Tag: ಶ್ರೀನಿವಾಸ ಗೌಡ

  • ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

    ಉಸೇನ್ ಬೋಲ್ಟ್ ದಾಖಲೆ ಮುರಿದ ತುಳುನಾಡ ಕಂಬಳ ಓಟಗಾರ ಶ್ರೀನಿವಾಸ್

    ಮಂಗಳೂರು: ಉಸೇನ್ ಬೋಲ್ಟ್ ಜಗತ್ತಿನ ಅತೀ ವೇಗದ ಓಟಗಾರ. ಮಿಂಚಿನಂತೆ ಕ್ಷಣ ಮಾತ್ರದಲ್ಲಿ ಗುರಿತಲುಪುವ ಸಾಧಕ. ಉಸೇನ್ ಬೋಲ್ಟ್‌ನ ದಾಖಲೆಗಳನ್ನು ಬ್ರೇಕ್ ಮಾಡೋಕೆ ಸಾಧ್ಯನೇ ಇಲ್ಲ ಅಂತ ತಿಳಿದುಕೊಂಡವರಿಗೆ ಮಾತ್ರ ಇದು ಶಾಕಿಂಗ್ ನ್ಯೂಸ್. ಹೌದು ವೇಗದಲ್ಲಿ ಉಸೇನ್ ಬೋಲ್ಟ್ ದಾಖಲೆಯನ್ನು ಹಿಂದಿಕ್ಕಿ ಕರ್ನಾಟಕದ ಕರಾವಳಿಯ ಕಂಬಳ ಕೋಣಗಳ ಓಟಗಾರ ಶ್ರೀನಿವಾಸ್ ಹೊಸ ದಾಖಲೆ ಬರೆದಿದ್ದಾರೆ.

    ಸದೃಢ ಮೈಕಟ್ಟು, ಜಿಮ್‍ಗೆ ಹೋಗದೆ ಬೆಳೆದ ನ್ಯಾಚುರಲ್ ಸಿಕ್ಸ್ ಪ್ಯಾಕ್, ಕಂಬಳದ ಗದ್ದೆಗೆ ಇಳಿದರೆ ಸಾಕು ಚಿರತೆಯನ್ನೇ ನಾಚಿಸುವಂತಹ ವೇಗದಲ್ಲಿ ಓಡುವ ಶ್ರೀನಿವಾಸ ಗೌಡ ಈಗ ಕರಾವಳಿಯಲ್ಲಿ ಸಖತ್ ಫೆಮಸ್ ಆಗಿಬಿಟ್ಟಿದ್ದಾರೆ. ಕಂಬಳ ಕ್ರೀಡೆಯಲ್ಲಿ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಎಂದೇ ಇವರು ಹೆಸರುವಾಸಿ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಅಶ್ವಥಪುರ ನಿವಾಸಿ ಕಂಬಳ ಕೋಣದ ಓಟಗಾರ ಶ್ರೀನಿವಾಸ ಗೌಡ ಈಗ ಹೊಸ ದಾಖಲೆಯನ್ನು ಬರೆದಿದ್ದಾರೆ.

    ವಿಶ್ವದ ಫಾಸ್ಟೆಸ್ಟ್ ರನ್ನರ್ ಉಸೇನ್ ಬೋಲ್ಟ್‌ನ ದಾಖಲೆಯನ್ನು ಪುಡಿಪುಡಿ ಮಾಡಿ ಹೊಸ ಭಾಷ್ಯ ಬರೆದಿದ್ದಾರೆ. ಉಸೇನ್ ಬೋಲ್ಟ್ 100 ಮೀ. ಓಟವನ್ನು ಕೇವಲ 9.58 ಸೆಕೆಂಡ್ ಅವಧಿಯಲ್ಲಿ ಕ್ರಮಿಸಿದರೆ, ಶ್ರೀನಿವಾಸ ಗೌಡ ಕಂಬಳ ಗದ್ದೆಯ ಕೆಸರಿನಲ್ಲಿ ಕೋಣಗಳ ಜೊತೆ 100 ಮೀಟರ್‍ನ್ನು ಕೇವಲ 9.55 ಸೆಕೆಂಡ್‍ಗಳಲ್ಲಿ ಪೂರ್ಣಗೊಳಿಸಿ ದಾಖಲೆ ಬರೆದಿದ್ದಾರೆ.

    ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ 142.50 ಮೀಟರ್ ದೂರವನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ. ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದೆ. ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿದರೆ 9.55 ಸೆಕೆಂಡ್‍ನಲ್ಲಿ ಓಟ ಪೂರ್ಣಗೊಳಿಸಿ ಬೋಲ್ಟ್ ದಾಖಲೆಯನ್ನು ಉಡಾಯಿಸಿದ್ದಾರೆ.

    ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡಿ ಉಸೇನ್ ಬೋಲ್ಟ್ ಮಾಡಿದ ದಾಖಲೆಯನ್ನು ಶ್ರೀನಿವಾಸಗೌಡ ಕಾಲು ಹೂತು ಹೋಗುವ ಕಂಬಳದ ಕೆಸರುಗದ್ದೆಯಲ್ಲಿ ಓಡಿ ಮುರಿದಿದ್ದಾರೆ. ಈ ಮೂಲಕ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದ್ದಾರೆ.

    ಕಂಬಳದ ಗದ್ದೆಯಲ್ಲಿ ಮೊಣಕಾಲಿನವರೆಗೆ ಕೆಸರು ತುಂಬಿದ್ದು, ಒಂದು ಕೈಯಲ್ಲಿ ಕೋಣಗಳ ಹಗ್ಗ ಮತ್ತೊಂದು ಕೈಯಲ್ಲಿ ಬಾರುಕೋಲು ಹಿಡಿದು, ಸಮಚಿತ್ತದಿಂದ ಓಡಬೇಕಾಗುತ್ತದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಓಡುವ ಶ್ರೀನಿವಾಸ ಗೌಡ ಅವರೇ ಬೋಲ್ಟಿಗಿಂತ ಕೂದಲೆಳೆಯ ಅಂತರದಲ್ಲಿ ಮುಂದಿದ್ದಾರೆ.

    ಯಾವ ತರಬೇತಿಯನ್ನೂ ಪಡೆಯದೆ ಶ್ರೀನಿವಾಸ ಗೌಡ ತಮ್ಮ ಸ್ವಂತ ಆಸಕ್ತಿಯಿಂದ ಕಂಬಳ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದಾಖಲೆ ಮಾಡಿದ್ದಾರೆ. ಈ ಋತುವಿನ ಕಂಬಳ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಕಂಬಳ ಕೂಟದ ಚಿನ್ನದ ಓಟಗಾರನಾಗಿ ಪ್ರಸಿದ್ಧಿಯಾಗಿದ್ದಾರೆ.

  • 5 ಕೋಟಿ ನೀಡಿ ನನ್ನನ್ನು ಖರೀದಿಸಲು ಬಿಜೆಪಿ ಯತ್ನ: ಶ್ರೀನಿವಾಸ ಗೌಡ

    5 ಕೋಟಿ ನೀಡಿ ನನ್ನನ್ನು ಖರೀದಿಸಲು ಬಿಜೆಪಿ ಯತ್ನ: ಶ್ರೀನಿವಾಸ ಗೌಡ

    ಬೆಂಗಳೂರು: ನನ್ನನ್ನು ಖರೀದಿಸಲು ಬಿಜೆಪಿ ಯತ್ನಿಸಿತ್ತು. 5 ಕೋಟಿ ಹಣ ನೀಡಿ ಆಫರ್ ಕೊಟ್ಟಿತ್ತು ಎಂದು ಶಾಸಕ ಶ್ರೀನಿವಾಸ ಗೌಡ ಅವರು ಸದನದಲ್ಲಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.

    ಸ್ಪೀಕರ್ ಅವರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ ಅವರು, ಶಾಸಕ ವಿಶ್ವನಾಥ್, ಅಶ್ವಥ್ ನಾರಾಯಣ್ ಹಾಗೂ ಯೋಗೇಶ್ವರ್ ಮೂವರು ಸೇರಿ ನಮ್ಮ ಮನೆಗೆ ನೇರವಾಗಿ 5 ಕೋಟಿ ತಂದು ಕೊಟ್ಟರು. ಆಗ ನಾನು ನಿರಾಕರಿಸಿದ್ದೆ. ನಾನು ತೆಗೆದುಕೊಳ್ಳಲ್ಲ ಎಂದರೂ ಹಣ ಇಟ್ಟು ಹೋದರು ಎಂದು ತಿಳಿಸಿದರು.

    ಈ ಬಗ್ಗೆ ನಾನು ಬಹಳ ಜನಕ್ಕೆ ಹಿಂದೆಯೂ ಹೇಳಿದ್ದೇನೆ. ಅಲ್ಲದೆ 30 ಕೋಟಿ ಕೊಡುತ್ತೇವೆ ಬರುತ್ತೀರಾ ಎಂದು ಬಿಜೆಪಿಯವರು ನನ್ನ ಕೇಳುತ್ತಿದ್ದಾರೆ. ಇದಕ್ಕಾಗಿ ಜನ ನಮಗೆಲ್ಲಾ ವೋಟ್ ಹಾಕಿರೋದು? ಯಾವ ಅಧಿಕಾರಕ್ಕೆ ಜನ ಮತ ಹಾಕಿದ್ದಾರೆ? 224 ಮಂದಿ ಇಂದು ನಾವು ಇಲ್ಲಿ ಇದ್ದೇವೆ. ನಾನು ಕೂಡ ಒಬ್ಬ ಮಂತ್ರಿಯಾಗಿದ್ದವನು. ಏನು ಬೆಲೆ ಕಟ್ಟಿ ಖರೀದಿಸಲು ಹೊರಟ್ಟಿದ್ದೀರಾ? ಇವತ್ತು ಯಾರು ಯಾರು ಪಕ್ಷ ಬಿಟ್ಟು ಹೋಗಿದ್ದಾರೆ. ಎಷ್ಟೆಷ್ಟು ಹಣ ಪಡೆದಿದ್ದಾರೆ ಎನ್ನುವ ಮಾಹಿತಿಯನ್ನು ಕೂಡಬೇಕಾದರೆ ನಾನು ಹೇಳುತ್ತೇನೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಅಲ್ಲದೆ ಇಂತಹ ಪರಿಸ್ಥಿತಿಯಲ್ಲಿ ಯಾಕೆ ಬೇಕು ಸರ್ಕಾರ ನಿಮಗೆ? ಅರ್ಥ ಮಾಡಿಕೊಳ್ಳಿ, ಎಷ್ಟು ದಿನ ಇರಬಹುದು ನಾವು? ಒಂದು ದಿನ ಎಲ್ಲರೂ ಸಾಯುತ್ತೇವೆ. ಈ ಸ್ಥಿತಿಗೆ ಯಾಕೆ ಮಹತ್ಮಾಗಾಂಧಿ ಅವರು ಪ್ರಜಾಪ್ರಭುತ್ವ ಕೊಡಿಸಬೇಕಿತ್ತು ಈ ದೇಶಕ್ಕೆ? ನಾವು ಅದರಲ್ಲಿ ಬದುಕಬೇಕಾಗಿತ್ತಾ? ಇಂತಹ ಬೆಳವಣಿಗೆಗಳು ಮನಸ್ಸಿಗೆ ನೋವಾಗುತ್ತದೆ. ಅವರು ನನಗೆ ಆಫರ್ ಮಾಡಿದ್ದು ನಿಜ. ಅವರೇನಾದರು ಇಲ್ಲ ಎನ್ನಲಿ, ಆಗ ನಾನು ಅವರಿಗೆ ಉತ್ತರ ನೀಡುತ್ತೇನೆ ಎಂದು ಬಿಜೆಪಿಗೆ ಪ್ರಶ್ನೆಹಾಕಿದರು.

  • ನಾನು ರಾಜೀನಾಮೆ ನೀಡಲ್ಲ – ದೆಹಲಿಯಲ್ಲಿ ಶ್ರೀನಿವಾಸ ಗೌಡ ಹೇಳಿಕೆ

    ನಾನು ರಾಜೀನಾಮೆ ನೀಡಲ್ಲ – ದೆಹಲಿಯಲ್ಲಿ ಶ್ರೀನಿವಾಸ ಗೌಡ ಹೇಳಿಕೆ

    ನವದೆಹಲಿ: ನಾನು ರಾಜೀನಾಮೆ ನೀಡುವುದಿಲ್ಲ ಮತ್ತು ಬಿಜೆಪಿಗೆ ಹೋಗುವುದಿಲ್ಲ ಎಂದು ಕೋಲಾರ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.

    ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಫ್ಕೋ ಸಂಸ್ಥೆ ಸಭೆಗಾಗಿ ದೆಹಲಿಗೆ ಬಂದಿದ್ದೇನೆ. ದೆಹಲಿಗೆ ಬರುವ ಮುನ್ನ ಸಿಎಂ ಕುಮಾರಸ್ವಾಮಿಗೆ ತಿಳಿಸಿದ್ದೇನೆ ಎಂದರು.

    ನಾನು ಯಡಿಯೂರಪ್ಪ ಪುತ್ರ ವಿಜಯೇಂದ್ರ ಜೊತೆ ಬಂದಿದ್ದೇನೆ ಎನ್ನುವುದು ಸುಳ್ಳು. ವಿಮಾನದಲ್ಲಿ ನಾನು ಅವರ ಮುಖವನ್ನೇ ನೋಡಿಲ್ಲ ಎಂದು ಹೇಳಿದರು. ಹಿಂದೆ ನನಗೆ ಬಿಜೆಪಿ 5 ಕೋಟಿ ಆಫರ್ ಮಾಡಿತ್ತು. ಆಗ ನಾನು ಅದನ್ನು ಬಹಿರಂಗವಾಗಿ ಹೇಳಿದ್ದು, ಈಗ ನನ್ನನ್ನು ಯಾವ ಬಿಜೆಪಿ ನಾಯಕರು ಸಂಪರ್ಕಿಸಿಲ್ಲ ಎಂದು ತಿಳಿಸಿದರು.

    ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಜಯೇಂದ್ರ ಜೊತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀನಿವಾಸ ಗೌಡ ಸಹ ಬಿಜೆಪಿ ಸೇರುತ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು.

    https://www.youtube.com/watch?v=_SWeDFTmboc