Tag: ಶ್ರೀನಿವಾಸ ಶೆಟ್ಟಿ ಹಾಲಾಡಿ

  • ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

    ಗುರುವಿನ ಋಣ ತೀರಿಸಲು ರಾಜಕೀಯ ನಿವೃತ್ತಿ ಘೋಷಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

    ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಘೋಷಣೆಯಾದ ತಕ್ಷಣ ಬೇರೆ ಬೇರೆ ರಾಜಕೀಯ ವಿದ್ಯಮಾನಗಳ ನಡೆಯುತ್ತಿದೆ. ಕೆಲ ಪಕ್ಷದ ಶಾಸಕರು ರಾಜೀನಾಮೆ ನೀಡಿ ಬೇರೆ ಪಕ್ಷ ಸೇರುತ್ತಿದ್ದಾರೆ. ಈ ನಡುವೆ ಕರಾವಳಿಯ ರಾಜಕಾರಣಿಗಳ ಪೈಕಿ ಛಾಪು ಮೂಡಿಸಿದ್ದ ಹಾಲಾಡಿ ರಾಜಕೀಯ ನಿವೃತ್ತಿಯ ಘೋಷಣೆ ಮಾಡಿದ್ದಾರೆ. ಗುರುವಿನ ಋಣ ತೀರಿಸಲು ನಿರ್ಧರಿಸಿದ್ದಾರೆ.

    ಹಾಲಾಡಿ ಶ್ರೀನಿವಾಸ ಶೆಟ್ಟಿ (Halady Srinivas Shetty) ಕುಂದಾಪುರದ ವಾಜಪೇಯಿ ಎಂದೇ ಫೇಮಸ್. ಕಳೆದ ಐದು ಅವಧಿ ಅಂದರೆ 25 ವರ್ಷಗಳ ಕಾಲ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದ ಶಾಸಕ. ಈ ಬಾರಿ ಕೂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ತನ್ನ ಕೊನೆಯ ಚುನಾವಣೆಯನ್ನು ಎದುರಿಸುತ್ತಾರೆ ಎಂಬ ಮಾತುಗಳಿದ್ದವು. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ. ಈಗಿನ ರಾಜಕೀಯಕ್ಕೆ ನನ್ನ ಮನಸ್ಸು ಒಪ್ಪುವುದಿಲ್ಲ ಎಂಬ ಅಭಿಪ್ರಾಯಗಳನ್ನು ಹಾಲಾಡಿ ತಮ್ಮ ಆಪ್ತರ ಜೊತೆ ಹೇಳಿಕೊಂಡಿದ್ದಾರಂತೆ.

    ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ (BJP) ಕೋರ್ ಕಮಿಟಿ ಸಭೆಯಲ್ಲೂ ಹಾಲಾಡಿ ಭಾಗವಹಿಸಿದ್ದರು. ರಾಜ್ಯದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌ ಮುಂದೆ ಪಕ್ಷ ಅವಕಾಶ ಕೊಟ್ಟರೆ ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ತಮ್ಮ ಆಪ್ತರ ಜೊತೆ ನಿವೃತ್ತಿಯ ಮಾತುಗಳನ್ನಾಡಿ ಸೋಮವಾರ ಸಂಜೆ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ: 25 ವರ್ಷಗಳಿಂದ ಸೋಲಿಲ್ಲದ ಸರದಾರ – ಕರಾವಳಿಯ ವಾಜಪೇಯಿ ಶ್ರೀನಿವಾಸ ಶೆಟ್ಟಿ

     

    ಪ್ರಕಟಣೆಯಲ್ಲಿ ಏನಿದೆ?
    ಕುಂದಾಪುರ ಕ್ಷೇತ್ರದ( Kundapura Assembly constituency) ಜನ ನನ್ನನ್ನು ಐದು ಬಾರಿ ಆಯ್ಕೆ ಮಾಡಿದ್ದಾರೆ. ಗ್ರಾಮೀಣ ಭಾಗ ಹೆಚ್ಚಿರುವ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡುವ ಅವಕಾಶ ಸಿಕ್ಕಿದೆ. ಕುಂದಾಪುರ ಕ್ಷೇತ್ರದ ಶಾಸಕನಾಗಿ ನಿಷ್ಠೆಯಿಂದ, ಪ್ರೀತಿಯಿಂದ ಕೆಲಸ ಮಾಡಿದ್ದೇನೆ. ಈ ಬಾರಿ ಸ್ವಇಚ್ಛೆಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಐದು ಬಾರಿ ದಾಖಲೆಯ ಮತಗಳಿಂದ ಗೆಲ್ಲಿಸಿದ್ದಕ್ಕೆ ಧನ್ಯವಾದ. ಅಧಿಕಾರಿ ವರ್ಗ, ಕುಂದಾಪುರ ಜನತೆ -ಮಾಧ್ಯಮಗಳಿಗೆ ಧನ್ಯವಾದ. ಪಕ್ಷದ ಕಾರ್ಯಕರ್ತರಿಗೆ, ಬಿಜೆಪಿ ನಾಯಕರಿಗೆ ಅಭಿಮಾನಿಗಳಿಗೆ ನಾನು ಚಿರಋಣಿ. ನಾಲ್ಕು ಬಾರಿ ಕುಂದಾಪುರದ ಟಿಕೆಟ್ ನೀಡಿದ ಬಿಜೆಪಿಗೆ ಧನ್ಯವಾದಗಳು. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಎಲ್ಲಾ ಮತಬಾಂಧವರು ಸಹಕರಿಸಿ.

    ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿದ್ದ ಎ.ಜಿ ಕೊಡ್ಗಿ ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದರು. ಆರಂಭದ ಎರಡು ಅವಧಿಗಳಲ್ಲಿ ಹಾಲಾಡಿಯ ಗೆಲುವಿನ ಹಿಂದೆ ಕೊಡ್ಗಿ ಬೆಂಬಲ ಇತ್ತು. ಗುರುವಿನ ಋಣವನ್ನು ತೀರಿಸಲು ಎ ಜಿ ಕೊಡ್ಗಿ (AG Kodgi) ಅವರ ಪುತ್ರ ಕಿರಣ್ ಕೊಡ್ಗಿ ಅವರಿಗೆ ಈ ಬಾರಿ ಕುಂದಾಪುರದ ಟಿಕೆಟ್ ಕೊಡಿಸಲು ಹಾಲಾಡಿ ಉತ್ಸುಕರಾಗಿದ್ದಾರೆ. ಹಾಲಾಡಿ ಅವರು ತಮ್ಮ ಹಿತೈಷಿಗಳ ಜೊತೆ ಆಪ್ತರ ಜೊತೆ ಈ ಮಾತುಗಳನ್ನು ಹೇಳಿದ್ದಾರೆ. ಇದನ್ನೂ ಓದಿ: ನನ್ನದು ಮೌನ ವೃತ, ಪ್ರತಿಭಟಿಸಿ ಸಚಿವನಾಗೋದು ಧರ್ಮವಲ್ಲ: ಹಾಲಾಡಿ

    ಹಾಲಾಡಿ ರಾಜಕೀಯ ನಿವೃತ್ತಿಯಾಗಿ ಕುಂದಾಪುರದ ಬಿಜೆಪಿ ಟಿಕೆಟ್ ಕೊಡ್ಗಿಗೆ ಸಿಕ್ಕರೆ ಇಡೀ ಜಿಲ್ಲೆಯ ರಾಜಕೀಯ ಚಿತ್ರಣ ಬದಲಾಗುತ್ತದೆ. ಹಾಲಾಡಿ ಬಂಟ ಸಮುದಾಯಕ್ಕೆ ಸೇರಿದ್ದು ಆ ಸಮುದಾಯಕ್ಕೆ ಬೇರೆ ಕಡೆ ಟಿಕೆಟ್ ಕೊಡಬೇಕಾಗುತ್ತದೆ. ಈ ಎಲ್ಲಾ ಲೆಕ್ಕಾಚಾರವನ್ನು ಇಟ್ಟುಕೊಂಡು ಜಿಲ್ಲೆಯ ಕೆಲ ಹಾಲಿ ಶಾಸಕರ ಟಿಕೆಟ್ ತಪ್ಪುವ  ಸಾಧ್ಯತೆ ಇದೆ.

  • ಯಾವನೋ ಶ್ರೀನಿವಾಸ ಶೆಟ್ಟಿ ಅಂದ ಸಿದ್ದರಾಮಯ್ಯಗೆ ಹಾಲಾಡಿ ತಿರುಗೇಟು

    ಯಾವನೋ ಶ್ರೀನಿವಾಸ ಶೆಟ್ಟಿ ಅಂದ ಸಿದ್ದರಾಮಯ್ಯಗೆ ಹಾಲಾಡಿ ತಿರುಗೇಟು

    ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ಉಡುಪಿಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯಾವನೋ ಶ್ರೀನಿವಾಸ ಶೆಟ್ಟಿ, ಅವನ ಮುಖನೇ ನೋಡಿಲ್ಲ ಅಂತ ಸಿದ್ದು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

    ಉಡುಪಿ ಜಿಲ್ಲೆ ಕುಂದಾಪುರ ಮತ್ತು ಬೈಂದೂರು ಜನ ಸಿದ್ದರಾಮಯ್ಯ ಭಾಷಣವನ್ನು ವೈರಲ್ ಮಾಡಿ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಇದರ ಜೊತೆಯಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಹಾಲಾಡಿ ಜೊತೆಗಿರುವ ಫೋಟೋಗಳನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಉಡುಪಿಯಲ್ಲಿ ತಿರುಗೇಟು ನೀಡಿದ್ದಾರೆ.

    ಸಿದ್ದರಾಮಯ್ಯ ಏಕವಚನದಲ್ಲಿ ಹಗುರವಾಗಿ ಮಾತನಾಡುತ್ತಾರೆ. ಏಕವಚನದಲ್ಲಿ ಮಾತನಾಡುವಷ್ಟು ನನಗೆ ಅವರ ಜೊತೆ ಸಲಿಗೆ ಇಲ್ಲ. ಸಲಿಗೆ ಇದ್ದವರಲ್ಲಿ ಅವರು ಮಾತನಾಡಲಿ ಅಂತ ಗರಂ ಆಗಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಗೆ ಇದು ಶೋಭೆಯಲ್ಲ. ಹಲವಾರು ಬಾರಿ ನಾನು ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ರು. ನಾನು ಕಾಂಗ್ರೆಸ್ ಸೇರುವುದಿಲ್ಲ ಅಂತ ನೇರವಾಗಿ ಹೇಳಿದ್ದೆ. ಈಗ ನಾನು ಯಾರು ಅಂತ ಗೊತ್ತಿಲ್ವಂತಾ ಅಂತ ಪ್ರಶ್ನೆ ಹಾಕಿದ್ರು.

    ನಾನ್ಯಾರು ಅಂತ ಗೊತ್ತಿಲ್ಲದೆ ನನ್ನನ್ನು ಹೇಗೆ ಅವರ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾದ್ರು? ನನ್ನ ವ್ಯಕ್ತಿತ್ವ ಗೊತ್ತಿಲ್ಲದೆ ಏನೂಂತ ಪಕ್ಷಕ್ಕೆ ಸೇರಿಸಲು ಮುಂದಾಗಿದ್ದರು ಎಂದು ಪ್ರಶ್ನೆ ಹಾಕಿದ್ದಾರೆ. ಸಿದ್ದರಾಮಯ್ಯ ಆಣತಿಯಂತೆ ಸೊರಕೆ, ಪ್ರಮೋದ್ ಮಧ್ವರಾಜ್, ಅಭಯಚಂದ್ರ ಜೈನ್ ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದರು. ನಾನು ಯಾರು ಅಂತ ಗೊತ್ತಿಲ್ಲದೆ ಇಷ್ಟೆಲ್ಲಾ ಮಾಡಿದ್ರಾ ಅಂತ ಖಾರವಾಗಿ ಪ್ರತಿಕ್ರಿಯೆ ನೀಡಿದರು.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹಾಲಾಡಿ, ಸಿದ್ದರಾಮಯ್ಯ ಮಾತಿನಿಂದ ನಮ್ಮ ಕ್ಷೇತ್ರದ ಮತದಾರರಿಗೆ ಬಹಳ ಬೇಸರ ಆಗಿದೆ. ನಾನು ರಾಜಕೀಯವಾಗಿಯೂ ಹಗುರವಾಗಿ ಮಾತನಾಡುವ ವ್ಯಕ್ತಿ ಅಲ್ಲ. ನಾನೇನೂ ಈ ಬಗ್ಗೆ ಹೆಚ್ಚು ಹೇಳಲ್ಲ ಅಂದ್ರು. ಸಿದ್ದರಾಮಯ್ಯ ಜನವೇ ಹಗುರ. ಹಗುರ ಇದ್ದಾಗ ಇಂತಹ ಹಗುರ ಮಾತು ಬರುತ್ತದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

    ಒಂದು ಹುದ್ದೆಗೆ ಹೋದ ಕೂಡಲೇ ವ್ಯಕ್ತಿಯೊಬ್ಬ ದೊಡ್ಡ ಮನುಷ್ಯ ಆಗಲ್ಲ. ಆತನ ಮಾತು ನಡವಳಿಕೆ ಸರಿ ಇರಬೇಕು. ಅದರಿಂದ ಆತ ದೊಡ್ಡವನಾಗುತ್ತಾನೆ ಎಂದು ತಿರುಗೇಟು ನೀಡಿದರು. ನಾನು ಸಿದ್ದರಾಮಯ್ಯನ ಆಶೀರ್ವಾದದಲ್ಲಿ ಬದುಕಿದವ ಅಲ್ಲ. ನನ್ನನ್ನು ಕುಂದಾಪುರದ ಜನ 56 ಸಾವಿರ ಮತದ ಅಂತರದಲ್ಲಿ ಗೆಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರ ಕಳೆದ ಚುನಾವಣೆಯಲ್ಲಿ ಏನಾಯ್ತು? ಎಷ್ಟು ಅಂತರದಲ್ಲಿ ಗೆದ್ದರು ಅಂತ ರಾಜ್ಯದ ಜನಕ್ಕೆ ಗೊತ್ತಿದೆ. ನನಗೆ ಸಿದ್ದರಾಮಯ್ಯ ಆಶೀರ್ವಾದ ಬೇಕಾಗಿಲ್ಲ. ಕುಂದಾಪುರ ಕ್ಷೇತ್ರದ ಜನರ ಪ್ರೀತಿ ಸಾಕು ಎಂದು ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv