Tag: ಶ್ರೀಮಂತರು

  • ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಿಂದ ಹೊರಗುಳಿದ ಮುಕೇಶ್ ಅಂಬಾನಿ

    ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಿಂದ ಹೊರಗುಳಿದ ಮುಕೇಶ್ ಅಂಬಾನಿ

    ನವದೆಹಲಿ: ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಪ್ರಮುಖ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಟಾಪ್-10 ಸ್ಥಾನದಿಂದ ಹೊರಗುಳಿದಿದ್ದಾರೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2025ರ ಪ್ರಕಾರ ಅಂಬಾನಿ ಅವರು ಈ ವರ್ಷ 11ನೇ ಸ್ಥಾನಕ್ಕೆ ತಲುಪಿದ್ದಾರೆ.

    ಮುಕೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಆದಾಗ್ಯೂ, ಅವರ ಒಟ್ಟಾರೆ ಸಂಪತ್ತು ಇನ್ನೂ ಅಪಾರವಾಗಿದ್ದು, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಪ್ರಾಬಲ್ಯ ಕಾಯ್ದುಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ವ್ಯಾಪಾರ ಕಾರ್ಯತಂತ್ರಗಳು, ತೈಲ ಮತ್ತು ರಾಸಾಯನಿಕ ಉದ್ಯಮದ ಜೊತೆಗೆ ಟೆಲಿಕಾಂ (ರಿಲಯನ್ಸ್ ಜಿಯೋ) ಮತ್ತು ರಿಟೇಲ್ ಕ್ಷೇತ್ರದಲ್ಲಿ ಮಾಡಿದ ಗಣನೀಯ ಹೂಡಿಕೆಗಳು ಅವರ ಸಂಪತ್ತಿನ ಮೇಲೆ ಪ್ರಭಾವ ಬೀರಿವೆ.

    ಈ ವರ್ಷದ ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಅಮೆರಿಕ ಮತ್ತು ಚೀನಾದ ಉದ್ಯಮಿಗಳು ಟಾಪ್-10 ಸ್ಥಾನಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಎಲಾನ್ ಮಸ್ಕ್ (ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯಸ್ಥ), ಜೆಫ್ ಬೆಜೋಸ್ (ಅಮೆಜಾನ್ ಸಂಸ್ಥಾಪಕ), ಮತ್ತು ಮಾರ್ಕ್ ಝುಕರ್‌ಬರ್ಗ್ (ಮೆಟಾ ಸಿಇಒ) ರಂತಹ ದಿಗ್ಗಜರು ಮೊದಲ ಕೆಲವು ಸ್ಥಾನಗಳನ್ನು ಆಕ್ರಮಿಸಿದ್ದಾರೆ.

    ತಂತ್ರಜ್ಞಾನ ಕ್ಷೇತ್ರದಲ್ಲಿ ಈ ಉದ್ಯಮಿಗಳ ಸಂಪತ್ತು ಗಗನಕ್ಕೇರಿರುವುದು ಈ ಪಟ್ಟಿಯಲ್ಲಿ ಅವರ ಪ್ರಾಬಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ಚೀನಾದ ಕೆಲವು ಉದ್ಯಮಿಗಳು ತಮ್ಮ ತಂತ್ರಜ್ಞಾನ ಮತ್ತು ಉತ್ಪಾದನಾ ಕಂಪನಿಗಳ ಮೂಲಕ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಮುಕೇಶ್ ಅಂಬಾನಿ ಟಾಪ್-10 ರಿಂದ ಹೊರಗುಳಿದರೂ, ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅವರು ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

  • ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

    ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

    – 1,600 ಅಡಿ ಆಳದಲ್ಲಿ ಸ್ಫೋಟ ಸಂಭವಿಸಿ ಸಾವು

    ವಾಷಿಂಗ್ಟನ್: ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ (Titanic) ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿಯಲ್ಲಿ (Submersible) ತೆರಳಿದ್ದ ವಿಶ್ವದ ಐವರು ಶ್ರೀಮಂತರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಖಚಿತಪಡಿಸಿದೆ.

    ಪ್ರವಾಸಿಗರನ್ನು ಕರೆದೊಯ್ದಿದ್ದ ಸೀಮಿತ ಪ್ರದೇಶದಲ್ಲಿ ಸಂಚರಿಸುವ ಸಣ್ಣ ಜಲಾಂತರ್ಗಾಮಿ (Submersible) ಸಾಗರದ ಒಳಗಡೆ ಸುಮಾರು 1,600 ಅಡಿ (488 ಮೀಟರ್) ಆಳದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಸ್ಫೋಟಗೊಂಡಿದೆ. ಇದರಿಂದಾಗಿ ಐವರು ದುರಂತ ಸಾವಿಗೀಡಾಗಿದ್ದಾರೆ. ರಿಮೋಟ್ ಕಂಟ್ರೋಲ್ ಸಾಧನದಿಂದ ಇದನ್ನು ಪತ್ತೆಹೆಚ್ಚಲಾಗಿದೆ. ಜಲಾಂತರ್ಗಾಮಿ ಸಬ್‌ಮರ್ಸಿಬಲ್‌ನಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು ಎಂದು ಹೇಳಿದೆ.

    ಈ ಮಾಹಿತಿಯನ್ನ ತಕ್ಷಣವೇ ಸಂಬಂಧಪಟ್ಟ ಕುಟುಂಬಗಳಿಗೆ ತಿಳಿಸಲಾಗಿದೆ, ಯುಎಸ್ ಕೋಸ್ಟ್ ಗಾರ್ಡ್ (US Coast Guard) ಇದಕ್ಕೆ ಸಂತಾಪ ಸೂಚಿಸುತ್ತದೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಜಾನ್ ಮೌಗರ್ ಬೋಸ್ಟನ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿಗಾಗಿ ಬೃಹತ್‌ ಔತಣ ಕೂಟ – ಮುಖೇಶ್‌ ಅಂಬಾನಿ, ಸುಂದರ್‌ ಪಿಚೈ ಸೇರಿ ಹಲವು VIP ಗಣ್ಯರು ಭಾಗಿ: ಇಲ್ಲಿದೆ ಫುಲ್‌ ಲಿಸ್ಟ್‌

    ಈ ಕುರಿತು ಓಷಿಯನ್‌ಗೇಟ್ ಎಕ್ಸ್‌ಪೆಡಿಷನ್ ಸಹ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಕಂಪನಿಯ ಸಿಇಒ ಸ್ಟಾಕ್‌ಟನ್ ರಷ್ ಸೇರಿದಂತೆ ಜಲಾಂತರ್ಗಾಮಿಯಲ್ಲಿ ಸಂಚರಿಸಿದ್ದ ಎಲ್ಲ ಐದು ಮಂದಿಯೂ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿಯಲ್ಲಿ ತೆರಳಿದ್ದ ಒಶಿಯನ್‌ಗೇಟ್ ಸಿಇಒ ಸ್ಟಾಕ್‌ಟನ್ ರಷ್, ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್, ಪಾಲ್ ಹೆನ್ರಿ ನಾರ್ಗಿಯೊಲೆಟ್, ಪಾಕಿಸ್ತಾನದ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್ ಭಾನುವಾರವಷ್ಟೇ ಕಣ್ಮರೆಯಾಗಿದ್ದರು.

    ಟೈಟಾನಿಕ್ ಹಡಗಿನ ಅವಶೇಷಗಳನ್ನ ನೋಡಲು ಸಣ್ಣ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿತ್ತು. ಇದಕ್ಕೆ ಯುಎಸ್ ಕೋಸ್ಟ್ ಗಾರ್ಡ್ ಸಿಬ್ಬಂದಿ ತೀವ್ರವಾಗಿ ಹುಡುಕಾಟ ನಡೆಸಿದ್ದರು. 96 ತಾಸು ಸಾಗರದಲ್ಲಿ ಸಂಚರಿಸುವಷ್ಟು ಆಮ್ಲಜನಕವನ್ನಷ್ಟೇ ಅದು ಹೊಂದಿತ್ತು. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ

    ಟೈಟಾನಿಕ್ ದುರಂತ:
    ದೈತ್ಯ ಟೈಟಾನಿಕ್ ಹಡಗು 1912ರಲ್ಲಿ ತನ್ನ ಮೊದಲ ಪ್ರಯಾಣದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿತು. ಈ ದುರಂತದಲ್ಲಿ 1,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಡಗಿನ ಅವಶೇಷವನ್ನು 1985ರಲ್ಲಿ ಕಂಡುಹಿಡಿಯಲಾಯಿತು. ಅಟ್ಲಾಂಟಿಕ್‌ನ ಆಳದಲ್ಲಿರುವ ಈ ಅವಶೇಷವನ್ನು ಅಂದಿನಿಂದ ಇಂದಿನವರೆಗೂ ವ್ಯಾಪಕವಾಗಿ ಪರಿಶೋಧಿಸಲಾಗುತ್ತಿದೆ.

  • ಬಡವರಿಗೆ ತೆರಿಗೆ ಹೊರೆ; ಶ್ರೀಮಂತರಿಗೆ ಮಾತ್ರ ವಿನಾಯಿತಿ – ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಕಿಡಿ

    ಬಡವರಿಗೆ ತೆರಿಗೆ ಹೊರೆ; ಶ್ರೀಮಂತರಿಗೆ ಮಾತ್ರ ವಿನಾಯಿತಿ – ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಕಿಡಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜನಸಾಮಾನ್ಯರ ಮೇಲೆ ತೆರಿಗೆಯನ್ನು ಹೇರುತ್ತಿದೆ. ಆದರೆ ಶ್ರೀಮಂತರಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಆರೋಪಿಸಿದ್ದಾರೆ.

    ಪಿಂಚಣಿ ನೀಡಲು ಹಣವಿಲ್ಲ ಎಂದು ಅಗ್ನಿಪಥ ಯೋಜನೆ ತಂದರು. ಸೈನಿಕರಿಗೆ ಪಿಂಚಣಿ ನೀಡಲು ದೇಶಕ್ಕೆ ಹಣವಿಲ್ಲದೆ ಪರದಾಡುವ ಸ್ಥಿತಿ ಸ್ವಾತಂತ್ರ್ಯ ನಂತರ ಇದುವರೆಗೂ ಬಂದಿರಲಿಲ್ಲ ಎಂದು ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಧನಕರ್ ಪ್ರಮಾಣ ವಚನ

    ಕೇಂದ್ರ ಸರ್ಕಾರದ ಹಣ ಎಲ್ಲಿ ಹೋಯಿತು? ಕೇಂದ್ರ ಸರ್ಕಾರವು ತಾನು ಸಂಗ್ರಹಿಸುವ ತೆರಿಗೆಯ ಒಂದು ಭಾಗವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ. ಈ ಹಿಂದೆ ಇದು ಶೇ.42ರಷ್ಟಿತ್ತು. ಈಗ ಅದನ್ನು ಶೇ.29-30ಕ್ಕೆ ಕಡಿತಗೊಳಿಸಲಾಗಿದೆ. ಎಲ್ಲಿಗೆ ಹೋಗುತ್ತಿದೆ ಹಣ ಎಂದು ಪ್ರಶ್ನಿಸಿದ್ದಾರೆ.

    ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿವೆ. ಬಡವರ ಗೋಧಿ, ಅಕ್ಕಿಗೂ ಕೇಂದ್ರ ಸರ್ಕಾರ ತೆರಿಗೆ ವಿಧಿಸಿರುವುದು ಕ್ರೂರ ಕೆಲಸ. ಗೋಧಿ, ಅಕ್ಕಿ, ಲಸ್ಸಿ, ಪನೀರ್‌ ಮೇಲೆ ತೆರಿಗೆ. ಹೀಗೆ ಬಡವರ ಆಹಾರದ ಮೇಲೆ ಕೇಂದ್ರ ತೆರಿಗೆ ವಿಧಿಸುವಷ್ಟು ಹದಗೆಟ್ಟಿದ್ದು ಹೇಗೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಹಗರಣ – 8 ಐಪಿಎಸ್‌ ಅಧಿಕಾರಿಗಳಿಗೆ ED ಸಮನ್ಸ್‌

    2014ರಲ್ಲಿ 20 ಲಕ್ಷ ಕೋಟಿ ರೂ. ಇದ್ದ ಕೇಂದ್ರದ ಬಜೆಟ್ ಈಗ 40 ಲಕ್ಷ ಕೋಟಿಯಾಗಿದೆ. ಅತಿ ಶ್ರೀಮಂತರ, ಅವರ ಆಪ್ತರ ಸಾಲ ಮನ್ನಾ ಮಾಡಲು ಕೇಂದ್ರ 10 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಅವರು ಈ ಸಾಲಗಳನ್ನು ಮನ್ನಾ ಮಾಡದಿದ್ದರೆ, ಸರ್ಕಾರವು ಜನರ ಆಹಾರದ ಮೇಲೆ ತೆರಿಗೆ ವಿಧಿಸುವ ಅಗತ್ಯವಿರುತ್ತಿರಲಿಲ್ಲ. ಸೈನಿಕರ ಪಿಂಚಣಿ ಪಾವತಿಸಲು ಅವರ ಬಳಿ ಹಣವಿರುತ್ತದೆ. ದೊಡ್ಡ, ದೊಡ್ಡ ಕಂಪನಿಗಳ 5 ಲಕ್ಷ ಕೋಟಿ ರೂ. ಮೌಲ್ಯದ ತೆರಿಗೆಯನ್ನೂ ಸರ್ಕಾರ ಮನ್ನಾ ಮಾಡಿದೆ ಎಂದು ತಿಳಿಸಿದ್ದಾರೆ.

    ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಟೀಕೆಯನ್ನು ಬಿಜೆಪಿ ತಳ್ಳಿಹಾಕಿದೆ. ಇದಕ್ಕೆ ತಿರುಗೇಟು ನೀಡಿದ ಬಿಜೆಪಿ, ಕೇಜ್ರಿವಾಲ್ ತಮ್ಮ ಆರೋಪವನ್ನು 24 ಗಂಟೆಗಳಲ್ಲಿ ಸಾಬೀತುಪಡಿಸುವಂತೆ ಸವಾಲು ಹಾಕಿದೆ. ಇದನ್ನೂ ಓದಿ: ಲಿಪ್‍ಸ್ಟಿಕ್‍ನಿಂದ ವಾಲ್ ಮೇಲೆ ಡೆತ್ ನೋಟ್ – ಗೃಹಿಣಿ ಆತ್ಮಹತ್ಯೆಗೆ ಕಿರುಕುಳವೇ ಕಾರಣವಾಯ್ತಾ?

    Live Tv
    [brid partner=56869869 player=32851 video=960834 autoplay=true]