Tag: ಶ್ರವಣಬೆಳಗೊಳ

  • ಮೊದಲ ಏಕಾಂತ ಸ್ಥಿತಿಗೆ ತಲುಪಿದ ಏಕಶಿಲಾ ಮೂರ್ತಿ

    ಮೊದಲ ಏಕಾಂತ ಸ್ಥಿತಿಗೆ ತಲುಪಿದ ಏಕಶಿಲಾ ಮೂರ್ತಿ

    ಹಾಸನ: ಒಂದು ವರ್ಷದ ಹಿಂದೆ ಮಹಾ ಮಜ್ಜನದಿಂದ ಮಿಂದೆದ್ದಿದ್ದ ಜಿಲ್ಲೆಯ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಮಹಾಮೂರ್ತಿಯ ರಾಸಾಯನಿಕ ಸ್ವಚ್ಛತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಶ್ರೀ ಮಠದ ವತಿಯಿಂದ ವಿರಾಟ್ ವಿರಾಗಿಗೆ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನ ಹಾಗೂ ಮಹಾ ಮಸ್ತಕಾಭಿಷೇಕದ ಅಂತಿಮ ಬಿಂಬಾಭಿಷೇಕ ನೆರವೇರಿಸಲಾಯಿತು. ಬಾಹುಬಲಿಯ ಸುತ್ತಲೂ ಇರುವ ಅಟ್ಟಣಿಗೆ ಬಿಚ್ಚಿ, ಸಣ್ಣಪುಟ್ಟ ಸ್ವಚ್ಛತಾ ಕಾರ್ಯ ಮುಗಿದರೆ, ಅತಿ ಎತ್ತರದ ಏಕಶಿಲಾ ಮೂರ್ತಿ, ಈಗ ಮೊದಲ ಏಕಾಂತ ಸ್ಥಿತಿಗೆ ಮರಳಿದ್ದಾನೆ.

    ಶ್ರವಣಬೆಳಗೊಳದ ವಿಂಧ್ಯಗಿರಿಯ ಮೇಲೆ ವಿರಾಜಮಾನನಾಗಿರುವ 58.8 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ಜರುಗುವ ಮಹಾ ಮಸ್ತಕಾಭಿಷೇಕ ನಡೆದು ವರ್ಷ ಕಳೆದಿದೆ.ಲಕ್ಷಾಂತರ ಭಕ್ತರು, ಪ್ರವಾಸಿಗರ ಉಪಸ್ಥಿತಿಯಲ್ಲಿ 2018 ಫೆಬ್ರವರಿ 7 ರಿಂದ 26ರ ವರೆಗೆ ನಡೆದ ಅಂತಾರಾಷ್ಟ್ರೀಯ ಉತ್ಸವ ಮುಗಿದು ಎಂಟು ತಿಂಗಳ ನಂತರ ಮೂರ್ತಿ ಸ್ವಚ್ಚತಾ ಕಾರ್ಯ ಆರಂಭಿಸಲಾಗಿತ್ತು. ಬೃಹನ್ಮೂರ್ತಿಯನ್ನು ವಿವಿಧ ರಾಸಾಯನಿಕಗಳಿಂದ ಸ್ವಚ್ಛಗೊಳಿಸುವ ಈ ಕಾರ್ಯವನ್ನು ಕೇಂದ್ರ ಪುರಾತತ್ವ ಇಲಾಖೆ ರಾಸಾಯನಿಕ ವಿಭಾಗ ಆರಂಭಿಸಿತ್ತು. ಇದೀಗ ಇಡೀ ವಿಗ್ರಹವನ್ನು ಸ್ವಚ್ಛಗೊಳಿಸಲಾಗಿದ್ದು, ಸಂಪ್ರದಾಯದಂತೆ ಶ್ರೀ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ವೈರಾಗಿಗೆ ಬಿಂಬಾಭಿಷೇಕ ನೆರವೇರಿಸಲಾಯಿತು.

    ಶ್ರವಣಬೆಳಗೊಳದ ಶ್ರೀ ಮಠದ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಮಾರ್ಗದರ್ಶನದಂತೆ ಮಠದ ಪಂಡಿತರು ಪಂಚಕಳಶ ಸ್ಥಾಪಿಸಿ ಪೂಜಿಸಿದರು. ನಂತರ ಶುದ್ಧ ಜಲಕ್ಕೆ ಮಂತ್ರ ಪುರಸ್ಸರವಾಗಿ ಸಂಪ್ರೋಕ್ಷಣೆ ಮಾಡುವ ಮೂಲಕ ಮಹಾ ಮೂರ್ತಿಗೆ ಕೊನೆಯ ಅಭಿಷೇಕ ಮಾಡಿದರು. ಈ ವೇಳೆ ಮಾತನಾಡಿದ ಚಾರುಕೀರ್ತಿ ಸ್ವಾಮೀಜಿ, ಗೊಮ್ಮಟೇಶ್ವರ ಮೂರ್ತಿಯ ಸ್ವಚ್ಛತಾ ಕಾರ್ಯ ಪರಿಪೂರ್ಣಗೊಂಡಿದೆ. ಮಸ್ತಕ ಭಾಗದಿಂದ ಶೀಘ್ರವೇ ಅಟ್ಟಣಿಗೆ ಬಿಚ್ಚುವ ಕಾರ್ಯ ಆರಂಭವಾಗಲಿದೆ. ನಂತರ ಬಾಹುಬಲಿ ಪಾದದ ಸಂರಕ್ಷಣೆ ದೃಷ್ಟಿಯಿಂದ ಕೆಲವು ಲೇಪನಾ ಕಾರ್ಯ ನಡೆಯಲಿದೆ. ಆ ಸಂದರ್ಭದಲ್ಲಿ 15 ದಿನಗಳ ಕಾಲ ಗೊಮ್ಮಟೇಶನ ಪಾದಪೂಜೆ ಇರುವುದಿಲ್ಲ ಎಂದು ತಿಳಿಸಿದರು.

    ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ಪ್ರಕಾರ, ಮೂರ್ತಿಯ ಮಸ್ತಕ ಭಾಗದಿಂದ ಸ್ವಚ್ಛತಾ ಕಾರ್ಯ ಈಗ ಸಮಾಪ್ತಿಗೊಂಡಿದೆ. ಅಟ್ಟಣಿಗೆ ತೆರವು ಮಾಡಿದ ನಂತರ, ಬಾಕಿ ಉಳಿದಿರುವ ಶಿಲಾಮೂರ್ತಿಯ ಪಾದ ಹಾಗೂ ಎಡ ಮತ್ತು ಬಲ ಭಾಗದ ಅಲ್ಪ ಸ್ವಲ್ಪ ಕ್ಲೀನಿಂಗ್ ಕಾರ್ಯವನ್ನು ಮುಗಿಸಲಾಗುವುದು. ಒಟ್ಟಿನಲ್ಲಿ ಎಲ್ಲಾ ಕೆಲಸ ಮುಗಿಯಲು ಕನಿಷ್ಟ 1 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಡೆಪ್ಯುಟಿ ಸೂಪರಿಟೆಂಡೆಂಟ್ ಡಿ.ಅಂಬೇಡ್ಕರ್ ತಿಳಿಸಿದ್ದಾರೆ.

    ಈ ಎಲ್ಲಾ ಕಾರ್ಯ ಮುಗಿದ ಬಳಿಕ ವಿಂಧ್ಯಗಿರಿಯ ವಿರಾಗಮೂರ್ತಿ ಬಾಹುಬಲಿಯು ಮಳೆ-ಗಾಳಿ-ಬಿಸಿಲಿಗೆ ಮೈಯೊಡ್ಡಿ ಮೊದಲ ಸ್ಥಿತಿಯಲ್ಲಿ ವಿರಾಜಮಾನನಾಗಲಿದ್ದಾನೆ. ನೀರು, ಎಳನೀರು, ಕ್ಷೀರ, ಕಲಚೂರ್ಣ, ಅರಿಶಿನಿ, ಶ್ರೀಗಂಧ ಮೊದಲಾದ ದ್ರವ್ಯಗಳಿಂದ ಅಹಿಂಸಾ ಮೂರ್ತಿ ತೊಯ್ಯುವ ಅಪರೂಪದ ದೃಶ್ಯವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಅಗಣಿತ ಭಕ್ತ ಸಮೂಹ ಮುಂದಿನ 11 ವರ್ಷಗಳ ವರೆಗೆ ಕಾಯಲೇಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಹುಲ್ ಹೇಳಿದಂತೆ ಎಚ್‍ಡಿಕೆಯವರೇ 5 ವರ್ಷ ಸಿಎಂ ಆಗಿರ್ತಾರೆ- ವೀರಪ್ಪ ಮೊಯ್ಲಿ

    ರಾಹುಲ್ ಹೇಳಿದಂತೆ ಎಚ್‍ಡಿಕೆಯವರೇ 5 ವರ್ಷ ಸಿಎಂ ಆಗಿರ್ತಾರೆ- ವೀರಪ್ಪ ಮೊಯ್ಲಿ

    ಹಾಸನ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿಯವರೇ 5 ವರ್ಷ ಸಿಎಂ ಎಂದು ಹೇಳಿ ಆಗಿದೆ. ಅದರಂತೆ ಕುಮಾರಸ್ವಾಮಿ ಅಷ್ಟು ದಿನ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಾರೆ ಅಂತ ಮಾಜಿ ಸಿಎಂ ಎಂ.ವೀರಪ್ಪಮೊಯ್ಲಿ ಹೇಳಿದ್ದಾರೆ.

    ಜಿಲ್ಲೆ ಶ್ರವಣಬೆಳಗೊಳದಲ್ಲಿ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಕೊನೇ ದಿನದ ಅಭಿಷೇಕದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾರು ಏನೇ ಮಾಡಿದ್ರೂ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿಯವರು ಹೇಳಿದಂತೆ ಎಚ್‍ಡಿಕೆ ಅವರೇ 5 ವರ್ಷ ಸಿಎಂ ಆಗಿರುತ್ತಾರೆ. ಸರಕಾರ ಸುಭದ್ರವಾಗಿರಲಿದೆ ಎಂದರು.

    ಯಾರೋ ಒಬ್ಬಿಬ್ಬರಿಂದ ಸರಕಾರ ಉರುಳಿಸಲು ಸಾಧ್ಯವಿಲ್ಲ ಎಂದ ಮೊಯ್ಲಿ, ಸಮ್ಮಿಶ್ರ ಸರಕಾರ ಆಪತ್ತಿನಲ್ಲಿದೆ ಅನ್ನೋದು ಊಹಾಪೋಹ. ಸರ್ಕಾರ ಉರುಳಿಸಲು ಯತ್ನಿಸುವವರು ನಾಶವಾಗುತ್ತಾರೆ ಎಂದು ಎಚ್ಚರಿಸಿದರು.

    ಈ ಹಿಂದೆ ಯಡಿಯೂರಪ್ಪ ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಕಟ್ಟಿ, ಕಮಲ ಪಕ್ಷಕ್ಕೆ ಶಾಪ ಹಾಕಿ ಹೋಗಿದ್ರು. ನಮ್ಮಪ್ಪನಾಣೆ ಮತ್ತೆಂದೂ ಬಿಜೆಪಿಗೆ ಬರೋದಿಲ್ಲ ಎಂದು ಹೇಳಿದ್ರು. ಆದರೀಗ ಮತ್ತೆ ಬಿಜೆಪಿಗೆ ಬಂದಿದ್ದಾರೆ. ಅವರು ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಯತ್ನಿಸಿದ್ರೆ ಅವರಿಗೆ ಮಾತ್ರವಲ್ಲ, ಬಿಜೆಪಿಗೂ ಕೆಟ್ಟ ಹೆಸರು ಬರಲಿದೆ. ವಾಮಾಚಾರದ ಮೂಲಕ ಸರ್ಕಾರ ಬೀಳಿಸಲು ಯತ್ನಿಸಿದ್ರೆ ಅವರಿಗೇ ಒಳ್ಳೆದಾಗೋದಿಲ್ಲ ಎಂದು ಖಡಕ್ ಆಗಿ ನುಡಿದರು.

    ಮೋದಿ ವಿರುದ್ಧ ಟೀಕೆ:
    ಇದೇ ವೇಳೆ ಪ್ರಧಾನಿ ಮೋದಿ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಕೇವಲ ಚುನಾವಣೆ ಬಂದಾಗ ಮಾತ್ರ ಅವರಿಗೆ ಕರ್ನಾಟಕ ನೆನಪಾಗಲಿದೆ. ಮೋದಿ ಒಬ್ಬ ಸರ್ವಾಧಿಕಾರಿ. ಕೇಂದ್ರ ಸರಕಾರದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಟೀಕಿಸಿದರು. ಕೇಂದ್ರ ಸರ್ಕಾರ ಐಟಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ವಿಪಕ್ಷಗಳನ್ನ ಬಗ್ಗು ಬಡಿಯೋ ಯತ್ನ ನಡೆಸುತ್ತಿದೆ. ಇದಕ್ಕೆ ಸಚಿವ ಡಿಕೆಶಿ ಅವರ ಮೇಲೆ ನಡೆದ ದಾಳಿ ಸಾಕ್ಷಿ. ಇದೆಲ್ಲವೂ ಭವಿಷ್ಯದಲ್ಲಿ ಬಿಜೆಪಿಗೇ ಮುಳುವಾಗಲಿದೆ ಎಂದು ಎಚ್ಚರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನವ ದಿನಗಳ ಮಹಾಮಸ್ತಕಾಭಿಷೇಕಕ್ಕೆ ತೆರೆ – ಕಡೆ ದಿನ ಶ್ರವಣಬೆಳಗೊಳಕ್ಕೆ ಭಕ್ತಸಾಗರ

    ನವ ದಿನಗಳ ಮಹಾಮಸ್ತಕಾಭಿಷೇಕಕ್ಕೆ ತೆರೆ – ಕಡೆ ದಿನ ಶ್ರವಣಬೆಳಗೊಳಕ್ಕೆ ಭಕ್ತಸಾಗರ

    ಹಾಸನ: ಕಳೆದ 9 ದಿನಗಳಿಂದ ನಡೆಯುತ್ತಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಇಂದು ತೆರೆಬಿದ್ದಿದೆ. ಕೊನೆಯ ದಿನವಾದ ಇಂದು 58.8 ಅಡಿ ಎತ್ತರದ ಮಹಾಮೂರ್ತಿಗೆ ನೀರು, ಎಳನೀರು, ಕಬ್ಬಿನರಸ, ಕಲ್ಕಚೂರ್ಣ, ಕ್ಷೀರ, ಅರಿಶಿನ, ಶ್ರೀಗಂಧ ಮತ್ತು ಅಷ್ಟಗಂಧ ಅಭಿಷೇಕ ಮಾಡಲಾಯ್ತು.

    ಕಡೆಯ ದಿನವಾದ ಇಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಜೈನಮಠದ ಬಳಿಯೇ ಏಕಶಿಲಾ ಮೂರ್ತಿಗೆ ನಮಿಸಿದ್ರು. ವಿಂದ್ಯಗಿರಿಯಲ್ಲಿ ಎಲ್ಲಿ ನೋಡಿದ್ರೂ ಭಕ್ತ ಸಾಗರವೇ ಕಾಣುತ್ತಿತ್ತು. ಇದೇ ವೇಳೆ ಶ್ರೀ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ನಾಳೆ ಸಮಾರೋಪ ಸಮಾರಂಭ ನಡೆಯಲಿದೆ. ಮುಂದಿನ ಜೂನ್‍ವರೆಗೆ ಪ್ರತಿ ಭಾನುವಾರ ಮಸ್ತಕಾಭಿಷೇಕ ನಡೆಯಲಿದೆ ಅಂತಾ ತಿಳಿಸಿದ್ರು.

    ಈ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಜೈನಧರ್ಮ ನಮ್ಮ ದೇಶದ ರತ್ನವಿದ್ದಂತೆ, ಅಹಿಂಸೆಗೆ ಒತ್ತು ನೀಡುವ ಏಕೈಕ ಧರ್ಮ ಜೈನಧರ್ಮ. ಭಯೋತ್ಪಾದನೆ ಮಟ್ಟಹಾಕಲು ಜೈನಧರ್ಮದ ಸಂದೇಶದಲ್ಲಿ ಪರಿಹಾರವಿದೆ. ಬಾಹುಬಲಿ ಮೂರ್ತಿ ಅದ್ಭುತ ಪ್ರತಿಮೆ. ಇಲ್ಲಿಗೆ ಬಂದ ತಕ್ಷಣ ನನಗೆ ಶಾಂತಿಯ ಅನುಭೂತಿಯಾಯಿತು. ಇಡೀ ಪ್ರಪಂಚಕ್ಕೆ ತ್ಯಾಗ, ಶಾಂತಿಯ ಸಂದೇಶ ಸಾರುವ ತಾಣ ಶ್ರವಣಬೆಳಗೊಳ. ಇಲ್ಲಿಗೆ ಭೇಟಿ ನೀಡಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಅಂತಾ ರಾಜನಾಥ್ ಸಿಂಗ್ ತಮ್ಮ ಅನುಭವ ಹಂಚಿಕೊಂಡರು.

  • ವೈರಾಗ್ಯ ಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ

    ವೈರಾಗ್ಯ ಮೂರ್ತಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ

    ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೆ ನಡೀತಿರೋ 88ನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಇವತ್ತು ಮಹಾಮಜ್ಜನ ನಡೀತು. ವಿವಿಧ ಅಭಿಷೇಕಗಳಿಂದ ಬಾಹುಬಲಿಯನ್ನ ಪೂಜಿಸಲಾಯ್ತು. ಹಾಸನದ ಶ್ರವಣಬೆಳಗೊಳದ ವಿಂದ್ಯಗಿರಿಯಲ್ಲಿರೋ ಐತಿಹಾಸಿಕ ಏಕಶಿಲಾ ಬಾಹುಬಲಿಗೆ ವೈಭವೋಪೇತವಾಗಿ ಮಹಾಮಸ್ತಕಾಭಿಷೇಕ ನಡೆಸಲಾಯಿತು. ಮುಂಜಾನೆ ಬೆಳಗ್ಗೆ 5ಗಂಟೆಯಿಂದಲೇ ಪೂಜಾವಿಧಿ ವಿಧಾನಗಳು ಆರಂಭವಾದವು. ಬೆಳಕು ಹರಿದಂತೆಲ್ಲಾ ಭಕ್ತ ಸಮೂಹ ವಿಂದ್ಯಗಿರಿ ವಿರಾಗಿಯನ್ನ ಕಣ್ಮನ ತುಂಬಿಕೊಳ್ಳಲು ಆಗಮಿಸಿತು.

    ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ, 6 ಬಾರಿ ಕಳಶಾಭಿಷೇಕ ಮಾಡಿದ್ರು. ಸಚಿವರಾದ ಎ.ಮಂಜು, ಉಮಾಶ್ರೀ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಚಾರುಕೀರ್ತಿ ಭಟ್ಟಾರಕಶ್ರೀಗಳು, ಜೈನಮುನಿಗಳು ಉಪಸ್ಥಿತರಿದ್ದರು. ಮಹಾಮಸ್ತಕಾಭಿಷೇಕದ ಆರಂಭದ ದಿನವಾದ ಇವತ್ತು 108 ಕಳಶಾಭಿಷೇಕ ನಡೀತು. 21 ಬಗೆಯ ಅಷ್ಟ ದ್ರವ್ಯಗಳ ಅಭಿಷೇಕ. ಜಲಾಭಿಷೇಕ, ಕ್ಷೀರಾಭಿಷೇಕ, ಕಬ್ಬಿನ ರಸ, ಗಂಧ, ಕೇಸರಿ, ಎಳನೀರಿನ ಪರಿಷೇಕ ನಡೆಯಿತು.

    ಈ ಎಲ್ಲಾ ಅಭಿಷೇಕ ಪ್ರಾಕಾರದಲ್ಲೂ ಭಗವಾನ್ ಬಾಹುಬಲಿಯ ಮೂರ್ತಿ ಆಕರ್ಷಕವಾಗಿ ಕಾಣುತ್ತಿತ್ತು. 12 ವರ್ಷಕ್ಕೊಮ್ಮೆ ಕಾಣಸಿಗುವ ಈ ನಯನ ಮನೋಹರ ದಿವ್ಯ ದೃಶ್ಯವನ್ನ ಸಾವಿರಾರು ಭಕ್ತರು, ಜೈನ ಮುನಿಗಳು, ಮಾತಾಜಿಗಳು. ಪ್ರವಾಸಿಗರು ಬಿಸಿಲನ್ನೂ ಲೆಕ್ಕಿಸದೆ ಭಕ್ತರು ಕಣ್ತುಂಬಿಕೊಂಡರು. ಮೈಸೂರಿನಿಂದ ರಕ್ತಚಂದನ, ಬೆಂಗಳೂರಿನಿಂದ ಶ್ರೀಗಂಧ, ಮದ್ದೂರು ಎಪಿಎಂಸಿಯಿಂದ 2,500 ಎಳನೀರು, ಆಂಧ್ರಪ್ರದೇಶ, ತಮಿಳುನಾಡಿನಿಂದ 53 ಬಗೆಯ ಬಣ್ಣದ ಹೂಗಳು, ಕನಕಾಂಬರ, ಮೈಸೂರು ಮಲ್ಲಿಗೆ, ಗುಲಾಬಿ, ಕಾಕಡ ಸಂಪಿಗೆ ಮೂಲಕ ಪುಷ್ಪವೃಷ್ಟಿ 250 ಕೆಜಿ ಪುಷ್ಪವೃಷ್ಟಿ ಆಯ್ತು.

    ಮಹಾಮಸ್ತಕಾಭಿಷೇದ ಮೊದಲ ಕಳಶವನ್ನ ರಾಜಸ್ಥಾನ ಮೂಲದ ಅಶೋಕ್ ಪಾಟ್ನಿ ಕುಟುಂಬದಿಂದ 11.61 ಕೋಟಿಗೆ ಖರೀದಿಸಿತ್ತು. ಸಂಜೆ 6-30ರಿಂದ ಸಾರ್ವಜನಿಕರಿಗೆ ದರ್ಶನ ಅವಕಾಶ ಕೊಡಲಾಗಿತ್ತು.

    ಫೆಬ್ರವರಿ 27ರವರೆಗೆ ನಿತ್ಯ ಮಹಾಮಸ್ತಕಾಭಿಷೇಕ ನಡೆಯಲಿದ್ದು, ನಾಳೆಯಿಂದ ಪ್ರತಿದಿನ 1008 ಕಲಶಾಭಿಷೇಕ ಮತ್ತು ಅಷ್ಟ ದ್ರವ್ಯಗಳ ಅಭಿಷೇಕ ನಡೆಯಲಿದೆ. ನಾಳೆ ಮಧ್ಯಾಹ್ನ 2 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಗಲಿದೆ. 2006ರಲ್ಲಿ ಈ ಹಿಂದೆ ನಡೆದಿದ್ದ ಗೊಮ್ಮಟ ಮಹೋತ್ಸವಕ್ಕೂ ಈ ಬಾರಿಯ ಉತ್ಸವಕ್ಕೂ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಕಲ ಕ್ರಮ ಕೈಗೊಂಡಿದೆ.

  • ಇಂದಿನಿಂದ ಜೈನಕಾಶಿಯಲ್ಲಿ ಮಹಾಮಸ್ತಕಾಭಿಷೇಕ- 19 ದಿನಗಳ ಉತ್ಸವಕ್ಕೆ ರಾಷ್ಟ್ರಪತಿ ಕೋವಿಂದ್ ಚಾಲನೆ

    ಇಂದಿನಿಂದ ಜೈನಕಾಶಿಯಲ್ಲಿ ಮಹಾಮಸ್ತಕಾಭಿಷೇಕ- 19 ದಿನಗಳ ಉತ್ಸವಕ್ಕೆ ರಾಷ್ಟ್ರಪತಿ ಕೋವಿಂದ್ ಚಾಲನೆ

    ಹಾಸನ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಜೈನಕಾಶಿ ಶ್ರವಣಬೆಳಗೊಳ ಸಕಲ ರೀತಿಯಲ್ಲೂ ಸಜ್ಜಾಗಿದೆ.

    ಪಂಚಕಲ್ಯಾಣ ನಗರದ ಚಾವುಂಡರಾಯ ಸಭಾಮಂಟಪದಲ್ಲಿ ಬೆಳಗ್ಗೆ 10.45ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹೋತ್ಸವಕೆ ಚಾಲನೆ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ, ರಾಜ್ಯಪಾಲ ವಜುಭಾಯ್ ವಾಲಾ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಮೊದಲಾದ ಗಣ್ಯರು ಭಾಗಿಯಾಗಲಿದ್ದಾರೆ.

    ಇಂದಿನಿಂದ 19 ದಿನಗಳ ಕಾಲ ಮಸ್ತಕಾಭಿಷೇಕ ಸಂಬಂಧಿತ ಕಾರ್ಯಕ್ರಮಗಳು ನಡೆಯಲಿದ್ದು, ಫೆಬ್ರವರಿ 17ರಿಂದ ವಿಂಧ್ಯಗಿರಿ ಮೇಲಿರುವ ವಿರಾಗಿಗೆ ಮಹಾಮಜ್ಜನ ನಡೆಯಲಿದೆ.

    ಮಸ್ತಕಾಭಿಷೇಕದ ವೇಳೆ ಹೈಟೆಕ್ ಅಟ್ಟಣಿಗೆ ಮೇಲೆ 5 ಸಾವಿರ ಮಂದಿ ಕೂರುವ ವ್ಯವಸ್ಥೆ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಒಟ್ಟು 8 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ರಸ್ತೆ, ವೇದಿಕೆ ಜಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಶ್ರವಣಬೆಳಗೊಳದ ಸುತ್ತಮುತ್ತ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 27ರವರೆಗೆ ಮದ್ಯ ನಿಷೇಧಿಸಲಾಗಿದೆ.

  • ಶ್ರವಣಬೆಳಗೊಳದಲ್ಲಿ ರಾಜ್ಯಪಾಲ ವಿಆರ್ ವಾಲಾ ನೃತ್ಯ: ವಿಡಿಯೋ ನೋಡಿ

    ಶ್ರವಣಬೆಳಗೊಳದಲ್ಲಿ ರಾಜ್ಯಪಾಲ ವಿಆರ್ ವಾಲಾ ನೃತ್ಯ: ವಿಡಿಯೋ ನೋಡಿ

    ಹಾಸನ: ಜೈನರ ಪ್ರಸಿದ್ಧ ಯಾತ್ರ ಸ್ಥಳವಾದ ಶ್ರವಣಬೆಳಗೊಳದಲ್ಲಿ ರಾಜ್ಯಪಾಲ ವಿಆರ್ ವಾಲಾ ಅವರು ನೃತ್ಯ ಮಾಡಿದ್ದಾರೆ.

    2018ರಂದು ನಡೆಯಲಿರುವ ಮಹಾಮಸ್ತಕಾಭಿಷೇಕದ ಅಂಗವಾಗಿ ಇಂದು ಚಾತುರ್ಮಾಸ ಮಂಗಲ ಕಳಶ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯಪಾಲ ವಿಆರ್ ವಾಲಾ ಅವರಿಗೆ ಮೈಸೂರು ಪೇಟ ತೊಡಿಸಿ ಸ್ವಾಗತ ಕೋರಲಾಯಿತು.

    ಈ ಕಾರ್ಯಕ್ರಮದಲ್ಲಿ ಗುಜರಾತಿ ಕಲಾವಿದರು ಗರ್ಬಾ ನೃತ್ಯ ಪ್ರದರ್ಶಿಸಿದರು. ಈ ವೇಳೆ ವೇದಿಕೆಯಿಂದ ಕೆಳಗಿಳಿದ ರಾಜ್ಯಪಾಲರು ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನಸೆಳೆದರು.