Tag: ಶ್ರೀಕೃಷ್ಣ ಮಠ

  • ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಕೆಶಿ ಭೇಟಿ – ನಾಡಿನ ಒಳಿತಿಗಾಗಿ ಡಿಸಿಎಂ ಪ್ರಾರ್ಥನೆ

    ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿಕೆಶಿ ಭೇಟಿ – ನಾಡಿನ ಒಳಿತಿಗಾಗಿ ಡಿಸಿಎಂ ಪ್ರಾರ್ಥನೆ

    ಉಡುಪಿ: ಜಿಲ್ಲಾ ಪ್ರವಾಸದಲ್ಲಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ (Udupi Shri Krishna Matha) ಭೇಟಿ ನೀಡಿ, ಶ್ರೀಕೃಷ್ಣನ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠದ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಗಳು ಪ್ರಸಾದ ನೀಡಿ ಆಶೀರ್ವದಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ (DK Shivakumar), ಕೃಷ್ಣ, ಗಣಪತಿ ಆಶೀರ್ವಾದದ ಜೊತೆಗೆ ನಿಮ್ಮ ಮಾಧ್ಯಮದವರ ಆಶೀರ್ವಾದವೂ ಬೇಕು ಅಂತ ಹಾಸ್ಯ ಚಟಾಕಿ ಹಾರಿಸಿದರು. ಮುಂದುವರಿದು… ಕೃಷ್ಣಮಠದಿಂದ ಈ ಹಿಂದೆಯೇ ಆಹ್ವಾನ ಇತ್ತು. ಬಹಳ ವರ್ಷದಿಂದ ಈ ಸರ್ಕಾರ ಬಂದ್ಮೇಲೆ ಆಹ್ವಾನ ಮಾಡುತ್ತಿದ್ದರು. ಕೃಷ್ಣಮಠಕ್ಕೆ ಬರಲು ಸಾಧ್ಯವಾಗಿರಲಿಲ್ಲ ಇಂದು ಬಂದಿದ್ದೇನೆ ಎಂದರು. ಇದನ್ನೂ ಓದಿ: ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

    ಇನ್ನೂ ಧರ್ಮಸ್ಥಳದಲ್ಲಿ ಜೆಡಿಎಸ್, ಬಿಜೆಪಿ (BJP – JDS) ಸಮಾವೇಶ ವಿಚಾರ ಕುರಿತು ಮಾತನಾಡಿ, ಜೆಡಿಎಸ್ ಬಿಜೆಪಿಗೆ ಬೇರೆ ವೃತ್ತಿ ಇಲ್ಲ. ಎರಡೂ ಪಕ್ಷಗಳು ಬದುಕಿನ ಬಗ್ಗೆ ನೋಡಲ್ಲ. ಭಾವನೆ ಮೇಲೆ ಧರ್ಮದ ಮೇಲೆ ರಾಜಕಾರಣ ಮಾಡುತ್ತಾರೆ ಎಂದು ನುಡಿದರು. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್

    ಬಿಹಾರ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಾರ ಕುರಿತು ಮಾತನಾಡಿ, ಅದು ಸುಮ್ಮನೆ ಚರ್ಚೆ ನಡೆಯುತ್ತಿದೆ. ನಾನು ಬಿಹಾರ ಹೋಗಿದ್ದೀನಿ ನಾನು ಬಂದಿದ್ದೇನೆ. ಅವರು ಸಚಿವರ ಜೊತೆ ಹೋಗಿದ್ದಾರೆ, ನಾನು ಶಾಸಕರ ಜೊತೆ ಹೋಗಿದ್ದೇನೆ. ಕಾರ್ಯಕರ್ತರು, ಎಂಎಲ್‌ಎ, ಸಚಿವರು ಎಲ್ಲ ಒಂದೇ. ಎಲ್ಲರೂ ಪಕ್ಷದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

  • ಉಡುಪಿ ಕೃಷ್ಣಮಠಕ್ಕೆ ಮಾಲಾಶ್ರೀ, ಪುತ್ರಿ ಆರಾಧನಾ ಭೇಟಿ

    ಉಡುಪಿ ಕೃಷ್ಣಮಠಕ್ಕೆ ಮಾಲಾಶ್ರೀ, ಪುತ್ರಿ ಆರಾಧನಾ ಭೇಟಿ

    ಉಡುಪಿ: ಕನ್ನಡ ಚಿತ್ರರಂಗದ ಕನಸಿನ ಕನ್ಯೆ ಮಾಲಾಶ್ರೀ (Malashree), ಉಡುಪಿ ಶ್ರೀಕೃಷ್ಣ ಮಠಕ್ಕೆ (Udupi Sri Krishna Matha) ಶುಕ್ರವಾರ ಭೇಟಿ ನೀಡಿದರು.

    ದೇವರ ದರ್ಶನ ಮಾಡಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು. ಮಾಲಾಶ್ರೀ ಜೊತೆ ಪುತ್ರಿ ಆರಾಧನಾ ಕೂಡ ಮಠಕ್ಕೆ ಬಂದಿದ್ದರು. ಇದನ್ನೂ ಓದಿ: ಸಿಎಂ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಆಗುವ ಆಸೆಯಿದೆ: ಸತೀಶ್ ಜಾರಕಿಹೊಳಿ ಇಂಗಿತ

    ಈ ಪರ್ಯಾಯದಲ್ಲಿ ಕೋಟಿಬಾರಿ ಭಗವದ್ಗೀತೆಯನ್ನು ಬರೆಯುವ ಕೋಟಿಗೀತಾ ಲೇಖನ ಯಜ್ಞದೀಕ್ಷೆಯನ್ನು ಇಬ್ಬರೂ ಸ್ವೀಕರಿಸಿದರು.

    ಕಾಟೇರಾ ಸಿನಿಮಾದ ಸಕ್ಸಸ್ ನಂತರ ನಟಿ ಆರಾಧನಾ ಚಿತ್ರರಂಗದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಕಾಟೇರಾ ಸಿನಿಮಾದಲ್ಲಿ ನಟ ದರ್ಶನ್ ಜೊತೆಗೆ ನಾಯಕಿಯಾಗಿ ಆರಾಧನಾ ನಟಿಸಿದ್ದರು. ಇದನ್ನೂ ಓದಿ: ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ – ಯತ್ನಾಳ್ ಟಾಂಗ್

  • ಉಡುಪಿ ಶ್ರೀಕೃಷ್ಣ ಮಠಕ್ಕೆ ಜ್ಯೂ.ಎನ್‌ಟಿಆರ್, ರಿಷಬ್ ಶೆಟ್ಟಿ ಭೇಟಿ

    ಉಡುಪಿ ಶ್ರೀಕೃಷ್ಣ ಮಠಕ್ಕೆ ಜ್ಯೂ.ಎನ್‌ಟಿಆರ್, ರಿಷಬ್ ಶೆಟ್ಟಿ ಭೇಟಿ

    – ಎಲ್ಲವೂ ಭಗವಾನ್ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ ಎಂದ ಸ್ಟಾರ್ ನಟ
    – ರಿಷಬ್ ಬಗ್ಗೆ ಜ್ಯೂ.ಎನ್‌ಟಿಆರ್ ಮೆಚ್ಚುಗೆ ಮಾತು

    ಉಡುಪಿ: ನಟರಾದ ಜ್ಯೂ.ಎನ್‌ಟಿಆರ್ (Junior NTR) ಮತ್ತು ರಿಷಬ್ ಶೆಟ್ಟಿ (Rishab Shetty) ಕುಟುಂಬ ಸಮೇತರಾಗಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

    ಶ್ರೀಕೃಷ್ಣ ಮಠಕ್ಕೆ (Udupi Sri Krishna Matha) ಭೇಟಿ ಕೊಟ್ಟ ಜ್ಯೂ.ಎನ್‌ಟಿಆರ್, ಕೃಷ್ಣ, ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಈ ವೇಳೆ ನಟ ರಿಷಬ್ ಶೆಟ್ಟಿ ಹಾಗೂ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಜೊತೆಗಿದ್ದರು. ಸ್ಟಾರ್ ನಟರು ಶ್ರಾವಣ ಮಾಸದ ಶನಿವಾರದಂದು ದೇವಾಲಯಕ್ಕೆ ಭೇಟಿ ನೀಡಿ ಕೃಷ್ಣ, ಮುಖ್ಯಪ್ರಾಣ, ಗರುಡ ದೇವರ ದರ್ಶನ ಪಡೆದರು. ಇದನ್ನೂ ಓದಿ: ವಿಪಕ್ಷಗಳ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯ – ‘ಕೈ’ ನಾಯಕರಿಂದ ‘ರಾಜಭವನ ಚಲೋ’

    ದೇವರ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಕನ್ನಡದಲ್ಲೇ ಮಾತನಾಡಿದ ಜ್ಯೂ.ಎನ್‌ಟಿಆರ್, ಎಲ್ಲವೂ ಭಗವಾನ್ ಶ್ರೀಕೃಷ್ಣನ ಸ್ಕ್ರೀನ್ ಪ್ಲೇ. 40 ವರ್ಷದಿಂದ ನನ್ನ ಅಮ್ಮನಿಗೆ ಒಂದು ಆಸೆ ಇತ್ತು. ಮಗನನ್ನೊಮ್ಮೆ ಕೃಷ್ಣ ಮಠಕ್ಕೆ ಕರೆದುಕೊಂಡು ಬರಬೇಕು ಎಂಬ ಆಸೆ ಇವತ್ತು ಈಡೇರಿದೆ. ಶ್ರಾವಣ ಮಾಸದ ವಿಶೇಷ ದಿನ ಹರಕೆ ಈಡೇರಿದ್ದು ಸಂತೋಷವಾಗಿದೆ. ರಿಷಬ್ ಶೆಟ್ಟಿ ತುಂಬಾ ಇಷ್ಟಪಟ್ಟ ದೇವರು ಕೊಟ್ಟ ಗೆಳೆಯ. ರಿಷಬ್ ಜೊತೆ ಮಠಕ್ಕೆ ಬಂದಿರುವುದು ಖುಷಿಯಾಗಿದೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ನಮ್ಮ ಜೊತೆಗಿದ್ದಾರೆ ಎಂದು ಖುಷಿ ಹಂಚಿಕೊಂಡರು.

    ನನ್ನ ಅಮ್ಮನ ಪೂರ್ವಿಕರು ಮೂಲತಃ ಕುಂದಾಪುರದವರು. ಕೃಷ್ಣಮಠಕ್ಕೆ ಭೇಟಿಕೊಟ್ಟು ಮನಃಶಾಂತಿ ಸಿಕ್ಕಿದೆ. ಸರ್ವೇ ಜನ ಸುಖಿನೋ ಭವಂತು ಎಂದು ದೇವರಲ್ಲಿ ಬೇಡಿಕೊಂಡಿದ್ದೇನೆ. ನಾನು ಮನೆಯಲ್ಲಿ ಪ್ರತಿದಿನ ಉಡುಪಿ ಊಟ ಮಾಡುತ್ತೇನೆ. ಕೃಷ್ಣಮಠದಲ್ಲಿ ಮಾಡುವ ಊಟವನ್ನು ನಾನು ಪ್ರತಿದಿನ ಮನೆಯಲ್ಲೇ ಮಾಡುತ್ತೇನೆ. ರಿಷಬ್ ಅವರ ಮುಂದಿನ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ರಿಷಬ್‌ಗೆ ನ್ಯಾಷನಲ್ ಅವಾರ್ಡ್ ಬಂದಿರೋದು ನನಗೆ ತುಂಬಾ ಖುಷಿ. ಯೋಗ್ಯ ವ್ಯಕ್ತಿಗೆ ಯೋಗ್ಯ ಅವಾರ್ಡ್ ಬಂದಿದೆ ಎಂದು ಅಭಿನಂದಿಸಿದರು. ಇದನ್ನೂ ಓದಿ: BMTC ನಿರ್ವಾಹಕ ಹುದ್ದೆಗೆ ಪರೀಕ್ಷೆ, ಕಟ್ಟುನಿಟ್ಟಿನ ನಿಗಾವಹಿಸುವಂತೆ ಕ್ರಮ – ಕೆಇಎ

  • ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ನಟಿ ಸಾಯಿಪಲ್ಲವಿ

    ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ನಟಿ ಸಾಯಿಪಲ್ಲವಿ

    ದಕ್ಷಿಣ ಭಾರತದ ಹೆಸರಾಂತ ನಟಿ ಸಾಯಿ ಪಲ್ಲವಿ ಉಡುಪಿ (Udupi) ಶ್ರೀ ಕೃಷ್ಣ ಮಠಕ್ಕೆ (Shrikrishna Math) ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯದ ನಿಮಿತ್ತ ಉಡುಪಿಗೆ ಬಂದಿರುವ ಅವರು, ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದೇವರ ದರ್ಶನ ಕೈಗೊಂಡಿದ್ದಾರೆ. ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೆ ತೆರಳಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮಠಕ್ಕೆ ಭೇಟಿ ನೀಡಿದ ಸಾಯಿ ಪಲ್ಲವಿ ಅವರನ್ನು ಶ್ರೀ ಕೃಷ್ಣ ಮಠದ ವತಿಯಿಂದ ಗೌರವಿಸಲಾಯಿತು.

    ಸಿನಿಮಾ ರಂಗದಿಂದ ದೂರ

    ಸಾಯಿ ಪಲ್ಲವಿ (Sai pallavi) ಪ್ರತಿಭಾನ್ವಿತ ನಟಿ. ಆದರೆ ಕಳೆದೊಂದು ವರ್ಷದಿಂದ ಸಾಯಿ ಪಲ್ಲವಿ ಅಡ್ರೆಸ್‌ಗೆ ಇಲ್ಲ. ಗಾರ್ಗಿ ರಿಲೀಸ್ ಆಗಿ ವರ್ಷ ಉರುಳಿದೆ. ಬಳಿಕ ಒಂದೂ ಸಿನಿಮಾ ಬಂದಿಲ್ಲ. ಸಿನಿಮಾ ಘೋಷಣೆಯೂ ಆಗಿಲ್ಲ. ಏನಾಯ್ತು ಸಾಯಿ ಪಲ್ಲವಿ ಬದುಕಲ್ಲಿ?

    ವಿರಾಟ ಪರ್ವಂ ಇದೊಂದು ಚಿತ್ರಕ್ಕಾಗಿ ಸಾಯಿಪಲ್ಲವಿ ನೀಡಿದ ಸಂದರ್ಶನ ಜೀವನದ ದಿಕ್ಕನ್ನೇ ಬದಲಾಯಿಬಿಡುತ್ತೆ ಅಂತ ಖುದ್ದು ಸಾಯಿಪಲ್ಲವಿ ಅಂದುಕೊಂಡಿರಲಿಲ್ಲ. ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾದ ವಿವಾದ (Controversy) ಬಗ್ಗೆ ತಮ್ಮದೊಂದು ಅಭಿಪ್ರಾಯ ಹೇಳಲು ಹೋಗಿ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾದ ಸಾಯಿಪಲ್ಲವಿ ಈಗ ಸಿನಿಮಾ ರಂಗದಲ್ಲಿ ಹೆಸರೇ ಮರೆಯುವಂತೆ ಕಣ್ಮರೆಯಾಗುತ್ತಿರೋದು ವಿಷಾದ.

    ನೈಜ ಅಭಿನಯ. ಸಹಜ ಸೌಂದರ್ಯ. ಅದ್ಭುತ ನೃತ್ಯಕಲೆಗೆ ಹೆಸರಾದ ಪ್ರತಿಭಾನ್ವಿತೆಗೆ ಈಗ ಸಿನಿಮಾ ಅವಕಾಶಗಳೇ ಇಲ್ಲ. ಗಾರ್ಗಿಯೇ ಕೊನೆ. ಮತ್ಯಾವ ಸಿನಿಮಾ ತೆರೆಕಂಡಿಲ್ಲ. ಕಾರ್ತಿಕೇಯನ್ ಜೊತೆ ಅನೌನ್ಸ್ ಆದ ಪ್ರಾಜೆಕ್ಟ್ ಯಾವ ಹಂತದಲ್ಲಿದೆಯೋ ಅದರ ಸುಳಿವೂ ಇಲ್ಲ. ಪರಿಣಾಮ ಪ್ರತಿಭಾನ್ವಿತೆಯ ಕೈ ಖಾಲಿ ಖಾಲಿ.

    ಕಳೆದ ವರ್ಷ ಸಾಯಿಪಲ್ಲವಿಯ ಮೇಲೆ ಬಂದ ಅಪವಾದಗಳು ಒಂದೆರಡಲ್ಲ. ನಾಗಚೈತನ್ಯ ಜೊತೆ ಲವ್‌ಸ್ಟೋರಿ ಚಿತ್ರ ಮಾಡ್ತಿರುವಾಗ ಸ್ಯಾಮ್ ನಾಗ್ ಡಿವೋರ್ಸ್ ಮುನ್ನಲೆಗೆ ಬಂತು. ವಿಪರ್ಯಾಸ ಅಂದ್ರೆ ನಾಗ್ ಜೊತೆ ಸಾಯಿಪಲ್ಲವಿ ಸಲುಗೆಯಿಂದ ಕಾಣಿಸ್ಕೊಂಡಿದ್ದಕ್ಕೆ ಇದೇ ಪ್ರೇಮಂ ಬೆಡಗಿಯ ಮೇಲೆ ಗೂಬೆ ಕೂರಿಸಲಾಯಿತು. ಈ ಎರಡು ಹೊಡೆತದಿಂದ ಸಾಯಿಪಲ್ಲವಿ ಸಿನಿಮಾ ರಂಗದಿಂದ ಒಳ್ಳೆಯ ನೀತಿಪಾಠ ಕಲಿತಿದ್ದಾರೆ. ಹೀಗಾಗೇ ಸಾಯಿಪಲ್ಲವಿ ಕರಿಯರ್ ಆಲ್‌ಮೋಸ್ಟ್ ಮುಗಿಯುವ ಹಂತಕ್ಕೆ ಬಂದು ತಲುಪಿದೆ.

     

    ಕುಟುಂಬಸ್ಥರೂ ಕೂಡ ಸಿನಿಮಾ ಸಾಕು ಮದುವೆಯಾಗು ಎಂಬ ಸಲಹೆ ಕೊಡುತ್ತಿದ್ದಾರಂತೆ. ಶೀಘ್ರದಲ್ಲೇ ಸಾಯಿಪಲ್ಲವಿ ಬಣ್ಣಕ್ಕೆ ವಿದಾಯ ಹೇಳಿದ್ರೂ ಆಶ್ಚರ್ಯಪಡಬೇಕಿಲ್ಲ ಎನ್ನುತ್ತಿದೆ ಟಾಲಿವುಡ್ ಗಲ್ಲಿ.

  • ಚಂದ್ರಗ್ರಹಣದ ವೇಳೆಯೇ ಬಾಗಿಲು ತೆರೆದ ಉಡುಪಿ ಶ್ರೀಕೃಷ್ಣ ಮಠ

    ಚಂದ್ರಗ್ರಹಣದ ವೇಳೆಯೇ ಬಾಗಿಲು ತೆರೆದ ಉಡುಪಿ ಶ್ರೀಕೃಷ್ಣ ಮಠ

    ಉಡುಪಿ: ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಚಂದ್ರಗ್ರಹಣದ ಸಂದರ್ಭದಲ್ಲಿ ಎಲ್ಲೆಡೆ ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳ ಬಾಗಿಲು ಮುಚ್ಚಲಾಗಿದೆ. ಆದರೆ ಉಡುಪಿ ಶ್ರೀಕೃಷ್ಣ ಮಠವನ್ನು ಸಂಪೂರ್ಣವಾಗಿ ತೆರೆಯಲಾಗಿದೆ.

    ಗ್ರಹಣ ಕಾಲದಲ್ಲಿ ಜಪ, ತಪ, ಧ್ಯಾನಕ್ಕೆ ಮಠದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮಠದ ಪ್ರವೇಶ ದ್ವಾರ ಮುಚ್ಚದೇ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

    ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಾಗುತ್ತಿದ್ದಂತೆ ಹಲವು ದೇವಾಲಯಗಳನ್ನು ಮುಚ್ಚಲಾಗಿತ್ತು. ಅಲ್ಲಿಯವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅದಾದ ಬಳಿಕ ಬಾಗಿಲು ಹಾಕಿ ನಿರ್ಬಂಧ ವಿಧಿಸಲಾಯಿತು. ಗ್ರಹಣ ಮುಗಿಯುವವರೆಗೂ ಬಾಗಿಲು ತೆರೆಯುವುದಿಲ್ಲ. ಗ್ರಹಣ ಮುಗಿದ ಬಳಿಕ ದೇವಾಲಯಗಳ ಶುದ್ಧೀಕರಣ ಮಾಡಿ ನಂತರ ಬಾಗಿಲು ತೆರೆಯಲಾಗುವುದು.

    ವಿಜ್ಞಾನ ಲೋಕಕ್ಕೆ ಚಂದ್ರಗ್ರಹಣವೆಂಬುದು ಒಂದು ಕೌತುಕ. ನಭೋಮಂಡಲದಲ್ಲಿ ಅಪರೂಪಕ್ಕೊಮ್ಮೆ ಸಂಭವಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ವಿಜ್ಞಾನಾಸಕ್ತರು ಕಾತರರಾಗಿದ್ದರು. ಚಂದ್ರಗ್ರಹಣ ವೀಕ್ಷಿಸಲು ನೆಹರೂ ತಾರಾಲಯದಲ್ಲಿ ಜನರಿಗೆ ಅವಕಾಶ ಕಲ್ಪಿಸಲಾಯಿತು. ಜನರು ಟೆಲಿಸ್ಕೋಪ್‌ನಲ್ಲಿ ಚಂದ್ರಗ್ರಹಣ ಕಣ್ತುಂಬಿಕೊಂಡರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಕೃಷ್ಣ ಅಂದ್ರೆ ಕರಾರುರಹಿತ ಪ್ರೀತಿ, ಆಡಳಿತ ನಡೆಸಲು ದೇವರಿಂದ ಶಕ್ತಿ ಪಡೆದಿದ್ದೇನೆ: ಸಿಎಂ ಬೊಮ್ಮಾಯಿ

    ಶ್ರೀಕೃಷ್ಣ ಅಂದ್ರೆ ಕರಾರುರಹಿತ ಪ್ರೀತಿ, ಆಡಳಿತ ನಡೆಸಲು ದೇವರಿಂದ ಶಕ್ತಿ ಪಡೆದಿದ್ದೇನೆ: ಸಿಎಂ ಬೊಮ್ಮಾಯಿ

    ಉಡುಪಿ: ಶ್ರೀಕೃಷ್ಣ ಆದರ್ಶ ವ್ಯಕ್ತಿ, ಶ್ರೀಕೃಷ್ಣ ಅಂದರೆ ಕರಾರು ರಹಿತ ಪ್ರೀತಿ, ದೇವತಾಪುರುಷ, ಮಾರ್ಗದರ್ಶಕ. ಅವನ ದರ್ಶನವೆಂದರೆ ಕರಗಿ ಲೀನವಾಗುವ ಪ್ರಕ್ರಿಯೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ ಬಸವರಾಜ ಬೊಮ್ಮಾಯಿ, ಪೊಡವಿಗೊಡೆಯ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರಿಂದ ಹಾಗೂ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

    ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಗವದ್ಗೀತೆ ಜೀವನದ ಮಾರ್ಗದರ್ಶಕವಾಗಿದೆ. ಭಗವದ್ಗೀತೆ ನಮ್ಮೆಲ್ಲ ಜೀವನದ ಪ್ರಶ್ನೆಗಳಿಗೆ ಉತ್ತರ ಸಿಗುವ ಗ್ರಂಥ. ಶ್ರೀಕೃಷ್ಣ ಮಠಕ್ಕೆ ಬರುವುದು ಪುಣ್ಯಭಾಗ್ಯ. ಕೃಷ್ಣ ಕರೆಸಿಕೊಂಡರೆ ಮಾತ್ರ ಬರಲು ಸಾಧ್ಯ. ನಾಡಿನ ಜವಾಬ್ದಾರಿ ಹೊತ್ತ ಮೇಲೆ ದೇವರೇ ಕರೆಸಿದ್ದಾನೆ. ಕೋವಿಡ್ ಮಾರಿ ಎದುರಿಸಿ, ಕರ್ನಾಟಕ ಸುಭೀಕ್ಷ ಮಾಡಲು ದೇವರಲ್ಲಿ ಬೇಡಿದ್ದೇನೆ. ಆ ಅದಮ್ಯ ಶಕ್ತಿ ಪಡೆದಿದ್ದೇನೆ. ಅದಮಾರು ಸ್ವಾಮೀಜಿಯಲ್ಲಿ ನಿಖರತೆಯ ಜೊತೆಗೆ ನಾಡಿನ ಬಗ್ಗೆ ಹಂಬಲ ಕಂಡೆ. ಅವರ ಭೇಟಿ ನಂತರ ವಿಶೇಷ ಶಕ್ತಿ ಬಂದಿದೆ. ಪರಮಾತ್ಮನ ದಯೆಯಿಂದ ಸ್ಥಾನ ಸಿಕ್ಕಿದೆ. ದೇವರ ಆದರ್ಶ ಪಾಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

    ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಡಾ. ಸುಧಾಕರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್ ಮೊದಲಾದವರಿದ್ದರು. ಅದಮಾರು ಸ್ವಾಮೀಜಿ ಅವರನ್ನು ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು. ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ಶಾಸಕರಿಗೆ ಪರಿಹಾರ ಮಾಡು ಮಠದಿಂದ ಗೌರವ ಸಮರ್ಪಣೆ ನಡೆಯಿತು.

  • ಪಟ್ಟಾಭಿರಾಮನಾಗಿ ದರ್ಶನ ಕೊಟ್ಟ ಕಡೆಗೋಲು ಕೃಷ್ಣ

    ಪಟ್ಟಾಭಿರಾಮನಾಗಿ ದರ್ಶನ ಕೊಟ್ಟ ಕಡೆಗೋಲು ಕೃಷ್ಣ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುತ್ತಿದ್ದಂತೆ ಶ್ರೀಕೃಷ್ಣಮಠದ ಕಡೆಗೋಲು ಕೃಷ್ಣ ಪಟ್ಟಾಭಿರಾಮನಾಗಿ ಭಕ್ತರಿಗೆ ದರ್ಶನ ಕೊಟ್ಟಿದ್ದಾನೆ.

    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಈ ಮೂಲಕ ಭಕ್ತ ಕೋಟಿಯ ಕನಸು ನನಸಾಗಿದೆ. ಉತ್ತರ ಭಾರತದಲ್ಲಿ ಧಾರ್ಮಿಕ ವಿಧಿವಿಧಾನಗಳು ಶ್ರೀರಾಮನಿಗೆ ಅರ್ಪಣೆಯಾಗುತ್ತಿದ್ದಂತೆ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಉಡುಪಿಯಲ್ಲಿ ಶ್ರೀಕೃಷ್ಣ ಮಠದಲ್ಲಿ ಮಹಾಪೂಜೆಯನ್ನು ನೆರವೇರಿಸಲಾಯಿತು.

    ಉಡುಪಿ ಶ್ರೀಕೃಷ್ಣನಿಗೆ ಈ ಸಂದರ್ಭದಲ್ಲಿ ಪಟ್ಟಾಭಿರಾಮನ ಅಲಂಕಾರ ಮಾಡಲಾಗಿತ್ತು. ಈ ಮೂಲಕ ಶ್ರೀಕೃಷ್ಣನಲ್ಲಿ ಶ್ರೀರಾಮನನ್ನು ಕಂಡುಕೊಳ್ಳಲಾಯಿತು. ಅಷ್ಠ ಮಠಗಳಲ್ಲಿ ಒಂದಾದ ಕಾಣಿಯುರು ಮಠಾಧೀಶ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ವಿಶೇಷ ಅಲಂಕಾರ ಮಾಡಿದ್ದರು. ಶ್ರೀಕೃಷ್ಣನಿಗೆ ರಾಮಾಲಂಕಾರ ಮಾಡಿ ಕೃಷ್ಣನನ್ನು ಶ್ರೀ ರಾಮನನ್ನಾಗಿಸಿದರು.

    ಬಿಲ್ಲು ಬಾಣವನ್ನು ಹಿಡಿದು, ಸಿಂಹಾಸನದಲ್ಲಿ ಕುಳಿತು ಪಟ್ಟಾಭಿಷೇಕ ಆದ ದಿನವನ್ನು ಸ್ವಾಮೀಜಿಗಳು ನೆನಪು ಮಾಡಿ ಕೊಟ್ಟರು. ಪರ್ಯಾಯ ಅದಮಾರು ಮಠಾಧೀಶ ಈಶಪ್ರಿಯ ತೀರ್ಥ ಶ್ರೀಪಾದರು ಪಟ್ಟಾಭಿರಾಮನಿಗೆ ಮಹಾಪೂಜೆಯನ್ನು ನೆರವೇರಿಸಿದರು.

    ಉಡುಪಿ ಶ್ರೀಕೃಷ್ಣ ಅಲಂಕಾರ ಪ್ರಿಯನಾಗಿದ್ದು, ಪ್ರತಿದಿನ ವಿವಿಧ ಅಲಂಕಾರಗಳನ್ನು ಮಾಡಲಾಗುತ್ತದೆ. ದಿನದ ವಿಶೇಷತೆ ಹೊಂದಿಕೆಯಾಗುವಂತೆ ಅಲಂಕಾರ ಇರುತ್ತದೆ. ಪ್ರತಿ ಶುಕ್ರವಾರ ಕೃಷ್ಣನಿಗೆ ದೇವಿಯ ಅಲಂಕಾರ ಮಾಡಲಾಗುತ್ತದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ನಿರ್ಮಾಣದ ಸಂದರ್ಭದಲ್ಲಿ ರಾಮನ ಪಟ್ಟಾಭಿಷೇಕ ನೆನಪಿಸುವ ಪಟ್ಟಾಭಿರಾಮ ಅಲಂಕಾರವನ್ನು ನೆರವೇರಿಸಲಾಯಿತು.

  • ಕಂಕಣ ಸೂರ್ಯಗ್ರಹಣ- ಉಡುಪಿ ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಜಪ ತಪ ಧ್ಯಾನ

    ಕಂಕಣ ಸೂರ್ಯಗ್ರಹಣ- ಉಡುಪಿ ಕೃಷ್ಣಮಠದಲ್ಲಿ ಅಷ್ಟಮಠಾಧೀಶರ ಜಪ ತಪ ಧ್ಯಾನ

    ಉಡುಪಿ: ಈ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತಿದ್ದಂತೆ ಉಡುಪಿಯಲ್ಲಿ ಕೃಷ್ಣ ಮಠದ ಸ್ವಾಮೀಜಿಗಳು ಜಪ ಧ್ಯಾನದಲ್ಲಿ ತೊಡಗಿಕೊಂಡರು. ಕೊರೊನಾ ಲಾಕ್‍ಡೌನ್ ಸಡಿಲಿಕೆ ಆದರೂ ಉಡುಪಿ ಕೃಷ್ಣ ಮಠ ಇನ್ನು ತೆರೆದಿಲ್ಲ. ಇಂದು ಕೂಡ ಶ್ರೀಕೃಷ್ಣ ಮಠ ಮುಚ್ಚಿತ್ತು.

    ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಆರು ಮಂದಿ ಮಠಾಧೀಶರುಗಳು ಕೃಷ್ಣ ಮಠದ ಗರ್ಭಗುಡಿಯ ಹೊರಭಾಗದಲ್ಲಿ ಜಪ ತಪ ಧ್ಯಾನದಲ್ಲಿ ತಲ್ಲೀನರಾದರು. ಸೂರ್ಯ ಗ್ರಹಣ ಆರಂಭವಾಗುತ್ತಿದ್ದಂತೆ ಎಲ್ಲ ಸ್ವಾಮೀಜಿಗಳು ಕೃಷ್ಣಮಠಕ್ಕೆ ಆಗಮಿಸಿ ಧ್ಯಾನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

    ಪ್ರತಿದಿನ ಉಡುಪಿ ಕೃಷ್ಣಮಠದಲ್ಲಿ 11:30ರ ಸುಮಾರಿಗೆ ಮಹಾಪೂಜೆ ಶ್ರೀ ಕೃಷ್ಣನಿಗೆ ಸಲ್ಲುತ್ತದೆ. ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಪರ್ಯಾಯ ಅದಮಾರು ಸ್ವಾಮೀಜಿಯವರು ಶನಿವಾರ ಮಾಡಿದ ಶ್ರೀಕೃಷ್ಣನ ಅಲಂಕಾರವನ್ನು ತೆಗೆದು ಕೇವಲ ತುಳಸಿಯ ಹಾರವನ್ನು ಕೃಷ್ಣ ಪರಮಾತ್ಮನ ಬಿಂಬಕ್ಕೆ ಅರ್ಪಿಸಿದರು. ಸೂರ್ಯ ಗ್ರಹಣ ಮೋಕ್ಷವಾದ ಮೇಲೆ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ ಅಲಂಕಾರ ಮಾಡಿ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಗ್ರಹಣ ಮುಗಿಯುವ ತನಕ ಮಠದ ಸ್ವಾಮೀಜಿಗಳು ಉಪವಾಸ ಇರುತ್ತಾರೆ.

    ಪಲಿಮಾರು ಮಠದ ಹಿರಿಯ ಮತ್ತು ಕಿರಿಯ ಶ್ರೀಗಳು ಸೋದೆ ಮಠಾಧೀಶರು ಕೃಷ್ಣಾಪುರ ಮತ್ತು ಕಾಣಿಯೂರು ಸ್ವಾಮೀಜಿಯವರು ಧ್ಯಾನದಲ್ಲಿ ಪಾಲ್ಗೊಂಡರು. ಅದಮಾರು ಹಿರಿಯ ಶ್ರೀಗಳು ಸೇರಿದಂತೆ ಇತರೆ ಮಠಾಧೀಶರು ತಮ್ಮ ತಮ್ಮ ಮಠಗಳಲ್ಲಿ ಜಪ ನಡೆಸಿದರು. ಕೃಷ್ಣ ಮಠದ ಸಿಬ್ಬಂದಿ ಮತ್ತು ಅರ್ಚಕರು ಮಠದ ಒಳಗೆ ಇದ್ದು ಜಪ ತಪದಲ್ಲಿ ತಲ್ಲೀನರಾದರು.

  • ಉಡುಪಿ ಮಠಕ್ಕೂ ತಟ್ಟಿದೆ ಬಂದ್ ಬಿಸಿ!

    ಉಡುಪಿ ಮಠಕ್ಕೂ ತಟ್ಟಿದೆ ಬಂದ್ ಬಿಸಿ!

    – ಶ್ರೀಕೃಷ್ಣ ಮಠಕ್ಕೆ ಬರುತ್ತಿದ್ದ ಭಕ್ತರ ಸಂಖ್ಯೆ ಇಳಿಮುಖ

    ಉಡುಪಿ: ಜಿಲ್ಲೆಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೂ ಭಾರತ್ ಬಂದ್ ಎಫೆಕ್ಟ್ ತಟ್ಟಿದೆ. ಪ್ರತಿದಿನ ಮಧ್ಯಾಹ್ನ ತುಂಬಿ ತುಳುಕುವ ಕೃಷ್ಣಮಠದ ಭೋಜನ ಶಾಲೆಗಳು ಇಂದು ಖಾಲಿ ಖಾಲಿಯಾಗಿ ಕಾಣುತ್ತಿದೆ.

    ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಭಾರತ್ ಬಂದ್‍ಗೆ ಹಲವು ಸಂಘಟನೆಗಳು ಕರೆ ಕೊಟ್ಟಿದೆ. ಆದರಿಂದ ದೇಶಾದ್ಯಂತ ಬಹುತೇಕ ಕಾರ್ಮಿಕರು ಈ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅಲ್ಲದೆ ಸಾರಿಗೆ ಇಲಾಖೆಯಂತೂ ಕೆಲವೆಡೆ ಸಂಪೂರ್ಣ ಸ್ಥಗಿತಗೊಂಡಿದ್ದು, ರಾಜ್ಯದಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವೆಡೆ ಸರಿಯಾದ ಸಮಯಕ್ಕೆ ಸಾರಿಗೆ ವ್ಯವಸ್ಥೆ ಸಿಗದೆ ರೋಗಿಗಳು, ವಿದ್ಯಾರ್ಥಿಗಳು ಹಾಗೂ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

    ಈ ಬಂದ್ ಬಿಸಿ ಕೊಂಚ ಉಡುಪಿ ಮಠಕ್ಕೂ ತಟ್ಟಿದೆ. ಬಂದ್ ಇರುವ ಹಿನ್ನೆಲೆ ಮಠಕ್ಕೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ. ಅದರಲ್ಲೂ ಮಠದ ಭೋಜನ ಶಾಲೆಯಲ್ಲಿ ಇಂದು ಕೇವಲ ಮೂರು ಸಾವಿರ ಭಕ್ತರು ಮಾತ್ರ ಅನ್ನಪ್ರಸಾದ ಸ್ವೀಕಾರ ಮಾಡಿದ್ದಾರೆ. ಇಲ್ಲವಾದರೆ ಮಠದಲ್ಲಿ ಪ್ರತಿನಿತ್ಯ 8 ರಿಂದ 10 ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನದಾನ ನಡೆಯುತ್ತಿತು. ರಜೆ ಇದ್ದ ದಿನಗಳಲ್ಲಿ 15 ಸಾವಿರಕ್ಕೂ ಹಚ್ಚು ಜನರು ಅನ್ನಪ್ರಸಾದವನ್ನು ಸ್ವೀಕರಿಸುತ್ತಾರೆ. ಆದ್ರೆ ಇಂದು ಮಠಕ್ಕೆ ಹೊರ ಜಿಲ್ಲೆಯ ಪ್ರವಾಸಿಗರ ಬಸ್ಸುಗಳೂ ಬರಲಿಲ್ಲ. ಶಾಲಾ ಕಾಲೇಜು ವಿದ್ಯಾರ್ಥಿಗಳಂತೂ ಮಠದ ಕಡೆ ಮುಖ ಮಾಡಿಲ್ಲ.

    ಇಂದು ಮತ್ತು ನಾಳೆ ಭಾರತ್ ಬಂದ್ ಇರುವುದರಿಂದ ಮುಂಜಾಗೃತೆ ಕ್ರಮವಾಗಿ ಕಡಿಮೆ ಅಡುಗೆ ತಯಾರಿ ಮಾಡಿದ್ದೇವೆ. ರಾತ್ರಿಯೂ ಕೂಡ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಬರುವ ಸಾಧ್ಯತೆಯಿದೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಡುಪಿ ಪರ್ಯಾಯಕ್ಕೂ ಮೊದಲು ಕದಳಿ ಮುಹೂರ್ತ: ಬಾಳೆ ಗಿಡ ನೆಡೋದು ಯಾಕೆ?

    ಉಡುಪಿ ಪರ್ಯಾಯಕ್ಕೂ ಮೊದಲು ಕದಳಿ ಮುಹೂರ್ತ: ಬಾಳೆ ಗಿಡ ನೆಡೋದು ಯಾಕೆ?

    ಉಡುಪಿ: 2020 ರಿಂದ ಎರಡು ವರ್ಷ ಶ್ರೀಕೃಷ್ಣನ ಪೂಜಾಧಿಕಾರಕ್ಕೆ ಅದಮಾರು ಮಠ ಸಿದ್ಧತೆ ಶುರುಮಾಡಿದೆ. ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕದಳಿ ಮುಹೂರ್ತ ನಡೆಯಿತು. ಸಂಪ್ರದಾಯದಂತೆ ನೂರಾರು ಬಾಳೆಗಿಡಗಳಿಗೆ ಪೂಜೆ ನೆರವೇರಿಸಿ, ತೋಟದಲ್ಲಿ ಗಿಡ ನೆಡಲಾಯ್ತು.

    ಶ್ರೀಕೃಷ್ಣ ಮಠದಲ್ಲಿ ಈಗ ಪಲಿಮಾರು ಮಠದ ಪರ್ಯಾಯ ನಡೆಯುತ್ತಿದೆ. ಮುಂದಿನ 2020ರ ಜನವರಿಯಿಂದ ಶ್ರೀಕೃಷ್ಣನ ಪೂಜಾಧಿಕಾರ ಅದಮಾರು ಮಠದ ಪಾಲಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಕದಳಿ ಮುಹೂರ್ತ ನೆರವೇರಿತು. ಬಾಳೆಗಿಡಗಳಿಗೆ ಪೂಜೆ ಸಲ್ಲಿಸಿ ಮಠದ ತೋಟದಲ್ಲಿ ಗಿಡವನ್ನು ನೆಡುವ ಪ್ರಕ್ರಿಯೆಯೇ ಬಾಳೆ ಮಹೂರ್ತ. ಕೃಷ್ಣ ಮಠ- ಅನಂತೇಶ್ವರ- ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ಬಾಳೆ ಗಿಡಗಳಿಗೆ ಪೂಜೆ ಸಲ್ಲಿಸಿ ನಂತರ ಮಠದ ತೋಟದಲ್ಲಿ ಬಾಳೆಗಿಡವನ್ನು ನೆಡಲಾಯಿತು. ಬಾಳೆಗಿಡ ಫಲ ಬಿಡುವ ಸಂದರ್ಭ ಅದಮಾರುಮಠದ ಪರ್ಯಾಯ ಪೀಠದಲ್ಲಿ ಇರಲಿದ್ದಾರೆ.

    ಈ ಕುರಿತು ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಮುಂದಿನ ಪರ್ಯಾಯ ಸಂದರ್ಭ ಭಕ್ತರಿಗೆ ನೆಮ್ಮದಿಯಿಂದ ಕೃಷ್ಣನ ದರ್ಶನ ಸಿಗುವಂತೆ ಮಾಡಲಾಗುವುದು. ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟು ಮಾಡಲಾಗುವುದು ಎಂದರು.

    ಬಾಳೆ ಮುಹೂರ್ತ ನೆರವೇರಿದ್ದು ಮುಂದೆ ಭತ್ತ, ಅಕ್ಕಿ, ಕಟ್ಟಿಗೆ ಮತ್ತು ಚಪ್ಪರ ಮುಹೂರ್ತಗಳು ನೆರವೇರಲಿದೆ. ಅದಮಾರು ಪರ್ಯಾಯ ಸಂದರ್ಭ ಭಕ್ತರು ಎರಡು ವರ್ಷ ಮಠಕ್ಕೆ ಬಂದು ನೆಮ್ಮದಿಯಿಂದ ದೇವರನ್ನು ಕಂಡುಕೊಳ್ಳುವ ಬಗ್ಗೆ ಈ ಬಾರಿ ಚಿಂತಿಸುವುದಾಗಿ ಮಠ ಚಿಂತನೆ ನಡೆಸಿದೆ. ಪರ್ಯಾಯ ಪೀಠದಲ್ಲಿ ಯಾರು ಕುಳಿತುಕೊಳ್ಳುತ್ತಾರೆ ಎಂಬುದು ಸದ್ಯ ಗೌಪ್ಯವಾಗಿತ್ತು. ಇದೇ ಕುತೂಹಲವನ್ನು ಜನ ಮತ್ತು ಮಾಧ್ಯಮ 2020ರವರೆಗೂ ಉಳಿಸಿಕೊಳ್ಳಿ. ಪೀಠ ಏರುವ ಮುಹೂರ್ತದಲ್ಲೇ ಇದು ನಿರ್ಧಾರ ಆಗಲಿದೆ ಎಂದು ಹಿರಿಯ ಶ್ರೀಗಳು ಹೇಳಿದರು.

    ಪರ್ಯಾಯ ಸಂದರ್ಭ ನಮ್ಮ ಊರಿನ ರೈತರು ಬೆಳೆದ ಬಾಳೆ, ಬಾಳೆ ಎಲೆ ಉಪಯೋಗಿಸ್ತೇವೆ. ಸಾವಯವ ಕೃಷಿಗೆ ಒತ್ತು ನೀಡುತ್ತೆವೆ ಎಂದು ಕಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

    ಶಿಕ್ಷಣ, ಅಧ್ಯಯನ ಮತ್ತು ಆಧ್ಯಾತ್ಮಿಕತೆಗೆ ಅದಮಾರು ಮಠ ಹೆಚ್ಚು ಒತ್ತುಕೊಡುತ್ತಾ ಬಂದಿದೆ. ಎರಡು ವರ್ಷಗಳ ಪರ್ಯಾಯದಲ್ಲೂ ಇಂತದ್ದೇ ಕಾರ್ಯ ಮುಂದುವರೆಯುವ ನಿರೀಕ್ಷೆ ಜನರಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv