Tag: ಶ್ರಮಿಕ್ ರೈಲು

  • ವಲಸೆ ಕಾರ್ಮಿಕರಿಗಾಗಿ ಜೂ.24ರಂದು ಅಂತಿಮ ಶ್ರಮಿಕ್ ರೈಲು: ಕೆ.ಬಿ ಶಿವಕುಮಾರ್

    ವಲಸೆ ಕಾರ್ಮಿಕರಿಗಾಗಿ ಜೂ.24ರಂದು ಅಂತಿಮ ಶ್ರಮಿಕ್ ರೈಲು: ಕೆ.ಬಿ ಶಿವಕುಮಾರ್

    ಶಿವಮೊಗ್ಗ: ತಮ್ಮ ರಾಜ್ಯಗಳಿಗೆ ತೆರಳ ಬಯಸುವ ವಲಸೆ ಕಾರ್ಮಿಕರಿಗಾಗಿ ಜೂನ್ 24ರಂದು ಬೆಂಗಳೂರಿನಿಂದ ಅಂತಿಮ ಶ್ರಮಿಕ್ ರೈಲುಗಳು ತೆರಳಲಿವೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಹೇಳಿದ್ದಾರೆ.

    ಅಲ್ಲದೆ ಇದರ ಪ್ರಯೋಜನ ಪಡೆದುಕೊಳ್ಳ ಬಯಸುವವರು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ತಮ್ಮ ರಾಜ್ಯಗಳಿಗೆ ತೆರಳ ಬಯಸುವ ಅನ್ಯ ರಾಜ್ಯಗಳ ಕಾರ್ಮಿಕರರು ಸೇವಾ ಸಿಂಧು ಆ್ಯಪ್‍ನಲ್ಲಿ ತಮ್ಮ ವಿವರಗಳನ್ನು ನೊಂದಾಯಿಸಿಕೊಳ್ಳಬೇಕು ಡಿಸಿ ಮನವಿ ಮಾಡಿದ್ದಾರೆ.

    ಸೇವಾ ಸಿಂಧುವಿನಲ್ಲಿ ನೊಂದಾಯಿಸಿಕೊಂಡಿರುವ ಕುರಿತಾದ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾಗಿರುವ ಸೇವಾ ಕೌಂಟರಿನಲ್ಲಿ ಜೂನ್ 23 ರ ಮಧ್ಯಾಹ್ನ 3.30ಗಂಟೆಯ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಮೊಬೈಲ್ ಸಂಖ್ಯೆ 9845184795 ಅವರನ್ನು ಸಂಪರ್ಕಿಸಬಹುದಾಗಿದೆ.

  • ಚಲಿಸುತ್ತಿದ್ದ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ- ಬೆಂಗ್ಳೂರು ಪೊಲೀಸರಿಗೆ ಧನ್ಯವಾದ

    ಚಲಿಸುತ್ತಿದ್ದ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ- ಬೆಂಗ್ಳೂರು ಪೊಲೀಸರಿಗೆ ಧನ್ಯವಾದ

    ಬೆಂಗಳೂರು: ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಚಲಿಸುತ್ತಿದ್ದ ರೈಲಿನಲ್ಲೇ ವಲಸೆ ಕಾರ್ಮಿಕ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.

    ಉತ್ತರಪ್ರದೇಶ ಮೂಲದ ಸಂಗೀತಾ ಹಾಗೂ ಸಂದೀಪ್ ದಂಪತಿ ನಗರದ ವೈಟ್ ಫೀಲ್ಡ್ ಬಳಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ದಂಪತಿ ಇದೇ 21 ರಂದು ಶ್ರಮಿಕ್ ರೈಲಿನಲ್ಲಿ ತವರು ರಾಜ್ಯ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಂಗೀತಾ ರೈಲಿನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಕ್ಷೇಮವಾಗಿ ತವರು ಸೇರಿದ್ದಾರೆ.

    ತುಂಬು ಗರ್ಭಿಣಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಹಾಗೂ ಐಎಫ್‍ಎಸ್ ಆಧಿಕಾರಿಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಗುವಿನೊಂದಿಗೆ ಕ್ಷೇಮವಾಗಿ ಊರು ತಲುಪಿದ್ದಾಗಿ ದಂಪತಿ ಅನುಚೇತ್ ಅವರಿಗೆ ಫೋಟೋ ಶೇರ್ ಮಾಡಿದ್ದಾರೆ.

    ಸಂಗೀತಾ ಗರ್ಭಿಣಿಯಾಗಿದ್ದರಿಂದ ಟ್ರಾವೆಲ್ ಮಾಡೋದು ಬೇಡ ಎಂದು ಮಹಿಳಾ ಐಎಫ್‍ಎಸ್ ಅಧಿಕಾರಿ ಬುದ್ಧಿ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಸಂಗೀತಾ ತವರೂರಿಗೆ ಹೋಗಲೇಬೇಕೆಂದು ಹಠ ಹಿಡಿದಿದ್ದರು. ಈ ವೇಳೆ ಡಿಸಿಪಿ ಎಂ.ಎನ್.ಅನುಚೇತ್ ಅವರು ಸೇವಾಸಿಂದು ಪೋರ್ಟಲ್‍ನಲ್ಲಿ ದಂಪತಿಯ ನೋಂದಣಿ ಮಾಡಿಸಿದ್ದರು. ಬಳಿಕ ರೈಲು ಟಿಕೆಟ್ ಕೊಡಿಸಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿದ್ದರು.

    ಮೇ 21ರಂದು ಶ್ರಮಿಕ್ ರೈಲಿನಲ್ಲಿ ಊರಿಗೆ ಹೊರಟಿದ್ದ ಸಂಗೀತಾ ಮಾರ್ಗ ಮಧ್ಯೆ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಶ್ರಮಿಕ್ ರೈಲು ಶನಿವಾರ ಉತ್ತರಪ್ರದೇಶದ ಲಕ್ನೋ ತಲುಪಿದ್ದು, ಮಗುವಿನೊಂದಿಗೆ ಕ್ಷೇಮವಾಗಿ ಊರು ತಲುಪಿದ್ದಾಗಿ ದಂಪತಿ ಅನುಚೇತ್ ಅವರಿಗೆ ತಿಳಿಸಿದ್ದಾರೆ.

  • ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ ಮನವಿ

    ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ ಮನವಿ

    ಕೋಲ್ಕತಾ: ಅಂಫಾನ್ ಚಂಡಮಾರುತದ ಪರಿಹಾರ ಕಾರ್ಯಗಳ ಹಿನ್ನೆಲೆ ಮೇ 26ವರೆಗೂ ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅಂಫಾನ್ ಚಂಡಮಾರುತದಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ಜಿಲ್ಲಾಡಳಿತ ಪರಿಹಾರ ಮತ್ತು ಪುನರ್ವಸತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಶ್ರಮಿಕ್ ರೈಲು ಕಾರ್ಯಾಚರಣೆಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಮೇ 26ರವರೆಗೆ ಪಶ್ಚಿಮ ಬಂಗಾಳಕ್ಕೆ ಯಾವುದೇ ರೈಲುಗಳನ್ನು ಕಳುಹಿಸದಂತೆ ಮನವಿ ಮಾಡಿದ್ದಾರೆ.

    ಅಂಫಾನ್ ಚಂಡಮಾರುತದಿಂದಾಗಿ ಕನಿಷ್ಠ 86 ಜನರು ಸಾವನ್ನಪ್ಪಿದ್ದಾರೆ. ಭೀಕರ ಹವಾಮಾನ ದುರಂತದಿಂದ ಸಾಮಾನ್ಯ ಜೀವನ ಪುನಃಸ್ಥಾಪಿಸಲು ಪರದಾಡುತ್ತಿದ್ದಾರೆ.

    ಕೊರೊನಾ ವೈರಸ್ ಲಾಕ್‍ಡೌನ್ ಮಧ್ಯೆ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಸ್ಥಳಾಂತರದ ವೇಳೆ ಶ್ರಮಿಕ್ ರೈಲುಗಳ ಆಗಮನಕ್ಕೆ ಸಿಎಂ ಮಮತಾ ಬ್ಯಾನರ್ಜಿ ವಿರೋಧಿಸಿದ್ದರು. ಇದು ಗೃಹ ಸಚಿವ ಅಮಿತ್ ಶಾ ಹಾಗೂ ಮಮತಾ ಬ್ಯಾನರ್ಜಿ ನಡುವೆ ರಾಜಕೀಯ ಗುದ್ದಾಟಕ್ಕೂ ಕಾರಣವಾಗಿತ್ತು. ಬಳಿಕ ರೈಲುಗಳು ರಾಜ್ಯ ತಲುಪಲು ರಾಜ್ಯ ಸರ್ಕಾರದ ಒಪ್ಪಿಗೆ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

  • ವಲಸೆ ಕಾರ್ಮಿಕರ ಸಂಚಾರಕ್ಕೆ 100 ಶ್ರಮಿಕ್ ರೈಲು ಕೊಡಿ – ಮೋದಿಗೆ ಕೇಜ್ರಿವಾಲ್ ಒತ್ತಾಯ

    ವಲಸೆ ಕಾರ್ಮಿಕರ ಸಂಚಾರಕ್ಕೆ 100 ಶ್ರಮಿಕ್ ರೈಲು ಕೊಡಿ – ಮೋದಿಗೆ ಕೇಜ್ರಿವಾಲ್ ಒತ್ತಾಯ

    ನವದೆಹಲಿ: ವಲಸೆ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಮರಳಿ ಕಳುಹಿಸಲು ನೂರು ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿಕೊಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ ಎಂದು ದೆಹಲಿ ಸಿಎಂ ಕಚೇರಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ವಲಸೆ ಕಾರ್ಮಿಕರ ಸಂರಕ್ಷಣೆ ವಿಚಾರದಲ್ಲಿ ಆಮ್ ಅದ್ಮಿ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ರಾಜಕೀಯ ತಿಕ್ಕಾಟದ ನಡುವೆ ಈ ಮನವಿ ಮಹತ್ವ ಪಡೆದುಕೊಂಡಿದೆ.

    ಮುಖ್ಯಮಂತ್ರಿ ಕಚೇರಿ ಸುಮಾರು 4,00,000 ವಲಸೆ ಕಾರ್ಮಿಕರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿದೆ. ಅವರಲ್ಲಿ ಹೆಚ್ಚಿನವರು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು. ಕಳೆದ ಒಂದು ವಾರದಲ್ಲಿ ಇದುವರೆಗೆ 59 ವಿಶೇಷ ರೈಲುಗಳು ಮತ್ತು 200ಕ್ಕೂ ಹೆಚ್ಚು ಬಸ್ಸುಗಳ ಮೂಲಕ ದೆಹಲಿಯಿಂದ ವಲಸೆ ಕಾರ್ಮಿಕರ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಆದರೆ ಮತ್ತಷ್ಟು ರೈಲುಗಳ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಸಂಬಂಧ ಅಧಿಕೃತವಾಗಿ ಮಾತನಾಡಿರುವ ಡಿಸಿಎಂ ಮನೀಶ್ ಸಿಸೊಡಿಯಾ, ಈವರೆಗೂ ದೆಹಲಿಯಿಂದ 65,000 ಕಾರ್ಮಿಕರ ತಮ್ಮ ಊರುಗಳಿಗೆ ತೆರಳಿದ್ದಾರೆ. ಇನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಿಗೆ ತೆರಳಲು ಬಯಸುತ್ತಿದ್ದಾರೆ. ಅವರನ್ನು ಕಳುಹಿಸಲು ಕೇಂದ್ರ ವಿಶೇಷ ರೈಲುಗಳ ವ್ಯವಸ್ಥೆ ಮಾಡಬೇಕು ಎಂದರು.

  • 200 ಹೆಚ್ಚುವರಿ ಶ್ರಮಿಕ್ ರೈಲು ಓಡಿಸಲು ಮುಂದಾದ ಕೇಂದ್ರ

    200 ಹೆಚ್ಚುವರಿ ಶ್ರಮಿಕ್ ರೈಲು ಓಡಿಸಲು ಮುಂದಾದ ಕೇಂದ್ರ

    – ಕೆಲವೇ ದಿನಗಳಲ್ಲಿ ಅನ್‍ಲೈನ್ ಬುಕಿಂಗ್ ಆರಂಭ
    – ಯಾವುದೇ ನಿಲ್ದಾಣದಲ್ಲಿ ಟಿಕೆಟ್ ನೀಡಲ್ಲ

    ನವದೆಹಲಿ: ಈಗಾಗಲೇ 1,600 ರೈಲುಗಳ ಮೂಲಕ 21 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಲಾಗಿದೆ. ಇದೀಗ ಜೂನ್ 1ರಿಂದ ಹೆಚ್ಚುವರಿಯಾಗಿ 200 ನಾನ್ ಎಸಿ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಈ ಕುರಿತು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದ್ದು, ಶ್ರಮಿಕ್ ರೈಲುಗಳನ್ನು ಮುಂದುವರಿಸಲು ಭಾರತೀಯ ರೇಲ್ವೆ ನಿರ್ಧರಿಸಿದೆ. ಈಗಾಗಲೇ 1,600 ರೈಲುಗಳು ಮೂಲಕ 21.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲಾಗಿದೆ. ಇದೀಗ ಹೊಸದಾಗಿ 200 ರೈಲುಗಳ ಸಂಚಾರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದೆ.

    ಅಲ್ಲದೆ ಎಲ್ಲ ರಾಜ್ಯ ಸರ್ಕಾರಗಳಿಗೂ ಈ ಕುರಿತು ಸೂಚನೆ ನೀಡಿದ್ದು, ಆಯಾ ರಾಜ್ಯಗಳಲ್ಲಿ ಪ್ರಮುಖ ರೈಲ್ವೆ ನಿಲ್ದಾಣಗಳ ಹತ್ತಿರವಿರುವ ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಕೋರಿದೆ. ಇಂತಹವರ ಪಟ್ಟಿ ನೀಡಿದಲ್ಲಿ ವಿವಿಧ ಸ್ಥಳದ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದೆ.

    ಜೂನ್ 1ರಿಂದ ಹೆಚ್ಚುವರಿ 200 ಶ್ರಮಿಕ್ ರೈಲುಗಳು ಸಂಚರಿಸಲಿದ್ದು, ಆನ್‍ಲೈನ್‍ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಸಧ್ಯದಲ್ಲೇ ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದೆ.

    ಕಾರ್ಮಿಕರು ಆತುರ ಪಡದೆ ಸಾವಧಾನವಾಗಿ ತಾವು ಇರುವ ಸ್ಥಳದಲ್ಲೇ ಕಾಯಬೇಕು. ನಿಮ್ಮ ಊರುಗಳಿಗೆ ತಲುಪಿಸಲು ಈಗಾಗಲೇ ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ. ರಾಜ್ಯ ಸರ್ಕಾರಗಳ ಸಹಾಯದೊಂದಿಗೆ ನಿಮ್ಮ ಊರುಗಳಿಗೆ ತಲುಪಿಸಲಾಗುವುದು. ಅಲ್ಲದೆ ಈ 200 ಹೊಸ ರೈಲುಗಳ ಸಂಚಾರದ ಮಾರ್ಗ ಹಾಗೂ ವೇಳಾಪಟ್ಟಿಯನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ಕೆಲವೇ ದಿನಗಳಲ್ಲಿ ಆನ್‍ಲೈನ್ ಬುಕಿಂಗ್ ಸಹ ಆರಂಭವಾಗಲಿದೆ. ಎಲ್ಲ ಬೋಗಿಗಳು ನಾನ್ ಎಸಿ ಆಗಿರಲಿದ್ದು, ಟಿಕೆಟ್‍ಗಳನ್ನು ಯಾವುದೇ ಕಾರಣಕ್ಕೂ ಯಾವುದೇ ರೈಲು ನಿಲ್ದಾಣದಲ್ಲಿ ನೀಡುವುದಿಲ್ಲ. ಟಿಕೆಟ್ ಪಡೆಯಕಲು ಯಾವುದೇ ಪ್ರಯಾಣಿಕರು ರೈಲು ನಿಲ್ದಾಣಕ್ಕೆ ತೆರಳಬಾರದು ಎಂದು ರೈಲ್ವೆ ಸಚಿವಾಲಯ ಮನವಿ ಮಾಡಿದೆ.

    ಕಳೆದ 19 ದಿನಗಳಲ್ಲಿ 21.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಈಗಾಗಲೇ ಅವರ ಊರುಗಳಿಗೆ ತಲುಪಿಸಲಾಗಿದ್ದು, ಮೇ 19ರ ವರೆಗೆ ಒಟ್ಟು 1,600 ಶ್ರಮಿಕ್ ರೈಲುಗಳನ್ನು ಓಡಿಸಲಾಗಿದೆ.

  • ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    ಬಳ್ಳಾರಿ ರೈಲು ನಿಲ್ದಾಣದಿಂದ ತೆರಳಿದ ವಲಸಿಗರಿಗೆ ಜಿಲ್ಲಾಡಳಿತದಿಂದ ಬೀಳ್ಕೊಡುಗೆ

    – ಶ್ರಮಿಕ್ ರೈಲು ಮೂಲಕ ಬಿಹಾರಿನತ್ತ 1,452 ವಲಸಿಗರು

    – ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟ ಜಿಲ್ಲಾಡಳಿತ

    – ಭಾವುಕರಾದ ವಲಸೆ ಕಾರ್ಮಿಕರು

    ಬಳ್ಳಾರಿ: ಶ್ರಮಿಕ್ ವಿಶೇಷ ರೈಲಿನ ಮೂಲಕ 1,452 ಜನ ಬಿಹಾರಿ ವಲಸೆ ಕಾರ್ಮಿಕರು ತಮ್ಮ ತವರಿನತ್ತ ತೆರಳಿದರು. ಸುರಕ್ಷಿತವಾಗಿ ಊರು ತಲುಪಿ ಮತ್ತೆ ಬಳ್ಳಾರಿಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್‍ಪಿ ಸಿ.ಕೆ.ಬಾಬಾ, ಜಿ.ಪಂ. ಸಿಇಒ ಕೆ.ನಿತೀಶ್ ಸೇರಿದಂತೆ ಅನೇಕರು ಶುಭಹಾರೈಸಿ ಬೀಳ್ಕೊಟ್ಟರು.

    ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೀವನ ನಿರ್ವಹಣೆಗೆ ಬಂದಿದ್ದ ಬಿಹಾರದ 1,452 ಜನ ವಲಸಿಗರನ್ನು ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆಯಿಂದಲೇ ವಿಶೇಷ ವೈದ್ಯಕೀಯ ತಪಾಸಣೆ ನಡೆಸಿ, ಪ್ರಮಾಣ ಪತ್ರ ವಿತರಿಸಿ ಹಾಗೂ ಅಲ್ಲಿಯೇ 840 ರೂ.ಗಳ ಟಿಕೆಟ್ ನೀಡಿ ಬಸ್‍ಗಳ ಮೂಲಕ ರೈಲ್ವೆ ನಿಲ್ದಾಣಕ್ಕೆ ತಲುಪಿಸಲಾಯಿತು. ಅಲ್ಲದೆ ಅವರಿಗೆ ನೀಡಲಾದ ಟಿಕೆಟ್, ಹಿಂಬದಿ ಬರೆದಿದ್ದ ಸೀಟ್ ಸಂಖ್ಯೆ ಮತ್ತು ಬೋಗಿ ನೋಡಿಕೊಂಡು ವ್ಯವಸ್ಥಿತವಾಗಿ ಅವರಿಗೆ ಆಸನದ ವ್ಯವಸ್ಥೆ ಕಲ್ಪಿಸಿ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಕುಟುಂಬಸ್ಥರಂತೆ ಆದರದಿಂದ ಕಳುಹಿಸಿಕೊಟ್ಟರು.

    ಪ್ರಯಾಣದ ಸಂದರ್ಭದಲ್ಲಿ ಹಸಿವಿನಿಂದ ಬಳಲಬಾರದು ಎಂಬ ಉದುದ್ದೇಶದಿಂದ ಪ್ರತಿಯೊಬ್ಬರಿಗೂ ಎರಡು ಬ್ರೇಡ್ ಪ್ಯಾಕ್, ಮೂರು ಲೀಟರ್ ನೀರು, ಎರಡು ಪ್ಯಾಕೇಟ್ ಆಹಾರ ಪೊಟ್ಟಣ, ಮಿರ್ಚಿ ಬಜಿ ಹಾಗೂ ಇನ್ನಿತರ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ಜಿಲ್ಲಾಡಳಿತದ ವತಿಯಿಂದ ವಿತರಿಸಲಾಯಿತು.

    ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ವಲಸಿಗ ಪ್ರಯಾಣಿಕರಿಗೆ ಸ್ಯಾನಿಟೈಸರ್ ಸಿಂಪಡಿಸಲಾಯಿತು. ರೆಡ್‍ಕ್ರಾಸ್ ಸಂಸ್ಥೆಯವರು ಮಾಸ್ಕ್ ಗಳನ್ನು ವಿತರಿಸಿದರು. ಈ ಎಲ್ಲ ಆತಿಥ್ಯವನ್ನು ನೋಡಿದ ವಲಸೆ ಕಾರ್ಮಿಕರು ಭಾವುಕರಾಗಿ ಸಂತಸದಿಂದ ಸಿಬ್ಬಂದಿಯತ್ತ ಕೈ ಬೀಸಿದರು.

    ರೈಲು ನಿಲ್ದಾಣದಲ್ಲಿನ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಈ ರೈಲು ಬಿಹಾರದ ಸಹಸ್ರಾಗೆ ತೆರಳಲಿದ್ದು, 34 ಗಂಟೆಗಳ ಪ್ರಯಾಣದ ಅವಧಿಯಾಗಿರಲಿದೆ. ಮಾರ್ಗ ಮಧ್ಯೆ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿ ಕಳುಹಿಸಿಕೊಡಲಾಗಿದೆ ಎಂದರು.

    ಈಗ ಒಂದು ರೈಲು ಬಿಹಾರಕ್ಕೆ ತೆರಳುತ್ತಿದ್ದು, ಇನ್ನೂ ಹೆಚ್ಚಿನ ವಲಸಿಗರು ಬಿಹಾರಕ್ಕೆ ತೆರಳುವುದಾದರೆ ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ ಉತ್ತರ ಪ್ರದೇಶಕ್ಕೆ ಎರಡು ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಬೆಳಗ್ಗೆ 10ಕ್ಕೆ ಹೊಸಪೇಟೆ ಮತ್ತು ಬಳ್ಳಾರಿ ರೈಲು ನಿಲ್ದಾಣದ ಮೂಲಕ ಉತ್ತರ ಪ್ರದೇಶದ ವಲಸಿಗರು ತೆರಳಲಿದ್ದಾರೆ. ಈಗಾಗಲೇ ಅವರೆಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಟಿಕೆಟ್ ಸಹ ನೀಡಲಾಗಿದೆ ಎಂದು ವಿವರಿಸಿದರು.