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ – ಶ್ರೀಮುರುಳಿ ನಾಯಕ

    ಹೊಂಬಾಳೆ ಫಿಲ್ಮಸ್ ಬಘೀರನಿಗೆ ಮೇ 20ಕ್ಕೆ ಮುಹೂರ್ತ – ಶ್ರೀಮುರುಳಿ ನಾಯಕ

    ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಈಗಾಗಲೇ ಘೋಷಣೆ ಆಗಿರುವ ಶ್ರೀಮುರುಳಿ ನಟನೆಯ ʼಬಘೀರʼ ಚಿತ್ರಕ್ಕೆ ಮೇ 20ರಂದು ಸಿಂಪಲ್ ಆಗಿ ಮುಹೂರ್ತ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಯಶ್ ನಟನೆಯ ‘ಲಕ್ಕಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಡಾ.ಸೂರಿ, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಪ್ರಶಾಂತ್ ನೀಲ್ ಅವರು ಕಥೆ ಬರೆದಿದ್ದಾರೆ. ಇದನ್ನೂ ಓದಿ : ಮನೆಗೆ ಕರೆಯಿಸಿಕೊಳ್ಳುವಂಥ ಅರ್ಹತೆ ಬಾಲಿವುಡ್ ನಲ್ಲಿ ಯಾರಿಗೂ ಇಲ್ಲ : ಕಂಗನಾ ರಣಾವತ್

    ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಹಲವು ಚಿತ್ರಗಳನ್ನು ಘೋಷಣೆ ಮಾಡಿದೆ. ಸಂತೋಷ್ ಆನಂದ್ ರಾಮ್ ಜಗ್ಗೇಶ್‌ಗಾಗಿ ಒಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ರಿಷಭ್ ಶೆಟ್ಟಿ ಕೂಡ ಮತ್ತೊಂದು ಚಿತ್ರಕ್ಕೆ ನಿರ್ದೇಶಕರಾಗಿದ್ದಾರೆ. ರಕ್ಷಿತ್ ಶೆಟ್ಟಿ ಕೂಡ ಒಂದು ಚಿತ್ರವನ್ನು ನಿರ್ದೇಶನ ಮಾಡಬೇಕಿದೆ. ಈ ಸಿನಿಮಾಗೂ ಮುನ್ನ ಬಘೀರ ಸಿನಿಮಾ ಸೆಟ್ಟೇರುತ್ತಿದೆ. ಇದನ್ನೂ ಓದಿ : ಕಾನ್ ಫೆಸ್ಟಿವಲ್‌ನಲ್ಲಿ ತಾರೆಯರ ದಂಡು

    ಇದು ಹೊಂಬಾಳೆ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಎಂಟನೇ ಸಿನಿಮಾ. ಇದು ಪಕ್ಕಾ ಮಾಸ್ ಸಿನಿಮಾವಾಗಿದ್ದು, ವಿಭಿನ್ನ ಶೀರ್ಷಿಕೆಯಿಂದಾಗಿಯೇ ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ಶ್ರೀಮುರುಳಿ ಕೂಡ ಸಖತ್ ತಯಾರಿ ಆಗಿದ್ದಾರಂತೆ. ಎಂದಿನಂತೆ ಪ್ರಶಾಂತ್ ನೀಲ್ ಆಶಯದಂತೆಯೇ ಈ ಸಿನಿಮಾ ಮೂಡಿ ಬರುತ್ತಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ಇಂಡಸ್ಟ್ರಿಯಲ್ಲಿ ನಟಿಯರು ಎದುರಿಸುವ ಸವಾಲು ಬಿಚ್ಚಿಟ್ಟ ರಮ್ಯಾ

    ಈಗಾಗಲೇ ಲಕ್ಕಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿರುವ ಡಾ.ಸೂರಿ, ನಾಲ್ಕು ವರ್ಷಗಳಿಂದ ಯಾವುದೇ ಚಿತ್ರ ಮಾಡಿರಲಿಲ್ಲ. ಬಘೀರ ಮೂಲಕ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಶ್ರೀಮುರುಳಿ ಹುಟ್ಟು ಹಬ್ಬದಂದು ವಿಶೇಷ ಪೋಸ್ಟರ್ ಮತ್ತು ಟೈಟಲ್ ರಿಲೀಸ್ ಮಾಡಲಾಗಿದೆ.

  • ಶೂಟಿಂಗ್ ವೇಳೆ ನಟ ಶ್ರೀಮುರುಳಿ ಕಾಲಿಗೆ ಭಾರೀ ಗಾಯ – ಬೆಡ್ ರೆಸ್ಟ್

    ಶೂಟಿಂಗ್ ವೇಳೆ ನಟ ಶ್ರೀಮುರುಳಿ ಕಾಲಿಗೆ ಭಾರೀ ಗಾಯ – ಬೆಡ್ ರೆಸ್ಟ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಲಿಗೆ ಗಾಯವಾಗಿದೆ.

    ಮದಗಜ ಚಿತ್ರೀಕರಣದ ಸಾಹಸ ದೃಶ್ಯ ಶೂಟಿಂಗ್ ವೇಳೆ ಮೊಣಕಾಲಿಗೆ ಗಾಯಗಳಾಗಿದೆ. 15 ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಅವರ ಆರೋಗ್ಯ ಸುಧಾರಿಸುತ್ತಿದೆ.

    ಶ್ರೀಮುರುಳಿ ಹುಟ್ಟುಹಬ್ಬದಂದು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿತ್ತು. ಆ ಬಳಿಕ ಟೀಸರ್ ಅಭಿಮಾನಿ ಬಳಗಕ್ಕೆ ಸಖತ್ ಕಿಕ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಟೀಸರ್ ಧೂಳೆಬ್ಬಿಸಿದ್ದು, ಎರಡೇ ಗಂಟೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂವ್ಸ್ ಪಡೆದುಕೊಂಡಿತ್ತು.

    ಪಕ್ಕಾ ಮಾಸ್ ಅಂಡ್ ಆಕ್ಷನ್ ಓರಿಯೆಂಟೆಡ್ ಮದಗಜ ಸಿನಿಮಾಕ್ಕೆ ಎಸ್. ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ವಾರಣಾಸಿ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಗೆ ಜೋಡಿಯಾಗಿ ಸ್ಯಾಂಡಲ್‍ವುಡ್ ಚೆಲುವೆ ಆಶಿಕಾ ರಂಗನಾಥ್ ನಟಿಸಿದ್ದು, ನವೀನ್ ಕುಮಾರ್ ಛಾಯಾಗ್ರಹಣ ‘ಮದಗಜ’ ಚಿತ್ರಕ್ಕಿದೆ.

  • ಅಮ್ಮನ ಹಳೆಯ ಫೋನ್ ನೋಡೋಕಾಗ್ದೆ ಗಿಫ್ಟ್ ನೀಡಿದ ಶ್ರೀಮುರುಳಿ

    ಅಮ್ಮನ ಹಳೆಯ ಫೋನ್ ನೋಡೋಕಾಗ್ದೆ ಗಿಫ್ಟ್ ನೀಡಿದ ಶ್ರೀಮುರುಳಿ

    ಬೆಂಗಳೂರು: ನಟ ಶ್ರೀ ಮುರಳಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕುರಿತು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಮ್ಮನಿಗೆ ಗಿಫ್ಟ್ ನೀಡಿದ ವಿಚಾರವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

    ಅಮ್ಮನಿಗೆ ಗಿಫ್ಟ್ ನೀಡಿರುವ ಕುರಿತು ಶ್ರೀ ಮುರುಳಿ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಣ್ಣ ಅಹಂ ಭಾವವಿತ್ತು. ಹೀಗಾಗಿ ಇದನ್ನು ಕ್ಲಿಯರ್ ಮಾಡುತ್ತಿದ್ದೇನೆ. ನಮ್ಮ ಅಮ್ಮ ಹೊಸ ಫೋನ್ ಕೇಳಿರಲಿಲ್ಲ. ಅವರು ದೊಡ್ಡ ಡಿಮ್ಯಾಂಡ್ ಇಟ್ಟಿದ್ದರಂತೆ. ಹೀಗಾಗಿ ಹಳೆ ಫೋನ್ ನೋಡಲು ಆಗದೆ ಅಮ್ಮನಿಗೆ ಫೋನ್ ಗಿಫ್ಟ್ ನೀಡಿದೆ. ಈಗ ಅವರ ಡಿಮ್ಯಾಂಡ್ ಕೇಳಿ ಆಶ್ಚರ್ಯವಾಯಿತು. ಸರಿ ಮಾ ಹೇಳಿದ್ದೀನಿ. ನಿಮ್ಮ ಅತ್ತೆಗೆ ಹೆಳ್ಬಿಡಮ್ಮ ಎಂದು ಅವರ ಪತ್ನಿ ವಿದ್ಯಾ ಶ್ರೀಮುರುಳಿಗೆ ಟ್ಯಾಗ್ ಮಾಡಿದ್ದಾರೆ. ಅಮ್ಮನಿಗೆ ಫೋನ್ ಕೊಡಿಸಿದ್ದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ರೋರಿಂಗ್ ಸ್ಟಾರ್ ಶ್ರೀಮುರುಳಿ ಭರಾಟೆ ಸಿನಿಮಾ ಬಳಿಕ ಮದಗಜ ಚಿತ್ರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 2019ರ ಜನವರಿಯಲ್ಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಕುರಿತು ಅಧೀಕೃತವಾಗಿ ಘೋಷಣೆ ಮಾಡಿಲಾಗಿತ್ತು. ಬಳಿಕ ಸ್ವಲ್ಪ ದಿನಗಳ ಕಾಲ ಅಪ್‍ಡೇಟ್ ಸಿಕ್ಕಿರಲಿಲ್ಲ. ನಂತರ ಚಿತ್ರದ ನಾಯಕಿಯ ಅಯ್ಕೆಯ ಕುರಿತು ಮದಗಜ ಸದ್ದು ಮಾಡಿತ್ತು. ಆಶಿಕಾ ರಂಗನಾಥ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬುದು ಇದೇ ವೇಳೆ ಬಹಿರಂಗವಾಯಿತು.

    ಹಿರೋಯಿನ್ ಆಯ್ಕೆಯಾಗುತ್ತಿದ್ದಂತೆ ಶೂಟಿಂಗ್‍ಗೆ ಸಿದ್ಧತೆ ಮಾಡಿಕೊಂಡಿದ್ದ ಮದಗಜ ಚಿತ್ರತಂಡ ಉತ್ತರ ಭಾರತದತ್ತ ತೆರಳಿತ್ತು. ಮೊದಲ ಹಂತದ ಚಿತ್ರೀಕರಣವನ್ನು ವಾರಣಾಸಿಯಲ್ಲಿ ಮಾಡಲಾಗಿತ್ತು. ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದಂತೆ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಚಿತ್ರೀಕರಣ ಅಲ್ಲಿಗೆ ನಿಂತಿದೆ. ಲಾಕ್‍ಡೌನ್ ವೇಳೆ ಶ್ರೀಮುರುಳಿ ಸಹ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ.

    ಎರಡನೇ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಂದುವರಿಸಲು ನಿರ್ಧರಿಸಲಾಗಿತ್ತು. ಅರಮನೆ ನಗರಿಯಲ್ಲಿ ಇನ್ನೇನು ಚಿತ್ರಕರಣ ಆರಂಭಿಸುವಷ್ಟರಲ್ಲಿ ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿತು. ಬಳಿಕ ಇಡೀ ಸಿನಿಮಾ ರಂಗ ಸ್ತಬ್ಧವಾಗಿ ಎಲ್ಲರೂ ಮನೆಯಲ್ಲೇ ಕಾಲ ಕಳೆಯುವಂತಾಯಿತು. ಲಾಕ್‍ಡೌನ್ ಎಫೆಕ್ಟ್ ನಿಂದಾಗಿ ಮದಗಜ ಚಿತ್ರೀಕರಣ ಸಹ ಸ್ಥಗಿತಗೊಂಡಿತು. ಇದೀಗ ನಿಧಾನವಾಗಿ ಚಿತ್ರೀಕರಣ ಆರಂಭವಾಗಿದ್ದು, ಹಲವು ಸಿನಿಮಾಗಳ ಕಾರ್ಯ ಶುರುವಾಗಿದೆ. ಆದರೆ ಮದಗಜ ಚಿತ್ರದ ಶೂಟಿಂಗ್ ಆರಂಭಿಸುವ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.

    ವಿಶೇಷ ಎಂಬಂತೆ ಚಿತ್ರದ ಸ್ಕ್ರಿಪ್ಟ್‍ನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಫೈನಲ್ ಮಾಡುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆ ಕೆಜಿಎಫ್-2 ಸಿನಿಮಾ ಶೂಟಿಂಗ್ ಸಹ ಸ್ಥಗಿತಗೊಂಡಿತ್ತು. ಹೀಗಾಗಿ ಪ್ರಶಾಂತ್ ನೀಲ್ ಮದಗಜ ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹೇಶ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಚಿತ್ರೀಕರಣವನ್ನಾಧರಿಸಿ ಕಥೆ ಹೆಣೆಯಲಾಗಿದೆ. ಈ ಸ್ಕ್ರಿಪ್ಟ್‍ನ್ನು ಪ್ರಶಾಂತ್ ನೀಲ್ ಅವರು ಫೈನಲ್ ಮಾಡಿದ್ದಾರೆ. ಹೆಚ್ಚು ಜನರನ್ನು ತಲುಪುವ ರೀತಿಯಲ್ಲಿ ಕಟ್ಟಿಕೊಡಲಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಮಾಹಿತಿ ನೀಡಿದ್ದರು.

  • ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

    ಚಿತ್ರಕಥಾ: ಕಥೆಯ ವೇಗಕ್ಕೆ ಕೊರವಂಜಿಯ ಕನೆಕ್ಷನ್ನು!

    ಬೆಂಗಳೂರು: ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಈ ಕಡೇಯ ಕ್ಷಣಗಳಲ್ಲಿ ಈ ಸಿನಿಮಾ ಕುರಿತಾದ ಒಂದೊಂದೇ ಕುತೂಹಲಕರ ಅಂಶಗಳನ್ನು ಚಿತ್ರತಂಡ ಜಾಹೀರು ಮಾಡುತ್ತಿದೆ. ಅದರಲ್ಲಿ ತಾರಾಗಣದ ಗುಟ್ಟುಗಳೂ ಸೇರಿಕೊಂಡಿವೆ. ಸುಧಾರಾಣಿ, ತಬಲಾ ನಾಣಿ, ದಿಲೀಪ್ ರಾಜ್, ಅನುಷಾ ರಾವ್ ಸೇರಿದಂತೆ ಅನೇಕರ ತಾರಾಗಣ ಈ ಚಿತ್ರದಲ್ಲಿದೆ. ಹಿರಿಯ ರಂಗಭೂಮಿ ನಟಿ ನಿರ್ವಹಿಸಿರೋ ಕೊರವಂಜಿ ಪಾತ್ರವಂತೂ ಬಹಳಷ್ಟು ವಿಶೇಷತೆಗಳನ್ನು ಬಚ್ಚಿಟ್ಟುಕೊಂಡಿದೆಯಂತೆ.

    ಸುಜಿತ್ ರಾಥೋಡ್ ಮುಖ್ಯ ಪಾತ್ರದಲ್ಲಿ ನಟಿಸಿರೋ ಈ ಚಿತ್ರವನ್ನು ಪ್ರಜ್ವಲ್ ಎಂ ರಾಜಾ ನಿರ್ಮಾಣ ಮಾಡಿದ್ದಾರೆ. ಇದು ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರ. ಆದರೆ ಇದುವರೆಗೂ ಬಂದಿರೋ ಈ ಜಾನರಿನ ಚಿತ್ರಗಳ ಸಾಲಿನಲ್ಲಿಯೇ ಇದನ್ನೂ ದಾಖಲಿಸುವಂತೆಲ್ಲ. ಯಾಕೆಂದರೆ ಇದು ಕಮರ್ಶಿಯಲ್ ಅಂಶಗಳೊಂದಿಗೆ ಪ್ರಯೋಗಾತ್ಮಕ ಪಟ್ಟುಗಳನ್ನು ಹೊಂದಿರೋ ಚಿತ್ರ.

    ಕಲಾವಿದನೊಬ್ಬ ಬಿಡಿದಿಸಿ ಅಪರಿಚಿತನ ಚಿತ್ರವೇ ಅಘೋರಿಯ ರೂಪದಲ್ಲಿ ಕಾಡೋ ಈ ಸಿನಿಮಾ ಕಥೆ ನಾನಾ ದಿಕ್ಕುಗಳಲ್ಲಿ ಚಲಿಸುತ್ತೆ. ಅಂಥಾ ಸಿಕ್ಕುಗಳನ್ನು ಬಿಡಿಸು ಪಾತ್ರಗಳಿಗೆ ಮತ್ತಷ್ಟು ಓಘ ನೀಓಡೋ ಪಾತ್ರವನ್ನು ಸುಧಾರಾಣಿ ನಿರ್ವಹಿಸಿದರೆ, ಇಡೀ ಚಿತ್ರಪಕ್ಕೆ ಬೇರೆ ದಿಕ್ಕು ತೋರಿಸುವ ಕೊರವಂಜಿಯ ಪಾತ್ರದಲ್ಲಿ ಬಿ ಜಯಶ್ರೀಯವರು ನಟಿಸಿದ್ದಾರೆ. ಇದು ಹೆಚ್ಚು ಅವಧಿಯಲ್ಲೇನೂ ತೆರೆ ಮೇಲಿರೋದಿಲ್ಲ. ಆದರೆ ಅದು ಅಷ್ಟು ಸಲೀಸಾಗಿ ಪ್ರೇಕ್ಷಕರ ಮನದಿಂದ ಮರೆಯಾಗುವುದೂ ಇಲ್ಲ. ನಿಜಕ್ಕೂ ಈ ಪಾತ್ರದಲ್ಲಿ ಅಂಥಾ ವಿಶೇಷಗಳೇನಿವೆ ಎಂಬುದು ಹ್ನ್ನೆರಡನೇ ತಾರೀಕು ಅಂದರೆ ಈ ವಾರ ಗೊತ್ತಾಗಲಿದೆ.

  • ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

    ಚಿತ್ರಕಥಾ: ತಾಂತ್ರಿಕ ಶ್ರೀಮಂತಿಕೆಯ ಮಾಂತ್ರಿಕ ಸೆಳೆತ!

    ಬೆಂಗಳೂರು: ಯಶಸ್ವಿ ಬಾಲಾದಿತ್ಯ ನಿರ್ದೇಶನದ ಚಿತ್ರಕಥಾ ಚಿತ್ರ ಈ ವಾರವೇ ತೆರೆ ಕಾಣುತ್ತಿದೆ. ಈ ಚಿತ್ರ ವಿಭಿನ್ನವಾದ ಪೋಸ್ಟರ್ ಮೂಲಕವೇ ಆರಂಭಿಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಚಿತ್ರೀಕರಣದ ಹಂತದಲ್ಲಿಯೇ ಚಿತ್ರಕಥಾ ವೆರೈಟಿ ಪೋಸ್ಟರ್‍ಗಳ ಮೂಲಕ ಸದ್ದು ಮಾಡಿತ್ತು. ಇಡೀ ಚಿತ್ರದ ನವೀನ ಕಥೆಯ ಸುಳಿವು ಇಂಥಾ ಪೋಸ್ಟರ್‍ಗಳ ಮೂಲಕವೇ ಸಿಕ್ಕಿ ಬಿಟ್ಟಿತ್ತು. ಆ ನಂತರದಲ್ಲಿ ಶ್ರೀಮುರುಳಿ ಬಿಡುಗಡೆ ಮಾಡಿದ್ದ ಟ್ರೈಲರ್ ಮೂಲಕವೇ ಈ ಸಿನಿಮಾ ಪಡೆದುಕೊಂಡ ಪ್ರಚಾರ ಅಚ್ಚರಿದಾಯಕವಾದದ್ದು.

    ಪ್ರಜ್ವಲ್ ಎಂ ರಾಜ ನಿರ್ಮಾಣ ಮಾಡಿರೋ ಈ ಚಿತ್ರದ ತುಂಬಾ ಯುವ ಆವೇಗವೇ ತುಂಬಿಕೊಂಡಿದೆ. ಆದರೆ ಹೊಸಬರೇ ಇದ್ದರೂ ಚಿತ್ರ ಮಾತ್ರ ಮಾಗಿದ ಕಥೆಯನ್ನೊಳಗೊಂಡಿದೆ ಎಂಬ ವಿಚಾರ ಈಗಾಗಲೇ ಪ್ರೇಕ್ಷಕರ ಪಾಲಿಗೆ ಪಕ್ಕಾ ಆಗಿದೆ. ಈ ಮೂಲಕವೇ ಯುವ ಪ್ರತಿಭೆ ಸುಜಿತ್ ರಾಥೋಡ್ ನಾಯಕನಾಗಿಯೂ ಎಂಟ್ರಿ ಕೊಡುತ್ತಿದ್ದಾರೆ. ಇದೇ ರೀತಿ ಸದರಿ ಚಿತ್ರ ತಾಂತ್ರಿಕವಾಗಿಯೂ ಮಾಂತ್ರಿಕ ಮೋಡಿ ಮಾಡಲು ರೆಡಿಯಾಗಿದೆ.

    ಈ ಚಿತ್ರದ ನಿರ್ದೇಶಕ ಯಶಸ್ವಿ ಬಾಲಾದಿತ್ಯ ಈ ಹಿಂದೆ ಹಲವಾರು ವರ್ಷಗಳ ಕಾಲ ತಾಂತ್ರಿಕ ವಿಭಾಗದಲ್ಲಿಯೂ ಅನುಭವ ಹೊಂದಿರುವವರು. ಹಾಗೆ ಸಾಗಿ ಬಂದು ನಿರ್ದೇಶಕರಾಗಿರೋ ಅವರು ತಮ್ಮ ಚೊಚ್ಚಲ ಚಿತ್ರವನ್ನು ತಾಂತ್ರಿಕವಾಗಿಯೂ ಬೆರಗಾಗುವಂಥಾ ಶೈಲಿಯಲ್ಲು ರೂಪಿಸಿದ ಭರವಸೆಯಿಂದಿದ್ದಾರೆ. ಸ್ಕ್ರೀನ್ ಪ್ಲೇ ಸೇರಿದಂತೆ ಎಲ್ಲದರಲ್ಲಿಯೂ ಪ್ರಯೋಗಾತ್ಮಕ ಅಂಶಗಳನ್ನು ಹೊಂದಿರೋ ಈ ಚಿತ್ರ ಕಮರ್ಶಿಯಲ್ ಚಹರೆಯೊಂದಿಗೆ ಮ್ಯಾಜಿಕ್ ಮಾಡುವ ತಯಾರಿಯಲ್ಲಿದೆ.

    ಇದೆಲ್ಲ ವಿಶೇಷತೆಗಳ ಜೊತೆಯಲ್ಲಿಯೇ ಭರ್ಜರಿಯಾದ ತಾರಾಗಣದ ಸಾಥ್ ಕೂಡಾ ಈ ಚಿತ್ರಕ್ಕಿದೆ. ತಬಲಾ ನಾಣಿ, ಸುಧಾ ರಾಣಿ, ಬಿ ಜಯಶ್ರೀ, ದಿಲೀಪ್ ರಾಜ್ ಮತ್ತು ಅಗ್ನಿಸಾಕ್ಷಿ ರಾಧಿಕಾ ಸೇರಿದಂತೆ ಅನೇಕ ಕಲಾವಿದರು ಈ ತಾರಾಗಣದಲ್ಲಿದ್ದಾರೆ. ಹೀಗೆ ಎಲ್ಲ ಥರದಲ್ಲಿಯೂ ಕುತೂಹಲಕ್ಕೆ ಕಾರಣವಾಗಿರೋ ಚಿತ್ರಕಥಾ ಇದೇ ವಾರ ಅಂದರೆ ಹನ್ನೆರಡನೇ ತಾರೀಕಿನಂದು ಬಿಡುಗಡೆಯಾಗಲಿದೆ.

  • ಸಿನಿಮಾ ಶೂಟಿಂಗ್‍ನಿಂದ ಮೇಲುಕೋಟೆಯಲ್ಲಿ ದೇವರ ಪೂಜೆಗೆ ತೊಂದರೆ, ಸ್ಥಳ ಮಹಿಮೆಗೆ ಅಪಚಾರ!

    ಸಿನಿಮಾ ಶೂಟಿಂಗ್‍ನಿಂದ ಮೇಲುಕೋಟೆಯಲ್ಲಿ ದೇವರ ಪೂಜೆಗೆ ತೊಂದರೆ, ಸ್ಥಳ ಮಹಿಮೆಗೆ ಅಪಚಾರ!

    – ಭರಾಟೆ ಚಿತ್ರಕ್ಕಾಗಿ ತಾತ್ಕಾಲಿಕವಾಗಿ ಚೌಡೇಶ್ವರಿ ದೇವಿ ಪ್ರತಿಷ್ಠಾಪನೆ
    – ಒಂದು ಶಕ್ತಿಕೇಂದ್ರದಲ್ಲಿ ಮತ್ತೊಂದು ದೇವರನ್ನು ಸ್ಥಾಪಿಸುವುದು ಎಷ್ಟು ಸರಿ?

    ಮಂಡ್ಯ: ಪುರಾಣ ಪ್ರಸಿದ್ಧ ಮೇಲುಕೋಟೆಗೂ ಸಿನಿಮಾಗಳಿಗೂ ಅವಿನಾಭಾವ ಸಂಬಂಧ. ಇಲ್ಲಿರುವ ದೇವಾಲಯಗಳು, ಆಕರ್ಷಕವಾದ ಲೊಕೇಷನ್ ಗಳು ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ. ಹೀಗಾಗಿ ಕನ್ನಡ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಮೇಲುಕೋಟೆಯಲ್ಲಿ ಚಿತ್ರೀಕರಣಗೊಂಡು ಭರ್ಜರಿ ಯಶಸ್ಸು ಸಾಧಿಸಿವೆ. ಆದರೆ ಇದೀಗ ಸಿನಿಮಾ ಚಿತ್ರೀಕರಣದಿಂದಾಗಿ ಮೇಲುಕೋಟೆಯಲ್ಲಿ ನಡೆಯುವ ಪೂಜೆಗಳಿಗೆ ತೊಂದರೆಯಾಗುತ್ತಿದ್ದು, ಸ್ಥಳ ಮಹಿಮೆಗೆ ಅಪಚಾರವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಪಾಂಡವಪುರ ತಾಲೂಕಿನಲ್ಲಿರುವ ಮೇಲುಕೋಟೆ ಧಾರ್ಮಿಕವಾಗಿ, ಐತಿಹಾಸಿಕವಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರ ಸಿನಿಮಾ ನಿರ್ಮಾಣ ಮಾಡುವವರಿಗೂ ಅಚ್ಚುಮೆಚ್ಚಾಗಿದ್ದು ಇಲ್ಲಿ ಸಾಕಷ್ಟು ಚಿತ್ರಗಳು ಶೂಟಿಂಗ್ ನಡೆಯುತ್ತಿರುತ್ತವೆ. ಆಗೆಲ್ಲಾ ಇರದ ಪಾವಿತ್ರ್ಯತೆಯ ಪ್ರಶ್ನೆ ಈಗ ಕಾಡಲಾರಂಭಿಸಿದೆ.

    ಕಳೆದ ಕೆಲವು ದಿನಗಳಿಂದ ನಟ ಶ್ರೀ ಮುರುಳಿ ನಟಿಸುತ್ತಿರುವ `ಭರಾಟೆ’ ಚಿತ್ರ ಶೂಟಿಂಗ್ ಮೇಲುಕೋಟೆಯ ಕಲ್ಯಾಣಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ಚಿತ್ರತಂಡ ಸರ್ಕಾರದಿಂದ ಅನುಮತಿಯನ್ನು ಪಡೆದುಕೊಂಡಿದ್ದು ನವೆಂಬರ್ 11 ರಿಂದ 14ರವರೆಗೆ ಶೂಟಿಂಗ್ ಮಾಡಲು ಸರ್ಕಾರಕ್ಕೆ 96 ಸಾವಿರ ರೂ. ಬಿಲ್ ಪಾವತಿಸಲಾಗಿದೆ.

    ಅನುಮತಿ ಪಡೆದುಕೊಂಡಿರುವ ಚಿತ್ರತಂಡಕ್ಕೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಚಿತ್ರೀಕರಣ ಮಾಡಿ ಎಂದೂ ಹೇಳಲಾಗಿದ್ದರೂ ಚಿತ್ರತಂಡ ಕಲ್ಯಾಣಿಯ ತುಂಬಾ ಕೇಸರಿ ಬಣ್ಣದ ಬಟ್ಟೆಗಳನ್ನ ಕಟ್ಟಿ ಕೇಸರಿಕರಣ ಮಾಡಿದೆ. ಜೊತೆಗೆ ಕಲ್ಯಾಣಿಯಲ್ಲೇ ವಿಶೇಷವಾದ ಸೆಟ್ ಹಾಕಿದ್ದು ಚೌಡೇಶ್ವರಿ ದೇವಿ ವಿಗ್ರಹವನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಒಂದು ಶಕ್ತಿ ಕೇಂದ್ರವಾಗಿರುವ ಮೇಲುಕೋಟೆಯಲ್ಲಿ, ತಾತ್ಕಾಲಿಕವಾಗಿಯಾದರೂ ಬೇರೊಂದು ಶಕ್ತಿ ದೇವರನ್ನ ಪ್ರತಿಷ್ಠಾಪಿಸಿದರೆ ಮೂಲ ದೇವರ ಶಕ್ತಿ ಕುಂದುಂಟಾಗುತ್ತದೆ. ಅದು ತಕ್ಷಣ ಪರಿಣಾಮ ಬೀರದೇ ಇದ್ದರೂ ಭವಿಷ್ಯದಲ್ಲಿ ಪರಿಣಾಮ ಬೀರುತ್ತದೆ ಎಂದು ದೇವಾಲಯದ ಅರ್ಚಕ ಸಂಪತ್ ಕುಮಾರ್ ಹೇಳಿದ್ದಾರೆ.

    ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ವರ್ಷದ ಪ್ರತೀ ದಿನವೂ ಒಂದಲ್ಲಾ ಒಂದು ವಿಶೇಷವಾದ ಪೂಜೆಗಳು ನಡೆಯುತ್ತಿರುತ್ತವೆ. ಹೀಗೆ ನಡೆಯುವ ಪೂಜೆಗಳಿಗೆ ಪವಿತ್ರ ಕಲ್ಯಾಣಿಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ ಅಭಿಷೇಕ ಮಾಡಲಾಗುತ್ತದೆ. ದೇವಾಲಯ ಮಾತ್ರವಲ್ಲದೆ ಕಲ್ಯಾಣಿಯಲ್ಲೂ ಹಲವು ದೇವರುಗಳಿದ್ದು ಎಲ್ಲಾ ದೇವರಿಗೂ ಪೂಜೆ ಅಭಿಷೇಕ ಮಾಡಬೇಕಾಗುತ್ತದೆ. ಹಾಗೆಯೇ ಕಳೆದ ಭಾನುವಾರ ಮೇಲುಕೋಟೆ ದೇವಾಲಯಕ್ಕೆ ಸಂಬಂಧ ಪಟ್ಟಂತಹ, ಮಹಾಮುನಿ ಜೀಯರ್ ಸ್ವಾಮೀಜಿ ಅವರ ಜಯಂತಿ ಅಂಗವಾಗಿ ಅಭಿಷೇಕ ನಡೆಯಬೇಕಾಗಿತ್ತು. ಕಲ್ಯಾಣಿಯಿಂದ ನೀರನ್ನು ತಂದು ಅಭಿಷೇಕ ನೆರವೇರಿಸಬೇಕಿತ್ತು. ಆದರೆ ಕಲ್ಯಾಣಿಯ ಬಳಿ ಚಿತ್ರ ತಂಡ ಸೆಟ್ ಹಾಕಿದ್ದರಿಂದ, ಕಳೆದ 600 ವರ್ಷಗಳಿಂದಲೂ ನಡೆದುಕೊಂಡು ಬಂದಿದ್ದ ಅಭಿಷೇಕಕ್ಕೆ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಮೇಲುಕೋಟೆಯಲ್ಲಿ ವರ್ಷದ ಹಲವು ದಿನ ಬೇರೆ ಬೇರೆ ಸಿನಿಮಾಗಳ ಶೂಟಿಂಗ್ ನಡೆಯುತ್ತಿರುತ್ತದೆ. ಈ ವೇಳೆ ದೇವಾಲಯದ ಮೂಲ ಸ್ವರೂಪಕ್ಕೆ ಹಾನಿಯುಂಟಾಗುತ್ತದೆ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಚಿತ್ರದ ಶೂಟಿಂಗ್ ಮಾಡುವುದಕ್ಕೆ ಅನುಮತಿ ನೀಡುವ ಅಧಿಕಾರಿಗಳು, ದೇವಾಲಯದ ಉತ್ಸವಗಳಿಗೆ, ಪೂಜಾ ಕೈಂಕರ್ಯಗಳಿಗೆ ಮತ್ತು ಸ್ಥಳ ಮಹಿಮೆಗೆ ತೊಂದರೆಯಾಗದಂತೆ ಚಿತ್ರೀಕರಣ ನಡೆಯುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ಧಾರ್ಮಿಕ ಚಿಂತಕ ಆನಂದ್ ಆಳ್ವರ್ ಅಭಿಪ್ರಾಯಪಟ್ಟಿದ್ದಾರೆ.

    ಯಾವಾಗಲೂ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ವಿವಾದಕ್ಕೆ ಸಿಲುಕಿ ಸುದ್ದಿಯಾಗುತ್ತಿರುವ ಮೇಲುಕೋಟೆಯ ಶ್ರೀ ಚಲುವ ನಾರಾಯಣಸ್ವಾಮಿ ದೇವಾಲಯ ಇದೀಗ ಸಿನಿಮಾ ಚಿತ್ರೀಕರಣದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಗಮನಹರಿಸಿ ಇನ್ನು ಮುಂದೆ ಚಿತ್ರೀಕರಣದಿಂದ ದೇವಾಲಯದ ಆಚರಣೆಗಳಿಗೆ ಮತ್ತು ಭಕ್ತರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews